ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ವರ್ಗದ ಅರಾಷ್ಟ್ರೀಯ ಮನಸ್ಸು

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಒಂದರ್ಥದಲ್ಲಿ ಭಾರತ ಅನನ್ಯ ದೇಶ. ಮೇಲ್ವರ್ಗವು ತಮ್ಮದಲ್ಲದ ಭಾಷೆಯನ್ನು ಮಾತನಾಡುವುದು, ಆ ಭಾಷೆ ದೇಶದ ಇತರ ಸಮುದಾಯಗಳ ಭಾಷೆಗಿಂತ ಭಿನ್ನವಾಗಿರುವುದು ಭಾರತದಲ್ಲಿ ಮಾತ್ರ. ಮೇಲ್ವರ್ಗವು ಬೇರೆಯದೇ ಭಾಷೆ ಮಾತನಾಡುವುದನ್ನು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಯಾವುದೇ ದೊಡ್ಡ ನಗರಗಳಲ್ಲಿ ಕಾಣಬಹುದು.

ನಾನು ಇಲ್ಲಿ ಮೇಲ್ವರ್ಗ ಎಂದು ಕರೆದಿದ್ದು, ‘ಆರ್ಥಿಕ ಅಜೆಂಡಾ ಮೇಲೆ ಹಿಡಿತ ಹೊಂದಿರುವ ನಗರವಾಸಿ ಮಧ್ಯಮ ವರ್ಗ’ವನ್ನು. ಯಾವುದು ರಾಷ್ಟ್ರೀಯ ಸುದ್ದಿ ಎಂಬುದನ್ನು ನಿರ್ಧರಿಸುವ ವಿಚಾರದಲ್ಲೂ ಈ ವರ್ಗ ಹಿಡಿತ ಹೊಂದಿದೆ. ಆದರೆ, ಸಂಖ್ಯಾ ದೃಷ್ಟಿಯಿಂದ ಇದು ಸಣ್ಣ ಸಮುದಾಯ. ಐದು ಕೋಟಿ ಭಾರತೀಯರ ಬಳಿ ಮಾತ್ರ, ಅಂದರೆ ಶೇಕಡ 5ರಷ್ಟು ಜನರ ಬಳಿ, ಪಾಸ್‌ಪೋರ್ಟ್‌ ಇದೆ ಎಂದು ಸರ್ಕಾರಿ ಅಂಕಿ–ಅಂಶಗಳು ಹೇಳುತ್ತವೆ. ಪ್ರಥಮ ಆದ್ಯತೆಯ ಭಾಷೆಯನ್ನಾಗಿ ಇಂಗ್ಲಿಷ್‌ ಮಾತನಾಡುವ ಭಾರತೀಯರಿಗಿಂತ ಪಾಸ್‌ಪೋರ್ಟ್‌ ಹೊಂದಿರುವವರ ಸಂಖ್ಯೆ ದೊಡ್ಡದು ಎಂಬುದು ನನ್ನ ಊಹೆ.

ತಮ್ಮ ‘ಮಾತೃಭಾಷೆ’ಯಾಗಿರುವ ಹಿಂದಿ, ಗುಜರಾತಿ, ತಮಿಳು, ಮರಾಠಿ, ತೆಲುಗು, ಒಡಿಯಾ ಅಥವಾ ಕನ್ನಡವನ್ನು ಈ ಮೇಲ್ವರ್ಗದ ಜನ ಮಾತನಾಡಬಲ್ಲರು. ಆದರೆ ಅವರು ಈ ಭಾಷೆಗಳನ್ನು ಸುಲಲಿತವಾಗಿ ಮಾತನಾಡಲಾರರು. ಈ ಭಾಷೆಗಳಲ್ಲಿ ಬರೆದಿರುವ ಅಕ್ಷರ ಓದಬಲ್ಲರಾದರೂ, ಅವುಗಳಲ್ಲಿನ ಸಾಹಿತ್ಯ ಅಥವಾ ಸುದ್ದಿಯನ್ನು ಓದಲಾರರು. ಸಂಗೀತವೊಂದನ್ನು ಹೊರತುಪಡಿಸಿದರೆ ಈ ಜನ ಇಂಗ್ಲಿಷ್‌ ಧಾರಾವಾಹಿಗಳು, ಸಿನಿಮಾಗಳನ್ನೇ ವೀಕ್ಷಿಸುತ್ತಾರೆ. ಇಂಗ್ಲಿಷ್‌ ಭಾಷೆಯನ್ನು ಭಾರತೀಯರು ಬಹಳ ಹಿಂದಿನಿಂದಲೂ ಬಳಸುತ್ತಿದ್ದಾರೆ. ಹಾಗಾಗಿ ಇಂಗ್ಲಿಷನ್ನು ಭಾರತೀಯ ಭಾಷೆ ಎಂದೂ ಪರಿಗಣಿಸಬಹುದು ಎಂಬ ವಾದ ಮಂಡಿಸಬಹುದು. ಈ ಮಾತನ್ನು ನಾನು ಷರತ್ತಿನೊಂದಿಗೆ ಒಪ್ಪಿಕೊಳ್ಳುತ್ತೇನೆ.

ನಮ್ಮ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುವ ಇಂಗ್ಲಿಷ್‌, ಮಾಧ್ಯಮಗಳಲ್ಲಿ ಪ್ರಕಟವಾಗುವ  ಇಂಗ್ಲಿಷ್‌, ಮೂಲ ಇಂಗ್ಲಿಷ್‌ನ ಒರಟು ರೂಪ ಎಂದು ನಾನು ಹೇಳುವೆ. ಹಾಗಾದರೆ, ಇಂಗ್ಲಿಷ್ ಹೊಂದಿರುವ ಈ ಪ್ರಾಬಲ್ಯ ನಮ್ಮ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತಿದೆ? ರಾಷ್ಟ್ರದ ಆದ್ಯತೆಗಳು ಏನು ಎಂಬುದರ ಮೇಲೆ ಮಧ್ಯಮ ವರ್ಗದ ಆತಂಕಗಳು ಬೀರುವ ಪ್ರಭಾವ ಹೆಚ್ಚು. ಅಪೌಷ್ಟಿಕತೆಯಿಂದ ಸಾಯುತ್ತಿರುವ ಜನರಿಗಿಂತ ಹೆಚ್ಚಿನ ಆದ್ಯತೆಯನ್ನು ನಮ್ಮ ಮಾಧ್ಯಮಗಳು ಘೋಷಣೆ ಕೂಗುವವರಿಗೆ ನೀಡುವ ಸಾಧ್ಯತೆ ಜಾಸ್ತಿ. ರಾಷ್ಟ್ರವಿರೋಧಿ ಘೋಷಣೆ ಕೂಗುವುದರಿಂದ ಎಷ್ಟು ಜನ ಭಾರತೀಯರ ಮೇಲೆ ನೇರ ಪರಿಣಾಮ ಉಂಟಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಂಥ ಘೋಷಣೆಗಳು ನಮ್ಮ ಮನ ನೋಯಿಸಬಹುದು, ಆದರೆ ಘೋಷಣೆಗಳು ಪದಗುಚ್ಛ ಮಾತ್ರ. ಅಪೌಷ್ಟಿಕತೆಯಿಂದ ದೇಶದಲ್ಲಿ ಪ್ರತಿ ವರ್ಷ ಐದು ಲಕ್ಷ ಮಕ್ಕಳು ಸಾಯುತ್ತಿವೆ.

ಆದರೆ ಈ ವಿಚಾರ ಟಿ.ವಿ. ವಾಹಿನಿಗಳಲ್ಲಿ ನಡೆಯುವ ಆವೇಶದ ಚರ್ಚೆಯ ವಸ್ತುವಲ್ಲ. ಏಕೆಂದರೆ ಇದು ಇಂಗ್ಲಿಷ್‌ ಮಾತನಾಡುವ ಮಧ್ಯಮ ವರ್ಗವನ್ನು ಬಾಧಿಸುವುದಿಲ್ಲ. ಇದರ ಪರಿಣಾಮವಾಗಿ ನಮ್ಮ ಆರ್ಥಿಕ ಆದ್ಯತೆಗಳಲ್ಲೂ ಏರುಪೇರು ಆಗಿರುವುದು ಕಾಣುತ್ತದೆ. ಮಾಧ್ಯಮಗಳ ಗಮನ ರಾಷ್ಟ್ರೀಯವಾದಿ ಮಧ್ಯಮ ವರ್ಗಗಳ ಮೇಲಿದೆ. ಹಾಗಾಗಿ, 30 ಕೋಟಿ ಜನ ಬಡತನದಲ್ಲಿ ಬದುಕುತ್ತಿರುವ ಈ ದೇಶದಲ್ಲಿ ₹ 1 ಲಕ್ಷ ಕೋಟಿ ವೆಚ್ಚದ ಬುಲೆಟ್‌ ರೈಲಿನ ಬಗ್ಗೆ ನಾವು ಗಂಭೀರವಾಗಿ ಚರ್ಚಿಸಬಹುದು. ಇದಕ್ಕೆ ಕಾರಣ ತೀರಾ ಸರಳ: ಭಾರತದಲ್ಲಿ ಬಡವರಿಗೆ ಧ್ವನಿ ಇಲ್ಲ. ಮಧ್ಯಮ ವರ್ಗವು ದೇಶದ ರಾಜಕೀಯದ ಮೇಲೆ ಯಥೋಚಿತವಲ್ಲದ ರೀತಿಯ ಪರಿಣಾಮ ಬೀರಿದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದಿ ಹೋರಾಟ ಅಥವಾ ಇಸ್ಲಾಮಿಕ್‌ ಭಯೋತ್ಪಾದನಾ ದಾಳಿಯಲ್ಲಿ ಸಾಯುವವರಿಗಿಂತ ಹೆಚ್ಚಿನ ಸಂಖ್ಯೆಯ ಜನ ದೇಶದ ಈಶಾನ್ಯ ರಾಜ್ಯಗಳಲ್ಲಿ, ಮಧ್ಯ ಭಾರತದಲ್ಲಿ ತೀವ್ರವಾದಿಗಳ ದಾಳಿಗೆ ಪ್ರತಿ ವರ್ಷ ಬಲಿಯಾಗುತ್ತಾರೆ. ಅಂಕಿ–ಅಂಶಗಳು ಇದನ್ನು ಸ್ಪಷ್ಟವಾಗಿ ಹೇಳುತ್ತವೆ. ಆದರೆ ನಾವು ಇಸ್ಲಾಮಿಕ್‌ ಭಯೋತ್ಪಾದನೆಯ ಬಗ್ಗೆ ಮಾತ್ರ ಮತ್ತೆ ಮತ್ತೆ ಚರ್ಚಿಸುತ್ತಿರುತ್ತೇವೆ. ಏಕೆಂದರೆ ಇದು ಮಧ್ಯಮ ವರ್ಗದ ಆತಂಕಗಳ ಜೊತೆ ಬೆಸೆದುಕೊಂಡಿದೆ. ಈಶಾನ್ಯ ರಾಜ್ಯಗಳಲ್ಲಿರುವ ಮಾವೋವಾದಿಗಳ ಚಟುವಟಿಕೆ, ಪ್ರತ್ಯೇಕತೆ ಮಧ್ಯಮ ವರ್ಗವನ್ನು ಬಾಧಿಸುವುದಿಲ್ಲ. ಹಾಗಾಗಿ, ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಗಡಿ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ಸಾಯುವ ಯೋಧರು ಕೂಡ ಹೀರೋಗಳಂತೆ ಕಾಣುತ್ತಾರೆ.

ಸೌರವ್ ಕಾಲಿಯಾ ಅವರಿಂದ ಆರಂಭಿಸಿ ಹನುಮಂತಪ್ಪನವರತನಕ ಇಲ್ಲಿ ಮಡಿದ ಯೋಧರ ಹೆಸರು ಮಧ್ಯಮ ವರ್ಗಕ್ಕೆ ತಿಳಿದಿದೆ. ಆದರೆ ಈಶಾನ್ಯ ರಾಜ್ಯಗಳು ಅಥವಾ ಛತ್ತೀಸಗಢದಲ್ಲಿ ಸಾವನ್ನಪ್ಪಿದ ಒಬ್ಬ ಯೋಧನ ಹೆಸರು ನೆನಪಿಸಿಕೊಳ್ಳಲು ಈ ವರ್ಗ ತಿಣುಕಾಡುತ್ತದೆ. ದೇವಸ್ಥಾನಗಳಲ್ಲಿ ಕಾಲ್ತುಳಿತಕ್ಕೆ ಸಿಲುಕಿ, ನೀರಿನಲ್ಲಿ ದೋಣಿ ಮುಳುಗಿ ಸಾಯುವ ನೂರಾರು ಭಾರತೀಯರ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ನೀಡುವ ಆಹಾರದ ಮೂಲಕ ಅಚಾನಕ್ ಆಗಿ ವಿಷಪ್ರಾಶನ ಆಗಿ ಮಕ್ಕಳು ಸಾಯುವುದು, ನೇತ್ರ ಶಿಬಿರಗಳಲ್ಲೇ ಜನ ದೃಷ್ಟಿ ಕಳೆದುಕೊಳ್ಳುವುದು, ಅಕ್ರಮವಾಗಿ ಸಿದ್ಧಪಡಿಸಿದ ಸಾರಾಯಿ ಕುಡಿದು ಜೀವ ಕಳೆದುಕೊಂಡವರ ಬಗ್ಗೆ ವರದಿ ಪ್ರಕಟವಾಗುತ್ತಿರುತ್ತದೆ.

ಆದರೆ ಘೋಷಣೆಗಳ ಬಗ್ಗೆ ಟಿ.ವಿ. ವಾಹಿನಿಗಳಲ್ಲಿ ಆದಷ್ಟು ಚರ್ಚೆಗಳು ಈ ವಿಚಾರಗಳ ಬಗ್ಗೆ ಆಗುವುದಿಲ್ಲ. ಇಂಥ ಸಾವುಗಳ ಬಗೆಗಿನ ವರದಿ ಮತ್ತು ಮೇಲ್ವರ್ಗದ ಒಬ್ಬ ವ್ಯಕ್ತಿಯ ಕೊಲೆಗೆ ಸಿಕ್ಕ ಪ್ರಚಾರವನ್ನು (ಶೀನಾ ಬೋರಾ ಪ್ರಕರಣ ನೆನಪಿಸಿಕೊಳ್ಳಿ) ಪರಸ್ಪರ ಹೋಲಿಸಬೇಕು. ಇಂಗ್ಲಿಷ್‌ ಸಂಸ್ಕೃತಿಗೆ ಒಗ್ಗಿರುವ ಮಧ್ಯಮ ವರ್ಗದ ಭಾರತೀಯರು, ದೇಶದ ಇತರರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ತಮಗೆ ಸಂಬಂಧಿಸಿದ ವಿಚಾರಗಳು, ತಮ್ಮ ಆತಂಕಗಳ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಅವರು ಬಯಸುತ್ತಿದ್ದಾರೆ. ಉಳಿದೆಲ್ಲ ಭಾರತೀಯರ ಆತಂಕಗಳು ಅಸಂಗತ ಎನ್ನುತ್ತಿದೆ ಈ ವರ್ಗ. ಈ ಧೋರಣೆ ರಾಷ್ಟ್ರವಿರೋಧಿ ಅಲ್ಲವೇ? ಅಲ್ಲ ಎಂದಾದರೆ, ಇನ್ಯಾವುದು ರಾಷ್ಟ್ರವಿರೋಧಿ ಧೋರಣೆ? ಇಂಗ್ಲಿಷಿನ ಪ್ರಭಾವದ ಇನ್ನೊಂದು ಆಯಾಮದ ಬಗ್ಗೆ ನೋಟ ಹರಿಸೋಣ.

ಯುರೋಪ್‌ನ ಸಂಸ್ಕೃತಿಯಲ್ಲಿ ಭಾರತದ ಮಧ್ಯಮ ವರ್ಗದವರ ಪ್ರವೇಶ ತೀರಾ ಸೀಮಿತ. ನಮಗೆ ಆಸಕ್ತಿ ಇರುವುದು ಅಲ್ಲಿನ ಜನಪ್ರಿಯ ಸಂಸ್ಕೃತಿಯಲ್ಲಿ ಮಾತ್ರ. ಉದಾಹರಣೆಗೆ, ಯುರೋಪ್‌ನ ಶಾಸ್ತ್ರೀಯ ಸಂಗೀತ ಮತ್ತು ಅದರ ಮಾಧುರ್ಯವನ್ನು ಅರಿಯದೆ ಅಲ್ಲಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕಕಾಲದಲ್ಲಿ ಎರಡು ರಾಗವಿನ್ಯಾಸ ಪ್ರಸ್ತುತಪಡಿಸುವ ಪದ್ಧತಿ ಭಾರತದಲ್ಲಿ ಇಲ್ಲ. ಯುರೋಪ್‌ನ ಶಾಸ್ತ್ರೀಯ ಸ್ವರಮೇಳವನ್ನು ಗಮನಿಸಿದರೆ, ಅಲ್ಲಿ ಒಬ್ಬ ‘ಹೀರೊ’ ಇಲ್ಲ ಎಂಬುದು ಗೊತ್ತಾಗುತ್ತದೆ. ಸಂಗೀತ ಮೇಳದ ನಿರ್ವಾಹಕ ಅಲ್ಲಿ ಯಾವುದೇ ಸಂಗೀತ ಸಾಧನ ನುಡಿಸುವುದಿಲ್ಲ. ಅಲ್ಲಿ ಎಲ್ಲ ಸಂಗೀತಗಾರರೂ ಸಮಾನರು. ಆದರೆ ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಸ್ಥಿತಿ ಹೀಗಿಲ್ಲ.

ಈ ಸಾಂಸ್ಕೃತಿಕ ಸಮಾನತೆ ಯುರೋಪಿನ ಸಮಾಜಕ್ಕೆ ನೀಡಿದ ಸಂದೇಶ ಏನು? ಈ ಸಮಾನತೆಯ ಕಾರಣ ಅವರು ತಂಡವಾಗಿ ಆಡಬೇಕಾದ ಫುಟ್‌ಬಾಲ್‌ನಂಥ ಆಟಗಳಲ್ಲಿ ಒಳ್ಳೆಯ ಸಾಧನೆ ತೋರುತ್ತಾರೆಯೇ? ಇದು ಭಾರತೀಯರಿಗೆ ಗೊತ್ತಿಲ್ಲ. ಭಾರತೀಯರಿಗೆ ಪಾಶ್ಚಿಮಾತ್ರ ಜಗತ್ತಿನ ಬಗ್ಗೆ ಇರುವ ಆಸಕ್ತಿ ಪಾಪ್‌ ಸಂಗೀತ ಅಥವಾ ಟ್ವಿಟರ್‌ನಲ್ಲಿ ಮಾತ್ರ! ಇವುಗಳ ಬಗ್ಗೆ ಮಾತ್ರ ಆಸಕ್ತಿ ವಹಿಸುವುದು ಅರ್ಥಗರ್ಭಿತವಲ್ಲ. ಇದು ತೋರಿಕೆಯ, ಅರ್ಥಹೀನ ಒಡನಾಟ. ಇಂಗ್ಲಿಷ್‌ ತಿಳಿದಿರುವುದರಿಂದ ಭಾರತೀಯರಿಗೆ ಸಾಕಷ್ಟು ಪ್ರಯೋಜನ ಇದೆ ಎಂಬುದು ನಿಜ. ಅದರಲ್ಲಿ ಮುಖ್ಯವಾಗಿದ್ದು ಆರ್ಥಿಕ ಪ್ರಯೋಜನ. ಇದರಲ್ಲಿ ಹೆಚ್ಚಿನ ಲಾಭ ಸಿಕ್ಕಿರುವುದು ಮಧ್ಯಮ ವರ್ಗಕ್ಕೆ. ಆದರೆ ನಮ್ಮ ರಾಷ್ಟ್ರೀಯ ವಾಗ್ವಾದಗಳ ಮೇಲೆ, ನಮ್ಮ ಆದ್ಯತೆಗಳು ಮತ್ತು ಅಜೆಂಡಾಗಳ ಮೇಲೆ ಇಂಗ್ಲಿಷ್ ಭಾಷಿಕ ಮಧ್ಯಮ ವರ್ಗ ಉಂಟುಮಾಡಿರುವ ದುಷ್ಪರಿಣಾಮ ಸರಿಪಡಿಸಲಾಗದಷ್ಟು ಅಗಾಧ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT