ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರ ಓಲೈಕೆ ಕಾಂಗ್ರೆಸ್ಸಿಗೆ ಆಗದು, ಏಕೆಂದರೆ...

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶ ಚುನಾವಣೆ ಎದುರಿಸಲು ಕಾಂಗ್ರೆಸ್ಸಿನ ಕಾರ್ಯತಂತ್ರ ಏನಿರಬೇಕು? ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ಮುಂದಿನ ವರ್ಷ ಚುನಾವಣೆ ಎದುರಿಸಲಿದೆ. ಉತ್ತರ ಪ್ರದೇಶವೇ ಪ್ರತ್ಯೇಕ ದೇಶವಾಗಿದ್ದರೆ, ಜನಸಂಖ್ಯಾ ದೃಷ್ಟಿಯಿಂದ (21 ಕೋಟಿ ಜನ ಅಲ್ಲಿದ್ದಾರೆ) ಅದು ಜಗತ್ತಿನ ಐದನೇ ಅತಿದೊಡ್ಡ ದೇಶ ಆಗಿರುತ್ತಿತ್ತು.

ಅಲ್ಲಿನ ಚುನಾವಣೆಗೆ ತಂತ್ರ ರೂಪಿಸಲು ರಾಹುಲ್ ಗಾಂಧಿ ಅವರು ರಾಜಕೀಯ ಚಾಣಾಕ್ಷರೊಬ್ಬರನ್ನು ಕರೆತಂದಿದ್ದಾರೆ. ಕಾಂಗ್ರೆಸ್‌ಗೆ ಪುನರುಜ್ಜೀವನ ಕಲ್ಪಿಸಲು ಪ್ರಶಾಂತ್‌ ಕಿಶೋರ್‌ ಅವರನ್ನು ಕರೆತರಲಾಗಿದೆ.

(2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ಕಿಶೋರ್ ಅವರನ್ನು ಬಳಸಿಕೊಂಡಿದ್ದರು. ‘ಚಾಯ್‌ ಪೆ ಚರ್ಚಾ’ ಕಾರ್ಯಕ್ರಮ ಕಿಶೋರ್ ಅವರು ರೂಪಿಸಿದ್ದು ಎನ್ನಲಾಗಿದೆ. 2015ರ ಬಿಹಾರ ಚುನಾವಣೆ ವೇಳೆ ನಿತೀಶ್‌ ಕುಮಾರ್‌ ಇವರ ಸಲಹೆ ಪಡೆದಿದ್ದರು).

ಕಿಶೋರ್ ಅವರು ಎರಡು ಸಲಹೆಗಳನ್ನು ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಮೊದಲನೆಯದು: ಬ್ರಾಹ್ಮಣ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು. ಎರಡನೆಯದು: ಒಬ್ಬ ‘ಗಾಂಧಿ’ಯನ್ನು  (ರಾಹುಲ್‌ ಅಥವಾ ಪ್ರಿಯಾಂಕಾ ಗಾಂಧಿ) ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು.

ಎರಡನೆಯ ಸಲಹೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಒಂದು ಪ್ರಾಂತ್ಯಕ್ಕೆ ಸೀಮಿತವಾಗುವ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವುದು ಗಾಂಧಿಗಳಿಗೆ ಸಾಧ್ಯವಿಲ್ಲ. ಹಾಗೆ ನೋಡಿದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ರಾಹುಲ್ ಅವರನ್ನು ಮೋದಿ ಅವರ ಜೊತೆ ಹೋಲಿಸಲಿಕ್ಕೂ ಒಪ್ಪುತ್ತಿರಲಿಲ್ಲ. ‘ನಮ್ಮ ರಾಹುಲ್‌, ರಾಷ್ಟ್ರೀಯ ನಾಯಕ.

ಮೋದಿ ಅವರು ಪ್ರಾದೇಶಿಕ ನಾಯಕ’ ಎಂದು ಕಾಂಗ್ರೆಸ್ಸಿನ ಚಮಚಾಗಳು ದೊಡ್ಡಸ್ತಿಕೆಯ ಮಾತು ಆಡುತ್ತಿದ್ದರು. ಈ ಮಾತಿಗೆ ಮೋದಿ ಅವರು, ‘ರಾಹುಲ್‌ ಅವರು ರಾಷ್ಟ್ರೀಯ ನಾಯಕರೊಂದೇ ಅಲ್ಲ. ಅವರಿಗಿರುವ ಇಟಲಿಯ ಸಂಪರ್ಕ ಪರಿಗಣಿಸಿದರೆ, ರಾಹುಲ್‌ ಅಂತರರಾಷ್ಟ್ರೀಯ ನಾಯಕರೂ ಹೌದು’ ಎಂದು ಅದ್ಭುತ ಪ್ರತಿಕ್ರಿಯೆ ನೀಡಿದ್ದರು.

ಕಿಶೋರ್‌ ಅವರು ಬ್ರಾಹ್ಮಣ ಮತಗಳ ಬಗ್ಗೆ ನೀಡಿರುವ ಸಲಹೆ ಹೆಚ್ಚು ಆಸಕ್ತಿಕರ. ಯಾದವರು ಮುಲಾಯಂ ಸಿಂಗ್‌ ಯಾದವ್‌ ಜೊತೆ, ದಲಿತರು ಮಾಯಾವತಿ ಜೊತೆ, ಮೇಲ್ಜಾತಿಯವರು ಬಿಜೆಪಿಯ ಜೊತೆ ಗುರುತಿಸಿಕೊಂಡಿರುವಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಯಾವ ಜಾತಿಯೂ ಈಗ ಗುರುತಿಸಿಕೊಂಡಿಲ್ಲ.

ಒಂದು ಜಾತಿ, ಪಕ್ಷದೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು ಬಹುಮುಖ್ಯ ಹಂತ. ಪಕ್ಷಕ್ಕೆ ಗೆಲ್ಲುವ ಅವಕಾಶ ಇದೆ ಎಂಬುದು ಮನವರಿಕೆ ಆದರೆ ಮುಸ್ಲಿಮರಂತಹ ಸಮುದಾಯಗಳು ಬೆಂಬಲಕ್ಕೆ ಬರುತ್ತವೆ.

ಉತ್ತರ ಪ್ರದೇಶದ ಬ್ರಾಹ್ಮಣರು ಹಿಂದೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರು. ಹಾಗಾಗಿ ಅವರ ಮತಗಳನ್ನು ಈಗ ಪಡೆಯುವುದು (ಅಲ್ಲಿನ ಜನಸಂಖ್ಯೆಯಲ್ಲಿ ಬ್ರಾಹ್ಮಣರ ಪಾಲು ಅಂದಾಜು ಶೇಕಡ 10ರಷ್ಟು) ಸುಲಭ ಎನ್ನುವುದು ಕಿಶೋರ್ ಅವರ ತರ್ಕ. ಅದು ಸತ್ಯವೂ ಹೌದು.

ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎನ್‌.ಡಿ. ತಿವಾರಿ, ಕಮಲಾಪತಿ ತ್ರಿಪಾಠಿ, ಗೋವಿಂದ ವಲ್ಲಭ ಪಂತ್‌ ಮತ್ತು ಶ್ರೀಪತಿ ಮಿಶ್ರಾ ಬ್ರಾಹ್ಮಣ ಸಮುದಾಯದವರು. ಆದರೆ ಅಲ್ಲಿನ ವಿಧಾನಸಭೆಯನ್ನು ಕಾಂಗ್ರೆಸ್ ಕಡೆಯ ಬಾರಿ ಗೆದ್ದುಕೊಂಡಿದ್ದು ಮೂವತ್ತು ವರ್ಷಗಳ ಹಿಂದೆ. ಹಲವರಿಗೆ ಇದು ನೆನಪಿನಲ್ಲಿ ಇರದಿದ್ದರೂ, ನಾನು ಆ ಕಾಲವನ್ನು ನೆನಪಿಸಿಕೊಳ್ಳಬಲ್ಲೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 65ಕ್ಕಿಂತ ಹೆಚ್ಚಿನವರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಉತ್ತರ ಪ್ರದೇಶದಲ್ಲಿ ಇಂದು ಮತದಾರರಾಗಿವವರ ಪೈಕಿ ಶೇಕಡ 5ಕ್ಕಿಂತ ಕಡಿಮೆ ಜನ 1985ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂಬುದು ನನ್ನ ಲೆಕ್ಕಾಚಾರ. ಇದರ ಅರ್ಥ, ಗಾಂಧಿಗಳಿಗೆ ಮತ ನೀಡಿದ ನೆನಪು ಇರುವ ಮತದಾರರ ಸಂಖ್ಯೆ ಈಗ ಅಲ್ಲಿ ತುಂಬಾ ಕಡಿಮೆ.

ಇದಕ್ಕಿಂತಲೂ ಗಂಭೀರವಾದ ಇನ್ನೊಂದು ಸಮಸ್ಯೆ ಇದೆ. ಸ್ವಾರ್ಥ ರಾಜಕೀಯ ಕಾರಣವನ್ನು ಮಾತ್ರ ಇಟ್ಟುಕೊಂಡು ಒಂದು ಸಮುದಾಯದ ಮತ ಸೆಳೆಯುವುದು ಸುಲಭವಲ್ಲ. ಆ ಸಮುದಾಯಕ್ಕೆ ಏನಾದರೊಂದನ್ನು ಕೊಡಬೇಕಾಗುತ್ತದೆ.

ಕಾಂಗ್ರೆಸ್‌ ಏನು ಕೊಡಬಲ್ಲದು? ಬ್ರಾಹ್ಮಣ ಸಮು­ದಾಯದವರಿಗೆ ಟಿಕೆಟ್‌ ನೀಡಬಲ್ಲದು, ಅದನ್ನು ಹೊರತುಪಡಿಸಿದರೆ? ಕಾಂಗ್ರೆಸ್ಸಿನ ರಾಜಕೀಯ ಬ್ರಾಹ್ಮಣರ ಪಾಲಿಗೆ ಆಕರ್ಷಕ ಆಗಿ ಉಳಿದಿದೆಯೇ?

ಇಲ್ಲ ಎಂದು ಹೇಳಬೇಕಾಗುತ್ತದೆ. ಕೇವಲ ನೀತಿಗಳ ವಿಚಾರದಲ್ಲಿ ಮಾತನಾಡುವುದಾದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಬಡವರನ್ನು, ಅಂದರೆ ಕೆಳ ಜಾತಿಯವರನ್ನು ಕೇಂದ್ರೀಕರಿಸಿಕೊಂಡು ಕಾರ್ಯಕ್ರಮ ರೂಪಿಸಿತು. ಆ ಕೆಲಸಗಳು ನರೆಗಾ, ಶಿಕ್ಷಣ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆಯಲ್ಲಿ ಪ್ರತಿಫಲಿತವಾದವು.

ಇಂಥ ಕಾರ್ಯಕ್ರಮಗಳು ಮಧ್ಯಮ ವರ್ಗದ ಮತದಾರರ ಪಾಲಿಗೆ ಆಕರ್ಷಣೀಯವಾಗಿ ಉಳಿದಿಲ್ಲ. ಇಂಥ ಕಾರ್ಯಕ್ರಮಗಳು ಬ್ರಾಹ್ಮಣ ಮತದಾರರಲ್ಲಿ ಉತ್ಸಾಹ ಮೂಡಿಸುವ ಬಗ್ಗೆ ನನ್ನಲ್ಲಿ ಅನುಮಾನಗಳಿವೆ.

ವಿಧಾನಸಭಾ ಚುನಾವಣೆಗಳಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ನೀಡುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದ್ದನ್ನು ಆಧರಿಸಿ ಕಿಶೋರ್‌ ಈ ಸಲಹೆ ನೀಡಿದ್ದಾರೆ. ಬ್ರಾಹ್ಮಣರು ಬಿಜೆಪಿಗೆ ಮತ ನೀಡುವ ಪ್ರಮಾಣ 2002ರಲ್ಲಿ ಶೇಕಡ 50ರಷ್ಟಿತ್ತು, 2007ರಲ್ಲಿ ಶೇ 44ರಷ್ಟಾಯಿತು, 2012ರಲ್ಲಿ ಶೇ 38ಕ್ಕೆ ಕುಸಿಯಿತು.

ಬ್ರಾಹ್ಮಣರೇಕೆ ಬಿಜೆಪಿಯನ್ನು ಬೆಂಬಲಿಸುತ್ತಾರೆ? ಏಕೆಂದರೆ ಹಿಂದುತ್ವ ಸಿದ್ಧಾಂತವು ಸಂಪ್ರದಾಯವಾದದ ಪರ ಇದೆ. ಗೋಹತ್ಯೆ ನಿಷೇಧ, ದೇವಸ್ಥಾನಗಳ ನಿರ್ಮಾಣಕ್ಕೆ ಹಿಂದುತ್ವವು ನೀಡುವ ಆದ್ಯತೆಯನ್ನು ಬಹಳಷ್ಟು ಬ್ರಾಹ್ಮಣರು ಇಷ್ಟಪಡುತ್ತಾರೆ. ಮೀಸಲಾತಿ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಲವು ಬಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ.

ಅವು ಇತ್ತೀಚೆಗೆ ದಲಿತ ವಿದ್ಯಾರ್ಥಿಗಳ ವಿಚಾರದಲ್ಲಿ ಕಠಿಣ ನಿಲುವು ತಳೆದಿವೆ. ಇದೂ ಕೂಡ ಬ್ರಾಹ್ಮಣರಲ್ಲಿ ಹಲವರು ಇಷ್ಟಪಡುವಂಥವು. ಆದರೆ, ಇಂಥ ಕೆಲಸಗಳನ್ನು ಮಾಡಲು ಕಾಂಗ್ರೆಸ್ಸಿಗೆ ಯಾವತ್ತೂ ಸಾಧ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಇನ್ನುಳಿದ ಮತಗಳು ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳ ನಡುವೆ ಹಂಚಿಹೋಗುತ್ತವೆ. ಈ ಎರಡು ಪಕ್ಷಗಳು ಬ್ರಾಹ್ಮಣರ ತಲಾ

ಶೇ 20ರಷ್ಟು ಮತಗಳನ್ನು ಪಡೆಯುತ್ತವೆ. ಬ್ರಾಹ್ಮಣ ಮತಗಳ ವಿಭಜನೆ ಮುಂದೆಯೂ ಇರುತ್ತದೆ. ಏಕೆಂದರೆ ಬೇರೆ ಯಾವುದೇ ಜಾತಿಯಲ್ಲಿರುವಂತೆ ಬ್ರಾಹ್ಮಣರಲ್ಲೂ ಮತ ಚಲಾವಣೆ ವಿಚಾರದಲ್ಲಿ ಒಗ್ಗಟ್ಟಿಲ್ಲ. ಅವರಲ್ಲಿ ಕೂಡ ಹಲವರು ಬಲಾಢ್ಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ಏಕೆಂದರೆ ಗೆದ್ದವರ ಜೊತೆ ಇರಬೇಕು ಎಂಬ ಇಚ್ಛೆ ಅವರಲ್ಲೂ ಇದೆ.

ಕಾಂಗ್ರೆಸ್ ಪಕ್ಷವು ಮೊದಲನೆಯದಾಗಿ ತನ್ನ ನೀತಿಗಳ ಬಗ್ಗೆ ಗಮನಹರಿಸಬೇಕು. ಯಾವ ಬಗೆಯ ಮತದಾರರನ್ನು ತಾನು ಆಕರ್ಷಿಸಬಲ್ಲೆ ಎಂಬುದನ್ನು ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಗಮನ ಹರಿಸಬೇಕು. ಕಿಶೋರ್‌ ಸಲಹೆ ನೀಡುವಂತೆ, ಒಂದಿಷ್ಟು ಮತದಾರರನ್ನು ಮೊದಲೇ ಗುರುತಿಸಿಕೊಂಡು, ಅವರಿಗೆ ಬೇಕಾಗುವಂತಹ ನೀತಿಗಳನ್ನು ನಂತರದಲ್ಲಿ ರೂಪಿಸುವುದು ಕಾಂಗ್ರೆಸ್ಸಿನಿಂದ ಆಗದು.

ಕಾಂಗ್ರೆಸ್ಸಿನ ಬ್ರ್ಯಾಂಡ್‌ಗೆ ದೊಡ್ಡ ಮಟ್ಟದಲ್ಲಿ ಧಕ್ಕೆ ಆಗಿದೆ. ಅದು ಈಗ ಭ್ರಷ್ಟಾಚಾರ, ಅಸಾಮರ್ಥ್ಯ ಹಾಗೂ ವಂಶಪಾರಂಪರ್ಯ ಆಡಳಿತದ ಜೊತೆ ಬೆಸೆದುಕೊಂಡಿದೆ. ತುರ್ತು ಪರಿಸ್ಥಿತಿಯ ನಂತರ ವಿರೋಧ ಪಕ್ಷದಲ್ಲಿ ಕುಳಿತಿದ್ದಾಗ ಇದ್ದ ಸ್ಥಿತಿಗಿಂತ ಬೇರೆಯದೇ ಆದ ಸ್ಥಿತಿಯಲ್ಲಿ ಗಾಂಧಿಗಳು ಈಗ ಇದ್ದಾರೆ.

ಇಂದು ಕಾಂಗ್ರೆಸ್ ಪಕ್ಷ ಸಾವಿನ ಅಂಚಿನಲ್ಲಿದೆ. ಯಾವುದೇ ಮತದಾರರ ಸಮೂಹ, ಜಾತಿ ಅಥವಾ ಗುಂಪು ಈ ಪಕ್ಷವನ್ನು ಆಕರ್ಷಣೆಯಿಂದ ಕಾಣುತ್ತಿಲ್ಲ. ‘ಬ್ರಾಹ್ಮಣ ಕಾರ್ಯತಂತ್ರ’ ಯಶಸ್ಸು ತರುವ ಸಾಧ್ಯತೆಯೇ ಇಲ್ಲ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT