ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣದೊಳಗೆ ಚರಿತ್ರೆಯ ಹೂರಣ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದಸರಾ ಹಬ್ಬ, ಚಾಮುಂಡಿ ಬೆಟ್ಟಕ್ಕೆ ಹೋದ­ವ­ರೆಲ್ಲಾ ಮಹಿಷಾಸುರನ ಆಳೆತ್ತರದ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆಸಿ­ಕೊಳ್ಳುವ ಸಂಭ್ರಮ. ಕಣ್ಣಿಗೆ ರಾಚುವ ಬಣ್ಣಗಳು. ಕೋರೆ ಹಲ್ಲುಗಳು, ಕೆದರಿದ ಜಟೆ, ದೈತ್ಯಾಕಾರ, ಒಂದು ಕೈಯಲ್ಲಿ ಅಗಲವಾದ ಖಡ್ಗ ಮತ್ತೊಂದ­ರಲ್ಲಿ ಹಾವು. ಇಪ್ಪತ್ತನೇ ಶತಮಾನದ ಕಲಾವಿದ­ನೊಬ್ಬನ  ಕಲ್ಪನೆಯ ದುಷ್ಟ ರಾಕ್ಷಸನ ಗಾರೆಶಿಲ್ಪ. ಮಹಿಷನ ಕಾರಣಕ್ಕೆ ಈ ನಾಡನ್ನು ಮೈಸೂರು ಎಂದು ಕರೆಯಲಾಗಿದೆ ಎಂದು ಹೇಳುವುದು ವಾಡಿಕೆ. ಆ ರಾಕ್ಷಸನನ್ನು ಸಂಹರಿಸಿದ ದೇವಿ ಮಹಿಷಾಸುರ ಮರ್ದಿನಿ.

ಹುಲಿಯನ್ನೇರಿದ ಅವಳ ಕಲ್ಪನೆ ಬೀಭತ್ಸವಾದುದು. ಚಾಮುಂಡಿ ಬೆಟ್ಟ­ದಲ್ಲಿ ಮಹಿಷಾಸುರ ಮರ್ದಿನಿಯನ್ನೇ ಚಾಮುಂ­ಡೇ­ಶ್ವರಿ ಎಂದು ಕರೆಯಲಾಗುತ್ತದೆ. ತಮಿಳು­ನಾಡು ಮತ್ತಿತರ ಪ್ರದೇಶಗಳಲ್ಲಿ ಆರಾಧಿಸುವ ಚಾಮುಂಡೇಶ್ವರಿ, ಕೋಣನ ಸ್ವರೂಪದ ರಾಕ್ಷಸ-­ನನ್ನು ಕೊಲ್ಲುವುದಿಲ್ಲ. ಬದ­ಲಾಗಿ ಚಂಡ–ಮುಂಡ ಅಥವಾ ನಿಶುಂಬರೆಂಬ ಬೇರೆ ರಾಕ್ಷಸರನ್ನು ಸಂಹ­ರಿ­ಸುತ್ತಾಳೆ. ಮಹಿಷಾ­ಸುರ ಮರ್ದಿನಿಗಿಂತ ಚಾಮುಂ­ಡೇಶ್ವರಿಯ ಶಿಲ್ಪ ಇನ್ನೂ  ಹೆಚ್ಚು ವ್ಯಗ್ರ­ವಾಗಿ ಕೆತ್ತಲಾಗುತ್ತದೆ. ಗುಳಿ ಬಿದ್ದ ಕಣ್ಣು, ಒಳ­ಹೋದ ಹೊಟ್ಟೆ ಹಾಗೂ ರುಂಡ­ಗಳನ್ನು ಧರಿಸಿ­ರುತ್ತಾಳೆ.  ಇರಲಿ ಭಾರತದ ಶಕ್ತಿ­ದೇವತೆ­ಯರಲ್ಲಿ ಇವರಿಬ್ಬರಿಗೂ ಮಹತ್ವದ ಸ್ಥಾನ. ಕೆಲವೊಮ್ಮೆ ಹೀಗೆ ಒಬ್ಬರನ್ನು ಮತ್ತೊಬ್ಬರಲ್ಲಿ ಸಮೀಕರಿಸಿ ನೋಡುವುದು ಸಾಮಾನ್ಯವಾದ ವಿಚಾ­ರವೇ ಹೌದು. ಸದ್ಯದಲ್ಲಿ ಇವರನ್ನೆಲ್ಲಾ ಶೈವ­ಪಂಥದ ಹಿನ್ನೆಲೆಯ ಶಕ್ತಿ ದೇವತೆಗಳಾಗಿ ನೋಡ­ಲಾಗುತ್ತದೆ.

ನಮ್ಮ ನಾಡಿನ ಚರಿತ್ರೆ ಪುರಾಣಗಳಲ್ಲಿ ಹುದು­ಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿ.ಡಿ. ಕೊಸಾಂಬಿ, ರೊಮಿಲಾ ಥಾಪರ್, ದೇವಿಪ್ರಸಾದ್ ಚಟ್ಟೋ­ಪಾ­ಧ್ಯಾಯ, ವಾಶ್‌ ಎಡ್ವರ್ಡ್‌ ಹೇಲ್ ಮುಂತಾದ ವಿದ್ವಾಂಸರು ಅವುಗಳನ್ನು ಅರ್ಥ­ಮಾಡಿ­ಕೊಡುವ ವಿಧಾನ­ಗ­ಳನ್ನು ಕಂಡು­ಕೊಂಡಿ­ದ್ದಾರೆ. ಪುರಾಣಗಳ ಸಂಕೇತ­ಗಳನ್ನು ಅರ್ಥಮಾಡಿ­ಕೊಳ್ಳುತ್ತಾ ಸಮು­ದಾ­ಯ­ಗಳ ಅಳಿವು ಉಳಿವನ್ನು ಬಿಡಿಸಿ ನೋಡುವ ಪ್ರಯತ್ನ ಮಾಡುತ್ತಾ ಬಂದಿ-­ದ್ದಾರೆ. ವೇದಗಳು, ಮಹಾಭಾರತ, ರಾಮಾ­ಯಣ, ಪುರಾಣಗಳು ಇವೆಲ್ಲಾ ಸಮುದಾಯದ ನೆನಪುಗಳಾಗಿ ಉಳಿದು ಬಂದಿವೆ.

ವೇದಗಳ ಕಾಲಕ್ಕೆ ವೈದಿಕ ಹಿನ್ನೆಲೆಯ ಬುಡಕಟ್ಟುಗಳಲ್ಲದೆ ಹಲವಾರು ಇತರ ಬುಡ­ಕಟ್ಟು­­ಗಳ ಹೆಸರುಗಳೂ ವೇದ ಸಾಹಿತ್ಯದಲ್ಲಿ ಕಂಡು­ಬರುತ್ತವೆ. ಅವುಗಳಲ್ಲಿ ರಾಕ್ಷಸ, ಅಸುರ, ಪಾಣಿ, ನಿಷಾದ, ಕಿರಾತ, ಪಿಶಾಚ, ದಾನವ, ದೈತ್ಯ, ನಾಗ ಹೀಗೆ ದೀರ್ಘ­ವಾದ  ಪಟ್ಟಿಯೇ ನಮಗೆ ಸಿಗುತ್ತದೆ. ಇವರೆಲ್ಲಾ ದುಷ್ಟರೂ, ಕ್ರೂರಿ­ಗಳೂ, ಕುರೂಪಿಗಳೂ, ಶತ್ರು­ಗಳೂ ಆಗಿ ಚಿತ್ರಿತ­ರಾಗಿದ್ದಾರೆ. ಅದರಲ್ಲೂ ದೇವರು ಇವರನ್ನು ಸಂಹರಿಸಿ ಋಷಿಗಳು ಯಜ್ಞ, ಯಾಗಾದಿಗಳನ್ನು ಮಾಡಲು ರಕ್ಷಣೆ ನೀಡು­ತ್ತಾರೆ. ಆ ದೇವರು­ಗ­ಳನ್ನು ಒಲಿಸಿಕೊಳ್ಳುವುದು  ಅವರ ನಿತ್ಯ ಪ್ರಯತ್ನ­ವಾ­ಗಿರುತ್ತದೆ. ಹೇಲ್ ಎಂಬ ವಿದ್ವಾಂಸನ ಇತ್ತೀ­ಚಿನ ಸಂಶೋಧನೆಯಿಂದ ತಿಳಿಯುವುದೇನೆಂದರೆ ದೇವರು ಎಂಬುವರೂ ಸಹ ಶಕ್ತಿಶಾಲಿಗಳಾದ ಒಂದು ಬುಡಕಟ್ಟೇ ಆಗಿ­ರ­ಬೇಕು. ವೈದಿಕರೊಂದಿಗೆ ಹೊಂದಿಕೊಂಡ ಕೆಲವು ಬುಡ­ಕಟ್ಟುಗಳೆಂದರೆ ಗಂಧರ್ವ, ಕಿನ್ನರ, ಕಿಂ ಪುರುಷ, ವಸು, ಯಕ್ಷ, ರುದ್ರ, ಮಾರುತ ಇತ್ಯಾದಿ.

ಮೈಸೂರಿನ ಹಿನ್ನೆಲೆಯಲ್ಲಿ ಹೆಸರಿಸುವ ಮಹಿ­ಷಾಸುರ ಅಸುರ ಕುಲಕ್ಕೆ ಸೇರಿದವನಾಗಿರಬೇಕು. ಸುರ (ದೇವರು) ಅಲ್ಲದವರು ಎನ್ನುವ ಅರ್ಥವೂ ಅದಕ್ಕೆ ಬರುತ್ತದೆ. ಅಸುರ ಎಂಬ ಬುಡಕಟ್ಟು ಇಂದಿಗೂ ಜಾರ್ಖಂಡ್ ಹಾಗೂ ಮಧ್ಯ ಪ್ರದೇಶ­ದಲ್ಲಿ ಕಂಡುಬರುತ್ತದೆ. ಉಳಿದ ಯಾವುದೇ ದ್ರಾವಿಡ ಬುಡಕಟ್ಟುಗಳ ಹಾಗೆಯೇ ಗುಂಡನೆಯ ಮುಖಚರ್ಯೆ, ದಪ್ಪ ಮೂಗು, ಕಪ್ಪು ಮೈಬಣ್ಣ ಸಾಮಾನ್ಯವಾಗಿದೆ. ಇವರ ವಿಶೇಷವೆಂದರೆ ಕಬ್ಬಿಣ­­ವನ್ನು ಗಣಿಯಿಂದ ತೆಗೆದು ಕುಲುಮೆಯಲ್ಲಿ ಕರ­ಗಿ­ಸುವ ಸಾಂಪ್ರದಾಯಿಕ ಕಲೆಗಾರಿಕೆಯನ್ನು ಬಲ್ಲವರು.

ಅಶೋಕನ ಶಾಸನಗಳಲ್ಲಿ ಮೈಸೂರನ್ನು ಎರ್ಮೈ­ನಾಡು (ಎಮ್ಮೆ ನಾಡು) ಎಂದು ಕರೆದಿ­ದ್ದಾರೆ. ಈ ಪ್ರದೇಶದಲ್ಲಿ  ಎಮ್ಮೆಗಳು ಹೆಚ್ಚಾ­ಗಿದ್ದು ಹಾಗೆ ಕರೆಯುತ್ತಿದ್ದಿರಬಹುದು. ಎಮ್ಮೆ­ಗಳು ಅಲ್ಲಿನ ಜನರ ಬದುಕನ್ನು ಆವರಿಸಿ­ಕೊಂಡಿ­ರಬಹುದು. ಈ ಕುರುಹುಗಳು ನಮಗೀಗಲೂ ಸಿಗುತ್ತವೆ. ನೀಲಗಿರಿಯ ತೋಡರು ಎಮ್ಮೆಗಳನ್ನು ಸಾಕುವ ಬುಡಕಟ್ಟಾಗಿದ್ದರು. ಅವರು ಪೂಜಿಸುವ ಗುಡಿಯ ಮುಂಭಾಗದಲ್ಲಿ ಕೋಣನ ಕೊಂಬು­ಗ­ಳನ್ನು ಸಿಕ್ಕಿಸಿರುತ್ತಾರೆ. ಮಲೆನಾಡಿನ ಕೆಲವು ಕಡೆ­ಗ­ಳಲ್ಲಿ ಕೋಣಗಳನ್ನು ಕಟ್ಟಿ ಉಳುವ ಪದ್ಧತಿ ಈಗಲೂ ಉಳಿ­ದುಬಂದಿದೆ.

ಭಾರತದ ಬಹು ಭಾಗ­ಗಳಲ್ಲಿ ಎಮ್ಮೆ ಮತ್ತು ಕೋಣ ಸಾಕುವುದು ಸಾಮಾ­ನ್ಯ­ವಾಗಿದೆ. ಭಾರತದ ಕಾಡುಗಳಲ್ಲಿ ಕಾಡೆಮ್ಮೆ­­ಗಳೂ ಹೇರಳವಾಗಿವೆ. ಆದ್ದರಿಂದ ಸ್ಥಳೀ­ಯವಾದ ಬುಡಕಟ್ಟೊಂದನ್ನು ಕೋಣನ ಹೆಸರಿ­ನಿಂದ ಕರೆ­ದಿ­ದ್ದರೆ ಅಥವಾ ಸಾಂಕೇತಿಕವಾಗಿ ಸೂಚಿ­ಸಿ­ದ್ದರೆ ಅದು ಸಹಜವಾಗಿಯೇ ಇರುತ್ತದೆ. ಭಾರ­ತದ ಹಲವು ಕಡೆ ಶಿಲಾಯುಗದ ಚಿತ್ರಗಳಲ್ಲೂ ಕೋಣನ ಚಿತ್ರ­ಗಳನ್ನು ಬಿಡಿಸಲಾಗಿದೆ. ಕೋಣನ ಕಾರಣಕ್ಕೆ ಬುಡ­ಕಟ್ಟೊಂದನ್ನು ಅಥವಾ ಬುಡ­ಕಟ್ಟಿನ ಮುಖಂಡ­ನನ್ನು ಸಂಸ್ಕೃತದಲ್ಲಿ ಮಹಿಷಾ­ಸುರ ಎಂದಿರುವ ಸಾಧ್ಯತೆಯನ್ನು ತಳ್ಳಿಹಾಕ­ಲಾಗು­ವುದಿಲ್ಲ. ಅಂತಹ ಅಸುರನನ್ನು ಕೊಂದ ದೇವಿ­ಯನ್ನು ಹಲವು ಹೆಸ­ರು­ಗಳಲ್ಲಿ ಕರೆಯಲಾಗು­ತ್ತದೆ.

ದುರ್ಗಾ, ಕಾಳಿ,  ಮಾರಿ, ಅಂಬಾ ಪರಮೇ­ಶ್ವರಿ, ಹೀಗೆ ಇಂದಿಗೂ ಪೂಜೆಗೊಳ್ಳುತ್ತಿರುವ ಜಾಗ­ಗಳನ್ನು ಹುಡುಕುತ್ತಾ ಹೋದರೆ ಮೈಸೂ­ರನ್ನು ದಾಟಿ ಭಾರತದಾದ್ಯಂತ ಹರಡಿರುವುದು ಗೊತ್ತಾಗುತ್ತದೆ. ಅಸುರರು ಭಾರ­ತದಾದ್ಯಂತ ಹರಡಿದ ಜನರಾಗಿರಬೇಕು. ಅಸುರ, ದೈತ್ಯ, ರಾಕ್ಷಸ, ದಾನವ ಇವರೆಲ್ಲರೂ ಬೇರೆಬೇರೆ ಸಮು­ದಾಯಗಳೇ ಆಗಿದ್ದರೂ ಕಾಲಾನುಕ್ರಮದಲ್ಲಿ ಅವ­ರೆಲ್ಲರನ್ನೂ ಪ್ರತ್ಯೇಕವಾಗಿ ಗುರುತಿಸದೆ ಸೇರಿಸಿ ಹೇಳಲಾಗಿ ಅವರ ನಡುವೆ ಭೇದ ಕಾಣ­ದಾಗಿದೆ. ರಾವಣನು ರಾಕ್ಷಸರ ನಾಯಕ. ರಾಮಾ­ಯಣದ ವಾನರರು ಕಪಿಗಳಾಗಿ­ರದೆ ವನಗಳಲ್ಲಿ ವಾಸ ಮಾಡುವವರಾಗಿರಬೇಕು. ಮೂಲ ಭಾರತ ಮತ್ತು ರಾಮಾಯಣಗಳನ್ನು ಅಧ್ಯಯನ ಮಾಡು­ವಾ­ಗಲೂ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.

ಭಾರತದಲ್ಲಿ ಮಾತೃದೇವತೆಯ ಆರಾಧನೆ ಬಹು ಪ್ರಾಚೀನವಾದುದು. ಸಿಂಧೂ ನಾಗರಿಕತೆ­ಯಲ್ಲೇ ನಮಗೆ ಸಪ್ತಮಾತೃಕೆಯರ ಮಣ್ಣಿನ ಶಿಲ್ಪಗಳು ಸಿಗುತ್ತವೆ. ಹಾಗೂ ವೈದಿಕವಲ್ಲದ ಹಲವು ಬುಡಕಟ್ಟುಗಳು ಹಲವು ರೂಪದಲ್ಲಿ ಹೆಣ್ಣನ್ನು ಪೂಜಿಸುವುದು ಕಂಡುಬರುತ್ತದೆ. ಅದ­ರಲ್ಲೂ ಈಶಾನ್ಯ ಭಾಗದ ಜನ ವಿಶೇಷವಾಗಿ ಶಕ್ತಿ ದೇವತೆಯ ಪೂಜಕರು. ಶಾಕ್ತ ಪರಂಪರೆ ಶೈವ ಪರಂಪರೆಯೊಂದಿಗೆ ಬೆರೆತು ಪುರಾಣಗಳ ರಚನೆ­ಯಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ಶಾಕ್ತ ಪರಂ­ಪರೆ ತನ್ನೊಳಗೆ ತಂತ್ರದ ವಿಧಿವಿಧಾನಗಳನ್ನು ಬೆಸೆ­ದುಕೊಂಡು ಅದಕ್ಕೆ ಮತ್ತಷ್ಟು ಮನ್ನಣೆ, ರೋಚ­ಕತೆ ಸಿಕ್ಕಿರಬಹುದು.

ಶಾಕ್ತ ಪರಂಪರೆ ಶೈವ, ವೈಷ್ಣವ ಮಾತ್ರವಲ್ಲದೆ, ಬೌದ್ಧ, ಜೈನ ಪಂಥ­ಗ­ಳನ್ನೂ ಒಳಹೊಕ್ಕಿತು. ವಜ್ರಾಯನ ಬೌದ್ಧ­ಪಂಥದ ವಿಶೇಷತೆಯೇ ಅದರಲ್ಲಿ ಕಾಣಿಸಿಕೊಂಡ ಶಕ್ತಿ ದೇವತೆಯರು. ಹಾಗಾಗಿ ಕಾಳಿ, ಸರಸ್ವತಿ, ತಾರಾ­ಭಗವತಿ ಇವು ಬೌದ್ಧ ಹಿನ್ನೆ­ಲೆಯಲ್ಲೂ ಪ್ರತಿ­ಧ್ವನಿ­ಸುತ್ತವೆ. ಬೌದ್ಧ ಪಂಥದ ಶಾಖೆಗಳು ಶೈವ­ರೊಳಗೆ ಸೇರಿಹೋದಂತೆ ಅದರ ಮೂಲ ಕುರು­ಹು­ಗಳನ್ನು ಕಳೆದು­ಕೊಂಡಿವೆ. ಈ ವಿವರ­ಣೆ­ಗಳ ಹರವು ಸುಮಾರು ಮೂರು ಸಾವಿರ ವರ್ಷ­ಗ­ಳದ್ದು. ನಮ್ಮ ಕುತೂ­ಹಲ ಇರುವುದು ಈ ಅಸು­ರ­ರನ್ನು ಕೊಂದ ಕಥೆಗಳನ್ನು ಪುರಾಣಗಳಲ್ಲಿ ಮೇಲಿಂದ ಮೇಲೆ ಏಕೆ ಹೇಳಲಾಗಿದೆ ಎಂಬುದರತ್ತ.

ಸುಲಭ­ವಾದ ವಿವರಣೆ ಎಂದರೆ, ಶಕ್ತಿ ದೇವತೆಗಳನ್ನು ಆರಾಧಿಸುವ ಸಮುದಾಯಗಳು ಅಸುರರ ಸಂಹಾರ ಮಾಡಿವೆ. ಅದು ನಿರಂತರವಾಗಿ ನಡೆ­ದಿತ್ತೇ ಅಥವಾ ಎಲ್ಲೋ ನಡೆದ ಕೆಲವು ಘಟನೆ­ಗಳು ಉತ್ಪ್ರೇಕ್ಷಿತವಾಗಿವೆಯೋ ಎಂಬುದಕ್ಕೆ  ಅಧ್ಯ­ಯನದ ಅಗತ್ಯವಿದೆ. ಯಾವುದೇ ಊರಿನ ದೇವಿ­ಯನ್ನು ಆ ಊರಿನ ಸಂಕೇತವಾಗಿ ಸಂಬೋಧಿ­ಸು­ತ್ತಿದ್ದರು ಎಂಬುದನ್ನು ಒಂದು ಸರಳ ಉದಾಹ­ರಣೆಯ ಮೂಲಕ ವಿವರಿಸಬಹುದು. ಪಿರಿಯಾ­ಪಟ್ಟಣದ ಕಾಳಗವನ್ನು ವಿವರಿಸುವ ಜನ­ಪದ ಕಾವ್ಯದಲ್ಲಿ ಪಿರಿಯಾಪಟ್ಟಣದಮ್ಮ ಹಾಗೂ ಚಾಮುಂಡಿಯ ನಡುವೆ ನಡೆಯುವ ಕಾಳಗ­ವೆಂದು ವರ್ಣಿಸುವ ಕ್ರಮವು ಪುರಾಣ ಶೈಲಿಯ­ದೆಂದು ತಿಳಿಯುತ್ತದೆ.  ಇವು ರಾಜರು ನಡೆಸುವ ಹೋರಾಟಗಳಾಗದೆ ಆ ಊರ ದೇವತೆಗಳು ನಡೆಸುವ ಹೋರಾಟವೆಂದು ಹಾಡಲಾಗುತ್ತದೆ.

ದುರ್ಗೆಯನ್ನು ಆರಾಧಿಸುವ ಜನರು ಕೋಣ­ನನ್ನು ಸಾಕುತ್ತಿದ್ದ ಇಲ್ಲವೇ ಕೋಣನನ್ನೇ ಸಂಕೇತ­ವಾಗಿ ಹೊಂದಿದ್ದ ಬುಡಕಟ್ಟು ಜನರನ್ನು ಹತ್ಯೆಗೈದ ಈ ಕಥೆ ಇಂದಿಗೂ ಪೂಜೆಗೊಳ್ಳುತ್ತಿದೆ. ಆ ಬುಡ­ಕಟ್ಟಿನ ಜನ ಅವರೇ ಆಗಿದ್ದರೂ ಆಶ್ಚರ್ಯವಿಲ್ಲ. ಭಾರತದ ದೇಗುಲಗಳ ಶಿಲ್ಪಗಳು ಈ ಕಥೆಗೆ ಮತ್ತಷ್ಟು ಚಾರಿತ್ರಿಕ ದಾಖಲೆಗಳಾಗಿ ಒದಗುತ್ತವೆ. ನನ್ನ ಅಧ್ಯಯನಕ್ಕೆ ಸಿಕ್ಕ ಮಾಹಿತಿಯಂತೆ ಕರ್ನಾ­ಟಕದಲ್ಲಿ ದೇಗುಲಶಿಲ್ಪಗಳ ಆರಂಭವನ್ನು ಬಾದಾಮಿ ಗುಹಾಲಯಗಳಲ್ಲಿ ಗುರುತಿಸಲಾ­ಗು­ತ್ತದೆ. ಇಲ್ಲಿ ಮಹಿಷಾಸುರ ಮರ್ದಿನಿಯ ಶಿಲ್ಪ­ವಿದೆ. 

ಕೋಣನನ್ನು ಈಟಿಯಿಂದ ತಿವಿಯುತ್ತಿರುವ ಈ ಶಿಲ್ಪದಲ್ಲಿ ಮಹಿಷಾಸುರ ಮರ್ದಿನಿಯ ದೇಹದ ಮೈಮಾಟ, ಅವಳು ಬೇಟೆಯನ್ನು ಹಿಡಿದು ಸಂಭ್ರಮಿಸುವಂತೆ ಮೂಡಿಬಂದಿದೆ.  ಕೋಣನ ಬಾಲವನ್ನು ಎತ್ತಿಹಿಡಿದು ಅದರ ಕೊರಳಿಗೆ ಭರ್ಜಿಯನ್ನು ನಾಟಿ ನಿಂತಿರುವುದು ಬಹಳ ನೈಜವಾಗಿದೆ. ಏಳನೇ ಶತಮಾನಕ್ಕೆ ಸೇರಿದ ಪಾಲರ ಶಿಲ್ಪವನ್ನು ನೋಡಿದರೆ ಕೋಣನ ಮುಖ­ವುಳ್ಳ ವ್ಯಕ್ತಿ ನಿಂತು ಹೋರಾಡುತ್ತಿರುವಂತೆ ಕೆತ್ತ­ಲಾ­ಗಿದೆ. ಅದೇ ಸಮಕಾಲೀನವಾದ ಪಲ್ಲವರ ಕಾಲದ ಮಹಾಬಲಿಪುರಂನ ಶಿಲ್ಪದಲ್ಲಿ ಛೇದ­ವಾದ ಕೋಣನ ತಲೆಯಿಂದ ರಾಕ್ಷಸನ ಮುಖ ಹೊರಬಂದು ಹೋರಾಡುವಂತೆ ಕಾಣುತ್ತದೆ. ಇಲ್ಲಿ ಪುರಾಣದ ಕಥೆ ಶಿಲ್ಪಿಯ ಕಲ್ಪನೆಗೆ ಸಿಕ್ಕು ರೋಚಕತೆ ಪಡೆದುಕೊಂಡಿದೆ.

ರಕ್ಕಸನನ್ನು ಕೊಲ್ಲುವ ದುರ್ಗಿಯನ್ನಾಗಲೀ ಕಾಳಿಯನ್ನಾಗಲೀ ಅದೆಷ್ಟು ಸಮರ್ಥವಾಗಿ ತೋರಿಸಿದರೂ ಶಿಲ್ಪಿಗೆ ತೃಪ್ತಿ ಇಲ್ಲವೇನೋ ಎನ್ನಿಸುತ್ತದೆ. ಅದಕ್ಕಾಗಿ ನಾಲ್ಕು, ಆರು, ಎಂಟು ಅಷ್ಟೇ ಅಲ್ಲ ಹನ್ನೆರಡು ಕೈ­ಗಳನ್ನೂ ನೀಡಲಾಗಿದೆ. ಅಂದರೆ ಬಹು ಭುಜಗ­ಳನ್ನು ಹೊಂದುವಷ್ಟು ಸಮರ್ಥಳು ಅವಳೆಂ­ಬುದೇ ಅವರ ಶಿಲ್ಪದ ಮೂಲಕ ಹೇಳಿರುವ ಸಂದೇಶ. ಕೋಣನ ಶಿಲ್ಪದಲ್ಲೂ ಹಲವು ಮಾರ್ಪಾ­­­ಡುಗಳು ಬರತೊಡಗಿದವು. ಕೋಣ­ನನ್ನು ತೋರಿಸುವ ಬದಲು ಕೋಣನ ದೇಹ ಹಾಗೂ ಮಾನವ ತಲೆಯ ಅಸುರ  ಅಥವಾ ಮಾನವ ದೇಹದ ಹಾಗೂ ಕೋಣನ ತಲೆಯ ಅಸುರ– ಹೀಗೆ ಶಿಲ್ಪಿಯು ಕಾಲಕಾಲಕ್ಕೆ ರೌದ್ರಾವ­ತಾರವನ್ನು ಸೃಷ್ಟಿಸುವಲ್ಲಿ ತನ್ನ ಸೃಜನಶೀಲತೆ­ಯನ್ನು ಮೆರೆಯತೊಡಗಿದ. ಆರಂಭದ ಶಿಲ್ಪದಲ್ಲಿ ಇಲ್ಲದ ಅಸುರನ ಕಲ್ಪನೆ ನಂತರ ಬೆಳೆಯುತ್ತಾ ಹೋಗಿದೆ. ಬಂಗಾಳದ ವೈವಿಧ್ಯಮಯವಾದ ಕಾಳಿಯ ಮಣ್ಣಿನ ಮೂರ್ತಿಗಳನ್ನು ನೋಡಿದರೆ ಇದು ಬಹುಶಃ ಇನ್ನೂ ಮುಂದುವರಿದಿದೆ ಎನ್ನಿ­ಸು­ತ್ತದೆ. 

ಕೋಣನ ಬಲಿ ಈ ಹಬ್ಬದ ಹಿಂದಿನ ಮತ್ತೊಂದು ಪ್ರಮುಖ ಅಂಶ. ಇವತ್ತು ಕೋಣನ ಬಲಿ ನಿಷೇಧಗೊಂಡಿದೆ ಎಂಬುದು ನಿಜವೇ ಆದರೂ ಅದರ ಹಿಂದಿನ ಕಥೆ ಹಲವು ಪ್ರಶ್ನೆಗಳಿಗೆ ದಾರಿಮಾಡಿಕೊಡುತ್ತದೆ. ಮಾರಮ್ಮನಿಗೆ ಮುಖ್ಯ­ವಾಗಿ ಕೋಣನ ಬಲಿಯನ್ನು ನೀಡಲಾಗುತ್ತದೆ. ಒಂದು ಕಾಲಕ್ಕೆ ಕೋಣನ ಬಲಿಗೆ ಹೆಸರು ವಾಸಿ­ಯಾ­ದದ್ದು ಶಿರಸಿಯ ಮಾರಿಕಾಂಬಾ ದೇವ­ಸ್ಥಾನ. ಭಾರತದಲ್ಲಿ ಮಾತ್ರವಲ್ಲ ನೇಪಾಳದಲ್ಲೂ ಈ ಆಚರಣೆ ಹೆಚ್ಚಾಗಿಯೇ ಕಂಡುಬರುತ್ತದೆ. ಹಳ್ಳಿಹಳ್ಳಿಗಳಲ್ಲಿ ಆಚರಿಸುವ ಈ ಹಬ್ಬದ ಹಿಂದೆ ಅಸಾದಿಗಳು ಹಾಡುವ ಕಥೆ ಎಲ್ಲಾ ಕಡೆಯೂ ಕೇಳಿ ಬರುತ್ತದೆ.

ಮಾರಮ್ಮ ಬ್ರಾಹ್ಮಣ ಸಮು­ದಾಯದ ಸುಂದರ ಕನ್ಯೆ. ಅವಳನ್ನು ಬಯಸಿ ತನ್ನ ಹುಟ್ಟಿನ ಮೂಲವನ್ನು ಮುಚ್ಚಿಟ್ಟ ತಳಸಮುದಾ­ಯದ ಹುಡುಗ, ಸುಂದರವಾದ ಸಂಸಾರ ನಡೆ­ಸು­ತ್ತಿದ್ದ. ಮಗನನ್ನು ನೋಡಲು ಬಂದ ತಾಯಿ ಬಾಯಿತಪ್ಪಿ ಆಡಿದ ಮಾತಿನಿಂದ ಅವನ ಕುಲ­ಮೂಲ ತಿಳಿದು ಮಾರಮ್ಮ ಅವನನ್ನು ಕೊಲ್ಲಲು ಹೋದಾಗ ಅವನು ಕೋಣನ ದೇಹವನ್ನು ಹೊಕ್ಕು­ಬಿಡುತ್ತಾನೆ. ವ್ಯಗ್ರಳಾದ ಮಾರಮ್ಮ ಕೋಣ­ವನ್ನು ಬಲಿತೆಗೆದುಕೊಳ್ಳುತ್ತಾಳೆ. ಆ ಬಲಿ­ಯನ್ನು ಕೊಟ್ಟನಂತರ ಕೋಣನ ಕಾಲನ್ನು ಅದರ ಬಾಯಿಗೆ ಸಿಕ್ಕಿಸಿ ಅದರ ತಲೆಯ ಮೇಲೆ ಅದರ ದೇಹದಿಂದ ತೆಗೆದ ತುಪ್ಪದಲ್ಲಿ ದೀಪಹಚ್ಚ­ಲಾಗು­ತ್ತದೆ. ಇದು ವರ್ಣಸಂಕರಕ್ಕೆ ನೀಡುವ ಎಚ್ಚರ­ವಾ­ಗಿದೆ. ಅವಳಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬ ತನ್ನ  ಕಥೆ­ಯನ್ನು ಹೇಳಿಕೊಂಡು ಬದುಕಲು ಬಿಡುತ್ತಾಳೆ. ಮುಂದೆ ಅವನ ವಂಶ ಬೆಳೆದು ಅವರು ಅಸಾದಿ­ಗ­ಳಾಗುತ್ತಾರೆ.

ಇಂದಿಗೂ ಅಸಾದಿಗಳು ಮಾರಿಕಥೆ­ಯನ್ನು ಹಾಡುತ್ತಾರೆ. ಇದೇ ಕಥೆ ಕರಿಯಮ್ಮ, ಮಸಣಿಯಮ್ಮ ಹೀಗೆ ಹಲವು ದೇವತೆಗಳ ಹೆಸ­ರಿನಲ್ಲಿ ಕೇಳಿಬರುತ್ತದೆ. ತಮ್ಮ ಅವಸಾನದ ಕಥೆ­ಯನ್ನು ತಾವೇ ಹಾಡುವ ದುರ್ದೈವ. ಬಹುಶಃ ಭಾರತದ ಹಬ್ಬಗಳಲ್ಲಿ ದುಷ್ಟರ ಹರಣವೆಂದಾಗ ಅದೊಂದು ಜನಾಂಗದ ಹರ­ಣವೇ ಇರಬಹುದು. ಬಡತನಕ್ಕೆ ಕುಸಿದ ಬುಡ­ಕಟ್ಟಿನ ಜನರನ್ನು ಬ್ರಿಟಿ­ಷರು ‘ಕ್ರಿಮಿನಲ್ ಟ್ರೈಬ್’ ಎಂದು ಕರೆದಂತೆ, ತಮ್ಮ ಸಂಸ್ಕೃತಿಯ ಆಚೆಗೆ ಉಳಿದ ಸಮುದಾ­ಯ­ಗಳನ್ನು ದುಷ್ಟರೆಂದು ಹೀಗ­ಳೆ­­ಯುತ್ತಾ ಅವರ ಬಲಿದಾನವನ್ನು ಸಂಭ್ರಮಿಸುವ ಆಚರಣೆಗಳೂ ಆಗ­ಬಹುದು. ನಮ್ಮ ಮೂಲ ನಮಗೆ ತಿಳಿಯದಿ­ದ್ದರೆ ಎಷ್ಟು ಚೆನ್ನಾಗಿತ್ತು. ಪುರಾ­ಣ­ದೊಳಗೆ ಸೇರಿದ ಚರಿತ್ರೆಯ ಹೂರಣ ಸಿಹಿ­ಯಾಗಿ­ರುತ್ತಿತ್ತು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT