ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಗೂ ಅಂಟಿದ ಮೈಲಿಗೆ

Last Updated 25 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೂರು–ನಾಲ್ಕು ವರ್ಷಗಳ ಹಿಂದೆ ಬೆಂಗಳೂ­ರಿನಲ್ಲಿ ‘ಕಬೀರ್ ಉತ್ಸವ’ ನಡೆದಿತ್ತು. ಟಿಕೆಟ್ ಪಡೆಯಲು ಪರದಾಡಿ ಕಡೆಗೂ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿತ್ತು. ವಾರವೆಲ್ಲಾ ಕಾರ್ಯ­ಕ್ರ­ಮದಲ್ಲಿ ಜನ ಕಿಕ್ಕಿರಿದು ತುಂಬಿರು­ತ್ತಿದ್ದರು. ಕಡೆಯ ದಿನ ಪಾಕಿಸ್ತಾನದ ಗಾಯಕ ಉಸ್ತಾದ್ ಫತೇ ಅಲಿಖಾನ್ ಹಾಡುವಾಗ ಜನ ಎದ್ದು ಚಪ್ಪಾಳೆ ತಟ್ಟಿ ಸಂಭ್ರಮದಿಂದ ಕುಣಿದರು. ಯಾವುದು ಹೀಗೆ ಜನರನ್ನು ಸೆಳೆದದ್ದು? ಅವರ ರಾಗವೇ, ಸಾಹಿತ್ಯವೇ, ಭಾಷೆಯೇ, ಹಾಡಿನ ಅರ್ಥವೇ ಅಥವಾ ಹಾಡುಗಾರರಲ್ಲಿದ್ದ ಚೈತನ್ಯವೇ? ಒಂದು ಬಾರಿ ಕೇಳಿದ ಆ ಹಾಡು­ಗಳನ್ನು ಮತ್ತೆ ಮತ್ತೆ ಕೇಳಬೇಕಿನಿಸುವಾಗ ಪಾಕಿ­ಸ್ತಾನಿ ಗಾಯಕನೆಂ­ಬುದು ಬಾಂಧವ್ಯಕ್ಕೆ ಹೆಚ್ಚಿನ ತೂಕವನ್ನೂ ತಂದಿರಬಹುದು. ಮಾತನಾಡುತ್ತಾ ಉಸ್ತಾದ್ ತಾನು ವಿಭಜನೆ ಪೂರ್ವದ ಭಾರತದಲ್ಲಿ ಹುಟ್ಟಿದ ಭಾರತೀಯನೆಂದಾಗ ಜನ ಮತ್ತಷ್ಟು ಆವೇಶಕ್ಕೊಳಗಾದರು.

ಮೊಘಲರ ಕಡೆಯ ದೊರೆ ಬಹದ್ದೂರ್ ಷಾ ಜಾಫರ್ ತೊಂಬತ್ತನೆಯ ವಯಸ್ಸಿನಲ್ಲಿ ೧೮೫೭ರ ಹೋರಾಟದ ನಂತರ ಬ್ರಿಟಿಷರ ಬಂಧನಕ್ಕೆ ಒಳಗಾಗಬೇಕಾಯಿತು. ಅವರನ್ನು ನೇಪಾಳದ ಜೈಲಿಗೆ ಕರೆದೊಯ್ಯುವಾಗ ಹಿಂದೂ­ಸ್ತಾ­ನದ ಹಿಡಿ ಮಣ್ಣನ್ನು ತನ್ನ ವಲ್ಲಿಗೆ ಕಟ್ಟಿಕೊ­ಳ್ಳುತ್ತಾ ತಾನು ಸತ್ತಾಗ ತನ್ನ ನೆಲದ ಮಣ್ಣನ್ನು ತನ್ನ ಜೊತೆಗೆ ಹಾಕುವಂತೆ ಕೇಳಿಕೊಂಡ. ಬಂಧ­ನದಲ್ಲಿದ್ದ ಬಹದ್ದೂರ್ ಷಾ ಜೈಲಿನ ಗೋಡೆಯ ಮೇಲೆಲ್ಲಾ ಇದ್ದಲಿನಲ್ಲಿ ಶಾಯಿರಿಗಳನ್ನು ಬರೆ­ಯು­ತ್ತಾ ಕೊನೆಯ ದಿನಗಳನ್ನು ಕಳೆದ. ಅಲ್ಲಿ ಬಳಸಿದ ಉರ್ದು ಸಾಹಿತ್ಯ ದೇಶಭಕ್ತಿಗೇ ಸಂಕೇತವಾದಂತಿದೆ.

ಮಿರ್ಜಾ ಗಾಲಿಬ್‌ನ ಗಜ಼ಲ್‌ಗಳು ಶತಮಾನ­ಗಳ ಕಾಲ ಜನಮಾನಸದಲ್ಲಿ ಉಳಿದಿದ್ದರೆ ಅದು ಭಾಷೆಗೆ ಅತೀತವಾದ ಭಾವುಕ ಕಾರಣಗಳಿಗಾಗಿ. ಗಾಲಿಬ್‌ನ ಭಾಷೆ ಉರ್ದು ಎಂದು ಹಳದಿ ಕಣ್ಣಿಂದ ಕಂಡರೆ ನಮ್ಮ ಮುಂದಿನ ಪೀಳಿಗೆಗೆ ಮಾಡು­ತ್ತಿರುವ ಅನ್ಯಾಯಗಳಲ್ಲಿ ಅದೂ ಒಂದಾಗುವುದು. 

ಭಾರತದ ಹಿಂದಿ ಚಲನಚಿತ್ರರಂಗ ಬಹು ದೀರ್ಘಕಾಲ ರಂಜಿಸಿದ್ದು ಉರ್ದು ಸಾಹಿತ್ಯ ಮತ್ತು ಸಂಗೀತದಿಂದ. ಇಂದಿಗೂ ಜನ ಹಳೆಯ ಹಿಂದಿ ಚಿತ್ರಗೀತೆಗಳನ್ನು ರೇಡಿಯೊದಲ್ಲಿ  ಕೇಳುತ್ತಾ, ಗುನುಗುತ್ತಾ ಇರುತ್ತಾರೆ. ಆ ಅರ್ಥ­ದಲ್ಲಿ ಉರ್ದು ಸಾಹಿತ್ಯವಿಲ್ಲದಿದ್ದರೆ ಹಿಂದಿ ಸಿನಿಮಾ ಜಗತ್ತು ಇಲ್ಲಿಯವರೆಗೆ ಕಂಡಷ್ಟು ಸಂಪನ್ನವಾಗಿರುತ್ತಿರಲಿಲ್ಲ. ಹಿಂದಿ ಸಿನಿಮಾಗಳೆನಿ­ಸಿಕೊಂಡು ಮೆರೆದದ್ದು ಉರ್ದು ಭಾಷೆ ಹಾಗೂ ಸಂಸ್ಕೃತಿ. ಅಲ್ಲಿಯ ಜನ ಹಿಂದಿ, ಉರ್ದುವೆಂದು ಭಾಷೆಯ ಭೇದವೆಣಿಸದೆ ಅವುಗಳನ್ನು ಸ್ವೀಕರಿಸಿದ್ದಾರೆ.

‘ಈ ನಾಡಿನಲ್ಲಿಯೇ ಹುಟ್ಟಿ ಬೆಳೆದ ಜನಪದರ ಭಾಷೆಯೊಂದು ಧರ್ಮದ ಹೆಸರನ್ನು ಪಡೆದು­ದಾದರೂ ಹೇಗೆ’ ಎಂಬ ಪ್ರಶ್ನೆ ಈ ಎಲ್ಲ ಸಂಗತಿ­ಗಳನ್ನು ಚರ್ಚಿಸಲು ಪ್ರೇರಣೆ ನೀಡಿದೆ.

ಭಾರತಕ್ಕೆ ಬಂದ ಟರ್ಕಿಯರು ಟರ್ಕಿ ಭಾಷೆ­ಯನ್ನು, ಪರ್ಷಿಯನ್ನರು ಪರ್ಷಿಯನ್ ಭಾಷೆ­ಯನ್ನು, ಅರಬರು ಅರಬ್ಬೀ ಭಾಷೆಯನ್ನು, ಕಡೆ­ಯ­ದಾಗಿ ಬಂದ ಆಫ್ಘನ್ನರು ಪುಷ್ಟೂ, ಪಕ್ತೂನಿ­ಸ್ತಾನದ ಭಾಷೆಯನ್ನು ಭಾರತಕ್ಕೆ ಹೊತ್ತು ತಂದರು. ಉತ್ತರ ಭಾರತದಲ್ಲಿ ಬಳಕೆಯಲ್ಲಿದ್ದ ಬ್ರಿಜ್‌ ಭಾಷಾ, ಘಡೀ ಬೋಲಿ, ಮೈಥಿಲಿ, ಬಂಗಾಳಿ ಹೀಗೆ ಹಲವು ಭಾಷೆಗಳೊಂದಿಗೆ ಸೇರಿ ಹುಟ್ಟಿದ ಭಾಷೆಯನ್ನು ಹಿಂದ್‌ವಿ, ಜ಼ಬಾನ್–-ಎ–-ಹಿಂದೂಸ್ತಾನಿ ಎಂದು ಇತ್ಯಾದಿಯಾಗಿ ಕರೆಯು­ತ್ತಿ­ದ್ದರು. ಹಾಗೇ ಸೈನಿಕರು ಹಲವು ಭಾಷೆಗಳನ್ನು ಬೆರೆಸಿ ಮಾತನಾಡುತ್ತಿದ್ದರು. ಟರ್ಕಿ ಭಾಷೆಯಲ್ಲಿ ‘ಒರ್ದು’ ಎಂದರೆ ಸೈನ್ಯ. ಆ ಸೈನಿಕರು ಮಾತನಾ­ಡು­ತ್ತಿದ್ದ ಭಾಷೆಯನ್ನು ಉರ್ದು ಎಂದು ಕರೆಯ­ಲಾಯಿತು. ಹಾಗೆಯೇ ದಕ್ಷಿಣ ಭಾರತದಲ್ಲಿ ನಿಜಾಮನ ರಾಜ್ಯದಲ್ಲಿ ಬೆಳೆದ ಉರ್ದುವನ್ನು ‘ದಖನೀ ಉರ್ದು’ ಎಂದು ನಂತರ ಗುರುತಿಸಲಾಯಿತು. ಮೊಘಲರ ಕಾಲದಲ್ಲಿ ಆಸ್ಥಾನದ ಭಾಷೆ ಪರ್ಷಿಯನ್ ಎಂದು ಪರಿಗಣಿಸಿದ್ದರೂ ಜನಸಾ­ಮಾನ್ಯರು ಆಡುತ್ತಿದ್ದ ಭಾಷೆ ಉರ್ದುವೇ ಆಗಿತ್ತು. ಹಾಗೇ ನಿಧಾನವಾಗಿ ಆಸ್ಥಾನವನ್ನು ಆಡುಭಾಷೆಯಾದ ಉರ್ದುವೇ ಆವರಿಸಿತು.

ಜನಸಾಮಾನ್ಯರ ಈ ಭಾಷೆಯನ್ನು ಸಾಹಿತ್ಯ ರಚನೆಗೆ ಬಳಸಿಕೊಂಡ ಕವಿ ಅಮೀರ್ ಖುಸ್ರು. ಆ ಸಾಹಿತ್ಯ ಜನಪದೀಯವಾಗಿದ್ದು ಜನಪದರ ಬದುಕನ್ನು ಸೆರೆಹಿಡಿಯುವಲ್ಲಿ ಸಮರ್ಥವಾ­ಗಿತ್ತು. ಜಾತಿ-ಧರ್ಮದ ಮಡಿ ಮೈಲಿಗೆ ಇಲ್ಲದೇ ಹೀಗೆ ಹುಟ್ಟಿದ ಭಾರತೀಯವಾದ ಭಾಷೆಯನ್ನು ಬರೆಯಲು ಪರ್ಷಿಯನ್-ಅರಬ್ಬೀ ಲಿಪಿಯನ್ನು ಬಳಸುತ್ತಿದ್ದರು. ಅದೂ ಭಾರತದಲ್ಲಿ ತನ್ನದೇ ಆದ ಮಾರ್ಪಾಡುಗಳನ್ನು ಕಂಡುಕೊಂಡಿತು. ಜ಼ಬಾನ್-–ಎ-–ಹಿಂದೂಸ್ತಾನಿ (ಹಿಂದೂಸ್ತಾನದ ಭಾಷೆ) ಎನಿಸಿಕೊಂಡ ಉರ್ದುವಿನಲ್ಲಿ ಸಮೃದ್ಧ­ವಾಗಿ ಸಾಹಿತ್ಯವೂ ಬೆಳೆದು ಬಂದಿತು.

ಸುಮಾರು ೮೦೦ ವರ್ಷಗಳ ಕಾಲ ಭಾರತದಾದ್ಯಂತ ಹರ­ಡಿದ್ದ ಈ ಭಾಷೆ ಹಲವು ಪದರುಗಳಲ್ಲಿ ಕಾಣಿಸಿ­ಕೊಂಡು ಅದರೊಳಗೇ ಮತ್ತೆ ಉಪಭಾಷೆಗಳೂ ಬೆಳೆದುಬಂದವು. ಕಾಶ್ಮೀರ, ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಬಂಗಾಳ, ಹೈದರಾಬಾದ್, ಕರ್ನಾಟಕದಲ್ಲೆಲ್ಲಾ ಹರಡಿದ ಈ ಭಾಷೆ ೧೯ನೇ ಶತಮಾನದ ಕಡೆಯ ಹೊತ್ತಿಗೆ ವಿಚಿತ್ರವಾದ ತಿರುವನ್ನು ಪಡೆದುಕೊಂಡಿತು.

ಭಾರತದ ಸಮಾಜ ಸುಧಾರಕರು ಭಾರತೀಯ ಧರ್ಮ ಯಾವುದೆಂದು ವಿವರಿಸಿ­ಕೊಳ್ಳತೊಡಗಿದ್ದು, ಹಿಂದೂಸ್ತಾನದ ಧರ್ಮ­ವನ್ನು ಹಿಂದೂ ಎಂದು ಕರೆದರು. ಬ್ರಿಟಿಷರು ಸೊಗಸಾಗಿ ಸಮಾಜದಲ್ಲಿ ಮುಸಲ್ಮಾನರನ್ನು ಬೇರ್ಪಡಿಸತೊಡಗಿದ್ದರು. ಭಾರತದ ಚರಿತ್ರೆ­ಯನ್ನು ಬರೆಯತೊಡಗಿದ್ದ ಬ್ರಿಟಿಷರು ಅದಕ್ಕೆ ಹಿತವಾಗಿ ಕೋಮುಬಣ್ಣವನ್ನೂ ಬಳಿದರು. ಮಧ್ಯಕಾಲವನ್ನು ಮುಸಲ್ಮಾನರ ಯುಗ­ವೆಂದರು. ಇದನ್ನೆಲ್ಲಾ ಪ್ರಶ್ನಿಸುವವರೂ ಇಲ್ಲದೇ, ಅವರು ಮಾಡಿದ್ದೇ ಸಂಶೋಧನೆ, ಅವರು ಹೇಳಿದ್ದೇ ಚರಿತ್ರೆಯಾಯಿತು.

೧೮೫೭ರ ನಂತರ ಸೋತ ಮೊಘಲರು ಮತ್ತೆ ತಲೆಯೆತ್ತದಂತೆ ನೋಡಿಕೊಳ್ಳುವುದು ಬ್ರಿಟಿಷ­ರಿಗೆ ಅನಿವಾರ್ಯವಾಗಿತ್ತು. ಆ ತರ್ಕದಲ್ಲಿ ಮುಸಲ್ಮಾನ­ರನ್ನು ಹತ್ತಿಕ್ಕಬೇಕಾಯಿತು. ವಸಾ­ಹತು ರಾಜಕೀಯ ಹುನ್ನಾರಕ್ಕೆ ಅವರು ಬಯಸಿ­ದಂತೆ ಬಲಿಯಾದ ಭಾರತೀಯರು ಹಿಂದೂ–-ಮುಸ್ಲಿಂ ಎಂಬ ಬಿರುಕಿಗೆ ಸಿಕ್ಕಿಹಾಕಿಕೊಂಡರು.

ಹಿಂದುಳಿದ ಮುಸಲ್ಮಾನರ ಸುಧಾರಣೆಗೆ ತೊಡಗಿದ ಸರ್ ಸೈಯದ್ ಅಹ್ಮದ್ ಖಾನರು ಭಾರತದ ಮುಸಲ್ಮಾನರ ಪ್ರತಿನಿಧಿಯಾಗಿ ಕಾಣ­ತೊಡಗಿದರು. ಅವರಿಗೆ ಪೈಪೋಟಿಯಾಗಿ ದನಿ­ಯೆತ್ತಿದವರು ಆರ್ಯ ಸಮಾಜವನ್ನು ಹುಟ್ಟು ಹಾಕಿದ ದಯಾನಂದ ಸರಸ್ವತಿ. ಈ ಹಿಂದೆಯೇ ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ರಾಜಾರಾಮ್ ಮೋಹನ್ ರಾಯರು ಉರ್ದು ಭಾಷೆಯಲ್ಲಿ ಪತ್ರಿಕೆಯನ್ನೂ ತಂದಿದ್ದರು. ಬಂಗಾಳದ ನವಾಬರಿಂದ ಅವರ ತಾತ ‘ರಾಯ’ ಎಂಬ ಬಿರುದನ್ನೂ ಪಡೆದಿದ್ದರು.

ಆರ್ಯ ಸಮಾಜ, ಭಾರತೀಯನ ಧರ್ಮ­ವನ್ನು ಹಿಂದೂ ಎಂದು ಕರೆಯುತ್ತಾ ಹಿಂದೂ ಧರ್ಮದ ಲಕ್ಷಣಗಳನ್ನು ವಿವರಿಸತೊಡಗಿತು. ಹೀಗೆ ಕೊಟ್ಟ ವಿವರಣೆಯಲ್ಲಿ ಆ ಹಿಂದೂಗಳು ಮಾತನಾಡುವ ಭಾಷೆಯನ್ನು ಹಿಂದಿ ಎಂದರು. ಹಿಂದಿ ಎಂಬ ಭಾಷೆಯು ಹೀಗೆ ಇಸ್ಲಾಂ ವಿರೋಧಿ ನೆಲೆಯಲ್ಲಿ ಹುಟ್ಟಿತು. ಹಾಗೆ ನೋಡಿದರೆ ಜನ­ಸಾಮಾನ್ಯರ ಭಾಷೆಯಾಗಿದ್ದ ಉರ್ದು ಭಾಷೆ­ಯನ್ನು ಒಂದು ಕಾಲಕ್ಕೆ ಹಿಂದವಿ, ಹಿಂದಿ ಎಂದೆಲ್ಲಾ ಕರೆದದ್ದೂ ಇದೆ. ಆದರೀಗ ಮುಸಲ್ಮಾನರು ಆಡುವ ಭಾಷೆ ಉರ್ದು ಎಂದು ಶಿರೋನಾಮೆಯನ್ನು ಕೊಟ್ಟರು.

ಸಂಸ್ಕೃತ ಭಾಷೆ­ಯನ್ನು ಬರೆಯಲು ಬಳಸುವ ದೇವನಾಗರಿ ಲಿಪಿಯನ್ನು ಹಿಂದಿ ಭಾಷೆಗೆ ಅಳವಡಿಸಿ­ಕೊಂಡರು. ಪರ್ಷಿಯನ್ ಮತ್ತು ಅರಬ್ಬೀ ಭಾಷೆ­ಯಲ್ಲಿ ಬರೆದರೆ ಅದು ಉರ್ದುವೆಂದು ಪರಿಗ­ಣಿಸಿದರು. ಒಟ್ಟಿನಲ್ಲಿ ಮುಸಲ್ಮಾನರು ಆಡುವ ಭಾಷೆ ಬೇರೆ ಎಂದು ತೋರಿಸಬೇಕಾಗಿತ್ತು. ಹಾಗೇ ಉರ್ದು ಮುಸಲ್ಮಾನರ ಭಾಷೆಯೂ, ಹಿಂದಿ ಹಿಂದೂಗಳ ಭಾಷೆಯಾಗಿಯೂ ಗಂಡು­ಭೇರುಂಡನಂತೆ ಒಂದೇ ದೇಹಕ್ಕೆ ಎರಡು ತಲೆ ಮೂಡಿತು. ಹಾಗಾಗಿ ಹಿಂದಿಯು ೧೮೭೫ರ ನಂತರ ಜನುಮ ತಾಳಿದ ಭಾರತದ ಅತ್ಯಂತ ಆಧುನಿಕ ಭಾಷೆಯಾಗಿದೆ.

ಒಂದೇ ಭಾಷೆಗೆ ಎರಡು ಹೆಸರುಗಳು ಯಾಕೋ ಸರಿ ಕಾಣದೇ ಹಿಂದಿ ಎನಿಸಿಕೊಂಡ ಹಿಂದೂಗಳ (?) ಭಾಷೆಗೆ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಬಳಸತೊಡಗಿ­ದರು. ಅದಕ್ಕೆ ಉತ್ತರವೆಂಬಂತೆ ಸ್ಪರ್ಧೆಗೆ ಇಳಿದ ಮುಸಲ್ಮಾನರು ತಮ್ಮ ಗುರುತು­ಗಳಿಗಾಗಿ ಪರದಾಡಿದರು. ಇದೇ ಭಾಷೆಯಲ್ಲಿ ಹುಟ್ಟಿದ ಸೂಫಿ ಸಾಹಿತ್ಯ ಮಾತ್ರ ಮುಸಲ್ಮಾನರ ನಡುವಿನ ಸೌಹಾರ್ದವನ್ನು ಸಾರುತ್ತಲೇ ಇತ್ತು.

ಕರ್ನಾಟಕದಲ್ಲಿ ಆರಂಭಗೊಂಡ ಬಹಮನಿ ಸುಲ್ತಾನರ ಆಳ್ವಿಕೆಯ ಕಾಲಕ್ಕೂ ಮುನ್ನವೇ ಉರ್ದು ಹಾಗೂ ಇಸ್ಲಾಂ ಸಂಸ್ಕೃತಿ ಕನ್ನಡ ನಾಡನ್ನು ಪ್ರವೇಶಿಸಿತ್ತು. ಬಹಮನಿ ದೊರೆಗ­ಳೊಂದಿಗೆ ಬಂದ ಪರ್ಷಿಯನ್ ಭಾಷೆ ಹಾಗೂ ಈಗಾಗಲೇ ಇದ್ದ ಸೈನ್ಯದ ಭಾಷೆ ಅಲ್ಲದೇ ಸ್ಥಳೀಯ­ವಾಗಿದ್ದ ಕನ್ನಡ, ಮರಾಠಿ ಎಲವೂ ಸೇರಿ ರೂಪು ಪಡೆದದ್ದು ದಖನೀ ಉರ್ದು. ಹಾಗೆಯೇ ಕನ್ನಡ, ತೆಲುಗು ಹಾಗೂ ಮರಾಠಿ ಭಾಷೆಗಳು ಪರಸ್ಪರ ಪದಗಳ ಕೊಡು-ಕೊಳ್ಳುವಿಕೆಯಲ್ಲಿ ವಿಕಾಸವಾದವು.

ನಿಜಾಮರ ರಾಜ್ಯಕ್ಕೆ ಒಳಪ­ಟ್ಟಿದ್ದ, ಇಂದು ಕರ್ನಾಟಕದ ಭಾಗವಾಗಿರುವ ರಾಯಚೂರು, ಗುಲ್ಬರ್ಗ, ಬೀದರ್ ಇಲ್ಲಿ ಉರ್ದು ಭಾಷೆ ಎಲ್ಲರ ಭಾಷೆಯಾಗಿದೆ. ಕನ್ನಡವನ್ನೇ ಮಾತನಾ­ಡಿದರೂ, ಅದು ಉರ್ದು­ಮಯವಾಗಿರುತ್ತದೆ. ಆ ಪ್ರದೇಶದ ಬಹುತೇಕ ಜನರು ದ್ವಿಭಾಷಿಗಳಾಗಿರುತ್ತಾರೆ. ಇಂತಹುದೇ ಸ್ಥಿತಿ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಕಾಣ­ಬರುತ್ತದೆ. ಆಂಧ್ರಪ್ರದೇಶ ಉರ್ದುವನ್ನು ಆ ರಾಜ್ಯದ ಎರಡನೇ ಭಾಷೆಯಾಗಿ ಪರಿಗ­ಣಿಸುತ್ತದೆ.

ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆಯುತ್ತಿದ್ದ ಕಾಲದಲ್ಲಿ, ಭಾರತ ರಾಷ್ಟ್ರವಾಗಬೇಕಾದರೆ ಅದಕ್ಕೆ ಒಂದು ಭಾಷೆ ಇರಬೇಕೆಂಬ ತರ್ಕದಲ್ಲಿ ಉರ್ದುವಿಗಿಂತ ಹಿಂದಿ ಭಾಷೆಯು ಧರ್ಮದ ದೃಷ್ಟಿಯಿಂದ ಹೆಚ್ಚು ಸಮೀಪವಾಗತೊಡಗಿತ್ತು. ಹಾಗಾಗಿ ಕಲ್ಪಿತವಾದ ಹಿಂದೂಗಳ ಹಿಂದಿ ಭಾಷೆಯನ್ನು ಭಾರತದ ಭಾಷೆಯೆಂದು ಹೇಳುವ ಪ್ರತೀತಿ ಬೆಳೆದುಬಂತು. ಗಾಂಧೀಜಿ­ಯವರು, ಹಿಂದಿ ಬಹುಸಂಖ್ಯಾತರ ಭಾಷೆಯಾ­ಗಿ­ರುವುದರಿಂದ ಅದು ರಾಷ್ಟ್ರೀಯ ಭಾಷೆಯಾಗ­ಬೇಕೆಂದಾಗ ಹಿಂದೂವಾದಿಗಳು ಅದನ್ನು ಮೌನವಾಗಿ ಬೆಂಬಲಿಸಿದರು. ಹಿಂದಿ, ಸಂಸ್ಕೃತ­ಜನ್ಯ ಭಾಷೆಯೆಂಬುದು ಅವರ ತರ್ಕಕ್ಕೆ ಸಿಕ್ಕ ಸ್ವೀಕೃತಿಯಾಗಿತ್ತು.

ಇಂದು ಕರ್ನಾಟಕ ಚರಿತ್ರೆಯನ್ನು ಓದಲು ಹೋದರೆ, ಮಧ್ಯಕಾಲೀನ ಚರಿತ್ರೆಯಲ್ಲಿ ವಿಜಯ­ನಗರಕ್ಕೆ ಸಿಕ್ಕಷ್ಟು ಪ್ರಾಮುಖ್ಯ ಬಹಮನಿ ಚರಿತ್ರೆಗೆ ಸಿಗಲಾರದು. ನಿಜ಼ಾಮರು ಮುಸಲ್ಮಾನರಾಗಿ­ರುವುದು ಸಹ ಚರಿತ್ರೆಯ ಕಡೆ ಒಲವನ್ನು ತೋರದೇ ಇರಲು ಒಂದು ಪ್ರಮುಖ ಕಾರಣ­ವಾಗಿದೆ. ಅಷ್ಟೇ ಅಲ್ಲದೇ, ಸುಮಾರು ಐನೂರು ವರ್ಷಗಳ ಕಾಲ ಬರೆದ ನಮ್ಮ ಸಾಹಿತ್ಯವನ್ನು ಮುಸ್ಲಿಂ ಸಾಹಿತ್ಯವೆಂಬ ತಪ್ಪು ಕಲ್ಪನೆಯಲ್ಲಿ ಪಕ್ಕಕ್ಕಿಡಲಾಗಿದೆ. ಆ ನಡುವಿನ ಚಾರಿತ್ರಿಕ ಮಾಹಿತಿಯ ಕಡೆ ಅಷ್ಟೇನೂ ಗಮನ ಹರಿಸಿಲ್ಲ. ಉತ್ತರ ಕರ್ನಾಟಕದ ಜನ ತಮ್ಮ ಚರಿತ್ರೆಗಾಗಿ ಇತಿಹಾಸದ ಪುಟಗಳನ್ನು ತಿರುಗಿಸಿದರೆ ಅಲ್ಲಿ ದೀರ್ಘ ಮೌನ ಕಾಣುತ್ತದೆ.

ಆ ಕಾಲದ ಸಾಹಿತ್ಯ ಆಕರಗಳನ್ನು ಓದಿ ಚರಿತ್ರೆಗೆ ಬಳಸಬೇಕಾದರೆ, ಉರ್ದು ಭಾಷೆಯ ಅರಿವು ಅಗತ್ಯವಾಗಿದೆ. ಕರ್ನಾಟಕ ಚರಿತ್ರೆ­ಯೆಂದರೆ ವಿಜಯನಗರದ ಚರಿತ್ರೆ­ಯೇನೋ ಎಂಬಂತೆ ವೈಭವೀಕರಿಸಲು ಇಂತಹ ಕಾರಣಗಳು ಅಂತರಂಗದಲ್ಲಿ ಹುದು­ಗಿವೆ. ಕಳೆದುಕೊಂಡಿ­ರುವುದು ಮುಸಲ್ಮಾನರ ಸಾಹಿತ್ಯವನ್ನೋ ಅಥವಾ ಇಸ್ಲಾಂ ಆಳ್ವಿಕೆಯ ಚರಿತ್ರೆಯನ್ನೋ ಮಾತ್ರವಲ್ಲ, ಕರ್ನಾಟಕದ ಒಂದು ಭಾಗದ ಜನಪದರ ಬದುಕು, ಸಾಹಿತ್ಯ ಎಲ್ಲವೂ ಚರಿತ್ರೆಯ ಗರ್ಭದಲ್ಲಿ ಹಾಗೇ ಉಳಿದಿವೆ. ಬೀದರ್‌ನ ಕಥೆ ಹೇಳಲು ಹೋಗು­ವವರಿಗೆ ವಚನ ಸಾಹಿತ್ಯದ ನಂತರ ಎಲ್ಲವೂ ನಿರ್ವಾತವಾಗಿ ಕಾಣುತ್ತದೆ.

ಉರ್ದು ಭಾಷೆ ಮುಸಲ್ಮಾನರ ಭಾಷೆ ಎಂಬ ಧಾರ್ಮಿಕ ಬಣ್ಣವನ್ನು ಪಡೆದು ಹಲವು ವರ್ಷ­ಗಳೇ ಕಳೆದು ಹೋಗಿರುವುದರಿಂದ ಅದರ ಅರಿವೇ ಇಲ್ಲದೇ ಸರ್ಕಾರವೂ ಹಾಗೇ ನಡೆದು­ಕೊಳ್ಳುತ್ತಾ ಬಂದಿದೆ. ಉರ್ದು ಅಕಾಡೆಮಿ­ಯನ್ನು ವಕ್ಫ್ ಬೋರ್ಡಿನ ಅಡಿಗೆ ಅಂದರೆ ಧಾರ್ಮಿಕ ಅಂಗ ಸಂಸ್ಥೆಯೊಂದರ ಹಿಡಿತಕ್ಕೆ ಕೊಟ್ಟಿರುವುದು ಇದಕ್ಕೊಂದು ಸಣ್ಣ ಉದಾಹ­ರಣೆ ಮಾತ್ರ. ಭಾರತದ ಕೋಮು ರಾಜಕೀಯಕ್ಕೆ ಬಲಿಯಾದ ನಮ್ಮದೇ ಕೂಸು ಉರ್ದು ಭಾಷೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT