ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಾರ್ಹತೆ ಎಂಬುದು ಎಷ್ಟು ದುಬಾರಿ ಅಲ್ಲವೇ?...

Last Updated 19 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮಾಧ್ಯಮ ಇಂದು ಎದುರಿಸುತ್ತಿರುವ ಸವಾಲು ಏನು? ಅದು ಸಂಪನ್ಮೂಲದ್ದೇ? ಮಾನವ ಸಂಪನ್ಮೂಲದ್ದೇ? ಬೆಲೆ ಸಮರದ್ದೇ? ಜಾಹೀರಾತು ಆದಾಯ ಹಂಚಿಕೊಳ್ಳುವ ಕೆಟ್ಟ ಪೈಪೋಟಿಯದೇ? ತಂತ್ರಜ್ಞಾನದ ಬದಲಾವಣೆ ಜೊತೆಗಿನ ಹೊಂದಾಣಿಕೆಯದೇ? ಅಥವಾ ವಿಶ್ವಾಸಾರ್ಹತೆಯದೇ? ನನ್ನ ಸಂಪಾದಕರು ಕೆಲವು ದಿನಗಳ ಹಿಂದೆ ನನಗೆ ಒಂದು ಮೇಲ್‌ ಕಳುಹಿಸಿದ್ದರು. ಅದರಲ್ಲಿ ‘ವಾಷಿಂಗ್ಟನ್‌ ಪೋಸ್ಟ್’ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಮಾರ್ಟಿ ಬರೋನ್‌ ಅವರ ಸಂದರ್ಶನ ಪ್ರಕಟವಾಗಿತ್ತು. ಸಂದರ್ಶನದ ಸಾರವನ್ನು ಮೊದಲ ಪ್ಯಾರಾದಲ್ಲಿಯೇ ಪ್ರಕಟಿಸಲಾಗಿತ್ತು. ಬರೋನ್‌ ಹೇಳಿದ್ದರು: ‘ಪ್ರಶ್ನೆಯೇ ಇಲ್ಲ : ನಂಬಿಕೆ, ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲು...’ ಎಂದು.

ಅವರು ಮತ್ತೆ ಹೇಳಿದ್ದರು: ‘ವಿಷಯ ಏನು ಎಂದರೆ ಮಾಧ್ಯಮವನ್ನು ಯಾರೂ ನಂಬುತ್ತಿಲ್ಲ. ಈ ದೇಶ (ಅಮೆರಿಕ) ಮಾತ್ರವಲ್ಲ ಇನ್ನೂ ಅನೇಕ ದೇಶಗಳಲ್ಲಿ ಜನರು ಮುಖ್ಯವಾಹಿನಿಯ ಮಾಧ್ಯಮಗಳನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ. ಯಾರು ಏನೇ ಬರೆಯಲಿ, ಯಾರು ಎಷ್ಟೇ ನಿಜ ಸಂಗತಿಗಳನ್ನು ತಿಳಿಸಲಿ; ಜನರು ಮಾತ್ರ ಅದನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಿದ್ದಾರೆ. ಅವರು ತಮ್ಮ ಕಣ್ಣು ಮತ್ತು ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ. ಏನೋ ಅಪ್ಪಿ ತಪ್ಪಿ ಅವರ ಕಣ್ಣು ನೋಡಿದರೂ, ಕಿವಿ ಕೇಳಿಸಿಕೊಂಡರೂ ಅವರು ಅದನ್ನು ನಂಬುತ್ತಿಲ್ಲ. ಇದು ನಾವು ಈಗ ಬದುಕುತ್ತಿರುವ ಕಾಲ.’ ನಾವು ಸತ್ಯ ಹೇಳುತ್ತಿರಲಿಕ್ಕಿಲ್ಲ ಎಂದು ಅವರಿಗೆ ಏಕೆ ಅನಿಸುತ್ತ ಇರಬಹುದು? ಕಳೆದ ತಿಂಗಳು ಎನ್‌ಡಿಟಿವಿಯ ಬರ್ಖಾ ದತ್ತ ಅವರ ‘ದಿಸ್‌ ಅನ್‌ಕ್ವಯಟ್‌ ಲ್ಯಾಂಡ್‌’ ಪುಸ್ತಕ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಬರ್ಖಾ ಜೊತೆಗೆ ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಸಂವಾದ ನಡೆಸಿಕೊಟ್ಟರು. ಆಗಷ್ಟೇ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ಹಯ್ಯ ಕುಮಾರ್‌ ಬಂಧನವಾಗಿತ್ತು. ‘ಕನ್ಹಯ್ಯ ಮತ್ತು ಅವರ ಗೆಳೆಯರು ದೇಶದ್ರೋಹದ ಘೋಷಣೆ ಕೂಗಿದರು’ ಎಂದು ಗುಲ್ಲು ಎದ್ದಿತ್ತು. ಅವರು ನಿಜವಾಗಿಯೂ ಅಂಥ ಘೋಷಣೆ ಕೂಗಿದ್ದರೇ ಇಲ್ಲವೇ ಎಂಬುದು ಇದುವರೆಗೂ ಖಚಿತವಾಗಿಲ್ಲ. ದೆಹಲಿ ಪೊಲೀಸರು ದಿನಕ್ಕೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಟೀವಿ ಮಾಧ್ಯಮಗಳು ಜನರ ಅಭಿಪ್ರಾಯವನ್ನು ಆಗಲೇ ರೂಪಿಸಿ ಬಿಟ್ಟಿದ್ದುವು. ಕಿರಣ್‌ ಅವರು ‘ಜೆ.ಎನ್‌.ಯು ವಿದ್ಯಮಾನ ಕುರಿತು ನಿಮ್ಮ ಅನಿಸಿಕೆಯೇನು’ ಎಂದು ಬರ್ಖಾಗೆ ಕೇಳಿದರು. ‘ಇದರ ತೀರ್ಮಾನವನ್ನು ವಿಶ್ವವಿದ್ಯಾಲಯಕ್ಕೇ ಬಿಡಬೇಕಿತ್ತು’ ಎಂದು ಬರ್ಖಾ ಉತ್ತರಿಸಿದರು. ಕಿರಣ್‌ ಅವರು, ‘ಇಲ್ಲ. ವಿದ್ಯಾರ್ಥಿಗಳು ಹಾಗೆಲ್ಲ ಮಾಡಬಾರದಿತ್ತು.

ದೇಶದ ವಿರುದ್ಧ ಘೋಷಣೆ ಕೂಗುವುದು ಎಂದರೆ ಏನು’ ಎಂದು ಮರು ಪ್ರಶ್ನೆ ಹಾಕಿದರು; ತಮ್ಮ ತೀವ್ರ ಆತಂಕ ವ್ಯಕ್ತಪಡಿಸಿದರು. ಬರ್ಖಾ ತಮ್ಮ ನಿಲುವಿಗೆ ಬದ್ಧರಾಗಿಯೇ ಮಾತನಾಡಿದರು. ಆದರೆ, ಅವರು ಕೊಟ್ಟ ಉತ್ತರದಲ್ಲಿ ಅವರಿಗೇ ವಿಶ್ವಾಸ ಇದ್ದಂತೆ ಇರಲಿಲ್ಲ. ಅತಿ ಹೆಚ್ಚು ಜನರು ನೋಡುವ ಒಂದು ಟೀವಿ ಮಾಧ್ಯಮ ಮಾಡಿದ ಪ್ರಭಾವ ಇದು. ಕಿರಣ್‌ ಆಗಲೇ ತೀರ್ಮಾನಕ್ಕೆ ಬಂದುದಾಗಿತ್ತು. ಬರ್ಖಾಗೆ ಅದು ಸತ್ಯ ಇರಲಿಕ್ಕಿಲ್ಲ ಎಂದು ಹೇಳುವಷ್ಟು ವಿಶ್ವಾಸ ಆಗ ಇರಲಿಲ್ಲ. ಮಾಧ್ಯಮಗಳು ವರದಿ ಮಾಡಬೇಕು. ಬರೋನ್‌ ಮಾತನ್ನು ಮತ್ತೆ ಉಲ್ಲೇಖಿಸುವುದಾದರೆ, ‘ನಾವು ನಮ್ಮ ಕೆಲಸವನ್ನು ಮಾಡಬೇಕು, ಪ್ರಾಮಾಣಿಕವಾಗಿ ಮಾಡಬೇಕು. ಗೌರವಯುತವಾಗಿ ಮಾಡಬೇಕು.’ ಈಗ ನಾವು ಹಾಗೆ ಮಾಡುತ್ತಿಲ್ಲ. ನಾವು ಜನರಿಗೆ ಸಂಗತಿಯನ್ನು ಮಾತ್ರ ಕೊಡುತ್ತಿಲ್ಲ.

‘ಟೀಕು’ ಹಚ್ಚಿದ ಸಂಗತಿಯನ್ನು ಕೊಡುತ್ತಿದ್ದೇವೆ. ಒಂದು ಸುದ್ದಿಯನ್ನು ಜನರು ಹೀಗೆಯೇ ಪರಿಭಾವಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ‘ಕನ್ಹಯ್ಯ ಕುಮಾರ್‌ ಮತ್ತು ಗೆಳೆಯರು ದೇಶದ್ರೋಹದ ಘೋಷಣೆ ಕೂಗಿದ್ದಾರೆ. ಅದಕ್ಕಾಗಿ ಅವರನ್ನು ನೇಣಿಗೆ ಹಾಕಬೇಕು’ ಎಂದು ನಾವೇ ಹೇಳಿ ಬಿಡುತ್ತಿದ್ದೇವೆ. ನಿಜವಾಗಿಯೂ ಅವರು ದೇಶದ್ರೋಹದ ಘೋಷಣೆ ಕೂಗಿದರೇ? ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕಾದವರು ಪೊಲೀಸರು ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯದ ಮುಖ್ಯಸ್ಥರು. ಹೀಗೆ ತನಿಖೆ ಮಾಡಿ ವರದಿ ಕೊಡಬೇಕಾದವರ ಮಾತುಗಳನ್ನು ಕೇಳಿಸಿಕೊಳ್ಳಲೂ ನಾವು ಸಿದ್ಧರಿರುವುದಿಲ್ಲ. ಏಕೆಂದರೆ ಆಗಲೇ ನಾವು ಒಂದು ತೀರ್ಮಾನಕ್ಕೆ ಬಂದು ಬಿಟ್ಟಿರುತ್ತೇವೆ. ಇನ್ನೊಬ್ಬರ ಅಭಿಪ್ರಾಯವನ್ನು ಕೇಳಿಸಿಕೊಳ್ಳದಂಥ ಅಸಹನೆಗಿಂತ ಅಸಹಿಷ್ಣುತೆ ಇನ್ನೇನಿರಲು ಸಾಧ್ಯ?

ಇದು ಬರೀ ಕನ್ಹಯ್ಯ ಪ್ರಕರಣದಲ್ಲಿ ಮಾತ್ರ ಆಗಲಿಲ್ಲ. ಒಂದು ವರ್ಷದ ಹಿಂದೆ ಕರ್ನಾಟಕದ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢವಾಗಿ ತಮ್ಮ ಮನೆಯಲ್ಲಿ ಸತ್ತ ಸಂದರ್ಭದಲ್ಲಿ ಪ್ರಭಾವಿ ಮಾಧ್ಯಮಗಳು ಹೀಗೆಯೇ ನಡೆದುಕೊಂಡುವು. ಬೆಂಗಳೂರಿನ ಆಗಿನ ಪೊಲೀಸ್‌ ಕಮಿಷನರ್‌ ಅವರಿಗೆ ಇದ್ದ ಮೂರು ದಶಕಗಳ ವೃತ್ತಿ ಅನುಭವವನ್ನು ಕೂಡ ಅತ್ಯಂತ ತುಚ್ಛವಾಗಿ, ಟಿ.ವಿ ಸ್ಟುಡಿಯೊಗಳಲ್ಲಿ ಕುಳಿತವರು, ತಳ್ಳಿ ಹಾಕಿಬಿಟ್ಟರು. ಇಲ್ಲಿನ ಸಮಸ್ಯೆಯೇನು ಎಂದರೆ ಮಾಧ್ಯಮಗಳಲ್ಲಿ ಈಗ ಬಹಿರಂಗವಾಗಿ ವಿಚಾರಣೆ ನಡೆಯುತ್ತದೆ. ಮತ್ತು ವಿಚಾರಣೆ ಮಾಡುವ ಸ್ಥಾನದಲ್ಲಿ ತನ್ನನ್ನು ತಾನೇ ಪ್ರತಿಷ್ಠಾಪಿಸಿಕೊಂಡಿರುವ ಮಾಧ್ಯಮದ ಪ್ರತಿನಿಧಿಗಳಿಗೆ ಕನಿಷ್ಠ ಸೌಜನ್ಯವೂ ಇರುವುದಿಲ್ಲ. ಅವರ ಗಂಟಲು ಬಹಳ ದೊಡ್ಡದಾಗಿರುತ್ತದೆ.

ಅವರು ತಮಗೆ ಹೇಗೆ ಬೇಕೋ ಹಾಗೆಯೇ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ತಮಗೆ ಬೇಕಾದ ಉತ್ತರವನ್ನೇ ಪಡೆಯಲು ಬಯಸುತ್ತಾರೆ. ಭಿನ್ನ ಅಭಿಪ್ರಾಯ ಕೊಡುವವರ ಬಗೆಗೆ ಏನೋ ಕೆಟ್ಟದಾಗಿ ಮಾತನಾಡಿ ಅವರ ಬಾಯಿ ಮುಚ್ಚಿಸುತ್ತಾರೆ. ಅವರ ಧ್ವನಿ ಎಷ್ಟು ಜೋರಾಗಿ ಇರುತ್ತದೆ ಎಂದರೆ ಅವರಿಗೆ ಉತ್ತರ ಕೊಡುವವರ ಧ್ವನಿ ಕೇಳಿಸುವುದೇ ಇಲ್ಲ! ಮಾಧ್ಯಮದಲ್ಲಿ ಕೆಲಸ ಮಾಡುವವರು ಯಾವಾಗ ನ್ಯಾಯಾಧೀಶರು ಆದರು? ಅವರಿಗೆ ಆ ಅಧಿಕಾರವನ್ನು ಯಾರು ಕೊಟ್ಟರು? ಅರ್ಧ ಅಥವಾ ಒಂದು ಗಂಟೆಯಲ್ಲಿ ಇಡೀ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪು ಕೊಟ್ಟು ಹೊರಟು ಬಿಟ್ಟರೆ ಅದು ಸಮಾಜದ ಮೇಲೆ, ಅದರಲ್ಲಿ ಒಳಗೊಂಡ ವ್ಯಕ್ತಿಗಳ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂದು ನಾವು ಏಕೆ ಯೋಚಿಸುವುದಿಲ್ಲ? ಕನ್ಹಯ್ಯ ಕುಮಾರ್‌ ದೇಶದ್ರೋಹದ ಘೋಷಣೆ ಕೂಗಿಲ್ಲ ಎಂಬುದು ಹೆಚ್ಚೂ ಕಡಿಮೆ ಈಗ ಸಾಬೀತಾಗಿದೆ.

ಅವರು ಅಂಥ ಘೋಷಣೆ ಕೂಗಿದಂತೆ ತೋರಿಸುತ್ತಿದ್ದ ವಿಡಿಯೊ ಕೂಡ ಯಾರೋ ಸೃಷ್ಟಿಸಿದ್ದು ಎಂದೂ ಈಗ ಶಂಕೆ ಇದೆ. ದೆಹಲಿ ಸರ್ಕಾರ ಅಂಥ ‘ಸೃಷ್ಟಿಸಿದ ವಿಡಿಯೊ’ ಪ್ರಸಾರ ಮಾಡಿದ ಟೀವಿ ವಾಹಿನಿಗಳ ವಿರುದ್ಧ ಮೊಕದ್ದಮೆ ಹೂಡುವುದಾಗಿ ತಿಳಿಸಿದೆ.  ಕನ್ಹಯ್ಯ ಕುಮಾರ್‌ ವಿರುದ್ಧ ದೇಶದ್ರೋಹದ ಆರೋಪ ಮಾಡಿದ್ದ ಪ್ರಭಾವಿ ಟೀವಿ ವಾಹಿನಿ, ಕನ್ಹಯ್ಯ ಬಿಡುಗಡೆಯಾದ ದಿನ ಆ ಸುದ್ದಿಯನ್ನೇ ಸರಿಯಾಗಿ ಪ್ರಸಾರ ಮಾಡಲಿಲ್ಲ. ಆ ಕುರಿತು ಚರ್ಚೆಯನ್ನೂ ಮಾಡಲಿಲ್ಲ. ಆ ವಿಡಿಯೊವನ್ನು ಸೃಷ್ಟಿ ಮಾಡಿದವರು ಯಾರು ಎಂದು ಎಂಟು ಅಥವಾ ಒಂಬತ್ತು ಮಂದಿಯನ್ನು ಸ್ಟುಡಿಯೊದಲ್ಲಿ ಕೂಡ್ರಿಸಿಕೊಂಡು ಕೇಳಲಿಲ್ಲ. ಇದು ಸತ್ಯದಿಂದ ಓಡಿ ಹೋಗುವ ರೀತಿಯೇ? ಅಥವಾ ಸತ್ಯದ ಜೊತೆ ಮುಖಾಮುಖಿ ಆಗುವುದು ಅವರಿಗೆ ಬೇಡವಾಗಿದೆಯೇ? ಸತ್ಯ ಎಂಬುದು ಒಂದು ನಾಣ್ಯ. ನನಗೆ ಕಂಡುದು ಒಂದು ಮುಖ ಮಾತ್ರ ಇರಬಹುದು.

ಅದಕ್ಕೆ ಇನ್ನೊಂದು ಮುಖವೂ ಇರಬಹುದು ಎಂದು ಪರಿಶೀಲಿಸುವ ವ್ಯವಧಾನವನ್ನೇ ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ವೇಗ ಕಾರಣವಾಗಿರಬಹುದೇ? ವೇಗವಾಗಿ ಎಲ್ಲರಿಗಿಂತ ಮುಂಚೆ ಸುದ್ದಿ ಕೊಡಬೇಕು ಎಂಬ ಧಾವಂತಕ್ಕೆ ಸಿಲುಕಿ ನಾವು ಅರೆಬೆಂದ ಸುದ್ದಿಗಳನ್ನು ಕೊಡುತ್ತಿರಬಹುದೇ? ‘ವೇಗ ಮುಖ್ಯ. ಜನರು ತಮಗೆ ತಕ್ಷಣ ಸುದ್ದಿ ಸಿಗಬೇಕು ಎಂದು ಬಯಸುವುದೂ ಸಹಜವಾಗಿಯೇ ಇದೆ. ಹಾಗೆಂದು ನಾವು ಇನ್ನಷ್ಟು ಖಚಿತಪಡಿಸಿಕೊಳ್ಳುವುದನ್ನು ಅದು ತಡೆಯುತ್ತದೆ ಎಂದು ನನಗೇನೂ ಅನಿಸುವುದಿಲ್ಲ’ ಎಂದು ಬರೋನ್‌ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದರು. ಇಲ್ಲಿ ಕೇವಲ ವೇಗವಾಗಿ ಸುದ್ದಿ ಕೊಡಬೇಕು ಎಂಬ ಸಮಸ್ಯೆ ಮಾತ್ರ ಇದ್ದಂತೆ ಇಲ್ಲ. ಸುದ್ದಿಗಿಂತ ಪ್ರೈಮ್‌ ಟೈಂನಲ್ಲಿ ನಡೆಯುವ ಚರ್ಚೆ ಬಹಳ ಮುಖ್ಯವಾಗಿದೆ. ಮತ್ತು ಸುದ್ದಿಗೆ ನಾವು ಬಳಿಯುತ್ತಿರುವ ಬಣ್ಣ ಬಹಳ ಆತಂಕಕಾರಿಯಾಗಿದೆ.

ಇದು ಬರೀ ಟೀವಿ ಮಾಧ್ಯಮಗಳಲ್ಲಿ ಬರುವ ಚರ್ಚೆಯ ಬಗೆಗಷ್ಟೇ ಅಲ್ಲ. ಒಟ್ಟು ನಾವು ನಿತ್ಯ ಪ್ರಸಾರ ಮಾಡುವ ಸುದ್ದಿ ಈಗ ಬರೀ ಸುದ್ದಿಯಾಗಿಲ್ಲ. ಅದಕ್ಕೆ ಅವರವರು ತಮಗೆ ತೋಚಿದ ಬಣ್ಣವನ್ನು ಬಳಿಯುತ್ತಿದ್ದಾರೆ. ಮೈಸೂರಿನಲ್ಲಿ ಮೊನ್ನೆ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಮತ್ತು ನಂತರ ನಡೆದ ಗಲಭೆಯನ್ನು ಪತ್ರಿಕೆಗಳಲ್ಲಿ ಬಿಂಬಿಸಿದ ರೀತಿಗೆ ‘ಬಣ್ಣ ಇರಲಿಲ್ಲ’ ಎಂದು ಹೇಗೆ ಹೇಳುವುದು? ಶೀರ್ಷಿಕೆಯಲ್ಲಿಯೇ ಈ ಬಣ್ಣ ಢಾಳವಾಗಿ ಧ್ವನಿಸುತ್ತಿತ್ತು. ಡಿ.ಕೆ.ರವಿ ಅವರ ಸಾವಿನ ವರದಿ ಪ್ರಕಟಿಸಿದ ಪತ್ರಿಕೆಗಳ ಶೀರ್ಷಿಕೆಗಳಲ್ಲಿಯೂ ಇದು ಎದ್ದು ಕಾಣುತ್ತಿತ್ತು. ರಾಜ್ಯದ ಮುಖ್ಯಮಂತ್ರಿಗಳು ಮೂಢನಂಬಿಕೆ ನಿಷೇಧ ಮಸೂದೆ ತರಲು ಹೊರಟಾಗ, ಮಠಗಳ ನಿಯಂತ್ರಣ ಮಸೂದೆ ರೂಪಿಸುವುದಾಗಿ ಹೇಳಿದಾಗ ಮತ್ತು ಅದ್ದೂರಿ ಮದುವೆ ನಿಯಂತ್ರಿಸಲು ಕಾನೂನು ಸಚಿವ ಜಯಚಂದ್ರ ಉದ್ದೇಶಿಸಿದ್ದಾಗಲೂ ಇದು ಆಯಿತು.

ಬೇರೆ ಬೇರೆ ರಾಜ್ಯಗಳಲ್ಲಿಯೂ ಹೀಗೆಯೇ ಆಗುತ್ತಿರಬಹುದು. ಮೂಢ ನಂಬಿಕೆ ನಿಷೇಧದ ವಿರುದ್ಧ ಇರುವ ಮಾಧ್ಯಮಗಳ ಧ್ವನಿ ಎಷ್ಟು ಜೋರಾಗಿದೆ ಎಂದರೆ ಹಾಲಿ ಮುಖ್ಯಮಂತ್ರಿಗಳಿಗೆ ಅಂಥ ಒಂದು ಮಸೂದೆ ತರಲು ಸಾಧ್ಯವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಕಳೆದ ಹತ್ತು ಹದಿನೈದು ವರ್ಷಗಳ ಹೊಸ ವಿದ್ಯಮಾನ ಇದು. ಅದು ಸಹಜವಾದುದು ಕೂಡ. ಅದುವರೆಗೆ ಕೇಂದ್ರದಿಂದ ಎಡಕ್ಕೆ ವಾಲಿದ ಅಭಿಪ್ರಾಯ ಮಾತ್ರ ಪತ್ರಿಕೆಗಳಲ್ಲಿ ಬಿಂಬಿತವಾಗುತ್ತಿತ್ತು. ಇನ್ನೊಂದು ಅಭಿಪ್ರಾಯಕ್ಕೆ ವೇದಿಕೆಯೇ ಸಿಗುತ್ತಿರಲಿಲ್ಲ. ಸಿಕ್ಕರೂ, ಅವರ ಪ್ರಕಾರ, ಅದಕ್ಕೆ ಎಷ್ಟು ಜಾಗ ಸಿಗಬೇಕೋ ಅಷ್ಟು ಜಾಗ ಸಿಗುತ್ತಿರಲಿಲ್ಲ. ಈಗ ಕೇಂದ್ರದಿಂದ ಬಲಕ್ಕೆ ವಾಲಿರುವ ಅಭಿಪ್ರಾಯ ಬಿಂಬಿಸಲು ಬಹುದೊಡ್ಡ ವೇದಿಕೆ ದೊರೆತಿದೆ. ಇದು ಬರೀ ಟೀವಿ ಮತ್ತು ಪತ್ರಿಕೆಗಳಿಗೆ ಮಾತ್ರ ಸೀಮಿತವಾದ ಮಾತೂ ಅಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಈಗ ಕೇಳುತ್ತಿರುವುದು ಬಹುಪಾಲು ಬಲಪಂಥೀಯ ಧ್ವನಿ. ಅವರು ಆ ಮಾಧ್ಯಮವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಹಿಷ್ಣುತೆಯ ವಿವಾದ ಹುಟ್ಟಿಕೊಂಡಾಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಕಥೆಗಳು ನಮಗೆ ನೆನಪು ಇವೆಯೇ? ಬೆಂಗಳೂರಿನ ಯಾರೋ ಒಬ್ಬ ಮುಸ್ಲಿಂ ದಂತವೈದ್ಯೆ, ‘ಈ ದೇಶದಲ್ಲಿ ಇರುವಷ್ಟು ಸಹಿಷ್ಣುತೆ ಬೇರೆಲ್ಲೂ ಇಲ್ಲ’ ಎಂದು ದೊಡ್ಡ ಕಥೆಯನ್ನೇ ಬರೆದಿದ್ದರು. ಅದು ನಿಜ ಇರಬಹುದೇ? ಸುಳ್ಳೂ ಇರಬಹುದಲ್ಲ! ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಎನ್‌.ಆರ್‌.ನಾರಾಯಣಮೂರ್ತಿಯವರು ಹೇಳಿದರು ಎನ್ನಲಾದ ಪ್ರಶಂಸೆಯ ಮಾತುಗಳು ಕೂಡ ಅದೇ ಸಮಯದಲ್ಲಿ ಅದೇ ಮಾಧ್ಯಮದಲ್ಲಿ ಹರಿದಾಡುತ್ತಿದ್ದುವು. ಮೂರ್ತಿ, ಅದು ತಮ್ಮ ಹೇಳಿಕೆ ಅಲ್ಲ ಎಂದು ಸ್ಪಷ್ಟೀಕರಣ ನೀಡಿದರು!

ಅಮೆರಿಕದಲ್ಲಿಯೂ ಇಂಥದೇ ವಿದ್ಯಮಾನ. ಬರೋನ್‌ ಅವರು ಸಂದರ್ಶನದಲ್ಲಿ ಹೇಳಿದ್ದಾರೆ : ‘ಮಾಧ್ಯಮ ವಲಯದಲ್ಲಿ ಆಗುತ್ತಿರುವ ಈಗಿನ ಈ ವಿದ್ಯಮಾನ ತೀವ್ರ ಆತಂಕ ಹುಟ್ಟಿಸುವಂಥದು. ಏಕೆಂದರೆ ಸಮಾನಾಂತರವಾದ ಒಂದು ಮಾಧ್ಯಮವೇ ಅಲ್ಲಿ ಸೃಷ್ಟಿಯಾಗುತ್ತಿದೆ. ಅನೇಕ ಜಾಲತಾಣಗಳಿಗೆ ಜನರು ಪೂರ್ವನಿರ್ಧರಿತ ದೃಷ್ಟಿಯಿಂದಲೇ ಹೋಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅವರನ್ನು ಸುಳ್ಳು ಹೇಳುವ, ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ತಾಣಗಳು ಸೆಳೆಯುತ್ತಿವೆ. ಇದನ್ನೆಲ್ಲ ಜನರು ನಂಬುತ್ತಿದ್ದಾರೆ. ಏಕೆಂದರೆ ಅದು ಅವರ ಅನಿಸಿಕೆಗಳಿಗೆ ಪೂರಕವಾಗಿದೆ. ಇದು ನಮ್ಮ ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅತ್ಯಂತ ಆತಂಕದ ಸಂಗತಿ. ಮೊದಲು, ಸಂಗತಿಗಳ ಬಗೆಗೆ ಎಲ್ಲರಿಗೂ ಒಪ್ಪಿಗೆ ಇರುತ್ತಿತ್ತು. ಮತ್ತು ಆ ಸಂಗತಿ ಇಟ್ಟುಕೊಂಡು ವಿಶ್ಲೇಷಿಸುವ ರೀತಿಯ ಬಗೆಗೆ ಭಿನ್ನಾಭಿಪ್ರಾಯ ಇರುತ್ತಿತ್ತು. ಈಗ ಏನಾಗಿದೆ ಎಂದರೆ ಸಂಗತಿಗಳ ಬಗೆಗೇ ಸಮ್ಮತಿ ಇಲ್ಲದಂತೆ ಆಗಿದೆ.’ 

ಅಂದರೆ ನಾವು ತೀವ್ರ ಬಿಕ್ಕಟ್ಟಿನ ಕಾಲದಲ್ಲಿ ಇದ್ದೇವೆ ಎಂದು ಅರ್ಥ. ಇದಕ್ಕೆ ಜನರು ಹೊಣೆಯೇ ಅಥವಾ ನಾವು ಹೊಣೆಯೇ? ಜನರಿಗೆ ಏನು ಬೇಕೋ ಅದನ್ನು ನಾವು ಕೊಡಬೇಕೇ ಅಥವಾ ಅವರಿಗೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಿಖರವಾಗಿ ಕೊಡುತ್ತ ಸಂಪಾದಕೀಯದಲ್ಲಿ ವಿವರಿಸಿ, ವಿಶ್ಲೇಷಿಸಿ ಹೇಳಬೇಕೇ? ಅಂದರೆ ಸಂಗತಿಯ ಪಾವಿತ್ರ್ಯ ಉಳಿಸಿಕೊಂಡು ವಿಶ್ಲೇಷಣೆಯ ಹಕ್ಕನ್ನು ನಾವು ನಿಷ್ಪಕ್ಷಪಾತವಾಗಿ ಚಲಾಯಿಸಬೇಕೇ? ಆಗಲೂ ‘ನಿಷ್ಪಕ್ಷಪಾತ’ ಎನ್ನುವುದು ಸಾಪೇಕ್ಷವಾಗಿಯೇ ಕಾಣುವ ಅಪಾಯ ಇರುತ್ತದೆ. ಏಕೆಂದರೆ ಸತ್ಯಕ್ಕೆ ಎರಡು ಮುಖಗಳು ಇವೆ. ತಾನು ಕಂಡ ಮುಖವೇ ಸತ್ಯವಾದುದು ಎಂದು ಹೇಳುವವರ ಧ್ವನಿ ಸದ್ಯಕ್ಕಂತೂ ಜೋರಾಗಿದೆ. ವಿಶ್ವಾಸಾರ್ಹತೆ ಎನ್ನುವುದು ಎಷ್ಟು ದುಬಾರಿ ಸಂಗತಿಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT