ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಸಿಯ ಮೆಜೋಲಿ ಎಂಬ ಅಭಿಜಾತ ಪ್ರತಿಭೆ

Last Updated 19 ಮೇ 2013, 19:59 IST
ಅಕ್ಷರ ಗಾತ್ರ

ನೀಸಿಯ ಮೆಜೋಲಿ ಅಪರೂಪದ ಸಂಗೀತಗಾರ್ತಿ. ಅವರ ಕಾರ್ಯ ಕ್ಷೇತ್ರ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ. ಇದು ಸ್ವಲ್ಪ ಮಡಿವಂತ ಎನಿಸುವ ಕ್ಷೇತ್ರ. ಬೆಂಗಳೂರಿನ ಪಾಶ್ಚಾತ್ಯ ಸಂಗೀತ ಶಿಕ್ಷಕರಲ್ಲಿ ಇವರು ಪ್ರಮುಖರು. 

ನೀಸಿಯ ಅವರ ಕಥೆ ಕುತೂಹಲಕಾರಿಯಾಗಿದೆ. ಅವರ ಕುಟುಂಬ ಕೇರಳ ಮೂಲದ್ದು. ತಾಯಿ ಮೋಳಿ ಜೋಸೆಫ್ ಮಾಥ್ಯೂ ಮಲಯಾಳಂ ಪತ್ರಿಕೆಯಲ್ಲಿ ಒಂದು ಸಣ್ಣ ಜಾಹೀರಾತು ನೋಡಿ ಕೆಲಸಕ್ಕೆ ಅರ್ಜಿ ಹಾಕಿದರಂತೆ. ಕೆಲಸ ಇದ್ದದ್ದು ಬ್ರುನೆಯ್ ಎಂಬ ದೂರದ ದೇಶದಲ್ಲಿ. ಅದೃಷ್ಟಕ್ಕೆ ಮೋಳಿ ಮತ್ತು ಮೂರು ಸ್ನೇಹಿತೆಯರಿಗೆ ಕೆಲಸ ಸಿಕ್ಕಿಬಿಟ್ಟಿತು. ಮೋಳಿ ಅವರು ಮಕ್ಕಳಿಗೆ ಕಲಿಸಿದ್ದು ಕಾಮರ್ಸ್.

ನೀಸಿಯ ಅವರ ತಂದೆ ಜೋಸೆಫ್ ಮಾಥ್ಯೂ ಕೂಡ ಶಿಕ್ಷಕರು. ಅವರು ಹೇಳಿಕೊಡುತ್ತಿದ್ದದ್ದು ಇಂಗ್ಲಿಷ್ ಸಾಹಿತ್ಯ. ನೀಸಿಯ ಹುಟ್ಟಿದ್ದು, ಶಾಲೆಗೆ ಹೋಗಿದ್ದು ಬ್ರುನೆಯ್‌ನಲ್ಲಿ. ಅವರಿಗೆ ಎರಡೂವರೆ ವರ್ಷವಿದ್ದಾಗಲೇ ತಂದೆ ಪಿಯಾನೋ ಕಲಿಸಲು ಶುರು ಮಾಡಿದರು. ನೀಸಿಯ ಆರು ವರ್ಷವಿದ್ದಾಗ ಮೊದಲ ಸ್ಟೇಜ್ ಕಾರ್ಯಕ್ರಮ ಕೊಟ್ಟರು. (ಸಾಮಾನ್ಯವಾಗಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕಲಿಯಲು ಶುರು ಮಾಡುವುದು ಆ ವಯಸ್ಸಿಗೆ). ಒಂದಷ್ಟು ವರ್ಷ ಹಿಂದೂಸ್ತಾನಿ ಸಂಗೀತ ಕಲಿತಿದ್ದ ಜೋಸೆಫ್ ಮಾಥ್ಯೂ ಪಾಶ್ಚಾತ್ಯ ಸಂಗೀತಕ್ಕೆ ಸೋತು ವಯಲಿನ್ ಕಲಿಯತೊಡಗಿದ್ದರು. ಮಗಳಿಗೆ ಮೊದಲ ಗುರುಗಳು ತಂದೆ, ಮತ್ತು ಒಂದಷ್ಟು ಪಿಯಾನೋ ನುಡಿಸುತ್ತಿದ್ದ ತಾಯಿ.

ಮಲೇಷ್ಯಾ ಮತ್ತು ಇಂಡೋನೇಷ್ಯಾ ಹತ್ತಿರ ಇರುವ ಪುಟ್ಟ ದೇಶ ಬ್ರುನೆಯ್‌ನ ಜನರಲ್ಲಿ ಶೇಕಡ 58 ಮುಸ್ಲಿಮರು. ನೀಸಿಯ ಜೊತೆಗಿದ್ದವರು ಮಲಯ ಮತ್ತು ಚೀನೀ ಭಾಷೆ ಮಾತಾಡುತ್ತಿದ್ದರು. ಇಂಗ್ಲಿಷ್ ವಿದ್ಯಾಭ್ಯಾಸ ಹೊಂದುತ್ತಿದ್ದ ಇವರ ವರ್ಗದವರು ಪಾಪ್ ಮತ್ತು ರಾಕ್ ಸಂಗೀತ ಕೇಳುತ್ತಿದ್ದರಂತೆ. ಆದರೆ ನೀಸಿಯ ಮನಸಿದ್ದದ್ದು ಶಾಸ್ತ್ರೀಯ ಸಂಗೀತದಲ್ಲಿ. ಶಾಲಾ ಕಾಲೇಜು ಮುಗಿಸುವ ಹೊತ್ತಿಗೆ ಸಂಗೀತ ಬಿಟ್ಟು ಬೇರೆ ಯಾವ ಉದ್ಯೋಗವನ್ನೂ ಮಾಡುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು. ಅಪ್ಪ ಅಮ್ಮ ಕೂಡ ಡಾಕ್ಟರ್, ಎಂಜಿನಿಯರ್ ಆಗುವ ಒತ್ತಡ ಹೇರಲಿಲ್ಲ. ಸಿಂಗಪುರಕ್ಕೆ ಹೋಗಿ ಉನ್ನತ ಪಿಯಾನೋ ಶಿಕ್ಷಣ ಪಡೆದು ನೀಸಿಯ ಭಾರತಕ್ಕೆ ಬಂದಿದ್ದು 90ರ ದಶಕದ ಮೊದಲಿನಲ್ಲಿ. ಒಂದಷ್ಟು ದಿನ  ದೆಹಲಿಯಲ್ಲಿದ್ದ ಅವರು ಬೆಂಗಳೂರಿಗೆ 1994ರಲ್ಲಿ ಬಂದು ನೆಲೆಸಿದರು. ಬೆಂಗಳೂರಿನಲ್ಲಿ ವಿಧವಿಧ ಸಂಗೀತಕ್ಕೆ ಮುಕ್ತ ಮನಸ್ಸಿನ ಸ್ವಾಗತ ದೊರೆಯುತ್ತದೆ ಎಂದು ನೀಸಿಯರ ನಂಬಿಕೆ.

ಬೆಂಗಳೂರಿನ ಪಾಪ್, ರಾಕ್ ಬ್ಯಾಂಡ್‌ಗಳಿಗೆ ಸಿಗುವ ಪ್ರಚಾರ ನೀಸಿಯ ಅಭ್ಯಾಸ ಮಾಡುವ ಸಾಂಪ್ರದಾಯಕ ಸಂಗೀತಕ್ಕೆ ಸಿಗುವುದಿಲ್ಲ. ಹಾಗಾಗಿ ನೀಸಿಯರಂಥ ಕಲಾವಿದರು ತೆರೆಯ ಮರೆಯಲ್ಲೇ ಉಳಿದಿರುತ್ತಾರೆ. ಶಾಸ್ತ್ರೀಯ ಸಂಗೀತದ ಶಿಸ್ತಿಗೆ ಎಷ್ಟೋ ವಿದ್ಯಾರ್ಥಿಗಳು ತತ್ತರಿಸಿ ಹೋಗುತ್ತಾರೆ. ಹಾಗಾದರೆ ಅವರ ಶಿಷ್ಯರು ಎಂಥವರು? ಬೆಂಗಳೂರಿನ ದಂಡು ಪ್ರದೇಶದಲ್ಲಿ ಬ್ರಿಟಿಷ್ ಕಾಲದ ಕೆಲವು ಸಂಪ್ರದಾಯಗಳು ಹಾಗೆಯೇ ಉಳಿದಿವೆ. ಪಿಯಾನೋ ಸಂಗೀತದ ಬಗೆಗಿನ ಗೌರವ ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ ಬಂದಿದೆ. ನೀಸಿಯ ಅವರ ಶಿಷ್ಯರು ಹಲವರು ಕ್ರಿಶ್ಚಿಯನ್ ಧರ್ಮದವರು, ಆದರೆ ಅವರು ಇವರಲ್ಲಿ ಕಲಿಯುವುದು ಗಾಸ್ಪೆಲ್ (ಕ್ರಿಶ್ಚಿಯನ್ ಭಕ್ತಿ) ಸಂಗೀತ ಅಲ್ಲ.  ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಲಿಯುವ ಹಲವರು ನೀಸಿಯರಲ್ಲಿ ವಾಯ್ಸ ತರಬೇತಿಗೆ ಬರುತ್ತಾರೆ. ಶಿಷ್ಯರ ಪೈಕಿ ಸಂಗೀತವನ್ನೇ ಕೆರಿಯರ್ ಆಗಿ ಆಯ್ಕೆ ಮಾಡಿಕೊಳ್ಳುವವರೂ ಇರುತ್ತಾರೆ. ಒಂದಿಬ್ಬರು ಶಾಸ್ತ್ರೀಯ ಸಂಗೀತ ಕಲಿಯುವ ಸಲುವಾಗಿ ಯೂರೋಪ್‌ಗೆ ಹೊರಡಲು ತಯಾರಾಗಿದ್ದಾರೆ.

ನೀಸಿಯ ಹಾಡುಗಾರ್ತಿ, ಪಿಯಾನೋ ವಾದಕಿ. ಅವರು 1999ರಲ್ಲಿ ಹುಟ್ಟುಹಾಕಿದ ಕ್ವಾಯರ್ (ಹಾಡುವ) ತಂಡದ ಹೆಸರು ಮದ್ರಿಗಲ್ಸ್ ಎಟ್ಸೆಟ್ರ. ಮದ್ರಿಗಲ್ ಎನ್ನುವುದು 16ನೇ ಶತಮಾನದ ಇಟಾಲಿಯನ್ ಸಂಗೀತದ ಪ್ರಕಾರ. ನೀವಾಗಲೇ ಊಹಿಸಿರಬಹುದು: ನೀಸಿಯರ ಸ್ಫೂರ್ತಿಯ ಮೂಲ ಯುರೋಪಿಯನ್ ಅಭಿಜಾತ (ಕ್ಲಾಸಿಕಲ್) ಸಂಸ್ಕೃತಿ, ಎಲ್ಲೆಲ್ಲೂ ಹರಡಿರುವ ಅಮೆರಿಕನ್ ಪಾಪ್ ಸಂಸ್ಕೃತಿ ಅಲ್ಲ. ನೀಸಿಯ ನಿರ್ದೇಶನದ ತಂಡ ಶನಿವಾರ ಒಂದು ಕಾರ್ಯಕ್ರಮವನ್ನು ಅಲಯನ್ಸ್ ಫ್ರಾನ್ಸೆಯಲ್ಲಿ ನೀಡಿತು. ಅವರೊಡನೆ ಎಂಎಂಟಿ ಕ್ವಾಯರ್ ಎಂಬ ತಂಡವೂ ಕೈಜೋಡಿಸಿತ್ತು.

ಸ್ಪ್ಯಾನಿಷ್ ಭಾಷೆಯ ಕೃತಿಗಳನ್ನು ಧ್ವನಿಗೆ ಅಳವಡಿಸಿಕೊಂಡು ಯಾವುದೇ ವಾದ್ಯದ ಸಹಕಾರವಿಲ್ಲದೆ ಸುಮಾರು ಹದಿನೆಂಟು ಜನ ಅಚ್ಚರಿ ಹುಟ್ಟಿಸುವಂತೆ ಹಾಡಿದರು. ಒಬ್ಬ ಆಫ್ರಿಕನ್ ಮತ್ತು ಒಬ್ಬ ಬಿಳಿಯ ಇದ್ದ ತಂಡ ಸ್ಪ್ಯಾನಿಷ್ ಭಾಷೆಯನ್ನು ಅಭ್ಯಾಸ ಮಾಡಿ ಸಲೀಸಾಗಿ ಉಚ್ಚರಿಸಿತು. ಇಂಥ ಕಷ್ಟದ ಸಂಗೀತವನ್ನು, ತಿಳಿಯದ ಭಾಷೆಯ ಸಾಹಿತ್ಯವನ್ನು ಹೇಗೆ ಕಲಿತು, ಕಲಿಸಿದಿರಿ ಎಂದು ನೀಸಿಯರನ್ನೇ ಕೇಳಿದೆ. `ಆರು ತಿಂಗಳು ತಾಲೀಮು ಮಾಡಿದೆವು' ಎಂದರು. ವಿಜಯಭಾಸ್ಕರ್, ಇಳಯರಾಜ, ಎ.ಆರ್. ರೆಹಮಾನರ ಸಿನಿಮಾ ಹಿನ್ನೆಲೆ ಸಂಗೀತದಲ್ಲಿ, ಅದರಲ್ಲೂ ಕ್ರಿಶ್ಚಿಯನ್ ಸನ್ನಿವೇಶಗಳಲ್ಲಿ ವಿಶೇಷವಾಗಿ, ಇಂಥ ಸಂಗೀತದ ತುಣುಕುಗಳನ್ನು ಕೇಳಿರುತ್ತೇವೆ. ಆ ತುಣುಕುಗಳ ಮೂಲ ಏನು ಎಂದು ಇಂಥ ಕೊರಲ್ ಸಂಗೀತ ತೋರಿಸಿಕೊಡುತ್ತದೆ.

ಸಾಮಾನ್ಯವಾಗಿ ರೇಡಿಯೊ, ಪಬ್, ರೆಸ್ಟೋರೆಂಟ್‌ಗಳಲ್ಲಿ ಕಿವಿಗೆ ಬೀಳುವುದು ಪಾಶ್ಚಾತ್ಯ ಪಾಪ್ ಸಂಗೀತ. ಇನ್ನು ಪಂಚತಾರ ಹೊಟೇಲುಗಳಲ್ಲಿ ಕೇಳಿಬರುವುದು ಈಜಿ ಲಿಸನಿಂಗ್, ಎಲಿವೇಟರ್ ಮ್ಯೂಸಿಕ್ ಎಂದು ಕರೆಸಿಕೊಳ್ಳುವ ಲಘು ಸಂಗೀತದ ಪ್ರಕಾರಗಳು. ಕೇಳುಗರಿಂದ ಯಾವುದೇ ತಯಾರಿಯನ್ನು ಬಯಸದ ಸಂಗೀತ ಪ್ರಕಾರಗಳು ಇವು. ಆದರೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹೇಗೋ ಹಾಗೆಯೇ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕೂಡ ಕೇಳುಗರಿಂದ ಏಕಾಗ್ರತೆ ನಿರೀಕ್ಷಿಸುತ್ತದೆ. ಪ್ರಕಾರದ ಅರಿವು, ತಿಳುವಳಿಕೆ ಇದ್ದರೆ ಅದೊಂದು ಬೋನಸ್.

ನೀಸಿಯ ಬೆಂಗಳೂರಿನ ಲಿಂಗರಾಜಪುರದಲ್ಲಿ ನೆಲೆಸಿದ್ದಾರೆ. ಅವರ ಮನೆಯ ಪಕ್ಕದಲ್ಲೇ ಚಂದ್ರಿಕಾ ಸಾಬೂನಿನ ಕಾರ್ಖಾನೆಯಿದೆ. ಚಿಕ್ಕ ಓಣಿಯಲ್ಲಿರುವ ಅವರ ಮನೆಯಲ್ಲಿ ಪ್ರತಿನಿತ್ಯ ಪಾಠ ನಡೆಯುತ್ತದೆ. ಬೆಂಗಳೂರಿನ ವಿದ್ಯಾರ್ಥಿಗಳಲ್ಲದೆ ಬೇರೆ ಊರುಗಳಿಂದ ಬರುವವರು ಹಲವರಿದ್ದಾರೆ. ಮೆಜೋಲಿ ಮ್ಯೂಸಿಕ್ ಟ್ರಸ್ಟ್ ಎಂಬ ಸಂಸ್ಥೆಯನ್ನು ನೀಸಿಯ ಸ್ಥಾಪಿಸಿದ್ದಾರೆ. ಇದು 2011ರಿಂದ ಸಂಗೀತ ಚಟುವಟಿಕೆಯಲ್ಲಿ ತೊಡಗಿದೆ. ಸಂಗೀತ ಕಲಿಸುವುದು, ಸಂಗೀತದ ಶಿಕ್ಷಕರನ್ನು ತಯಾರು ಮಾಡುವುದು, ಸಂಗೀತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತರಬೇತಿ ನೀಡುವುದು ಈ ಸಂಸ್ಥೆಯ ಉದ್ದೇಶ. ಹಿರಿಯ, ಬಡ ಸಂಗೀತಗಾರರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಕೆಲಸವನ್ನೂ ನೀಸಿಯ ಅವರ ಸಂಸ್ಥೆ ಮಾಡುತ್ತಿದೆ. ನೀಸಿಯ ಅವರು ತಯಾರಿಸಿದ ವೆಸ್ಟೆರ್ನ್ ಕ್ಲಾಸಿಕಲ್ ಸಿ.ಡಿ. ಭಾರತದಲ್ಲೇ ಈ ಪ್ರಕಾರದ ಮೊದಲ ಧ್ವನಿಮುದ್ರಿಕೆಯಂತೆ. ಕೆಲವು ಕಾಲ `ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ಸಂಗೀತ ವಿಮರ್ಶೆಯನ್ನು ಮಾಡುತ್ತಿದ್ದ ನೀಸಿಯ ನಿಷ್ಠುರ, ನಿಸ್ಪೃಹ ಬರಹಗಾರ್ತಿ ಕೂಡ. ರಾಜ ರಾಮಣ್ಣ ಅವರ ಪಿಯಾನೋ ವಾದನವನ್ನು ಒಮ್ಮೆ ತುಂಬ ತೀಕ್ಷ್ಣವಾಗಿ ಟೀಕಿಸಿದ್ದರು. 

ನೀಸಿಯ ಕಲಿಸುವ ಸಂಗೀತ ಇಷ್ಟು ವಿರಳ, ಕಠಿಣ ಎನಿಸಿದರೂ ಅವರ ಶಾಲೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬಾಲಿವುಡ್ ಸಂಗೀತ ಬಿಟ್ಟರೆ ಬೇರೆ ಇಲ್ಲ ಎಂದು ಮಾತಾಡುವ ಜನರಿಗೆ ಇದು ತಿಳಿಯಬೇಕು. ಸಂಗೀತದ ತಾಯಿ ಬೇರುಗಳು ಗಟ್ಟಿಯಾಗೇ ಇವೆ.
ನೀಸಿಯ ಅವರ ಟ್ರಸ್ಟ್ ನ ದೂರವಾಣಿ ಸಂಖ್ಯೆ  8722210941.
ವೆಬ್ಸೈಟ್: www.majollymusictrust.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT