ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆಯ ಭುಗಿಲು; ತೆಲುಗು ಚಿತ್ರರಂಗದಲ್ಲಿ ದಿಗಿಲು

Last Updated 24 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ದೇಶದಲ್ಲೇ ಚಲನಚಿತ್ರ ತಯಾರಿಕೆಯ ಎರಡನೇ ಅತಿ ದೊಡ್ಡ ರಾಜ್ಯ ಎನಿಸಿಕೊಂಡಿರುವ ಆಂಧ್ರಪ್ರದೇಶ ಈಗ ವಿಭಜನೆಯ ಪೆಟ್ಟಿನಿಂದ ತತ್ತರಿಸುತ್ತಿದೆ. ಸೂಪರ್‌ ಸ್ಟಾರ್‌ಗಳೆಲ್ಲಾ ಅಲ್ಲೂ ಇರಲಾಗದೆ, ಇಲ್ಲೂ ಇರಲಾಗದೆ ಉಭಯ ಸಂಕಟಕ್ಕೊಳಗಾಗಿರುವುದು ಸ್ಪಷ್ಟವಾಗಿದೆ.

ವರ್ಷಕ್ಕೆ ಸುಮಾರು 250 ಚಲನಚಿತ್ರಗಳು ತಯಾರಾಗುವ ಆಂಧ್ರದಲ್ಲಿ ಚಿತ್ರೋದ್ಯಮದ ಮೇಲೆ ಹೂಡಿರುವ ಬಂಡವಾಳ ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು. ವಿಭಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿಯಿಂದಲೂ ಇದುವರೆಗೆ 40 ಹೊಸ ಚಿತ್ರಗಳು ನೆಲಕಚ್ಚಿವೆ. ಸುಮಾರು 300 ಕೋಟಿ ರೂಪಾಯಿ ನಷ್ಟವಾಗಿದ್ದು ನಿರ್ಮಾಪಕರು ತತ್ತರಿಸಿ ಹೋಗಿದ್ದಾರೆ.

ಎರಡು ರಾಜ್ಯ, ಒಂದೇ ಭಾಷೆ, ಆಂಧ್ರದ ವಿಚಿತ್ರ ಸ್ಥಿತಿ ಇದು. ವಿಭಜನೆ ಎನ್ನುವುದರಿಂದ ತೆಲುಗು ಭಾಷೆಗೆ ಯಾವ ರೀತಿಯ ಪ್ರಯೋಜನವಾಗುತ್ತದೆ? ತೆಲುಗು ಭಾಷೆಯ ಚಲನಚಿತ್ರೋದ್ಯಮಕ್ಕೆ ಯಾವ ರೀತಿಯ ಪ್ರಯೋಜನವಾಗುತ್ತದೆ ಎನ್ನುವುದು ಒಂದು ಸ್ತರದ ಚರ್ಚೆ.

ಆದರೆ ಇಲ್ಲಿ ಭಾವನಾತ್ಮಕವಾದ ತಂತುವೊಂದಿದೆ. ತೆಲಂಗಾಣವನ್ನು ಪ್ರತ್ಯೇಕ ರಾಜ್ಯ, ಮಾಡಬೇಕೆಂಬ ಸುದೀರ್ಘ ಹೋರಾಟದ ಹಿಂದೆಯೂ ಅಸಮಾನತೆಯ ನೋವಿದೆ. ಈ ಹೋರಾಟದ ಹಿಂದಿನ ದನಿ ಮೇಲ್ವರ್ಗದ ವಿರುದ್ಧ ಹಿಂದುಳಿದ ಜನರ ಆಕ್ರೋಶವೂ ಆಗಿದೆ ಎನ್ನುವುದನ್ನು ಸಾಮಾಜಿಕ ಪರಿಸ್ಥಿತಿಯ ಅವಲೋಕನದ ಮೂಲಕ ಗ್ರಹಿಸಬಹುದು. 81 ವರ್ಷಗಳ ಇತಿಹಾಸ ಹೊಂದಿರುವ ತೆಲುಗು ಚಿತ್ರೋದ್ಯಮದಲ್ಲೂ ಇಂತಹ ಅಸಮಾನತೆಯ ಕುದಿ ಇದ್ದೇ ಇತ್ತು. ಇಂದಿನ ಆಸ್ಫೋಟಕ್ಕೆ ಇತಿಹಾಸ ಗರ್ಭದಲ್ಲಿ ಹುದುಗಿದ್ದ ಆಕ್ರೋಶವೇ ಕಾರಣ.

ಅತ್ತ ಅಖಂಡ ಆಂಧ್ರಕ್ಕಾಗಿ ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವಂತೆಯೇ ಇತ್ತು. ತೆಲಂಗಾಣ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಚಲನಚಿತ್ರೋದ್ಯಮವನ್ನು ಅಖಂಡವಾಗಿ ಉಳಿಸಿಕೊಳ್ಳಬೇಕು. ಚಲನಚಿತ್ರ ಕಲಾವಿದರಿಗೆ ಭಾಷೆ, ಭೇದಭಾವವಿಲ್ಲ ಇವರೆಲ್ಲಾ ಇಲ್ಲಿಯೂ ಸಲ್ಲುವವರು, ಅಲ್ಲಿಯೂ ಸಲ್ಲುವವರು, ಆದುದರಿಂದ ಚಳವಳಿಯ ತೀವ್ರತೆಯಿಂದ ಚಿತ್ರರಂಗವನ್ನು ದೂರವಿಡಬೇಕು ಎನ್ನುವ ಆಂಧ್ರಪ್ರದೇಶ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಅರಣ್ಯರೋದನವಾಗಿದೆ.

‘ಇದು ತೆಲುಗು ಚಿತ್ರರಂಗವಲ್ಲ, ಕಮ್ಮ ಚಿತ್ರರಂಗ’ ಎಂದು ಇದುವರೆಗೆ ಅಣಕ ಮಾಡುತ್ತಿದ್ದ ತೆಲಂಗಾಣ ವಿಭಜನೆ ಪರವಾದಿಗಳು ತೆಲಂಗಾಣ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು 24 ಸದಸ್ಯರೊಂದಿಗೆ ಆರಂಭಿಸಿಯೇ ಬಿಟ್ಟಿದ್ದಾರೆ. ತೆಲಂಗಾಣ ಚಿತ್ರೋದ್ಯಮವನ್ನು ಪ್ರೋತ್ಸಾಹಿಸಲು ನಲಗೊಂಡ ಜಿಲ್ಲೆಯ ಯಾದಗಿರಿಗುಟ್ಟ ಪ್ರದೇಶದಲ್ಲಿ ನೂರು ಎಕರೆ ಜಾಗದಲ್ಲಿ ಫಿಲಂ ಸಿಟಿ ನಿಮಿಸಲು ಉದ್ದೇಶಿಸಲಾಗಿದೆ.

ಆರಂಭದ ದಶಕಗಳಲ್ಲಿ ತೆಲುಗು ಚಿತ್ರರಂಗ ಬೆಳೆದದ್ದು ಮದರಾಸಿನಲ್ಲಿ. ವಿಶಾಖಪಟ್ಟಣ, ರಾಜಮಹೇಂದ್ರಿಗಳಲ್ಲಿ ಸ್ಟುಡಿಯೊಗಳು ಸ್ಥಾಪನೆಯಾಯಿತಾದರೂ, ತಂತ್ರಜ್ಞರು ಇರಲಿಲ್ಲ. ಆಂಧ್ರ ಚಲನಚಿತ್ರ ಪಿತಾಮಹ ಎಂದೇ ಕರೆಯಲಾಗುವ ರಘುಪತಿ ವೆಂಕಯ್ಯ ಅವರ ಪುತ್ರ ರಘುಪತಿ ಪ್ರಕಾಶ್‌ ಲಂಡನ್‌ಗೆ ತೆರಳಿ ತರಬೇತಿ ಪಡೆದು ಬಂದಿದ್ದರು. ವೆಂಕಯ್ಯನವರು ಮದ್ರಾಸಿನಲ್ಲಿದ್ದುಕೊಂಡು ತೆಲುಗು ಚಿತ್ರರಂಗಕ್ಕೆ ನೀರೆರೆದರೆ, ನಿಡಮಾರ್ತಿ ಸುರಯ್ಯ ಅವರು ರಾಜಮಹೇಂದ್ರಿಯಲ್ಲಿ ತೆಲುಗು ಚಿತ್ರರಂಗಕ್ಕೆ ಬುನಾದಿ ಹಾಕಲು ಯತ್ನಿಸಿದರು.

ಮದರಾಸಿನಲ್ಲಿ ನೆಲೆ ಊರಿದ್ದ ತೆಲುಗು ಚಿತ್ರರಂಗವನ್ನು ಹೈದರಾಬಾದಿಗೆ ಸ್ಥಳಾಂತರಿಸಲು ಹರ ಸಾಹಸವನ್ನೇ ಪಡಬೇಕಾಯಿತು. ಹೈದರಾಬಾದು ಈಗ ಟಾಲಿವುಡ್‌ನ ಕೇಂದ್ರವಾಗಿದೆ. ಚಲನಚಿತ್ರ ಕಾರ್ಮಿಕರೆಲ್ಲಾ ಹೈದರಾಬಾದ್‌ನಲ್ಲೇ ನೆಲೆಸಿದ್ದಾರೆ. ವಿಭಜನೆ ನಿಶ್ಚಯ ಎಂಬುದನ್ನು ಮನಗಂಡ ಕೆಲವರು ಹೈದರಾಬಾದ್‌ ತೆಲಂಗಾಣಕ್ಕೆ ಸೇರುತ್ತದೆ ಎನ್ನುವುದನ್ನು ಊಹಿಸಿ ಚಲನಚಿತ್ರ ಕೇಂದ್ರವನ್ನಾಗಿ ವಿಶಾಖಪಟ್ಟಣವನ್ನು ಪರಿವರ್ತಿಸಲು ನಿರ್ಧರಿಸಿದ್ದಾರೆ.

ನಿರ್ಮಾಪಕ ಡಿ. ರಾಮಾನಾಯ್ಡು ವಿಶಾಖಪಟ್ಟಣದಲ್ಲಿ ಈಗಾಗಲೇ ಸ್ಟುಡಿಯೊ ಒಂದನ್ನು ಆರಂಭಿಸಿದ್ದಾರೆ. ಸಿನಿಮಾ ಸೌಲಭ್ಯಗಳ ಕೇಂದ್ರಗಳು ವಿಶಾಖಪಟ್ಟಣದಲ್ಲಿ ಒಂದೊಂದೇ ಸದ್ದಿಲ್ಲದೆ ಆರಂಭವಾಗುತ್ತಿವೆ.

ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಮಾಡಿದರೆ ಸೀಮಾಂದ್ರ, ರಾಯಲಸೀಮೆ ಭಾಗದ ಜನರಿಗೆ ಏನು ಕಷ್ಟ? ರಾಜಕೀಯವಾಗಿ ಇದ್ದಿರಬಹುದಾದ ವಾದವನ್ನು ದೂರಸರಿಸಿ, ಚಲನಚಿತ್ರಕ್ಕೆ ಸೀಮಿತವಾಗಿ ವಿಶ್ಲೇಷಿಸುವುದಾದರೆ, ಈಗ ಸೂಪರ್‌ ಸ್ಟಾರ್‌ಗಳಾಗಿ ಮೆರೆಯುತ್ತಿ್ತರುವ ಯಾವ ಹೀರೊಗಳಿಗೂ, ನಿರ್ಮಾಪಕರಿಗೂ ವಿಭಜನೆ ಇಷ್ಟವಿಲ್ಲ. ಆದರೆ ತೆಲಂಗಾಣದ ವಾಣಿಜ್ಯ ಮಾರ್ಕೆಟ್‌ ಮಾತ್ರ ಬಹಳ ಮುಖ್ಯ. ತೆಲಂಗಾಣದ ಜನ ಇದುವರೆಗೆ ಶೋಷಣೆಯನ್ನು ಸಹಿಸಿಕೊಂಡು ಬಂದಿದ್ದಾರೆ.

ತೆಲಂಗಾಣದ ಜನರ ವಾದವನ್ನು ಗಮನಿಸುವುದಾದರೆ, ಆಂಧ್ರಪ್ರದೇಶದ ಅತಿ ಶ್ರೀಮಂತ ಹಾಗೂ ಮೇಲ್ಜಾತಿಯ ಕೆಲವೇ ಕುಟುಂಬಗಳ ಕೈಯಲ್ಲಿ ತೆಲುಗು ಚಿತ್ರರಂಗ ಇದೆ. ಆಂಧ್ರದಲ್ಲಿ ರಾಜಕಾರಣಿಗಳಿಗೂ ಸಿನಿಮಾ ಉದ್ಯಮಕ್ಕೂ ಇರುವ ನಂಟು ರಹಸ್ಯವಾದುದೇನೂ ಅಲ್ಲ. ಆಂಧ್ರದ ಐದು ರಾಜಕಾರಣಿಗಳು ಹೈದರಾಬಾದ್‌ನಲ್ಲಿರುವ ಎಲ್ಲ ಸ್ಟುಡಿಯೊಗಳ ಒಡೆತನ ಹೊಂದಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಈ ಆಸ್ತಿಯನ್ನು ಸರ್ಕಾರ ‘ಗಣ್ಯ’ ರಾಜಕಾರಣಿಗಳ ಸಂಬಂಧಿಕರಿಗೆ ಎಕರೆಗೆ ಒಂದು ರೂಪಾಯಿ ದರದಂತೆ, ದೀರ್ಘಾವಧಿ ಗುತ್ತಿಗೆಗೆ ನೀಡಿದೆ. ಹೈದರಾಬಾದ್‌ ತೆಲಂಗಾಣದ ರಾಜಧಾನಿಯಾದರೆ, ಈ ರಾಜಕಾರಣಿಗಳ ಆಟ ಬಂದ್‌ ಆಗುತ್ತದೆ. ಇಂತಹ ರಾಜಕಾರಣಿಗಳು ಸಿನಿಮಾ ಉದ್ಯಮ ಹೈದರಾಬಾದ್‌ನಲ್ಲೇ ಉಳಿಯಲಿ, ಹೈದರಾಬಾದ್‌ ಕೇಂದ್ರಾಡಳಿತ ಪ್ರದೇಶವಾಗಲಿ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

ಆದರೆ ತೆಲಂಗಾಣ ರಾಜ್ಯವಾಗಬೇಕು ಎನ್ನುವವರು ಚಿತ್ರೋದ್ಯಮದ ಪಾಳೇಗಾರಿಕೆ ಮನೋಭಾವವನ್ನು ಕಟುವಾಗಿ ವಿರೋಧಿಸುತಾ್ತ ಬಂದಿದ್ದಾರೆ. ಇದುವರೆಗಿನ ಚಲನಚಿತ್ರ ಇತಿಹಾಸವನ್ನು ಗಮನಿಸಿದರೆ, ಜಾನಪದದ ಸೊಗಡು ಘಮಲು ಘಮಲಾಗಿ ತುಂಬಿ ತುಳುಕುತ್ತಿರುವ ತೆಲಂಗಾಣ ಪ್ರಾಂತ್ಯವನ್ನು ಚಿತ್ರರಂಗ ಸಂಪೂರ್ಣವಾಗಿ ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗುತ್ತದೆ.

ಗದ್ದರ್‌ ಸೇರಿದಂತೆ ಕ್ರಾಂತಿಕಾರಿ ಸಾಹಿತಿಗಳ ತವರು ತೆಲಂಗಾಣ. ಆದರೆ ಜಾತಿಭೇದ ಎನ್ನುವುದು ತೆಲಂಗಾಣದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ತೆಲಂಗಾಣದ ಜನತೆಗೆ, ಕಲಾವಿದರಿಗೆ ತೆಲುಗು ಚಲನಚಿತ್ರದ ಮಂದಿ ಅವಕಾಶವನ್ನೇ ಕೊಟ್ಟಿಲ್ಲ. ಈ ಭಾಗದಲ್ಲಿ ಬಹಳಷ್ಟು ಕಲಾವಿದರಿದ್ದರೂ, ಅವರಿಗೆ ಚಾನ್ಸ್ ಕೊಡದೆ, ಆಫೀಸ್‌ ಬಾಯ್‌ಗಳನ್ನಾಗಿ ಇಲ್ಲವೇ ಕ್ಲಾಪ್‌ಬಾಯ್‌ ಆಗಿ ನಿರ್ಮಾಣ ಘಟಕದಲ್ಲಿ ಸೇವಕರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ.

ಹಿಂದಿ ಚಿತ್ರರಂಗದಲ್ಲಿ ಖ್ಯಾತರಾದ ಪಿ. ಜೈರಾಜ್‌, ಕಾಂತರಾವ್‌ ಮತ್ತು ಬಿ. ನರಸಿಂಗರಾವ್‌ ಇವರೆಲ್ಲಾ ತೆಲಂಗಾಣದವರು. ಆದರೆ ಆಂಧ್ರದ ಮೇಲ್ಜಾತಿಯ ಗಣ್ಯಗಣ ಇವರನ್ನೆಲ್ಲಾ ತೆರೆಮರೆಗೆ ಸರಿಸಿದೆಯಲ್ಲದೆ, ಎಲ್ಲೂ ಇವರಿಗೆ ಮನ್ನಣೆ ಸಿಗದಂತೆ ನೋಡಿಕೊಂಡಿದೆ. ‘ಲೇಡಿ ಬಾಂಡ್‌’ ಎಂದೇ ಖ್ಯಾತರಾದ ನಟಿ ವಿಜಯಶಾಂತಿ ತೆಲಂಗಾಣ ಪ್ರಾಂತ್ಯದಿಂದ ಬಂದು ‘ವಸೆ ರಾಮುಲಮ್ಮ’ಳಾಗಿ ಗುರುತಿಸಿಕೊಂಡವರು. ಸ್ವಲ್ಪ ಆತುರ ಬಿದ್ದು ಸೋನಿಯಾಗೆ ಒಲಿದು ಕಾಂಗ್ರೆಸ್‌ ಸೇರಿ ಅವಕಾಶ ಕಳೆದುಕೊಂಡರು. ಪ್ರಬಲ ತೆಲಂಗಾಣ ಪ್ರತಿಪಾದಕಿ ವಿಜಯಶಾಂತಿ ಈಗ ಹೇಳ ಹೆಸರಿಲ್ಲವಾಗಿದ್ದಾರೆ.

ತೆಲಂಗಾಣಕ್ಕೆ ಚಲನಚಿತ್ರೋದ್ಯಮದಿಂದ ಆದ ಮತ್ತೊಂದು ಅನ್ಯಾಯವೆಂದರೆ, ತೆಲಂಗಾಣದ ಪ್ರಾಂತ ಭಾಷೆ ಮತ್ತು ಸಂಸ್ಕೃತಿಯನ್ನು ಬಹುತೇಕ ಎಲ್ಲ ಚಲನಚಿತ್ರಗಳಲ್ಲೂ ಅವಹೇಳನಾಸ್ಪದ ಮಾಡಿರುವುದು. ಯಾವೊಂದು ಚಿತ್ರವೂ ತೆಲಂಗಾಣ ಜನರ ಸ್ಥಿತಿಗತಿಯನ್ನು ಬಿಂಬಿಸಲು ಯತ್ನಿಸಿಲ್ಲ ಎನ್ನುವ ವಿಷಾದ ತೆಲಂಗಾಣ ಜನರಲ್ಲಿದೆ.

ಬಹುತೇಕ ತೆಲುಗು ಚಿತ್ರಗಳಲ್ಲಿನ ಖಳನಾಯಕರು ಮಾತನಾಡುವುದೆಲ್ಲಾ ತೆಲಂಗಾಣ ತೆಲುಗು ಹಾಗೂ ಅದಿಲಾಬಾದ್‌ ಭಾಷೆ. ಹಾಸ್ಯ ನಟರೆಲ್ಲಾ ಮೆಹಬೂಬ್‌ನಗರದ ತೆಲುಗನ್ನು ಬಳಸುತ್ತಾರೆ. ಆದರೆ ಕೃಷ್ಣ ಜಿಲ್ಲೆ ಮತ್ತು ಗುಂಟೂರು ತೆಲುಗನ್ನು ಬಳಸುವವರು ಹೀರೊಗಳು ಮಾತ್ರ! (ಕನ್ನಡ ಚಿತ್ರಗಳಲ್ಲಿ ಹಾಸ್ಯ ನಟರು ಹುಬ್ಬಳ್ಳಿ ಕನ್ನಡವನ್ನೋ ಮಂಗಳೂರು ಕನ್ನಡವನ್ನೋ ಬಳಸುತ್ತಾರೆ ಎನ್ನುವುದನ್ನು ಗಮನಿಸಿ). ರೆಡ್ಡಿಗಳು, ಕಮ್ಮಗಳು ಈ ಪರಿಯ ಅನ್ಯಾಯ ಮಾಡುತ್ತಿದ್ದಾರೆ, ತೆಲಂಗಾಣ ಜನರ ಸಹನೆಯ ಕಟ್ಟೆ ಒಡೆಯದೆ ಇನ್ನೇನಾದೀತು?

ಬಹುತೇಕ ಚಲನಚಿತ್ರ ನಟ ನಟಿಯರು ಅಖಂಡ ಆಂಧ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಅವರ ಅಸ್ತಿತ್ವದ ಪ್ರಶೆ್ನಯೂ ಆಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ತೆಲಂಗಾಣ ಪ್ರಾಂತ್ಯವನ್ನು ಬಳಸಿಕೊಳ್ಳುತ್ತಾ, ರಾಜ್ಯದಷ್ಟೇ ದೊಡ್ಡದಾಗಿರುವ ಪ್ರದೇಶದ  ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವ ಆಂಧ್ರ ಚಿತ್ರೋದ್ಯಮದ ಬಗ್ಗೆ ತೆಲಂಗಾಣ ರಾಜ್ಯದಲ್ಲಿ ತೀವ್ರ ಆಕ್ರೋಶವಿದೆ.

ಹೀಗಾಗಿ ಅಖಂಡ ಆಂಧ್ರ ಚಳವಳಿಗೆ ಬೆಂಬಲ ಸೂಚಿಸಿರುವ ಚಿರಂಜೀವಿ ಹಾಗೂ ಅವರ ಪುತ್ರನ ಬಗ್ಗೆ ನಂದಮೂರಿ ಕುಟುಂಬಕ್ಕೆ ಅದರಲ್ಲೂ ಬಾಲಕೃಷ್ಣ ಅಭಿನಯದ ಚಿತ್ರಗಳಿಗೆ ತೆಲಂಗಾಣದಲ್ಲಿ ಬಹಿಷ್ಕಾರ ಹಾಕಲಾಗಿದೆ. ಚಳವಳಿ ಆರಂಭವಾದ ದಿನದಿಂದ ನಲವತ್ತು ಚಿತ್ರಗಳು ಏಟು ತಿಂದಿವೆ.  ಮುನ್ನೂರು ಕೋಟಿ ರೂಪಾಯಿ ಬಂಡವಾಳ ಹೋಮವಾಗಿದೆ. ದಿನದಿಂದ ದಿನಕ್ಕೆ ಚಳವಳಿ ಉಗ್ರ ಸ್ವರೂಪ ಪಡೆಯುತ್ತಿರುವುದರಿಂದ ಹೊಸ ಚಿತ್ರಗಳ ಬಿಡುಗಡೆ ಮಾಡಲು ವಿತರಕರು, ಪ್ರದರ್ಶಕರು ಹಿಂದೇಟು ಹಾಕುತ್ತಿದ್ದಾರೆ.

ಚಳವಳಿಗೆ ಮೊದಲ ಬಲಿ ಚಿರಂಜೀವಿ ಅವರ ಪುತ್ರ ರಾಮ್‌ಚರಣ್‌ ತೇಜ ಅವರ ಅಭಿನಯದ ಜಂಜೀರ್‌ (ಹಿಂದಿ) ಹಾಗೂ ತೂಫಾನ್‌ (ತೆಲುಗು). ಕೇಂದ್ರ ಸಚಿವರಾಗಿದ್ದುಕೊಂಡು ಆಂಧ್ರ ವಿಭಜನೆಯನ್ನು ವಿರೋಧಿಸಲಿಲ್ಲ ಎಂದು ಸೀಮಾಂಧ್ರದವರಿಗೆ ಚಿರಂಜೀವಿ ಅವರ ಮೇಲೆ ಸಿಟ್ಟು. ತೆಲಂಗಾಣದ ರಾಜಧಾನಿಯಾಗುವ ಸಾಧ್ಯತೆ ಇರುವ ಹೈದರಾಬಾದ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಬೇಕು ಎಂದು ವಾದ ಮಾಡುತ್ತಿರುವ ಚಿರಂಜೀವಿ ನಿಲುವಿನ ಬಗ್ಗೆ ತೆಲಂಗಾಣ ಜನರಿಗೆ ಸಿಟ್ಟು. ಹೀಗಾಗಿ ಎರಡೂ ಕಡೆ ರಾಮ್‌ ಚರಣ್‌ ತೇಜ ಅವರ ಜಂಜೀರ್‌ (ತೂಫಾನ್‌) ಚಿತ್ರಕ್ಕೆ ಬಹಿಷ್ಕಾರ ಬಿತ್ತು.

ಕೇಂದ್ರ ಸಚಿವ ಎನ್ನುವ ಅಧಿಕಾರ ಬಲದಿಂದ ಪುತ್ರನ ಚಿತ್ರವನ್ನು ಹಿಟ್‌ ಮಾಡಲು ಹೊರಟಿದ್ದ ಚಿರಂಜೀವಿ, ಇಡೀ ರಾಜ್ಯವೇ ಹತ್ತಿಕೊಂಡು ಉರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ, ರಾಜ್ಯದ ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರು. ಬಹಳಷ್ಟು ಚಿತ್ರಮಂದಿರಗಳಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸ್‌ ಪಡೆಯನ್ನೇ ನಿಯೋಜಿಸಲಾಗಿತ್ತು. ಇದರಿಂದ ಮತ್ತಷ್ಟು ಉದ್ರಿಕ್ತರಾದ ಪ್ರದರ್ಶನಕಾರರು ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿ, ಒಂದೂ ಪ್ರದರ್ಶನ ನಡೆಯಲು ಅವಕಾಶ ಕೊಡಲಿಲ್ಲ. ಈ ಘಟನೆಯ ನಂತರವೇ ಚಳವಳಿಯ ತೀವ್ರತೆಯನ್ನು ಮನಗಂಡ ಚಿರಂಜೀವಿ, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಭಜನೆ ವಿರೋಧಿ ಗುಂಪಿಗೆ ಸೇರಿಕೊಂಡರು.

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಚಲನಚಿತ್ರರಂಗದ ಶತಮಾನೋತ್ಸವ ಸಮಾರಂಭದಲ್ಲಿ ತೆಲುಗು ಚಿತ್ರರಂಗದವರ ಉಪಸ್ಥಿತಿ ನೀರಸವಾಗಿದ್ದುದಕ್ಕೆ, ಆಂಧ್ರದಲ್ಲಿ ಗಲಭೆ ಭುಗಿಲೆದ್ದಿರುವುದು ಒಂದು ಕಾರಣ. ತೆಲುಗು ನಿರ್ಮಾಪಕ ಸಿ. ಕಲ್ಯಾಣ್‌, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಆದರೂ ಈ ಸಮಾರಂಭಕ್ಕೆ ಆಂಧ್ರ ಚಿತ್ರರಂಗ ಬಹಿಷ್ಕಾರ ಹಾಕಿತ್ತು. ಮೂವೀ ಆರ್ಟಿಸ್‌್ಟ ಅಸೋಸಿಯೇಷನ್‌ ಸಮಾರಂಭಕ್ಕೆ ಯಾರೂ ಹೋಗದಂತೆ ಕರೆ ನೀಡಿತ್ತು.

ಪ್ರಶಸ್ತಿ ಸ್ವೀಕರಿಸಲೆಂದೇ ಬಂದ ಕೆಲವು ಕಲಾವಿದರಿಗೂ ಸಮಾಧಾನವಿದ್ದಂತಿರಲಿಲ್ಲ. ಆರು ತಾಸುಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಅವಕಾಶ ತೆಲುಗು ಕಲಾವಿದರಿಗಿತ್ತು. ಆದರೆ ಭಾಗವಹಿಸುವವರೇ ಇಲ್ಲದೆ ಸಭೆ ಕಳಾಹೀನವಾಗಿತ್ತು. ನಮ್ಮನ್ನು ಕರೆದು ಅವಮಾನ ಮಾಡಿದರು, ಕರೆಯದೇ ಅವಮಾನ ಮಾಡಿದರು  ಎಂಬ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಕಲಾವಿದರಿಗೆ ಒಂದು ಸಮಾಧಾನದ ವಿಷಯವೆಂದರೆ, ತೆಲುಗು ಚಿತ್ರರಂಗದಿಂದಲೂ ಇಂತಹುದೇ ಅತೃಪ್ತಿ ವ್ಯಕ್ತವಾಗಿದೆ. ಹಿರಿಯ ತಾರೆಯರಿಗೆ ಆಹ್ವಾನವನ್ನೇ ಕೊಡಲಿಲ್ಲವಂತೆ. ದೂರವಾಣಿ ಮೆಸೇಜ್‌ ನೋಡಿ ಆಗಮಿಸಿದ್ದ ಕಲಾವಿದರನ್ನು ಮಾತನಾಡಿಸುವವರೂ ಇರಲಿಲ್ಲವಂತೆ! ಆಂಧ್ರದ ಚಳವಳಿಯ ಬಿಸಿಯಲ್ಲಿ ಇಂತಹ ಅತೃಪ್ತಿ ಮುಳುಗಿ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT