ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮುಲ ನೆನಪಿನಲ್ಲಿ ಒಂದೆರಡು ಮಾತು...

Last Updated 16 ಜೂನ್ 2018, 9:14 IST
ಅಕ್ಷರ ಗಾತ್ರ

ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇಕಡ 25ರಷ್ಟಕ್ಕಿಂತ ಹೆಚ್ಚಿದೆ ಎಂಬುದನ್ನು 2011ರ ಜನಗಣತಿ ತೋರಿಸಿದೆ. ಇದರಲ್ಲಿ ಶೇಕಡ 16.6ರಷ್ಟು ಜನ ದಲಿತರು, ಶೇಕಡ 8.6ರಷ್ಟು ಜನ ಆದಿವಾಸಿಗಳು. ದಲಿತ ಮತ್ತು ಆದಿವಾಸಿ ಎಂಬುದು ಈ ಸಮುದಾಯಗಳ ಜನರನ್ನು ಕರೆಯುವ ಬೇರೆ ಹೆಸರುಗಳು. ಇವರನ್ನು ಬ್ರಿಟಿಷರು ಅಸ್ಪೃಶ್ಯರು ಮತ್ತು ಬುಡಕಟ್ಟು ಜನರು ಎಂದು ಕರೆದಿದ್ದರು.

ದೇಶದ ಒಟ್ಟು ಜನಸಂಖ್ಯೆಯ ನಾಲ್ಕನೆಯ ಒಂದು ಭಾಗವೆಂದರೆ, 30 ಕೋಟಿ ಜನ ಎಂದರ್ಥ. ಇಷ್ಟು ಜನ ಸೇರಿ ಒಂದು ರಾಷ್ಟ್ರ ನಿರ್ಮಿಸಿಕೊಂಡಿದ್ದರೆ, ಅದು ಜಗತ್ತಿನಲ್ಲಿ ನಾಲ್ಕನೆಯ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಆಗುತ್ತಿತ್ತು. ಚೀನಾ, ಭಾರತ ಮತ್ತು ಅಮೆರಿಕ ಮೊದಲ ಮೂರು ಸ್ಥಾನಗಳಲ್ಲಿ ಇರುತ್ತಿದ್ದವು. ಇಷ್ಟಿದ್ದರೂ ದೈಹಿಕ ಶ್ರಮವನ್ನು ಹೆಚ್ಚಾಗಿ ಬಯಸದ, ಬುದ್ಧಿಮತ್ತೆ ಆಧರಿಸಿದ  ಅರ್ಥವ್ಯವಸ್ಥೆಯಲ್ಲಿ ಈ ಸಮುದಾಯದ ಜನ ಅಷ್ಟಾಗಿ ಕಾಣಿಸುವುದಿಲ್ಲ.

ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇಲ್ಲದಿರುವುದು ಮತ್ತು ಈ ಸಮುದಾಯಗಳಿಗೆ ಲಾಗಾಯ್ತಿನಿಂದಲೂ ನೌಕರಿ ಸೇರುವ ಅವಕಾಶ ದಕ್ಕದಿರುವುದು ಇದಕ್ಕೆ ಕಾರಣ. ಇದನ್ನು ಸರಿಪಡಿಸಲು ಯತ್ನಿಸಿದ ಸಂವಿಧಾನ ಈ ಸಮುದಾಯಗಳಿಗೆ ಶಿಕ್ಷಣ ಮತ್ತು ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ನೀಡಿತು.

ಆದರೆ, ಮೀಸಲಾತಿ ಬಗ್ಗೆ ನಮ್ಮ ನಗರಗಳ ಮಧ್ಯಮ ವರ್ಗದ ಜನರಲ್ಲಿ (ಅಂದರೆ, ಮೇಲ್ಜಾತಿಯ ಜನ) ತಮ್ಮನ್ನು ತಾರತಮ್ಯದ ದೃಷ್ಟಿಯಿಂದ ನೋಡಲಾಗುತ್ತಿದೆ, ತಮ್ಮ ‘ಪ್ರತಿಭೆ’ಯನ್ನು ಬಲಿಕೊಡಬಾರದು ಎಂಬ ಭಾವನೆ ಬೆಳೆದಿದೆ.

ಯಾವುದೇ ಪ್ರಮುಖ, ನಗರ ಕೇಂದ್ರಿತ, ಬೌದ್ಧಿಕ ಶ್ರಮ ಮಾತ್ರ ಬೇಡುವ ಕಚೇರಿಗಳಲ್ಲಿ ದಲಿತರನ್ನು ಕಾಣುವ ಸಾಧ್ಯತೆ ಇರುವುದು ಸ್ವಚ್ಛತಾ ಕೆಲಸ ಮಾಡುವ ಗುಂಪಿನಲ್ಲಿ ಮಾತ್ರ. ಈ ವಾಸ್ತವದ ಬಗ್ಗೆ ಇಂಥ ಸಂಸ್ಥೆಗಳಿಗೆ ನಾಚಿಕೆಯ ಲವಲೇಶವೂ ಇಲ್ಲ. ಇಂಥ ಸಂಗತಿಗಳ ಬಗ್ಗೆ ಅವು ತಲೆಕೆಡಿಸಿಕೊಳ್ಳುವುದೂ ಇಲ್ಲ. ನಮ್ಮ ಮಾಧ್ಯಮಗಳು ಮತ್ತು ನಮ್ಮ ಅರ್ಥವ್ಯವಸ್ಥೆ ದಲಿತರು ಮತ್ತು ಆದಿವಾಸಿಗಳನ್ನು ಮೂಲೆಗೆ ತಳ್ಳಿವೆ.

ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದರಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ನಾನು ಇವನ್ನೆಲ್ಲ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಬಂದ ಒತ್ತಡದ ಕಾರಣ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರಹಾಕಲಾಯಿತು. ಈ ವಿದ್ಯಾರ್ಥಿಗಳು ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಜೊತೆ ಮರಣದಂಡನೆ ವಿಚಾರದಲ್ಲಿ ಜಗಳವಾಡಿದ್ದರು.

ಈ ಜಗಳದ ಕಾರಣ, ಕೇಂದ್ರ ಸಚಿವರೊಬ್ಬರು, ಶಿಕ್ಷಣದ ಉಸ್ತುವಾರಿ ಹೊತ್ತಿರುವ ಇನ್ನೊಬ್ಬ ಸಚಿವರಿಗೆ ಪತ್ರ ಬರೆದು, ಈ ವಿದ್ಯಾರ್ಥಿಗಳು ರಾಷ್ಟ್ರವಿರೋಧಿಗಳು ಮತ್ತು ಜಾತಿವಾದಿಗಳು (ದಲಿತರನ್ನು ಜಾತಿವಾದಿಗಳು ಎಂದು ಕರೆಯುವುದು ಸ್ವಲ್ಪ ವಿಚಿತ್ರವಾಗಿ ಕಾಣುತ್ತಿದೆ) ಎಂದು ಕರೆದಿದ್ದರು.

ಪತ್ರ ಸ್ವೀಕರಿಸಿದ ಸಚಿವರು, ಅಂದರೆ ಸ್ಮೃತಿ ಇರಾನಿ ಅವರು, ಈ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕೆಲವೇ ದಿನಗಳ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ನಾಲ್ಕು ಪತ್ರ ಬರೆದರು. (ತನಗೆ ಸಂಬಂಧಿಸಿದ ಬೇರೆ ಕೆಲಸಗಳ ಬಗ್ಗೆಯೂ ಈ ಸಚಿವಾಲಯ ಇಷ್ಟೇ ತ್ವರಿತವಾಗಿ ಕೆಲಸ ಮಾಡುತ್ತದೆಯೇ?!) ಒತ್ತಡದ ಪರಿಣಾಮವಾಗಿ ಈ ವಿದ್ಯಾರ್ಥಿಗಳು ತಾವು ವಾಸಮಾಡುತ್ತಿದ್ದ ನೆಲೆ ಮತ್ತು ತಮಗೆ ಬರುತ್ತಿದ್ದ ಹಣಕಾಸಿನ ನೆರವು ಕಳೆದುಕೊಂಡರು.

ರೋಹಿತ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಪತ್ರಕ್ಕೊಂದು ದೊಡ್ಡ ಘನತೆ ಇದೆ. ಸಾಕ್ರೆಟಿಸ್‌ ಸಾಯುವ ವೇಳೆ, ‘ಆಸ್ಕ್ಲೆಪಿಯಸ್ ದೇವರಿಗೆ ನನ್ನಿಂದ ಕೊಡಬೇಕಿರುವುದನ್ನು ಕೊಟ್ಟುಬಿಡಿ’ ಎನ್ನುತ್ತಾನೆ. ಅದೇ ರೀತಿ, ರೋಹಿತ್‌ ಕೂಡ ತಾನು ಪಡೆದಿರುವ ₹ 40 ಸಾವಿರ ಸಾಲವನ್ನು ಮರಳಿಸಿ ಎಂದು ಸ್ನೇಹಿತರನ್ನು ಕೋರಿದ್ದಾನೆ.

ತಾನು ಮಾಡಿರುವ ಕೆಲಸಕ್ಕೆ ತನ್ನ ‘ಶತ್ರು’ಗಳನ್ನು ಹೊಣೆ ಮಾಡಬಾರದು ಎಂದೂ ರೋಹಿತ್ ಹೇಳಿದ್ದಾನೆ. ಆದರೆ, ನಡೆದಿರುವ ಘಟನಾವಳಿಗಳನ್ನು ಗಮನಿಸಿದರೆ ಆತ ಯಾಕೆ ಸತ್ತ ಎಂಬ ಬಗ್ಗೆ ಅನುಮಾನವೇ ಇರುವುದಿಲ್ಲ. ಅವಮಾನ, ಅಸಹಾಯಕತೆ ಮತ್ತು ಹಣವನ್ನು ನಿರಾಕರಿಸಿದ ಕಾರಣ ಆತ ಆತ್ಮಹತ್ಯೆ ಮಾಡಿಕೊಂಡ.

ವಿಷಯ ಇಷ್ಟು ಸ್ಪಷ್ಟವಾಗಿರುವ ಕಾರಣ ಇದು ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಸಾವಿನ ಉದ್ದೇಶ ಸುದ್ದಿ ಮಾಡುವುದಲ್ಲವಾದರೂ, ಇದು ದೊಡ್ಡ ಸುದ್ದಿಯಾಗಿದೆ. ಗೋಮಾಂಸ ಸೇವನೆ ಮತ್ತು ಮರಣದಂಡನೆಯನ್ನು ಇದುವರೆಗಿನ ಚರ್ಚೆಗಳಲ್ಲಿ ತೀರಾ ಸರಳವಾಗಿ ಕಾಣಲಾಗುತ್ತಿತ್ತು. ಇದು ಹಿಂದೂ ಬಹುಸಂಖ್ಯಾತರು ಹಾಗೂ ಮುಸ್ಲಿಂ, ಉದಾರವಾದಿಗಳ ನಡುವಿನ ಸಂಘರ್ಷ ಎಂಬಂತೆ ಕಾಣಲಾಗುತ್ತಿತ್ತು.

ಗೋಮಾಂಸ ಸೇವನೆ ಮತ್ತು ಮರಣದಂಡನೆ ವಿಚಾರದಲ್ಲಿ ಹಿಂದೂ ಅಭಿಪ್ರಾಯ ಏಕರೂಪದಲ್ಲಿ ಇಲ್ಲ ಎಂಬುದು  ಹೈದರಾಬಾದ್‌ ಘಟನೆಯಿಂದ ಗೊತ್ತಾಗಿದೆ. ಈ ಎರಡು ವಿಚಾರಗಳಲ್ಲಿ ಮೇಲ್ಜಾತಿಗಳ ಅಭಿಪ್ರಾಯವನ್ನೇ ಉಳಿದ ಎಲ್ಲರ ಮೇಲೆ ಹೇರಲು ಯತ್ನಿಸಲಾಗುತ್ತಿದೆ.

ಗೋಮಾಂಸ ಸೇವನೆ ಬಗ್ಗೆ ಹಿಂದೂ ಮೇಲ್ಜಾತಿಗಳಲ್ಲಿ ಇರುವ ಅಸಹನೆ ದಲಿತರು ಮತ್ತು ಆದಿವಾಸಿಗಳಲ್ಲಿ ಇಲ್ಲ. ಪ್ರಜಾಪ್ರಭುತ್ವ ಜಗತ್ತಿನ ಬಹುಪಾಲು ಜನ ಮರಣದಂಡನೆಯನ್ನು ವಿರೋಧಿಸುತ್ತಿದ್ದಾರೆ. ನ್ಯಾಯದಾನದ ಹೆಸರಿನಲ್ಲಿ ತನ್ನದೇ ನಾಗರಿಕರನ್ನು ಕೊಲ್ಲುವ ರಾಷ್ಟ್ರಗಳು ಕೆಲವೇ ಕೆಲವು.

ರೋಹಿತ್‌ನ ತ್ಯಾಗದಿಂದ ಮೂರನೆಯ ಆಯಾಮವೊಂದು ಹೊರಬರುತ್ತದೆ ಎಂಬುದು ನನ್ನ ಆಶಯ. ಕಾರ್ಪೊರೇಟ್‌ ಜಗತ್ತು ಮತ್ತು ಖಾಸಗಿ ವಲಯವು ತನ್ನ ಕಚೇರಿಗಳಲ್ಲಿರುವ ರಾಕ್ಷಸಿ, ಜನಾಂಗೀಯ ತಾರತಮ್ಯದಂತಹ ಪದ್ಧತಿಯನ್ನು ಗಮನಿಸುತ್ತದೆ ಎಂಬ ಭರವಸೆ ಇದೆ. ಇನ್ನೊಬ್ಬರಿಗೆ ಅವಕಾಶಗಳನ್ನು ನಿರಾಕರಿಸಿದ ಕಾರಣಕ್ಕೆ, ಮೇಲ್ಜಾತಿಯ ನಮಗೆ ತೀರಾ ಸುಲಭವಾಗಿ ಕೆಲವು ಕೆಲಸಗಳು ದಕ್ಕಿವೆ.

ಶಿಕ್ಷಣ ಮತ್ತು ನೌಕರಿಯಲ್ಲಿ ಭಾರತದಲ್ಲಿ ಸಮಾನ ಅವಕಾಶಗಳಿವೆ ಎಂಬುದು ಸುಳ್ಳು. ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡುವುದರಿಂದ ನಮ್ಮ ಕಚೇರಿಗಳು ಹೆಚ್ಚು ವೈವಿಧ್ಯವಿರುವ ತಾಣಗಳಾಗುತ್ತವೆ.

ಮಧ್ಯಮ ವರ್ಗದವರು ಮತ್ತು ಕಾರ್ಪೊರೇಟ್‌ ಜಗತ್ತಿನಲ್ಲಿರುವವರಿಗೆ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಬೇಕು. ಜಗತ್ತಿನಲ್ಲಿ ನಾಲ್ಕನೆಯ ಅತಿದೊಡ್ಡ ರಾಷ್ಟ್ರವಾಗುವ ಸಾಮರ್ಥ್ಯ ಇರುವ ಒಂದು ಸಮುದಾಯದವರ ಪ್ರಗತಿಯನ್ನು ತಡೆಹಿಡಿದೂ, ಭಾರತ ನಿಜ ಅರ್ಥದಲ್ಲಿ ಅಭಿವೃದ್ಧಿ ಸಾಧಿಸುವುದು ಸಾಧ್ಯವಿಲ್ಲ. ಭಾರತದ ಬಡತನ, ದಾರಿದ್ರ್ಯ ಕೊನೆಯಾಗಬೇಕು ಎಂದಾದರೆ ಈ ಸಮುದಾಯಗಳ ಏಳ್ಗೆ ಆಗಲೇಬೇಕು. ನಮ್ಮ ವಿಚಾರಧಾರೆ, ಸೈದ್ಧಾಂತಿಕ ಹಿನ್ನೆಲೆ ಏನೇ ಇರಬಹುದು. ನಾವೆಲ್ಲರೂ ಅವರ ಏಳ್ಗೆಯನ್ನು ಬಯಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT