ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ| ಪೇಜಾವರ ಪರ್ಯಾಯ, ಹೀಗೊಂದಿಷ್ಟು ಆಶಯ

Last Updated 20 ಡಿಸೆಂಬರ್ 2019, 13:35 IST
ಅಕ್ಷರ ಗಾತ್ರ

ಪೇಜಾವರ ಶ್ರೀಗಳ ಸಮಕ್ಷಮಕ್ಕೆ ಸಪ್ರೇಮ ವಂದನೆಗಳು
ಸ್ವಾಮೀಜಿ, ಒಂದೊಮ್ಮೆ ತಾವು ಸಂತನಾಗದಿದ್ದರೆ ಏನಾಗಿರುತ್ತಿದ್ದಿರಿ? ಈ ಪ್ರಶ್ನೆ ಹಲವು ಬಾರಿ ನನ್ನನ್ನು ಕಾಡಿದೆ. 85ರ ಈ ಇಳಿ ವಯಸ್ಸಿನಲ್ಲೂ ತಮ್ಮಲ್ಲಿರುವ ಜ್ಞಾನದಾಹ, ಪಾಠ ಪ್ರವಚನಗಳ ಬಗೆಗಿನ ಆಸಕ್ತಿ ನಿಮ್ಮೊಳಗಿನ ಪ್ರಾಧ್ಯಾಪಕನನ್ನು ಕಾಣಿಸಿದರೆ, ನಿಮ್ಮ ಸಾಮಾಜಿಕ ಕಳಕಳಿ, ಬದಲಾವಣೆ ತರುವ ತುಡಿತದಲ್ಲಿ ಸಮಾಜ ಸುಧಾರಕ ಇಣುಕುತ್ತಾನೆ. ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದಾಗ ರಾಜಕಾರಣಿಯೂ ಇರಬಹುದೇ ಎಂಬ ಗುಮಾನಿಯಾಗುತ್ತದೆ. ಪರಿಸರ ರಕ್ಷಣೆ ಎಂದು ಉಪವಾಸ ಕೂತಾಗ, ಆಂದೋಲನ ರೂಪಿಸಿದಾಗ ನಿಮ್ಮೊಳಗಿನ ಚಳವಳಿಗಾರ ಸ್ಫುಟವಾಗುತ್ತಾನೆ.

ನಿಮ್ಮ ಶಿಸ್ತಿನ ಜೀವನಕ್ರಮ, ಕ್ರಿಯಾಶೀಲ ಚಟುವಟಿಕೆಯಲ್ಲಿ ಪುಟ್ಟ ದೇಹದೊಳಗೆ ಅಗಾಧ ಶಕ್ತಿ ತುಂಬಿಕೊಂಡ ಯೋಗಿಯ ದರ್ಶನವಾದರೆ, ಗೊಡ್ಡು ಸಂಪ್ರದಾಯಗಳನ್ನು ಮುರಿಯಲು ಯತ್ನಿಸಿದಾಗ ಕ್ರಾಂತಿಕಾರಿಯಂತೆಯೂ ನೀವು ಕಾಣುತ್ತೀರಿ. ಹಾಗಾಗಿಯೇ, ಏನೂ ಆಗದಿರುವುದು ಸಂತನಾಗುವ ಲಕ್ಷಣವೋ, ಎಲ್ಲವೂ ಆಗುವ ಸಾಮರ್ಥ್ಯ ಪ್ರಕಟಿಸುವುದು ಸಂತನ ಗುಣವೋ ಎಂಬ ಗೊಂದಲ ಉಂಟಾಗುತ್ತದೆ.

ಇನ್ನೆರಡು ದಿನಗಳಲ್ಲಿ ಉಡುಪಿಯ ಪರ್ಯಾಯ ಪೀಠವೇರುತ್ತಿದ್ದೀರಿ. ಇದರೊಂದಿಗೆ ತಾವು ಅಷ್ಟಮಠಗಳ ಇತಿಹಾಸದಲ್ಲಿ ಐದನೆಯ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಮೊದಲ ಯತಿ ಎನಿಸಿಕೊಳ್ಳುತ್ತೀರಿ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಸೋದೆ ಮಠದ ಯತಿ ವಾದಿರಾಜರು, ನಾಲ್ಕು ಅವಧಿಗೆ ಪರ್ಯಾಯ ಕೈಂಕರ್ಯ ತಾವೇ ನಡೆಸಿ, ಐದನೆಯ ಪರ್ಯಾಯವನ್ನು ತಮ್ಮ ಶಿಷ್ಯನಿಗೆ ಬಿಟ್ಟುಕೊಟ್ಟಿದ್ದರು. ಆ ನಂತರದಲ್ಲಿ ಮತ್ತಾವ ಯತಿಗಳಿಗೂ ಆ ಅವಕಾಶ ಒದಗಲಿಲ್ಲ.

ವಾದಿರಾಜರನ್ನು ಈ ಸಂದರ್ಭದಲ್ಲಿ ನೆನೆಯಲು ಮುಖ್ಯ ಕಾರಣ, ಹಲವು ವಿಷಯಗಳಲ್ಲಿ ತಾವು ಅವರ ಮಾರ್ಗದಲ್ಲೇ ನಡೆದಿದ್ದೀರಿ ಎನ್ನುವುದು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಪ್ರಮುಖವಾಗಿ ಉಲ್ಲೇಖವಾಗುವ ಹೆಸರು ಎಂದರೆ ವಾದಿರಾಜರದ್ದು (1480- 1600). ಬಹುಶಃ ಅಷ್ಟಮಠದ ಯತಿಗಳ ಪೈಕಿ ಮೊದಲ ಬಾರಿಗೆ ‘ಮಡಿ’ಯ ಬೇಲಿಯನ್ನು ಮುರಿಯಲು ಯತ್ನಿಸಿದವರು, ಸುಧಾರಣೆಗಳಿಗೆ ತೆರೆದುಕೊಂಡವರು, ಪಾಮರರಿಗೆ ಹತ್ತಿರವಾಗಲು ಪ್ರಯತ್ನಿಸಿದವರು ವಾದಿರಾಜರೇ.

ಜನರೊಂದಿಗೆ ಅವರು ಬೆರೆತ ರೀತಿ ಅನನ್ಯ. ಅದಕ್ಕೆಂದೇ ಆಡುಮಾತಿನಲ್ಲಿ ಕನ್ನಡ ಕೀರ್ತನೆಗಳನ್ನು ರಚಿಸಿದರು. ತುಳುವಿನಲ್ಲಿ ಹಾಡುಗಬ್ಬಗಳನ್ನು ಹೊಸೆದರು. ‘ಕಣ್ಣ್ ಬುಡ್‌ದ್‌ ನೀರ್‌ದುಲಯಿ ತೂಪಿನೇರ್ ಗಾ| ಅಣ್ಣ ಪಣ್‌ಪೆ ಕೇಣ್ ಮತ್ಸ್ಯೊ ದೇವೆರೆತ್ತ ಗಾ’ ಎಂದು ದಲಿತ ಕೇರಿಗಳಲ್ಲಿ ಹಾಡುತ್ತಾ, ದುಡಿಯ ಬಡಿತಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಾ ಸಾಮರಸ್ಯದ ಬೀಜ ಬಿತ್ತಿದರು.

ಪರ್ಯಾಯೋತ್ಸವದ ಮೂಲಕಲ್ಪನೆ ಅವರದ್ದೇ. ಹಿಂದಿದ್ದ ಪರ್ಯಾಯದ ಅವಧಿಯನ್ನು ತಮ್ಮ ಕಾಲದಲ್ಲಿ ಎರಡು ತಿಂಗಳಿನಿಂದ ಎರಡು ವರ್ಷಕ್ಕೆ ಮಾರ್ಪಡಿಸಿದರು. ಎರಡು ವರ್ಷ ಜನಾರ್ದನನ ಪೂಜೆಗಾದರೆ, ನಂತರದ ಹದಿನಾಲ್ಕು ವರ್ಷ ಜನರೊಂದಿಗಿನ ಒಡನಾಟಕ್ಕೆ, ತತ್ವವಾದ ಪ್ರಸಾರಕ್ಕೆ ಎಂಬುದು ಅವರ ಆಶಯವಿದ್ದಿರಬಹುದು. ಪರ್ಯಾಯ ಉತ್ಸವಕ್ಕೆ ಜನಪದ ಕಲೆಗಳನ್ನು ಜೋಡಿಸಿದವರು ಅವರೇ. ಮುಖ್ಯವಾಗಿ ಕನಕರ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ಉಲ್ಲೇಖಿಸಲೇಬೇಕು.

ಕನಕದಾಸರು ಉಡುಪಿಯಲ್ಲಿದ್ದಷ್ಟು ದಿನ ಗರಟೆಯಲ್ಲಿನ ತಿಳಿಗಂಜಿಯ ಜೊತೆ, ರೊಟ್ಟಿಯನ್ನು ಕೃಷ್ಣನಿಗೆ ಅರ್ಪಿಸುತ್ತಿದ್ದರಂತೆ. ಕನಕರ ನೆನಪಿನಲ್ಲಿ ಅದು ನಿರಂತರವಾಗಿ ನಡೆಯಬೇಕು ಎಂಬ ಕಾರಣದಿಂದ, ಪ್ರತಿದಿನವೂ ಇತರ ಭಕ್ಷ್ಯಗಳೊಂದಿಗೆ ಕೃಷ್ಣನಿಗೆ ಗರಟೆಯಲ್ಲಿ ತಿಳಿಗಂಜಿ, ರೊಟ್ಟಿ ಅರ್ಪಿಸುವ ರೂಢಿಯನ್ನು ವಾದಿರಾಜರು ಜಾರಿಗೆ ತಂದರು. ಕನಕರಿಗೆ ಕೃಷ್ಣ ದರ್ಶನವಿತ್ತ ಕಿಂಡಿಯನ್ನು ‘ಕನಕನ ಕಿಂಡಿ’ ಎಂದು ಕರೆದು, ಪರ್ಯಾಯ ಪೀಠವನ್ನೇರುವ ಯತಿಗಳು ಕನಕನ ಕಿಂಡಿಯಲ್ಲಿ ಕೃಷ್ಣನನ್ನು ಕಂಡೇ (ದೂಳೀದರ್ಶನ) ಗುಡಿಯನ್ನು ಪ್ರವೇಶಿಸಬೇಕು ಎಂಬ ಸಂಪ್ರದಾಯವನ್ನು ಹಾಕಿಕೊಟ್ಟರು. ವೈಷ್ಣವ ದೀಕ್ಷೆಯನ್ನು ವ್ಯಾಪಕವಾಗಿ ಬಳಸಿ ಅಧ್ಯಾತ್ಮ ಸಾಧನೆಗೆ ಎಲ್ಲರೂ ಅರ್ಹರು ಎಂದು ಸಾರಿದರು.

ತಮ್ಮ 120 ವರ್ಷಗಳ ತುಂಬು ಜೀವನದಲ್ಲಿ ವಾದಿರಾಜರು ಹೀಗೆ ಪಥ ಬದಲಿಸಿ ನಡೆದರು. ವಿಪರ್ಯಾಸವೆಂದರೆ ಅವರ ನಂತರ ಮಡಿಯ ಬೇಲಿ ಅಷ್ಟಮಠಗಳ ಸುತ್ತ ಬೆಳೆದು ನಿಂತಿತು. ಆದರೆ ಪ್ರಾಚೀನ ಸಂಸ್ಕೃತಿಯ ಜೊತೆಗೆ ಅರ್ವಾಚೀನ ಪ್ರಜ್ಞೆಯನ್ನೂ ಬೆಳೆಸಿಕೊಂಡಿದ್ದ ನೀವು ಮಠಕ್ಕೆ ಸೀಮಿತವಾಗದೇ ಜನಪದದೊಂದಿಗೆ ಬೆರೆಯುವ ಪ್ರಯತ್ನ ಮಾಡಿದಿರಿ. ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನಕ್ಕೆ ಮೊದಲಾದಿರಿ. ಮಡಿಯ ವರ್ತುಲದ ಸೀಮೋಲ್ಲಂಘನ ಮಾಡಿದಿರಿ.

ಶಾಸ್ತ್ರಾಧ್ಯಯನದ ಜೊತೆ ವಿವೇಕಾನಂದ, ಗಾಂಧೀಜಿ, ವಿನೋಬಾ, ಲೋಹಿಯಾ, ಜಯಪ್ರಕಾಶ್ ನಾರಾಯಣ್, ಆಚಾರ್ಯ ನರೇಂದ್ರರ ಚಿಂತನೆಗಳನ್ನೂ ಓದಿದಿರಿ. ಆ ದಿನಗಳಲ್ಲಿ ನೀವು ಸ್ಥೈರ್ಯದಿಂದ ಇಟ್ಟ ಹೆಜ್ಜೆಗಳು ನೆನಪಿವೆಯೇ? ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟಿರಿ. 1969ರಲ್ಲಿ ನಿಮ್ಮ ಎರಡನೆಯ ಪರ್ಯಾಯದ ಅವಧಿಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಸಮ್ಮೇಳನ ನಡೆದಿತ್ತು.

‘ಹಿಂದವಃ ಸೋದರಃ ಸರ್ವೇ’ ಎಂಬ ಘೋಷಣೆ ಮೊಳಗಿಸಿದಿರಿ. ‘ಮಧ್ವರ ತತ್ವಗಳನ್ನು ಒಪ್ಪುವವರೆಲ್ಲಾ ಮಾಧ್ವರು’, ‘ಮಾದಿಗರೆಲ್ಲ ಮಾಧವರು’ ಎಂಬ ಹೇಳಿಕೆಗಳು ಬಂದವು. 1970ರಲ್ಲಿ ಪುರಿ ಶಂಕರಾಚಾರ್ಯರು ಅಸ್ಪೃಶ್ಯತೆಯನ್ನು ಸಮರ್ಥಿಸಿ ಮಾತನಾಡಿದಾಗ ನೀವದನ್ನು ವಿರೋಧಿಸಿ ‘ಅಸ್ಪೃಶ್ಯತೆ ತಪ್ಪಲ್ಲದಿದ್ದರೆ ಬೇರಾವುದೂ ತಪ್ಪಲ್ಲ’ ಎಂದಿರಿ, ಪರ್ಯಾಯ ಮುಗಿಸಿ ಬೆಂಗಳೂರಿನ ಜಬ್ಬಾರ್ ಕಾಲೊನಿಗೆ ಭೇಟಿ ನೀಡಿ ಅಲ್ಲಿ ಪರಿಶಿಷ್ಟರ ಮಕ್ಕಳ ಗಲ್ಲ ಹಿಡಿದು ಅವರೊಂದಿಗೆ ಆಡಿ ಸಂಚಲನವನ್ನೇ ಉಂಟು ಮಾಡಿದಿರಿ.

ಇದಕ್ಕೆ ಸನಾತನಿಗಳ ಟೀಕೆ, ಪ್ರಗತಿಪರರ ಸಂಶಯದ ಕೊಂಕುಮಾತು ಎರಡೂ ಬಂದವು. ಕೆಲವರಷ್ಟೇ ನಿಮ್ಮ ಬೆನ್ನಿಗೆ ನಿಂತರು. ಸಾಹಿತಿ ಯು.ಆರ್.ಅನಂತಮೂರ್ತಿ ನಿಮ್ಮನ್ನು ಅಭಿನಂದಿಸಿ ಪತ್ರ ಬರೆದು ‘ಮಡಿವಂತ ಸಮಾಜದ ಅನುಭವವಿರುವ ನನಗೆ, ನಿಮ್ಮ ಈ ನಿಲುವಿನ ಹಿಂದೆ ಎಷ್ಟು ಆಳವಾದ ಪ್ರಾಮಾಣಿಕ ಧೈರ್ಯ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ’ ಎಂದಿದ್ದರು. ವಿಪರ್ಯಾಸವೆಂದರೆ ನಿಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅನಂತಮೂರ್ತಿ ಅವರನ್ನೂ ಟೀಕಿಸಲಾಯಿತು. ಆ ಬಗ್ಗೆ ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ.

‘ಎಲ್ಲರನ್ನೂ ವಾತ್ಸಲ್ಯದಿಂದ ಕಾಣುತ್ತಿದ್ದ ಅಮ್ಮ, ತಾವು ಮಾತ್ರ ಮಡಿಮೈಲಿಗೆ ಬಿಟ್ಟವರಲ್ಲ. ತನ್ನ ಜಾತಿಯ ಬಗ್ಗೆ ನಾಚಿಕೊಂಡ ಆಧುನಿಕರು ಅವರಲ್ಲ. ಪೇಜಾವರ ಸ್ವಾಮಿಗಳು ಹರಿಜನ ಕೇರಿಗೆ ಹೋದರೆಂದು ಗೊತ್ತಾದಾಗ, ನನ್ನ ಅಮ್ಮ ಗೊಂದಲಕ್ಕೆ ಒಳಗಾದರು. ಅಮ್ಮನ ಮೇಲೆ ಪರಿಣಾಮ ಮಾಡಬಲ್ಲವರು ಪೇಜಾವರರು ಎಂದು ನಾನು ತಿಳಿದಿದ್ದರಿಂದಲೇ ಅವರನ್ನು ಹರಿಜನಕೇರಿಗೆ ಹೋದರೆಂದು ಅಭಿನಂದಿಸಿದೆ. ನನ್ನ ಸಮಕಾಲೀನ ಲೇಖಕರು ಇಂತಹ ನಂಬಿಕೆಗಳ ಆಳವನ್ನು ಅರಿಯದೇ ನನ್ನನ್ನು ಗೇಲಿ ಮಾಡಿದರು. ನನ್ನ ಅಮ್ಮನಂಥವರ ಮನಸ್ಸು ಬದಲಾಯಿಸಬೇಕೆಂಬ ಆಸ್ಥೆ ಈ ಆಧುನಿಕ ಬುದ್ಧಿಜೀವಿಗಳಿಗೆ ಇಲ್ಲ’.

ನಿಜ, ನಲವತ್ತೈದು ವರ್ಷಗಳ ಹಿಂದೆ ನೀವು ರಭಸದಿಂದ ಇಟ್ಟ ದಾಪುಗಾಲಿನ ಹೆಜ್ಜೆ ಒಂದು ಪೀಳಿಗೆಯ ನಂಬಿಕೆಗಳನ್ನೇ ಕದಲಿಸಿತ್ತು. ಆ ನಡಿಗೆ ಮುಂದುವರಿದಿದ್ದರೆ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿತ್ತೇನೋ. ಆದರೆ ನಿಮ್ಮ ಚಲನೆ ನಿಧಾನವಾಯಿತು. ಒಂದಷ್ಟು ಕಾಲ ಸ್ತಬ್ಧವಾಯಿತು. ನಿಮ್ಮ ಚಟುವಟಿಕೆಯನ್ನು ಕೇವಲ ಸೇವಾ ಕ್ಷೇತ್ರಕ್ಕೆ ಸೀಮಿತಗೊಳಿಸಿ ಮಧ್ಯಮಮಾರ್ಗದಲ್ಲಿ ನಡೆಯಲು ಆರಂಭಿಸಿದಿರಿ. ಪ್ರಕೃತಿ ವಿಕೋಪಗಳಾದಾಗ ಸ್ಪಂದಿಸಿದಿರಿ, ಮಾಳಿಗೆ ಮನೆ, ಮಲ್ಲಂದೂರು, ಚಿಕ್ಕಮಗಳೂರು ಇತ್ಯಾದಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಕುಟುಂಬಗಳನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿ ವಿದ್ಯುತ್, ನೀರು ಇತ್ಯಾದಿ ಮೂಲಸೌಕರ್ಯ ವ್ಯವಸ್ಥೆ ಮಾಡಿದಿರಿ. ಅರಣ್ಯ, ಪರಿಸರ ರಕ್ಷಣೆಗಾಗಿ ನಡೆದ ಉಪವಾಸ, ಸತ್ಯಾಗ್ರಹಗಳಲ್ಲಿ ಜೊತೆಯಾದಿರಿ. ಈ ಸಾಮಾಜಿಕ ಯೋಜನೆಗಳ ಹಿಂದೆ ಮನುಷ್ಯನ ಆತ್ಮವನ್ನಷ್ಟೇ ಪೋಷಿಸಿ ಬದುಕನ್ನು ಕಡೆಗಣಿಸುವುದು ಧರ್ಮವಾಗಲಾರದು ಎಂಬ ಚಿಂತನೆ ಕೆಲಸ ಮಾಡಿತ್ತು. ಆದರೆ ಪರಂಪರಾಗತ ಧಾರ್ಮಿಕ ನಾಯಕತ್ವವನ್ನು ಸ್ಥಾಣುತ್ವದಿಂದ ಚಲತ್ವದತ್ತ ಮುನ್ನಡೆಸಿದ ತಮ್ಮಿಂದ ಸಮಾಜ ದೊಡ್ಡ ಕ್ರಾಂತಿಯನ್ನೇ ಅಪೇಕ್ಷಿಸುತ್ತಿತ್ತು.

ಅದು ಬಿಡಿ, ನೀವು ಸ್ಪಂದನಶೀಲರಾದ್ದರಿಂದ ತಮ್ಮ ಈ ಐತಿಹಾಸಿಕ ಪರ್ಯಾಯ ಕಾಲದಲ್ಲಿ ಕೆಲವು ಸಂಗತಿಗಳನ್ನು ಚರ್ಚಿಸಬಹುದು ಎನಿಸುತ್ತಿದೆ. ಸಾಮಾನ್ಯವಾಗಿ ಉಡುಪಿ ಕೃಷ್ಣಮಠ ಹಲವು ಕಾರಣಗಳಿಂದ ಚರ್ಚೆಗೆ ಒಳಗಾಗುತ್ತಿರುತ್ತದೆ. ಅದರಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯ ಕಾಲದಲ್ಲಿ ಏಳುವ ಸಾಗರೋಲ್ಲಂಘನದ ಪ್ರಶ್ನೆ ಒಂದು. ಸ್ವಾಮೀಜಿ, ಇಂದು ಜಗತ್ತು ಪುಟ್ಟ ಹಳ್ಳಿಯಂತಾಗಿದೆ. ವಲಸೆ ಸಾಮಾನ್ಯ ಮತ್ತು ಅನಿವಾರ್ಯ ಎನಿಸಿದೆ.

ಅಮೆರಿಕವನ್ನೇ ತೆಗೆದುಕೊಂಡರೆ, ಅಲ್ಲಿನ ರಾಜಕೀಯ ಮತ್ತು ಉದ್ಯಮ ಕ್ಷೇತ್ರವನ್ನು ಪ್ರಭಾವಿಸುವಷ್ಟು ಭಾರತೀಯರು ನೆಲೆನಿಂತು ಬೆಳೆದಿದ್ದಾರೆ. ತಮ್ಮ ಸಾಂಸ್ಕೃತಿಕ, ಧಾರ್ಮಿಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹವಣಿಸುತ್ತಾರೆ. ಇಂದು ಅಮೆರಿಕದ ಹಲವು ನಗರಗಳಲ್ಲಿ ಬಿಕರಿಗಿದ್ದ ಚರ್ಚುಗಳನ್ನು ಪುತ್ತಿಗೆ ಯತಿಗಳು ಕೃಷ್ಣ ಮಂದಿರವನ್ನಾಗಿಸಿ, ಅನಿವಾಸಿ ಭಾರತೀಯರ ಧಾರ್ಮಿಕ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಇಸ್ಕಾನ್ ಸೇರಿದಂತೆ ಹಲವು ಸಂಸ್ಥೆಗಳು, ಮಠ ಮಂದಿರಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದೂ ಧರ್ಮಪ್ರಸರಣದ ಕಾರ್ಯವಲ್ಲವೇ? ಹಾಗಾಗಿ ಸಾಗರೋಲ್ಲಂಘನ ಶಾಸ್ತ್ರಬಾಹಿರವಲ್ಲ ಎಂಬ ಏಕ ಅಭಿಪ್ರಾಯ ರೂಪಿಸಲು ಇದು ಸಕಾಲವಲ್ಲವೇ?

ಇತ್ತೀಚೆಗೆ ತಾವು ‘ಮಧ್ವಾಚಾರ್ಯರು ಶೂದ್ರರಿಗೆ ಮೋಕ್ಷವಿಲ್ಲ ಎಂದು ಹೇಳಿಲ್ಲ. ಬುದ್ಧಿಜೀವಿಗಳು ಅಪಪ್ರಚಾರ ಮಾಡುತ್ತಿದ್ದಾರಷ್ಟೇ. ಮಧ್ವರು ಹಾಗೆ ಹೇಳಿರುವ ಉಲ್ಲೇಖವಿದ್ದರೆ ತೋರಿಸಿ’ ಎಂದು ಸವಾಲು ಹಾಕಿದ್ದೀರಿ. ಸ್ವಾಮೀಜಿ, ಪ್ರಶ್ನೆ ಇರುವುದು ಮಧ್ವರ ತತ್ವಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನವನ್ನಾದರೂ ಯಾರು ಮಾಡಿದ್ದಾರೆ ಎನ್ನುವುದು. ಮಧ್ವರ ಸಂದೇಶ ಕೊಂಚವಾದರೂ ಜನರಿಗೆ ಮುಟ್ಟಿದ್ದರೆ ಅದು ಮಡಿ ಬಿಟ್ಟ ದಾಸಪಂಥದಿಂದಲೇ ಹೊರತಾಗಿ, ಶಾಸ್ತ್ರ ಗ್ರಂಥಗಳನ್ನು ಮಡಿಪೆಟ್ಟಿಗೆಯಲ್ಲಿಟ್ಟು ಪೂಜಿಸಿದ ಪಂಡಿತರಿಂದಲ್ಲ.

‘ಯೋನಿಭೇದಕೃತೋ ಭೇದೋ ಜ್ಞೇಯ ಔಪಾಧಿಕಸ್ತ್ವಯಮ್’- ಅಧ್ಯಾತ್ಮದ ಸಾಧನೆಗೆ ಮುಖ್ಯವಾಗುವುದು ಹುಟ್ಟು ಜಾತಿಯಲ್ಲ, ವ್ಯಕ್ತಿಯ ಗುಣಸ್ವಭಾವ ಎಂಬ ಮಧ್ವರ ಮಾತು ಗ್ರಂಥಗಳಲ್ಲೇ ಉಳಿಯಿತೇಕೆ? ಪುರಂದರರು ‘ಹೊಲೆಯ ಹೊರಗಿಹನೇ ಊರೊಳಗಿಲ್ಲವೇ’ ಎಂದು ತಮ್ಮ ಕೀರ್ತನೆಯಲ್ಲಿ ಪ್ರಶ್ನಿಸಿದರೆ, ವಿಜಯದಾಸರು ‘ಹೊಲೆಯನಾವನೋ ಈ ಕಲಿಯುಗದೊಳಗೆ’ ಎಂದು ಕೇಳುತ್ತಾ ‘ಬಳಗ ಬರಲು ಬಿಟ್ಟು ಒಳಗುಂಬುವನು ಹೊಲೆಯ| ಕೋಪವ ಕಳೆಯಲರಿಯದವ ಶುದ್ಧ ಹೊಲೆಯ|’ ಎಂದರು. ಕೋಪ ಬಿಡದವನು, ಪರರ ಸೊತ್ತನ್ನು ಬಯಸುವವನು, ಸ್ವಾರ್ಥಿಯಾದವನು
ಅಧಮನೇ ಹೊರತು ಜಾತಿ ನಿರ್ಣಾಯಕವಲ್ಲ ಎಂದು ಸಾರಿದರು. ಹೀಗೆ ಕನಕ, ಪುರಂದರರ ಪರಂಪರೆ ಹಾಕಿಕೊಟ್ಟ ಉದಾರ ಮೇಲ್ಪಂಕ್ತಿ ಕಾಲಾಂತರದಲ್ಲಿ ಬದಿಗೆ ಸರಿಯಿತೇಕೆ? ಮಧ್ವಪೀಠಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ?

ಸ್ವಾಮೀಜಿ, ಎಲ್ಲಕ್ಕಿಂತ ಮಿಗಿಲಾಗಿ ಅಮಾನುಷವಾದ ಪಂಕ್ತಿಭೇದದ ಆಚರಣೆ ನಿಲ್ಲಬೇಕಿದೆ. ಹೆಚ್ಚಲ್ಲದಿದ್ದರೂ ಸಮಾಜದ ಎಲ್ಲ ಜನರೂ ಒಂದೆಡೆ ಕುಳಿತು ಉಣ್ಣುವಂತಾದರೆ, ನಿಮ್ಮ ಇಷ್ಟು ವರ್ಷಗಳ ಪ್ರಯತ್ನಕ್ಕೆ ಒಂದು ಅರ್ಥ ಬರುತ್ತದೆ. ಈ ಹಿಂದಿನ ಪರ್ಯಾಯದಲ್ಲಿ ಜನರನ್ನು ದುಶ್ಚಟಗಳಿಂದ ಮುಕ್ತರನ್ನಾಗಿಸಲು ‘ದುಶ್ಚಟ ಹುಂಡಿ’ ತೆರೆದಿದ್ದಿರಿ. ಭಕ್ತಿದೀಕ್ಷೆಯ ಮುಖ್ಯ ಉದ್ದೇಶವೂ ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸುವುದು ಎಂದಿದ್ದಿರಿ. ನಿಜಕ್ಕೂ ಅದು ಪ್ರಶಂಸಾರ್ಹ. ಅದೇ ಮಾದರಿಯಲ್ಲೇ ‘ನಾನು ಪಂಕ್ತಿಭೇದದ ಭಾಗವಾಗುವುದಿಲ್ಲ’ ಎಂಬ ಪ್ರಮಾಣವನ್ನು ಭಕ್ತರು ಮಾಡುವಂತಾದರೆ ಎಷ್ಟು ಚೆನ್ನ? ಆ ಬಗ್ಗೆ ಆಂದೋಲನ ರೂಪಿಸಲು ತಾವಷ್ಟೇ ಶಕ್ತರು.

ಶ್ರೀಗಳೇ, ಇತರ ಮಠಾಧಿಪತಿಗಳಂತೆ ತಾವು ಪೂಜಾ ಕೈಂಕರ್ಯಗಳಲ್ಲಷ್ಟೇ ಕಳೆದುಹೋಗದೆ, ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತೀರಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತೀರಿ ಎಂಬ ಕಾರಣದಿಂದಲೇ ನನ್ನಂಥ ಹಲವರು ನಿಮ್ಮನ್ನು ಕುತೂಹಲದಿಂದ ಗಮನಿಸುತ್ತೇವೆ. ಸಾಮರಸ್ಯದ, ಸಮಾನತೆಯ ಸಮಾಜ ನಿರ್ಮಾಣದೆಡೆಗೆ ನಿಮ್ಮ ನಡಿಗೆ ಚಾಲ್ತಿಯಲ್ಲಿರಲಿ ಎಂದು ಬಯಸುತ್ತೇವೆ. ಹಾಗಾಗಿ ಇಷ್ಟೆಲ್ಲಾ ಬರೆಯಬೇಕಾಯಿತು.

ಇಂತಿ,
ನಿಮ್ಮ ಅಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT