ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಗೀಗ ಬಂದಿದೆ ‘ಮೆಡಿಕಲ್ ಎಮರ್ಜನ್ಸಿ’

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಹಿಂದೆಂದೂ ಕಂಡಿರದಂಥ ಧಗೆಯ ದಳ್ಳುರಿಯಲ್ಲಿ ಪಾಕಿಸ್ತಾನ ಬೇಯುತ್ತಿದೆ. ಸಾವಿನ ಸಂಖ್ಯೆ ಈಗಾಗಲೇ 1300 ದಾಟಿದ್ದು, ಕರಾಚಿಯೊಂದರಲ್ಲೇ ಸಾವಿರ ದಾಟಿದೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪದ ಜೊತೆಗೆ, ವಿದ್ಯುತ್ ಅವ್ಯವಸ್ಥೆಯಿಂದಾಗಿ ಫ್ಯಾನು, ಫ್ರಿಜ್, ಏ.ಸಿ ಹಾಗಿರಲಿ, ನೀರೂ ಕೈಗೆ ಸಿಗದಂತಾಗಿದೆ. ಶವ ಸಂಸ್ಕಾರಕ್ಕೂ ಸ್ಥಳದ ಅಭಾವ ಉಂಟಾಗಿದೆ.

ಮುಂದಿನ ವಾರವಿಡೀ ಇದೇ ಪರಿಸ್ಥಿತಿ ಇದ್ದರೆ ಸಾವಿನ ಸಂಖ್ಯೆ ಭಾರತದಲ್ಲಿ ಮೇ ತಿಂಗಳ ಬಿಸಿಲಿಗೆ ಬಲಿಯಾದ 2200ರ ದಾಖಲೆಯನ್ನೂ ಮೀರೀತೆಂದು ಅಂದಾಜು ಮಾಡಲಾಗುತ್ತಿದೆ. ರಂಜಾನ್ ತಿಂಗಳಿನಲ್ಲೇ ಈ ವಿಪತ್ತು ಬಂದಿರುವುದರಿಂದ ಬಾಯಾರಿದವರು ಹಗಲಿಡೀ ನೀರನ್ನೂ ಕುಡಿಯಲಾಗದ ಧರ್ಮಸಂಕಟ ಬಂದಿದೆ. ತೀರಾ ಅಸ್ವಸ್ಥರಾದವರು ರೋಜಾ ನಿಲ್ಲಿಸಿ ಆಹಾರ ಸೇವಿಸಬಹುದು ಎಂದು ಧರ್ಮಗುರುಗಳು ಅಪರೂಪದ ಫತ್ವಾ ಹೊರಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅತ್ತ ಕ್ರಿಶ್ಚಿಯನ್ ಧರ್ಮಗುರು ಪೋಪ್ ಕೂಡ ಬಿಸಿ ಪ್ರಳಯದ ಕುರಿತು ಫತ್ವಾ ಮಾದರಿಯ ಸುತ್ತೋಲೆ ಹೊರಡಿಸಿದ್ದಾರೆ. ಕಳೆದೆರಡು ವಾರಗಳಲ್ಲಿ ಭೂಮಿಯ ಸುತ್ತ ಇಂಥ ಇನ್ನೂ ಮೂರು ಮಹತ್ವದ ಘಟನೆಗಳು ನಡೆದಿವೆ: ಪರಿಸರ ಸಮಸ್ಯೆ ಕುರಿತಂತೆ ‘ಡಚ್ ಸರ್ಕಾರದ ತಟಸ್ಥ ಧೋರಣೆಯೇ ಕಾನೂನುಬಾಹಿರ’ ಎಂದು  ಹೇಗ್ ನ್ಯಾಯಾಲಯವೊಂದು ತೀರ್ಪು ನೀಡಿ ಇಡೀ ಯುರೋಪ್‌ನ ಕಾನೂನುತಜ್ಞರಲ್ಲಿ ಸಂಚಲನ ಉಂಟುಮಾಡಿದೆ.

ಇತ್ತ ವಿಶ್ವ ಸ್ವಾಸ್ಥ್ಯ ಆಯೋಗದವರು ವೈದ್ಯಕೀಯ ವೃತ್ತಿಗೇ ಹೊಸದೆನ್ನಿಸುವಂತೆ ಭೂಮಿಯ ಆರೋಗ್ಯ ಕುರಿತು ‘ವೈದ್ಯರು ನೀಡುವ ಎಚ್ಚರಿಕೆ’ಯನ್ನು ಪ್ರಕಟಿಸಿದ್ದಾರೆ: ಭೂಮಿಯ ಆರೋಗ್ಯ ಸುಸ್ಥಿತಿಗೆ ಬರಬೇಕೆಂದರೆ ‘ಕಲ್ಲಿದ್ದಲ ಬಳಕೆಯನ್ನು ತ್ವರಿತವಾಗಿ ನಿಲ್ಲಿಸಿ’ ಎಂದಿದ್ದಾರೆ. ಅತ್ತ ಅಮೆರಿಕ ಸರ್ಕಾರವೇ ಹವಾಗುಣ ಬದಲಾವಣೆ ಕುರಿತು ಒಬಾಮ ಆಡಳಿತಕ್ಕೆ ಎಚ್ಚರಿಕೆ ನೀಡುವ ವರದಿಯನ್ನು ಸಲ್ಲಿಸಿದೆ.

ಪೃಥ್ವಿಯ ತತ್ತರ ವಿವಿಧ ಪ್ರಾಂತಗಳಲ್ಲಿ ವಿವಿಧ ರೂಪದಲ್ಲಿ ವ್ಯಕ್ತವಾಗುತ್ತಿವೆ. ಅಲಾಸ್ಕಾದಲ್ಲಿ ಕಳೆದ ಒಂದು ತಿಂಗಳಿಂದ ಕಾಳ್ಗಿಚ್ಚು ಉರಿಯುತ್ತಿದ್ದು, ಹತ್ತು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಹಿಮದಲ್ಲಿ ಬೂದಿಯಾಗಿದೆ. ದಕ್ಷಿಣ ಮತ್ತು ಉತ್ತರ ಕೊರಿಯಾ ಎರಡೂ ಬರಗಾಲವನ್ನು ಎದುರಿಸುತ್ತಿವೆ. ಜಾರ್ಜಿಯಾ ದೇಶದ ತಿಬಲೀಸಿಯಲ್ಲಿ ಅತಿವೃಷ್ಟಿಯಿಂದಾಗಿ ಮೃಗಾಲಯವೇ ಕೊಚ್ಚಿಹೋಗಿದೆ.

ವಾಷಿಂಗ್ಟನ್ ಪ್ರಾಂತದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಆಸ್ಟ್ರೇಲಿಯಾದ ಕೆಂಬಣ್ಣದ ಉಲುರು ಪರ್ವತ ಆಲಿಕಲ್ಲುಗಳ ಸತತ ಜಡಿತದಿಂದ ಬೆಳ್ಳಗಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಬರಗಾಲ ತೀವ್ರವಾಗುತ್ತಿದೆ. ಭಾರತದಲ್ಲಿ ಭೂಕುಸಿತ, ಅತಿವೃಷ್ಟಿ, ಅನಾವೃಷ್ಟಿಗಳ ತಾಂಡವ ಆರಂಭವಾಗಿದೆ.

‘ಪೃಥ್ವಿ ತನ್ನ ಸಂಕಟವನ್ನು ವ್ಯಕ್ತಪಡಿಸಲೆಂದು ಇದೇ ಮೊದಲ ಬಾರಿ ಬಾಯ್ತೆರೆದಿದೆ’ ಎಂದು ಅಮೆರಿಕದ ಉಪಾಧ್ಯಕ್ಷರಾಗಿದ್ದ ಅಲ್ ಗೋರ್ 15 ವರ್ಷಗಳ ಹಿಂದೆಯೇ ಹೇಳಿದ್ದರು. ಈಗಂತೂ ಪದೇಪದೇ ಪೃಥ್ವಿ ತನ್ನ ಆಕ್ರಂದನವನ್ನು ವ್ಯಕ್ತಪಡಿಸುತ್ತ ಬಂದಿದೆ. ಕೇಳುವವರು ಯಾರು? ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಬಳಕೆಯನ್ನು ಕಡಿಮೆ ಮಾಡಿ ಬಿಸಿ ಪ್ರಳಯವನ್ನು ತಗ್ಗಿಸೋಣವೆಂದು ಪ್ರತಿ ಬಾರಿ ಜಾಗತಿಕ ಶೃಂಗಸಭೆ ನಡೆಸಿದಾಗಲೂ ಉದ್ಯಮಿಗಳು ಮತ್ತು ರಾಜಕಾರಣಿಗಳು ಒಂದಲ್ಲ ಒಂದು ಸರ್ಕಸ್ ನಡೆಸಿ ಒಪ್ಪಂದವನ್ನು ವಿಫಲಗೊಳಿಸಿದ್ದಾರೆ. ಈ ಎರಡೂ ವರ್ಗಗಳ ಬುದ್ಧಿವಂತರು ತಮ್ಮ ಲಾಭಕ್ಕೆ ಮತ್ತು ಅಧಿಕಾರಕ್ಕೆ ಧಕ್ಕೆ ಬಾರದ ಹಾಗೆ ನಡೆದುಕೊಂಡಿದ್ದಾರೆ.

2009ರಲ್ಲಿ ಕೊಪೆನ್‌ಹೇಗನ್ ಶೃಂಗಸಭೆಯ ಸಂದರ್ಭದಲ್ಲಂತೂ ಇಡೀ ಮನುಕುಲದ ಮುಖವಾಣಿಯೆಂಬಂತೆ ವಿವಿಧ ದೇಶಗಳ 56 ಪತ್ರಿಕೆಗಳು ಏಕತ್ರವಾಗಿ ಒಂದೇ ದಿನ, ಒಂದೇ ಸಂಪಾದಕೀಯವನ್ನು ಮುಖಪುಟದಲ್ಲಿ ಪ್ರಕಟಿಸಿದ್ದವು: ‘ಹೇಗಾದರೂ ಒಮ್ಮತಕ್ಕೆ ಬನ್ನಿ, ಪೃಥ್ವಿಯ ಮುಂದಿನ ಪೀಳಿಗೆಯನ್ನು, ಜೀವಕೋಟಿಯನ್ನು ಉಳಿಸಿ’ ಎಂದು ಕರೆಕೊಟ್ಟಿದ್ದವು. ಏನೂ ಪ್ರಯೋಜನವಾಗಲಿಲ್ಲ. ಈಗ ಇವೆಲ್ಲವುಗಳಿಂದ ತುಸು ವಿಶೇಷವೆಂಬಂತೆ ಧರ್ಮಗುರುಗಳು, ನ್ಯಾಯವೇತ್ತರು, ವೈದ್ಯವೃಂದದವರು ಇದೀಗ ಭುವಿಯ ಸಂಕಟಕ್ಕೆ ಧ್ವನಿಯಾಗಿದ್ದಾರೆ.

ವ್ಯಾಟಿಕನ್‌ನಿಂದ ಪೋಪ್ ಫ್ರಾನ್ಸಿಸ್ ಹೊರಡಿಸಿದ ‘ಜಾಗತಿಕ ಸುತ್ತೋಲೆ’ (ಎನ್‌ಸೈಕ್ಲಿಕಲ್) ಅನೇಕ ಶಕ್ತರಾಷ್ಟ್ರಗಳ ಧುರೀಣರಿಗೆ ಬಿಸಿ ಮುಟ್ಟಿಸತೊಡಗಿದೆ. ಭೂಮಿ ಎದುರಿಸುತ್ತಿರುವ ಅಪಾಯ ಕುರಿತ 184 ಪುಟಗಳ ಈ ಸುತ್ತೋಲೆಯಲ್ಲಿ ಅಭಿವೃದ್ಧಿ ಸಾಧಿಸಿದ ದೇಶಗಳ ಉದಾಸೀನ ಧೋರಣೆಯನ್ನು ಕಟುಶಬ್ದಗಳಲ್ಲಿ ಟೀಕಿಸಲಾಗಿದೆ.

ಲಾಭಬಡುಕ ಶಕ್ತಿಗಳ ಕೈಗೊಂಬೆಯಾಗಿ, ಮುಂದಾಲೋಚನೆಯಿಲ್ಲದ, ಸಾರ್ವತ್ರಿಕ ಹಿತಚಿಂತನೆಯಿಲ್ಲದ ನಾಯಕತ್ವದಿಂದಾಗಿ ಇಡೀ ಪೃಥ್ವಿಗೆ ಹಿಂದೆಂದೂ ಕಂಡಿರದಷ್ಟು ಸಂಕಷ್ಟ ಬರುತ್ತಿದೆ. ಹವಾಗುಣ ಬದಲಾವಣೆಯಿಂದಾಗಿ ಎಲ್ಲ ರಾಷ್ಟ್ರಗಳಲ್ಲೂ ದುರ್ಬಲರ, ಬಡವರ ಸ್ಥಿತಿ ಶೋಚನೀಯವಾಗುತ್ತಲೇ ಹೋಗುತ್ತಿದೆ ಎಂದು ಪೋಪ್ ಹೇಳಿದ್ದಾರೆ. ಅವರ ಈ ಎಚ್ಚರಿಕೆಗೆ ಜಾಗತಿಕ ಮಹತ್ವ ಏಕಿದೆಯೆಂದರೆ ಜಗತ್ತಿನ ಬಹುಪಾಲು ಶ್ರೀಮಂತ ರಾಷ್ಟ್ರಗಳ ಮತದಾರರ ಮೇಲೆ ಪೋಪ್ ಹಿಡಿತ ಬಿಗಿಯಾಗಿದೆ.

ನೂರು ಕೋಟಿಗೂ ಹೆಚ್ಚಿನ ಜನರು ಪೋಪ್ ಮಾತನ್ನು ದೇವವಾಕ್ಯವೆಂದೇ ಪರಿಗಣಿಸುತ್ತಾರೆ. ಕ್ರಿಶ್ಚಿಯನ್ನರ ಶಕ್ತಿಕೇಂದ್ರವೆಂದೇ ಪರಿಗಣಿತವಾದ ವ್ಯಾಟಿಕನ್‌ನಲ್ಲಿ ಮೊನ್ನೆ ಭಾನುವಾರ ವಿವಿಧ ಪರಿಸರ ಸಂಘಟನೆಗಳ ಸಾವಿರಾರು ಜನರು ‘ಪೃಥ್ವಿಯ ರಕ್ಷಣೆಗೆ ಧರ್ಮ ಮತ್ತು ವಿಜ್ಞಾನ ಎರಡೂ ಒಂದಾಗಿವೆ’ ಎಂಬ ಫಲಕಗಳೊಂದಿಗೆ ಹಸುರು ಬಾವುಟ ಹಿಡಿದು ಪೋಪ್‌ಗೆ ನಮನ ಸಲ್ಲಿಸಿದ್ದಾರೆ. ಹೇಗ್‌ನಲ್ಲಿ ನಡೆದ ನ್ಯಾಯತೀರ್ಮಾನ ಇದಕ್ಕಿಂತ ವಿಶಿಷ್ಟವಾದುದು.

ಆಗಿದ್ದೇನೆಂದರೆ ಕಳೆದ ಏಪ್ರಿಲ್‌ನಲ್ಲಿ ನೆದರ್ಲೆಂಡಿನ ಖ್ಯಾತ ನ್ಯಾಯಾಧೀಶರು, ವಕೀಲರು ಮತ್ತು ಕಾನೂನು ಕಾಲೇಜುಗಳ ಪ್ರೊಫೆಸರ್‌ಗಳು ಸೇರಿ ಒಂದು ವಾದವನ್ನು ಜನತೆಯ ಮುಂದಿಟ್ಟರು: ಪೃಥ್ವಿರಕ್ಷಣೆಯ ಕುರಿತು ತಮ್ಮ ಸರ್ಕಾರ ಅಂತರರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಸಹಿ ಹಾಕಲಿ, ಬಿಡಲಿ- ತನ್ನ ಪ್ರಜೆಗಳ ಹಿತರಕ್ಷಣೆಗಾಗಿ ಅದು ಬದ್ಧವಾಗಿರಬೇಕು. ಪರಿಸರ ರಕ್ಷಣೆಗೆ ಸರ್ಕಾರ ತಕ್ಕ ಕ್ರಮ ಕೈಗೊಳ್ಳದೇ ಇರುವುದರಿಂದಲೇ ಅಷ್ಟೆಲ್ಲ ಅನಾಹುತಗಳಾಗುತ್ತಿವೆ, ಜನರಿಗೆ ತೊಂದರೆಯಾಗುತ್ತಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.

ಹವಾಗುಣ ಬದಲಾವಣೆ ಕುರಿತಂತೆ ಸರ್ಕಾರದ ಧೋರಣೆ ಪ್ರಜೆಗಳಿಗೆ ಮಾರಕವಾಗಿದೆ ಎಂದು ಘೋಷಿಸಿದರು. ಅದರ ಬೆನ್ನಲ್ಲೇ ಆ ದೇಶದ 886 ಪ್ರಜೆಗಳು ತಮ್ಮ ಸರ್ಕಾರದ ವಿರುದ್ಧ ಖಟ್ಲೆ ಹೂಡಲು ಟೊಂಕ ಕಟ್ಟಿದರು. ಕ್ಲೌಡ್ ಸೋರ್ಸ್ ಮೂಲಕ ‘ಅರ್ಜೆಂಡಾ’ ಹೆಸರಿನ ಸಂಘಟನೆಯೊಂದು ತ್ವರಿತವಾಗಿ ರೂಪುಗೊಂಡಿತು. ಅದಕ್ಕೆ ಬೆಂಬಲವಾಗಿ ಅರ್ಥ್‌ಕ್ಲಯಂಟ್ ಹೆಸರಿನ ಕಾನೂನು ತಜ್ಞರ ಸಂಸ್ಥೆಯೂ ಹೆಗಲುಕೊಟ್ಟಿತು.

ಸಮರ್ಥ ವಕೀಲರು ವಾದಕ್ಕೆ ನಿಂತಿದ್ದರಿಂದ ‘ಟೋರ್ಟ್ ಲಾ’ ಆಧಾರದಲ್ಲಿ ಸರ್ಕಾರ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತು. ಇನ್ನು ಐದು ವರ್ಷಗಳಲ್ಲಿ ಬಿಸಿಮನೆ ಅನಿಲಗಳ (ಮುಖ್ಯವಾಗಿ ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್) ವಿಸರ್ಜನೆಯಲ್ಲಿ ಶೇ 25ರಷ್ಟು ಭಾರೀ ಕಡಿತ ಮಾಡಬೇಕೆಂದು ಆಜ್ಞೆ ಮಾಡಿತು. ಈ ತೀರ್ಪಿನ ಬಿಸಿ ಇಡೀ ಯುರೋಪಕ್ಕೆ ಹಬ್ಬತೊಡಗಿದೆ. ಪಕ್ಕದ ಬೆಲ್ಜಿಯಂನಲ್ಲಿ ಎಂಟು ಸಾವಿರ ಜನರು ತಮ್ಮ ದೇಶದಲ್ಲೂ ಅಂಥದ್ದೇ ದಾವೆ ಹೂಡಲು ಸಿದ್ಧತೆ ನಡೆಸಿದ್ದಾರೆ.

ನಾರ್ವೆಯಲ್ಲೂ ವಕೀಲರ ಗುಂಪು ಸಜ್ಜಾಗುತ್ತಿದೆ. ಅಮೆರಿಕದಲ್ಲೂ ಈ ಮಾರ್ಗದಲ್ಲಿ ಸರ್ಕಾರವನ್ನು ಬಗ್ಗಿಸಲು ಸಾಧ್ಯವೇ ಎಂದು ನ್ಯಾಯವಾದಿಗಳು ಚರ್ಚಿಸಲು ಮುಂದಾಗಿದ್ದಾರೆ. ಅಲ್ಲಲ್ಲಿನ ಸಂವಿಧಾನ ಮತ್ತು ಮಾನವ ಹಕ್ಕುಗಳ ಆಧಾರದಲ್ಲಿ ಯಾವ ದೇಶದಲ್ಲಾದರೂ ಈ ಮಾದರಿಯ ನ್ಯಾಯ ತೀರ್ಮಾನ ಪಡೆಯಲು ಸಾಧ್ಯವಿದೆ ಎಂದು ಅರ್ಥ್‌ಕ್ಲಯಂಟ್ ಸಂಘಟನೆಯ ನ್ಯಾಯವಾದಿ ಜೇಮ್ಸ್ ಥಾರ್ನ್‌ಟನ್ ಹೇಳಿದ್ದಾರೆ.

ಅಂತೂ ವಿಜ್ಞಾನಿಗಳ ಮಾತುಗಳಿಗೆ ಕಿವಿಗೊಡದ ಸರ್ಕಾರಗಳು ಈಗ ನ್ಯಾಯಾಲಯಗಳ ಧಮಕಿಯನ್ನು ಎದುರಿಸಬೇಕಿದೆ. ಅಚ್ಚರಿಯ ಸಂಗತಿ ಏನೆಂದರೆ, ನೆದರ್ಲೆಂಡ್ಸ್ ವಕೀಲರು ತಮ್ಮ ವಾದವನ್ನು ಮಂಡಿಸುವಾಗ ದಿಲ್ಲಿಯ ಹೈಕೋರ್ಟಿನ ತೀರ್ಮಾನವನ್ನು ಉದಾಹರಣೆಯಾಗಿ ನೀಡಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಬಾಗಿಯೇ ದಿಲ್ಲಿಯಲ್ಲಿ ಬಸ್‌ಗಳೆಲ್ಲ ಹೇಗೆ ಪೆಟ್ರೋಲ್, ಡೀಸೆಲ್‌ನಂಥ ಹೊಗೆ ಕಕ್ಕುವ ಇಂಧನವನ್ನು ಕೈಬಿಟ್ಟು ಕಡ್ಡಾಯವಾಗಿ ನೈಸರ್ಗಿಕ ಅನಿಲ ಶಕ್ತಿಯಿಂದಲೇ ಚಲಿಸತೊಡಗಿವೆ ಎಂಬುದನ್ನು ವಿವರಿಸಿದ್ದಾರೆ (ದಿಲ್ಲಿಯ ಆ ತೀರ್ಪನ್ನು ಬೆಂಗಳೂರಿನ ಬಸ್‌ಗಳಿಗೂ ಅನ್ವಯಿಸಬಹುದು ಎಂಬುದು ಕನ್ನಡನಾಡಿನ ವಕೀಲರಿಗೆ ಹೊಳೆದಿಲ್ಲವೇಕೆ ಎಂಬುದು ಬೇರೆ ಮಾತು).

ಅಷ್ಟೇ ಆಸಕ್ತಿಕರವಾದ, ಆದರೆ ಭಿನ್ನ ಮಾರ್ಗವನ್ನು ಬ್ರಿಟನ್ನಿನ ಖ್ಯಾತ ವಿಜ್ಞಾನ ಪತ್ರಿಕೆ ‘ಲಾನ್ಸೆಟ್’ ಅನುಸರಿಸಿದೆ: ಬಿಸಿ ಪ್ರಳಯದ ವೈದ್ಯಕೀಯ ಪರಿಣಾಮಗಳ ಅಧ್ಯಯನಕ್ಕೆಂದು ಅದು ತಾನಾಗಿ ‘ಜಾಗತಿಕ ವೈದ್ಯತಜ್ಞರ ಆಯೋಗ’ವನ್ನು ನಿಯುಕ್ತಿ ಮಾಡಿತ್ತು. ಕಳೆದ ವಾರ ಆಯೋಗ ತನ್ನ ವರದಿಯನ್ನು ಒಪ್ಪಿಸಿದೆ. ತುಂಬ ಖಾರವಾದ ಧ್ವನಿಯಲ್ಲೇ ಒಪ್ಪಿಸಿದೆ. ‘ಭೂಮಿಗೆ ಮೆಡಿಕಲ್ ಎಮರ್ಜನ್ಸಿ ಬಂದಿದೆ. 1980ರ ದಶಕದ ಎಚ್‌ಐವಿ ಸಂಕಟಕ್ಕಿಂತ ಅದೆಷ್ಟೋ ಪಟ್ಟು ಭೀಕರ ಸಮಸ್ಯೆ ಮನುಕುಲಕ್ಕೆ ಎದುರಾಗುತ್ತಿದೆ.

ವೈದ್ಯಕೀಯ ಸಂಶೋಧನೆಗಳಿಂದ ಕಳೆದ 50 ವರ್ಷಗಳಲ್ಲಿ ಜಗತ್ತಿಗೆ ಏನೇನು ಲಾಭಗಳಾಗಿವೆಯೋ ಅವನ್ನೆಲ್ಲ ಹೊಸಕಿ ಹಾಕುವಷ್ಟು ವಿಪ್ಲವಗಳು ತಲೆದೋರಲಿವೆ’ ಎಂದು ಆ ವರದಿಯಲ್ಲಿ ಹೇಳಲಾಗಿದೆ. ಸಿಗರೇಟು ಸೇದುವವನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದರೆ ನಾವು ಡಾಕ್ಟರ್‌ಗಳು ಚಿಕಿತ್ಸೆ ನೀಡಬಹುದು. ಆದರೆ ಅದಕ್ಕಿಂತ ಮೊದಲು ಆತ ಸಿಗರೇಟ್‌ನಿಂದ ದೂರ ಇರುವಂತೆ ಮಾಡಬೇಕು.

‘ಹಾಗೆಯೇ ಈ ಭೂಮಿಯ ಮೇಲೆ ಕಲ್ಲಿದ್ದಲು ಸುಡುವುದನ್ನು ಮೊದಲು ನಿಲ್ಲಿಸಬೇಕು’ ಎಂದಿದ್ದಾರೆ, ಆಯೋಗದ ಮುಖ್ಯಸ್ಥ ಆಂಟನಿ ಕೊಸ್ಟೆಲ್ಲೊ. ಕಲ್ಲಿದ್ದಲ ಹೊಗೆ ಭೂಮಿಗೆ ಜ್ವರ ಬರಿಸುವುದಷ್ಟೇ ಅಲ್ಲ; ಪಾದರಸ, ಆರ್ಸೆನಿಕ್ ಮುಂತಾದ ಹೊಗೆ ಹೊಮ್ಮಿಸುತ್ತ ನಾನಾ ಕಾಯಿಲೆಗಳಿಗೂ ಕಾರಣವಾಗಿವೆ. ಭೂಜ್ವರದ ನಿಯಂತ್ರಣಕ್ಕೆ ಏನೇ ಕ್ರಮ ಕೈಗೊಂಡರೂ ಅದರಿಂದ ಆರೋಗ್ಯ ಲಾಭ ಖಂಡಿತ ಸಿಗುತ್ತದೆ. ಹೃದ್ರೋಗ, ಲಕ್ವ, ಸಕ್ಕರೆ ಕಾಯಿಲೆಗಳೆಲ್ಲ ನಿಯಂತ್ರಣಕ್ಕೆ ಬರುತ್ತವೆ ಎಂದು ಹೇಳಿದ್ದಾರೆ.

ಭೂತಾಪವನ್ನು ಕಮ್ಮಿ ಮಾಡಲು ಎಲ್ಲರೂ ಯತ್ನಿಸಬೇಕೆಂದು ಪೋಪ್ ಫ್ರಾನ್ಸಿಸ್ ಕಳಕಳಿಯ ನಿವೇದನೆ ಮಾಡಿದ ಒಂದೆರಡು ದಿನಗಳಲ್ಲೇ ಅಮೆರಿಕದ ಆಡಳಿತಾಂಗವೂ ಒಂದು ವರದಿಯನ್ನು ಪ್ರಕಟಿಸಿತು. ಹವಾಗುಣ ಬದಲಾವಣೆಯ ಸಂದರ್ಭದಲ್ಲಿ ಕೈಕಟ್ಟಿ ಕೂತಿದ್ದರೆ ಏನೇನು ನಷ್ಟಗಳಾಗುತ್ತವೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಂಡರೆ ಏನೆಲ್ಲ ಲಾಭಗಳಾಗುತ್ತವೆ ಎಂಬುದರ ತುಲನೆ ಅದರಲ್ಲಿತ್ತು. ಮಾಧ್ಯಮಗಳು ಈ ವರದಿಯನ್ನು ವಿಶ್ಲೇಷಣೆಗೆ ಒಡ್ಡುವಷ್ಟರಲ್ಲೇ ವೈದ್ಯಕೀಯ ಆಯೋಗದ ಖಡಕ್ ಎಚ್ಚರಿಕೆಯೂ ಬಂತು.

ಅದೇ ವೇಳೆಗೆ ನ್ಯೂಯಾರ್ಕರ್ ಪತ್ರಿಕೆಯ ಪತ್ರಕರ್ತೆ ಎಲಿಝಬೆಥ್ ಕೋಲ್‌ಬರ್ಟ್ ಬರೆದ ‘ಆರನೇ ನಿರ್ವಂಶ’ ಕೃತಿಗೆ ಪುಲಿಟ್ಝರ್ ಪ್ರಶಸ್ತಿ ಘೋಷಣೆಯೂ ಬಂತು. ಭೂಮಿಯ ಚರಿತ್ರೆಯಲ್ಲಿ ಇದುವರೆಗೆ ಐದು ಬಾರಿ ಜೀವಿಗಳ ಮಹಾ ನಿರ್ವಂಶ ಆಗಿದ್ದು ಇದೀಗ ಮನುಷ್ಯರಿಂದಾಗಿ ಆರನೆಯದು ಅದೆಷ್ಟು ತೀವ್ರವಾಗಿ ಸಂಭವಿಸುತ್ತಿದೆ ಎಂಬುದನ್ನು ಈಕೆ ವಿಶ್ವದ ನಾನಾ ಭಾಗಗಳಲ್ಲಿ ಸಂಚರಿಸಿ ಜೀವಜಾಲದ ದುಃಸ್ಥಿತಿಯ ಅಧ್ಯಯನದ ನಂತರ ಬರೆದ ಕೃತಿ ಇದು.  

ಇನ್ನೇನು ಡಿಸೆಂಬರಿನಲ್ಲಿ ಪ್ಯಾರಿಸ್ಸಿನಲ್ಲಿ ನಡೆಯಲಿರುವ ಮತ್ತೊಂದು ಹವಾಗುಣ ಶೃಂಗಸಭೆಗೆ ಜಾಗತಿಕ ಧುರೀಣರು ಸಜ್ಜಾಗುತ್ತಿದ್ದಾರೆ. ಶ್ರೀಮಂತ ರಾಷ್ಟ್ರಗಳೇನೊ ಫಾಸಿಲ್ ಇಂಧನಗಳ ಬಳಕೆಯನ್ನು ತಗ್ಗಿಸಲು ಒಪ್ಪಬಹುದು. ಆದರೆ ಅಭಿವೃದ್ಧಿಯ ಮಾರ್ಗದಲ್ಲಿ ಇದೀಗ ದಾಪುಗಾಲು ಹಾಕುತ್ತಿರುವ ಚೀನಾ ಮತ್ತು ಭಾರತ ಕಲ್ಲಿದ್ದಲು ಬಳಕೆಯನ್ನು ಮತ್ತಷ್ಟು ಹೆಚ್ಚಿಸತೊಡಗಿವೆ.

ಪರಿಸರ ರಕ್ಷಣಾ ಕ್ರಮವಾಗಿ ಭಾರತವೇನೊ ಮುಂದಿನ ಏಳು ವರ್ಷಗಳಲ್ಲಿ ಬಿಸಿಲ ಶಕ್ತಿಯಿಂದಲೇ ಒಂದು ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಬೃಹತ್ ಗುರಿಯನ್ನು ಹೂಡಿದೆಯಾದರೂ ಕಲ್ಲಿದ್ದಲ ಲಾಬಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ‘ಕಲ್ಲಿದ್ದಲಿಗೆ ನಿಷೇಧ ಹಾಕಿದರೆ ಬಡವರ ಸಂಕಟ ಇನ್ನಷ್ಟು ಹೆಚ್ಚಲಿದೆ’ ಎಂದು ಆಗಲೇ ಕೋಲ್ ಮಾಫಿಯಾಗಳು ಪ್ರತಿ ಎಚ್ಚರಿಕೆ ನೀಡತೊಡಗಿವೆ.

ಲಾಭಕೋರ ಉದ್ಯಮಿಗಳು ಬಡವರ ಹೆಸರಿನಲ್ಲಿ ಮಾಡುವ ಭಾನಗಡಿಗಳೇ ಪೃಥ್ವಿಯನ್ನು ಇನ್ನಷ್ಟು ಸಂಕಟಕ್ಕೆ ನೂಕುತ್ತಿವೆ ಎಂದು ಪೋಪ್ ನೀಡಿದ ಎಚ್ಚರಿಕೆ ಚೀನಾ ಅಥವಾ ಭಾರತಕ್ಕೆ ತಟ್ಟುವುದಿಲ್ಲ. ಇಂಥ ಸಂಗತಿಗಳ ಬಗ್ಗೆ ನಮ್ಮ ಧರ್ಮಗುರುಗಳಾಗಲೀ ವಿಜ್ಞಾನಿಗಳಾಗಲೀ ವೈದ್ಯವೃಂದವಾಗಲೀ ಗಟ್ಟಿ ಧ್ವನಿ ಎತ್ತಿದ್ದೇ ಅಪರೂಪ.

ಈ ಮಧ್ಯೆ ರಾಜ್ಯದ ಹಿತಕ್ಕೆ ಸಂಬಂಧಿಸಿದ ದೂರದೃಷ್ಟಿಯ ಧೋರಣೆಗಳನ್ನು ಯಾರು ರೂಪಿಸಬೇಕು? ಅತಿವೃಷ್ಟಿ, ಅನಾವೃಷ್ಟಿ, ರೋಗರುಜಿನೆಯಂಥ ಎಲ್ಲ ಪ್ರಕೋಪಗಳನ್ನೂ ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳುವ ಒಂದು ವರ್ಗವನ್ನೇ ನಾವು ಸೃಷ್ಟಿಸಿದ್ದೇವೆ. ಅವರ ಮುಷ್ಟಿಯಿಂದ ಭೂಮಿಯನ್ನು ಬಿಡಿಸಿಕೊಳ್ಳುವ ಧೀರರು ಎಲ್ಲಿದ್ದಾರೊ?

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT