ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯಂಕರವಾದ ಪ್ರಸಾದ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಒಬ್ಬ ರಾಜ. ಅವನು ಅವಿವೇಕಿ ಎಂದು ಎಲ್ಲರೂ ಕರೆಯುತ್ತಿದ್ದರು. ಆತನ ಮನಸ್ಸು ಒಂದು ಕ್ಷಣ ಹೀಗೆ, ಒಂದು ಕ್ಷಣ ಹಾಗೆ. ಅವನು ಯಾವಾಗ ಕೋಪಿಸಿ­ಕೊಳ್ಳುತ್ತಾನೋ, ಯಾವಾಗ ಕೃಪೆ ಮಾಡುತ್ತಾನೋ ಹೇಳುವುದು ಕಷ್ಟ.

ಆ ಊರಿನಲ್ಲಿ ಒಬ್ಬ ಧೋಬಿ ಇದ್ದ. ಆತ ಬುದ್ಧಿವಂತ, ಪ್ರಾಮಾಣಿಕ. ತನ್ನ ಕೆಲಸವನ್ನು ತುಂಬ ಪ್ರೀತಿಯಿಂದ ಮಾಡುತ್ತಿದ್ದ. ಒಂದು ದಿನ ಅವನ ಕಡೆಗೆ ಒಬ್ಬ ಕುಂಬಾರ ಬಂದ. ಆತನೂ ಒಳ್ಳೆಯವನೇ. ಆದರೆ, ಸ್ವಲ್ಪ ಆಸೆ ಹೆಚ್ಚು. ಆತ ಧೋಬಿಗೆ ಹೇಳಿದ, ‘ನಾಳೆ ನನ್ನನ್ನು ರಾಜ ಅರಮನೆಗೆ ಕರೆದಿದ್ದಾನೆ. ಅಲ್ಲಿಗೆ ಹೋಗುವಾಗ ನನ್ನ ಬಟ್ಟೆ ತುಂಬ ಶುದ್ಧವಾಗಿರಬೇಕಲ್ಲವೇ?’ ಹೀಗೆ ಹೇಳಿ ತನ್ನ ಬಣ್ಣದ ಬಟ್ಟೆಗಳನ್ನು ಕೊಟ್ಟ.

ಧೋಬಿ ಅವುಗಳನ್ನು ತೊಳೆಯಲು ಬಿಸಿನೀರಿಗೆ ಹಾಕಿದಾಗ ಅವು ಬಣ್ಣಗಳನ್ನು ಕಳೆದುಕೊಂಡು ಬಿಳಿಯವಾಗಿ ಬಿಟ್ಟವು. ಕುಂಬಾರ ಧೋಬಿಯೊಡನೆ ಜಗಳವಾಡಿ ಆ ಬಿಳಿಯ ಬಟ್ಟೆಗಳನ್ನೇ ಧರಿಸಿ ಅರಮನೆಗೆ ಹೋದ. ರಾಜನಿಗೆ ಕುಂಬಾರನ ಬಿಳಿಯ ಬಟ್ಟೆಗಳು ಇಷ್ಟವಾದವು. ‘ಯಾರು ನಿನ್ನ ಬಟ್ಟೆ­ಗಳನ್ನು ಇಷ್ಟು ಶುಭ್ರವಾಗಿ ಒಗೆದವರು?’ ಎಂದು ಕೇಳಿದ.

ಆಗ ಮೊದಲೇ ಧೋಬಿಯ ಮೇಲೆ ಕೋಪಗೊಂಡಿದ್ದ ಕುಂಬಾರ ಅವನ ಹೆಸರನ್ನು ಹೇಳಿ, ‘ಮಹಾಸ್ವಾಮಿ, ಆತ ಬಟ್ಟೆಗಳನ್ನಷ್ಟೇ ಏಕೆ, ಪ್ರಾಣಿಗಳನ್ನು ಬೆಳ್ಳಗೆ ಮಾಡುತ್ತಾನೆ’ ಎಂದ. ಮೊದಲೇ ಅವಿವೇಕಿಯಾಗಿದ್ದ ರಾಜನಿಗೆ ಪಿತ್ತ ನೆತ್ತಿಗೇರಿತು. ಹೌದೇ? ನನಗೆ ಬಿಳಿಯ ಆನೆಯ ಮೇಲೆ ಕೂಡ್ರಲು ಮನಸ್ಸಾಗಿದೆ. ಆ ಧೋಬಿಗೆ ಹೇಳಿ ನನ್ನ ಪಟ್ಟದಾನೆಯನ್ನು ಬೆಳ್ಳಗೆ ಮಾಡಬೇಕು ಎಂದು ಧೋಬಿಯನ್ನು ಕರೆಸಿ ತನ್ನ ಇಚ್ಛೆಯನ್ನು ಹೇಳಿದ.

ಧೋಬಿಗೆ ಇದು ಕುಂಬಾರನದೇ ಕಿತಾಪತಿ ಎಂದು ಗೊತ್ತಾಯಿತು. ತಕ್ಷಣವೇ ಹೇಳಿದ, ‘ಯಾಕೆ ಸಾಧ್ಯವಿಲ್ಲ ಮಹಾಸ್ವಾಮಿ? ನಾನು ವಸ್ತುವನ್ನು ಬೆಳ್ಳಗೆ ಮಾಡಲು ಅದನ್ನು ಬಿಸಿ ನೀರಿನಲ್ಲಿ ಮುಳುಗಿಸಬೇಕು. ದಯವಿಟ್ಟು ನಮ್ಮ ಕುಂಬಾರನಿಗೆ ಹೇಳಿ ಆನೆಯನ್ನು ಮುಳುಗಿಸುವಷ್ಟು ದೊಡ್ಡ ಪಾತ್ರೆಯನ್ನು ಮಾಡಿಕೊಡಲು ಆಜ್ಞಾಪಿಸಿ’. ರಾಜ ಕುಂಬಾರನಿಗೆ ಆಜ್ಞೆ ನೀಡಿದ.

ಕುಂಬಾರ ಎದೆ ಒಡೆದುಕೊಂಡ. ಅವನು ಬಿಟ್ಟ ಬಾಣ ಅವನನ್ನೇ ಗಾಸಿ ಮಾಡಿತ್ತು. ಆದರೂ ಹತ್ತಾರು ಜನರನ್ನು ಸೇರಿಸಿ ದೊಡ್ಡದೊಂದು ಮಡಕೆ ಮಾಡಿದ. ಧೋಬಿ ಅದರಲ್ಲಿ ನೀರು ತುಂಬಿಸಿ ಆನೆಯನ್ನು ಇಳಿಸಲು ಹೇಳಿದ. ಆನೆ ಕಾಲಿಟ್ಟೊಡನೆ ಮಣ್ಣಿನ ಪಾತ್ರೆ ಒಡೆದು ಚೂರಾಯಿತು. ರಾಜ, ಇದೆಂತಹ ಪಾತ್ರೆ ಮಾಡಿದ್ದೀಯಾ? ಎಂದು ಕೋಪದಿಂದ ಛಡಿಯಿಂದ ಹೊಡೆಸಿ ಕುಂಬಾರನನ್ನು ದೇಶದಿಂದ ಓಡಿಸಿಬಿಟ್ಟ. ನಂತರ ಧೋಬಿಯ ಕಡೆಗೆ ತಿರುಗಿ, ‘ಏನಯ್ಯ ಇಂಥ ಪಾತ್ರೆಯಿಲ್ಲದೇ ಆನೆಯನ್ನು ಬೆಳ್ಳಗೆ ಮಾಡುವುದಾಗುವುದಿಲ್ಲವೇ? ಎಂದು ಕೇಳಿದ.

ಖಂಡಿತ ಮಾಡುತ್ತೇನೆ ಸ್ವಾಮಿ. ನಾಳೆ ನಮ್ಮ ಮನೆಗೆ ಆನೆಯನ್ನು, ಅದರೊಂದಿಗೆ ನಾಲ್ಕಾರು ಆಳುಗಳನ್ನು ಕಳುಹಿಸಿಬಿಡಿ’ ಎಂದ. ಮರುದಿನ ಆನೆ ಬಂದಾಗ ಅದನ್ನು ಹಗ್ಗದಿಂದ ಬಲವಾಗಿ ಕಟ್ಟಿಸಿ ನೀರಿನಲ್ಲಿ ಕರಗದ ಬಿಳಿ ಬಣ್ಣ­ವನ್ನು ಆನೆಯ ದೇಹಕ್ಕೆಲ್ಲ ಚೆನ್ನಾಗಿ ಬಳಿದುಬಿಟ್ಟ. ಬಣ್ಣ ಒಣಗಿದ ಮೇಲೆ ಅರ­ಮನೆಗೆ ಕಳುಹಿಸಿದ. ರಾಜನಿಗೆ ಬಿಳಿ ಆನೆಯನ್ನು ನೋಡಿ ತುಂಬ ಸಂತೋಷವಾಗಿ ಧೋಬಿಗೆ ಎರಡು ಲಕ್ಷ ಬಂಗಾರದ ನಾಣ್ಯಗಳನ್ನು, ಹತ್ತು ಕುದುರೆಗಳನ್ನು ಬಹು­ಮಾನ­ವಾಗಿ ಕೊಟ್ಟ.

ಹಣ, ಕುದುರೆಗಳನ್ನು ಕಟ್ಟಿಕೊಂಡು ಅಂದೇ ಧೋಬಿ ರಾಜ್ಯ­ಬಿಟ್ಟು ಹೋಗಿಬಿಟ್ಟ. ಪಕ್ಕದ ರಾಜ್ಯದಲ್ಲಿ ನದಿಯ ದಂಡೆಯ ಮೇಲೆ ನಿಂತಾಗ ಅಲ್ಲಿ ಕುಂಬಾರನನ್ನು ಕಂಡ. ಇವನ ಐಶ್ವರ್ಯವನ್ನು ಕಂಡು ಆಶ್ಚರ್ಯಪಟ್ಟ ಕುಂಬಾರನಿಗೆ ಧೋಬಿ ಹೇಳಿದ, ‘ರಾಜ ಮೂರ್ಖನಾಗಿದ್ದಾಗ ಪ್ರಜೆಗಳು ಒಬ್ಬ­ರೊಬ್ಬರೊಡನೆ ಜಗಳ­ಮಾಡ­ಬಾರದು. ನಾವಿಬ್ಬರೂ ಸ್ನೇಹ­ದಿಂದ ಬದುಕಿ ಜೀವನ ಮಾಡೋಣ ನಡೆ’ ಎಂದ. ಇಬ್ಬರೂ ಜೊತೆಯಾಗಿ ಹೊರಟರು. ಮೂರ್ಖ ರಾಜ­ನನ್ನು, ಯಜಮಾನನನ್ನು ಒಲಿಸಲು ನೋಡ­ಬಾರದು. ಅವನಿಂದ ಯಾವಾಗ ವರ ದೊರೆತೀತು ಅಥವಾ ಯಾವಾಗ ಶಾಪ ಬಂದೀತು ಎಂದು ಹೇಳುವುದು ಕಷ್ಟ. ಒಂದು ಕ್ಷಣ ತುಷ್ಟನಾಗುವ, ಮರುಕ್ಷಣದಲ್ಲಿ ದುಷ್ಟನಾಗುವ ಯಜಮಾನನ ಪ್ರಸಾದವೂ ಭಯಂಕರವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT