ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಹಿಂದೊಂದು ಕರಿನೆರಳು

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಸ್ವಾಮಿಯೋರು ಒಂದು ಮಾತು ಹೇಳಿ­ದರೆ ಸಾಕು, ಯಾರೂ ನಿಮ್ಮನ್ನ ಅಲ್ಲಾಡಿಸೋಕೆ ಆಗಲ್ಲ ಬಿಡಿ. ಏನಿಲ್ಲಾ ಅಂದ್ರೂ ಈ ಮಠಕ್ಕೆ ಹತ್ತು ಸಾವಿರ ವೋಟು ಇದೆ’.  ಏನಿದರ ಅರ್ಥ? ಈ ಭಾಷೆ ಚುನಾವಣಾ ಸಮಯ­ದಲ್ಲಿ ಯಾರಿಗೆ ಅರ್ಥ ಆಗಲ್ಲ. ‘ಈ ಸಾರಿ ಇಂತಹವರಿಗೆ ಮಾಡೋಣ ಬಿಡಿ’ ಅಂತ ಅವರೇನಾದ್ರೂ ಅಂದ್ರೆ ಮುಗಿಯಿತು, ಚುನಾ­ವಣಾ ಅಭ್ಯರ್ಥಿ ಗೆದ್ದಂತೇ ಸರಿ. ಹಾಗಂತ ಭಾವಿ­ಸು­ತ್ತಾರೆ.

ಸ್ವಾಮಿಯೋರನ್ನ ‘ಹ್ಞೂಂ’ ಅನ್ನಿ­ಸೋದು ಪಕ್ಷದ ಟಿಕೆಟ್‌ ಪಡೆದಷ್ಟೇ ಕಷ್ಟವಾ­ಗಿ­ರು­ತ್ತದೆ. ಎಷ್ಟೋ ಬಾರಿ ಬುದ್ಧಿಯೋರು ‘ಆಗಲಿ’ ಅಂದಮೇಲೆ ನಾಮಪತ್ರ ಸಲ್ಲಿಸೋದು ಇರುತ್ತೆ. ಭಾರತದ ಚುನಾವಣಾ ರಾಜಕೀಯದಲ್ಲಿ ಮಠ­ಗಳು ನಿರ್ಣಾಯಕವಾಗುವುದು ಹೊಸ­ದೇನೂ ಅಲ್ಲ. ದಶಕಗಳಿಂದಲೂ ಕರ್ನಾಟಕದ ಪ್ರಮುಖ ಮಠಗಳೆಲ್ಲಾ ತಮ್ಮ ರಾಜಕೀಯ ಬೆಂಬಲವನ್ನು ಬಹಿರಂಗವಾಗಿಯೇ ಸೂಚಿಸುತ್ತಾ ಬಂದಿವೆ. ಸಾಯಿ­ಬಾಬಾರಿಂದ ಪೇಜಾವರರವರೆಗೆ, ಸಿದ್ಧ­ಗಂಗಾ ಮಠ, ಆದಿಚುಂಚನಗಿರಿ ಮಠ, ಸುತ್ತೂರು ಮಠ ಇವುಗಳ  ಆಶೀರ್ವಾದ ರಾಜ­ಕಾರಣಿ­ಗಳಿಗೆ ಅನಿವಾರ್ಯವಾಗುತ್ತದೆ.

ಗಾಂಧೀಜಿ ರಾಜಕೀಯವನ್ನು ಅಧ್ಯಾತ್ಮ­ದೆತ್ತ­ರಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದರು. ‘ಅಧ್ಯಾತ್ಮ’ವನ್ನು ಕುರಿತು ಚಿಂತಿಸಬೇಕಾದವರು ರಾಜಕೀಯ ಮಾಡುವುದನ್ನು ಅವರು ಬಯಸಿ­ರ­ಲಿಲ್ಲ.  ಭಾರತ ಧಾರ್ಮಿಕ ದೇಶ. ಆದ್ದರಿಂದ ರಾಜ­ಕೀಯ ಅಭಿಪ್ರಾಯವನ್ನು ರೂಪಿಸುವಲ್ಲಿ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು. ಚುನಾ­ವಣಾ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಯ ಪಾತ್ರವನ್ನು ಚುನಾವಣಾ ಕಾನೂನು ನಿರಾಕರಿಸುತ್ತದೆ!

ಇಲ್ಲಿ ನಮ್ಮ ಚರ್ಚೆ ಇರುವುದು ಜನರು ಹಾಕುವ ಮತ ಯಾರದು? ಇಲ್ಲಿ ಮತ ಎಂದರೆ  ‘ಅಭಿಪ್ರಾಯ’, ‘ನಿಲುವು’, ‘ಆಯ್ಕೆ’, ‘ಒಲವು’ ಎಂಬ ಅರ್ಥಗಳು ಬರುತ್ತವೆ. ಅಂತಹ ಮತ ಸ್ವತಃ ಮತದಾರನದ್ದೆ ಎನ್ನುವುದೇ ನಮ್ಮ ಇಲ್ಲಿನ ದೊಡ್ಡ ಪ್ರಶ್ನೆಯಾಗಿದೆ. ಮಠಗಳೆಲ್ಲಾ ಜಾತಿ ಆಧಾರಿತವಾದವು. ಅದರಲ್ಲೂ ಉಪಜಾತಿ, ಒಳಜಾತಿಗಳ ಬೆನ್ನಲ್ಲಿ ಹುಟ್ಟಿರುತ್ತವೆ. ಜಾತಿ ಹೆಸರಿನ ಗುಣಾಕಾರ, ಭಾಗಾಕಾರದಲ್ಲಿ ಮಠ­ಗಳು ಘಟಕಗಳಾಗುತ್ತವೆ.

ಮಠಗಳಿಗೆ ನಡೆದು­ಕೊಳ್ಳುವ ಜನರಲ್ಲಿ ಕೆಲವರಾದರೂ ತಮ್ಮ ರಾಜ­ಕೀಯ ನಿಲುವುಗಳನ್ನೂ ತಮ್ಮ ಜಾತಿ ಗುರುವಿನ ಪಾದಕ್ಕೆ ಒತ್ತೆ ಇಟ್ಟಿರುತ್ತಾರೆ. ಅಂದರೆ ಮಠಗಳು ಕೇವಲ ಜಾತಿ ‘ಸಂಸ್ಕೃತಿ’ಯ ರಕ್ಷಕವಾಗಿರದೆ ಅದನ್ನು ರಾಜಕೀಯ ಮತವಾಗಿಸುವ ‘ಏಜೆಂಟ್’ ಪಾತ್ರವನ್ನೂ ವಹಿಸುತ್ತವೆ.  ಅದು ಮಠದ ಭಕ್ತರ ಅರಿವಿಗೆ ಬರುವುದಿಲ್ಲ. ಆ ಲೆಕ್ಕಕ್ಕೆ ಮಠ­ಗಳಿಗೆ ಆದಾಯ ದಾನರೂಪದಲ್ಲಿ ಮಾತ್ರ­ವಲ್ಲ, ವೋಟಿನ ರೂಪದಲ್ಲೂ ಬರುತ್ತದೆ. ಆ ಮಠಕ್ಕಿರುವ ವೋಟಿನ ಶಕ್ತಿಯ ಮೇಲೆ ರಾಜಕೀಯ ಪಕ್ಷಗಳು ಸ್ವಾಮಿಗಳ  ಕಾಲಿಗೆರಗು­ತ್ತವೆ. ಮುಂದೆ ಗೆದ್ದ ರಾಜಕೀಯ ನಾಯಕರು ಮಠಕ್ಕೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಕೊಡಿಸಲು ಸಿದ್ಧರಾಗುತ್ತಾರೆ. ಮಠ­ಗಳಿಗೆ, ದೇವಾಲಯಗಳಿಗೆ ಹಿಂದಿದ್ದ ಸರ್ಕಾರ ಉದಾರವಾಗಿ ಅನುದಾನ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.

ಪ್ರಜಾಪ್ರಭುತ್ವದ ಅಂಗವಾಗಿ ಚುನಾವಣೆ­ಯನ್ನು ಒಪ್ಪಿದಾಗ ಸಾಮುದಾಯಿಕ ಮತದಾನ­ವನ್ನು ಎಲ್ಲೂ ಸೂಚಿಸಿಲ್ಲ. ಸಂವಿಧಾನ ರಚನಾ­ಕಾ­ರರು ವ್ಯಕ್ತಿಯನ್ನು ಘಟಕವಾಗಿ ಕಲ್ಪಿಸಿದ್ದರೇ ಹೊರತು ಜಾತಿ, ಧರ್ಮ ಮತ್ತಾವುದೇ ರೀತಿಯ ಸಮೂ­­ಹದ ನೆಲೆಯ ಮತಗಳನ್ನಲ್ಲ. ಆದ್ದರಿಂ­ದಲೇ ಅಂಬೇಡ್ಕರ್ ಅವರು ಪ್ರತ್ಯೇಕ ಮತ­ದಾನದ ಬದಲು ಪ್ರತ್ಯೇಕ ಮತ ಕ್ಷೇತ್ರವನ್ನು ಸೂಚಿಸಿದರು.

ಇನ್ನು ಮುಸಲ್ಮಾನರನ್ನೋ ಕ್ರಿಶ್ಚಿಯನ್ನರನ್ನೋ ಉಲ್ಲೇಖಿಸಿದಾಗ ವ್ಯಕ್ತಿ ನೆಲೆಯಲ್ಲಿ  ಗುರುತಿಸು­ವುದು ಬಹಳ ಕಡಿಮೆ. ಅಲ್ಲಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಚರ್ಚ್‌ನ ಹುಲ್ಲು ಕಡ್ಡಿಯನ್ನು ಅಲ್ಲಾಡಿಸಬೇಕಾದರೂ ಬಿಷಪ್‌ರ ಅನುಮತಿಯನ್ನು ನಿರೀಕ್ಷಿಸುವ ಅಲ್ಲಿಯ ಜನ, ಮತ ಚಲಾಯಿಸುವಂತಹ ಗುರು­ತರ­ವಾದ ಜವಾಬ್ದಾರಿಯ ಸಂದರ್ಭದಲ್ಲಿ ತಾವೇ ನಿರ್ಣಯವನ್ನು ತೆಗೆದುಕೊಳ್ಳಬಲ್ಲರೆ? ಅದೇ ರೀತಿ ಮುಸಲ್ಮಾನರ ವೋಟು, ವ್ಯಕ್ತಿ ನೆಲೆಯಲ್ಲಿ ಕೈಗೊಂಡ ತೀರ್ಮಾನವಾಗಲು ಸಾಧ್ಯವೇ? ಅಂದರೆ ತಮ್ಮ ಧರ್ಮದ ಜನರ  ರಾಜಕೀಯ ಅಭಿಪ್ರಾಯವನ್ನು ರೂಪಿಸುವಾಗ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು.

ಮಠಗಳಿಲ್ಲದ ಸಮುದಾಯಗಳ ವೋಟಿನ ಒಡೆತನ ಆಯಾ ಜಾತಿಯ ನಾಯಕರ ಕೈಯಲ್ಲಿ­ರುತ್ತದೆ. ಹಾಗಾಗಿ ಆ ಜಾತಿಯ ನಾಯಕರನ್ನು ಆಮಿಷಕ್ಕೆ ಒಳಪಡಿಸಲಾಗುತ್ತದೆ. ಸಣ್ಣ ಪುಟ್ಟ ಸಮುದಾಯಗಳ ಮೇಲೆ ಬಲಿಷ್ಠ ಕೋಮಿನವರ ಹಿಡಿತ ಹಳ್ಳಿಯ ಮಟ್ಟದಲ್ಲಿ ಇದ್ದೇ ಇರುತ್ತದೆ. ಇಲ್ಲಿ ಮತಗಳ ಹಿಂದಿನ ಮೆದುಳು ಊರ ಮುಖಂಡರು ಇಲ್ಲವೆ ಜಾತಿ ಮುಖಂಡರ ಕೈಯಲ್ಲಿರುತ್ತದೆ.  ‘ಸುತ್ತಲಿನ ಏಳು ಹಳ್ಳಿಗಳಲ್ಲಿ ಗೌಡರ ಮಾತೇ ನಡೆಯುವುದು’ ಎಂದೇ ಜನ ವ್ಯಕ್ತಿಯ ಶಕ್ತಿಯನ್ನು ಗುರುತಿಸಿ ಹೇಳುತ್ತಾರೆ. ಅವರ ಮಾತಿನಂತೆ ವೋಟು ಹಾಕುವುದು ನಿಜವೇ ಆಗಿರುತ್ತದೆ.

ಬೇರೆಯವರ ಅಭಿ­ಪ್ರಾಯದ ಮೇಲೆ ತನ್ನ ಹಕ್ಕನ್ನು ಸಾಧಿಸುವುದು ಈ ನಾಯಕರ  ಪ್ರತಿಷ್ಠೆಯ ಸಂಕೇತವಾ­ಗಿ­ರುವುದನ್ನು ನಾವು ಇಂದು ಗಮನಿಸಬೇಕಾಗಿದೆ.

ಹಳ್ಳಿಗಳಲ್ಲಿ ರಾಜಕೀಯ ಜ್ಞಾನದ ಕೊರತೆ ಇರುವವರೆಲ್ಲರೂ ಮತ ಚಲಾವಣೆಯ ಹೊತ್ತಿಗೆ  ರಾಜಕೀಯವಾಗಿ ಪ್ರಾಜ್ಞರೆನಿಸಿಕೊಂಡವರ ಸೂಚನೆಗಾಗಿ ನೋಡುತ್ತಿರುತ್ತಾರೆ. ಅಂತಹ ಕಡೆ ಸ್ಥಳೀಯ ಏಜೆಂಟರ ಮಾತು, ಪ್ರಚಾರ ಕೆಲಸ ಮಾಡುತ್ತದೆ. ರಾಜಕೀಯ ಭಾಷಣಗಳು, ಮಾಧ್ಯಮಗಳ ಪ್ರಚಾರ ಯುವಕರನ್ನು ತಲುಪುತ್ತದೆ. ಬಡತನದಲ್ಲಿ ಬಳಲುವವರನ್ನೂ ವಯೋವೃದ್ಧರನ್ನು ಕರೆತಂದು ಮತ ಚಲಾಯಿಸುವಂತೆ ಮಾಡಿದಾಗ ಸಾಂಪ್ರ­ದಾಯಿಕ­ವಾದ ಗ್ರಹಿಕೆಯ ಮೇಲೆ ಇಲ್ಲವೆ ತಮಗೆ  ‘ಅನ್ನ’ವನ್ನು ಕೊಟ್ಟವರಿಗೆ ವೋಟು ಹಾಕುವ ಸಾಧ್ಯತೆಗಳು ಹೆಚ್ಚು.

ವಯೋವೃದ್ಧರು ತಮ್ಮ ಕುಟುಂಬದಲ್ಲೇ ಅಭಿ­ಪ್ರಾಯ ವ್ಯಕ್ತಪಡಿಸುವ ಹಕ್ಕು ಕಳೆದು­ಕೊಂಡು ಮೂಲೆ­ಗುಂಪಾಗಿರುತ್ತಾರೆ. ಅಂತಹ­ವರು ರಾಜ­ಕೀಯ ಆಸಕ್ತಿಯನ್ನು ಉಳಿಸಿಕೊಳ್ಳ­ಬೇಕು ಎಂದು  ನಿರೀಕ್ಷಿಸುವುದೇ ತಪ್ಪಾಗುತ್ತದೆ.  ಯಾರೋ ಬಂದು ಕೈಮುಗಿದು ಮತ ಯಾಚಿಸಿ­ದಾಗ ಒಂದು ಗಳಿಗೆ ತನಗೂ ಮಹತ್ವ ಸಿಕ್ಕಂತೆ ಭಾವಿಸಿ ಮತ ಚಲಾಯಿಸುತ್ತಾರೆ.

ಆದರೆ ಯಾರ ಆಸರೆ­ಯ­ಲ್ಲಿ­ರುತ್ತಾರೊ ಅವರ ಅಭಿ­ಪ್ರಾಯಕ್ಕೆ ಬದ್ಧ­ರಾಗು­ತ್ತಾರೆ. ಸಂಪೂರ್ಣವಾಗಿ ಹಣದ ಶಕ್ತಿ­ಯನ್ನು ಕಳೆದುಕೊಂಡವರಿಗೆ ಚುನಾ­ವಣೆಯ ಹಿನ್ನೆಲೆ­ಯಲ್ಲಿ ಕೊಟ್ಟ ಸಣ್ಣ ಮೊತ್ತವೂ ದೊಡ್ಡ­ದಾಗಿ ಕಾಣುತ್ತದೆ. ಆ ರೊಕ್ಕ ಮತವಾಗಿ ಪರಿ­ವರ್ತನೆ­ಯಾದರೆ ಆಶ್ಚರ್ಯವೇನೂ ಇಲ್ಲ.  ಒಂದು ದಿನದ ಬೀಡಿಗೆ ಸಿಕ್ಕ ಕಾಸು ಅವರು ಹಾಕುವ ವೋಟಿಗೆ ಒತ್ತಾಸೆಯಾಗುವುದಾದರೆ ಪ್ರಜಾ­­ಪ್ರಭುತ್ವ ಬೀಡಿಯಿಂದ ಉಗುಳಿದ ಹೊಗೆಗೆ ಸಮನಾಗುತ್ತದೆ.

ಭಾರತದಲ್ಲಿ  ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಆಕೆಯ ಮತ ಚಲಾವಣೆಯ ಹಕ್ಕಿನ ಚರ್ಚೆ ಆರಂಭವಾಗಿ ಸುಮಾರು ಒಂದು ಶತಮಾನವೇ ಕಳೆಯುತ್ತಾ ಬಂದಿದೆ. ಈಗಲೂ ತಮ್ಮ ಮತವನ್ನು ತಮ್ಮ ಹಕ್ಕು, ತಮ್ಮ ಆಯ್ಕೆ ಅಂತ ಭಾವಿಸಿರಬಹುದೇ ಎಂದು ಕೇಳಿಕೊಳ್ಳ­ಬೇಕಾ­ಗಿದೆ.

ಹೋಂ ರೂಲ್ ಚಳವಳಿಯ ನಾಯಕಿ ಆ್ಯನಿ ಬೆಸೆಂಟ್, ೧೯೧೭ರ ಹೊತ್ತಿಗೆ ದೇಶ­ದಾದ್ಯಂತ ಮಹಿಳಾ ಸಂಘಟನೆಗಳ ಮೂಲಕ ಸಹಿಯನ್ನು ಸಂಗ್ರಹಿಸಿ ಮಹಿಳೆಗೆ ಮತ ಚಲಾಯಿಸುವ ಹಕ್ಕನ್ನು ದೊರಕಿಸಿಕೊಡಲು ಶ್ರಮಿಸಿದರು. ಭಾರತದಲ್ಲಿ  ದೊಡ್ಡ ಹೋರಾಟ­ವಿಲ್ಲದೆ ಮತ ಚಲಾವಣೆಯ ಹಕ್ಕು ಮಹಿಳೆಗೆ ದೊರೆತದ್ದು ಮಾತ್ರ ದೊಡ್ಡ ಅದೃಷ್ಟವೆಂದೇ ತಿಳಿಯ­ಬೇಕಾಗುತ್ತದೆ. ಸ್ವಾತಂ­ತ್ರ್ಯಾ­ನಂತರ ಹೆಣ್ಣನ್ನು ಈ ದೇಶದ ನಾಗರಿಕಳೆಂದು ಗುರು­ತಿಸಿ ಮತ ಚಲಾವಣೆಯ ಹಕ್ಕನ್ನು ಸಂವಿ­ಧಾನ ಬದ್ಧ­ವಾಗಿ ನೀಡಿದ ಭಾರತದ ಸಂವಿಧಾ­ನದ ರೂವಾರಿ ಬಾಬಾ ಸಾಹೇಬರನ್ನು ನೆನೆಯಬೇಕಾಗಿದೆ.

ತನಗೆ ಸಿಕ್ಕ ಮತ ಚಲಾವಣೆಯ ಅವ­ಕಾಶ­ವನ್ನು ಅವಳು ತನ್ನ  ಮೂಲಭೂತ  ಹಕ್ಕು ಎಂದು ನಿಜಾರ್ಥದಲ್ಲಿ ಅರಿಯಬೇಕಾದರೆ ಇನ್ನೂ ದಶಕಗಳೇ ಬೇಕಾಗುತ್ತದೆ. ಮತ ಚಲಾ­ವಣೆ­ಯನ್ನು ತಮ್ಮ ಸ್ವಂತ ಅಭಿಪ್ರಾಯವಾಗಿ ರೂಪಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಸಣ್ಣ ಪುಟ್ಟ ವಿಷಯಗಳಲ್ಲೂ ಅವಳಿಗೂ ಒಂದು  ಆಯ್ಕೆ ಇದೆ ಎನ್ನುವುದನ್ನೇ ಅರಿಯದ ಸಮಾಜ­ದಲ್ಲಿ ರಾಜಕೀಯವಾಗಿ ಪ್ರಾಜ್ಞರಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?

ವಿವಾಹದಲ್ಲಿ ಅವಳ ಆಯ್ಕೆ ಇರಬೇಕೆಂದು ಇಂದಿಗೂ ಒಪ್ಪದ ಸಮಾಜ, ಅವಳ ಚುನಾವಣಾ ಅಭಿಪ್ರಾಯ­ವನ್ನು ರೂಪಿಸಬಲ್ಲುದೆ? ವಿವಾಹವೇ ಹತ್ತು ಹನ್ನೆರಡು ವರ್ಷಕ್ಕೆ ಆದಾಗ, ಆಯ್ಕೆ ಪ್ರಶ್ನೆಯಾಗಿ ಮಾತ್ರ ಉಳಿಯುತ್ತದೆ. ತಾನು ಉಡುವ ಬಟ್ಟೆ, ಅದರ ಬಣ್ಣದ ಆಯ್ಕೆಯೂ ಇಲ್ಲದ ಹೆಣ್ಣು,  ಮರೆಯಲ್ಲಿ ನಿಂತು ತನ್ನದೇ ಆದ ಮತವನ್ನು ತನ್ನ ಅಭಿಪ್ರಾಯದಂತೆ  ಚಲಾಯಿಸಬಲ್ಲಳೇ? ಮನು­ವಿನ ಮಾತು ಇಲ್ಲಿ ನೆನಪಾಗುತ್ತದೆ, ವಿವಾಹ ಪೂರ್ವದಲ್ಲಿ ತಂದೆ, ನಂತರ ಕೈ ಹಿಡಿದ ಗಂಡ, ಆನಂ­ತರ ಹೆತ್ತ ಮಗನ ನೆರಳಲ್ಲಿ ತನ್ನ  ಬುದ್ಧಿ ಭಾವಗಳನ್ನು  ನೆರಳಾಗಿಸುತ್ತಾಳೆ.

ಮಧ್ಯಮವರ್ಗದ ಹೆಣ್ಣು ಮಕ್ಕಳು ಬಿಸಿಲು ಮಳೆ ಸೋಕದಂತೆ ನಾಲ್ಕು ಗೋಡೆಯ ಒಳಗೆ ಬಂದಿಯಾಗಿ ಬದುಕುತ್ತಿರುವಾಗ ರಾಜಕೀಯ ಅವರ ಆಸಕ್ತಿಯ ವಿಚಾರವಾಗಲಾರದು. ಪಂಚಾ­ಯಿತಿ ಮಟ್ಟದ ರಾಜಕೀಯದಲ್ಲಿ ಕೊಟ್ಟ ಮೀಸಲಾತಿ ಅವರು ಸಣ್ಣ ಪ್ರಮಾಣ­ದಲ್ಲಾ­ದರೂ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗಿದೆ.

ಮಹಿಳಾ ಮೀಸಲಾತಿ ಮಸೂದೆ, ಹಿಮದ ಗಡ್ಡೆಯ ಒಳಗೆ ಹೂತು ಹೋಗಿದೆ. ಮನು ಕುಲ ಇನ್ನೂ ಜೀವಂತವಾಗಿದೆ. ಎಂದಾದರೊಮ್ಮೆ ಹೆಣ್ಣಿನ ಮೀಸಲಾತಿ ಬಿಲ್ ಹೊರಬರಬಹುದು, ಕಾಯೋಣ.  ‘ಹೆಣ್ಣಿಗೆ  ಆಲೋಚಿಸುವ ಶಕ್ತಿ ಇಲ್ಲದಿದ್ದರೂ’ (?) ಮತ ಚಲಾಯಿಸಲು ಅವಕಾಶ ಸಿಕ್ಕಿರುವುದೇ ಅವಳ ಅದೃಷ್ಟ. ರಾಜಕೀಯ ಚರಿತ್ರೆಯನ್ನೇ ಕಾಣದ ಹೆಣ್ಣು ಜಾತಿ, ರಾಜಕೀಯದ ಭಾಗವಾಗ ಬೇಕೆಂಬುದು ಸಮಾನತೆಯ ಅತ್ಯುನ್ನತ ಆದರ್ಶ.

ರಾಜಕೀಯ ಅಭಿಪ್ರಾಯ ರೂಪಿಸುವ ಮಾಧ್ಯಮ­ಗಳ ಕುರಿತು ವಿಸ್ತಾರವಾಗಿ ಬರೆಯುವ ನಾಮ್‌ ಚೋಮ್ ಸ್ಕಿ ಅವುಗಳನ್ನು ಅಭಿಪ್ರಾಯಗಳ ಉತ್ಪಾದಕರು ಎಂದು ಕರೆದದ್ದು ಸೂಕ್ತವಾಗಿಯೇ ಇದೆ. ಅದರ ಬಹು ದೊಡ್ಡ ದಲ್ಲಾಳಿಗಳು ಮಾಧ್ಯಮಗಳು. ಸರ್ವಾಧಿಕಾರಿ­ಯೊಬ್ಬ ಹಿಂಸೆಯ ಮೂಲಕ ಸಾಧಿಸಬಹುದಾದ­ದ್ದನ್ನು ಡೆಮಾಕ್ರಸಿಯಲ್ಲಿ ಪ್ರಚಾರದ ಮೂಲಕ ಸಾಧಿಸಲಾಗುತ್ತದೆ. ಭ್ರಮೆಯನ್ನು ಕಟ್ಟುವುದೇ ಆದ್ಯತೆಯಾಗುತ್ತದೆ.

ವ್ಯಕ್ತಿಯ ವಿಚಾರದ ಅಭಿಪ್ರಾಯ ರೂಪುಗೊಳಿಸುವಾಗ ಅದನ್ನು ಮತ್ತೇರುವ ತೀವ್ರತೆಗೆ ಒಯ್ಯಲಾಗುತ್ತದೆ. ಕೆಟ್ಟದು ಒಳ್ಳೆಯದರ ಜಡ್ಜ್‌ಮೆಂಟ್ ಕಳೆದು­ಹೋಗಿರುತ್ತದೆ. ಪ್ರಚಾರದಲ್ಲಿರುವ ವಸ್ತುವಿಗೆ ಜನ ಮುಗಿಬೀಳುವಂತೆ ಪ್ರಚಾರ­ದಲ್ಲಿರುವ ನಾಯಕನಿಗೆ ಮರುಳಾಗು­ತ್ತಾರೆ. ಅವರೇ ಕಟ್ಟಿಕೊಟ್ಟ ಪರಿಭಾಷೆಯಲ್ಲಿ ಅವರನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಉಳಿದ ವಿಚಾರಗಳು ಮತದಾರನ ಮನಸ್ಸಿನಲ್ಲಿ ಇಲ್ಲವಾಗಿಸಲಾಗುತ್ತದೆ.

ಜನಸಾಮಾನ್ಯ­ನೊಬ್ಬನಿಗೆ ಅವನದೇ  ಆದ ಅಭಿಪ್ರಾಯ ರೂಪುಗೊಳ್ಳಲು ಸಾಧ್ಯವಾಗದಂತೆ ಆಕ್ರಮಣ­ಶೀಲ­ವಾಗಿ ವಿಚಾರವನ್ನು ಬಿತ್ತಲಾಗುತ್ತದೆ. ಜನರ ದುರ್ಬಲ, ಅಸಹಾಯಕ ಮಾನಸಿಕ ಸ್ಥಿತಿಯ ಮೇಲೆ ಹಲ್ಲೆ ಮಾಡಲಾಗಿ­ರುತ್ತದೆ. ಹಾಗೇ ಕರೆದು ತಂದು ಮತಗಟ್ಟೆಯಲ್ಲಿ ನಿಲ್ಲಿಸಿದಾಗ ತನ್ನದೇ ಮತವೆಂದು ಭ್ರಮಿಸಿ ವೋಟ್ ಹಾಕುತ್ತಾನೆ. ಹಿಂದೆ ಹಾದು ಹೋಗುವ ಜಾಹೀರಾತಿನ ಭೂತದ ನೆರಳು ಅವನ ಅರಿವಿಗೆ ಬಂದಿರುವುದಿಲ್ಲ. ಆ ಕ್ಷಣಕ್ಕೆ ಅವನ ಜವಾಬ್ದಾರಿ ಮುಗಿಯುತ್ತದೆ.

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ರೂಪಿಸು­ವುದೇ ಮುಖ್ಯವಾಗಿ­ರುತ್ತದೆ. ಕಲ್ಪನೆ, ಭ್ರಮೆ, ನಶೆ, ಸುಳ್ಳು, ಮೋಸ ಎಲ್ಲವೂ ಅದರ ಭಾಗವಾಗಿರುತ್ತದೆ. ಆ ಯಾವುದಕ್ಕೂ ವ್ಯತ್ಯಾಸವೇ ಉಳಿದಿರುವುದಿಲ್ಲ, ಆ ಎಲ್ಲದಕ್ಕೂ ಮಾಧ್ಯಮ ದಲ್ಲಾಳಿಯಾಗಬೇಕೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT