ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳಗಾರ ಕೊಂಡು ಮಾರುವ ಭಾಷಾ ಮಾಧ್ಯಮ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಹಂತದಲ್ಲಿ ಮಾತೃ­ ಭಾಷೆಯಲ್ಲಿ ಶಿಕ್ಷಣವನ್ನು ನಿರ್ಧರಿ­ಸುವ ಹಕ್ಕು ಪೋಷಕರದ್ದು ಮತ್ತು ಮಗುವಿನದು ಎಂದು  ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಲ್ಲವಾದಲ್ಲಿ ಅದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತ­ದೆಂದು ನಮೂದಿಸಿದೆ.  ಖಾಸಗಿ ಶಾಲೆಗಳನ್ನು ನಡೆ­ಸುವ ಬಂಡವಾಳಗಾರರು ಇಂಗ್ಲಿಷ್‌ನ ಹೆಸರಲ್ಲಿ ತಮ್ಮ ಬಂಡವಾಳದ ರಕ್ಷಣೆಗಾಗಿ ಗೆದ್ದ ವಾದ ಇದು.

ಶಿಕ್ಷಣ ಪದ್ಧತಿ ಹುಟ್ಟಿದಾಗಲೂ ಅದು ಬಂಡ­ವಾಳಗಾರನ ಅಗತ್ಯವೇ ಆಗಿತ್ತು. ಇನ್ನೂರು ವರ್ಷ­ಗಳ ನಂತರವೂ ಅದೇ ಕನ್ನಡಿಯಲ್ಲಿ ಪ್ರತಿಫಲಿಸಿದಂತಿದೆ. ಇವತ್ತು ನಾವು ಒಪ್ಪಿ ಅಪ್ಪಿ­ಕೊಂಡಿರುವ ಶಿಕ್ಷಣ, ಬಂಡವಾಳಗಾರರ ಅಗತ್ಯ­ಕ್ಕಾಗಿ ರೂಪುಗೊಂಡ ವ್ಯವಸ್ಥೆಯಾಗಿದೆ. ಹತ್ತೊಂ­ಬತ್ತನೆ ಶತಮಾನದ ಭಾರತದಲ್ಲಿ ಪರಿಚಿತವಾ­ದಾಗಲಂತೂ ಆ ಬಂಡವಾಳಗಾರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೇ ಆಗಿತ್ತು.

ಕೈಗಾರಿಕಾ ಕ್ರಾಂತಿ ಪರಿಣಾಮವಾಗಿ ಹತ್ತೊಂ­ಬತ್ತನೇ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಆರಂಭ­ವಾದ ಶಾಲಾ ಪದ್ಧತಿಯೇ ಬೆಳೆದು ಇಂದು ಜಗತ್ತನ್ನೇ ವ್ಯಾಪಿಸಿದೆ. ಇದ್ದಕ್ಕಿದ್ದಂತೆ ಕಾರ್ಖಾನೆ­ಗಳಲ್ಲಿ ದುಡಿಯಲು ಕಾರ್ಮಿಕರ ಅಗತ್ಯ ಹೆಚ್ಚ­ತೊ­ಡಗಿತು. ಹಳ್ಳಿಯಿಂದ ಬಂದ ಅನಕ್ಷರಸ್ಥರಿಗೆ ಬದಲಾಗಿ ಓದಿದ ಹಾಗೂ ಕೈಗಾರಿಕೆಗಳಲ್ಲಿ ದುಡಿಯಲು ಬೇಕಾದ ಕುಶಲತೆಯನ್ನು ಹೆಚ್ಚಿಸಿ­ಕೊಂಡ ಜನರಿಗೆ ಬೇಡಿಕೆ ಹೆಚ್ಚತೊಡಗಿತು. ಅಷ್ಟೇ ಅಲ್ಲದೆ ಒಂದು ವಯೋಮಿತಿಯ ಮಕ್ಕಳು ಒಂದು ಬ್ಯಾಚ್ ಆಗಿ ಶಿಕ್ಷಣ ಪಡೆದು ಹೊರ ಬರುವಂತೆ ನೋಡಿಕೊಳ್ಳಲಾಯಿತು. ಇದರಿಂದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಮತ್ತು ನಿವೃತ್ತಿ ಹೊಂದುವಾಗ ಕೈಗಾರಿಕೆಗಳ ಆಡಳಿತದ ದಾರಿ ಸುಗಮವಾಯಿತು. ಬ್ರಿಟನ್ನಿನ ರಾಜ ಮನೆತನವೂ ಈ ಕಾರಣಕ್ಕಾಗಿ ಶಿಕ್ಷಣವನ್ನು ಸಾರ್ವತ್ರೀಕರಿಸಲು ಮುಂದಾಯಿತು.

ಇಂತಹ ದೊಡ್ಡ ಲಾಭವಿಲ್ಲದೆ ಮೇಲ್ವರ್ಗದ ಸ್ವತ್ತಾದ ಓದು ಬರಹವನ್ನು ಆಳುವ ವರ್ಗ, ಜನಸಾ­ಮಾನ್ಯರಿಗೆ ತೆರೆದಿಡುತ್ತಿರಲಿಲ್ಲ. ಅದರ ಪರಿಣಾ­ಮ­ವಾಗಿ ಮಧ್ಯಮ ವರ್ಗದ ಹುಟ್ಟನ್ನು ಮೇಲ್ವರ್ಗ ನಿರೀಕ್ಷಿಸಿರಲಿಲ್ಲ. ಹಾಗೂ ಅದರ ಅರಿವಿಲ್ಲದೆ ಯೂರೋಪು ತನ್ನ ಸಾಂಪ್ರದಾಯಿಕ ಊಳಿಗಮಾನ್ಯ ವ್ಯವಸ್ಥೆಯನ್ನು ಕಳೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಬ್ರಿಟನ್ನಿನಲ್ಲಿ ೧೮೭೦ ರಲ್ಲಿ ಫಾಸ್ಟರ್ ಎಜುಕೇಷನ್ ಆ್ಯಕ್ಟ್ ನಿಂದ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿತು. ಅಂದರೆ ಶಿಕ್ಷಣವನ್ನು ರೂಪಿಸುವ ಜವಾಬ್ದಾರಿಯನ್ನು ರಾಜ್ಯ ನಿರ್ಧರಿಸು­ವುದು ರೂಢಿಗತವಾಗಿ ಬೆಳೆದು ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಮಾನದ ಸಂದರ್ಭದಲ್ಲಿ ಈ ಅಂಶವನ್ನು ಗಮನಿಸಬೇಕಾಗಿದೆ.

ಈ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಪರಿಚಯಿಸಲಾಗಿ ಬಿಟನ್ನಿನ ಮಾದರಿಯಲ್ಲೇ ಆಳುವ ವರ್ಗಕ್ಕೆ ಅಗತ್ಯವಾದ ರೀತಿಯ ಶಾಲಾ ಪದ್ಧತಿ ಭಾರತವನ್ನೂ ಹೊಕ್ಕಿತು. ಅಂದು ಭಾರತ­ದಲ್ಲಿ ಬ್ರಿಟಿಷರಿಗೆ ಬೇಕಾದುದು ಕಾರ್ಮಿಕರಾ­ಗಿರಲಿಲ್ಲ. ಬ್ರಿಟಿಷ್ ಭಾರತ ಕೈಗಾರಿಕೆಯಲ್ಲಿ ಮುಂದೆ ಬರಲು ಸಾಧ್ಯವಾಗಲೇ ಇಲ್ಲ. ಆ ನಂತರವೂ ಭಾರತ ಕೈಗಾರಿಕಾ ಕ್ರಾಂತಿಯನ್ನು ಕಾಣಲೇ ಇಲ್ಲ. ಆದ್ದರಿಂದ ಶಿಕ್ಷಣದ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ದುಡಿಯುವ ಕಾರಕೂನರನ್ನು ಹುಟ್ಟುಹಾಕುವುದಾಗಿತ್ತು. ಹಾಗಾಗಿ ಅದಕ್ಕೆ ತಕ್ಕ ವಿಷಯಗಳನ್ನೂ, ಭಾಷೆ­ಯನ್ನೂ ರೂಪಿಸಲಾಯಿತು. ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನು ಕುರಿತಾದ ಚರ್ಚೆ ಹತ್ತೊಂಬ­ತ್ತನೆ ಶತಮಾನದ ಆದಿಭಾಗದಲ್ಲ್ಲಿ ತೀವ್ರವಾ­ಗಿತ್ತು.

ಆ ಸಮಯದಲ್ಲಿ ಕಂಡುಕೊಂಡ ಮೆಕಾಲೆ ಸೂತ್ರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೂ, ಉನ್ನತ ಶಿಕ್ಷಣವನ್ನು ಇಂಗ್ಲಿಷ್ನಲ್ಲೂ ಕೊಡಲು ತೀರ್ಮಾನಿಸಲಾಯಿತು. ವಸಾಹತುಶಾಹಿ ತನ್ನೆಲ್ಲಾ ಹಿತಾಸಕ್ತಿಗಳನ್ನು ಇರಿಸಿಕೊಂಡಾಗಲೂ, ಸ್ಥಳೀಯ ಭಾಷೆಯನ್ನು ಕೈ ಬಿಡುವ ಹಂತಕ್ಕೆ ಯೋಚಿಸಲು ಸಾಧ್ಯವಾಗಿರ­ಲಿಲ್ಲ. ವಾಸ್ತವವಾಗಿ ಸ್ಥಳೀಯ ಭಾಷೆಗಳನ್ನು ಕಲಿತು ಕಿಟ್ಟೆಲ್‌ರಂತಹವರು ನಿಘಂಟನ್ನು ಬರೆದು ಆ ಮೂಲಕ ದೇಶಿ ಭಾಷಾ ಜ್ಞಾನವನ್ನು ಹೀರಲು ಪ್ರಯತ್ನಿಸಿದರು. ಇಂದು ವಸಾಹತು ಭಾಷೆಗಾಗಿ ನಮ್ಮ ಭಾಷೆಯನ್ನೇ ಬಲಿ ಕೊಡಲು ಹೊರಟಿದ್ದೇವೆ.

ಇನ್ನು ಸ್ವಾತಂತ್ರ್ಯಾ ನಂತರ ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವ ಶಿಕ್ಷಣವನ್ನು ರೂಪಿ­ಸುವ ಪ್ರಯತ್ನ ಬೆಳೆದು ಬಂದಿತು. ಅಂದರೆ ಸರ್ಕಾರ ಅಥವಾ ಆಳುವ ವರ್ಗ ತನ್ನ ನಿರೀಕ್ಷೆಗೆ ತಕ್ಕ ಸಮಾಜವನ್ನು ಶಿಕ್ಷಣದ ಮೂಲಕ ರೂಪಿ­ಸುತ್ತಾ ಹೋಗುತ್ತದೆ ಎಂಬ ವಾದಕ್ಕೆ ಅಪವಾ­ದವಿಲ್ಲವೆಂಬಂತೆ ಭಾರತದಲ್ಲೂ ಪಠ್ಯವನ್ನು ರೂಪಿ­ಸಿಕೊಂಡಿದೆ. ಭಾರತದ ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕಹಾಗೆ ತಗ್ಗಿಬಗ್ಗಿ ನಡೆಯುವ ಸಮಾಜವನ್ನು ರೂಪಿಸಲು ಶಿಕ್ಷಣವನ್ನು ಬಳಸು­ತ್ತದೆ. ಅದರಲ್ಲಾದ ಭ್ರಷ್ಟತೆಯನ್ನು ಪ್ರಶ್ನಿಸಲಾ­ಗದ ಮನಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ. ವಸಾಹತೋತ್ತರ ನೆರಳು ಬಿಡದಂತೆ  ಅನುಸರಿಸಿಕೊಂಡು ಬಂದಿದೆ.

ತೊಂಬತ್ತರ ದಶಕದ ಹೊತ್ತಿಗೆ ಬೆಳೆಯ­ಲಾರಂಭಿಸಿದ ಐ.ಟಿ ಉದ್ದಿಮೆ ಜನರನ್ನು ತನ್ನ ಕಡೆಗೆ ಎಳೆದುಕೊಳ್ಳಲಾರಂಭಿಸಿತು. ಜನ ಮುಗಿ­ಬಿದ್ದು ಕೈಗಾರಿಕೆಗಳಿಗೆ ಅಗತ್ಯವಾದ ಎಂಜಿನಿ­ಯರಿಂಗ್ ಕೋರ್ಸ್ ಗಳನ್ನು ಓದತೊಡಗಿದ್ದು, ಭಾರತದ ಸಮಾಜ, ಆರ್ಥಿಕತೆ, ಸಂಸ್ಕೃತಿ ಎಲ್ಲವೂ ಆ ದಿಕ್ಕಿಗೇ ತನ್ನನ್ನು ಹೊಂದಿಸಿಕೊಳ್ಳತೊಡಗಿದೆ. ಎಂಜಿನಿಯರಿಂಗ್ ಕೋರ್ಸ್ ಅನ್ನು ಇಂಗ್ಲಿಷ್ ನಲ್ಲಿ ರೂಪಿಸಲಾಗಿ, ಆ ಮೂಲಕ ಬಹು ದೊಡ್ಡ ಬದುಕು ಕಟ್ಟಿಕೊಳ್ಳುವ ಚಾಲನೆ ದೊರಕಿದಾಗ ಅದರ ಹೆಗ್ಗಳಿಕೆಗೆ ಇಂಗ್ಲಿಷ್ ಕಾರಣವೆಂದು ಭ್ರಮಿಸಲಾಗಿದೆ. ಅದರಲ್ಲೂ ವಿದೇಶಗಳಿಗೆ ಹರಿದು ಹೋದ ದುಡಿಯುವ ವರ್ಗ ಇಂಗ್ಲಿಷ್ ಭಾಷಾ ವ್ಯಾಮೋಹವನ್ನು ಮತ್ತಷ್ಟು ಬಲಗೊ­ಳಿಸಿತು.

ಇಲ್ಲೆಲ್ಲಾ ವ್ಯಕ್ತಿಯ ಬೆಳವಣಿಗೆಯನ್ನು ಅವನು ತೆಗೆದುಕೊಳ್ಳುವ ಸಂಬಳದ ಮೇಲೆ ಅಳೆಯಲಾ­ರಂ­ಭಿಸಿತು. ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆಗೆ ಬೇಡಿಕೆ ಹೆಚ್ಚಲು ಕಾರಣವಾಯಿತು. ಜಾಗತೀಕರಣದ ನಂತರ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯವೇನೋ ಎನ್ನುವಂತೆ ಭಾವಿಸಿ ಜನ ಪಡುತ್ತಿರುವ ಪಡಿಪಾಟಲು ಹೇಳತೀರದು.

ಜನರ ಈ ದೌರ್ಬಲ್ಯದ ಜಾಡು ಹಿಡಿದು ಬಂಡವಾಳಗಾರರು ತಮ್ಮ ಕೈಗಾರಿಕಾ ಅಗತ್ಯ­ವನ್ನು ನೀಗಿಸಿಕೊಳ್ಳುವುದೂ ಅಲ್ಲದೆ ಶಿಕ್ಷಣದ ಮೂಲಕವೂ ಲಾಭ ಮಾಡಲು ಮುಂದಾದರು. ಹೀಗೆ ಶಿಕ್ಷಣವನ್ನು ಬಂಡವಾಳವಾಗಿಸಿಕೊಳ್ಳಲು ಹೊಸ ಬಂಡವಾಳಗಾರ ವರ್ಗ ಹುಟ್ಟಿಕೊಂಡಿದೆ. ಹೀಗೆ ಶಿಕ್ಷಣವನ್ನೇ ಬಂಡವಾಳವಾಗಿಸಿಕೊ­ಳ್ಳುವು­ದರ ಹಿಂದೆ ಜಾಗತೀಕರಣದ ಅಬ್ಬರವನ್ನಂತೂ ಕಡೆಗಣಿಸಲಾಗದು. ಇದೆಲ್ಲವೂ ಶಿಕ್ಷಣದ ಖಾಸಗೀ­ಕರಣಕ್ಕೆ ತೆರುತ್ತಿರುವ ಬೆಲೆಯಾಗಿದೆ. ಶಿಕ್ಷಣ ಬೇಡಿಕೆ ಅಗತ್ಯದ ಆಧಾರದ ಮೇಲೆ ನಡೆಯುವ ಮಾರುಕಟ್ಟೆಯ ಸರಕಾಗಿರುವಾಗ ತನಗಿಷ್ಟ ಬಂದ ವಸ್ತುವನ್ನು ಕೊಳ್ಳುವುದು ಗ್ರಾಹಕನ ಹಕ್ಕೆಂದು ಭಾವಿಸಬೇಕಾಗಿದೆ. 

ಈ ಅತಿರೇಕಕ್ಕೆ ಹೋಗುವ ಎಲ್ಲಾ ನಿರೀಕ್ಷೆ ಇದ್ದರೂ ಯಾರೂ ಇಷ್ಟು ಬೇಗನೆ ಸ್ಥಳೀಯ ಸಂಸ್ಕೃತಿ ಅದರ ದ್ಯೋತಕವಾದ ಸ್ಥಳೀಯವಾದ ಭಾಷೆಯ ಅಸ್ತಿತ್ವಕ್ಕೆ ಕುತ್ತು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಅದರ ರಕ್ಷಣೆಗೆ ನಿಲ್ಲಬೇಕಾದ ನ್ಯಾಯಾಲಯ ಕಾನೂನಿನ  ಪರಿ­ಭಾಷೆಯಲ್ಲಿ ಮಾತೃಭಾಷೆ, ಮೂಲಭೂತ ಹಕ್ಕು, ಇವುಗಳನ್ನು ಮುಂದುಮಾಡಿ ಇಂಗ್ಲಿಷನ್ನು ಸರ್ವೋಚ್ಚಗೊಳಿಸುವ ತೀರ್ಮಾನ ಯಾವುದೇ ಶಿಕ್ಷಣ ತಜ್ಞನಿಗೆ ಆಘಾತವನ್ನುಂಟುಮಾಡುತ್ತದೆ. ಕೋರ್ಟ್‌ ಮೆಟ್ಟಿಲನ್ನು ಹತ್ತಿದ ಜನ ಶಿಕ್ಷಣ ತಜ್ಞರಾಗಲಿ, ಭಾಷಾ ತಜ್ಞರಾಗಲಿ, ಮಕ್ಕಳ ಮನಸ್ಸನ್ನು ಅರಿಯಬಲ್ಲ ಮನಶಾಸ್ತ್ರಜ್ಞರಾಗಲಿ ಆಗದೆ ಖಾಸಗಿ ಶಾಲೆಗಳ ಮಾಲೀಕರಾಗಿದ್ದಾರೆ. ಇಂತಹ ಬಂಡವಾಳಗಾರರಲ್ಲಿ ಕೈಗಾರಿಕೋದ್ಯಮಿ­ಗಳು, ಮಂತ್ರಿಗಳು, ಅಧಿಕಾರಿಗಳು, ಮಠಗಳೂ ಸೇರಿಹೋಗಿದ್ದಾರೆ. ಉಳಿಸಬೇಕಾದವರೇ ಮಾರಲು ಹೊರಟಾಗ ನ್ಯಾಯಾಲಯವಾ­ದರೂ ಇನ್ನೆಂತಹ ತೀರ್ಮಾನವನ್ನು ನೀಡಲು ಸಾಧ್ಯ. 

ಈ ಖಾಸಗಿ ಶಾಲೆಯ ಸಂಘಟನೆಗಳ ನಾಯಕರ ಮಾತು ತೋಳ–ಕುರಿಯ ವಾದ­ದಂತೆ ಕಾಣುತ್ತದೆ. ಪ್ರಾಥಮಿಕ ಹಂತದಲ್ಲಿ ಶಾಲೆಗೆ ಸೇರುವ ಮಗುವಿನ ಮತ್ತು ಪೋಷಕರ ಹಕ್ಕನ್ನು ಎತ್ತಿಹಿಡಿಯುತ್ತಾ ಸಂವಿಧಾನದ ವಿಧಿ­ವಿಧಾನಗಳನ್ನು ಉಲ್ಲೇಖಿಸುವುದು ಒಂದು ಯೋಜನಾಬದ್ಧ ಹುನ್ನಾರವೇ ಆಗಿದೆ. ಏಕೆಂದರೆ ಐದನೇ ತರಗತಿಯ ಮಗುವಿಗೆ ಆಯ್ಕೆ ಇರುವು­ದಾದರೂ ಹೇಗೆ ಸಾಧ್ಯ. ತಂದೆ ತಾಯಿ­ಗ­ಳಾದರೂ ಅವರ ಮುಂದಿನ ಹಲವು ಒತ್ತಡಗಳಿಗೆ ಮಣಿದು ಯಾವುದೋ  ನಿರ್ಧಾರಕ್ಕೆ ಬಂದಿರು­ತ್ತಾರೆ. ಅವರು ತಮ್ಮ ಮಗುವಿನ ಒಳಿತೆಂದು ಭಾವಿಸಿದ ಭ್ರಮೆಯೂ ಆಗಿರಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿಹೋಗಿರುತ್ತೇವೆ.  ಸಮಾಜ ತಲುಪಬೇಕಾದ ಗುರಿ ಯಾವುದೆಂಬ ಅರಿವು, ದೂರದೃಷ್ಟಿಯನ್ನು ಕಟ್ಟಿಕೊಡುವವ­ರಾರು. ನಮ್ಮೂರ  ಬೀದಿಯಲ್ಲಿ ಅರ್ಥ ಕಾಣದ ಆಕ್ಸಫರ್ಡ್, ಕೇಂಬ್ರಿಜ್‌ ಶಾಲೆಗಳು ತಮ್ಮ ಲಾಭಕ್ಕಾಗಿ ಇಂತಹ ಯಾವುದೇ ವಾದವನ್ನು ಮುಂದೆ ಮಾಡಲೂ ಸಾಧ್ಯ.

ಇನ್ನು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಅದನ್ನು ಉಳಿಸಿ ಬೆಳೆಸಿದವರಲ್ಲಿ ವಿದ್ಯಾವಂತ ಮಧ್ಯಮ ವರ್ಗದ ಪಾತ್ರ ಬಹು ಮುಖ್ಯವಾಗು­ತ್ತದೆ. ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಂಡವಾಳಕ್ಕೆ ಇಂಗ್ಲಿಷ್ ಭಾಷೆಯ ಹಮ್ಮು ಬಿಮ್ಮು ಬೇಕಾಗುತ್ತದೆ. ಈಗಾಗಲೇ ನಗರದಲ್ಲಿ ನೆಲೆಸಿ ನೆರಳಿನಲ್ಲಿ ಬದುಕು ಕಂಡವರಿಗೆ ಇಂಗ್ಲಿಷನ್ನು ಜೊತೆಯಲ್ಲಿ ವ್ಯಾನಿಟಿ ಬ್ಯಾಗ್‌ ಆಗಿಸಿ­ಕೊಂಡು ಕನ್ನಡ ಬಾರದವರಂತೆ ವರ್ತಿಸು­ವುದು ಹೊಸದೇನಲ್ಲ.

ಅವರ ಮಕ್ಕಳು ಪುಸ್ತಕವೇ ಸರ್ವಸ್ವವಾಗಿ ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆದು ಪ್ರತಿಭಾವಂತರೆನಿಸಿಕೊಳ್ಳುವುದು ಉಳಿ­ದ­ವರಿಗೆ ಅವರು ಆದರ್ಶವಾಗಿ ಕಾಣುವುದು ಒಂದ­ಕ್ಕೊಂದು ಸೇರುತ್ತಾ ಇಂತಹ ಸ್ಥಿತಿಗೆ ಕಾರಣ­ವಾಗಿದೆ. ಹಳ್ಳಿಯ ಮಕ್ಕಳ ಪರವಾಗಿ ಮಾತನಾ­ಡುವ ನೈತಿಕ ಹಕ್ಕೂ ವಿದ್ಯಾವಂತ ಮಧ್ಯಮ ವರ್ಗಕ್ಕೆ ಇಲ್ಲದಂತಾಗಿದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಶಕ್ತಿಯುಳ್ಳ ಕೆಲವರು ಅವರಲ್ಲಿ ಅಪವಾದವಾಗುತ್ತಾರೆ.

ಶಿಕ್ಷಣದ ಜವಾಬ್ದಾರಿಯನ್ನು ಸಂವಿಧಾನ, ರಾಜ್ಯ­ಗಳಿಗೆ ಕೊಡುವಾಗ ಅದರ ಉದ್ದೇಶ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳವುದೇ ಆಗಿತ್ತು. ಒಂದು ರಾಜ್ಯದ ಸಂಸ್ಕೃತಿ ಆ ರಾಜ್ಯದ ಭಾಷೆಯನ್ನೂ ಒಳಗೊಂಡಿರುತ್ತದೆ. ಭಾಷೆಗಾಗಿ ಭಾಷೆಯನ್ನು ಉಳಿಸುವುದಕ್ಕಿಂತ ಅದನ್ನಾಡುವ ಜನರ ಹಿತಾಸಕ್ತಿಯಿಂದ ಭಾಷೆಯನ್ನು ಉಳಿಸಬೇ­ಕಾಗಿರುತ್ತದೆ. ಆ ಭಾಷೆ ಆ ಪರಿಸರದ ಭಾಷೆ­ಯಾ­­ಗಿರುತ್ತದೆ. ಶಿಕ್ಷಣ ಇಂದು ಸಾಂಸ್ಥಿಕ ರೂಪ­ವನ್ನು ಪಡೆದು ಆ ಮೂಲಕವೇ ವ್ಯಕ್ತಿಯ ಬದು­ಕಿಗೆ ಮಾರ್ಗ ತೋರುತ್ತಿರುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುವ ಭಾಷೆಯ ಮೇಲೆ ಸಮಾಜ ನಿಗಾ ವಹಿಸಲೇಬೇಕಾಗುತ್ತದೆ.  ಇಲ್ಲ­ವಾ­ದಲ್ಲಿ ನಮ್ಮ ಪರಿಸರವನ್ನು ತಮ್ಮ ಅನು­ಕೂಲಕ್ಕೆ ರೂಪಿಸಿಕೊಳ್ಳಲು ದೈತ್ಯ ಶಕ್ತಿಗಳು ಸದಾ ಬೆನ್ನು ಹತ್ತಿರುತ್ತವೆ. ದೇಶವೆಲ್ಲಾ ಇಂಗ್ಲಿಷ್ ಭಾಷೆಗೆ ಗುಲಾಮರಾಗುವುದರಿಂದ ಇಂಗ್ಲಿಷ್ ಮಾರುಕಟ್ಟೆ ಮತ್ತಷ್ಟು ಕೊಬ್ಬುತ್ತದೆ. ಶಾಲೆಗಳ ಮೂಲಕ ಜಾಗತಿಕ ಮಾರುಕಟ್ಟೆ ತನ್ನ ಹಿಡಿತವನ್ನು ಸಮಾಜದ ಮೇಲೆ ಸಂಪೂರ್ಣ­ವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಇಂಗ್ಲಿಷ್ ಭಾಷೆಯ ಆಯ್ಕೆ ಆಯ್ಕೆಯಾಗಿ ಉಳಿದಿಲ್ಲ.  ಮಾರುಕಟ್ಟೆ ನಮ್ಮ ಆಯ್ಕೆಯನ್ನು ನಿಯಂತ್ರಿಸುತ್ತಿದೆ.

ಕರ್ನಾಟಕ ಸರ್ಕಾರ ಇವತ್ತು ಪರಿತಪಿಸುತ್ತಾ ಪರಿಹಾರ ಮಾರ್ಗಗಳನ್ನು ಹುಡುಕತೊಡಗಿದೆ. ಆದರೆ ಶಿಕ್ಷಣದ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಹಿನ್ನೆಲೆಯ  ಭ್ರಷ್ಟತೆಗೆ ಅಥವಾ ದೌರ್ಬಲ್ಯಕ್ಕೆ ಬೆಲೆತೆರಬೇಕಾಗಿದೆ. ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಲ್ಲಿ ಆರಂಭವಾದ ಸಮಾಜ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ಒಟ್ಟಾರೆ ಶಿಕ್ಷಣವನ್ನು ಪುನರ್ ಪರಶೀಲಿಸಬೇಕಾಗಿದೆ.  ಪ್ರಜಾಪ್ರತಿನಿಧಿ ಸರ್ಕಾರ ಇನ್ನಾದರೂ ತನ್ನ ನಿಲುವುಗಳಲ್ಲಿ ಯಾರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳ ಬೇಕಾಗುತ್ತದೆ.

ಮಾತೃ ಭಾಷೆಯ ಕಲ್ಪನೆಯನ್ನು ಕಟ್ಟಿಕೊಟ್ಟ ಈ ನುಡಿಗಳಿಗೆ ಬೆಲೆ ಎಲ್ಲಿ?
ಮೊಲೆವಾಲಿನೊಡಗೂಡಿ
ಬಂದನುಡಿ ತಾಯಿನುಡಿ
ಕೊಲೆಗೈದರಮ್ಮನನೆ ಕೊಲಿಸಿದಂತೆ
–ಕುವೆಂಪು (ಕನ್ನಡ ಡಿಂಡಿಮ)

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT