ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ ಮೇಲೆ ಹೆಚ್ಚುತ್ತಿರುವ ದಾಳಿ

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಕಳೆದ ವಾರ ಡಾ.ನರೇಂದ್ರ ದಾಭೋಲಕರ ಅವರನ್ನು ಹತ್ಯೆ ಮಾಡಲಾಗಿದೆ. ಇದು, ವೈಚಾರಿಕತೆ ಮೇಲೆ ನಡೆದಿರುವ ದಾಳಿ. 69 ವರ್ಷದ ದಾಭೋಲಕರ ಅವರು ಮೂಢನಂಬಿಕೆಗಳನ್ನು ವಿರೋಧಿಸಿದವರು. `ಬ್ಲ್ಯಾಕ್ ಮ್ಯಾಜಿಕ್' ದೇವ ಮಾನವರ ಪವಾಡಗಳನ್ನು ಬಯಲಿಗೆಳೆದವರು. ಇದರಿಂದಾಗಿ ಬಹಳ ಮಂದಿಯ ಶತ್ರುತ್ವ ಕಟ್ಟಿಕೊಂಡರು. ಪ್ರವೇಶ ನಿಷಿದ್ಧವಾಗಿದ್ದ ಅಹಮದ್ ನಗರದ ದೇವಾಲಯವೊಂದಕ್ಕೆ ಮಹಿಳೆಯರನ್ನು ನುಗ್ಗಿಸಲು ಪ್ರಯತ್ನಿಸಿದರು. ಹದಿಮೂರು ವರ್ಷಗಳ ಹಿಂದೆ ಮಾಡಿದ ಸಾಹಸಕ್ಕೆ ಬಿಜೆಪಿ, ಶಿವಸೇನೆ ಕಾರ್ಯಕರ್ತರು ಅಡ್ಡಿಯಾದರು. ಬಳಿಕ ವಿವಾದ ಮುಂಬೈ ಹೈಕೋರ್ಟ್ ಮೆಟ್ಟಿಲೇರಿತು. ಪ್ರಕರಣ ಇತ್ಯರ್ಥವಾಗುವ ಮೊದಲೇ ಕಿಡಿಗೇಡಿಗಳ ಗುಂಡಿಗೆ ದಾಭೋಲಕರ ಬಲಿಯಾದರು.

ಶಬರಿಮಲೆ ಸೇರಿದಂತೆ ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಇವೊತ್ತಿಗೂ ಪ್ರವೇಶವಿಲ್ಲ. ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಮಹಿಳೆಯರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಕೇರಳದಲ್ಲೂ ಕೇಳಿಬಂದಿದೆ. ಅದೂ ಕನ್ನಡದ ಹಿರಿಯ ನಟಿ ಜಯಮಾಲಾ ಅವರು ಶಬರಿಮಲೆಗೆ ಹೋಗಿ ಬಂದ ಮೇಲೆ. ಇದಕ್ಕೆ ಸಂಪ್ರದಾಯವಾದಿಗಳಿಂದ ಬಲವಾದ ವಿರೋಧ ಬಂದಿದೆ. ಈ ವಿವಾದ ಸುಪ್ರೀಂ ಕೋರ್ಟ್ ಮುಂದಿದೆ.ಎಲ್‌ಡಿಎಫ್ ಸರ್ಕಾರ ಮಹಿಳೆಯರ ಪ್ರವೇಶ ಕುರಿತು ಪ್ರಮಾಣ ಪತ್ರ ಸಲ್ಲಿಸಿದೆ. ವಿವಾದ ಅಷ್ಟಕ್ಕೇ ನಿಂತಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾವಂತರು, ಎಡಪಂಥೀಯ ಸಿದ್ಧಾಂತದ ಬಗ್ಗೆ ಒಲವಿರುವ ರಾಜ್ಯದಲ್ಲೇ ಮಹಿಳೆಯರಿಗೆ ಅವಕಾಶ ನಿರಾಕರಿಸಲಾಗಿದೆ. 

ಜನರ ಆಚಾರ- ವಿಚಾರಗಳಿಗೆ ಇದೊಂದು ಉದಾಹರಣೆ ಅಷ್ಟೇ. ಇಂಥ ನೂರಾರು ನಂಬಿಕೆಗಳಿವೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ `ಮಡೆಸ್ನಾನ' ದೇಶದಲ್ಲೇ  ಸುದ್ದಿ ಮಾಡಿದೆ. ಬ್ರಾಹ್ಮಣರು ಉಂಡೆದ್ದ ಎಲೆ ಮೇಲೆ ಕೆಳಜಾತಿ ಜನ ಉರುಳಾಡುತ್ತಾರೆ. ಹೀಗೆ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎನ್ನುವ ನಂಬಿಕೆ. ಮೊದಲು ಮಲೆ ಕುಡಿಯರು ನಡೆದುಕೊಳ್ಳುತ್ತಿದ್ದರು. ಈಗ ಬೇರೆ ಜಾತಿಗಳವರು ಅನುಕರಿಸುತ್ತಿದ್ದಾರೆ. ಹಿಂದಿದ್ದ ಬಿಜೆಪಿ ಸರ್ಕಾರ ಮಡೆ ಸ್ನಾನ ನಿಷೇಧಿಸಲಿಲ್ಲ. ಜನರ ನಂಬಿಕೆಗೆ ಅಡ್ಡಿ ಮಾಡುವುದಿಲ್ಲ ಎಂದು ಸಬೂಬು ಹೇಳಿತು. ವೈಚಾರಿಕತೆ ಹಿನ್ನೆಲೆಯಿಂದ ಬಂದಿರುವ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡುವರೋ?
ದೇವರು, ಧರ್ಮದ ಹೆಸರಿನಲ್ಲಿ ಅತೀ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವ ಸಮುದಾಯ ಯಾವುದಾದರೂ ಇದ್ದರೆ ಅದು ಮಹಿಳೆಯರು.

ಬಿಟ್ಟರೆ ದಲಿತರು-ಕೆಳ ಜಾತಿಯವರು. ಹಿಂದೆ ನಡೆಯುತ್ತಿದ್ದ ಸತಿ ಸಹಗಮನವೇ ಆಗಿರಬಹುದು ಅಥವಾ ಮುತ್ತು ಕಟ್ಟುವ ದೇವದಾಸಿ ಪದ್ಧತಿಯೇ ಇರಬಹುದು ಇಲ್ಲವೇ ಚಂದ್ರಗುತ್ತಿಯ ಬೆತ್ತಲೆ ಸೇವೆ ಇರಬಹುದು. ದೇಶದ ಯಾವುದೇ ಭಾಗದಲ್ಲಿ ನಡೆಯುವ ಇಂತಹ ಯಾವುದೇ ಆಚರಣೆಯಾದರೂ ಶೋಷಿತರು ಇವರೇ. ಒಂದೇ ಒಂದು ಸಮಾಧಾನವೆಂದರೆ ಮೂಢನಂಬಿಕೆ ಬೆಂಬಲಿಸುವ ಜನರು ಇರುವಂತೆಯೇ ವಿರೋಧಿಸುವ ಹಾಗೂ ಪ್ರಶ್ನೆ ಮಾಡುವ ಪ್ರಜ್ಞಾವಂತರೂ ಇದ್ದಾರೆ.

ಆದರೆ, ಆಚಾರ, ವಿಚಾರಗಳನ್ನು ಪ್ರಶ್ನೆ ಮಾಡುವವರ ಬಗ್ಗೆ ಒಂದು ರೀತಿ ಅಸಹನೆ ಬೆಳೆಯುತ್ತಿದೆ. ಇದು ಅಭಿಪ್ರಾಯ- ಭಿನ್ನಾಭಿಪ್ರಾಯ, ವೈಚಾರಿಕ ಸಂಘರ್ಷದ ಮಟ್ಟದಲ್ಲೇ ಉಳಿದರೆ ಅಭ್ಯಂತರವಿಲ್ಲ. ಆದರೆ, ದೈಹಿಕವಾಗಿ ಮುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಮಹಾರಾಷ್ಟ್ರದ ವೈದ್ಯ ದಾಭೋಲಕರ ಮಾಡಿದ ತಪ್ಪೆಂದರೆ, ಅನಿಷ್ಟವಾದ ಸಾಮಾಜಿಕ ಪದ್ಧತಿ ನಿಷೇಧಿಸುವ ಕಾನೂನು ಜಾರಿಗೊಳಿಸುವಂತೆ ಒತ್ತಡ ಹೇರಿದ್ದು. ಮಹಾರಾಷ್ಟ್ರ ಸರ್ಕಾರಕ್ಕೀಗ ಜ್ಞಾನೋದಯವಾಗಿದೆ. ಕಾನೂನು ಜಾರಿಗೆ ಮುಂದಾಗಿದೆ. ಹಿಂದೆಯೇ ಈ ಕೆಲಸ ಮಾಡಬಹುದಿತ್ತು.

`ದೇವಮಾನವರು ಎಂದು ಕರೆದುಕೊಳ್ಳುವವರ ಬಣ್ಣ ಬಯಲು ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಶ್ರೀಲಂಕಾದ ವಿಚಾರವಾದಿ ಅಬ್ರಹಾಂ ಕೋವೂರ್, ವಿಚಾರವಾದಿ  ಎಚ್. ನರಸಿಂಹಯ್ಯ ಅವರು ಸಾಯಿಬಾಬಾ ಅವರನ್ನೇ ಮೈಮೇಲೆ ಎಳೆದುಕೊಂಡರು. ಪವಾಡಗಳನ್ನು ವೈಜ್ಞಾನಿಕ ನೆಲೆಯಲ್ಲಿ ಮಂಡಿಸುವಂತೆ ಸವಾಲೆಸೆದರು. ಇಷ್ಟಾದರೂ ಇವರು ಪರಸ್ಪರ ಕತ್ತಿ ಮಸೆಯಲಿಲ್ಲ. ದ್ವೇಷ ಸಾಧಿಸಲಿಲ್ಲ. ಕೋವೂರ್, ನರಸಿಂಹಯ್ಯ ಅವರ ಹಿಂದೆ ಬಾಬಾ ಗೂಂಡಾಗಳನ್ನು ಬಿಡಲಿಲ್ಲ. ಅವರ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯ ಮಾತ್ರವಿತ್ತು. ಬೂದಿ ಕೊಡುವ ಬಾಬಾ ಅವರೇ ನೀವು ನಿಜವಾಗಿ ಪವಾಡ ಪುರುಷರಾಗಿದ್ದರೆ ಕುಂಬಳಕಾಯಿ ಕೊಡಿ ಎಂದು ಕಾಲೆಳೆದಿದ್ದರು. ಪ್ರಶ್ನೆ ಮಾಡದೆ ಏನನ್ನೂ ಒಪ್ಪಬೇಡಿ ಎಂದು ಡಾ.ಎಚ್ಚೆನ್ ಹೇಳುತ್ತಿದ್ದರು.

ಕೋವೂರ್, ಸಾಯಿಬಾಬಾ ಅವರನ್ನು ಖುದ್ದಾಗಿ ಕಾಣಲು ಒಮ್ಮೆ ಪುಟ್ಟಪರ್ತಿಗೆ ಹೋಗಿದ್ದರಂತೆ. ಬರುವ ವಿಷಯವನ್ನು ಆಶ್ರಮ ಸಿಬ್ಬಂದಿಗೆ ಮೊದಲೇ ತಿಳಿಸಿದ್ದರಂತೆ. ವಿಚಾರವಾದಿಯಿಂದ ತಪ್ಪಿಸಿಕೊಳ್ಳಲು ಬಾಬಾ ವೈಟ್‌ಫೀಲ್ಡ್ ಆಶ್ರಮಕ್ಕೆ ಹೋಗಿ ಕುಳಿತರಂತೆ. ಕೋವೂರ್‌ಗೆ ಕಣ್ಣುತಪ್ಪಿಸಿದ್ದು ಬಾಬಾ ಅವರ ಬುದ್ಧಿವಂತಿಕೆ ಅಂತಲೂ ಹೇಳಬಹುದು! ಬಹುಶಃ ಸಂಘರ್ಷ ಬೇಡವೆಂದು ಪಲಾಯನ ಮಾಡಿರಬಹುದೇನೊ?

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಆರ್.ವಿ.ಎಸ್. ಸುಂದರಂ, ಬಾಬಾ ಅವರ ಪವಾಡಗಳನ್ನು ಕ್ಯಾಂಪಸ್‌ನಲ್ಲಿ ಪ್ರದರ್ಶಿಸುತ್ತಿದ್ದರು. ಶೂನ್ಯದಿಂದ (ಬರಿಗೈಯಲ್ಲಿ) ಬೂದಿ ತೆಗೆದು ಕೊಡುತ್ತಿದ್ದರು. ಬಳಿಕ ಬೂದಿ ಹೇಗೆ ಬಂತು ಎನ್ನುವ ಗುಟ್ಟು ಬಿಡಿಸುತ್ತಿದ್ದರು. ಪವಾಡಗಳನ್ನು ಬಯಲು ಮಾಡಲು ಮೈಸೂರಿನಲ್ಲಿ `ವಿಚಾರವಾದಿ ಒಕ್ಕೂಟವೇ' ಹುಟ್ಟಿಕೊಂಡಿತ್ತು. ಪ್ರೊ.ರಾಮದಾಸ್, ರಾಮಲಿಂಗಂ, ಶಿವರಾಮು ಕಾಡನಕುಪ್ಪೆ, ಡಾ.ಹಿ.ಶಿ ರಾಮಚಂದ್ರೇಗೌಡ, ಬಂಜಗೆರೆ ಜಯಪ್ರಕಾಶ್, ಕೇಶವ ಪ್ರಸಾದ್, ಮೊಗಳ್ಳಿ ಗಣೇಶ್ ಸೇರಿದಂತೆ ಅನೇಕರು ಒಕ್ಕೂಟದಲ್ಲಿ ಇದ್ದರು. ಪವಾಡಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಸತ್ಯಾಸತ್ಯತೆ ವರದಿ ಬಿಡುಗಡೆ ಮಾಡುತ್ತಿದ್ದರು. ಇವರ ವಿಚಾರಗಳನ್ನು ಒಪ್ಪದವರೂ ಇವರನ್ನು ಗೌರವದಿಂದ ಕಾಣುತ್ತಿದ್ದರು.

ಮಲೆನಾಡಿನ ಮತ್ತೊಬ್ಬ ವಿಚಾರವಂತ ವಸುದೇವ ಭೂಪಾಲಂ ಅವರು 50ರ ದಶಕದಲ್ಲೇ ದೇವರ ಅಸ್ತಿತ್ವವನ್ನೇ ಅಲುಗಾಡಿಸಿದರು. ಜನರು, ದೇವರು-ಧರ್ಮದ ಬಗ್ಗೆ ಮಾತನಾಡಲು ಹೆದರುತ್ತಿದ್ದಾಗ `ದೇವರು ಸತ್ತ' ಕೃತಿ ಬರೆದರು. ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ ಎಂದು ಕುವೆಂಪು ಕರೆಕೊಟ್ಟರು.

ನವೋದಯ ಸಾಹಿತ್ಯ, ವೈಜ್ಞಾನಿಕ- ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತಿತ್ತು. ಶಾಸ್ತ್ರ- ಸಂಪ್ರದಾಯ ಮದುವೆಗಳಿಗೆ ಪರ್ಯಾಯವಾಗಿ ಕುವೆಂಪು ಪ್ರತಿಪಾದಿಸಿದ ಮಂತ್ರಮಾಂಗಲ್ಯ ಸಾಮಾಜಿಕ ಸಂಚಲನ ಉಂಟುಮಾಡಿತು. ಇದನ್ನು ಕೆಲವರು ತೀವ್ರವಾಗಿ ವಿರೋಧಿಸಿದರು. ಅದರಾಚೆಗೆ ಯಾರು ಯಾರ ಮೇಲೂ ಸಿಟ್ಟು ಮಾಡಿಕೊಳ್ಳಲಿಲ್ಲ. ಅದೊಂದು ಸಾತ್ವಿಕ ಸಿಟ್ಟು- ವಿರೋಧ ಅಷ್ಟೇ. ಮಂತ್ರಮಾಂಗಲ್ಯವನ್ನು ರೈತ ಚಳವಳಿ ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿತು.

ಬಂಡಾಯ ಸಾಹಿತ್ಯ, ಚಳವಳಿ ಮಠಮಾನ್ಯಗಳಿಗೆ ಧಿಕ್ಕಾರ ಕೂಗಿತು. ಸ್ವಾಮೀಜಿಗಳ ಪಾದ ಪೂಜೆ ವಿರೋಧಿಸಿತು. ಇವೆಲ್ಲ ವೈಚಾರಿಕ ಸಂಘರ್ಷವಾಗಿ ಉಳಿದವು. ಹೊಡೆದಾಟ, ಬಡಿದಾಟದ ಮಟ್ಟಕ್ಕೆ ಹೋಗಲಿಲ್ಲ. ಬಂಡಾಯಗಾರರ ಮೇಲೆ ಸ್ವಾಮೀಜಿಗಳು ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ಕೆಲವು ಪ್ರಗತಿಪರ ಮಠಗಳು ಬಂಡಾಯ ಸಾಹಿತಿಗಳನ್ನು ಅಪ್ಪಿಕೊಂಡವು. ದಲಿತ ಸಂಘರ್ಷ ಸಮಿತಿ ಮತ್ತಿತರ ಪ್ರಗತಿಪರ ಸಂಘಟನೆಗಳು ಶಿವಮೊಗ್ಗ ಜಿಲ್ಲೆ ಚಂದ್ರಗುತ್ತಿಯಲ್ಲಿ 27 ವರ್ಷದ ಹಿಂದೆ ಬೆತ್ತಲೆಸೇವೆ ತಡೆಯಲು ಮುಂದಾದಾಗ ಪ್ರತಿರೋಧ ವ್ಯಕ್ತವಾಗಿತ್ತು.

ಡಿಎಸ್‌ಎಸ್ ಕಾರ್ಯಕರ್ತರು, ಮಹಿಳಾ ಸಂಘಟನೆಗಳ ಸದಸ್ಯರು, ಪ್ರಗತಿಪರರು ಹಾಗೂ ಪೊಲೀಸರನ್ನು ಬೆನ್ನಟ್ಟಿ ಥಳಿಸಲಾಯಿತು. ಛಾಯಾಗ್ರಾಹಕರ ಕ್ಯಾಮೆರಾ ಕಸಿದುಕೊಂಡು ಪುಡಿ ಮಾಡಲಾಯಿತು. ಅನೇಕರ ಬಟ್ಟೆ ಬಿಚ್ಚಿ ಬೆತ್ತಲುಗೊಳಿಸಲಾಯಿತು. ಈ ಘಟನೆ ಸರ್ಕಾರ, ಬೆತ್ತಲೆಸೇವೆ ನಿಷೇಧಿಸಲು ಪ್ರೇರಣೆಯಾಯಿತು. ಇದೊಂದನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಬೇರೆಲ್ಲೂ ವಿಚಾರವಾದಿಗಳ ಮೇಲೆ ದೈಹಿಕವಾಗಿ ದಾಳಿಗಳು ನಡೆದಿಲ್ಲ.

`ಬೆತ್ತಲೆ ಸೇವೆ ನಿಷೇಧ ಕಾನೂನು ಜಾರಿಯಾಗಿದೆ. ಈಗ ಅನಿಷ್ಟ ಪದ್ಧತಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ನಂಬುವುದು ಕಷ್ಟ. ಯಾವುದೋ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಕದ್ದುಮುಚ್ಚಿ ನಡೆಯುತ್ತಿದೆ. ಮೊದಲು ಚಂದ್ರಗುತ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬೆತ್ತಲೆಸೇವೆ ಹಳ್ಳಿಗಳು- ಓಣಿಗಳಿಗೆ ಸೀಮಿತವಾಗಿದೆ. ಬದಲಾವಣೆ ಏನೆಂದರೆ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು' ಎನ್ನುತ್ತಾರೆ ಕನ್ನಡ ವಿ.ವಿ ಜಾನಪದ ತಜ್ಞ ಡಾ. ಮಂಜುನಾಥ ಬೇವಿನಕಟ್ಟೆ. ಉತ್ತರ ಕರ್ನಾಟಕದ ದೇವದಾಸಿ ಪದ್ಧತಿ ನಿರ್ಮೂಲನೆ,  ಪುನರ್ವಸತಿಗೆ ದುಡಿಯುತ್ತಿರುವ ಅಥಣಿಯ `ವಿಮೋಚನಾ ಸಂಘ'ದ ಬಿ.ಎಲ್. ಪಾಟೀಲ ಈ ಅಭಿಪ್ರಾಯವನ್ನು ಸಮರ್ಥಿಸುತ್ತಾರೆ.

ಭಾರತ್ ಹುಣ್ಣಿಮೆ ದಿನ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಮುತ್ತು ಕಟ್ಟುವುದು ನಿಂತಿದೆ. ದೇವದಾಸಿ ಪದ್ಧತಿ ನಿಷೇಧಿಸುವ ಕಾನೂನು 1982ರಲ್ಲಿ ಜಾರಿಗೆ ಬಂದಿದ್ದರೂ ತೆರೆಮರೆಯಲ್ಲಿ ಆಚರಣೆಗಳು ನಡೆಯುತ್ತಿವೆ. ಮನೆಗಳಲ್ಲೇ ಮುತ್ತು ಕಟ್ಟಿಸಲಾಗುತ್ತಿದೆ. ದೇವದಾಸಿ ಪದ್ಧತಿ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಇದನ್ನು ವಿರೋಧಿಸುವವರಿಗೆ ಬೆದರಿಕೆಗಳು ಬಂದಿವೆ. ಪಾಟೀಲರಿಗೂ ಬೇಕಾದಷ್ಟು ಬೆದರಿಕೆ ಪತ್ರಗಳು ಬಂದಿವೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡಿದ್ದೇವೆ. ಪ್ರಜಾಪ್ರಭುತ್ವದ ಆಶಯವೇ ಅಭಿಪ್ರಾಯ ಸ್ವಾತಂತ್ರ್ಯ. ಅಲ್ಲದೇ, ನಮ್ಮ ಸಂವಿಧಾನ ಮುಕ್ತವಾಗಿ ಅಭಿಪ್ರಾಯ ವ್ಯಕ್ತಮಾಡುವ ಹಕ್ಕು ಕೊಟ್ಟಿದೆ. ಬಲವಂತವಾಗಿ ಬಾಯಿ ಮುಚ್ಚಿಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ವೈಚಾರಿಕ ಸಂಘರ್ಷಗಳು ಇರಬೇಕು. ಅವು ಸಕಾರಣವಾಗಿರಬೇಕು. ಲೋಹಿಯಾ, ನೆಹರೂ ಅವರನ್ನು ಕಟುವಾಗಿ ಟೀಕಿಸುತ್ತಿದ್ದರು. ಈ ಟೀಕೆಗಳನ್ನು ನೆಹರೂ ಆರೋಗ್ಯವಾಗಿ ಸ್ವೀಕರಿಸುತ್ತಿದ್ದರು. ಇಬ್ಬರೂ ನಾಯಕರು ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಲೋಹಿಯಾ ಅವರನ್ನು ಬಲವಂತವಾಗಿ ಬಾಯಿ ಮುಚ್ಚಿಸುವ ಪ್ರಯತ್ನವನ್ನು ನೆಹರೂ ಎಂದೂ ಮಾಡಲಿಲ್ಲ.

ಬೇರೆಯವರ ವಿಚಾರಗಳನ್ನು ಸಹಿಸಿಕೊಳ್ಳುವುದೇ ಪರಮ ಧರ್ಮ. ಸಾಮಾಜಿಕ ನಂಬಿಕೆ, ಆಚರಣೆಗಳನ್ನು ಪ್ರಶ್ನೆ ಮಾಡುವವರ ಮೇಲೆ ದೈಹಿಕವಾಗಿ ದಾಳಿ ನಡೆಸುವುದು ಸುಸಂಸ್ಕೃತ ನಡವಳಿಕೆಯಲ್ಲ. ಅದು ಮಾಫಿಯಾ ಭಾಷೆ. ಅನಾದಿ ಕಾಲದಿಂದಲೂ ಭಾರತದಲ್ಲಿ ಅಭಿಪ್ರಾಯ ಭೇದಗಳಿವೆ. ಯಾವುದೋ ಕಾಲದಲ್ಲಿ ಹಿಂಸೆಗಳು ನಡೆದಿರಬಹುದು. ಈಗ ಕಾಲ ಬದಲಾಗಿದೆ. ಇದಕ್ಕೆ ಅನುಗುಣವಾಗಿ ಆಲೋಚನಾ ಕ್ರಮವೂ ಬದಲಾಗಬೇಕು.   

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT