ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಟಾಟಿಕೆಗೂ ಒಂದು ಮಿತಿ ಇರಬೇಡವೇ?

Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

1985 ರ ಆಸುಪಾಸು ಇರಬೇಕು. ಆಗ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಕಾಲ. ಅಬ್ದುಲ್ ನಜೀರ್‌ಸಾಬರು ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವರಾಗಿದ್ದರು.

ಪಶ್ಚಿಮ ಬಂಗಾಲದ ಎಸ್.ಕೆ.ಡೇ ಅವರ ಪ್ರಯೋಗದಿಂದ ಸ್ಫೂರ್ತಿ ಪಡೆದು ಕರ್ನಾಟಕದಲ್ಲಿಯೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ನಜೀರ್‌ಸಾಬರು ಒಂದು ಮಸೂದೆ ರೂಪಿಸಿದ್ದರು. ವಿಧಾನಪರಿಷತ್ತಿನಲ್ಲಿ ಈ ಮಸೂದೆ ಅಂಗೀಕಾರ ಆಗುವಾಗ ನಾನು ವರದಿಗಾರರ ಜಾಗದಲ್ಲಿ ಕುಳಿತಿದ್ದೆ.

ನಜೀರ್‌ಸಾಬರು ಸದಾ ಬೂದುಬಣ್ಣದ ಒಂದು ಶಾಲು ಹೊದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಅವರಿಗೆ ಸದನದ ಶೀತ ಹೆಚ್ಚು ಅನಿಸುತ್ತಿತ್ತು. ಅವರು ಆ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಎಷ್ಟು ಒದ್ದಾಡಿದರು ಎಂದು ಈಗಲೂ ನನಗೆ ಕಣ್ಣಿಗೆ ಕಟ್ಟಿದಂತೆ ನೆನಪು ಇದೆ. ಆಳುವ ಪಕ್ಷದಲ್ಲಿಯೇ ಇದ್ದ ಬಲಿಷ್ಠ ಸಮುದಾಯದ ನಾಯಕರಿಗೆ ಈ ಮಸೂದೆ ಅಂಗೀಕಾರ ಆಗುವುದು ಬೇಕಿರಲಿಲ್ಲ.

ಅಧಿಕಾರ ಕೈ ಬಿಟ್ಟು ಹೋಗುತ್ತದೆ ಎಂಬ ಅಂಜಿಕೆ ಅವರನ್ನೆಲ್ಲ ಕಾಡುತ್ತಿತ್ತು. ಸಂಜೆ ವೇಳೆಗೆ ಹಾಗೂ ಹೀಗೂ ಮಸೂದೆ ಪಾಸಾದ ನಂತರ ನಜೀರ್‌ಸಾಬರು ಎದ್ದು ಬಂದು ವಿರೋಧ ಪಕ್ಷದ ಮುಂದಿನ ಸಾಲಿನ ನಾಯಕ ಎ.ಕೆ.ಸುಬ್ಬಯ್ಯ ಅವರನ್ನು ತಬ್ಬಿಕೊಂಡರು. ಇಬ್ಬರೂ ಸಂತೋಷದಿಂದ ಅಳುವುದೊಂದು ಬಾಕಿ. ಮಸೂದೆಗೆ ಯಾರ‌್ಯಾರು ಅಡ್ಡಿ ಮಾಡುತ್ತಿದ್ದಾರೆ ಎಂಬುದು ಇಬ್ಬರಿಗೂ ಗೊತ್ತಿತ್ತು. ದೊಡ್ಡ ದನಿಯ ಸುಬ್ಬಯ್ಯ, ನಜೀರ್‌ಸಾಬರ ಬೆಂಬಲಕ್ಕೆ ಬಂಡೆಯಂತೆ ನಿಂತಿದ್ದರು.


ಇದು ಮನಸ್ಥಿತಿಯ ಸಮಸ್ಯೆ. ಅಧಿಕಾರ ವಿಕೇಂದ್ರೀಕರಣ ಎಂಬುದೆಲ್ಲ ಎಲ್ಲ ಪಕ್ಷಗಳಿಗೂ ಹೇಳಲು ಆಚಾರ, ತಿನ್ನಲು ಬದನೆಕಾಯಿ. ಎಲ್ಲರಲ್ಲೂ ಪಾಳೆಗಾರಿಕೆ ಮನಸ್ಸಿನ ಪಳೆಯುಳಿಕೆಗಳು ಇನ್ನೂ ಗಟ್ಟಿಯಾಗಿಯೇ ಇವೆ. ಯಾವ ಪಕ್ಷದ ಶಾಸಕರಿಗೂ ತಮ್ಮ ಅಧಿಕಾರವನ್ನು ಪಂಚಾಯತ್‌ರಾಜ್ ಅಥವಾ ಪೌರ ಸಂಸ್ಥೆಗಳಿಗೆ ಬಿಟ್ಟುಕೊಡಲು ಮನಸ್ಸು ಇಲ್ಲ.

ಎಲ್ಲ ಅಧಿಕಾರವೂ ತಮ್ಮಲ್ಲಿಯೇ ಇರಬೇಕು ಎಂಬ `ಅಹಂ'ಕಾರ ಅವರಿಗೆ. ಇದು ಯಾವುದೋ ತಾಲ್ಲೂಕಿನ ಗ್ರಾಮ ಪಂಚಾಯಿತಿಯಿಂದ ಹಿಡಿದು ಬೆಂಗಳೂರು ಮಹಾನಗರ ಪಾಲಿಕೆ ವರೆಗೂ ಅನ್ವಯಿಸುವ ಮಾತು. ಎಲ್ಲ ಕಡೆಯೂ ಶಾಸಕರ ಹಾಗೂ ಸಚಿವರ ಮಾತೇ ನಡೆಯಬೇಕು. ಕರ್ನಾಟಕದಲ್ಲಿ ಮೊದಲ ಸಲ ಪಂಚಾಯತ್ ರಾಜ್ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಾಗ ಇದ್ದ ಅಡ್ಡಿ ಮಾಡುವ ಮನೋಭಾವ ಮೂರು ದಶಕಗಳೇ ಕಳೆದು ಹೋದರೂ ಈಗಲೂ ಬದಲಾಗಿಲ್ಲ.

ಅದನ್ನು ಒಪ್ಪಿಕೊಳ್ಳಬೇಕು ಎಂಬ ತಿಳಿವಳಿಕೆ ಬಂದಿಲ್ಲ. ಕಳೆದ ಡಿಸೆಂಬರ್‌ನಲ್ಲಿಯೇ ಪೌರಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿತ್ತು. ಸರ್ಕಾರಕ್ಕೆ ಇದು ಒಮ್ಮಿಂದೊಮ್ಮೆಲೆ ತಿಳಿದ ಸಂಗತಿಯೇನೂ ಅಲ್ಲ. ಎರಡು ವರ್ಷಗಳಿಂದ ರಾಜ್ಯ ಚುನಾವಣಾ ಆಯೋಗ ನೆನಪಿಸುತ್ತಲೇ ಇತ್ತು.

ನಗರಾಭಿವೃದ್ಧಿ ಮತ್ತು ಪೌರಾಡಳಿತ ಖಾತೆಯ ಕಾರ್ಯದರ್ಶಿಗಳಿಗೆ ಮಾತ್ರವಲ್ಲ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಆಯೋಗದ ಆಯುಕ್ತರು ನೆನಪಿನ ಓಲೆ ಕಳುಹಿಸಿದ್ದರು.

ರಾಜ್ಯ ಚುನಾವಣೆ ಆಯೋಗದ ಮುಖ್ಯ ಆಯುಕ್ತರು ಚುನಾವಣೆ ನಡೆಸಿಯೇ ಬಿಡಬೇಕು ಎಂದು ಈ ಪರಿ ಹಟ ಹಿಡಿಯುತ್ತಾರೆ ಎಂದು ಸರ್ಕಾರದಲ್ಲಿ ಇದ್ದವರು ಅಂದುಕೊಂಡಿರಲಿಲ್ಲವೇನೋ? ಅವರು ಹೇಳಿದ್ದಂತೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡು ಮೀಸಲು ಪಟ್ಟಿಯನ್ನು ಕಳಿಸಿ ಬಿಟ್ಟಿದ್ದರೆ ಡಿಸೆಂಬರ್‌ನಲ್ಲಿ ಚುನಾವಣೆ ಮುಗಿದೇ ಬಿಡುತ್ತಿತ್ತು.

ಈಗ ಆಗಿರುವ ಹಾಗೆ ತೀರಾ ವಿಧಾನಸಭೆ ಚುನಾವಣೆ ನಡೆಯುವುದಕ್ಕಿಂತ ಕೇವಲ ಒಂದೆರಡು ತಿಂಗಳು ಮುಂಚೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸುವಂಥ ಇಕ್ಕಟ್ಟಿನ ಸಂದರ್ಭ ಬರುತ್ತಿರಲಿಲ್ಲ.

ಇದು ಕೇವಲ ಮನಸ್ಥಿತಿಯ ಪ್ರಶ್ನೆಯಲ್ಲ. ಬದ್ಧತೆಯ ಪ್ರಶ್ನೆ. ಸಾರ್ವಜನಿಕರಿಗೆ ಯಾವಾಗಲೂ ನೆನಪಿನ ಶಕ್ತಿ ಕಡಿಮೆ. 2001ರಲ್ಲಿ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರವಿತ್ತು. ಆ ವರ್ಷದ ಡಿಸೆಂಬರ್‌ನಲ್ಲಿ ಇದೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಹಂತದಲ್ಲಿ ವಾರ್ಡ್‌ಗಳಿಗೆ ಮೀಸಲು ನಿಗದಿ ಮಾಡಲು ಆಯೋಗಕ್ಕೆ ಇದ್ದ ಅಧಿಕಾರವನ್ನು ಕಿತ್ತುಕೊಂಡು ಜಿಲ್ಲಾಧಿಕಾರಿಗಳಿಗೆ ಕೊಡಲಾಯಿತು.

ಅಂದರೆ ಸರ್ಕಾರ ಆ ಅಧಿಕಾರವನ್ನು ಸಂವಿಧಾನಬದ್ಧವಾದ ಒಂದು ಸಂಸ್ಥೆಯ ಕೈಯಿಂದ ಕಿತ್ತುಕೊಂಡು ತನ್ನ ಕೈಗೆ ತೆಗೆದುಕೊಂಡಿತು. ಹಾಗೆ ಮಾಡುವುದರ ಹಿಂದೆ ಮತ್ತೆ ಶಾಸಕರ ಆಗ್ರಹವೇ ಇತ್ತು. ತಮಗೆ ಬೇಕಾದ ವಾರ್ಡ್ ಅನ್ನು ತಮಗೆ ಬೇಕಾದ ಸಮುದಾಯಕ್ಕೆ ಮೀಸಲು ಇಡುವುದರ ಹಿಂದೆ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸುವ ಶಾಸಕರ ಹಿಕಮತ್ತು ಇತ್ತೇ ಹೊರತು ಮತ್ತಾವ ಘನ ಉದ್ದೇಶವೂ ಇರಲಿಲ್ಲ.

ಅಥವಾ ತಾನು ಮೀಸಲು ಪಟ್ಟಿ ಕೊಡುವವರೆಗೆ ಆಯೋಗ ಹೇಗೆ ಚುನಾವಣೆ ಮಾಡುತ್ತದೆ ನೋಡೋಣ ಎಂಬ ಹಿಕಮತ್ತೂ ಇದ್ದೀತು. ಕೃಷ್ಣ ಸರ್ಕಾರ ಶಾಸಕರ ಒತ್ತಡಕ್ಕೆ ಮಣಿಯಲೇಬೇಕಾಯಿತು. ಮೊದಲಿನ ಹಾಗೆಯೇ ಆಯೋಗಕ್ಕೆ ಅಧಿಕಾರ ಇದ್ದಿದ್ದರೆ ಅದು ಸರ್ಕಾರಕ್ಕೆ ಈಗ ನೆನಪಿನ ಓಲೆ ಬರೆಯುತ್ತ ಕೂಡ್ರಬೇಕಾದ ಅನಿವಾರ್ಯತೆ ಇರಲಿಲ್ಲ. ತಾನೇ ವಾರ್ಡ್ ಮೀಸಲಾತಿ ನಿಗದಿ ಮಾಡಿ ಚುನಾವಣೆ ನಡೆಸಿಬಿಡಬಹುದಿತ್ತು.

ರಾಜೀವ ಗಾಂಧಿಯವರು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದಾಗ ಸಕಾಲದಲ್ಲಿ ಚುನಾವಣೆ ನಡೆದು ಪಂಚಾಯ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸ್ವತಂತ್ರವಾಗಿ ಅಧಿಕಾರ ಹಿಡಿದು ಕೆಲಸ ಮಾಡಬೇಕು ಎಂಬ ಉದ್ದೇಶ ಇತ್ತು. ವಿಪರ್ಯಾಸ ಎಂದರೆ ರಾಜೀವ ಗಾಂಧಿಯವರ ಪಕ್ಷದ ಸರ್ಕಾರ ರಾಜ್ಯದಲ್ಲಿ ಇದ್ದಾಗಲೇ ಆಯೋಗಕ್ಕೆ ಇದ್ದ ವಾರ್ಡ್ ಮೀಸಲು ನಿಗದಿ ಮಾಡುವ ಅಧಿಕಾರ ತಪ್ಪಿ ಹೋಯಿತು. ಆಗ ನಡೆದ ಶಾಸಕರ ಹುನ್ನಾರ ಈಗಲೂ ನಡೆದಿದೆ.

ಸರ್ಕಾರಕ್ಕಿಂತ ಶಾಸಕರಿಗೆ ಚುನಾವಣೆ ಬೇಡವಾಗಿದೆ. ಅದರಲ್ಲಿ ಮೂಲತಃ ಶಾಸಕರಾದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇನೂ ಹೊರತಲ್ಲ. ಚುನಾವಣೆ ಮುಂದಕ್ಕೆ ಹಾಕಿದರೆ, 2011ರ ಜನಗಣತಿ ಪರಿಗಣನೆಗೆ ತೆಗೆದುಕೊಂಡರೆ, ಹೆಣ್ಣುಮಕ್ಕಳಿಗೆ ಶೇಕಡ 50ರಷ್ಟು ಮೀಸಲಾತಿ. ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದವರಿಗೆ ಹೆಚ್ಚು ಸೀಟು ಸಿಗುತ್ತಿದ್ದುವು ಎಂಬುದೆಲ್ಲ ಕೇವಲ ತೋರಿಕೆಯ ಮಾತುಗಳು, ನೆಪಗಳು.

ಚುನಾವಣೆ ಆಯೋಗದ ಹಟದಿಂದಲಾಗಿ ಮುಂದಿನ ಮಾರ್ಚ್‌ನಲ್ಲಿ ಒಂದಲ್ಲ ಎರಡಲ್ಲ ಇನ್ನೂರೆಂಟು ಪೌರ ಸಂಸ್ಥೆಗಳ ಸುಮಾರು ಐದು ಸಾವಿರ ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. ಈ ವಾರ್ಡುಗಳಲ್ಲಿ ನಿಲ್ಲುವ ಅಭ್ಯರ್ಥಿಗಳ ಖರ್ಚು ವೆಚ್ಚದ ಹೊಣೆಯನ್ನು 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳೇ ವಹಿಸಿಕೊಳ್ಳಬೇಕಾಗುತ್ತದೆ. ಅದು ಆ ಪಕ್ಷ ಈ ಪಕ್ಷ ಎಂದು ಭೇದವೇನೂ ಇಲ್ಲ. ಏಕೆಂದರೆ ಇದು ಪಕ್ಷದ ಚಿಹ್ನೆಯ ಮೇಲೆ ನಡೆಯುವ ಚುನಾವಣೆ.

ಇನ್ನೇನು ತಡವಿಲ್ಲ. ಐದು ಸಾವಿರ ವಾರ್ಡ್‌ಗಳಿಗೆ ಹತ್ತು ಸಾವಿರ ಅಭ್ಯರ್ಥಿಗಳು ಪ್ರತಿ ಪಕ್ಷದಲ್ಲಿಯೂ ಹುಟ್ಟಿಕೊಳ್ಳುತ್ತಾರೆ. ಟಿಕೆಟ್ ಸಿಕ್ಕು ಗೆಲ್ಲಲಿ ಬಿಡಲಿ, ಖರ್ಚು ಮಾಡಲು ಹಣ ಸಿಕ್ಕೇ ಸಿಗುತ್ತದೆ ಎಂದು ಅವರಿಗೆ ಗೊತ್ತಿದೆ. ಟಿಕೆಟ್ ಸಿಗದೇ ಇದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಇಳಿಯುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ನಾಮಪತ್ರ ಒಗಾಯಿಸಲು ಹೆಚ್ಚು ಖರ್ಚೇನೂ ಬರುವುದಿಲ್ಲವಲ್ಲ! ಆಗ ಅವರನ್ನು ಹಿಂದೆ ಸರಿಸಲೂ ದುಡ್ಡು ಕೊಡಬೇಕಾಗುತ್ತದೆ!

ಈ ಚುನಾವಣೆ ಜನಾದೇಶ ಆಗಿಬಿಡಬಹುದು ಎಂಬ ಭೀತಿ ಎಲ್ಲ ಪಕ್ಷಗಳಿಗೂ ಕಾಡುತ್ತಿರುವುದರಿಂದ ಎಲ್ಲರೂ ಕೈ ಬಿಚ್ಚಿ ಹಣ ಖರ್ಚು ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂಬ ಒಂದು ಇಂಗಿತ ಕೊಟ್ಟು ಬಿಡಬಹುದು. ಅದನ್ನು ವಿಧಾನಸಭೆ ಚುನಾವಣೆಗಿಂತ ಮುಂಚೆಯೇ ತಿಳಿದುಕೊಳ್ಳಲು ಯಾವ ಪಕ್ಷಕ್ಕೂ ಇಷ್ಟವಿದ್ದಂತೆ ಇಲ್ಲ. ಈಗ ಶಾಸಕರ ದೌರ್ಬಲ್ಯವೇನು ಎಂದು ಸ್ಥಳೀಯ ಸಂಸ್ಥೆ ಚುನಾವಣೆ ಅಭ್ಯರ್ಥಿಗೆ ಗೊತ್ತಾಗಿದೆ. 

ಕಳೆದ ಐದು ವರ್ಷಗಳಲ್ಲಿ ಶಾಸಕರು ದುಡ್ಡು ಮಾಡಿಕೊಂಡಿದ್ದಾರೆ ಎಂದೇ ಚುನಾವಣೆ ಆಕಾಂಕ್ಷಿಯ ಅಭಿಪ್ರಾಯ. ಅದರಲ್ಲಿ ಸ್ವಲ್ಪವಾದರೂ ಕಕ್ಕಿಸಲು ಎಲ್ಲ ಅಭ್ಯರ್ಥಿಗಳು ಶಾಸಕರ ಮುಂದೆ ಕೈ ಒಡ್ಡುತ್ತಾರೆ. ಮತ್ತೆ ಕೇವಲ ಒಂದೆರಡು ತಿಂಗಳ ಅಂತರದಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದವರೇ ವಿಧಾನಸಭೆ ಚುನಾವಣೆಯಲ್ಲಿ ಶಾಸಕರ ಕಾರ್ಯಕರ್ತರೂ ಆಗುತ್ತಾರೆ. ಅವರೇ ವಿಧಾನಸಭೆ ಅಭ್ಯರ್ಥಿಗೆ ಮತ ಹಾಕಿಸಬೇಕು. ಆಗಲೂ ಹಣವನ್ನು ನೀರಿನಂತೆ ಚೆಲ್ಲಬೇಕಾಗುತ್ತದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿ ವಾರ್ಡಿನಲ್ಲಿ ಲಕ್ಷಗಟ್ಟಲೆ ಹಣ ಚೆಲ್ಲಿದರೆ ವಿಧಾನಸಭೆ ಚುನಾವಣೆಯಲ್ಲಿ ಕೋಟಿಗಟ್ಟಲೆ ಚೆಲ್ಲಬೇಕಾಗುತ್ತದೆ. ಈ ಚುನಾವಣೆ ಬೇಡ ಎಂದು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲು ಹೀಗೆ ಎರಡೆರಡು ಸಾರಿ ಹಣ ಖರ್ಚು ಮಾಡಬೇಕಾದ ಭಯವೇ ಕಾರಣ.

ಇದೆಲ್ಲ ಗೊತ್ತಿದ್ದೂ ಈ ವಿವಾದದಲ್ಲಿ ತುಟಿ ಪಿಟಕ್ ಎನ್ನದೆ ಮೌನವಾಗಿ ಇರುವ ಕೆ.ಜೆ.ಪಿ ಅಧ್ಯಕ್ಷ ಯಡಿಯೂರಪ್ಪನವರ ಲೆಕ್ಕ ಬೇರೆಯೇ ಇದ್ದಂತೆ ಕಾಣುತ್ತದೆ. ಬಿಜೆಪಿಯಲ್ಲಿ ಭಿನ್ನಮತ ಹುಟ್ಟಿ ಹಾಕಲು ಇದಕ್ಕಿಂತ ಅವರಿಗೆ ಒಳ್ಳೆಯ ಅವಕಾಶ ಮತ್ತೊಂದು ಇಲ್ಲ. ಬಿಜೆಪಿಯಲ್ಲಿ ಟಿಕೆಟ್ ಕೊಡದೇ ಇದ್ದರೆ ತಾನು ಕೊಡುತ್ತೇನೆ ಎಂದು ಅವರು ಹೇಳಬಹುದು. ಬಿಜೆಪಿಯಲ್ಲಿ ಟಿಕೆಟ್ ಕೊಡದೇ ಇದ್ದರೆ ಕೆ.ಜೆ.ಪಿಗೆ ಹೋಗುತ್ತೇನೆ ಎಂದು ಆಕಾಂಕ್ಷಿಗಳೂ ಹೆದರಿಸಬಹುದು. ಮೊದಲೇ ಒಡೆದ ಮನೆ ಆಗಿರುವ ಬಿಜೆಪಿಗೆ ಈ ಚುನಾವಣೆ ಗುಮ್ಮನಂತೆ ಬಾಗಿಲ ಮುಂದೆಯೇ ಬಂದು ನಿಂತಿದೆ.

ಈ ಗುಮ್ಮ ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ಪಕ್ಷಗಳನ್ನು ಕಾಡುವ ಸದ್ಯದ ಕಾರಣ. ಮೂಲ ಕಾರಣ ಬೇರೆಯೇ ಇದೆ. ಯಾವ ಶಾಸಕರಿಗೂ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಸಭೆಗಳು ನಡೆಯುವುದು ಬೇಕಿಲ್ಲ. ಅಲ್ಲಿ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವುದು ಬೇಕಿಲ್ಲ. ಆಶ್ರಯ ಮನೆಗಳ ಹಂಚಿಕೆಯ ಅಧಿಕಾರ ಗ್ರಾಮಸಭೆಗಳಲ್ಲಿ ಇರುವುದು ಅವರಿಗೆ ಬೇಕಿಲ್ಲ.

ತಮಗೆ ಆ ಅಧಿಕಾರ ಸಿಗುವ ವರೆಗೆ ಆಶ್ರಯ ಸಮಿತಿಗಳು ರಚನೆ ಆಗಲು ಶಾಸಕರು ಬಿಡಲೇ ಇಲ್ಲ. ವರ್ಷಗಳೇ ಕಳೆದು ಹೋದುವು. ವಿಕೇಂದ್ರೀಕರಣದ ಮಸೂದೆ ಅಂಗೀಕರಿಸಿದ ವಿಧಾನಮಂಡಲದಲ್ಲಿ ಈ ವಿಳಂಬ ಚರ್ಚೆಯಾಗಲೂ ಇಲ್ಲ. ಮತ್ತೆ ಅಲ್ಲಿ ಪಕ್ಷಭೇದ ಇರಲಿಲ್ಲ. ಇದು ಮನಸ್ಥಿತಿಯ ಸಮಸ್ಯೆ. ತಾಲ್ಲೂಕು ಪಂಚಾಯ್ತಿಯಲ್ಲಿಯೂ ಶಾಸಕರ ಮಾತೇ ನಡೆಯಬೇಕು. ಜಿಲ್ಲಾ ಪಂಚಾಯ್ತಿಯಲ್ಲಿಯೂ ಅಷ್ಟೇ. ತಾನು ಇರದಿದ್ದರೆ ಹುಲ್ಲಿನ ಎಸಳೂ ಚಲಿಸಲಾಗದು ಎಂಬುದೇ ಶಾಸಕರ ಹಟ.

ಯಡಿಯೂರಪ್ಪನವರ ಕೃಪೆಯಿಂದಾಗಿ ಈಗ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಹಣ ಹರಿದು ಬರುತ್ತಿದೆ. ನಗರೋತ್ಥಾನ ಯೋಜನೆಯಡಿ ಕನಿಷ್ಠ ಎಂಟು ಹತ್ತು ಕೋಟಿ ರೂಪಾಯಿಗಳಿಂದ ಗರಿಷ್ಠ ನೂರು ಕೋಟಿ ರೂಪಾಯಿವರೆಗೆ ಜನಸಂಖ್ಯೆ ಆಧಾರದ ಮೇಲೆ ಪ್ರತಿ ಪುರಸಭೆಗೆ, ನಗರಸಭೆಗೆ ಮತ್ತು ಪಾಲಿಕೆಗೆ ಹಣ ಬರುತ್ತಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾದರೆ ಈ ಹಣವನ್ನೆಲ್ಲ ಅವರೇ ಖರ್ಚು ಮಾಡುತ್ತಾರೆ. ಆಗ ಶಾಸಕರನ್ನು ಯಾರು ಕೇಳುವವರು? ನಜೀರ್‌ಸಾಬರ ಕಾಲದಲ್ಲಿ ಅಧಿಕಾರ ಹಸ್ತಾಂತರ ಆಗುವುದನ್ನು ತಡೆಯಲು ಒಂದು ಕಾರಣ ಇರಬಹುದು. ಈಗ ಇನ್ನೊಂದು ಕಾರಣ ಇರಬಹುದು. ಎರಡರ ಹಿಂದಿನ ಮನಸ್ಥಿತಿ ಮಾತ್ರ ಒಂದೇ. ಉಳಿದುದೆಲ್ಲ ಬೂಟಾಟಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT