ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತವಾದದ ಚಹರೆಗಳು

Last Updated 29 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಮೂಲಭೂತವಾದ ಮತ್ತೆ ಹೆಡೆಯೆತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹಿರಂಗವಾಗಿಯೇ ತನ್ನ ರಾಜಕೀಯ ಪ್ರವೇಶವನ್ನು ಘೋಷಿಸಿದೆ. ಮತ್ತೊಂದು ಕಡೆ ಸ್ವಲ್ಪ ಉದಾರವಾದಿಯಂತೆ ಕಾಣಿಸುತ್ತಿದ್ದ ಜಮೀಯತ್‌ ಉಲೇಮಾ–ಎ–ಹಿಂದ್‌ ಕೂಡಾ ಮುಸ್ಲಿಮರ ಮತಗಳ ಬಗ್ಗೆ ಮಾತನಾಡಿದೆ.

ಬರಲಿರುವ ಲೋಕಸಭಾ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ಒತ್ತಡಕ್ಕೆ ದೂಡಿದೆ. ಆದರೆ ಇದು ಸೃಷ್ಟಿಸುತ್ತಿರುವ ಮತಗಳ ಧ್ರುವೀಕರಣ ಹಿಂದೂ ಮುಸ್ಲಿಮರ ಸಹಬಾಳ್ವೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ದುರದೃಷ್ಟವೆಂದರೆ ಎಲ್ಲರೂ ಇದನ್ನು ಅನಿವಾರ್ಯವೆಂದು ಒಪ್ಪಿಕೊಳ್ಳುತ್ತಿರುವುದು.

ಮೊದಲಿಗೆ ಆರ್‌ಎಸ್‌ಎಸ್‌ನ ಇತ್ತೀಚಿನ ಹೆಜ್ಜೆಗಳನ್ನು ನೋಡೋಣ. ಅದಕ್ಕೆ ತನ್ನ ರಾಜಕೀಯ ಘಟಕ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯನಿರ್ವಹಣಾ ವಿಧಾನದ ಬಗ್ಗೆಯೇ ಅಸಂತೋಷವಿತ್ತು. ಹಿಂದೂತ್ವ ಪ್ರತಿಪಾದಕರ ಅಭಿಮಾನಕ್ಕೆ ಪಾತ್ರರಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದರಲ್ಲಿ ಆರ್‌ಎಸ್ಎಸ್‌ಗೆ ಎಲ್.ಕೆ.ಆಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರಂಥ ನಾಯಕರ ಬಗ್ಗೆ ಇದ್ದ ಅಸಮಾಧಾನವನ್ನು ಕಾಣಬಹುದು.

ರಾಜಕೀಯದಿಂದ ದೂರವಿರುವುದಾಗಿ ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಿಗೆ ನೀಡಿದ್ದ ವಾಗ್ದಾನವನ್ನು ಉಲ್ಲಂಘಿಸಿ ಆರ್‌ಎಸ್ ಎಸ್ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದಿದೆ. ಮಹಾತ್ಮಾ ಗಾಂಧಿಯವರನ್ನು ಆರ್‌ಎಸ್ಎಸ್ ಸಂಪರ್ಕವಿದ್ದ ನಾಥೂರಾಮ್ ಗೋಡ್ಸೆ ಹತ್ಯೆಗೈದ ನಂತರ ಸರ್ಕಾರ ಆರ್‌ಎಸ್ಎಸ್ ಅನ್ನು ನಿಷೇಧಿಸಿತ್ತು. ಈ ನಿಷೇಧವನ್ನು ತೆರವುಗೊಳಿಸು ವುದಕ್ಕೆ ಸಂಘಟನೆ, ರಾಜಕಾರಣದಿಂದ ದೂರವಿರ ಬೇಕೆಂಬ ಷರತ್ತನ್ನು ಸರ್ದಾರ್ ಪಟೇಲ್ ಮುಂದಿಟ್ಟಿದ್ದರು. ಇದನ್ನು ಒಪ್ಪಿಕೊಂಡ ಆರ್‌ಎಸ್ಎಸ್ ತಾನು ಸಕ್ರಿಯ ರಾಜಕಾರಣ ದಿಂದ ದೂರವಿರುವ ನಿರ್ಧಾರವನ್ನು ಸಂಘಟ ನೆಯ ಸಂವಿಧಾನದಲ್ಲಿಯೂ ಸೇರಿಸಿಕೊಂಡಿತ್ತು.

ತಮ್ಮ ಹಿಂದೂ ಪರ ನಿಲುವುಗಳನ್ನು ಮುಚ್ಚಿಡದ ಸರ್ದಾರ್ ಪಟೇಲ್ ಅವರು ಗಾಂಧೀಜಿ ಹತ್ಯೆಯಲ್ಲಿ ಆರ್‌ಎಸ್ಎಸ್‌ನ ಪಾತ್ರವಿತ್ತೆಂದು ಭಾವಿಸಿರಲಿಲ್ಲ. ಇದನ್ನು ಅವರು ಜವಾಹರಲಾಲ್ ನೆಹರೂ ಅವರಿಗೆ 1948ರ ಜನವರಿ 27ರಂದು ಬರೆದ ಪತ್ರದಲ್ಲಿ ಹೇಳಿದ್ದರು. ಆದರೆ ಸರ್ದಾರ್ ಪಟೇಲ್ ಅವರಿಗೆ ಗಾಂಧಿ ಹತ್ಯೆಗೆ ಕಾರಣವಾದ ವಾತಾವರಣ ಸೃಷ್ಟಿಯಾಗುವುದರ ಹಿಂದೆ ಸಂಘದ 'ಹಿಂಸಾತ್ಮಕ' ಮಾರ್ಗಗಳ ಪಾತ್ರವಿತ್ತು ಎಂಬುದರಲ್ಲಿ ಸಂಶಯವಿರಲಿಲ್ಲ.

ಅಂದಿನ ಸರಸಂಘ ಚಾಲಕ ಮಾಧವ ಸದಾಶಿವ ಗೋಲ್ವಾಳ್ಕರ್ ಅವರು ತಮ್ಮ ಅಪರಾಧವೇನೂ ಇಲ್ಲ ಎಂದು ವಾದಿಸಿದ್ದರು. ಹಾಗೆಯೇ ಗಾಂಧೀಜಿ ಹತ್ಯೆಗೆ ಆಘಾತ ಮತ್ತು ದುಃಖ ವನ್ನು ವ್ಯಕ್ತಪಡಿಸಿ ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ಅವರಿಗೆ ಕಳುಹಿಸಿದ್ದ ತಂತಿ ಸಂದೇಶಗಳಿಂದಷ್ಟೇ ಪಟೇಲರು ತೃಪ್ತರಾಗಲಿಲ್ಲ. ಸಂಘ ತನ್ನ ಸಂವಿಧಾನದಲ್ಲಿ 'ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ' ಮತ್ತು 'ಸಂಪೂರ್ಣವಾಗಿ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಸೀಮಿತವಾಗಿರುತ್ತದೆ' ಎಂಬುದನ್ನು ಸ್ಪಷ್ಟಪಡಿಸಬೇಕಾಯಿತು.

ಆದರೂ ಈಗಿನ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘ, ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುತ್ತದೆ ಎಂದು ಅಬ್ಬರಿಸುತ್ತಿರುವುದು ಪಟೇಲರಿಗೆ ನೀಡಿದ ವಾಗ್ದಾನದ ಸ್ಪಷ್ಟ ಉಲ್ಲಂಘನೆ. ಇದು ಚುನಾವಣಾ ಆಯೋಗ ಗಮನಿಸಬೇಕಾದ ಸಂಗತಿ. ಒಂದು ಸಾಂಸ್ಕೃತಿಕ ಸಂಘಟನೆ ಅದು ಹೇಗೆ ಇದ್ದಕ್ಕಿದ್ದ ಹಾಗೆ ರಾಜಕೀಯ ರಂಗಕ್ಕೆ ಧುಮುಕಲು ಸಾಧ್ಯ? ಈಗ ಆರ್‌ಎಸ್ಎಸ್ ತನ್ನ ಸಂವಿಧಾನಕ್ಕೆ ತಿದ್ದುಪಡಿಯೊಂದನ್ನು ತಂದಿದೆ ಎಂದು ಭಾವಿಸೋಣ. ತಮ್ಮ ಮೇಲಿನ ನಿಷೇಧವನ್ನು ತೆರವುಗೊಳಿಸುವುದಕ್ಕೆ ರಾಜಕೀಯದಿಂದ ದೂರವಿರುವ ಕೇಂದ್ರ ಸರ್ಕಾರದ ಷರತ್ತನ್ನು ಒಪ್ಪಿಕೊಂಡಿದ್ದ ಸಂಘಟನೆ ಈಗ ಅದನ್ನು ಮುರಿದದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?

ಜಮೀಯತ್‌ ಉಲೇಮಾ– ಎ –ಹಿಂದ್‌ನ ಮುಖ್ಯಸ್ಥ ಮಹಮೂದ್ ಮದನಿ ಅವರ ಹೇಳಿಕೆಯನ್ನು ಗಮನಿಸಿ. ತಥಾಕಥಿತ ಜಾತ್ಯತೀತ ಪಕ್ಷಗಳೂ ನರೇಂದ್ರ ಮೋದಿಯತ್ತ ಬೆರಳು ಮಾಡಿ ಮುಸ್ಲಿಮ್ ಮತದಾರರಲ್ಲಿ ಭಯ ಹುಟ್ಟಿಸುವ ಬದಲಿಗೆ ತಮ್ಮ ಆಡಳಿತಾವಧಿಯಲ್ಲಿ ಈಡೇರಿಸಿದ ಭರವಸೆಗಳು ಮತ್ತು ಮುಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿನ ಭರವಸೆಗಳ ಆಧಾರದಲ್ಲಿ ಮತಯಾಚಿಸಬೇಕು ಎಂಬುದು ಇವರ ಸಲಹೆ. ಈ ಹೇಳಿಕೆಯಲ್ಲಿ ನನ್ನ ಆಕ್ಷೇಪವಿರುವುದು ಅವರು ಬಳಸಿದ 'ಮುಸ್ಲಿಮ್ ವೋಟು' ಎಂಬ ಪ್ರಯೋಗಕ್ಕೆ ಸೀಮಿತವಾಗಿದೆ. ಈ ದೇಶದಲ್ಲಿ ಹಿಂದೂ ವೋಟುಗಳೋ ಮುಸ್ಲಿಂ ವೋಟುಗಳೋ ಇಲ್ಲ.

ಇಲ್ಲಿರುವುದು ಭಾರತೀಯ ಮತದಾರರು ಮಾತ್ರ. ಒಂದು ಸಮುದಾಯಕ್ಕೆ ಒಳ್ಳೆಯದಾಗಿರುವುದು ಮತ್ತೊಂದು ಸಮುದಾಯಕ್ಕೂ ಒಳ್ಳೆಯದೇ ಆಗಿರುತ್ತದೆ. ಮುಸ್ಲಿಮರನ್ನು ಪ್ರತ್ಯೇಕಗೊಳಿಸುವ ಈ ಪ್ರಯತ್ನ  ಹಿಂದೂಗಳನ್ನು ಪ್ರತ್ಯೇಕಿಸುವ ಆರ್‌ಎಸ್ಎಸ್‌ನ ಪ್ರಯತ್ನಕ್ಕಿಂತ ಭಿನ್ನವಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಮದನಿಗೆ ಮೋದಿಯ ಬಗ್ಗೆ ಇರುವ ಪ್ರೀತಿ ನನಗೆ ಅರ್ಥವಾಗುತ್ತಿಲ್ಲ. ತಮ್ಮ ಹೇಳಿಕೆಯಲ್ಲಿಯೇ ಅವರು ಕನಿಷ್ಠ ತಾನು ಮೋದಿ ಪ್ರತಿಪಾದಿಸುವ ರಾಜಕಾರಣವನ್ನು ಒಪ್ಪುವುದಿಲ್ಲ ಎಂಬುದನ್ನಾದರೂ ಹೇಳಬಹುದಿತ್ತು.

ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಮೊದಲು ಮಾತನಾಡಿದ ಕಾಂಗ್ರೆಸ್ "ನಾವು ಯಾವುದೇ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ತಂತ್ರ ರೂಪಿಸುವುದಿಲ್ಲ. ನಮ್ಮ ತಂತ್ರಗಳೆಲ್ಲವೂ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಆಧಾರವಾಗಿ ಹೊಂದಿರುತ್ತವೆ" ಎಂದಿತು. ಆದರೆ ಇದು ಹುಸಿ ಒಳ್ಳೆಯತನ ಎಂಬುದು ಎಲ್ಲರಿಗೂ ಗೊತ್ತಾಗಿದೆ. ತನ್ನ ಎಲ್ಲಾ ಟೀಕೆಗಳನ್ನು ಮೋದಿಗೆ ಸೀಮಿತವಾಗಿರಿಸಬೇಕೆಂದು ಕಾಂಗ್ರೆಸ್ ನಿರ್ಧ ರಿಸಿದೆ. ಒಬ್ಬರಾದ ಮೇಲೆ ಒಬ್ಬ ಕೇಂದ್ರ ಸಚಿವರು ಮೋದಿಯ ಮೇಲೆ ನಡೆಸುತ್ತಿರುವ ದಾಳಿಗಳೇ ಇದನ್ನು ಸ್ಪಷ್ಟಪಡಿಸುತ್ತಿದೆ. ಕಾಂಗ್ರೆಸ್ ಇಲ್ಲಿಯ ತನಕ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ವಿಷಯವನ್ನೂ ಚರ್ಚೆಗೆ ತರದೆ, 2014ರ ಚುನಾವಣೆಯನ್ನು ಅಧ್ಯಕ್ಷೀಯ ಚುನಾವಣೆ ಯಾಗಿ ಪರಿವರ್ತಿಸಿಬಿಟ್ಟಿರುವ ಮೋದಿ  ಹಾಕಿದ ತಾಳಕ್ಕೆ ಕುಣಿಯುತ್ತಿದೆ.  ಕನಿಷ್ಠ ತನ್ನ ಹಿಂದುತ್ವ ವಾದವನ್ನು ಮುಚ್ಚಿಡುವುದಕ್ಕಾಗಿಯಾದರೂ ಅಭಿವೃದ್ಧಿ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ.

ಕಾಂಗ್ರೆಸ್‌ನ ಅತಿ ದೊಡ್ಡ ದೌರ್ಬಲ್ಯವೆಂದರೆ ದುರಾಡಳಿತ ಮತ್ತು ಆಡಳಿತ ವಿರೋಧಿ ಅಲೆ. ನನಗಂತೂ ಆದಷ್ಟು ಬೇಗ ಚುನಾವಣೆ ನಡೆದು ಹೊಸ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕು ಅನ್ನಿಸುತ್ತಿದೆ. ಇದರಿಂದ ಹೊಸ ಸರ್ಕಾರವಾದರೂ ದೇಶದ ಒಳಿತಿಗೆ ಅಗತ್ಯವಿರುವ ದೂರಗಾಮಿ ಪರಿಣಾಮವುಳ್ಳ ಯೋಜನೆಗಳನ್ನು ರೂಪಿಸಬಹುದು. ಚುನಾವಣೆಗೆ ಉಳಿದಿರುವ ಆರು ತಿಂಗಳ ಅವಧಿಯಲ್ಲಿ ಮಂತ್ರಿಗಳು ಕೇವಲ ಬಿಂದು-ವಿಸರ್ಗಗಳನ್ನು ಸರಿಪಡಿಸುವುದನ್ನು ಹೊರತುಪಡಿಸಿ ಬೇರೇನನ್ನೂ ಮಾಡುವುದಿಲ್ಲ. ಇಲ್ಲವಾದರೆ ಖಾಸಗಿ ಕ್ಷೇತ್ರ ಭಾರೀ ಪ್ರಮಾಣದ ಪ್ರಗತಿಯನ್ನು ದಾಖಲಿಸಬಹುದಾದರೆ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳೇಕೆ ಹಿನ್ನಡೆ ಅನುಭವಿಸಬೇಕು?

ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಿಜೆಪಿ ಮಾಡುತ್ತಿರು ವುದಂತೂ ಪರಮ ನೀಚ ಕೆಲಸ. ಬಾಬರಿ ಮಸೀದಿ ಯನ್ನು ಉರುಳಿಸಿ ನೂರಾರು ಮುಸ್ಲಿಮರ ಹತ್ಯೆಗೆ ಇವರೇ ಕಾರಣರು. ಈಗ ಮತ್ತೆ ಅಲ್ಲಿ   ರ್‍್ಯಾಲಿಯೊಂದನ್ನು ನಡೆಸುವ ಮೂಲಕ 1992ರಂಥದ್ದೇ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನಕ್ಕೆ ವಿಎಚ್‌ಪಿ ಮತ್ತು ಬಿಜೆಪಿ ಮುಂದಾಗಿವೆ. ಈ ರ್‍್ಯಾಲಿಗೆ ಸರ್ಕಾರ ತಡೆಯೊಡ್ಡಿ ರುವುದು ಸರಿಯಾಗಿಯೇ ಇದೆ. ಈ ಸಂಘಟನೆಗಳು ಹಿಂದೂಗಳೇ ಆಗಿರುವ ದಲಿತರಿಗೆ ನ್ಯಾಯ ಒದಗಿಸುವ ವಿಷಯದಲ್ಲಿ ಇದೇ ಉತ್ಸಾಹವನ್ನು ತೋರುತ್ತವೆಯೇ? ದಲಿತರ ಮಟ್ಟಿಗೆ ನ್ಯಾಯಾಲಯಗಳೂ ನ್ಯಾಯ ಒದಗಿಸುವುದಿಲ್ಲ.

ಇದರ ಇತ್ತೀಚಿನ ಉದಾಹರಣೆ ಬಿಹಾರದ್ದು. ಇಲ್ಲಿನ ಲಕ್ಷ್ಮಣಪುರ ಎಂಬಲ್ಲಿ 27 ಮಹಿಳೆಯರು ಮತ್ತು 10 ಮಂದಿ ಮಕ್ಕಳೂ ಸೇರಿದಂತೆ 58 ಮಂದಿ ದಲಿತರನ್ನು ಭೂಮಿ ಹಾರರು ಕೊಂದರು. ವಿಚಾರಣಾ ನ್ಯಾಯಾಲಯ ಈ ಪ್ರಕರಣದ ಆರೋಪಿಗಳಾಗಿದ್ದ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಹೈಕೋರ್ಟ್‌ನಲ್ಲಿದ್ದ ಮೇಲ್ಜಾತಿಗೆ ಸೇರಿದ ನ್ಯಾಯಾಧೀಶರೊಬ್ಬರು ಈ ಹತ್ಯೆಗೆ ಸಾಕಷ್ಟು ಸಾಕ್ಷ್ಯಗಳಿಲ್ಲವೆಂಬ ನೆಪವೊಡ್ಡಿ ಎಲ್ಲಾ 16 ಮಂದಿ ಆರೋಪಿಗಳನ್ನೂ ಆರೋಪ ಮುಕ್ತರನ್ನಾಗಿಸಿ ತೀರ್ಪು ನೀಡಿದರು. ಇದು ನ್ಯಾಯದಾನ ವ್ಯವಸ್ಥೆಯನ್ನೇ ಹಾಸ್ಯಾಸ್ಪದಗೊಳಿಸಿದ ತೀರ್ಪು.

ಹೈಕೋರ್ಟ್‌ನ ನ್ಯಾಯಾಧೀಶರಿಗೆ ಈ ಪ್ರಕರಣದ ಆರೋಪಿಗಳ ಮೇಲೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಅನ್ನಿಸಿದ್ದರೆ ತನ್ನದೇ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಒಂದು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನೇಮಿಸುವ ಅಧಿಕಾರವಿತ್ತು. ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಲಕ್ಷ್ಮಣಪುರದ ದಲಿತರು ತಮ್ಮ ಪೂರ್ವಿಕರ ನೆಲವನ್ನು ತೊರೆದು ಗುಳೆ ಹೋದರು. ಇಂಥದ್ದನ್ನು ದೇಶದ ಎಲ್ಲೆಡೆ ಇರುವ ದಲಿತರು ಎದುರಿಸುತ್ತಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಭರವಸೆ ಅವರ ಮಟ್ಟಿಗೆ ಒಂದು ಕ್ರೂರ ಪ್ರಹಸನ ಮಾತ್ರ.

ಈಗ ಎಲ್ಲರ ಗಮನ ಸುಪ್ರೀಂ ಕೋರ್ಟ್‌ನ ಕಡೆಗಿದೆ. ತೀರ್ಪನ್ನು ವಿರೋಧಿಸುವ ಮೇಲ್ಮನವಿಯೊಂದು ಅಲ್ಲಿ ಸಲ್ಲಿಕೆಯಾಗಿದೆ. ಸುಪ್ರೀಂ  ಕೋರ್ಟ್ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸುವುದರ ಜೊತೆಗೆ ಮೇಲ್ಜಾತಿ ನ್ಯಾಯಾಧೀಶರಿಂದಲೇ ತುಂಬಿರುವ ಬಿಹಾರ ಹೈಕೋರ್ಟ್‌ನ ಕುರಿತೂ ಗಮನಹರಿಸಿದ್ದರೆ ಒಳ್ಳೆಯದಿತ್ತು.
ನಿಮ್ಮ ಅನಿಸಿಕೆ ತಿಳಿಸಿ: ditpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT