ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಭೇಟಿ ನೆಪದಲ್ಲಿ ಒಂದಿಷ್ಟು ಕನವರಿಕೆ

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ನನಗೆ ಕುತೂಹಲವಿತ್ತು. ಬಳ್ಳಾರಿ ಈಗ ಹೇಗಿರಬಹುದು ಎಂದು. ನಾಲ್ಕು ವರ್ಷಗಳ ನಂತರ ಆ ಊರಿಗೆ ಹೊರಟಿದ್ದೆ. ನಾನು ಮತ್ತು ನನ್ನ ಸಂಪಾದಕರು ಜತೆಯಾಗಿ 2009ರ ಲೋಕಸಭೆ ಚುನಾವಣೆಯಲ್ಲಿ ಆ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೆವು. ಊರಿನಲ್ಲಿ ರಸ್ತೆಗಳು ಚೆನ್ನಾಗಿ ಇರಲಿಲ್ಲ.

ಗಣಿಗಾರಿಕೆ ಜೋರಾಗಿ ನಡೆಯುತ್ತಿದ್ದ ಕಾಲವದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಷ್ಟೇ ಆಗಿತ್ತು. ರೆಡ್ಡಿ ಸೋದರರು ಊರ ಹೊರವಲಯದಲ್ಲಿ ಕಟ್ಟಿಸಿದ್ದ ವೃದ್ಧಾಶ್ರಮದಲ್ಲಿ ಜನಾರ್ದನ ರೆಡ್ಡಿಯವರನ್ನು ಭೇಟಿ ಮಾಡಿದ್ದೆವು.

ಅವರು ಚೀನಾ ಮಾರುಕಟ್ಟೆಯಿಂದಾಗಿ ಗಣಿ ದಂಧೆ ಹೇಗೆ ಲಾಭ ತಂದಿತು, ಕಾನ್ಸ್‌ಟೇಬಲ್ ಮಕ್ಕಳಾದ ತಾವು ಹೇಗೆ ದಿಢೀರ್ ಶ್ರೀಮಂತರಾದೆವು ಎಂದು ನಮಗೆ ಹೇಳಿದ್ದರು. ತಮ್ಮ ಪ್ರತಿಸ್ಪರ್ಧಿಗಳು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ ಎಂದೂ ಅವರು ದೂರಿದ್ದರು. ರೆಡ್ಡಿಯವರನ್ನು ಭೇಟಿ ಮಾಡಿದಾಗ ಒಬ್ಬ ಜನಪ್ರತಿನಿಧಿಯನ್ನು ಭೇಟಿ ಮಾಡಿದ ಅನುಭವವೇನೂ ನನಗೆ ಆಗಿರಲಿಲ್ಲ.

ಅವರು ಬಂದ ದುಬಾರಿ ರೇಂಜ್ ರೋವರ್ ಕಾರು. ಅವರ ಸುತ್ತಮುತ್ತ ಇದ್ದ ಖಾಸಗಿ ಭದ್ರತಾಪಡೆ. ಎಲ್ಲ ಒಂದು ರೀತಿಯಲ್ಲಿ ನಿಗೂಢ ಎನ್ನುವಂತೆ ಇತ್ತು. ಅದು ಯಾವ ಒಬ್ಬ ಪ್ರಧಾನಿ, ರಾಷ್ಟ್ರಪತಿಯ ಸಂಚಾರಭದ್ರತೆಗೂ ಕಡಿಮೆ ಎನ್ನುವಂತೆ ಇರಲಿಲ್ಲ. ನಮ್ಮ ಜತೆಗೆ ಸ್ವಲ್ಪ ಹೊತ್ತು ಮಾತನಾಡಿ ಬೆಂಗಳೂರಿನಿಂದ ಬಂದಿದ್ದ ಪತ್ರಕರ್ತೆಯೊಬ್ಬರ ಜತೆ ಹೆಲಿಕಾಪ್ಟರ್‌ನಲ್ಲಿ ರೆಡ್ಡಿ ಬೆಂಗಳೂರಿಗೆ ಹಾರಿ ಹೋದರು.

ಅದಾಗಿ ಈಗ ನಾಲ್ಕು ವರ್ಷ. ಮತ್ತೆ ಬಳ್ಳಾರಿಗೆ ಶಿರುಗುಪ್ಪ ಮೂಲಕ ಪ್ರವೇಶ ಮಾಡಿದೆವು. ಬಳ್ಳಾರಿ ನಗರ ಪ್ರವೇಶದಲ್ಲಿಯೇ ಸುಮಾರು ಆರೇಳು ಎಕರೆ ಜಾಗದಲ್ಲಿ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಮನೆ ಕಟ್ಟಿಸಿಕೊಂಡಿದ್ದಾರೆ. ಒಂದು ನಗರದ ಅಂಚಿನಲ್ಲಿಯೇ ಆರೇಳು ಎಕರೆ ಜಾಗ ಎಲ್ಲಿ ಖಾಲಿ ಇರುತ್ತದೆ? ಇವರೇ ಖಾಲಿ ಮಾಡಿಸಿದರೋ, ಅಲ್ಲಿ ವಾಸವಾಗಿದ್ದ ಜನರೇ ಖಾಲಿ ಮಾಡಿ ಹೋದರೋ? ಬಳ್ಳಾರಿಯಲ್ಲಿ ಕೇಳಿದರೆ ಏನೇನೋ ಕಥೆ ಹೇಳುತ್ತಾರೆ.

ವಾಸ್ತವ ಏನು ಎಂದರೆ ಅಲ್ಲಿ ಎರಡು ಭಾರಿ ಭವ್ಯ ಬಂಗಲೆಗಳು ತಲೆ ಎತ್ತಿವೆ. ಒಳಗೆ ಏನೇನು ಸವಲತ್ತು ಇವೆ ಎಂಬ ಬಗೆಗೆ ಊರಿನಲ್ಲಿ ದಂತಕಥೆಗಳೂ ಇವೆ. ನೋಡಿ ಬಂದವರು ಕಡಿಮೆ. ಅವರು ಬರೀ ಮನೆ ಮಾತ್ರ ಕಟ್ಟಲಿಲ್ಲ. ಹೊರಗಿನ ಜಗತ್ತಿಗೆ ಕಾಣಬಾರದು ಎಂದೋ, ಭಯದ ಕಾರಣವಾಗಿಯೋ ಎರಡೂ ಮನೆಗಳಿಗೆ ಇಪ್ಪತ್ತರಿಂದ ಇಪ್ಪತ್ತೈದು ಅಡಿ ಎತ್ತರ ಆವರಣ ಗೋಡೆಯನ್ನೂ ಕಟ್ಟಿದ್ದರು.

ಈಗ ಅದನ್ನು ಬಹುತೇಕ ಬೀಳಿಸಿದ್ದಾರೆ. ಅಷ್ಟು ದೊಡ್ಡ ಮನೆ ಕಟ್ಟಿ, ಅಷ್ಟು ಎತ್ತರದ ಆವರಣ ಗೋಡೆ ಕಟ್ಟಿಸಿದ ಮೇಲೂ `ದುರ್ದೆಸೆ'ಯ ಕಣ್ಣು ತಪ್ಪಿಸಲು ಆಗಲಿಲ್ಲ ಎಂದು ಇರಬಹುದು! ಈಗ ಶ್ರೀರಾಮುಲು ಅವರ ಮಲಗುವ ಕೋಣೆಗೆ ನೇರವಾಗಿ ಕಾರು ಹೋಗುವಂಥ ಸೌಕರ್ಯ ನಿರ್ಮಾಣವಾಗುತ್ತಿದೆ ಎಂದು ಸುದ್ದಿ. ಮತ್ತೆ ಇದು ಕೇವಲ ದಂತಕಥೆ ಇರಬಹುದು!

ನಾವು ಕಳೆದ ಸಾರಿ ಬಳ್ಳಾರಿಗೆ ಹೋದಾಗ ನಗರದ ರಸ್ತೆಗಳ ಕಾಮಗಾರಿ ಆರಂಭವಾಗಿತ್ತು. ಅದಕ್ಕೂ ಕೆಲವು ವರ್ಷ ಹಿಂದೆ ಆ ನಗರಕ್ಕೆ ಹೋಗಿ ಅಲ್ಲಿನ ರಸ್ತೆಗಳ ದುಃಸ್ಥಿತಿ ಕಂಡು ಗಾಬರಿಗೊಂಡಿದ್ದ ಸಂಪಾದಕರು `ಈಗ ವಾಸಿ' ಎಂದಿದ್ದರು. ಈಗ ಇನ್ನೂ ವಾಸಿ. ಒಳ್ಳೆಯ ರಸ್ತೆಗಳು ಆಗಿವೆ. ರಸ್ತೆಗಳ ಮಧ್ಯದಲ್ಲಿ ವಿಭಜಕಗಳು ಇವೆ.

ಅವುಗಳ ನಡುವೆ ಬೀದಿ ದೀಪಗಳೂ ಇವೆ. ಆದರೆ ಇದ್ದಕ್ಕಿದ್ದಂತೆ ಶ್ರೀಮಂತಿಕೆ ಬಂದು ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದು ಅಥವಾ ಬೆಳದಿಂಗಳಲ್ಲಿ ತಂಪು ಕನ್ನಡಕ ಹಾಕಿ ಮೆರೆದವರಿಗೆ ಈಗ ಮತ್ತೆ ಬಡತನ ಬಂದಂತೆ ಆಗಿದೆ. ಊರಿಗೆ ಮಂಕು ಬಡಿದಿದೆ. ಗಣಿಗಾರಿಕೆ ಜೋರಾಗಿದ್ದಾಗ ಬಳ್ಳಾರಿಯ ಆರ್ಥಿಕ ಚಿತ್ರವೇ ಬೇರೆ ಇತ್ತು.

ಚಿನ್ನ ಬೆಳ್ಳಿ ಅಂಗಡಿಗಳು, ಬೆಲೆ ಬಾಳುವ ಕಾರಿನ ಷೋ ರೂಮ್‌ಗಳು, ಆಡಿಡಾಸ್, ರೀಬಾಕ್ ಅಂಗಡಿಗಳು, ಭಾರತದ ಬ್ಯಾಂಕುಗಳು ಮಾತ್ರ ಸಾಲವು ಎಂದು ವಿದೇಶಿ ಬ್ಯಾಂಕುಗಳು ಬಳ್ಳಾರಿಯಲ್ಲಿ `ಅಂಗಡಿ' ತೆರೆದಿದ್ದುವು. ಮಣ್ಣಿನಲ್ಲಿ ಚಿನ್ನ ಕಂಡುಕೊಂಡವರು ಹಾದಿ ಬೀದಿಯಲ್ಲಿ ಸಿಕ್ಕ ಸಿಕ್ಕಂತೆ ರೊಕ್ಕ ಚೆಲ್ಲುತ್ತಿದ್ದರು.

ನ್ಯಾಯವಾಗಿ ಜೀವನ ಮಾಡುವವರಿಗೆ ಮನೆ ಬಾಡಿಗೆ ಕೊಡುವುದೂ ಕಷ್ಟವಾಗಿತ್ತು. ಗಣಿಗಾರಿಕೆಯಲ್ಲಿ ಬರೀ ರೆಡ್ಡಿಗಳು ಮಾತ್ರ ದುಡ್ಡು ಮಾಡಿಕೊಂಡಿರಲಿಲ್ಲ. ಅವರ ಜತೆಗೆ ಇತರರೂ ಗಣಿ ಅಗೆದಿದ್ದರು. ಲಾರಿಗಳಲ್ಲಿ ಸಾಗಿಸಿದ್ದರು. ಟನ್‌ಗಟ್ಟಲೆ ಅಗೆದ ಅದಿರು ಸಾಗಿಸಲು ಅನೇಕರು ಹತ್ತು ಗಾಲಿಯ ಲಾರಿ ಖರೀದಿಸಿದ್ದರು.

ಊರಿನಲ್ಲಿ ದುಡ್ಡಿದ್ದವರ ಸಂಖ್ಯೆ ಹೆಚ್ಚಾಯಿತು. ದುಡ್ಡಿದ್ದವರು ಬಂದು ಹೋಗುವುದೂ ಹೆಚ್ಚಾಯಿತು. ಅವರಿಗೆ ತಕ್ಕಂತೆ ದೊಡ್ಡ ದೊಡ್ಡ ಹೋಟೆಲ್‌ಗಳು ತಲೆ ಎತ್ತಿದುವು. ಊರಿನ ಜೀವನ ವಿಧಾನವೇ ಬದಲಾಗಿ ಹೋಗಿತ್ತು.

ಬಳ್ಳಾರಿಯ ಅದೃಷ್ಟವೇನೋ ಖುಲಾಯಿಸಿತ್ತು. ಆದರೆ, ಬಳ್ಳಾರಿಯ ಗಡಿಯಲ್ಲಿ ಅಗೆದ ಅದಿರು ಸಾಗುವ ದಾರಿಯ ಬದುಕು ನರಕವಾಗಿ ಹೋಗಿತ್ತು. ಆ ನರಕವನ್ನು ನಾನೂ ಮತ್ತು ನನ್ನ ಸಂಪಾದಕರು ಅನೇಕ ಸಾರಿ ಅನುಭವಿಸಿದ್ದೆವು. ಬಳ್ಳಾರಿಯಿಂದ, ಹೊಸಪೇಟೆಯಿಂದ ಹುಬ್ಬಳ್ಳಿ ವರೆಗೆ, ಹುಬ್ಬಳ್ಳಿಯಿಂದ ಮಂಗಳೂರಿನ ವರೆಗೆ ಹೋಗುವ ಮಾರ್ಗದಲ್ಲಿ ರಸ್ತೆಯೇ ಇರಲಿಲ್ಲ.

ಹತ್ತು ಗಾಲಿಗಳ ಅದಿರು ಸಾಗಣೆ ಲಾರಿಗಳ ಕೆಳಗೆ ಸಿಕ್ಕು ಎಲ್ಲ ರಸ್ತೆಗಳ ಚರ್ಮ ಕಿತ್ತು ಹೋಗಿತ್ತು. ಪಕ್ಕದ ನೂರಾರು ಕಿಲೋ ಮೀಟರ್ ದಾರಿಯ ಹಸಿರಿಗೆ ಕಂದು ದೂಳು ಬಡಿದಿತ್ತು. ಪರಿಸರದಲ್ಲಿ ಪ್ರಾಣವಾಯು ಕಡಿಮೆ ಆಗಿತ್ತು. ಅದಿರು ಲಾರಿ ಸಾಗುವ ಮಾರ್ಗದಲ್ಲಿ ಮನುಷ್ಯ ಭ್ರಷ್ಟನಾಗಿ ಹೋಗಿದ್ದ. ಅದಿರು ಅಕ್ರಮವಾಗಿ ಸಾಗುತ್ತಿತ್ತೋ, ಸಕ್ರಮವಾಗಿ ಸಾಗುತ್ತಿತ್ತೋ, ದಾರಿಯಲ್ಲಿನ ಸುಂಕದ ಕಟ್ಟೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತುಬಿಟ್ಟಿದ್ದರು.

ಈಗ ಅದಿರು ಸಾಗಣೆ ನಿಂತು ತಿಂಗಳುಗಳೇ ಆಗಿದೆ. ಮತ್ತೆ ಅದಿರು ಸಾಗುತ್ತಿದ್ದ ರಸ್ತೆಗಳ ಎರಡೂ ಬದಿ ಹಸಿರು ಚಿಗುರುತ್ತಿದೆ. ರಸ್ತೆಗಳು ಬದುಕಿದೆಯಾ ಬಡಜೀವವೇ ಎಂದು ನಿಟ್ಟುಸಿರು ಬಿಡುತ್ತಿವೆ. 
ಹೀಗೆ ಹೊರಗೆ ಬದುಕು ಚೇತರಿಸಿಕೊಳ್ಳುತ್ತಿದ್ದರೆ ಬಳ್ಳಾರಿಯಲ್ಲಿ ಚಿನ್ನ ಬೆಳ್ಳಿ ಅಂಗಡಿಗಳ ಸಂಖ್ಯೆ ಕಡಿಮೆ ಆಗಿದೆ.

ಆಡಿಡಾಸ್, ರೀಬಾಕ್‌ನಂಥ ದುಬಾರಿ ಅಂಗಡಿಗಳಲ್ಲಿ ಎಷ್ಟೋ ಅಷ್ಟು ವ್ಯಾಪಾರ. ವಿದೇಶಿ ಬ್ಯಾಂಕ್‌ಗಳಲ್ಲಿ ವಹಿವಾಟು ಇಲ್ಲ ಎಂದರೂ ನಡೆಯುತ್ತದೆ. ಕೇವಲ 12 ಗಂಟೆಗೆ ಚೆಕ್‌ಔಟ್ ಅವಧಿ ನಿಗದಿ ಮಾಡಿದ್ದ ಹೋಟೆಲ್‌ಗಳು ಈಗ ಅದನ್ನು 24 ಗಂಟೆಗೆ ಏರಿಸಿವೆ, ಗಿರಾಕಿಗಳು ಬಂದರೆ ಸಾಕು ಎನ್ನುವಂತೆ! ಮನೆ ಸುಲಭವಾಗಿ ಬಾಡಿಗೆಗೆ ಸಿಗುತ್ತವೆ.

ಬಾಡಿಗೆ ದರವೂ ಕಡಿಮೆ ಆಗಿದೆ. ಗಣಿಗಳಲ್ಲಿ ಕೆಲಸ ಮಾಡಲು ಉತ್ತರ ಭಾರತದಿಂದ ಬಂದವರು ಮರಳಿ ತಮ್ಮ ಊರಿಗೆ ಹೋಗಿದ್ದಾರೆ. ನಗರದ ಮೂಲ ನಿವಾಸಿಗಳು ಮೊದಲು ಹೇಗೆ ಬದುಕುತ್ತಿದ್ದರೋ ಈಗಲೂ ಹಾಗೆಯೇ ಬದುಕುತ್ತಿದ್ದಾರೆ. ಗಣಿಗಾರಿಕೆ ಮಾಡುತ್ತಿದ್ದವರ ಪೈಕಿ ಜನಾರ್ದನ ರೆಡ್ಡಿಯವರು ಜೈಲು ಸೇರಿ 16 ತಿಂಗಳು ಆಗುತ್ತ ಬಂತು. ಹಾಗೆಂದು ಅವರ ಸಂಬಂಧಿಗಳ ಜೀವನಶೈಲಿಯಲ್ಲಿ ಬದಲಾವಣೆಯೇನೂ ಆಗಿಲ್ಲ.

ಈಗಲೂ ಅವರೆಲ್ಲ ಕಪ್ಪು ಬಣ್ಣದ ರೇಂಜ್ ರೋವರ್, ಲ್ಯಾಂಡ್ ರೋವರ್‌ನಂಥ ದುಬಾರಿ ಕಾರುಗಳಲ್ಲಿಯೇ ಓಡಾಡುತ್ತಾರೆ. ಬೆಂಗಾವಲಿಗೆ ಅನೇಕ ಕಾರುಗಳೂ, ಜೀಪುಗಳೂ ಇರುತ್ತವೆ. ಜನರಿಗೆ ಇದು ಹಣವಂತರ, ಅಧಿಕಾರಸ್ಥರ ದರ್ಬಾರು ಎಂದು ಅನಿಸಿಲ್ಲ; ಸಿಟ್ಟು ತರಿಸಿಲ್ಲ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿಯಲ್ಲಿ ಪಾಳೆಗಾರಿಕೆಯನ್ನು ಸಹಿಸುವ, ಆರಾಧಿಸುವ ಗುಣ ರಕ್ತಗತವಾದಂತೆ ಕಾಣುತ್ತದೆ.

ಬರೀ ಬಳ್ಳಾರಿ ಜನರಿಗೇ ಏಕೆ? ಮಾಧ್ಯಮದ ನಮ್ಮಲ್ಲಿಯೂ ಅಧಿಕಾರಸ್ಥರನ್ನು ವೈಭವಿಸುವ ಆ ಗುಣ ಇದ್ದಂತೆ ಕಾಣುತ್ತದೆ. ಇಲ್ಲದಿದ್ದರೆ ನಾವು ಬಳ್ಳಾರಿಯ ಈ ಅದಿರು ವ್ಯಾಪಾರಿಗಳನ್ನು ಗಣಿಧಣಿಗಳು ಎಂದು ಏಕೆ ಕರೆಯಬೇಕಿತ್ತು? ಅವರು ಧಣಿಗಳು ಎಂದು ನಾವು ಒಪ್ಪಿಕೊಂಡೆವು ಎಂದೇ ಅರ್ಥ ಅಲ್ಲವೇ?

ಬಳ್ಳಾರಿಯಲ್ಲಿ ಮೊದಲಿನ ಬಿಜೆಪಿಯಲ್ಲಿ ಮತ್ತು ಈಗಿನ ಬಿಎಸ್‌ಆರ್ ಪಕ್ಷದಲ್ಲಿ ಮಾತ್ರ ಗಣಿ ವ್ಯಾಪಾರಿಗಳು ಇಲ್ಲ. ಕಾಂಗ್ರೆಸ್‌ನಲ್ಲಿ ಲಾಡ್‌ಗಳು ಅದೇ ದಂಧೆಯಲ್ಲಿ ಇದ್ದಾರೆ. ಬಳ್ಳಾರಿಯ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ದಿ.ಎಂ.ವೈ.ಘೋರ್ಪಡೆ ಕೂಡ ಗಣಿಗಾರಿಕೆಯಲ್ಲಿಯೇ ಇದ್ದವರು. ಜೆ.ಡಿ.ಎಸ್‌ನಲ್ಲಿರುವ ಸೂರ್ಯನಾರಾಯಣ ರೆಡ್ಡಿ ದೊಡ್ಡ ಗ್ರಾನೈಟ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.

ಅವರೆಲ್ಲ ಚುನಾವಣೆ ಮಾಡುವ ರೀತಿ ಬೇರೆ ಇತ್ತು. 2008ರ ವಿಧಾನಸಭೆ ಚುನಾವಣೆ ನಂತರ ಕರ್ನಾಟಕದ ಚುನಾವಣೆಯಲ್ಲಿ ಹೊಸ ವಿಧಾನವೊಂದನ್ನು ತಂದವರು ರೆಡ್ಡಿ ಸೋದರರು. ತಮ್ಮ ಸಂಪಾದನೆಯ ಅಲ್ಪಸ್ವಲ್ಪ ಹಣವನ್ನು ಸಾಮೂಹಿಕ ಮದುವೆ ಮುಂತಾಗಿ ಒಂದಿಷ್ಟು ಜನರಿಗಾಗಿ ಖರ್ಚು ಮಾಡಿದವರು. ನೆರವು ಕೇಳಿ ಮನೆಗೆ ಬಂದವರಿಗೆ ಹಣ ಕೊಟ್ಟು ಕಳಿಸಿದವರು. ಉಳಿದ ಪಕ್ಷದ ನಾಯಕರು ಇದನ್ನೆಂದೂ ಮಾಡಿದಂತೆ ಕಾಣುವುದಿಲ್ಲ.

ರೆಡ್ಡಿಗಳು ರಾಜಕೀಯ ಪ್ರವೇಶ ಮಾಡುವ ವರೆಗೆ ಪ್ರತಿ ಹಳ್ಳಿಯ ಗೌಡನಂಥ ಒಬ್ಬ ಮುಖಂಡನಿಗೆ ಒಂದಿಷ್ಟು ಹಣ ಹೋಗುತ್ತಿತ್ತು. ಆತ ಹೇಳಿದವರಿಗೆ ಊರಿನವರು ಮತ ಹಾಕುತ್ತಿದ್ದರು. ಇದೂ ಒಂದು ರೀತಿಯ ಪಾಳೆಗಾರಿಕೆ ವ್ಯವಸ್ಥೆಯ ಮುಂದುವರಿಕೆಯೇ ಇದ್ದಂತೆ ಇತ್ತು. ರೆಡ್ಡಿ ಸೋದರರು ಮೊದಲ ಬಾರಿಗೆ ಊರಿನ ಎಲ್ಲ ಮತದಾರರಿಗೆ ಹಣ ತಲುಪುವಂತೆ ನೋಡಿಕೊಂಡರು.

ಪ್ರತಿ ಮನೆಯಲ್ಲಿಯೂ ಆತ ಇರಲಿ ಇಲ್ಲದೇ ಇರಲಿ, ಅವರ ಮನೆಯಲ್ಲಿನ ಮತದಾರರ ಸಂಖ್ಯೆಯ ಲೆಕ್ಕ ಹಾಕಿ ಅಷ್ಟು ಹಸಿರು ಅಥವಾ ಕೆಂಪು ನೋಟುಗಳನ್ನು ಒಂದು ಚೀಟಿ ಸಮೇತ ಎಸೆದರು. ಆ ವರೆಗೆ ಸಾರ್ವಜನಿಕ ಜೀವನದಲ್ಲಿ ಯಾವ ಅನುಭವವೂ ಇಲ್ಲದ ರೆಡ್ಡಿ ಸೋದರರು ಮತ್ತು ಅವರ ಬೆಂಬಲಿಗರು, ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೆದ್ದು ಬರಲು ಈ ತಂತ್ರವೇ ಕಾರಣವಾಯಿತು. ಈಗಲೂ ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಮತ್ತು ಬಿ.ಎಸ್.ಶ್ರೀರಾಮುಲು ಅವರ ಕೈಯಲ್ಲಿಯೇ ಎಲ್ಲ ಸ್ಥಳೀಯ ಸಂಸ್ಥೆಗಳು ಇರುವುದಕ್ಕೂ ಹಣದ ಮಾಯಾಜಾಲವೇ ಮುಖ್ಯ ಕಾರಣ ಆಗಿರುವಂತಿದೆ.

ಈಗ ಮತ್ತೆ ಕರ್ನಾಟಕ ವಿಧಾನಸಭೆಯ ಚುನಾವಣೆ ಹೊಸ್ತಿಲಲ್ಲಿ ಇದೆ. ಐದು ವರ್ಷಗಳ ಹಿಂದೆ ಯಾರೂ ಊಹಿಸಲು ಕೂಡ ಸಾಧ್ಯವಿಲ್ಲದ ಬೆಳವಣಿಗೆಗಳು ಮಿಂಚಿನ ವೇಗದಲ್ಲಿ ಎನ್ನುವಂತೆ ಘಟಿಸಿ ಹೋಗಿವೆ. ಜನಾರ್ದನ ರೆಡ್ಡಿಯವರು ಜೈಲಿನಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಬಳ್ಳಾರಿಯಲ್ಲಿ ಇದೆ. ಅದು ಅವರ ಧಾರ್ಷ್ಟ್ಯ ಇರಬಹುದು.

ಅಥವಾ ಇದೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಪರ್ಯಾಸ ಇರಬಹುದು. ನನಗೆ ನೆನಪು ಇರುವ ಹಾಗೆ ಇಂಥ ಸ್ಪರ್ಧೆ ಆದರೆ, ಕರ್ನಾಟಕದ  ಇತಿಹಾಸದಲ್ಲಿ ಅದೇ ಮೊದಲನೆಯದಾಗಿರುತ್ತದೆ. ಬಳ್ಳಾರಿ ಪರಿಸರ ಅನೇಕ ಇತಿಹಾಸಗಳನ್ನು ಸೃಷ್ಟಿಸಿದೆ. ಈಗಲೂ ಅದಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ ಇದೆ. ಅದು ಎಂಥ ಇತಿಹಾಸ ಆಗಿರುತ್ತದೆ? ಅದು ಕಾಲಕ್ಕೆ ಬಿಟ್ಟ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT