ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಕಮರಿಯಲ್ಲಿ ಬುರುಡೆ ವಿಮಾನ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಏಳು ಸಾವಿರ ವರ್ಷಗಳ ಹಿಂದೆ ಭಾರತೀಯರ ಎಂಜಿನಿಯರಿಂಗ್ ಕೌಶಲ ಭಾರೀ ಮುಂದಿತ್ತಂತೆ. ‘ಶಕುನ ವಿಮಾನ’, ‘ರುಕ್ಮ ವಿಮಾನ’, ‘ಸುಂದರ ವಿಮಾನ’ ಹೀಗೆ ನಾನಾ ಬಗೆಯ ವಿಮಾನಗಳು ಇದ್ದು­ವಂತೆ. ಈಗಿನ ವಿಮಾನಗಳಂತೆ ಮುಂದಿಕ್ಕಿ­ನಲ್ಲಿ ಮಾತ್ರ ಹಾರುವ ಬದಲು ಅವು ಹಿಂದಕ್ಕೂ ಚಲಿಸುತ್ತಿದ್ದುವಂತೆ. ಈ ವಿಮಾನಗಳು ಖಂಡಾಂತರ ಅಷ್ಟೇ ಅಲ್ಲ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೂ ಹೋಗಿ ಬರುತ್ತಿದ್ದುವಂತೆ. ಭಾರದ್ವಾಜ ಮಹರ್ಷಿ ಎಂಬಾತ ಇದನ್ನೆಲ್ಲ ಸಂಸ್ಕೃತ ಶ್ಲೋಕಗಳಲ್ಲಿ ವಿವರಿಸಿದ್ದಾನಂತೆ. ಅದಂತೆ ಇದಂತೆ.

ಹೀಗೆಂದು ಮುಂಬೈಯಲ್ಲಿ ಹತ್ತಾರು ಸಾವಿರ ವಿಜ್ಞಾನಿಗಳ ಸಮಾವೇಶದಲ್ಲಿ ನಿವೃತ್ತ ಪೈಲಟ್ ಮಹಾಶಯನೊಬ್ಬ ಚಿತ್ರ ಸಮೇತ ವಿವರಣೆ ನೀಡಿದ್ದು ಭಾರೀ ನಗೆಪಾಟಲಿಗೆ ಗುರಿಯಾಗಿದೆ. ಭಾರತದ ವೈಜ್ಞಾನಿಕ ಸಾಧನೆಗಳನ್ನು ಬಿಚ್ಚಿಡ­ಬೇಕಾದ ಗಂಭೀರ ಸಮ್ಮೇಳನದಲ್ಲಿ ಈ ಬಗೆಯ ಕಪೋಲ ಕಲ್ಪಿತ ಸಂಗತಿಗಳ ಬಗ್ಗೆ ಉಪನ್ಯಾಸಕ್ಕೆ ಅವಕಾಶ ಕೊಟ್ಟಿದ್ದು ಇಡೀ ವಿಜ್ಞಾನ ಸಮೂಹಕ್ಕೇ ಅವಹೇಳನಕಾರಿ ಪ್ರಸಂಗ ಎಂದು ಟೀಕೆಗಳು ಬಂದಿವೆ.

ಪ್ರತಿ ಜನವರಿ ೩ನೇ ತಾರೀಖಿನಂದು ಪ್ರಧಾನಮಂತ್ರಿಯ ಸಮಕ್ಷಮದಲ್ಲಿ ಉದ್ಘಾಟನೆ­ಯಾ­ಗುವ ಐದು ದಿನಗಳ ‘ಭಾರತೀಯ ಸೈನ್ಸ್ ಕಾಂಗ್ರೆಸ್’ ಹೆಸರಿನ ಬೃಹತ್ ವಿಜ್ಞಾನ ಸಮ್ಮೇಳ­ನಕ್ಕೆ ೧೦೧ ವರ್ಷಗಳ ಇತಿಹಾಸವಿದೆ. ದೇಶದ ಎಲ್ಲ ಭಾಗಗಳಿಂದ ವಿಜ್ಞಾನಿಗಳು ಇಲ್ಲಿಗೆ ಬಂದು ತಂತಮ್ಮ ಸಂಶೋಧನೆಗಳ ಕುರಿತು ಹೇಳುತ್ತಾರೆ. ಆರೇಳು ವಿದೇಶೀ ನೊಬೆಲ್ ವಿಜೇತರನ್ನು ಕರೆಸಿ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾ­ಗುತ್ತದೆ. ರಾಷ್ಟ್ರದ ಇದುವರೆಗಿನ ಸಾಧನೆಗಳನ್ನು ಪ್ರದರ್ಶಿಸಿ ಮುಂದಿನ ವರ್ಷಗಳ ಗೊತ್ತುಗುರಿಗಳ ನೀಲನಕ್ಷೆಯನ್ನು ತೋರಿಸುವ ಈ ಘನಗಂಭೀರ ಮೇಳ ಹಿಂದೆಂದೂ ಇಂಥ ಹೀನಾಯ ಲೇವಡಿಗೆ ಗುರಿಯಾಗಿರಲಿಲ್ಲ.

ಸಾಮಾನ್ಯವಾಗಿ ಇಲ್ಲಿ ಮಂಡಿಸಲಾಗುವ ಪ್ರಬಂಧಗಳ ವಿಷಯಗಳನ್ನು ಆರೆಂಟು ತಿಂಗಳ ಹಿಂದೆಯೇ ನಿರ್ಧರಿಸಲಾಗುತ್ತದೆ. ಆದರೆ ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ‘ಸಂಸ್ಕೃತದಲ್ಲಿ ಪುರಾತನ ವಿಜ್ಞಾನ’ ಎಂಬ ವಿಷಯವನ್ನೂ ಸೇರಿಸಲಾಯಿತು. ನಾಗಪುರ ಸಮೀಪದ ರಾಮ್‌ಟೆಕ್‌ನಲ್ಲಿರುವ ‘ಕವಿಕುಲ­ಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ದ ವತಿಯಿಂದ ಕೆಲವು ಪ್ರಬಂಧಗಳನ್ನು ಮಂಡಿಸಲು ನಿರ್ಧರಿಸಲಾಯಿತು. ಮುಂಬೈ ವಿಶ್ವವಿದ್ಯಾಲ­ಯದ ಸಂಸ್ಕೃತ ವಿಭಾಗವೂ ಸಾಥ್ ನೀಡಿತು. ಹಿಂದೆಂದೂ ಪುರಾತನ ಭಾರತದ ವಿಜ್ಞಾನ ಸಾಧನೆ ಕುರಿತು ಈ ವೇದಿಕೆಯಲ್ಲಿ ಚರ್ಚೆ ನಡೆದಿಲ್ಲವಾದ್ದರಿಂದ ವಿಜ್ಞಾನಿಗಳೂ ಇಂಥ­ದ್ದೊಂದು ಗೋಷ್ಠಿಗೆ ಆಕ್ಷೇಪಿಸಲಿಲ್ಲ. ಆದರೆ ಮಾಜಿ ಪೈಲಟ್ ಹಾಗೂ ವಿಮಾನ ಚಾಲನಾ ತರಬೇತುದಾರ ಕ್ಯಾಪ್ಟನ್ ಆನಂದ ಬೋಡಾಸ್ ತಮ್ಮ ಪ್ರಬಂಧವನ್ನು ಮಂಡಿಸಿದಾಗ ಅನೇಕರಿಗೆ ಕಸಿವಿಸಿಯಾಯಿತು. ಬೋಡಾಸ್ ಪ್ರಬಂಧದ ಮುಖ್ಯಾಂಶ ಹೀಗಿತ್ತು:

‘ಕ್ರಿಸ್ತಪೂರ್ವ ೭೦೦೦ದ ಸುಮಾರಿಗೆ ಮಹರ್ಷಿ ಭಾರದ್ವಾಜರು ವಿಮಾನ ಉಡ್ಡಯನ ಕುರಿತ ೯೭ ಗ್ರಂಥಗಳನ್ನು ಆಧರಿಸಿ ‘ಬೃಹತ್ ವೈಮಾನಿಕ ಶಾಸ್ತ್ರ’ ಎಂಬ ಕೃತಿಯನ್ನು ಬರೆದರು. ಆಗಿನ ಕಾಲದಲ್ಲಿ ೬೦ ಚದರ ಅಡಿಗಳಷ್ಟು ವಿಸ್ತಾ­ರದ ೨೦೦ ಅಡಿ ಎತ್ತರದ ಜಂಬೋ ವಿಮಾನ­ಗಳೂ ಇದ್ದವು; ಅಂಥವಕ್ಕೆ ಸಣ್ಣ ಸಣ್ಣ ೪೦ ಎಂಜಿನ್‌ಗಳನ್ನು ಜೋಡಿಸಲಾಗುತ್ತಿತ್ತು. ಎತ್ತ ಬೇಕಾದತ್ತ ತಿರುಗಬಲ್ಲ ಹೊಗೆ ಕೊಳವೆಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸುತ್ತಿದ್ದರು. ಸಮುದ್ರದ ಆಳದಲ್ಲಿ ಬೆಳೆಯುವ ಸಸ್ಯಗಳ ನಾರಿನ ಉಡುಪುಗಳನ್ನು ಪೈಲಟ್‌ಗಳು ತೊಡು­ತ್ತಿದ್ದರು; ಅಂದಿನ ದಿನಗಳಲ್ಲಿ ‘ರೂಪಾರ್ಕನ್ ರಹಸ್ಯ’ ಎಂಬ ರಡಾರ್ ಕೂಡ ಬಳಕೆಯಲ್ಲಿತ್ತು. ಅಂಥ ವ್ಯೋಮಯಾತ್ರೆಯ ಯಂತ್ರಗಳನ್ನು ತಯಾರಿಸುವ ಬಗ್ಗೆ ಭಾರದ್ವಾಜರು ೫೦೦ ಸೂತ್ರಗಳನ್ನು ಬರೆದಿಟ್ಟಿದ್ದಾರೆ. ಅವುಗಳನ್ನು ಆಧರಿಸಿ ಇಂದಿನ ಯುವ ವಿಜ್ಞಾನಿಗಳು ಬೇರೆ ಬೇರೆ ವಿಧದ ಮಿಶ್ರಲೋಹಗಳನ್ನು ತಯಾರಿಸಿ ನೋಡಬಹುದು...’

ತಯಾರಿಸಿ ನೋಡಿರೆಂದು ಕರೆ ಕೊಡುವ ಬದಲು ವೇದಕಾಲದ ಈ ತಥಾಕಥಿತ ಗ್ರಂಥದ ಸತ್ಯಾಸತ್ಯತೆ ಏನೆಂದು ಈ ಪೈಲಟ್ ಮಹಾಶಯ ತುಸು ಪರಿಶೀಲಿಸಿದ್ದರೆ ಸಾಕಿತ್ತು. ವೇದ­ಕಾಲದ್ದೆಂದು ಹೇಳಲಾದ ‘ವೈಮಾನಿಕ ಶಾಸ್ತ್ರ’ ಗ್ರಂಥವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಏರೊನಾಟಿಕಲ್ ಎಂಜಿನಿಯರ್‌ಗಳು ೧೯೭೪ರಲ್ಲೇ ವಿಶ್ಲೇಷಣೆ ಮಾಡಿದ್ದರು. ‘ಅದು ವೇದಕಾಲದ್ದೂ ಅಲ್ಲ, ಅದರಲ್ಲಿ ವಿವರಿಸಲಾದ ಸಂಗತಿಗಳಲ್ಲಿ ವೈಜ್ಞಾನಿಕ ತಥ್ಯವೂ ಇಲ್ಲ’ ಎಂಬ ತೀರ್ಮಾನಕ್ಕೆ ಬಂದಿದ್ದರು. ‘ಶಕುನ ವಿಮಾನ’­ದಲ್ಲಿ ಇಂಧನವಾಗಿ ಹುರುಳಿ ಕಾಳು, ಪಾದರಸ, ಪ್ರಾಣಕ್ಷಾರ (ಆಮೋನಿಯಂ ಕ್ಲೋರೈಡ್), ಅಭ್ರಕ ಮತ್ತು ಬೆಳ್ಳಿಯ ವಿವರಣೆ­ಗಳಿವೆ. ‘ಸುಂದರ ವಿಮಾನ’ದಲ್ಲಿ ಗೋಮೂತ್ರ, ಆನೆಯ ಮೂತ್ರಗಳಂಥ ದ್ರವ್ಯಗಳಿಂದ ವಿದ್ಯುತ್ ಉತ್ಪಾ­ದಿಸಿ ಗಂಟೆಗೆ ೧೨,೮೦೦ ಮೈಲು ವೇಗದಲ್ಲಿ ವಿಮಾನವನ್ನು ಹಾರಿಸಬಹುದೆಂಬ ವಿವರಣೆ­ಗಳಿವೆ. ಆನೆಕಲ್ಲಿನ ಸುಬ್ಬರಾಯ ಶಾಸ್ತ್ರಿ ಎಂಬವರು ಈ ಸಂಸ್ಕೃತ ಶ್ಲೋಕಗಳನ್ನು ಬರೆದು ಎಂಜಿನಿಯರಿಂಗ್ ಕಾಲೇಜಿನ ಎಲ್ಲಪ್ಪ ಎಂಬ ಚಿತ್ರಕಾರನೊಬ್ಬನ ಸಹಾಯದಿಂದ ಚಿತ್ರಗಳನ್ನು ಬರೆಸಿದ್ದರೆಂದೂ ಇಂಥ ವಿಮಾನಗಳನ್ನು ನಿರ್ಮಿಸಿದ್ದೇ ಆದರೆ ಅವು ನೆಲಬಿಟ್ಟು ಏಳಲಾರವೆಂದೂ ಹೇಳಿದ್ದರು.

ಭಾರತದ ಗತ ಇತಿಹಾಸದಲ್ಲಿ ನಾವು ಮರೆಯಬಾರದ ಅವೆಷ್ಟೊ ಸಂಗತಿಗಳಿವೆ ನಿಜ. ಮುಂಬೈ ಸಮ್ಮೇಳನದ ಎರಡನೆಯ ದಿನದ ಈ ನಾಲ್ಕು ತಾಸುಗಳ ಸಂಸ್ಕೃತ ಅಧಿವೇಶನದಲ್ಲಿ ಮಂಡಿಸಲಾದ ಇತರ ಪ್ರಬಂಧಗಳಲ್ಲಿ ಅಂಥ ಅನೇಕ ವಿಚಾರಗಳಿದ್ದವು. ೨೯೦೦ ವರ್ಷಗಳ ಹಿಂದೆ ರಚಿಸಲಾಗಿದ್ದೆಂದು ಹೇಳಲಾದ ಬೌಧಾ­ಯನ ಶುಲ್ಭ ಸೂತ್ರಗಳ ಮುಖ್ಯಾಂಶಗಳನ್ನು ಎತ್ತಿ ಹೇಳಲಾಯಿತು. ಪೈಥಾಗೋರಸ್‌ಗಿಂತ ಮುನ್ನೂರು ವರ್ಷಗಳ ಮೊದಲೇ ಲಂಬಕೋನ ತ್ರಿಭುಜದ ಜ್ಯಾಮಿತೀಯ ನಿಯಮವನ್ನು ವರ್ಣಿಸಲಾಗಿತ್ತೆಂದೂ ಪಾಯ್ ಮೌಲ್ಯವನ್ನೂ ನಿರ್ಧರಿಸಲಾಗಿತ್ತೆಂದೂ ಗಣಿತ, ಶಸ್ತ್ರಚಿಕಿತ್ಸೆ ಮತ್ತು ಖಗೋಲಶಾಸ್ತ್ರ ಗಳಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅನನ್ಯವಾಗಿತ್ತೆಂದೂ ಸಂಸ್ಕೃತ ವಿದ್ವಾಂಸರು ವಿವರಣೆ ನೀಡಿದರು.

ರಾಷ್ಟ್ರದ ಅಭಿಮಾನವನ್ನು ಎತ್ತರಕ್ಕೇರಿ­ಸುವಲ್ಲಿ ಇವೆಲ್ಲ ಮಹತ್ವದ ಅಂಶಗಳೇನೊ ಹೌದು. ಆದರೆ ಹಿಂದಿನದನ್ನೆಲ್ಲ ಹೊಗಳುವ ಉತ್ಸಾಹದಲ್ಲಿ ವೈಜ್ಞಾನಿಕ ನಿಖರತೆಗೆ ಸಿಗದಂಥ ಸಂಗತಿಗಳಿಗೆಲ್ಲ ಒತ್ತು ಕೊಡುತ್ತ ಹೋದರೆ ಇತಿಹಾಸವೇ ನಗೆಪಾಟಲಿಗೀಡಾಗುತ್ತದೆ. ಕಳೆದ ವರ್ಷ ಆಗಿನ್ನೂ ಪ್ರಧಾನಿಯಾಗಿಲ್ಲದ ನರೇಂದ್ರ ಮೋದಿಯವರು ಇಂಥದ್ದೇ ಪರಿಸ್ಥಿತಿಯನ್ನು ಸೃಷ್ಟಿ­ಸಿದ್ದರು. ಪುರಾತನ ಭಾರತೀಯರಿಗೆ ಪ್ಲಾಸ್ಟಿಕ್ ಸರ್ಜರಿ ಗೊತ್ತಿದ್ದರಿಂದಲೇ ಮನುಷ್ಯ ದೇಹಕ್ಕೆ ಆನೆಯ ತಲೆಯನ್ನು ಕೂರಿಸಿದ ಗಣೇಶನ ಪರಿ­ಕಲ್ಪನೆ ಸಾಧ್ಯವಾಯಿತು ಎಂದಿದ್ದರು. ಕೌರವರ ಮತ್ತು ಕರ್ಣನ ಸೃಷ್ಟಿಯಲ್ಲಿ ಸ್ಟೆಮ್ ಸೆಲ್ ಸರ್ಜರಿಯ ಜ್ಞಾನವಿತ್ತು ಎಂತಲೂ ಹೇಳಿದ್ದರು. ಮುಂಬೈಯ ಈ ೧೦೨ನೇ ಸೈನ್ಸ್ ಕಾಂಗ್ರೆಸ್‌ನ  ಉದ್ಘಾಟನೆಯಲ್ಲಿ ಸದ್ಯ ಅವರು ಇಂಥವನ್ನೆಲ್ಲ ಮತ್ತೆ ಮಾತಾಡಲಿಲ್ಲ. ವಿಜ್ಞಾನ, -ತಂತ್ರಜ್ಞಾನ­ವನ್ನು ಬಡವರ ಹಾಗೂ ಹಿಂದುಳಿದವರ ಸಮಗ್ರ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬೇಕು ಎಂದು (ಹಿಂದಿನ ಎಲ್ಲ ಪ್ರಧಾನಿಗಳು ಈ ಸಂದರ್ಭದಲ್ಲಿ ಹೇಳಿದ ಹಾಗೆ) ಕರೆ ಕೊಟ್ಟರು. ಆದರೆ ಕ್ಯಾಪ್ಟನ್ ಬೋಡಾಸ್ ಅವರ ಕಾಲ್ಪನಿಕ ವಿಮಾನಗಳು ಭಾರತದ ಪುರಾತನ ಚರಿತ್ರೆಯನ್ನು ನಗೆಪಾಟಲು ಮಾಡುವುದರ ಜತೆಜತೆಗೇ ಮೋದಿಯವರ ಕಳೆದ ವರ್ಷದ ಅಪ್ರಬುದ್ಧ ಭಾಷಣಗಳನ್ನೂ ಮತ್ತೆ ನೆನಪಿಸಿಕೊಟ್ಟವು.

ಸಂಸ್ಕೃತ ಭಾಷೆಯ ಪ್ರಾಬಲ್ಯ ಏನೆಂದರೆ ಇಂದಿನ ಯುವಕರೂ ಮೂರು ಸಾವಿರ ವರ್ಷಗಳ ಹಿಂದಿನ ಭಾಷೆಯಲ್ಲೇ ಶ್ಲೋಕಗಳನ್ನು ರಚಿಸಬಹುದು. ವಿಜ್ಞಾನದ ದೌರ್ಬಲ್ಯ ಏನೆಂದರೆ ಮೌಖಿಕ ಪರಂಪರೆಯಲ್ಲಿ ಬಂದ ಸಂಸ್ಕೃತ ಶ್ಲೋಕಗಳನ್ನು ಎಷ್ಟು ವರ್ಷಗಳ ಹಿಂದೆ ರಚಿಸಲಾಗಿತ್ತು ಎಂಬುದನ್ನು ನಿರ್ಧರಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ನಮ್ಮೆಲ್ಲ ಜನ­ಸಾಮಾನ್ಯರ ದೌರ್ಬಲ್ಯ ಏನೆಂದರೆ ಸಂಸ್ಕೃತ ಸಾಹಿತ್ಯದಲ್ಲಿ ಸತ್ಯ ಯಾವುದು, ಕಲ್ಪಿತ ವಿಚಾರ­ಗಳು ಯಾವವು ಎಂಬುದನ್ನು ವಿಂಗಡಿಸದೆ ಒಬ್ಬರಿಂದ ಕೇಳಿದ್ದನ್ನು ಇನ್ನೊಬ್ಬರಿಗೆ ಹೇಳುತ್ತ ಹೋಗುವುದು. ಈಗಲೂ ಪುರಾತನ ಭಾರತದ ಶ್ರೇಷ್ಠತೆಯನ್ನು ಹೇಳುವಾಗ ಪುಷ್ಪಕ ವಿಮಾನ ಹಾರಿದ್ದು, ಸತ್ತಂತಿದ್ದವನು ಸಂಜೀವಿನಿ ಮೂಲಿ­ಕೆಯ ಪ್ರಯೋಗದಿಂದಾಗಿ ಎದ್ದು ಕೂತಿದ್ದು, ಖಂಡಾಂತರ ಕ್ಷಿಪಣಿಯಂತೆ ಬ್ರಹ್ಮಾಸ್ತ್ರ ಹೊರಟಿದ್ದು, ಮಡಕೆಗಳಲ್ಲಿ ಕೌರವರ ಪಿಂಡ ಬೆಳೆದಿದ್ದು, ದೊನ್ನೆಯಲ್ಲಿ ದ್ರೋಣ ಜನಿಸಿದ್ದು ಇವೇ ಮುಂತಾದವು ನೆನಪಿಗೆ ಬರುತ್ತವೆ ವಿನಾ ಜ್ಯಾಮಿತೀಯ ಸೂತ್ರಗಳಾಗಲೀ ಗ್ರಹನಕ್ಷತ್ರಗಳ ವಿಚಾರವಾಗಲೀ ನಾಲಗೆಗೆ ಬರುವುದಿಲ್ಲ.

ಇಷ್ಟಕ್ಕೂ ವೇದಕಾಲದ ಜ್ಞಾನಸಂಪತ್ತೆಲ್ಲ ಭಾರತೀಯರ ಸಂಪತ್ತು ಎನ್ನುವುದು ಎಷ್ಟು ಸರಿ? ರಾಮಾಯಣದ ಘಟನೆಗಳು ನಡೆದಿದ್ದು ಭಾರತ­ದಲ್ಲಲ್ಲ, ಅಫ್ಘಾನ್‌ನಲ್ಲಿ ಎಂದು ಬೆಂಗಳೂರಿನ ಖಗೋಲ ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ ಸಾಬೀತುಪಡಿಸಿದ್ದನ್ನು ಈ ಅಂಕಣ­ದಲ್ಲಿ ದಾಖಲಿಸಲಾಗಿತ್ತು. ಶ್ರೀರಾಮನ ಜನ್ಮ ಕುಂಡಲಿಯಲ್ಲಿ ಗುರುತಿಸಲಾದ ಗ್ರಹ ನಕ್ಷತ್ರಗಳನ್ನು ಅವರು ಅಧ್ಯಯನ ಮಾಡಿದ್ದರು. ಅಫ್ಘಾನ್‌ನಲ್ಲಿ ಕೂತಿದ್ದರೆ ಮಾತ್ರ ಅಂಥ ಜಾತಕವನ್ನು ಬರೆದಿರಲು ಸಾಧ್ಯವೆಂತಲೂ ಅಲ್ಲಿನ ‘ಹರಿ ರುದ್’ ನದಿಯೇ ಸರಯೂ ಆಗಿದ್ದೀತೆಂದೂ ತರ್ಕಿಸಿದ್ದರು. ವೇದಗಳ ಸೃಷ್ಟಿಯೂ ಅದೇ ಭೌಗೋಲಿಕ ಪ್ರದೇಶದಲ್ಲಿ, ಹೆಚ್ಚೆಂದರೆ ಈಗಿನ ಪಾಕಿಸ್ತಾನದ ಸಿಂಧೂ ಕೊಳ್ಳದಲ್ಲಿ ನಡೆದಿತ್ತೆಂಬುದನ್ನು ಗಮನಿಸಿದರೆ, ನಮ್ಮ ಬಹುಪಾಲು ಭಾರತಕ್ಕೆ ಅದು ತೀರಾ ದೂರದ ಸಂಬಂಧ ಎಂತಲೇ ಹೇಳಬೇಕು. ಚ್ಯವನಪ್ರಾಶದಂಥ ಆಯುರ್ವೇದ ಲೇಹ್ಯದಲ್ಲಿ ವರ್ಣಿಸಲಾದ ಬಹಳಷ್ಟು ಮೂಲಿಕೆಗಳು ನಮ್ಮಲ್ಲಿ ಸಿಗುವುದಿಲ್ಲ ಅಥವಾ ಅವನ್ನು ತಪ್ಪು ಹೆಸರುಗಳಲ್ಲಿ ಗುರುತಿಸಿದ್ದೇವೆಂದು ಸಸ್ಯವಿಜ್ಞಾನಿ­ಗಳು ಹೇಳುತ್ತಾರೆ. ಸಂಸ್ಕೃತ ಭಾಷೆಯ ಅಂಟುಗುಣ ಅದೆಷ್ಟು ಗಾಢವೆಂದರೆ ಅಸಲೀ ಲೇಹ್ಯದ ಬದಲು ಅದರ ಸದ್ಗುಣಗಳನ್ನು ಹಾಡಿ ಹೊಗಳುವ ಮಾತುಗಳಷ್ಟೇ ನಮ್ಮ ನಾಲಗೆಯ ಮೇಲೆ ಸರಿದಾಡುತ್ತವೆ. ಭಾಷೆಯ ಬಲದಿಂದಾಗಿಯೇ ಹಿಂದಿನವರು ಹೆಣೆದ ರೋಚಕ ಕಲ್ಪನಾ ಕತೆಗಳು ಇಂದಿಗೂ ಸತ್ಯವೆನಿಸುವಷ್ಟು ದಟ್ಟವಾಗಿ ಜನಮಾನಸದಲ್ಲಿ ಉಳಿದಿವೆ.

‘ಮೇಘದೂತ’ದಲ್ಲಿ ಕಾಳಿದಾಸನ ಆಕಾಶಯಾನದ ವರ್ಣನೆ ಅದೆಷ್ಟು ಮೋಹಕ­ವೆಂದರೆ ಈಗಲೂ ಗೂಗಲ್ ನಕ್ಷೆಯಲ್ಲಿ ಅಂದಿನ ಭೂಚಿತ್ರಣಗಳೆಲ್ಲ ಸತ್ಯವೆಂದೇ ಸಾಧಿಸಲು ಸಾಧ್ಯ­ವೆಂದು ವಾದಿಸುವವರಿದ್ದಾರೆ. ರೈಟ್ ಸಹೋ­ದ­ರರು ವಿಮಾನವನ್ನು ನಿರ್ಮಿಸುವು­ದಕ್ಕಿಂತ ೪೦೦ ವರ್ಷಗಳ ಮೊದಲೇ ಇಟಲಿಯ ಲಿಯೊ­ನಾರ್ಡೊ ಡಾ ವಿಂಚಿ ವಿಮಾನ ಮತ್ತು ಪ್ಯಾರಾ­ಶೂಟ್‌ಗಳ ರಚನೆ ಹೇಗಿರಬೇಕೆಂದು ವರ್ಣಿಸಿ­ದ್ದಾನೆ. ಸಂಪರ್ಕ ಉಪಗ್ರಹಗಳು ಅಸ್ತಿತ್ವಕ್ಕೆ ಬರುವ ೩೦ ವರ್ಷಗಳ ಮೊದಲೇ ಆರ್ಥರ್ ಕ್ಲಾರ್ಕ್ ತನ್ನ ಕತೆಗಳಲ್ಲಿ ಅವುಗಳನ್ನು ಸಾಕಾರ-­ಗೊಳಿಸಿದ್ದಾನೆ. ಭಾರದ್ವಾಜ ಮಹರ್ಷಿ­ಯದೆಂದು ಹೇಳಲಾದ ವಿಮಾನಗಳ ಕಲ್ಪನೆ ಇನ್ನೂ ರೋಚಕವಾಗಿದೆ: ಹೊಗೆಯ ಮೂಲಕ ಮಾಯಾ ಆವರಣವನ್ನು ನಿರ್ಮಿಸಿ ಇಡೀ ವಿಮಾನವನ್ನೇ ಮರೆಮಾಚುವುದು ಹೇಗೆಂಬ ವಿವರಣೆ ಅದರಲ್ಲಿ ಇದೆಯೆಂದು ಹೇಳಿ ೧೯೭೩ರಲ್ಲಿ ಜಿ.ಆರ್. ಜೊಸಿಯರ್ ಎಂಬಾತ ಪ್ರಕಟಿಸಿದ ಇಂಗ್ಲಿಷ್ ಗ್ರಂಥವೊಂದು ಅಂತರಜಾಲದಲ್ಲಿ ಲಭ್ಯವಿದೆ. ‘ಪ್ರಕಾಂಡ ಪಂಡಿತ ಸುಬ್ಬರಾಯ ಶಾಸ್ತ್ರಿಯವರಿಗೆ ಇಂದ್ರಿಯ ಗೋಚರವಲ್ಲದ್ದನ್ನೂ ಕಾಣುವ ಶಕ್ತಿ ಇತ್ತು. ಭಾರದ್ವಾಜರ ವೈಮಾನಿಕ ಶಾಸ್ತ್ರವನ್ನು ಅವರು ೧.೮.೧೯೧೮ರಿಂದ ೨೩.೮.೧೯೨೩ರ ವರೆಗೆ ಮೌಖಿ­ಕವಾಗಿ ಹೇಳಿದ್ದನ್ನೆಲ್ಲ ೨೩ ನೋಟ್‌­ಬುಕ್‌ಗಳಲ್ಲಿ ವೆಂಕಟಾಚಲ ಶಾಸ್ತ್ರಿ ಎಂಬವರು ಬರೆದರು’ ಎಂದು ಅದರಲ್ಲಿ ಜೊಸಿಯರ್ ವಿವರಿಸಿದ್ದಾನೆ.

ಹಾಗೆ ದಿವ್ಯದೃಷ್ಟಿಯಲ್ಲಿ ಕಂಡಿದ್ದನ್ನು ವಿಜ್ಞಾನ ಎನ್ನಲಾದೀತೆ? ‘ಅಂಥ ಢೋಂಗಿ ಪ್ರಬಂಧಗಳ ಮಂಡನೆಗೆ ಅವಕಾಶ ಕೊಡಬೇಡಿ, ಭಾರತೀಯ ವಿಜ್ಞಾನಕ್ಕೆ, ಮುಂದಿನ ಪೀಳಿಗೆಗೆ ದ್ರೋಹವಾ­ಗುತ್ತದೆ’ ಎಂದು ಅಮೆರಿಕದ ನಾಸಾದಲ್ಲಿರುವ ಭಾರತೀಯ ಮೂಲದ ವಿಜ್ಞಾನಿ ಡಾ. ರಾಮಪ್ರಸಾದ್ ಗಾಂಧೀರಾಮನ್ ಎಂಬವರು ಸಮ್ಮೇಳನಕ್ಕೆ ಮೊದಲೇ ಆನ್‌ಲೈನ್ ಮನವಿ ಸಲ್ಲಿಸಿದ್ದರು. ಯಾರೂ ಕ್ಯಾರೇ ಅನ್ನಲಿಲ್ಲ. ‘ನಮ್ಮ ದೇಶದ ವಿಜ್ಞಾನ ಮತ್ತು ವಿಜ್ಞಾನಿಗಳ ಪ್ರತಿಷ್ಠೆಯನ್ನು ನಾವು ಮತ್ತೆ ಮರುಸ್ಥಾಪನೆ ಮಾಡ­ಬೇಕಿದೆ’ ಎಂದು ಪ್ರಧಾನಿ ಮೋದಿ­ಯವರು ಮುಂಬೈ ಸಮ್ಮೇಳನದ ಆರಂಭದಲ್ಲಿ ಹೇಳಿದ್ದರು. ಸಮ್ಮೇಳನ ಮುಗಿದ ಮೇಲೆ ಹೇಳಬೇಕಾದ ಮಾತು ಅದಾಗಿತ್ತು.
 
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT