ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತುಸ್ಥಿತಿಯ ಮರೆತು ಹೋದ ಹೀರೊಗಳು

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ದೇಶದ ನಾಗರಿಕ ಸ್ವಾತಂತ್ರ್ಯಪರ ಚಳವಳಿ ಹೊಸ ರಕ್ತದಿಂದ ನವೀಕರಣಗೊಳ್ಳಬೇಕಿದೆ
ತುರ್ತುಸ್ಥಿತಿ ಘೋಷಣೆಯ 40ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಹಲವು ರಾಜಕಾರಣಿಗಳು ತಮ್ಮ ವೇದನೆ ಮತ್ತು ತ್ಯಾಗಗಳ ಬಗ್ಗೆ ಮಾತನಾಡುವುದನ್ನು ನಾವು ಕೇಳಬಹುದಾಗಿದೆ. ಎಲ್.ಕೆ.ಅಡ್ವಾಣಿ ಈಗಾಗಲೇ ಮಾತನಾಡಿದ್ದಾರೆ, ಬಿಜೆಪಿಯ ಇತರ ಮುಖಂಡರು ಅವರನ್ನು ಹಿಂಬಾಲಿಸುವುದರಲ್ಲಿ ಅನುಮಾನವಿಲ್ಲ.

ಸಂಜಯ ಗಾಂಧಿಯ ಹೆಂಡತಿ ಮೇನಕಾ ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸಚಿವರು ಮತ್ತು ಸಂಜಯ ಅವರ ನೆಚ್ಚಿನ ಬಂಟನಾಗಿದ್ದ ಜಗಮೋಹನ್ ಬಿಜೆಪಿಯ ಹಿರಿಯ ಮುಖಂಡರು ಎಂಬುದನ್ನು ಬಹುಶಃ ನಾವು ಅವರಿಗೆ ನೆನಪಿಸಬೇಕಿದೆ. ಅದಕ್ಕಿಂತಲೂ ಮುಖ್ಯವಾಗಿ, ಛತ್ತೀಸಗಡದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯುತ್ತಿರುವ ಮಾಧ್ಯಮದ ಮೇಲಿನ ದಬ್ಬಾಳಿಕೆ, ಆದಿವಾಸಿಗಳ ಮಾನವ ಹಕ್ಕುಗಳ ಉಲ್ಲಂಘನೆ ತುರ್ತುಸ್ಥಿತಿಯ ಸಂದರ್ಭದಲ್ಲಿ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಕೃತ್ಯಗಳ ರೀತಿಯಲ್ಲಿಯೇ ಇವೆ.

ಇಂದಿರಾ ಗಾಂಧಿ ಜೈಲಿಗೆ ಹಾಕಿದ ಯುವ ಹೋರಾಟಗಾರರಲ್ಲಿ ನಿತೀಶ್ ಕುಮಾರ್, ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಸೇರಿದ್ದರು. ಜನತಾ ಪರಿವಾರದ ಈ ಮುಖಂಡರು ಕೂಡ ತಮ್ಮ ತ್ಯಾಗಗಳ ಬಗ್ಗೆ ಮಾತನಾಡಿಯಾರೇ? ಅವರು ಮಾತನಾಡಿದರೆ ಅದು ಇನ್ನೂ ಸ್ವಲ್ಪ ಹೆಚ್ಚು ಶ್ರೀಮಂತವಾಗಿರಬಹುದು. ಮುಲಾಯಂ ಮತ್ತು ಲಾಲೂ ಮುಖ್ಯಮಂತ್ರಿಗಳಾಗಿ ನಿಷ್ಕರುಣವಾಗಿ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ (ಈಗ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ತಮ್ಮ ತಂದೆ ಒಂದು ಕಾಲದಲ್ಲಿ ಇದ್ದ ಹಾಗೆಯೇ ನೀತಿ ಪ್ರಜ್ಞೆ ಇಲ್ಲದೆ ವರ್ತಿಸುತ್ತಿದ್ದಾರೆ). ನಿತೀಶ್ ಬಗ್ಗೆ ಹೇಳುವುದಾದರೆ, ಇಂದಿರಾ ಗಾಂಧಿ ಅವರ ಮೊಮ್ಮಗ ಉತ್ತರಾಧಿಕಾರಿಯಾಗಿರುವ ಕಾಂಗ್ರೆಸ್ ಜೊತೆಗೆ ಅವರು ಇತ್ತೀಚೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೊಮ್ಮಗನಿಗೆ ಪ್ರಧಾನಿಯಾಗಿ ತಮ್ಮ ಅಜ್ಜಿಯ ವಿವಾದಾತ್ಮಕ ಅವಧಿ ಬಗ್ಗೆ ಸ್ವಲ್ಪವೂ ಪಾಪಪ್ರಜ್ಞೆ ಇಲ್ಲ.

ನಮ್ಮ ರಾಜಕಾರಣಿಗಳ ನೈತಿಕ ಮೇಲ್ಮೆಯ ಆಷಾಢಭೂತಿತನದ ನಡುವೆ ತುರ್ತುಸ್ಥಿತಿಯ ನಿಜವಾದ ಕೆಲವು ಹೀರೊಗಳನ್ನು ನಾವು ಮರೆಯಬಾರದು. ಅವರಲ್ಲೊಬ್ಬರು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಎಂ. ತಾರ್ಕುಂಡೆ. 1974ರಲ್ಲಿ ಇಂದಿರಾ ಗಾಂಧಿ ಅವರ ನಿರಂಕುಶ ಪ್ರವೃತ್ತಿಗಳು ಪ್ರಕಟವಾಗಲು ಆರಂಭವಾದಾಗ ತಾರ್ಕುಂಡೆ ಮತ್ತು ಜಯಪ್ರಕಾಶ ನಾರಾಯಣ್ (ಜೆಪಿ) ಜೊತೆಯಾಗಿ ದೇಶದಾದ್ಯಂತ ನಡೆಯುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯತ್ತ ಗಮನ ಸೆಳೆಯುವುದಕ್ಕಾಗಿ ಪಕ್ಷಾತೀತ ವೇದಿಕೆಯೊಂದನ್ನು ರಚಿಸಿಕೊಂಡಿದ್ದರು.

1975ರ ಜೂನ್‌ನಲ್ಲಿ ಜೆಪಿ, ವಿರೋಧ ಪಕ್ಷಗಳ ಪ್ರಮುಖ ರಾಜಕಾರಣಿಗಳು ಮತ್ತು ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಯಿತು. ಅದೇ ವರ್ಷ ಜೆಪಿ ಗಂಭೀರ ಅನಾರೋಗ್ಯಕ್ಕೆ ತುತ್ತಾದರು, ಅವರನ್ನು ಸೆರೆಯಿಂದ ಬಿಡುಗಡೆ ಮಾಡಲಾಯಿತು. 1976ರಲ್ಲಿ ಜೆಪಿ ಅವರು ಮತ್ತೆ ತಾರ್ಕುಂಡೆ ಅವರೊಂದಿಗೆ ಸೇರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಡ್ ಡೆಮೊಕ್ರಾಟಿಕ್ ರೈಟ್ಸ್ (ಪಿಯುಸಿಎಲ್ ಮತ್ತು ಡಿಆರ್-ನಾಗರಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಜನರ ಸಂಘಟನೆ) ರಚಿಸಿದರು. ತುರ್ತುಸ್ಥಿತಿ ರದ್ದಾಗಿ ಜನತಾ ಪರಿವಾರ ಅಧಿಕಾರಕ್ಕೆ ಬಂದ ನಂತರ ಪಿಯುಸಿಎಲ್ ಮತ್ತು ಡಿಆರ್ ಸಂಘಟನೆಯನ್ನು ಬರ್ಖಾಸ್ತುಗೊಳಿಸುವಂತೆ ಹೊಸ ಸರ್ಕಾರದಲ್ಲಿದ್ದ ಹಲವು ಹಿರಿಯರು ಒತ್ತಾಯಿಸಿದರು. ತಾರ್ಕುಂಡೆ ನಿರಾಕರಿಸಿದರು. ತುರ್ತು ಪರಿಸ್ಥಿತಿಯ ಅತಿರೇಕಗಳು ಮರುಕಳಿಸದಿರಬೇಕಾದರೆ ಭಾರತದ ಪ್ರಜಾತಂತ್ರವಾದಿಗಳು ವಿರಾಮವಿಲ್ಲದೆ ಕೆಲಸ ಮಾಡಬೇಕು ಎಂಬುದು ತುರ್ತುಸ್ಥಿತಿ ಕಲಿಸಿದ ಪಾಠವಾಗಿತ್ತು. ಸ್ವಾತಂತ್ರ್ಯದ ಬೆಲೆ ನಿರಂತರ ನಿಗಾ ವಹಿಸುವಿಕೆಯೇ ಆಗಿದ್ದರೆ, ಅಧಿಕಾರದಲ್ಲಿದ್ದ ಪಕ್ಷಗಳು ನಾಗರಿಕ ಸ್ವಾತಂತ್ರ್ಯದ ಮೇಲೆ ನಡೆಸುವ ದಾಳಿಗಳ ಬಗ್ಗೆ ಗಮನ ಸೆಳೆಯಲು ಪ್ರಜಾತಂತ್ರವಾದಿಗಳಿಗೆ ಸ್ವತಂತ್ರ ವೇದಿಕೆಯೊಂದರ ಅಗತ್ಯ ಇತ್ತು.

ಪಿಯುಸಿಎಲ್ ಮತ್ತು ಡಿಆರ್‌ನ ಅತ್ಯಂತ ಪ್ರಮುಖ ಕಾರ್ಯಕರ್ತರಲ್ಲಿ ಸಿ.ವಿ. ಸುಬ್ಬಾರಾವ್ ಎಂಬ ಅರ್ಥಶಾಸ್ತ್ರಜ್ಞರೂ ಒಬ್ಬರು. ಆಂಧ್ರ ವಿಶ್ವವಿದ್ಯಾಲಯದ ಮೇಧಾವಿ ವಿದ್ಯಾರ್ಥಿಯಾಗಿದ್ದ ಅವರನ್ನು ಕ್ರಾಂತಿಕಾರಿ ರಾಜಕೀಯದಲ್ಲಿ ತೊಡಗಿದ್ದರು ಎಂಬ ಕಾರಣಕ್ಕೆ ಜೈಲಿಗೆ ಹಾಕಲಾಯಿತು. 1978ರಲ್ಲಿ ಅವರು ಎಂ.ಎ. ಅಂತಿಮ ವರ್ಷದ ಪರೀಕ್ಷೆ ಬರೆದರು. ಲಿಖಿತ ಪರೀಕ್ಷೆಯ ನಂತರ ಮೌಖಿಕ ಪರೀಕ್ಷೆ ಕಡ್ಡಾಯವಾಗಿತ್ತು. ಅದಕ್ಕಾಗಿ ಪರೀಕ್ಷಾರ್ಥಿಯು ವಿಶ್ವವಿದ್ಯಾಲಯಕ್ಕೆ ಬರಬೇಕಿತ್ತು. ಸರಪಳಿಯಿಂದ ಬಿಗಿದು ಸುಬ್ಬಾರಾವ್ ಅವರನ್ನು ವಿಶ್ವವಿದ್ಯಾಲಯಕ್ಕೆ ಕರೆತರಲಾಯಿತು. ಅಂತಹ ಸಂದರ್ಭದಲ್ಲಿಯೂ ಅವರು ಮೌಖಿಕ ಪರೀಕ್ಷೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಇಡೀ ವಿಶ್ವವಿದ್ಯಾಲಯದಲ್ಲಿ ಮೊದಲಿಗರಾಗಿ ತೇರ್ಗಡೆಯಾದರು.

ತುರ್ತುಸ್ಥಿತಿ ಕೊನೆಯಾದ ನಂತರ ಸುಬ್ಬಾರಾವ್ ದೆಹಲಿಗೆ ಹೋದರು. ಅಲ್ಲಿ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ಕಲಿಸುವ ಕೆಲಸ ಅವರಿಗೆ ಸಿಕ್ಕಿತು. ಅವರು ನಾಗರಿಕ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಕೋಮು ಹಿಂಸೆ, ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗಳ ಮೇಲಿನ ದೌರ್ಜನ್ಯ, ಕೈಗಾರಿಕೆ ಮತ್ತು ಗಣಿಗಾರಿಕೆ ನಡೆಸುವವರಿಂದ ಗ್ರಾಮಗಳ ಸಾರ್ವಜನಿಕ ಸೊತ್ತುಗಳ ಅಕ್ರಮ ಸ್ವಾಧೀನ ಪ್ರಕರಣಗಳನ್ನು ವರದಿ ಮಾಡಿದರು.

ತಾರ್ಕುಂಡೆಯವರ ಬಗ್ಗೆ ನನಗೆ ಸ್ವಲ್ಪ ಗೊತ್ತು, ಸುಬ್ಬಾರಾವ್ ಅವರನ್ನು ಚೆನ್ನಾಗಿ ಬಲ್ಲೆ. ಇಬ್ಬರೂ ಅಸಾಧಾರಣ ವ್ಯಕ್ತಿಗಳು. ಇವರಲ್ಲಿ ಹಿರಿಯ ವ್ಯಕ್ತಿ ಮೃದು ಮಾತಿನ ಸಜ್ಜನ. ಕಿರಿಯ ವ್ಯಕ್ತಿ ಅಸಾಧಾರಣ ಹಾಸ್ಯಪ್ರಜ್ಞೆ ಹೊಂದಿದ್ದರು ಮತ್ತು ತೆಲುಗು ಕಾವ್ಯದ ಮೇಲೆ ಅಪಾರ ಪ್ರೀತಿ ಇರಿಸಿಕೊಂಡಿದ್ದರು. ನನಗೆ ಗೊತ್ತಿರುವ ಭಾರತದ ಇತರ ಹೋರಾಟಗಾರರಂತೆ ಅಲ್ಲದೆ, ತಾರ್ಕುಂಡೆ ಮತ್ತು ಸುಬ್ಬಾರಾವ್ ಯಾವುದೇ ಪೊಳ್ಳುತನ ಅಥವಾ ಸ್ವಪ್ರತಿಷ್ಠೆ ಹೊಂದಿರಲಿಲ್ಲ. ಪ್ರಜಾಸತ್ತೆಯನ್ನು ಗಾಢಗೊಳಿಸುವ ಬದ್ಧತೆ ಸಮಗ್ರವಾಗಿತ್ತು.

1980-81ರಲ್ಲಿ ಪಿಯುಸಿಎಲ್ ಮತ್ತು ಡಿಆರ್ ವಿಭಜನೆಗೊಂಡಿತು. ಒಂದು ಭಾಗ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಆದರೆ ಇನ್ನೊಂದು ಪೀಪಲ್ಸ್ ಯೂನಿಯನ್ ಫಾರ್ ಡೆಮೊಕ್ರಾಟಿಕ್ ರೈಟ್ಸ್ (ಪಿಯುಡಿಆರ್) ಆಯಿತು. ಈ ಎರಡೂ ತಮ್ಮದೇ ರೀತಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ಅವಿಶ್ರಾಂತ ಕೆಲಸವನ್ನು ಮುಂದುವರಿಸಿದವು. ಈ ಸಂಘಟನೆಗಳ ಸದಸ್ಯರು ಕೃಷಿ ಮತ್ತು ಕೈಗಾರಿಕಾ ಸಂಘರ್ಷಗಳು, ಮಾಧ್ಯಮದ ಮೇಲಿನ ದಾಳಿ, ಅಧಿಕಾರದ ದುರ್ಬಳಕೆ (ಎನ್‌ಕೌಂಟರ್ ಹತ್ಯೆಗಳ ನೆಪದಲ್ಲಿನ ಕ್ರೌರ್ಯ) ಬಗ್ಗೆ ವಾಸ್ತವಾಂಶಗಳಿಂದ ತುಂಬಿದ್ದ ಅಸಂಖ್ಯ ವರದಿಗಳನ್ನು ಸಿದ್ಧಪಡಿಸಿದವು. ಕಾಶ್ಮೀರ ಮತ್ತು ಈಶಾನ್ಯ ಭಾಗದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ವಿಶೇಷ ಒತ್ತು ನೀಡಲಾಗಿತ್ತು (ಇದು ನನ್ನ ಮಟ್ಟಿಗೆ ಸ್ವಾಗತಾರ್ಹ). ಈ ಭಾಗಗಳು ಭಾರತದ ನಗರ ಮಧ್ಯಮ ವರ್ಗಗಳು ಮತ್ತು ಮಾಧ್ಯಮದ ಕಾಳಜಿಯ ಅಂಚಿನಲ್ಲಿವೆ.

1984ರಲ್ಲಿ ದೆಹಲಿಯಲ್ಲಿ ಸಿಖ್ ವಿರೋಧಿ ಹತ್ಯಾಕಾಂಡದ ಬಳಿಕ ಪಿಯುಸಿಎಲ್ ಮತ್ತು ಪಿಯುಡಿಆರ್ ‘ಹೂ ಆರ್ ದ ಗಿಲ್ಟಿ?’ ಎಂಬ ಮಹತ್ವದ ವರದಿಯೊಂದನ್ನು ಸಿದ್ಧಪಡಿಸಿದವು. ಇದು ಮತ್ತು ಉಮಾ ಚಕ್ರವರ್ತಿ, ನಂದಿತಾ ಹಕ್ಸರ್ (ಇಬ್ಬರೂ ಪಿಯುಡಿಆರ್ ಸದಸ್ಯರು) ಅವರು ಬರೆದ ದೆಹಲಿ ಗಲಭೆಗಳ ಬಗೆಗಿನ ಪುಸ್ತಕ ಇಂದಿಗೂ ಇಂದಿರಾ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್ ಮತ್ತು ಅದರ ಮುಖಂಡರು ನಡೆಸಿದ ಹಿಂಸಾಚಾರದ ಬಗ್ಗೆ ಮಾಹಿತಿ ನೀಡುವ ಅತ್ಯಂತ ವಿಶ್ವಾಸಾರ್ಹವಾದ ಕೃತಿಗಳಾಗಿವೆ.

1980ರ ದಶಕದಲ್ಲಿ ಯುವ ಸಂಶೋಧಕನಾಗಿ ನಾನು ಪಿಯುಸಿಎಲ್ ಮತ್ತು ಪಿಯುಡಿಆರ್‌ನ ಚಟುವಟಿಕೆಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ಇದರ ಸದಸ್ಯರು ಸಾಮಾನ್ಯವಾಗಿ ಕಾಲೇಜು ಪ್ರಾಧ್ಯಾಪಕರು ಅಥವಾ ವಕೀಲರು. ಅವರು ತಮ್ಮ ವೃತ್ತಿಯ ಬದ್ಧತೆಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ನಂತರ ಉಳಿದ ವಿರಾಮದ ಸಮಯದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ವರದಿಗಳಿಗೆ ಸಂಶೋಧನೆ ಕೈಗೊಳ್ಳಲು ಮತ್ತು ವರದಿಗಳನ್ನು ಮುದ್ರಿಸಲು ತಮ್ಮದೇ ಹಣವನ್ನು ವೆಚ್ಚ ಮಾಡುತ್ತಿದ್ದರು. ನಾಗರಿಕ ಸ್ವಾತಂತ್ರ್ಯದ ಹೋರಾಟಗಾರರಲ್ಲಿ ಅತ್ಯಂತ ನಿರ್ಭೀತರಾದವರಲ್ಲಿ ಪಿಯುಸಿಎಲ್‌ನ ಎನ್.ಡಿ. ಪಾಂಚೋಲಿ, ಇಂದ್ರಮೋಹನ್ ಮತ್ತು ಡಾ. ಆರ್.ಎಂ. ಪಾಲ್, ಪಿಯುಡಿಆರ್‌ನ ಸುದೇಶ್ ವೈದ್ ಮತ್ತು ಹರೀಶ್ ಧವನ್ ನನಗೆ ಈಗ ನೆನಪಾಗುತ್ತಾರೆ.

1980 ಮತ್ತು 90ರ ದಶಕಗಳಲ್ಲಿ ದೆಹಲಿ ಮತ್ತು ಉತ್ತರ ಭಾರತದ ಹೊರಗೆ ದೇಶದ ಇತರ ಭಾಗಗಳಲ್ಲಿ ಮಾನವ ಹಕ್ಕುಗಳ ಚಳವಳಿ ಅತ್ಯಂತ ಸಕ್ರಿಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಂಘಟನೆ ಇತ್ತು. ಹಾಗೆ ನೋಡಿದರೆ ಇದು ತುರ್ತುಸ್ಥಿತಿಗಿಂತಲೂ ಮೊದಲೇ ಆರಂಭವಾಗಿತ್ತು. ಎಂಜಿನಿಯರ್ ಮತ್ತು ಹೋರಾಟಗಾರರಾಗಿದ್ದ ಕಪಿಲ್ ಭಟ್ಟಾಚಾರ್ಯ ಇದರ ಸ್ಥಾಪಕರು. ಮುಂಬೈಯಲ್ಲಿಯೂ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಸಮಿತಿ ಇತ್ತು. ಇದರ ಮಾರ್ಗದರ್ಶಕರಾಗಿ ಇದ್ದವರು ಮಹತ್ವದ ಸಾಮಾಜಿಕ ಸುಧಾರಕ ಅಸ್ಗರ್ ಅಲಿ ಎಂಜಿನಿಯರ್. ಆಂಧ್ರ ಪ್ರದೇಶದಲ್ಲಿನ ನಾಗರಿಕ ಸ್ವಾತಂತ್ರ್ಯದ ಸಮಿತಿಯಲ್ಲಿ ಶ್ರೇಷ್ಠ ವಕೀಲ ಕೆ.ಜಿ. ಕಣ್ಣಬೀರನ್ ಮತ್ತು ವಕೀಲರಾಗಿಯೂ ಕೆಲಸ ಮಾಡಿದ ಗಣಿತಜ್ಞ ಕೆ. ಬಾಲಗೋಪಾಲ್ ಪ್ರಮುಖ ಸದಸ್ಯರಾಗಿದ್ದರು.

ಈ ಜನರಲ್ಲಿ ಕೆಲವರು ಈಗ ಜೀವಿಸಿಲ್ಲ. ಇನ್ನೂ ಜೀವಿಸಿರುವವರು ಸಾಮಾನ್ಯ ಜನರಿಗೆ ಗೊತ್ತಿಲ್ಲ. ಆದರೆ ಇವರೆಲ್ಲರೂ ಅಸಾಧಾರಣ ಭಾರತೀಯರು. ಇವರು ಮಾಡಿದ ಕೆಲಸಗಳನ್ನು ಸಂಶೋಧಿಸಿ, ನೆನಪಿಸಿಕೊಳ್ಳುವ ಮೂಲಕ ಈಗಿನ ತಲೆಮಾರಿನ ಸುಧಾರಕರು ಮತ್ತು ಹೋರಾಟಗಾರರಿಗೆ ಸ್ಫೂರ್ತಿಯಾಗಬೇಕಿದೆ.

ಹೋರಾಟಗಳಿಂದ ಬಹುತೇಕ ದೂರವೇ ಉಳಿದ ಒಬ್ಬ ವಿದ್ವಾಂಸನಾಗಿ ನನಗೆ ಈ ಜನರ ಬಗ್ಗೆ ಅಪಾರವಾದ ಗೌರವ ಇದೆ. ಆದರೆ ಇವರೆಲ್ಲರ ಬಗ್ಗೆ ನನಗೆ ಒಂದು ಅತೃಪ್ತಿಯೂ ಇದೆ. ಅದೆಂದರೆ ಇವರು ಯಾರೂ ತಮ್ಮ ಕೆಲಸಗಳನ್ನು ದಾಖಲಿಸಿಲ್ಲ ಮತ್ತು ಪ್ರಕಟಿಸಿಲ್ಲ. ಪಿಯುಸಿಎಲ್, ಪಿಯುಡಿಆರ್, ಎಪಿಡಿಆರ್, ಸಿಪಿಡಿಅರ್ ಮತ್ತು ಎಪಿಸಿಎಲ್‌ಸಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಜೀವನದ ವಿವಿಧ ಸ್ತರಗಳ ಜನರ ಮೇಲೆ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸುಮಾರು 500 ವರದಿಗಳನ್ನು ಸಿದ್ಧಪಡಿಸಿವೆ. ಈ ವರದಿಗಳು ಅಥವಾ ಈ ವರದಿಗಳ ಹೆಚ್ಚಿನ ಭಾಗಗಳು ಎಲ್ಲಿಯೂ ಲಭ್ಯ ಇಲ್ಲ. ಆಯ್ದ ಕೆಲವು ವರದಿಗಳು ಸುಮಾರು ಮೂವತ್ತು ವರ್ಷ ಹಿಂದೆ ಪ್ರಕಟವಾಗಿದೆ. ಸಮಾಜಶಾಸ್ತ್ರಜ್ಞ ಎ.ಆರ್.ದೇಸಾಯಿ ಇದನ್ನು ಸಂಪಾದಿಸಿದ್ದರು. ದೀರ್ಘವಾದ ವರದಿಗಳನ್ನು ಸಂಗ್ರಹಿಸುವಂತೆ ನಾನು ದಶಕದ ಹಿಂದೆ ಪಿಯುಡಿಆರ್‌ನ್ನು ಕೇಳಿಕೊಂಡಿದ್ದೆ. ಪ್ರಮುಖ ಪ್ರಕಾಶಕರೊಬ್ಬರು ಈ ಎಲ್ಲವನ್ನೂ ಒಂದೇ ಆವೃತ್ತಿಯಲ್ಲಿ ಪ್ರಕಟಿಸಿ ದೇಶದಾದ್ಯಂತ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದ್ದರು. ಆದರೆ ನನ್ನ ಗೆಳೆಯರ ನಿಸ್ವಾರ್ಥ ಮತ್ತು ಸಮಾಜವಾದಿ ಮನಸ್ಥಿತಿಯಿಂದಾಗಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ವಾಣಿಜ್ಯ ಸಂಸ್ಥೆಯೊಂದರ ಜೊತೆ ಕೈಜೋಡಿಸುವ ಮೂಲಕ ತಮ್ಮ ಸಂಸ್ಥೆಯ ಹೆಸರಿಗೆ ಕಳಂಕ ಉಂಟಾಗುವುದು ಅವರಿಗೆ ಬೇಕಿರಲಿಲ್ಲ. 

ವ್ಯಕ್ತಿಗಳ ಹಾಗೆಯೇ ಸ್ವಯಂ ಸೇವಾ ಸಂಸ್ಥೆಗಳಿಗೂ  ಒಂದು ಜೀವನ ಚಕ್ರ ಎಂಬುದು ಇರುತ್ತದೆ- ಹುಟ್ಟು, ಪ್ರಬುದ್ಧತೆ ಮತ್ತು ಅವನತಿ. ಪಿಯುಸಿಎಲ್, ಪಿಯುಡಿಆರ್ ಮತ್ತು ಇಂತಹ ಇತರ ಸಂಘಟನೆಗಳು ಈಗಲೂ ಮಹತ್ವದ ಕೆಲಸಗಳನ್ನು ಮಾಡುತ್ತಿವೆ. ಆದರೆ ಒಂದು ಕಾಲದಲ್ಲಿ ಇದ್ದ ರೀತಿಯಲ್ಲಿ ಅವು ಈಗ ಪರಿಣಾಮಕಾರಿ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ, ಹೊಸ ರಕ್ತದ ಸೇರ್ಪಡೆ ಮೂಲಕ ನವೀಕರಣಗೊಳ್ಳದಿರುವುದು. ಇಂತಹ ಸಂಘಟನೆಗಳ ಸಿಬ್ಬಂದಿ ಮತ್ತು ಅವುಗಳನ್ನು ನಡೆಸುವ ಪುರುಷ ಮತ್ತು ಮಹಿಳೆಯರಲ್ಲಿ ಹೆಚ್ಚಿನವರು 50 ಮತ್ತು 60 ವರ್ಷಗಳನ್ನು ದಾಟಿದವರು. ಮೂವತ್ತು ಅಥವಾ ಕೆಲವೊಮ್ಮೆ ನಲವತ್ತು ವರ್ಷಗಳ ನಿರಂತರ ಹೋರಾಟದ ಜೀವನ ಅವರನ್ನು ಹಣ್ಣಾಗಿಸಿದೆ.

ಪಿಯುಸಿಎಲ್, ಪಿಯುಡಿಆರ್‌ನಂತಹ ಸಂಘಟನೆಗಳ ಸೀಮಿತ ಪರಿಣಾಮಕಾರಿತ್ವಕ್ಕೆ ಎರಡನೇ ಕಾರಣ ಇವುಗಳು ಇತ್ತೀಚಿನ ದಿನಗಳಲ್ಲಿ ಪಕ್ಷಪಾತದ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವುದು. ವಿ.ಎಂ. ತಾರ್ಕುಂಡೆ ಮತ್ತು ಸಿ.ವಿ. ಸುಬ್ಬಾರಾವ್ ಸರ್ಕಾರದ ಮಾತುಗಳನ್ನು ಅದರ ಮುಖಬೆಲೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಹಾಗೆಯೇ ವೈಚಾರಿಕ ಗುಂಪುಗಳು ಅಥವಾ ಕ್ರಾಂತಿಕಾರಿ ಪಕ್ಷಗಳ ಪ್ರಚಾರಗಳನ್ನೂ ಹಾಗೆಯೇ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದರು.

ಈ ಇಬ್ಬರ ಬಗ್ಗೆ ಮೆಚ್ಚುಗೆ ಮೂಡಲು ಇರುವ ಕಾರಣಗಳಲ್ಲಿ ಇದೂ ಒಂದು. ಇವರು ತಮ್ಮದೇ ಆದ ಸ್ವತಂತ್ರ ತನಿಖೆಗಳನ್ನು ನಡೆಸುತ್ತಿದ್ದರು ಮತ್ತು ಸತ್ಯವನ್ನು ಆಧರಿಸಿ ತಮ್ಮದೇ ಆದ ತೀರ್ಮಾನಗಳಿಗೆ ಬರುತ್ತಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಇತ್ತೀಚಿನ ವರ್ಷಗಳಲ್ಲಿ ಇವೇ ನಾಗರಿಕ ಸ್ವಾತಂತ್ರ್ಯದ ಗುಂಪುಗಳು ಕೆಲವೊಮ್ಮೆ ಕಡಿಮೆ ವಸ್ತುನಿಷ್ಠವಾಗುತ್ತಿವೆ. ಭಾರತೀಯ ಸೇನೆ ಅಥವಾ ಅರೆ ಸೇನಾ ಪಡೆಗಳು ನಡೆಸುವ ಅತಿರೇಕಗಳ ಬಗ್ಗೆ ಇವುಗಳು ಸರಿಯಾಗಿಯೇ ವಿಮರ್ಶೆ ನಡೆಸುತ್ತವೆ. ಆದರೆ ಮಧ್ಯ ಭಾರತದಲ್ಲಿ ಮಾವೋವಾದಿಗಳು ಅಥವಾ ಗಡಿ ಭಾಗಗಳಲ್ಲಿ ಪ್ರತ್ಯೇಕತಾವಾದಿಗಳು ನಾಗರಿಕರ ಮೇಲೆ ನಡೆಸುವ ದಾಳಿಗಳ ಬಗ್ಗೆ ಈ ಸಂಘಟನೆಗಳ ಧ್ವನಿ ಸೌಮ್ಯವಾಗುತ್ತದೆ ಮತ್ತು ಈ ಘಟನೆಗಳನ್ನು ತೇಲಿಸಲು ಯತ್ನಿಸುತ್ತವೆ.

ಹಳೆಯ ನಾಗರಿಕ ಸ್ವಾತಂತ್ರ್ಯ ಸಂಘಟನೆಗಳು ಅವನತಿಯತ್ತ ಸಾಗುವಾಗ ಆ ಸ್ಥಾನವನ್ನು ತೆಗೆದುಕೊಳ್ಳುವವರು ಯಾರು? ನನ್ನ ದೃಷ್ಟಿಯಲ್ಲಿ ಗ್ರೀನ್‌ಪೀಸ್ ಮತ್ತು ಆಮ್ನೆಸ್ಟಿಯಂತಹ ಗುಂಪುಗಳಿಗೆ ನಮ್ಮ ದೇಶದಲ್ಲಿ ಇರುವ ಪಾತ್ರ ಸೀಮಿತ. ಈ ಗುಂಪುಗಳ ಪ್ರವರ್ತಕರಿಗೆ ಭಾರತದ ಸಾಮಾಜಿಕ ಮತ್ತು ರಾಜಕೀಯ ಸಂಕೀರ್ಣತೆಗಳ ಬಗೆಗೆ ಇರುವ ಅರಿವು ಮೇಲ್ಮಟ್ಟದ್ದು ಮಾತ್ರ. ವಿದೇಶಿ ಎಂಬ ಹಣೆಪಟ್ಟಿಯಿಂದಾಗಿ ಹೆಚ್ಚು ಹೆಚ್ಚು ಅನ್ಯದ್ವೇಷಿಯಾಗುತ್ತಿರುವ ಸರ್ಕಾರಕ್ಕೆ ಇವು ಸುಲಭ ಗುರಿಯಾಗುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ, ನಾನು ಈ ಅಂಕಣದಲ್ಲಿ ಚಿತ್ರಿಸಿರುವ ವ್ಯಕ್ತಿಗಳು ಮತ್ತು ಗುಂಪುಗಳು ಸಾಮಾನ್ಯ ವ್ಯಕ್ತಿಗಳಾಗಿ ಬದುಕಿದ ಅನುಭವಗಳನ್ನು ಹೊಂದಿದ್ದವರು. ಮತ್ತು ಇವರು ಸಂಪೂರ್ಣವಾಗಿ ರೂಪಾಯಿಯ ಮೇಲೆ ಅವಲಂಬಿತರಾಗಿದ್ದವರು, ಡಾಲರ್ ಮೇಲಲ್ಲ. ಈ ರೂಪಾಯಿಗಳು ಕೂಡ ಅಸಂಖ್ಯ ಮತ್ತು ಬಹುತೇಕ ಹೆಸರಿಲ್ಲದ ವ್ಯಕ್ತಿಗಳ ದೇಣಿಗೆಯೇ ಹೊರತು ದೊಡ್ಡ ವಿದೇಶಿ ಪ್ರತಿಷ್ಠಾನಗಳಿಂದ ಬಂದ ಹಣವಲ್ಲ. ಈ ಎರಡು ಪ್ರಮುಖ ಅಂಶಗಳೇ ಅವುಗಳ ವಿಶ್ವಾಸಾರ್ಹತೆಯ ನೆಲೆಗಟ್ಟಾಗಿದ್ದವು. ಹಾಗಾಗಿಯೇ ಅವು ಪರಿಣಾಮಕಾರಿಯೂ ಆಗಿದ್ದವು.

ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯಿಂದಾಗಿ ಕೆಲವು ಘೋರ ಪರಿಣಾಮಗಳು ಉಂಟಾದವು. ಪ್ರಜಾತಂತ್ರದ ಸಂಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆದವು. ಆದರೆ ಈ ದಾಳಿಗಳೇ ಭಾರತದ ಕೆಲವು ಅಸಾಧಾರಣ ಪುರುಷ ಮತ್ತು ಮಹಿಳೆಯರು ನಾಗರಿಕ ಸ್ವಾತಂತ್ರ್ಯ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಡುವ ಸ್ಫೂರ್ತಿಯನ್ನೂ ನೀಡಿದವು. ಈಗ, ನಲವತ್ತು ವರ್ಷಗಳ ನಂತರ ರಾಜಕೀಯ ವ್ಯವಸ್ಥೆ ಬಹುಶಃ ತುರ್ತುಪರಿಸ್ಥಿತಿ ನಿರೋಧಕವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಆಡಳಿತ ಪಕ್ಷದ ಎಲ್ಲ ಬಣ್ಣಗಳ ರಾಜಕಾರಣಿಗಳು ನಡೆಸುವ ದೊಡ್ಡ ಪ್ರಮಾಣದ ಮಾನವ ಹಕ್ಕು ಉಲ್ಲಂಘನೆಗಳು ಮುಂದುವರಿದಿವೆ. ಭಾರತ ಗಣತಂತ್ರಕ್ಕೆ ತಾರ್ಕುಂಡೆ, ಸುಬ್ಬಾರಾವ್, ಸುದೇಶ್ ವೈದ್ ಮತ್ತು ಇಂದ್ರಮೋಹನ್‌ ಅವರಂತಹ ಹೊಸ ತಲೆಮಾರಿನ ಅಗತ್ಯ ಅತ್ಯಂತ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT