ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ಸ್ಪಷ್ಟತೆ ಇರಲಿ, ಉತ್ಪ್ರೇಕ್ಷೆ ಬೇಡ

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಹತ್ತೊಂಬತ್ತನೆಯ ಶತಮಾನದ ಅಮೆರಿಕದ ಗ್ರಾಮೀಣ ಬದುಕಿನ ಅನುಭವಗಳನ್ನು ಕಟ್ಟಿಕೊಡುವ ಲೇಖಕಿ ಲಾರಾ ಇಂಗಾಲ್ಸ್ ವೈಲ್ಡರ್. ತನ್ನ ಮಧ್ಯವಯಸ್ಸಿನಲ್ಲಿ ಆಕಸ್ಮಿಕವಾಗಿ ಬರವಣಿಗೆ ಆರಂಭಿಸಿದ ಲಾರಾ ತಮ್ಮ ಅಂಕಣ ಬರಹಗಳಿಗೆ ಜನಮನ್ನಣೆ ಗಳಿಸಿದರು. ನಂತರದಲ್ಲಿ ತನ್ನ ಬಾಲ್ಯದ ಮತ್ತು ಯೌವನದ ಅನುಭವಗಳನ್ನು ಆಧರಿಸಿ ಲಾರಾ ಎಂಟು ಕೃತಿಗಳನ್ನು ರಚಿಸಿದರು. ಎಲ್ಲಾ ವಯಸ್ಸಿನವರಿಗೂ ಪ್ರಿಯವಾಗುವ ಈ ಕೃತಿಗಳನ್ನು ಪ್ರೊ. ಎಸ್ ಅನಂತನಾರಾಯಣ ಅನುವಾದಿಸಿ ಕನ್ನಡದ ಓದುಗರಿಗೆ ತಲುಪಿಸಿದರು.
ಅಮೆರಿಕಕ್ಕೆ 19ನೆಯ ಶತಮಾನದಲ್ಲಿ ಬಂದ ವಲಸಿಗರು ಅಮೆರಿಕದ ಮಧ್ಯ ಮತ್ತು ಪಶ್ಚಿಮದ ಭಾಗಗಳಲ್ಲಿ ನೆಲೆಸುತ್ತ ಬಂದ ಪ್ರಕ್ರಿಯೆಯನ್ನು ತಮ್ಮ ಕುಟುಂಬದ ಅನುಭವಗಳ ಹಿನ್ನೆಲೆಯಲ್ಲಿ ಲಾರಾ ಕಟ್ಟಿಕೊಡುತ್ತಾರೆ. ನನ್ನ ಬಾಲ್ಯದಲ್ಲಿ ಹಲವಾರು ಬಾರಿ ಓದಿ ಖುಷಿ ಪಟ್ಟ, ಬದುಕಿನ ಬಗೆಗಿನ ಕೆಲವು ಸತ್ಯಗಳನ್ನು ಅರ್ಥ ಮಾಡಿಸಿಕೊಟ್ಟ  ಬರಹಗಳಿವು.

ಸಚಿವ ಆಂಜನೇಯ ಅವರು ಯೋಗದ ಕುರಿತಾಗಿ ಕಳೆದ ವಾರ ಹೇಳಿದ ಮಾತುಗಳು ಲಾರಾರನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದವು. ತನ್ನ ಆತ್ಮಕಥಾನಕದ ಮೂರನೆಯ ಸಂಪುಟದಲ್ಲಿ ಲಾರಾ ತನ್ನ ಗಂಡ ಅಲ್ಮಾಂಜೊ ವೈಲ್ಡರನ  ಬಾಲ್ಯದ ಬಗ್ಗೆ ಬರೆಯುತ್ತಾರೆ. ಈ ಕೃತಿಯಲ್ಲಿನ ಒಂದು ಅಧ್ಯಾಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಬಾಲಕ ಅಲ್ಮಾಂಜೊನ ತಂದೆ ತನ್ನ ಮಗನಿಗೆ ದೈನಂದಿನ ಸುತ್ತುಕೆಲಸಗಳನ್ನು ಕಲಿಸುತ್ತ ರೈತನ ಪ್ರತಿದಿನದ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಾರೆ. ರೈತನ ಬದುಕಿನಲ್ಲಿ ರಜೆಯಿಲ್ಲ. ಇತರೆ ಕೃಷಿ ಸಂಬಂಧಿತ ಕೆಲಸಗಳು ಇಲ್ಲದಿದ್ದ ಸಂದರ್ಭಗಳಲ್ಲೂ ಪ್ರತಿದಿನವೂ ತಾನು ಸಾಕುತ್ತಿರುವ ಪ್ರಾಣಿಗಳ ಅಗತ್ಯಗಳನ್ನು ಗಮನಿಸುವ ಜವಾಬ್ದಾರಿಯಾದರೂ ಇದ್ದೇ ಇರುತ್ತದೆ. ಅಲ್ಮಾಂಜೊನ ತಂದೆ ಹೇಳುವ ಮಾತುಗಳು ಬೇರೆ ಬೇರೆ ಕೃತಿಗಳಲ್ಲಿ ಅಥವಾ ನಮ್ಮೆಲ್ಲರ ಪ್ರತಿದಿನದ ಬದುಕಿನಲ್ಲಿ ನಾವು ಪದೇಪದೇ ಕೇಳುವ ಮಾತುಗಳೆ. ನನಗೆ ಈ ಕೃತಿ ನೆನಪಿನಲ್ಲಿ ಉಳಿಯಲು ಕಾರಣ ಸರಳ. ರೈತಾಪಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನನ್ನ ಕುಟುಂಬದ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ದೂರದ ಅಮೆರಿಕದ ಗಡಿನಾಡಿನ ಗ್ರಾಮೀಣ ಬದುಕನ್ನು ಕಟ್ಟಿಕೊಡುತ್ತಿದ್ದ ಸಾಹಿತ್ಯ ಕೃತಿಯೊಂದರಲ್ಲಿ ನಾನು ಓದಿದ್ದು. ಅಷ್ಟೇ ಅಲ್ಲ. ನನ್ನ ಹಿರಿಯರ ದೈನಂದಿನ ಶ್ರಮದ ಬದುಕಿನ ನೈತಿಕತೆ ನನಗೆ ಮೊದಲು ಸ್ಪಷ್ಟವಾದ ಕ್ಷಣವದು.

ಪ್ರತಿದಿನವೂ ಬೆವರು ಹರಿಸುವ, ನಿರಂತರತೆ ಗುಣವಾಗಿರುವ ಶ್ರಮದ ಬದುಕು ಕೇವಲ ದೈಹಿಕ ಚಟುವಟಿಕೆಗೆ ಮಾತ್ರ ಸೀಮಿತವಾದುದಲ್ಲ. ಅದಕ್ಕೊಂದು ಆಧ್ಯಾತ್ಮಿಕ ಆಯಾಮವೂ ಇದೆ. ನನಗೆ ಈ ಅರಿವು ಮೂಡಿಸಿದವರು ಶೂನ್ಯಸಂಪಾದನಕಾರರು ಮತ್ತು ರಷ್ಯನ್ ಕಾದಂಬರಿಕಾರ ಟಾಲ್ಸ್ ಟಾಯ್. ಶ್ರಮದ ಬದುಕಿನ ಆಧ್ಯಾತ್ಮಿಕತೆಯನ್ನು ವಚನಕಾರರ ಬದುಕನ್ನು ಕಟ್ಟಿಕೊಡುವ ಶೂನ್ಯಸಂಪಾದನೆಕಾರರು ಸೊಗಸಾಗಿ ನಿರೂಪಿಸುತ್ತಾರೆ. ಕನ್ನಡದ ಜನಮನದಲ್ಲಿ ಗಟ್ಟಿಯಾಗಿ ಉಳಿದಿರುವ ಆಯ್ದಕ್ಕಿ ಮಾರಯ್ಯ ಪ್ರಸಂಗವನ್ನೇ ಗಮನಿಸಿ. ಶರಣರ ಸಂಗದ ಅಪೇಕ್ಷೆಯಿಂದ ಕೂಡ ಪ್ರತಿದಿನದ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯ ಸಂಗ್ರಹ ಮಾಡುವುದು ಉಚಿತವಲ್ಲ. ಮಾರಯ್ಯ ದಿನವೂ ತನ್ನ ಕಾಯಕವನ್ನು ಮಾಡಬೇಕು ಎಂಬ ವಾದವನ್ನು ಆತನ ಹೆಂಡತಿ ‘ಶೂನ್ಯಸಂಪಾದನೆ’ಯಲ್ಲಿ ಮಂಡಿಸುತ್ತಾಳೆ.

ಹಾಗೆಯೇ ತನ್ನ ಕಾದಂಬರಿ ‘ಅನ್ನಾ  ಕರೆನಿನಾ’ದಲ್ಲಿ ಟಾಲ್ಸ್ ಟಾಯ್, ಶ್ರಮದ ಬದುಕಿನ ಆಧ್ಯಾತ್ಮಿಕತೆಯನ್ನು ಲೆವಿನ್ ನ ಕಥನದ ಮೂಲಕ ಕಟ್ಟಿಕೊಡುತ್ತಾರೆ. ಲೆವಿನ್ ಪಾತ್ರವನ್ನು ಟಾಲ್ಸ್ ಟಾಯ್ ತಮ್ಮ ಬದುಕು, ಪ್ರಯೋಗಗಳು ಮತ್ತು ಅನುಭವಗಳ ಮೇಲೆಯೇ ರೂಪಿಸಿದರು. ಟಾಲ್ಸ್ ಟಾಯ್ ರಷ್ಯಾದ ಶ್ರೀಮಂತ ಭೂಮಾಲೀಕ ವರ್ಗದಿಂದ ಬಂದವರು ಮತ್ತು ತನ್ನ ಯೌವನದಲ್ಲಿ ಲಂಪಟತನದ ಜೀವನವನ್ನು ನಡೆಸಿದವರು. ನಂತರ ಯಾಸ್ನಾಯ ಪೊಲ್ಯಾನದ ತಮ್ಮ ಎಸ್ಟೇಟಿಗೆ ಹಿಂದಿರುಗಿ, ಬರವಣಿಗೆಯೊಡನೆ ತಮ್ಮ ರೈತರೊಡನೆ ನಿಯಮಿತವಾಗಿ ಕೆಲಸ ಮಾಡಲು ತೊಡಗಿಸಿಕೊಂಡವರು. ಅಂತೆಯೇ ಬದುಕಿನ ಅರ್ಥ ಹುಡುಕುತ್ತಿರುವ ಲೆವಿನ್ ದುಡಿಮೆಯಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಅದನ್ನು ಕಂಡುಕೊಳ್ಳುತ್ತಾನೆ. 

ನಾನು ಇಲ್ಲಿ ನೀಡುತ್ತಿರುವ ಉದಾಹರಣೆಗಳು ವೈಯಕ್ತಿಕವಾಗಿ ನನ್ನ ಸಂವೇದನೆಯನ್ನು, ನೈತಿಕತೆಯನ್ನು ರೂಪಿಸುವಲ್ಲಿ ಪ್ರಮುಖವಾದವುಗಳು. ಇದೇ ರೀತಿಯ ಹತ್ತಾರು ಉದಾಹರಣೆಗಳು ನಮ್ಮಲ್ಲಿ ಪ್ರತಿಯೊಬ್ಬರ ಬಳಿಯೂ ಇವೆ. ಇಲ್ಲಿ ನಾನು ಗುರುತಿಸಬಯಸುವ ಅಂಶಗಳು ಎರಡು. ಒಂದು, ನಿತ್ಯವೂ ಮಾಡುವ ದೈಹಿಕ ಶ್ರಮದ, ಬೆವರು ಹರಿಸುವ ಕ್ರಿಯಾಶೀಲ ಬದುಕು. ಎರಡನೆಯದು, ಈ ಕ್ರಿಯೆ ಯಾಂತ್ರಿಕವಾದ ಬುದ್ಧಿಹೀನ ಚಟುವಟಿಕೆಯಲ್ಲ, ಬದಲಿಗೆ ಯೋಗಿಯ ತನ್ಮಯತೆಯನ್ನು ಸಾಧಿಸುವ ಪ್ರತಿದಿನದ  ಚಟುವಟಿಕೆ.

ಯೋಗದಿಂದ ಸಾಧಿಸಬಯಸುವ ಸಿದ್ಧಿಯನ್ನು ಈಗಾಗಲೇ ತಮ್ಮ ಪ್ರತಿದಿನದ ಕ್ರಿಯಾತ್ಮಕ ಬದುಕಿನಲ್ಲಿ ಸಾಧಿಸಿರುವ ಶ್ರಮಜೀವಿ ವರ್ಗಗಳಿಗೆ ನಾವು ಯೋಗದ ಮೂಲಕ ಕೊಡಬಯಸುವುದೇನು? ಮೇಲಾಗಿ ಯೋಗ ಒದಗಿಸುವ ದೈಹಿಕ ದೃಢತೆ, ಮಾನಸಿಕ ಏಕಾಗ್ರತೆ, ಮತ್ತು ತಾದಾತ್ಮ್ಯತೆಯನ್ನು ತಮ್ಮ ಪ್ರತಿದಿನದ ಬದುಕಿನಲ್ಲಿ ಪಡೆದಿದ್ದರೆ ಅದನ್ನು ಗುರುತಿಸಲು ಅಡ್ಡಿಯೇನು? ಆಂಜನೇಯರ ಟೀಕಾಕಾರರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಆದರೆ ನನ್ನ ಉದ್ದೇಶ ಇಲ್ಲಿ ದುಡಿಮೆಯ ಬದುಕನ್ನು ರೋಮಾಂಚಕವಾಗಿ ಬಣ್ಣಿಸುವುದಲ್ಲ. ಐತಿಹಾಸಿಕವಾಗಿ ಮತ್ತು ಇಂದು ವರ್ತಮಾನದಲ್ಲಿ ಆ ಬದುಕಿನೊಳಗಿರುವ ಹಿಂಸೆಯನ್ನು, ಶೋಷಣೆಯನ್ನು ಮರೆಮಾಚುವುದಲ್ಲ. ‘ನೇಗಿಲಯೋಗಿ’ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವಂತಹ, ಎಲ್ಲ ವಲಯಗಳ ಕೆಲಸಗಾರರು ಹಸಿವು ಮತ್ತು ಅಭದ್ರತೆಗಳನ್ನು ಎದುರಿಸುತ್ತಿರುವ ವಾಸ್ತವ ನಮ್ಮದು. ಹಾಗಾಗಿ ಶ್ರಮದ ಬದುಕಿನ ದೈಹಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನಷ್ಟೇ ಮಾತನಾಡಿ ಮುಗಿಸುವ ಬೌದ್ಧಿಕವಿಲಾಸ ನಮ್ಮದಾಗುವಂತಿಲ್ಲ. ಅದೊಂದೆಡೆ ಇರಲಿ.

ಅಂತರರಾಷ್ಟ್ರೀಯ ಯೋಗದಿನಾಚರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು 2014ರ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾತನಾಡಿದ ನಂತರದಿಂದಲೂ ಯೋಗವನ್ನು ಭಾರತೀಯ ನಾಗರಿಕತೆಯ ಕೇಂದ್ರದಲ್ಲಿರಿಸಿ ಅದರ ಮಹತ್ವವನ್ನು ಉದ್ಘೋಷಿಸುವ ಪ್ರಯತ್ನಕ್ಕೆ ಹೆಚ್ಚಿನ ಚಾಲನೆ ಸಿಕ್ಕಿದೆ. ಅದರ ಬಗ್ಗೆ ತುಂಬ ಉತ್ಸುಕತೆಯಿಂದ ಮಾತನಾಡುತ್ತಿರುವವರಲ್ಲಿ ಬಹುಮಂದಿ ಯೋಗದ ಅಭ್ಯಾಸಿಗಳಲ್ಲ. ಅಂತರ್ಜಾಲದ ತುಂಬ ಇಂದೂ ಯೋಗ ಮಾಡಲಾಗದ ಕೇಂದ್ರದ ಸಚಿವರ ಚಿತ್ರಗಳು ಹರಿದಾಡುತ್ತಿವೆ. ಆದರೆ ಅವರಾರಿಂದಲೂ ಯೋಗದ ಬಗೆಗಿನ ಭಾಷಣಗಳಂತೂ ನಿಂತಿಲ್ಲ.

ಕಳೆದ ವಾರ ಪ್ರಕಟವಾದ ಲೇಖನದಲ್ಲಿ  (ಪ್ರ.ವಾ. ಸಂಗತ,ಜೂ. 18 ದಿನೇಶ್ ಅಮಿನ್ ಮಟ್ಟು)  ಯೋಗ ದಿನಾಚರಣೆಯ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಕ್ರೀಡೆಗಳ ವಿಚಾರ ಪ್ರಸ್ತಾಪಿಸಲಾಗಿತ್ತು.   ಯೋಗದಿನಾಚರಣೆಯ ಸಿದ್ಧತೆಗಳು ನಡೆಯುತ್ತಿದ್ದ ಸಮಯದಲ್ಲಿಯೇ ಜೂನ್ 15ರಂದು ಭಾರತ ತನ್ನ ಕ್ರೀಡಾ ಇತಿಹಾಸದಲ್ಲಿನ ಅತ್ಯಂತ ಅವಮಾನಕರವಾದ ಸೋಲುಗಳಲ್ಲೊಂದನ್ನು ಅನುಭವಿಸಿತ್ತು.  2018ರ ವಿಶ್ವಕಪ್ ಫುಟ್್‍ಬಾಲ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯವೊಂದರಲ್ಲಿ ಏಷ್ಯಾದ ಅತ್ಯಂತ ಸಣ್ಣ ಫುಟ್‍ಬಾಲ್ ದೇಶವಾದ ಗ್ವಾಮ್ (ಜನಸಂಖ್ಯೆ 1,80,000) ಭಾರತವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು. ಪೆಸಿಫಿಕ್ ಸಮುದ್ರದಲ್ಲಿನ ಒಂದು ಸಣ್ಣ ದ್ವೀಪವಾದ ಗ್ವಾಮ್ ಇಂದು ಅಮೆರಿಕದ ನಿಯಂತ್ರಣದಲ್ಲಿದೆ. ನಮ್ಮ ವಿಧಾನಸಭಾ ಕ್ಷೇತ್ರವೊಂದರ ಜನಸಂಖ್ಯೆಯ ಅರ್ಧದಷ್ಟೂ ಇರದ ಪ್ರದೇಶವೊಂದರಿಂದ ವಿಶ್ವಕಪ್ ಪಂದ್ಯವೊಂದರಲ್ಲಿ  ಸೋಲು ಅನುಭವಿಸುವುದು ಸುದ್ದಿಯೂ ಆಗುವುದಿಲ್ಲ ಮತ್ತು ಯಾವುದೇ ಬಗೆಯ ಪುನರ್ ಚಿಂತನೆಗೂ ದಾರಿಮಾಡಿಕೊಡುವುದಿಲ್ಲ.

ಆಂಜನೇಯರ ಮಾತುಗಳು ಎರಡು ಮುಖ್ಯ ವಿಚಾರಗಳನ್ನು ಎತ್ತುತ್ತವೆ ಎಂದು ನಾನು ಭಾವಿಸಿದ್ದೇನೆ. ಮೊದಲನೆಯದು ನಾನು ಈ ಮೇಲೆ ಚರ್ಚಿಸಿರುವ ಶ್ರಮದ ದೈಹಿಕ ಮತ್ತು ಆಧ್ಯಾತ್ಮಿಕ ಆಯಾಮಗಳು. ಎರಡನೆಯದು, ಭಾರತೀಯ ನಾಗರಿಕತೆಯನ್ನು ಹೇಗೆ ನಾವು ಅರಿಯುತ್ತಿದ್ದೇವೆ ಎಂಬ ಪ್ರಶ್ನೆ. ಒಂದು ಬೌದ್ಧಿಕ ದರ್ಶನವಾಗಿ ಹಾಗೂ ಆಧ್ಯಾತ್ಮಿಕ ಸಾಧನೆಯ ಹಲವಾರು ಮಾರ್ಗಗಳಾಗಿ ಯೋಗ ಭಾರತೀಯ ನಾಗರಿಕತೆಯೊಳಗೆ ತನ್ನ ಇರುವಿಕೆಯನ್ನು ಸ್ಥಾಪಿಸಿಕೊಂಡಿದೆ ಎಂಬುದು ನಿರ್ವಿವಾದವಾದುದು. ಜೊತೆಗೆ ಆಧ್ಯಾತ್ಮಿಕ ಸಾಧನೆಯ ಮಾರ್ಗಗಳಾಗಿ ಯೋಗ ಭಾರತದ ಎಲ್ಲ ಸ್ಥಳೀಯ, ಪ್ರಾದೇಶಿಕ ಹಾಗೂ ದೇಶವ್ಯಾಪಿ ಪರಂಪರೆಗಳೊಳಗೆ ಹಾಸುಹೊಕ್ಕಾಗಿದೆ. ಇದು ಕೇವಲ ವೈದಿಕ-ಬ್ರಾಹ್ಮಣ ಕೇಂದ್ರಿತ ಹಿಂದೂ ಪರಂಪರೆಯೊಳಗೆ ಮಾತ್ರವೇ ಇಲ್ಲ. ಜೊತೆಗೆ, ಇಂದು ಯೋಗಾಭ್ಯಾಸವೆಂದು ಜಾಗತಿಕವಾಗಿ ಚಾಲನೆಯಲ್ಲಿರುವ ಅಭ್ಯಾಸ. ಒಂದು ಶತಮಾನದ ಇತಿಹಾಸವೂ ಇಲ್ಲದ, ಆಧುನಿಕ ಅಭ್ಯಾಸವೆಂದು ಹೇಳಲು ಯಾವುದೇ ಸಂಕೋಚ ಬೇಕಿಲ್ಲ. ಈ ಯೋಗಾಭ್ಯಾಸ ತನ್ನ ಸ್ಫೂರ್ತಿಯನ್ನು ಪ್ರಾಚೀನ ಗ್ರಂಥಗಳಿಂದ ಮತ್ತು ಆಧುನಿಕಪೂರ್ವ ಯೋಗಸಂಪ್ರದಾಯಗಳಿಂದ ಪಡೆದಿರಬಹುದು. ಆದರೆ ಇಂದು ಇದು ತನ್ನ ಅಸ್ತಿತ್ವವನ್ನು ಕಟ್ಟಿಕೊಂಡಿರುವುದು ನಗರವಾಸಿ ಮಧ್ಯಮ ಮತ್ತು ಮೇಲ್ವರ್ಗಗಳ ಸಂಸ್ಕೃತಿಯ ಪ್ರಮುಖ ಅಂಗವಾಗಿ.

ವಸಾಹತುಶಾಹಿ ಇತಿಹಾಸಕಾರರು ಮತ್ತು ತದನಂತರದ ಎಡಪಂಥೀಯ ಇತಿಹಾಸಕಾರರು ಭಾರತೀಯ  ಇತಿಹಾಸವನ್ನು ತಿರುಚಿದ್ದಾರೆ ಹಾಗೂ ನಾವಿಂದು ನಿಜವಾದ ಇತಿಹಾಸದ ಪುನರ್ ರಚನೆ ಮಾಡಬೇಕಿದೆ ಎಂದು ಬಲಪಂಥೀಯ ವರ್ಗಗಳಿಂದ ಬಹುಕಾಲದಿಂದ ಕೇಳುತ್ತ ಬಂದಿದ್ದೇವೆ. ವಸಾಹತುಶಾಹಿ ಸಂದರ್ಭದ ಜ್ಞಾನಸೃಷ್ಟಿ ಕುರಿತಾಗಿ ಆಳವಾಗಿ ಚಿಂತಿಸಿ, ಬಹುಮುಖ್ಯ ಒಳನೋಟಗಳನ್ನು ನೀಡಿದವರು ಕನ್ನಡದ ಹಿರಿಯ ಚಿಂತಕ ಡಿ.ಆರ್. ನಾಗರಾಜ್. ಇದು ಕನ್ನಡದ ಸಂದರ್ಭದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಅನ್ವಯವಾಗುವಂತಹ ವಾದಗಳು. ವಸಾಹತುಶಾಹಿ ಕಾಲದಲ್ಲಿ ಆದ ನಿಜವಾದ ವಿಸ್ಮೃತಿಯನ್ನು ವಿವರಿಸುತ್ತ, ಅವೈದಿಕ (ಅದರಲ್ಲೂ ಬರವಣಿಗೆಯ ಪರಂಪರೆ ಇಲ್ಲದ ಸ್ಥಳೀಯ) ಪರಂಪರೆಗಳು ತಮ್ಮ ಪ್ರಾಮುಖ್ಯ ಕಳೆದುಕೊಂಡವು ಎಂಬುದನ್ನು ನಾಗರಾಜ್ ಗುರುತಿಸುತ್ತಾರೆ. ಇವುಗಳ ಬದಲಿಗೆ ಸಂಸ್ಕೃತದಲ್ಲಿದ್ದ ದರ್ಶನಗಳು ಮತ್ತು ಜ್ಞಾನಪರಂಪರೆಗಳನ್ನು 18-19ನೆಯ ಶತಮಾನಗಳ ಯೂರೋಪ್ ಮೂಲದ ಮತ್ತು ಭಾರತೀಯ ಇತಿಹಾಸಕಾರರು ಭಾರತೀಯ ನಾಗರಿಕತೆಗಳ ಕೇಂದ್ರದಲ್ಲಿಟ್ಟರು. ಹೀಗಾಗಿ ಶೂದ್ರ ಹಾಗೂ ಶ್ರಮ ಸಂಸ್ಕೃತಿಗಳು ಇತಿಹಾಸದಲ್ಲಿ ತಮ್ಮ ಸ್ಥಾನ ಪಡೆದಿಲ್ಲ ಎಂಬುದು ಇಲ್ಲಿ ಹೇಳಲೇಬೇಕಾಗಿರುವ ಮಾತು.

ಅಂದರೆ, ಆಂಜನೇಯರ ಮಾತುಗಳು ಮಧ್ಯಮ ವರ್ಗಗಳಿಗಾಗಲಿ ಅಥವಾ ಬಲಪಂಥೀಯರಿಗೆ ಅಪಥ್ಯವಾದರೆ ಅದಕ್ಕೆ ಕಾರಣ ನಾಗರಾಜ್ ಗುರುತಿಸುವ ರೀತಿಯ ವಿಸ್ಮೃತಿ. ಹಾಗಾಗಿ ನಾಗರಿಕತೆಯನ್ನೆ ತಾತ್ವಿಕವಾಗಿ ಮತ್ತು ಐತಿಹಾಸಿಕವಾಗಿ ಮರುಚಿಂತನೆ ಮಾಡಬೇಕಾದ ಅಗತ್ಯ ನಮ್ಮ ಮುಂದಿದೆ. ಈ ಸಾಮಾಜಿಕ ಸತ್ಯವನ್ನು ಹೇಳುವುದರಿಂದ ಯೋಗದ ಪ್ರಾಮುಖ್ಯವನ್ನಾಗಲಿ ಅಥವಾ ಉಪಯುಕ್ತತೆಯನ್ನಾಗಲಿ ಪ್ರಶ್ನಿಸಿದಂತಾಗುವುದಿಲ್ಲ. ಬದಲಿಗೆ ನಾವು ಆತ್ಮವಂಚನೆ ಮಾಡಿಕೊಳ್ಳುವುದನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಂಡಂತಾಗುತ್ತದೆ. ಡಾ. ಅಶೋಕ್ ಪಾಟೀಲರು (ಪ್ರ.ವಾ ., ‘ಸಂಗತ’  ಜೂ.23) ವಿವರಿಸಿದಂತೆ ನಿಯಮಿತ ಯೋಗಾಭ್ಯಾಸದಿಂದ ಕೆಲವು ಲಾಭಗಳಿದ್ದರೂ ಚಿಕಿತ್ಸಾರೂಪದಲ್ಲಿ ಯೋಗವನ್ನು ನೋಡಲು ಮಿತಿಗಳಿವೆ. ಸಿ.ಬಿ.ಎಸ್.ಸಿ. ಸೇರಿದಂತೆ ಶಾಲಾ ಪಠ್ಯಕ್ರಮಗಳಲ್ಲಿ ಯೋಗವನ್ನು ಕಡ್ಡಾಯ ಮಾಡುವ ಮಾತುಗಳು ಕೇಳಿಬರುತ್ತಿರುವಾಗ ಯೋಗ ಏಕೆ ಎಂಬುದರ ಬಗ್ಗೆ ಸ್ಪಷ್ಟತೆ ಇರುವುದು ಸೂಕ್ತ. ಉತ್ಪ್ರೇಕ್ಷೆಯ ವಾದಗಳಿಂದ ಯೋಗದ ಬೆಂಬಲಿಗರು ಪಡೆಯಬಹುದಾಗಿರುವುದೂ ಹೆಚ್ಚೇನೂ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT