ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶಗಳೇನೊ ಪ್ರಕಟ, ಬದಲಾವಣೆ ನಿಕಟವೇ?

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಸಾಮಾಜಿಕ ತುಮುಲ ಅನ್ನಿ ಅಥವಾ ಸಾರ್ವತ್ರಿಕ ತಲೆಬಿಸಿ ಅನ್ನಿ. ಹಿಂದೆಂದೂ ಕಂಡಿರದಷ್ಟು ತೀವ್ರ ಸ್ತರದ ಚಲನಶೀಲತೆ ಕಳೆದ ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂತು. ಒಂದೆಡೆ ಚುನಾವಣೆಯ ಫಲಿತಾಂಶ ಮತ್ತು ಅದಕ್ಕೆ ಸಂಬಂಧಿಸಿದ ರಾಜಕೀಯ ಏಳುಬೀಳುಗಳ ಕುರಿತ ಕೊನೆಯಿಲ್ಲದ ವಾಗ್ವಾದಗಳು. ಇನ್ನೊಂದೆಡೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುರಿತ ಚರ್ಚೆಗಳು ಮತ್ತೊಂದೆಡೆ ಪಿ.ಯು.ಸಿ ಫಲಿತಾಂಶದ ವಿಶ್ಲೇಷಣೆಗಳು. ಹಿಂದೆಂದೂ ಈ ಮೂರೂ ಒಟ್ಟಿಗೇ ಸಂಭವಿಸಿರಲಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೋಲು ಗೆಲುವುಗಳ ವಿದ್ಯಮಾನಗಳು ಒಮ್ಮೆಲೇ ಜರುಗಿರಲಿಲ್ಲ. ಬದುಕಿನ ದಿಶೆಯನ್ನೇ ಬದಲಿಸಬಲ್ಲ ಉದ್ವಿಗ್ನತೆಯನ್ನು, ಹರ್ಷ/ಕ್ಲೇಶಗಳನ್ನು ಏಕಕಾಲಕ್ಕೆ ತಂದಿರಲಿಲ್ಲ.

ಸಮಾಜ ಕೆಲವೊಮ್ಮೆ ತೀರ ಕ್ರೂರಿಯಾಗುತ್ತದೆ. ಗೆದ್ದವರನ್ನು ಹೆಗಲ ಮೇಲೆ ಹೊತ್ತು, ಪಟಾಕಿಯ ಹೊಗೆಗದ್ದಲವೆಬ್ಬಿಸಿ, ಸಂಭ್ರಮಿಸುತ್ತ ಸೋತವರನ್ನು ಹಂಗಿಸುತ್ತ ಅವರ ಕ್ಲೇಶಗಳನ್ನು ಇನ್ನಷ್ಟು ಹೆಚ್ಚಿಸುತ್ತ ಹೋಗುತ್ತದೆ. ಹಾಗಾಗಬಾರದು; ಗೆದ್ದವರನ್ನು ಸದ್ಯಕ್ಕೆ ಕಡೆಗಣಿಸಬೇಕು. ಸೋತವರಿಗೆ ಸಾಂತ್ವನ ಹೇಳಬೇಕು; ನೆರವಿನ ಹಸ್ತ ನೀಡಬೇಕು. ಬದುಕನ್ನು ಹೊಸ ಹುರುಪಿನಲ್ಲಿ ಎದುರಿಸಲು ಅವರನ್ನು ಹುರಿದುಂಬಿಸಬೇಕು.

ಸೋತವರಿಗೆ ನೆರವಾಗಬಲ್ಲ ಹೊಸ ಸಂಗತಿಯೊಂದು ಈ ವಾರ ವಿಜ್ಞಾನ ಲೋಕದಲ್ಲಿ ಪ್ರಕಟವಾಗಿದೆ. ಮನಸ್ಸು ತೀರ ಒತ್ತಡಕ್ಕೆ ಸಿಲುಕಿದಾಗ ಒಂದು ಕಡೆ ಶಾಂತವಾಗಿ ಕೂತು ಮನಸ್ಸನ್ನು ಧ್ಯಾನಸ್ಥಗೊಳಿಸಿದರೆ ರಕ್ತದಲ್ಲಿ ಕೆಲವು ಬದಲಾವಣೆಗಳಾಗಿ ಜರ್ಝರಿತ ದೇಹ ತನ್ನಂತಾನೇ ಸುಸ್ಥಿತಿಗೆ ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಬದುಕನ್ನು ಬದಲಿಸಬಲ್ಲ ಘಟನೆಗಳು ನಡೆದಾಗ ಮನಸ್ಸನ್ನು ಸ್ಥಿಮಿತಕ್ಕೆ ತರಬಲ್ಲ ತಂತ್ರಗಳ ಬಗ್ಗೆ ಭಾರತೀಯ ಚಿಂತನ ಪರಂಪರೆಯಲ್ಲಿ ಗಮನಾರ್ಹ ಉದಾಹರಣೆಗಳಿವೆ. ಧ್ಯಾನ, ಯೋಗ, ಮಂತ್ರ, ಜಪತಪಗಳ ಕುರಿತು ಅಂಕಣಕಾರ ಎಚ್.ಎಸ್. ಶಿವಪ್ರಕಾಶ್ ಈಚೆಗೆ ಇದೇ ಜಾಗದಲ್ಲಿ ಎರಡು ಕಂತುಗಳಲ್ಲಿ ಬರೆದಿದ್ದಾರೆ. ಒಬ್ಬೊಬ್ಬರೇ ಕೂತು ಏಕಾಂತದಲ್ಲಿ ನಡೆಸಬಲ್ಲ ಈ ಕ್ರಿಯೆಗಳ ಜತೆಗೆ ಜಪ, ಮಂತ್ರ, ಭಜನೆ ಅಷ್ಟೇಕೆ ವೃಂದಗಾನ, ಗೀಗೀ ಪದ, ಲಾವಣಿಗಳಿಂದಲೂ ಉತ್ಸಾಹ ಚಿಮ್ಮುತ್ತದೆ ಎಂಬುದು ಗೊತ್ತಿದೆ. ಚಿಂತನ ಪರಂಪರೆಯಂಥ ದೊಡ್ಡ ಪದಗಳನ್ನು ಬಳಸದ ಬುಡಕಟ್ಟು ಜನರೂ ಒಟ್ಟಿಗೆ ನಡೆಸುವ ಆಚರಣೆಗಳಲ್ಲಿ ದುಃಖವನ್ನು ದುರ್ಬಲಗೊಳಿಸಬಲ್ಲ, ವೈಯಕ್ತಿಕ ತ್ವೇಷಗಳನ್ನು ಶಮನಗೊಳಿಸಬಲ್ಲ ಗುಣವಿದೆ ಎಂದು ತಜ್ಞರು ಹೇಳುತ್ತಾರೆ.
ಮನಸ್ಸನ್ನು ತಹಬಂದಿಗೆ ತರುವುದಷ್ಟೇ ಅಲ್ಲ, ಧ್ಯಾನ, ಮಂತ್ರಗಳು ರಕ್ತದ ಗುಣವನ್ನೂ ಬದಲಿಸುತ್ತವೆ ಎಂಬುದನ್ನು ಬಾಸ್ಟನ್‌ನ ವೈದ್ಯ ಸಂಶೋಧಕರು ಮೊನ್ನೆ ಸೋಮವಾರ ಪ್ರಕಟಿಸಿದ್ದಾರೆ. ದುಃಖ- ದುಗುಡಗಳಲ್ಲಿ ಮುಳುಗಿದವರು, ಸಂಭ್ರಮಾಚರಣೆಗಳಿಂದ ಸುಸ್ತಾದವರು, ಬೇಸರ, ವಿಷಣ್ಣತೆಯಿಂದ ಬಳಲಿದವರು ದಿನದ ತುಸು ಹೊತ್ತು ಧ್ಯಾನ -ಭಜನೆಯಲ್ಲಿ ತೊಡಗಿದರೆ ದೇಹದಲ್ಲಿರುವ ಜೀವಕೋಶಗಳಿಗೂ ಚೈತನ್ಯ ಸಿಗುತ್ತದೆ ಎಂದು ಹೇಳಿದ್ದಾರೆ. `ಇದು ಹೊಸಯುಗದ ಇನ್ನೊಂದು ಬೊಗಳೆ (ನಾನ್‌ಸೆನ್ಸ್) ಅಲ್ಲ, ವೈಜ್ಞಾನಿಕವಾಗಿ ಕಂಡುಬಂದ ಸಂಗತಿ' ಎಂತಲೂ ಹೇಳಿದ್ದಾರೆ.

ಧ್ಯಾನದಿಂದ ದೇಹದ ಮೇಲೆ ಏನೇನು ಪರಿಣಾಮಗಳಾಗುತ್ತವೆ ಎಂಬುದನ್ನು ಕಂಡು ಹಿಡಿಯಲೆಂದು ಹರ್ಬರ್ಟ್ ಬೆನ್ಸನ್ ನೇತೃತ್ವದ ತಂಡದವರು 26 ಜನರನ್ನು ಒಂದೆಡೆ ಕೂರಿಸಿ ಅವರಿಗೆ ತಾವೇ ರೂಪಿಸಿದ ಇಪ್ಪತ್ತು ನಿಮಿಷಗಳ ಜಪ ತಂತ್ರವನ್ನು ಬೋಧಿಸಿದರು. ಮನಸ್ಸನ್ನು ಏಕಾಗ್ರಗೊಳಿಸುವ ಧ್ಯಾನ, ಪ್ರಾಣಾಯಾಮ ಮತ್ತು ಮಂತ್ರೋಚ್ಚಾರಣೆ ಅದರಲ್ಲಿದ್ದವು  (ನಮ್ಮಲ್ಲಿ ಈ ಮೂರನ್ನೂ ಸೇರಿಸಿ  `ಸಂಧ್ಯಾವಂದನೆ' ಎನ್ನುತ್ತಾರೆ. ಅದ್ಯಾಕೊ ಹೆಣ್ಣುಮಕ್ಕಳನ್ನು ಈ ಕ್ರಿಯೆಯಿಂದ ದೂರವಿಟ್ಟು ಕೇವಲ ಬ್ರಾಹ್ಮಣ ವಟುಗಳಿಗೆ ಇದನ್ನು ಬೋಧಿಸುತ್ತಾರೆ). ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡವರಿಗೆ ಆರಂಭದಲ್ಲಿ ರಕ್ತ ಪರೀಕ್ಷೆ ಮಾಡಿಸಿ ನಂತರ ಎರಡು ತಿಂಗಳು ಕಾಲ ಪ್ರತಿ ದಿನವೂ ಲ್ಯಾಬಿಗೆ ಕರೆಸಿ ಸಂಧ್ಯಾವಂದನೆಗೆ ಕೂರಿಸುತ್ತಿದ್ದರು. ಪೂರ್ತಿ ಕೋರ್ಸ್ ಮುಗಿದ ಬಳಿಕ ಮತ್ತೊಮ್ಮೆ ಅವರೆಲ್ಲರ ರಕ್ತವನ್ನು ಪರೀಕ್ಷೆ ಮಾಡಿದರು.

ಅದು ಸಾಮಾನ್ಯ ರಕ್ತಪರೀಕ್ಷೆ ಅಲ್ಲ; ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿ ನಮ್ಮ ರಕ್ತಗುಣವನ್ನು ವ್ಯಕ್ತಪಡಿಸುವ ಸುಮಾರು 30 ಸಾವಿರ ಜೀನ್‌ಗಳಿರುತ್ತವೆ. ಅವೆಲ್ಲವನ್ನೂ ಒಂದು ಮಂತ್ರಿ ಮಂಡಲ ಎಂದು ಪರಿಗಣಿಸೋಣ. ಯಾವ ಮನುಷ್ಯನ ವರ್ಣತಂತುವಿನ ಎಲ್ಲೆಲ್ಲಿ ಯಾವ ಬಗೆಯ ಜೀನ್‌ಗಳಿವೆ ಅವುಗಳ ಖಾತೆ ಏನು ಎಂಬುದನ್ನು ಪತ್ತೆಹಚ್ಚಲು ತಳಿನಕ್ಷೆ ತಯಾರಿಸುತ್ತಾರೆ. ಅಷ್ಟು ಮಾಡಿದರೆ ಸಾಲದು. ಇವೊತ್ತು, ಈ ಕ್ಷಣದಲ್ಲಿ ಯಾವ ಯಾವ ಜೀನ್‌ಗಳು ಏನೇನು ಕೆಲಸ ಮಾಡುತ್ತಿವೆ ಎಂಬುದರ ( `ಜೀನ್  ಪ್ರೊಫೈಲ್') ಚಿತ್ರಣ ಪಡೆಯುವುದೂ ಈಗ ಸಾಧ್ಯವಿದೆ. ಅಂದರೆ ಯಾವ ಯಾವ ಮಂತ್ರಿಗಳು ಇವೊತ್ತು ಏನೇನು ಕೆಲಸದಲ್ಲಿ ತಲ್ಲೀನರಾಗಿದ್ದಾರೆ, ಯಾರು ಚುರುಕಾಗಿ ಕರ್ತವ್ಯ ನಿರತರಾಗಿದ್ದಾರೆ, ಯಾರು ಉದ್ದ ಮಲಗಿದ್ದಾರೆ, ಯಾರು ಅಡ್ಡ ಕಸುಬಿನಲ್ಲಿ ತೊಡಗಿದ್ದಾರೆ ಎಂಬುದರ ಸ್ಕ್ಯಾನ್ ವರದಿ ಸಿಗುತ್ತದೆ. ಬಾಸ್ಟನ್ ವಿಜ್ಞಾನಿಗಳು ಧ್ಯಾನದ ಕೋರ್ಸ್ ಮುಗಿಸಿದ 26 ಜನರ ತಳಿಚಿತ್ರಣವನ್ನು ಪಡೆದರು. ದೇಹವನ್ನು ಕ್ರಿಯಾಶೀಲ ಮಾಡಬಲ್ಲ ಜೀನ್‌ಗಳ ಸಂಖ್ಯೆ ಹೆಚ್ಚಾಗಿರುವುದು ಹಾಗೂ ದೇಹವನ್ನು ಜಡ್ಡಿನತ್ತ ನೂಕಬಲ್ಲ ಜೀನ್‌ಗಳ ಸಂಖ್ಯೆ ಕಡಿಮೆಯಾಗಿರುವುದು ತಮಗೆ ಕಂಡುಬಂದಿದೆ ಎಂದು ವರದಿ ಮಾಡಿದರು.

ದೇಹವನ್ನು ಚುರುಕಾಗಿಸಬಲ್ಲ ಜೀನ್‌ಗಳು ಏನೇನು ಮಾಡುತ್ತವೆ? ರಕ್ತಕೋಶಗಳಿಗೆ ಶಕ್ತಿಯನ್ನು ತುಂಬಬಲ್ಲ ಮೈಟೊಕಾಂಡ್ರಿಯಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಲ್ಲ ಇನ್ಸೂಲಿನ್ ಸ್ರಾವವನ್ನು ಹೆಚ್ಚಿಸುತ್ತವೆ. ರಕ್ತಕೋಶಗಳ ಸವಕಳಿಯನ್ನು ತಡೆಯುತ್ತವೆ. ಅಂದರೆ ಮಂತ್ರಿಗಳು ಅಧಿಕಾರಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಕಡತಗಳು ಚುರುಕಾಗಿ ಚಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಬಜೆಟ್‌ನಲ್ಲಿ ತೆಗೆದಿರಿಸಿದ ಹಣ ಆಯಾ ಬಾಬಿಗೇ ವಿನಿಯೋಗವಾಗುತ್ತಿದೆ. ಹಗರಣಗಳ ಸಂಖ್ಯೆ ಹೆಚ್ಚದಂತೆ ಜಾಗೃತ ದಳವೂ ಚುರುಕಾಗಿದೆ. ಲೋಕಾಯುಕ್ತರ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಯುತ್ತಿಲ್ಲ.....

ನಮ್ಮ ಆರೋಗ್ಯದ ಮೇಲೆ ನಿಗಾ ಇಡಬಲ್ಲ ಇನ್ನೊಂದು ಬಗೆಯ  `ಎನ್ನೆಫ್ ಕಪ್ಪಾ.ಬಿ'  ಹೆಸರಿನ ಭಿನ್ನ ಮುಖಂಡ ಜೀನ್ ಕೂಡ ಮನುಷ್ಯ ದೇಹದಲ್ಲಿದೆ. ಅದು ಅನೇಕ ಜೀನ್‌ಗಳನ್ನು ನಿಯಂತ್ರಿಸುವ ಮಾಸ್ಟರ್ ಜೀನ್ ಎಂದೇ ಪ್ರತೀತಿ ಪಡೆದಿದೆ. ಅದು ತನ್ನ ಸಂಗಾತಿಗಳ ಜೊತೆ ಸೇರಿ ಎರ‌್ರಾಬಿರ‌್ರಿ ವರ್ತಿಸಿದರೆ ರಕ್ತದ ಒತ್ತಡ ಹೆಚ್ಚಳ, ಹೃದಯ ಸಂಬಂಧಿ ಕಾಯಿಲೆಗಳು, ದೊಡ್ಡ ಕರುಳಿನ ಊತ, ಕೆಲವು ಬಗೆಯ ಕ್ಯಾನ್ಸರ್‌ಗಳು ತಲೆದೋರುತ್ತವೆ. ಧ್ಯಾನದ ಮೂಲಕ ಈ ಜೀನ್‌ಗಳ ಅತಿರೇಕ ವರ್ತನೆಗಳು ಹದ್ದುಬಸ್ತಿಗೆ ಬರುತ್ತವೆ ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ.

ಮಾನಸಿಕ ಒತ್ತಡದಿಂದಾಗಿ ನಮ್ಮ ದೇಹದಲ್ಲಿ ಏನೇನು ಬದಲಾವಣೆ ಆಗುತ್ತವೆ ಎಂಬುದರ ಬಗ್ಗೆ ಈ ಹಿಂದೆಯೇ ಸಾಕಷ್ಟು ಸಂಶೋಧನೆಗಳು ನಡೆದಿವೆ. ಉದ್ವೇಗ, ಶೋಕ, ಭಯ, ಚಿಂತೆಗಳಂಥ ಒತ್ತಡ ಬಿದ್ದಾಗ ಅವನ್ನು ಶಮನಗೊಳಿಸಲು ಮಿದುಳು ಯತ್ನಿಸುತ್ತದೆ. ನಾನಾ ಬಗೆಯ ಹಾರ್ಮೋನ್‌ಗಳು ರಕ್ತಕ್ಕೆ ಸೇರ್ಪಡೆಗೊಂಡು ದೇಹಕ್ಕೆಲ್ಲ ಪಸರಿಸುತ್ತವೆ. ಇವುಗಳ ಅಡ್ಡ ಪರಿಣಾಮ ಏನೆಂದರೆ, ಪ್ರತಿಯೊಂದು ಜೀವಕೋಶದಲ್ಲೂ ಫ್ರೀ ರ‌್ಯಾಡಿಕಲ್ಸ್ ಎಂಬ ನಂಜಿನ ಕಣಗಳು ತೂರಿಕೊಳ್ಳುತ್ತವೆ. ಅವು ವರ್ಣತಂತುವನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದ್ದರೆ ದೇಹದಲ್ಲಿ ಕ್ರಮೇಣ ಮುಪ್ಪಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂದರೆ ರಕ್ತದ ಅತಿ ಒತ್ತಡ, ಸಂದುನೋವು, ಕೂದಲುದುರು, ಮರೆವು, ಅಶಕ್ತತೆ, ನಿದ್ರಾಹೀನತೆ ಇವೆಲ್ಲ ಅಮರಿಕೊಳ್ಳುತ್ತವೆ ಎಂಬುದು ವೈದ್ಯಲೋಕಕ್ಕೆ ಎಂದೋ ಗೊತ್ತಾಗಿದೆ. ಅಂಥ ಲಕ್ಷಣಗಳ ನಿವಾರಣೆಗೆ ಹೊಸ ಹೊಸ ಔಷಧ ಮಾತ್ರೆಗಳನ್ನು ತಯಾರಿಸುತ್ತ ದೇಹಕ್ಕೆ ತೂರಿಸುವ ನಿಟ್ಟಿನಲ್ಲೇ ಇದುವರೆಗೆ ಯತ್ನಗಳು ನಡೆದಿದ್ದುವೇ ವಿನಾ, ದೇಹದ ಒಳಗೇ ಇರಬಹುದಾದ ಒತ್ತಡ ನಿವಾರಣಾ ತಂತ್ರಗಳತ್ತ ಗಮನ ಅಷ್ಟಾಗಿ ಹರಿದಿರಲಿಲ್ಲ. ಪೂರ್ವದ ದೇಶಗಳ ಧ್ಯಾನತಂತ್ರಗಳು ಅಮೆರಿಕ ಯುರೋಪ್‌ಗಳಲ್ಲೂ ವಿಶ್ವಾಸ ಗಳಿಸತೊಡಗಿದ ಮೇಲೆ ಅವು ದೇಹದ ಮೂಲ ಘಟಕಗಳೆನಿಸಿದ ಜೀನ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ.

ದಿನಕ್ಕೆ ಇಪ್ಪತ್ತು ನಿಮಿಷಗಳಂತೆ ಸತತ ಎರಡು ತಿಂಗಳು ಅವಧಿಯ ಧ್ಯಾನ ಮಾಡಿದವರಲ್ಲಿ ತಳಿಸೂತ್ರದ ಚಟುವಟಿಕೆಗಳಲ್ಲಿ ಸ್ಪಷ್ಟ ಬದಲಾವಣೆಗಳು ಕಂಡುಬಂದಿದೆ. ಹಾಗೆಂದು ಅಷ್ಟು ದೀರ್ಘಾವಧಿಯ ಅಭ್ಯಾಸವೇ ಬೇಕೆಂದಿಲ್ಲ. ಒಂದೇ ಬೈಠಕ್ಕಿನಲ್ಲಿ ಧ್ಯಾನ ಮುಗಿಸಿ ಮೇಲೆದ್ದ ತಕ್ಷಣ ರಕ್ತ ಪರೀಕ್ಷೆ ಮಾಡಿದಾಗಲೂ ಉಪಕಾರಿ ಜೀನ್‌ಗಳು (ಬೈಠಕ್ಕಿನ ಮುಂಚಿಗಿಂತ) ಚುರುಕಾಗಿರುವುದು ಗೊತ್ತಾಗಿದೆ ಎಂದು ಸಂಶೋಧನ ತಂಡದ ಮುಖ್ಯಸ್ಥ ಬೆನ್ಸನ್ ಹೇಳಿದ್ದಾರೆ. `ಪ್ಲೊಸ್-ವನ್' ಅಂತರ್ಜಾಲ ವಿಜ್ಞಾನ ಪತ್ರಿಕೆಯಲ್ಲಿ ಈ ಸಂಶೋಧನೆಯ ವಿವರಗಳು ಪ್ರಕಟವಾಗುತ್ತಲೇ ಅದೊಂದು ಅಚ್ಚರಿಯ ಸುದ್ದಿಯೆಂಬಂತೆ `ನ್ಯೂಸೈಂಟಿಸ್ಟ್' ಮತ್ತು ಇತರ ಅನೇಕ ವಿಜ್ಞಾನ ಪತ್ರಿಕೆಗಳು ವಿವಿಧ ದೇಶಗಳಲ್ಲಿನ ವೈದ್ಯತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಕಟಿಸತೊಡಗಿವೆ. `ಇಂಥ ಫಲಿತಾಂಶ ಬಂದಿದ್ದು ನಿರೀಕ್ಷಿತ ಮತ್ತು ಸ್ವಾಗತಾರ್ಹ'ಎಂದು, ಧ್ಯಾನದ ಬಗ್ಗೆ ಆಸಕ್ತಿ ಇಟ್ಟುಕೊಂಡ ಇತರ ವೈದ್ಯತಜ್ಞರು ಹೇಳಿದ್ದಾರೆ. ಔಷಧ ಕಂಪನಿಗಳ ವಕ್ತಾರರನ್ನು ಮಾತ್ರ ಯಾಕೆ ಕೇಳಿಲ್ಲವೊ?

ಹಾಗೆ ನೋಡಿದರೆ ಇದು ಬಾಸ್ಟನ್ ತಂಡದ ವಿಜ್ಞಾನಿಗಳ ಮೊದಲ ಸಂಶೋಧನೆಯೇನಲ್ಲ. ನಿತ್ಯದ ದಿನಚರಿಯಂತೆ ಹತ್ತಾರು ವರ್ಷಗಳಿಂದ ದಿನವೂ ಧ್ಯಾನ ಮಾಡುತ್ತಿದ್ದವರನ್ನು ಕಳೆದ ವರ್ಷ ಕರೆಸಿ,ರಕ್ತ ಪರೀಕ್ಷೆ ಮಾಡಿ ವಿಜ್ಞಾನಿಗಳು ತಳಿಚಿತ್ರಣ ಪಡೆದಿದ್ದರು. ತಮಗೇ ಅಚ್ಚರಿ ಎನಿಸುವ ಫಲಿತಾಂಶ ಬಂದ ನಂತರವೇ ಹೊಸಬರನ್ನು ಪ್ರಯೋಗಶಾಲೆಗೆ ಕರೆಸಿ ಧ್ಯಾನದ ತರಬೇತಿ ಕೊಟ್ಟು ಇದೀಗ ಪ್ರಬಂಧವನ್ನು ಪ್ರಕಟಿಸಿದ್ದಾರೆ. `ಧ್ಯಾನ ಮುಗಿಸಿ ಏಳುತ್ತಲೇ ಅದರ ಸದ್ಗುಣಗಳು ರಕ್ತಕಣಗಳಲ್ಲೂ ಕಂಡು ಬಂದಿದ್ದು ಈಗಿನ ವಿಶೇಷ'  ಎಂದು ತಂಡದ ವಕ್ತಾರ ಹೇಳಿದ್ದಾರೆ.

ವಿದೇಶೀ ವಿಚಾರಗಳನ್ನು ಬದಿಗಿಟ್ಟು ನಮ್ಮ ಸದ್ಯದ ವರ್ತಮಾನಕ್ಕೆ ಬರೋಣ: ಕಲಿಕೆಯ ಪರೀಕ್ಷೆಯಲ್ಲಿ, ಮತಗಟ್ಟೆಯ ಪರೀಕ್ಷೆಯಲ್ಲಿ ನಿನ್ನೆಮೊನ್ನೆ ಫೇಲಾದವರಿಗೆ ಇದು ಅತೀವ ಸಂಕಟದ, ಕ್ಲೇಶದ ಸಮಯ. ಸೋತ ರಾಜಕಾರಣಿಗಳೇನೊ ಕ್ಯಾಮರಾ ಕಂಡಾಕ್ಷಣ ಚೇತರಿಸಿಕೊಳ್ಳುತ್ತಾರೆ. ಅಥವಾ ಹಾಗೆ ಸೋಗು ಹಾಕುತ್ತಾರೆ. ಎಳೆಯ ವಿದ್ಯಾರ್ಥಿಗಳು ಹಾಗಲ್ಲ. ಅವರು ಚೇತರಿಸಿಕೊಳ್ಳಲು ತುಸು ಕಾಲ ಬೇಕಾಗುತ್ತದೆ. ಪರೀಕ್ಷೆಯ ಒತ್ತಡ, ಪಾಲಕರ ಒತ್ತಡ, ಸರೀಕರ ಒತ್ತಡಗಳನ್ನು ಎದುರಿಸಿ ಇದೀಗ ವೈಫಲ್ಯದ ಒತ್ತಡದಲ್ಲಿ ಸಿಲುಕಿದ ಅವರಿಗೆ ಸುತ್ತಲಿನವರು ಧೈರ್ಯ ತುಂಬಬೇಕು. ಮನೆಯವರಂತೂ ಮಗುವಿನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ತಮ್ಮ ಮಾತು ವರ್ತನೆಗಳಲ್ಲಿ ಸವಿ ತುಂಬಿಕೊಳ್ಳಬೇಕು. ಬಯ್ಗುಳ, ಅವಹೇಳನದ ಚಕಾರ ಕೂಡ ಬರಬಾರದು. ಮಗು ಯಾವುದಕ್ಕೂ ದುಡುಕದಂತೆ, ಯಾವುದರಲ್ಲೂ ನಿರಾಸಕ್ತಿ ತಾಳದಂತೆ ಗಮನವಿಟ್ಟಿರಬೇಕು.

ಈಗ ಗೆದ್ದವರತ್ತ ಬರೋಣ. ವಿಧಾನ ಸೌಧ ಪ್ರವೇಶಿಸುವ ವೀರರೂ ದಿನಕ್ಕೆ ಹತ್ತಿಪ್ಪತ್ತು ನಿಮಿಷ ಶಾಂತಚಿತ್ತದಲ್ಲಿ, ಏಕಾಂತದಲ್ಲಿ ಕೂತಿರುವುದು ಸಮಾಜಕ್ಕೂ ಒಳ್ಳೆಯದು. ರಕ್ತನಾಳಗಳಲ್ಲಿ ಕೊಲೆಸ್ಟೆರಾಲ್ ಶೇಖರಣೆ ಆಗುವ ಹಾಗೆ ನಮ್ಮ ಜನಪ್ರತಿನಿಧಿಗಳ ಸುತ್ತ ವಂದಿಮಾಗಧರ ಪಡೆ ಅದೆಷ್ಟು ಬೆಳೆಯುತ್ತದೆಂದರೆ ಆಡಳಿತದ ನಿಯಮಾವಳಿಗಳನ್ನು ಓದಲು, ಅರ್ಥ ಮಾಡಿಕೊಳ್ಳಲು ನಾಯಕರಿಗೆ ಬಿಡುವೇ ಇರುವುದಿಲ್ಲ. ಅಧಿಕಾರಿಗಳ ಹೌದಪ್ಪಗಳಾಗಿ ಯಾಂತ್ರಿಕವಾಗಿ ಕಡತಗಳಿಗೆ ಸಹಿ ಹಾಕುವಷ್ಟರಮಟ್ಟಿಗೆ ಅವರ ಚಟುವಟಿಕೆ ಸೀಮಿತವಾಗುತ್ತದೆ. ಆಡಳಿತ ಯಂತ್ರದ ಅಸಂಖ್ಯ ಸಿಕ್ಕುಗಳನ್ನು ಅರ್ಥ ಮಾಡಿಕೊಂಡು ಅಲ್ಲಿ ಜಡ್ಡುಗಟ್ಟಿದ ಕಿಲ್ಬಿಷಗಳನ್ನು  ತೊಳೆಯುತ್ತಿರಬೇಕು; ನಾಡಿನ ನಾಡಿಯ ಒಳಿತಿಗೆ ಚಲನಶೀಲತೆ ನೀಡಬೇಕು; ಒಂದರ್ಥದಲ್ಲಿ ಶಾಸಕನೇ ವೈದ್ಯನಾಗಬೇಕು. ತನ್ನ ಆರೋಗ್ಯವನ್ನೂ ಕಾಪಾಡಿಕೊಂಡಿರಬೇಕು. ದಿನವೂ ಧ್ಯಾನ, ವ್ಯಾಯಾಮ, ಪ್ರಾಣಾಯಾಮ ಮಾಡಬೇಕು. ಧ್ಯಾನಕ್ಕೆ ಕೂತು ನಿದ್ರೆಗೆ ಜಾರಬಾರದು.
ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT