ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತೆಗಳ ಕಷ್ಟದ ಕೆಲಸ

Last Updated 21 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಒಂದು ದಿನ ಸಂಜೆ ಇಬ್ಬರು ದೇವತೆಗಳು ನಗರದ ಹೊರಬಾಗಿಲಲ್ಲಿ  ಪರಸ್ಪರ ಭೆಟ್ಟಿಯಾದರು.  ಅನೇಕ ದಿನಗಳ ನಂತರ ಭೆಟ್ಟಿಯಾಗಿದ್ದರಿಂದ ಉಭಯಕುಶಲೋಪರಿ ನಡೆಸಿದರು. ಒಬ್ಬ ದೇವತೆ ಇನ್ನೊಬ್ಬಳಿಗೆ ಕೇಳಿದರು,  `ನಿನ್ನ ಕೆಲಸ ಹೇಗೆ ನಡೆದಿದೆ.  ಈಗ ನಮ್ಮ ನಾಯಕರು ನಿನಗೆ ಯಾವ ಕೆಲಸ ವಹಿಸಿದ್ದಾರೆ'. `ಅಯ್ಯೋ ಅದನ್ನೇನು ಕೇಳುತ್ತೀ. ನಿನಗೇ ಗೊತ್ತಲ್ಲ, ನಮಗೆ ಕೆಲಸಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆಯೇ. ನಾಯಕರು ಕೊಟ್ಟಿದ್ದನ್ನು ಮಾಡಬೇಕು.  ಈಗ ನನಗೆ ಅತ್ಯಂತ ನೀಚ ಮನುಷ್ಯನನ್ನು ಹಿಂಬಾಲಿಸುವ, ಅವನ ಕಾಳಜಿ ಮಾಡುವ ಕೆಲಸ. 

ಅವನೋ ಪರಮ ನೀಚ, ಕಣಿವೆ ಪ್ರದೇಶದಲ್ಲಿ  ವಾಸವಾಗಿದ್ದಾನೆ.  ಇದು ತುಂಬ ಕಷ್ಟದ ಕಾರ್ಯ.  ಆದರೆ ನಾನು ಅತ್ಯಂತ ಪರಿಶ್ರಮದಿಂದ, ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೇನೆ'. ಇನ್ನೊಬ್ಬ ದೇವತೆ ಉತ್ತರಿಸಿದಳು. `ಹಾಗಾದರೆ ನಿನ್ನ ಕೆಲಸವೇ ವಾಸಿ. ನೀಚರನ್ನು ಉದ್ಧರಿಸುವುದು ಸುಲಭ. ಅದಕ್ಕೇ ತಾನೇ ನಮಗೆ ತರಬೇತಿ ಕೊಟ್ಟದ್ದು.  ನಾನು ಈಗಾಗಲೇ ಅನೇಕ ಅಂಥ ನೀಚರನ್ನು ಸರಿಮಾಡಿದ್ದೇನೆ.  ಈಗ ನನ್ನ ಕೆಲಸ ತುಂಬ ಕಷ್ಟಕರವಾದದ್ದು.  ನನಗೊಬ್ಬ ಧರ್ಮಗುರುವನ್ನು ನೋಡಿಕೊಳ್ಳುವ ಕರ್ಮಬಂದಿದೆ. ಅವನು ತನ್ನದೇ ಸಾಮ್ರೋಜ್ಯದಲ್ಲಿದ್ದಾನೆ. ಇದಕ್ಕಿಂತ ಕಷ್ಟದ ಕೆಲಸ ಯಾವುದೂ ಇರಲಿಕ್ಕ್ಲ್ಲಿಲ' ಎಂದಳು ಮೊದಲನೆಯಾಕೆ.

 ಇನ್ನೊಬ್ಬಳು ಬಿಟ್ಟಾಳೆಯೇ. `ಎಷ್ಟು ಅಹಂಕಾರ ನಿನಗೆ. ನಿನ್ನ ಕೆಲಸವೇ ಮುಖ್ಯ ಮತ್ತು ಕಷ್ಟದ್ದೇ.  ನೀನು ಕೆಲವು ನೀಚರನ್ನು  ಸರಿಮಾಡಿದ್ದಿರಬಹುದು. ಆದರೆ, ಇವನನ್ನು ಕಂಡಿದ್ದೀಯಾ. ಈತ ನೀಚ  ಎನ್ನುವುದು ನನಗೆ  ಮತ್ತು ದೇವರಿಗೆ ಗೊತ್ತು.  ಸಮಾಜದಲ್ಲಿ  ಮಾತ್ರ ಇವನು ನಾಯಕ.  ಅದೇನು ಮುಖವಾಡ, ಅದೇನು ನಾಟಕ ಗೊತ್ತೇ. 

ಅವನನ್ನು ಕಂಡವರೆಲ್ಲ ಗುಣಗಾನ ಮಾಡುತ್ತಾರೆ.  ಆದರೆ ಏಕಾಂತದಲ್ಲಿ  ಸದಾ ಅವನಿಗೆ ಒಂದೇ ಯೋಚನೆಯೆಂದರೆ ಯಾರಿಗೆ, ಎಲ್ಲಿ, ಎಷ್ಟು ಮೋಸ ಮಾಡಬೇಕು ಎಂಬುದು.  ಅವನ ಮನಸ್ಸು ಎಂದಿಗೂ ಸರಿಯಾದ ದಾರಿಯಲ್ಲಿ  ಚಿಂತಿಸುವುದಿಲ್ಲ.  ಇಂಥವನನ್ನು ನಿಭಾಯಿಸುವ ಕೆಲಸ ನಿನಗೆ ಸಿಕ್ಕಿದ್ದರೆ ಕಷ್ಟ ಅರ್ಥವಾಗುತ್ತಿತ್ತು'  ಎಂದು ಹೂಂಕರಿಸಿದಳು.  ಮೊದಲನೆಯವಳಿಗೆ  ಕೋಪ ಉಕ್ಕೇರಿತು.  `ನಿನ್ನ ಸ್ವಭಾವ ನನಗೆ ಗೊತ್ತು. ಮೊದಲಿನಿಂದಲೂ ನೀನು ಹಾಗೆಯೇ.  ಯಾವಾಗಲೂ ನಿನ್ನ ಕೆಲಸವೇ ದೊಡ್ಡದು, ನೀನೇ ಶ್ರೇಷ್ಠ ಅಲ್ಲವೇ.

ನಾನು ನೋಡಿಕೊಳ್ಳುತ್ತಿರುವುದು ಒಬ್ಬ ಧರ್ಮಗುರುವನ್ನು. ಅವನನ್ನು ಧಾರ್ಮಿಕನನ್ನಾಗಿಯೇ ಇಡಲು ನಾನು ಪಡುತ್ತಿರುವ ಕಷ್ಟ ಯಾರಿಗೂ ತಿಳಿಯದು.  ಅವನು ಧರ್ಮಕಾರ್ಯಗಳನ್ನು ಬಿಟ್ಟು ಇನ್ನೆಲ್ಲವನ್ನೂ ಮಾಡುತ್ತಾನೆ.  ಅವನಷ್ಟು ಅನಾಚಾರಗಳನ್ನು ನೀನು ನೋಡಿಕೊಳ್ಳುತ್ತಿರುವ ಪಾಪಿಯೂ ಮಾಡಲಿಕ್ಕಿಲ್ಲ.  ಅವನನ್ನು ನಿಧಾನವಾಗಿ ದಾರಿಗೆ ತರುತ್ತಿದ್ದೇನೆ.  ನನ್ನ ಕೆಲಸವೇ ದೊಡ್ಡದು'  ಎಂದಳಾಕೆ ಉಗ್ರವಾಗಿ.

ಮಾತಿಗೆ ಮಾತು ಬೆಳೆಯಿತು.  ದೇವತೆಗಳಾದರೇನಂತೆ ಅವರಿಗೂ ಸಿಟ್ಟು, ಅಹಂಕಾರ ಇದ್ದದ್ದೇ. ಮಾತು ಜಗಳವಾಯಿತು.  ಕೊನೆಗೆ ಕೈಕೈ ಮಿಲಾಯಿಸುವ ಸಂದರ್ಭ ಬಂದಿತು.  ಆಗ ಭಗವಂತನ ಆಗಮನ ಅನಿವಾರ್ಯವಾಯಿತು.  ಆತ ಬಂದು ಜಗಳ ನಿಲ್ಲಿಸಿದ.  ಇಬ್ಬರೂ ತಮ್ಮ ತಮ್ಮ ವಾದಗಳನ್ನು ಮಂಡಿಸಿ ಹೇಗೆ ತಮ್ಮ ಕಾರ್ಯವೇ ಶ್ರೇಷ್ಠವಾದದ್ದು ಎಂದು ಹೇಳಿದರು.  ಭಗವಂತ ತಾಳ್ಮೆಯಿಂದ ಇಬ್ಬರ ಮಾತುಗಳನ್ನು ಕೇಳಿಸಿಕೊಂಡು ಹೇಳಿದ, `ನಾನು ಈಗಲೇ ಯಾರ ಕಾರ್ಯ ಹೆಚ್ಚು ದೊಡ್ಡದು, ಜವಾಬ್ದಾರಿಯಾದದ್ದು ಎಂದು ಹೇಳಲಾರೆ.

 ಆದರೆ ನಿಮಗಿಬ್ಬರಿಗೂ ಒಂದು ವಿಷಯ ಖಚಿತವಾಗಿದೆ.  ಅದೇನೆಂದರೆ ಇನ್ನೊಬ್ಬರ ಕೆಲಸ ಸುಲಭವಾದದ್ದು.  ಆದ್ದರಿಂದ ನಿಮಗೆ ನಿಮ್ಮ ಕೆಲಸಗಳನ್ನು ಹಗುರಮಾಡಿಕೊಳ್ಳಲು ಈ ಕ್ಷಣದಿಂದ ನಿಮ್ಮ ಕಾರ್ಯಗಳನ್ನು ಅದಲುಬದಲು ಮಾಡಿದ್ದೇನೆ. ನೀವಿನ್ನು ಹೊರಡಿ'. ಇಬ್ಬರೂ ತಮ್ಮ ಕೆಲಸ ಕಡಿಮೆಯಾಯಿತೆಂಬ ಸಂತೋಷದಲ್ಲಿ  ಕುಣಿಯುತ್ತ ಹೋದರು.  ಒಂದು ವಾರದ ನಂತರ ಮತ್ತೆ ಭೆಟ್ಟಿಯಾದಾಗ ಮತ್ತೆ ಅದೇ ವಾದ ತಮ್ಮ ಕೆಲಸವೇ ಕಷ್ಟದ್ದು ಎಂದು.

ನಾವೂ ಹಾಗೆಯೇ. ನಮ್ಮ ಕಷ್ಟವೇ ದೊಡ್ಡದು,  ನಮ್ಮ ಸಾಧನೆಯೇ ಹೆಚ್ಚಿನದು ಎಂದು ಭಾವಿಸುತ್ತೇವೆ, ಇನ್ನೊಬ್ಬರ ಕಷ್ಟ, ಪರಿಶ್ರಮ ಅರ್ಥವಾಗುವವರೆಗೆ. ಅನಂತರ ತಿಳಿವಳಿಕೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT