ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಸೋತ ಕಡೆ ಜಗಳ ಇರುತ್ತದೆ, ನಮಗೆ ಜಗಳ ಬೇಡವಾಗಿದೆ...

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮಾತು ಸೋತಾಗ ಹೀಗೆಯೇ ಆಗುತ್ತದೆ. ಮಾತು ಅಂದರೆ ಸಂವಾದ. ಪ್ರಜಾತಂತ್ರದಲ್ಲಿ ಸಂಸತ್ತಿಗೆ, ಶಾಸನ ಸಭೆಗಳಿಗೆ ಮಾತಿನ ಮನೆ ಎಂದುದು ಇದೇ ಕಾರಣಕ್ಕೇ ಇರಬೇಕು. ಅದು ಸಂಸತ್ತೇ ಇರಲಿ, ವಿಧಾನ ಮಂಡಲವೇ ಇರಲಿ ಅಲ್ಲಿ ಮಾತೇ ಮುಖ್ಯವಾಗಬೇಕು. ಆ ಮನೆಗೆ ಹೋಗುವ ಹಾದಿಯಲ್ಲಿಯೂ ಮಾತೇ ಮುಖ್ಯವಾಗಬೇಕು.

ಮೊದಲು ಹೀಗೆ ಇರಲಿಲ್ಲ. ಜನರು ಸೂಕ್ಷ್ಮವಾಗಿದ್ದರು. ಏನು ಅಂದರೆ ಯಾರಿಗೆ ಎಲ್ಲಿ ನೋವಾಗುತ್ತದೆ, ಯಾರ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂಬ ಭಯ ಅವರಿಗೆ ಇತ್ತು. ಅದು ಪರಸ್ಪರರ ಬಗ್ಗೆ ಇರುವ ಗೌರವ. ಪ್ರಜಾಪ್ರಭುತ್ವದಲ್ಲಿ ಅದೇ ಮುಖ್ಯ. ವ್ಯಕ್ತಿ ಗೌರವಕ್ಕೆ, ಘನತೆಗೆ ಪ್ರಜಾಪ್ರಭುತ್ವದಲ್ಲಿಯೇ ಅಗ್ರಮಣೆ. ಆದರೆ, ಪ್ರಜಾತಂತ್ರದಲ್ಲಿ ಭಿನ್ನಾಭಿಪ್ರಾಯ ಸಹಜ. ಭಿನ್ನಾಭಿಪ್ರಾಯವೇ ಪ್ರಜಾತಂತ್ರದ ಮೂಲ ಸ್ರೋತ ಕೂಡ. ಏಕಾಭಿಪ್ರಾಯ ಇರುವುದು ಅಥವಾ ಇರಬೇಕು ಎಂದು ಅಪೇಕ್ಷಿಸುವುದು ಸರ್ವಾಧಿಕಾರದಲ್ಲಿ ಮಾತ್ರ; ಪ್ರಜಾತಂತ್ರದಲ್ಲಿ ಅಲ್ಲ.

ಈಗ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಬಿಸಿಲಿನ ಜತೆಗೆ ಚುನಾವಣೆಯ ಕಾವೂ ಏರುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ಬಹಳ ಮಹತ್ವದ ಚುನಾವಣೆ. ಒಂದು ರೀತಿ ಜೀವನ್ಮರಣದ ಪ್ರಶ್ನೆ. ಸ್ಥಳೀಯವಾಗಿ ಪ್ರಾದೇಶಿಕ ಸ್ವರೂಪದ ಪಕ್ಷಗಳಿಗೂ ಇದು ಅಷ್ಟೇ ಮುಖ್ಯವಾದ ಚುನಾವಣೆ.

ಚುನಾವಣೆ ಎಂದರೆ ಆಯ್ಕೆ. ಜನರು ಮಾಡುವ ಆಯ್ಕೆ. ಜನರು ಆಯ್ಕೆ ಮಾಡುವುದಕ್ಕೆ, ಅವರು ತಮಗೇ ಏಕೆ ಮತ ಹಾಕಬೇಕು ಎಂಬುದಕ್ಕೆ ಅವರ ಮುಂದೆ ಪಕ್ಷಗಳು ವಿಷಯಗಳನ್ನು ಮಂಡಿಸಬೇಕು. ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಮತ್ತು ದೇಶಕ್ಕೆ ಏನು ಮಾಡುತ್ತೇವೆ ಎಂದು ನಮ್ಮ ಮುಂದೆ ‘ಪ್ರಣಾಳಿಕೆ’ ಇಡಬೇಕು. ಅವರು ಅಧಿಕಾರದಲ್ಲಿ ಇದ್ದುಕೊಂಡು ಮತ ಕೇಳುತ್ತಿದ್ದರೆ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಅಥವಾ ಅವರು ಅಂದುಕೊಂಡುದನ್ನು ಏಕೆ ಮಾಡಲು ಆಗಲಿಲ್ಲ, ಮತ್ತೆ ತಮಗೇ ಏಕೆ ಅಧಿಕಾರ ಬೇಕು ಎಂದು ಅವರು ನಮಗೆ ವಿವರಣೆ ಕೊಡಬೇಕು.

ಅಧಿಕಾರಕ್ಕೆ ಬರುವವರು ತಾವು ಅಧಿಕಾರಕ್ಕೆ ಬಂದರೆ ಈಗ ಅಧಿಕಾರದಲ್ಲಿ ಇದ್ದವರು ಮಾಡಲಾಗದ್ದನ್ನು ಏನು ಮಾಡುತ್ತೇವೆ ಎಂದು ಹೇಳಬೇಕು. ಜನರು ತಮ್ಮ ಮುಂದೆ ಇರುವ ಆಯ್ಕೆಗಳನ್ನು ತೂಗಿ ನೋಡಿ ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಬೇಕು. ಆದರೆ, ಈಗ ಹಾಗೆ ಆಗುತ್ತಿದೆಯೇ ಎಂದು ಕೇಳಿದರೆ ನಿರಾಶೆಯಾಗುತ್ತದೆ.

ಚುನಾವಣೆಯ ಪ್ರಚಾರ ಭಾಷಣಗಳನ್ನು ಕೇಳಿದರೆ ವಿಷಯಗಳು ಹಿಂದೆ ಸರಿದಂತೆ ಕಾಣುತ್ತದೆ. ಅಥವಾ ವಿಷಯಗಳೇ ಇಲ್ಲವೇ? ಬೈಗುಳಗಳು, ದ್ವೇಷದ ಫೂತ್ಕಾರಗಳು ಮುಂಚೂಣಿಗೆ ಬಂದು ನಿಂತಿವೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೇ ನಾಲಿಗೆ ಸಡಿಲ ಬಿಡುತ್ತಿದ್ದಾರೆ. ಅವರು ಎ.ಕೆ.ಆಂಟನಿ, ಅರವಿಂದ ಕೇಜ್ರಿವಾಲ್‌ ಅವರನ್ನು ಎ.ಕೆ.ರೈಫಲ್ಲಿಗೆ ಹೋಲಿಸಬಾರದಿತ್ತು. ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿಯೇನೋ ನಿಜ.

ಆದರೆ, ಸೇನಾಪತಿ ಸ್ಥಾನದಲ್ಲಿ ಇರುವವರಾದರೂ ಕೆಲವು ಮಟ್ಟಗಳನ್ನು ಕಾಯ್ದುಕೊಳ್ಳಬೇಕು. ಸೇನಾಪತಿಯೇ ದಾರಿ ತಪ್ಪಿದರೆ ಕಾಲಾಳುಗಳು ನಿಯಮ ಪಾಲಿಸಬೇಕು ಎಂದು ಬಯಸುವುದು ಕಷ್ಟವಾಗುತ್ತದೆ. ಹೀಗೆ ನಾಲಿಗೆ ಸಡಿಲ ಬಿಡುವವರು ಬರುವ ಉತ್ತರವನ್ನು ಸಹಿಸಿಕೊಳ್ಳಲೂ ಸಿದ್ಧರಿರಬೇಕಾಗುತ್ತದೆ. ಉತ್ತರ ಪ್ರದೇಶದ ಸಹಾರನ್‌ಪುರದ ಕಾಂಗ್ರೆಸ್‌ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಕೊಚ್ಚಿ ಹಾಕುವ ಮಾತನ್ನೇ ಆಡಿದ್ದಾರೆ; ಅದಕ್ಕೆ ಅವರು ಬೆಲೆಯನ್ನೂ ಕೊಟ್ಟಿದ್ದಾರೆ. ಈಗ ಅವರ ಬಂಧನ ಆಗಿದೆ.

ನಮ್ಮ ಜನರು ಮುಕ್ಕಾಲು ಮೂರು ಪಾಲು ಅನಕ್ಷರಸ್ಥರೇ ಇರಬಹುದು, ಹಳ್ಳಿಗರು ಇರಬಹುದು. ಆದರೆ, ಅವರು ವಿವೇಕಿಗಳು. ಹಿರಿಯರನ್ನು ಗೌರವಿಸಬೇಕು ಎಂದು ತಿಳಿದವರು ಅವರು. ನಮ್ಮ ರಾಜಕೀಯ ನಾಯಕರು ಈಗ ಆಡುತ್ತಿರುವ ಮಾತನ್ನು ನೋಡಿ ಅವರು ಮುಸಿ ಮುಸಿ ನಗುತ್ತಿರಬಹುದು. ಸುಶಿಕ್ಷಿತ ಯುವಕ–ಯುವತಿಯರಿಗೆ ರಾಜಕೀಯ ಎಂದರೆ ಮೊದಲೇ ಅಸಡ್ಡೆ. ಈ ನಾಯಕರ ಮಾತು ಕೇಳಿ ಅವರಿಗೆ ವಾಕರಿಕೆ ಬರುತ್ತಿರಬಹುದು. ಹಾಗಾದರೆ ರಾಜಕೀಯ ನಾಯಕರು ಹೀಗೆ ಮಾತನಾಡಿ ಏನನ್ನು ಸಾಧಿಸಲು ಹೊರಟಿದ್ದಾರೆ?

ಸಹರಾನ್‌ಪುರದ ಕಾಂಗ್ರೆಸ್ ಅಭ್ಯರ್ಥಿ ಒಬ್ಬ ಮುಸ್ಲಿಂ ಯುವಕ. ಆತ ಮೋದಿ ಅವರನ್ನು ಕೊಲ್ಲುವ ಮಾತನಾಡಿ ತನ್ನ ಪಕ್ಷಕ್ಕೂ ಒಳಿತು ಮಾಡಲಿಲ್ಲ, ತನ್ನ ಸಮುದಾಯಕ್ಕೂ ಒಳಿತು ಮಾಡುವಂತೆ ಕಾಣುವುದಿಲ್ಲ. ಆತನ ಮಾತಿಗೆ ಬಿಜೆಪಿ ನಾಯಕರು ಒಳಗೊಳಗೇ ನಗುತ್ತಿದ್ದರೆ, ಸಂತೋಷಪಡುತ್ತಿದ್ದರೆ ಅಚ್ಚರಿಯಿಲ್ಲ. ಮೋದಿ ಅವರಿಗೆ ಇಂಥ ಮಾತುಗಳೇ ಬೇಕು. ಇಂಥ ಮಾತುಗಳು ತಮ್ಮ ಮತಗಳನ್ನು ಇನ್ನಷ್ಟು, ಮತ್ತಷ್ಟು ಧ್ರುವೀಕರಣಗೊಳಿಸುತ್ತವೆ ಎಂದೂ ಅವರಿಗೆ ಗೊತ್ತು.

ಕೇಂದ್ರದ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರು ಮೋದಿಯವರನ್ನು ‘ಷಂಡ’ ಎಂದು ಕರೆದುದನ್ನೂ ಇದೇ ಪರಿಪೇಕ್ಷದಲ್ಲಿ ನೋಡಬೇಕು. ಸುದೈವ ಎಂದರೆ, ಮೋದಿಯವರು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಚುನಾವಣೆ ಘೋಷಣೆ ಆಗುವುದಕ್ಕಿಂತ ಮುಂಚಿನಿಂದಲೇ ‘ಷಹಜಾದೆ’ ಎಂದು ವ್ಯಂಗ್ಯವಾಗಿ ಕರೆಯುತ್ತಿದ್ದರೂ ರಾಹುಲ್‌ ಅದಕ್ಕೆ ಅದೇ ಭಾಷೆಯಲ್ಲಿ ಉತ್ತರ ಕೊಟ್ಟಿಲ್ಲ; ಅದಕ್ಕಿಂತ ಹೆಚ್ಚು ಸಂತೋಷ ತರುವ ಸಂಗತಿ ಎಂದರೆ ಅವರು ತಮ್ಮ ಪಕ್ಷದ ನಾಯಕರಿಗೆ ಆರಂಭದಿಂದಲೂ ಸಮಾಧಾನದಿಂದ ಇರುವಂತೆ ಮತ್ತು ಪ್ರಜಾತಂತ್ರಕ್ಕೆ ತಕ್ಕುದಾದ ಭಾಷೆಯಲ್ಲಿ ಮಾತ್ರ ಮಾತನಾಡುವಂತೆ ಮತ್ತೆ ಮತ್ತೆ ಮನವಿ ಮಾಡುತ್ತಿದ್ದಾರೆ.

ರಾಹುಲ್‌ ಇನ್ನೂ ಯುವಕ. ಅವರು ತೋರಿದ ಪ್ರಬುದ್ಧತೆಯನ್ನು ಬೇರೆ ಪಕ್ಷಗಳ ಹಿರಿಯ ನಾಯಕರೂ ತೋರಿಸಿಲ್ಲ. ಸಲ್ಮಾನ್‌ ಖುರ್ಷಿದ್ ಅವರು ಮೋದಿಯವರನ್ನು ‘ಷಂಡ’ ಎಂದು ಕರೆದುದನ್ನು ರಾಹುಲ್‌ ಒಪ್ಪಿರಲಿಲ್ಲ. ಈಗ ಸಹರಾನ್‌ಪುರದ ಅಭ್ಯರ್ಥಿ ಮಾತನ್ನೂ ಅವರು ಒಪ್ಪಿಲ್ಲ. ಬಿಜೆಪಿಯಲ್ಲಿ ಈಗಲೂ ಎಲ್.ಕೆ. ಅಡ್ವಾಣಿಯವರಂಥ ಹಿರಿಯ ನಾಯಕರು ಇದ್ದಾರೆ. ಸುಷ್ಮಾ, ಅರುಣ್‌ ಜೇಟ್ಲಿ ಅವರಂಥ ಮುತ್ಸದ್ದಿ ಸಂಸದೀಯ ಪಟುಗಳು ಇದ್ದಾರೆ. ಮೋದಿಯವರು ಯಾರ ಮಾತನ್ನು ಕೇಳುತ್ತಾರೋ, ಕೇಳುವ ಸ್ಥಿತಿಯಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ.

ಆದರೆ, ಅಡ್ವಾಣಿ, ಸುಷ್ಮಾ, ಜೇಟ್ಲಿ ಅವರಂಥ ನಾಯಕರು, ಯಾರೇ ಸಲ್ಲದ ಮಾತು ಆಡಿದರೆ, ‘ಇದು ಪ್ರಜಾತಂತ್ರಕ್ಕೆ ಸಲ್ಲದ ಮಾತು’ ಎಂದು ಹೇಳಬೇಕು. ಕೆಟ್ಟ ಮಾತಿನಿಂದ ಆಗುವ ಕೆಟ್ಟ ಪರಿಣಾಮವನ್ನು ಇಂಥ ವಿವೇಕದ ಮಾತುಗಳು ತಕ್ಕ ಮಟ್ಟಿಗಾದರೂ ಕಡಿಮೆ ಮಾಡುತ್ತವೆ.

ಮಾದರಿಗಳು ಮೇಲಿನಿಂದಲೇ ಬರಬೇಕು. ದೇಶದ ಮಟ್ಟದಲ್ಲಿಯೇ ಇಂಥ ವಾಚಾಮಗೋಚರ ಬೈಗುಳಗಳು ಕೇಳಿ ಬರುತ್ತಿರುವಾಗ ರಾಜ್ಯಮಟ್ಟದಲ್ಲಿಯೂ ಅದರ ಮಾರ್ದನಿಗಳು ಕೇಳಿಬರದೇ ಇರಲು ಸಾಧ್ಯವಿಲ್ಲ. ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದ ಜೆ.ಡಿ (ಎಸ್‌) ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ಎಚ್‌.ಡಿ.ಕುಮಾರಸ್ವಾಮಿಗಳು ಪರಸ್ಪರರ ವಿರುದ್ಧ ಯಾವ ಎಗ್ಗೂ ಇಲ್ಲದೆ, ಅಳುಕೂ ಇಲ್ಲದೆ ಆರೋಪ ಮಾಡುತ್ತಿದ್ದಾರೆ.

ಇಲ್ಲಿಯೂ ಅದೇ ಸಮಸ್ಯೆ. ಸಿದ್ದರಾಮಯ್ಯನವರಿಗೆ ಇದು ಬಹಳ ಮುಖ್ಯ ಚುನಾವಣೆ. ಈ ಚುನಾವಣೆಯ ಫಲಿತಾಂಶದ ಮೇಲೆ ಅವರ ಅಸ್ತಿತ್ವ ನಿಂತಿದೆ. ಅವರ ಕಾಲು ಎಳೆಯಲು ಅವರ ಪಕ್ಷದಲ್ಲಿ ದೊಡ್ಡ ಬಣವೇ ಸಿದ್ಧವಾಗಿದೆ. ಅವರು ಮುಂದೆ ನಿಂತೇ ಈ ಚುನಾವಣೆಯನ್ನು ಎದುರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ಲೋಕಸಭೆಗೆ ಕಳುಹಿಸಬೇಕು. ಸಹಜವಾಗಿಯೇ ಅವರ ಮೇಲೆ ಅದು ಒತ್ತಡ ನಿರ್ಮಿಸುತ್ತದೆ.

ದೇವೇಗೌಡರು ಹೇಳುವಂತೆ ಅವರ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದರೆ ಅದು ತಪ್ಪು. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದೇವೇಗೌಡರು ಏನೇ ಹೇಳಬಹುದಾದರೂ ಅವರೂ ಮುಖ್ಯಮಂತ್ರಿ ವಿರುದ್ಧ ಅನ್ಯಾಯ ಎನಿಸುವಂಥ ಪದಗಳನ್ನು ಬಳಸಬಾರದು. ಈಗ ನೋಡಿದರೆ, ಯಾರು ಯಾರಿಗೆ ಬೇಕಾದರೂ ಭ್ರಷ್ಟ ಎಂದು ಹೇಳಬಹುದು ಎಂದು ಅನಿಸುತ್ತದೆ. ಅಂದರೆ, ಆ ಪದವನ್ನು ಬಳಸಿದರೆ ಯಾರೂ ತಲೆ ಕೆಡಿಸಿಕೊಳ್ಳುವಂತೆಯೂ ಕಾಣುವುದಿಲ್ಲ. ಒಬ್ಬ ವ್ಯಕ್ತಿ ಭ್ರಷ್ಟ ಎಂದು ಅನಿಸಿಕೊಂಡು ಸುಮ್ಮನಿದ್ದರೆ ಏನು ಅರ್ಥ? ನಾಳೆ ಯಾರನ್ನಾದರೂ ಯಾರಾದರೂ ‘ಲಂಪಟ’ ಎಂದೂ ಹೇಳಬಹುದು.

ಆಗ ಪ್ರಜಾತಂತ್ರದಲ್ಲಿ ಅತ್ಯುನ್ನತವಾದ ವ್ಯಕ್ತಿ ಗೌರವದ ಕಥೆ ಏನು? ಪರಸ್ಪರರ ಬಗ್ಗೆ ಗೌರವ ಉಳಿಸಿಕೊಂಡು, ಇಟ್ಟುಕೊಂಡು ಪ್ರಚಾರ ಮಾಡಲು ಸಾಧ್ಯವಿದೆ. ರಾಮಕೃಷ್ಣ ಹೆಗಡೆ ಎಂದೂ ಇಂಥ ಭಾಷೆ ಬಳಸುತ್ತಿರಲಿಲ್ಲ. ಎಸ್‌.ಎಂ.ಕೃಷ್ಣ ಕೂಡ ಬಳಸುವುದಿಲ್ಲ. ಇಡೀ ಸಂಸದೀಯ ವ್ಯವಸ್ಥೆಗೆ ಹೆಗಡೆ ಮತ್ತು ಕೃಷ್ಣ ಅವರ ನಡವಳಿಕೆ ಒಂದು ಭೂಷಣ, ಮಾದರಿ. ದೇವೇಗೌಡರು ಕೂಡ ಇಂಥದೇ ನಡವಳಿಕೆಗೆ ಹೆಸರಾದವರು. ಅವರು ವಿಧಾನಸಭೆಯಲ್ಲಿ, ಸಂಸತ್ತಿನಲ್ಲಿ ಎಂದೂ ಹಗುರವಾಗಿ ನಡೆದುಕೊಂಡವರು ಅಲ್ಲ, ಮಾತನಾಡಿದವರೂ ಅಲ್ಲ.

ಆದರೆ, ಈ ಸಾರಿಯ ಚುನಾವಣೆ ಅವರ ಪಕ್ಷದ ಅಸ್ತಿತ್ವದ ಮುಂದೆಯೂ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಅವರೂ ಒತ್ತಡದಲ್ಲಿ ಇದ್ದಾರೆ. ಎರಡು ಧ್ರುವಗಳ ನಡುವೆ ನಡೆಯುತ್ತಿರುವ ಕದನದಲ್ಲಿ ಅವರು ತಮ್ಮ ತಾಣ ಏನು ಎಂದು ಹುಡುಕಲು ಪರದಾಡುತ್ತಿದ್ದಾರೆ. ಜನರಿಗೆ ತಾವು ಕೊಡುವ ಪರ್ಯಾಯ ಏನು ಎಂದು ಹೇಳಲು ಅವರಲ್ಲಿ ಏನೆಲ್ಲ ಇರಬಹುದು.

ಆದರೆ, ಜನರಿಗೆ ಅದು ಮನವರಿಕೆ ಆಗುವಂತೆ ಕಾಣುವುದಿಲ್ಲ. ಆಗ ಮಾತು ಸೋಲುತ್ತದೆ. ದೇವೇಗೌಡರಂಥ ದೇವೇಗೌಡರೂ ಹಗುರವಾಗಿ ಮಾತನಾಡಲು ತೊಡಗುತ್ತಾರೆ. ನಾಯಕರು ಹೀಗೆ ನಾಲಿಗೆ ಹರಿಯ ಬಿಡುತ್ತಿರುವುದಕ್ಕೆ ಮಾಧ್ಯಮಗಳೂ ಕಾರಣ ಆಗಿರಬಹುದು. ದೇಶವನ್ನು ಕಾಡುವ ಸಂಗತಿಗಳಿಗಿಂತ ಇಂಥ ಕೋಳಿ ಜಗಳಗಳೇ ನಮಗೆ ರುಚಿಕಟ್ಟಾಗಿ, ಮಾರುವ ಒಳ್ಳೆಯ ಸರಕಾಗಿ ಕಾಣುತ್ತಿರಬಹುದು. ಅದು ಮಾಧ್ಯಮಗಳಿಗೆ ಅಂಟಿಕೊಂಡ ‘ನಕಾರಾತ್ಮಕ’ ರೋಗ...

ಮಾಧ್ಯಮಗಳಲ್ಲಿ ಹೀಗೆ ಏನಕೇನ ಪ್ರಕಾರದಿಂದ ಮಿಂಚಬೇಕು ಎಂದು ಬಯಸುವ ನಾಯಕರನ್ನು ಅವರ  ಪಾಡಿಗೆ ಬಿಟ್ಟು ಬಿಟ್ಟರೆ ಅವರು ಸುಧಾರಿಸುವಂತೆ ಕಾಣುವುದಿಲ್ಲ. ಅವರಿಗೆ ದೇಶ ಮತ್ತು ದೇಶವನ್ನು ಕಾಡುತ್ತಿರುವ ವಿಷಯಗಳು ಎಷ್ಟು ಮುಖ್ಯವೋ ಏನೋ ಗೊತ್ತಿಲ್ಲ. ಅವರಿಗೆ ಅಧಿಕಾರ ಮುಖ್ಯ ಇರಬಹುದು. ಒಂದು ಸಾರಿ ಈ ಚುನಾವಣೆಯಲ್ಲಿ ಗೆದ್ದು ಬಿಟ್ಟರೆ ಐದು ವರ್ಷ ಅವರು ಹಾಯಾಗಿ ಇದ್ದು ಬಿಡಬಹುದು. ಹಾಯಾಗಿ ಇದ್ದುಬಿಡಬೇಕು ಎಂದೇ ಅವರ ಚುನಾವಣೆಗೆ ನಿಂತಿರಬಹುದು! ಆದರೆ, ಜನರಿಗೆ ಹಾಗೆ ಅಲ್ಲ.

ಅವರು ಈಗಲೇ ತಾವು ಯಾರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಅವರಿಗೆ ಗೊತ್ತಿರಬೇಕು. ಲೋಕಸಭೆಗೆ ಹೋಗುವುದಕ್ಕಿಂತ ಮುಂಚೆಯೇ ಅಲ್ಲಿ ಹೋಗಿ ಏನು ಮಾಡುತ್ತೀರಿ ಎಂದು ಇಲ್ಲಿ ಈಗಲೇ ನಮ್ಮ ಮುಂದೆ ಹೇಳಿ ಎಂದು ನಾವು ನಾಗರಿಕರು ಒತ್ತಾಯಿಸಬೇಕು. ಬಹಿರಂಗಸಭೆಗಳಲ್ಲಿ ಗಾಳಿಯಲ್ಲಿ ತೇಲಿ ಹೋಗುವ ನಾಯಕರ ಮಾತುಗಳೇ ಬೇರೆ. ಸಣ್ಣ ಒಂದು ಗುಂಪಿನ ಎದುರು ನಿಂತು ಮಾತನಾಡುವಾಗ, ಮುಖಾಮುಖಿಯಾಗಿ ಮಾತನಾಡುವಾಗ ಅವರು ಎಚ್ಚರದಿಂದ ಇರುತ್ತಾರೆ. ಬೆಂಗಳೂರಿನಲ್ಲಿ ಉದ್ಯಮಿ ಕಿರಣ್‌ ಮಜುಮ್‌ದಾರ್‌ ಷಾ ಅವರ ನೇತೃತ್ವದ ಬಿ–ಪ್ಯಾಕ್‌ ಸಂಸ್ಥೆ ಮತ್ತು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಂಥ ಸಂಸ್ಥೆಗಳು, ಹೀಗೆ ಅಭ್ಯರ್ಥಿಗಳನ್ನು ಮುಖಾಮುಖಿ ನಿಲ್ಲಿಸುವ ಕೆಲಸ ಮಾಡುತ್ತಿವೆ.

ಇಂಥ ಸಂವಾದಗಳನ್ನು ಕೆಲವರು ಅಭ್ಯರ್ಥಿಗಳು ಹಾದಿ ತಪ್ಪಿಸುವ ಅಪಾಯವೂ ಇದ್ದು ಆ ಕುರಿತು ಸಂಘಟಕರು ಎಚ್ಚರಿಕೆಯನ್ನೂ ವಹಿಸಬೇಕು. ಎಲ್ಲ ಇಪ್ಪತ್ತೆಂಟು ಕ್ಷೇತ್ರಗಳಲ್ಲಿಯೂ ನಮ್ಮ ಜನರು, ಅಲ್ಲಿನ ನಾಗರಿಕ ಸಂಘಟನೆಗಳು ಇಂಥದೇ ಸಂವಾದ ಏರ್ಪಡಿಸಲು ಸಾಧ್ಯವಿದೆ. ಅದನ್ನು ಸಾಧ್ಯ ಮಾಡುವುದರಲ್ಲಿ ಜನರ ಹಿತ ಅಡಗಿದೆ, ನಾಡಿನ ಹಿತ ಅಡಗಿದೆ. ಮಾತು ಸೋತ ಕಡೆಯಲ್ಲಿ ಜಗಳ ಇರುತ್ತದೆ. ಜಗಳ ಇರುವ ಕಡೆ ಹಿಂಸೆ ಇರುತ್ತದೆ. ಹಿಂಸೆ ಯಾರಿಗೆ ಬೇಕಾಗಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT