ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಟ್ರೋನಿಕ್ಸ್ ಪ್ಯೂರ್‌ಸೌಂಡ್ ಚಿಕ್ಕ ಸ್ಟೀರಿಯೋ ಸ್ಪೀಕರ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಬೈಲ್ ಫೋನ್‌ಗಳು ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಅತಿ ಜನಪ್ರಿಯವಾದಂತೆ ಅವುಗಳ ಜೊತೆ ಬಳಸಲು  ಕೆಲವು ಗ್ಯಾಜೆಟ್‌ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಅವುಗಳೆಂದರೆ ಬ್ಲೂಟೂತ್ ಸಾಧನ, ಹೆಡ್‌ಫೋನ್, ಸ್ಪೀಕರ್, ಬ್ಲೂಟೂತ್ ಸ್ಪೀಕರ್ –ಇತ್ಯಾದಿಗಳು. ಒಂದು ಚಿಕ್ಕ, ಸುಂದರ ಆದರೆ ಮೋನೋ ಬ್ಲೂಟೂತ್ ಸ್ಪೀಕರ್ ಒಂದನ್ನು ಕಳೆದ ವಾರ ವಿಮರ್ಶೆ ಮಾಡಲಾಗಿತ್ತು.

ಈ ವಾರ ಇನ್ನೊಂದು ಚಿಕ್ಕ ಸ್ಪೀಕರ್‌ನ ವಿಮರ್ಶೆ. ಇದರಲ್ಲಿ ಬ್ಲೂಟೂತ್ ಸೌಲಭ್ಯ ಇಲ್ಲ. ಆದರೆ ಇದು ಸ್ಟೀರಿಯೋ ಸ್ಪೀಕರ್ ಆಗಿದೆ. ಅಷ್ಟು ಮಾತ್ರವಲ್ಲ ಇನ್ನೂ ಹಲವಾರು ಸೌಲಭ್ಯಗಳಿವೆ. ಬನ್ನಿ ಪೋರ್ಟ್ರೋನಿಕ್ಸ್‌ಪ್ಯೂರ್‌ಸೌಂಡ್‌ ಸ್ಟೀರಿಯೋ ಸ್ಪೀಕರ್ (Portronics Pure Sound Portable Speaker) ಕಡೆ ನಮ್ಮ ಗಮನ ಹರಿಸೋಣ.   

ಗುಣವೈಶಿಷ್ಟ್ಯಗಳು
2 ಚಾನೆಲ್ ಸ್ಟೀರಿಯೋ, ಎರಡು ಚಿಕ್ಕ ಸ್ಪೀಕರ್‌ಗಳು, ಎಫ್ಎಂ ರೇಡಿಯೋ, ಯುಎಸ್‌ಬಿ ಡ್ರೈವ್ ಜೋಡಿಸಬಹುದು, ಯುಎಸ್‌ಬಿ ಚಾರ್ಜಿಂಗ್ ಕಿಂಡಿ, ಆಕ್ಸಿಲಿಯರಿ 3.5 ಮಿ.ಮೀ. ಕಿಂಡಿ, 3.5 ಮಿ.ಮೀ. ಹೆಡ್‌ಫೋನ್‌ ಕಿಂಡಿ, ಮೈಕ್ರೋ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2 ವಾಟ್ ಸಂಗೀತ ಶಕ್ತಿ, 4 ಓಮ್ ಸ್ಪೀಕರ್ ಇಂಪೆಡೆನ್ಸ್, 1000mmAh ಶಕ್ತಿಯ ತೆಗೆಯಬಹುದಾದ ಬ್ಯಾಟರಿ, ಒಮ್ಮೆ ಪೂರ್ತಿ ಚಾರ್ಜ್ ಆದರೆ ಸುಮಾರು 8 ಗಂಟೆ ಕೆಲಸ ಮಾಡುತ್ತದೆ, 202 x 59 x 30ಮಿ.ಮೀ. ಗಾತ್ರ, 195 ಗ್ರಾಂ ತೂಕ, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹1,400.

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಸ್ಪೀಕರ್‌ ಮೇಲ್ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಇದೇ ಸ್ವಿಚ್ಎಫ್ಎಂ ರೇಡಿಯೋ ಅಥವಾ ಸಂಗೀತ ಎಂದು ಆಯ್ದುಕೊಳ್ಳಲು ಸಹಾಯ ಮಾಡುತ್ತದೆ. ಈ ಸ್ವಿಚ್ ಅನ್ನು ಸಂಗೀತ ಎಂದು ಆಯ್ಕೆ ಮಾಡಿಕೊಂಡಾಗ ಯುಎಸ್‌ಬಿ ಡ್ರೈವ್, ಮೈಕ್ರೋಎಸ್‌ಡಿ ಅಥವಾ ಆಕ್ಸಿಲಿಯರಿ ಕೇಬಲ್ ಮೂಲಕ ಸಂಗೀತ ಆಕರವನ್ನು ಜೋಡಿಸಿ ಅದಕ್ಕೆ ಸ್ಪೀಕರ್ ಆಗಿ ಇದನ್ನು ಬಳಸಬಹದು.

ಸ್ಪೀಕರ್ ನ ಮುಂಭಾಗದ ಬಲಭಾಗದಲ್ಲಿ ವೃತ್ತಾಕಾರದಲ್ಲಿ ಕೆಲವು ಬಟನ್‌ಗಳಿವೆ. ಇವುಗಳು ವಾಲ್ಯೂಮ್ ಹೆಚ್ಚು-ಕಡಿಮೆ, ಮುಂದಿನ-ಹಿಂದಿನ ಹಾಡಿಗೆ ಲಂಘನ, ಪ್ಲೇ/ಪಾಸ್ ಇತ್ಯಾದಿ ಕೆಲಸಗಳನ್ನು ಮಾಡುತ್ತವೆ. ಮುಂದಿನ-ಹಿಂದಿನ ಹಾಡಿಗೆ ಹೋಗುವ ಸ್ವಿಚ್ ರೇಡಿಯೋವನ್ನು ಆಯ್ಕೆ ಮಾಡಿಕೊಂಡಾಗ ಮುಂದಿನ ಅಥವಾ ಹಿಂದಿನ ರೇಡಿಯೋ ಸ್ಟೇಶನ್ ಅನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಸ್ಪೀಕರ್‌ನ ಬಲಭಾಗದಲ್ಲಿ ಎಲ್ಲ ಕಿಂಡಿಗಳಿವೆ. ಮೈಕ್ರೋಎಸ್‌ಡಿ ಕಾರ್ಡ್‌ನಲ್ಲಿ ಎಂಪಿ3 ಪೈಲ್‌ಗಳಿದ್ದರೆ ಅದನ್ನು ಜೋಡಿಸಿ ಆಲಿಸಬಹುದು. ನಿಮ್ಮ ಸಂಗೀತವು ಯುಎಸ್‌ಬಿ ಡ್ರೈವ್‌ನಲ್ಲಿದ್ದರೆ ಅದನ್ನೂ ಇಲ್ಲಿ ಜೋಡಿಸಬಹುದು. ಈ ಸ್ಪೀಕರ್ ಮಾತ್ರವಲ್ಲ, ಬಹುತೇಕ ಆಂಪ್ಲಿಫೈಯರ್, ಫೋನ್‌ಗಳು, ಕಾರ್ ಆಡಿಯೋ ಸಿಸ್ಟಮ್‌ಗಳು– ಈ ಎಲ್ಲ ಸಾಧನಗಳಲ್ಲಿ ಬಳಸಬೇಕಾದರೆ ನಿಮ್ಮ ಯುಎಸ್‌ಬಿ ಡ್ರೈವ್ ಅನ್ನು FAT32 ವಿಧಾನದಲ್ಲಿ ಫಾರ್ಮ್ಯಾಟ್ ಮಾಡಿರತಕ್ಕದ್ದು.

ನಿಮ್ಮ ಮೊಬೈಲ್ ಫೋನಿಗೆ ಇದನ್ನು ಸ್ಪೀಕರ್ ಆಗಿ ಜೋಡಿಸಲು ಆಕ್ಸಿಲಿಯರಿ ಕಿಂಡಿ ಇದೆ. ಇದನ್ನು ಫೋನಿಗೆ ಅವರೇ ನೀಡಿರುವ ಕೇಬಲ್ ಮೂಲಕ ಜೋಡಿಸಬಹುದು. ಇದೇ ಮಾದರಿಯಲ್ಲಿ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೂ ಜೋಡಿಸಬಹುದು. ಈ ಸ್ಪೀಕರ್‌ನ ಧ್ವನಿಯ ಗುಣಮಟ್ಟ ಅಷ್ಟಕ್ಕಷ್ಟೆ. ತುಂಬ ವಾಲ್ಯೂಮ್ ನೀಡಿ ಪ್ಲೇ ಮಾಡಿದರೆ ಕಿವಿಗೆ ಕಿರಿಕಿರಿಯಾಗುತ್ತದೆ.

ಎರಡು ಸ್ಪೀಕರ್ ಇರುವುದರಿಂದ ಇದರಲ್ಲಿ ಸ್ಟೀರಿಯೋ ಧ್ವನಿಯ ಪುನರುತ್ಪತ್ತಿ ಆಗುತ್ತದೆ. ಆದರೆ ಸ್ಪೀಕರ್‌ಗಳ  ಅಂತರ ಕೇವಲ 5 ಸೆಂ.ಮೀ. ದೂರ ಇದೆ. ತುಂಬ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಿದ್ದ ಬೋಸ್ ಸೌಂಡ್‌ಲಿಂಕ್ ಮಿನಿ ಸ್ಪೀಕರ್‌ನಲ್ಲೂ ಸ್ಪೀಕರ್‌ಗಳ ಅಂತರ ಹೀಗೆ ಅತಿ ಕಡಿಮೆ ಇತ್ತು. ಆದರೆ ಅದು ಬೋಸ್. ಆದುದರಿಂದ ಅಷ್ಟು ಚಿಕ್ಕದಾಗಿದ್ದರೂ ಉತ್ತಮ ಸ್ಟೀರಿಯೋ ಹಾಗೂ ಮೂರು ಆಯಾಮದ ಧ್ವನಿಯ ಅನುಭವ ಬರುತ್ತಿತ್ತು.

ಅದರ ಬೆಲೆಯೂ ಹಾಗೆಯೇ ಇದೆ (₨16,000). ಇಲ್ಲಿ ಬೋಸ್ ಸ್ಪೀಕರ್ ಜೊತೆ ಇದನ್ನು ಹೋಲಿಸುತ್ತಿಲ್ಲ. ಈ ಸ್ಪೀಕರ್‌ನಲ್ಲಿ ಉತ್ತಮ ಸ್ಟೀರಿಯೋ ಹಾಗೂ ಮೂರು ಆಯಾಮದ ಧ್ವನಿಯ ಅನುಭವ ಆಗುವುದಿಲ್ಲ. ಅತಿ ಕಡಿಮೆ ಕಂಪನಾಂಕದ ಧ್ವನಿ (bass) ಹಾಗೂ ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿ ತೃಪ್ತಿದಾಯಕವಾಗಿಲ್ಲ. 

ಈ ಸ್ಪೀಕರ್‌ನ ಎರಡು ಪ್ರಮುಖ ಕೊರತೆಗಳೆಂದರೆ ಎಲ್‌ಸಿಡಿ ಪರದೆ (ಡಿಸ್‌ಪ್ಲೇ) ಮತ್ತು ಬ್ಲೂಟೂತ್ ಸೌಲಭ್ಯ ಇಲ್ಲದಿರುವುದು. ಇದೇ ಸ್ಪೀಕರ್‌ಗೆ ಬ್ಲೂಟೂತ್ ಸೌಲಭ್ಯ ಇರುವ ಇನ್ನೊಂದು ಮಾದರಿಯನ್ನು ಇದೇ ಕಂಪೆನಿ ತಯಾರಿಸಿದೆ. ಬ್ಲೂಟೂತ್ ಬೇಕಿದ್ದವರು ಅದನ್ನು ಕೊಳ್ಳಬಹುದು. ಎಲ್‌ಸಿಡಿ ಇಲ್ಲದಿರುವುದು ಮಾತ್ರ ನಿಜಕ್ಕೂ ಕೊರತೆಯೇ. ಇದು ವೇದ್ಯವಾಗುವುದು ರೇಡಿಯೋವನ್ನು ಬಳಸುವಾಗ. ಯಾವ ಸ್ಟೇಶನ್‌ಗೆ ಟ್ಯೂನ್ ಆಗಿದೆ ಎಂದು ಗೊತ್ತಾಗುವುದೇ ಇಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಕೈಗೆಟುಕುವ ಬೆಲೆಗೆ ಹಲವು ಸವಲತ್ತುಗಳನ್ನು ನೀಡುವ ಒಂದು ಪುಟಾಣಿ ಸ್ಪೀಕರ್ ಎನ್ನಬಹುದು. ಉತ್ತಮ ಗುಣಮಟ್ಟದ ಸಂಗೀತ ಆಲಿಸಬೇಕಿದ್ದವರು ಮಾತ್ರ ಜಾಸ್ತಿ ಹಣ ನೀಡಿ ಬೇರೆ ಸ್ಪೀಕರ್ ಕೊಳ್ಳುವುದು ಒಳ್ಳೆಯದು.

ವಾರದ ಆಪ್ (app)
ಮೂರು ಆಯಾಮದಲ್ಲಿ ಮಾನವ ದೇಹ
ನೀವು ಜೀವಶಾಸ್ತ್ರದ ವಿದ್ಯಾರ್ಥಿ ಅಥವಾ ಶಿಕ್ಷಕ ಆಗಿದ್ದಲ್ಲಿ ಈ ಕಿರುತಂತ್ರಾಂಶ (ಆಪ್) ನಿಮಗೆ ಬೇಕು. ಇದು ಆ್ಯಾಂಡ್ರಾಯಿಡ್‌ನಲ್ಲಿ ಕೆಲಸ ಮಾಡುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 3 ಎಂದು ಹುಡುಕಿ ನಿಮ್ಮ ಫೋನಿಗೆ ಹಾಕಿಕೊಳ್ಳಿ. ಮಾನವ ದೇಹದ ಹಲವು ಭಾಗಗಳನ್ನು ಅಂದರೆ ನರಮಂಡಲ, ಮಾಂಸ, ರಕ್ತನಾಳ, ಮೆದುಳು, ಹೃದಯ, ಮೂತ್ರಪಿಂಡ, ಇತ್ಯಾದಿಗಳನ್ನು ಇದು ಮೂರು ಆಯಾಮಗಳಲ್ಲಿ ತೋರಿಸುತ್ತದೆ.

ಉದಾಹರಣೆಗೆ ಮೂತ್ರಪಿಂಡಗಳು, ಅವಕ್ಕೆ ಜೋಡಣೆಯಾಗುವ ರಕ್ತನಾಳಗಳನ್ನು ಹಲವು ಕೋನಗಳಲ್ಲಿ ತಿರುಗಿಸಿ, ಹಿಗ್ಗಿಸಿ, ಕುಗ್ಗಿಸಿ, ನೋಡಬಹುದು. ವಿಡಿಯೊಗಳನ್ನು ಮತ್ತು ಚಿತ್ರಸಂಚಲನೆಗಳನ್ನು (ಅನಿಮೇಶನ್) ನಿಮ್ಮ ಫೋನಿಗೆ ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲೂ ವೀಕ್ಷಿಸಬಹುದು. ಇದನ್ನು ಬಳಸಲು ನಿಮ್ಮಲ್ಲಿ ಮೇಲ್ದರ್ಜೆಯ ಫೋನ್ ಅಂದರೆ ಕನಿಷ್ಠ 1 ಮೆಗಾಬೈಟ್ RAM ಮತ್ತು ಡೌನ್‌ಲೋಡ್‌ ಮಾಡಲು ತುಂಬ ಸಂಗ್ರಹ ಶಕ್ತಿ ಇರತಕ್ಕದ್ದು. ಜೊತೆಗೆ ಉತ್ತಮ ಅಂತರ್ಜಾಲ ಸಂಪರ್ಕ (ವೈಫೈ ಅಥವಾ 3ಜಿ) ಬೇಕು.

ಗ್ಯಾಜೆಟ್ ಸುದ್ದಿ
ಜೀವ ಉಳಿಸಿದ ಸ್ಮಾರ್ಟ್‌ಫೋನ್
ಅಂಗಿಯ ಕಿಸೆಯಲ್ಲಿ ಫೋನ್ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ವೈಜ್ಞಾನಿಕ ಆಧಾರ ಇನ್ನೂ ದೊರಕಿಲ್ಲ. ಅದನ್ನು ಬಿಡಿ. ಕಿಸೆಯಲ್ಲಿ ದೊಡ್ಡ ಗಾತ್ರದ ಫೋನ್ ಇಟ್ಟುಕೊಂಡಿದ್ದರಿಂದ ಒಬ್ಬಾತನ ಜೀವ ಉಳಿದ ಕತೆ ಚೀನಾ ದೇಶದಿಂದ ವರದಿಯಾಗಿದೆ. ಆತನಿಗೆ ಒಬ್ಬಾತ ಚಿಕ್ಕ ಜಗಳದ ಕಾರಣ ಎದೆಗೆ ಗುರಿಯಟ್ಟು ಗುಂಡು ಹಾರಿಸಿದ.

ಅಂಗಿಯ ಕಿಸೆಯಲ್ಲಿದ್ದ ಫೋನ್ ಆ ಗುಂಡನ್ನು ತಡೆಯಿತು. ಗುಂಡನ್ನು ಪೂರ್ತಿಯಾಗಿ ನಿಲ್ಲಿಸದಿದ್ದರೂ ಗುಂಡಿನಿಂದಾಗಿ ಆತ ಸಾಯದಂತೆ ಫೋನ್ ನೋಡಿಕೊಂಡಿತು. ಇದೇ ರೀತಿಯ ಕತೆ ಹಿಂದೆಯೂ ಒಮ್ಮೆ ವರದಿಯಾಗಿತ್ತು. ಎರಡು ಕತೆಗಳಲ್ಲೂ ಬಳಕೆಯಾದುದು ಸ್ಮಾರ್ಟ್‌ಫೋನ್‌ಗಳು. ಅದೂ ದೊಡ್ಡ ಗಾತ್ರದವು. ಒಂದು ನೋಕಿಯಾ ಇನ್ನೊಂದು ಸ್ಯಾಮ್‌ಸಂಗ್.

ಗ್ಯಾಜೆಟ್ ತರ್ಲೆ
ಕೋಪ ಬಂದಾಗ ಯಾವ ಉದ್ಯಮಿಯ ಹೆಂಡತಿ ಯಾವ ರೀತಿ ಗಂಡನ ಮೇಲೆ ಕೋಪ ತೋರಿಸುತ್ತಾಳೆ ಗೊತ್ತಾ?
* ಕಂಪ್ಯೂಟರ್ ಆಪರೇಟರ್‌ನ ಹೆಂಡತಿ "ಶಿಫ್ಟ್ ಡಿಲೀಟ್ ಮಾಡ್ಬಿಡ್ತೀನಿ ಹುಶಾರ್"
* ಮೊಬೈಲ್ ರಿಪೇರಿಯವನ ಹೆಂಡತಿ "ಸಿಮ್ ಕಿತ್ಹಾಕ್ಬಿಡ್ತೀನಿ ಹುಶಾರ್"
* ಫೋಟೋಗ್ರಾಫರ್‌ನ ಹೆಂಡತಿ "ಔಟ್ ಆಫ್ ಫೋಕಸ್ ಮಾಡ್ಬಿಡ್ತೀನಿ ಹುಶಾರ್"

ಗ್ಯಾಜೆಟ್ ಸಲಹೆ
ಖುಶಿ ಕುಮಾರ್ ಅವರ ಪ್ರಶ್ನೆ:
₹ 7,000ದಲ್ಲಿ ಯಾವ ಫೋನ್ ತೆಗೆದುಕೊಳ್ಳಬಹುದು?
ಉ:  ಮೋಟೋ-ಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT