ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವವ್ಯಾಪಿ ತಂತ್ರಜ್ಞಾನ ಅತಿ ಸಮೀಪ ಸಂವಹನ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳನ್ನು ಒಳಗೊಂಡು ಬೇರೆ ಬೇರೆ ಕೆಲಸಗಳನ್ನು ಮಾಡಬಲ್ಲವಾಗುತ್ತಿವೆ. ವೈಫೈ ಮತ್ತು ಬ್ಲೂಟೂತ್ ಗೊತ್ತು ತಾನೆ? ಇವುಗಳಂತೆ ಸಂವಹನಕ್ಕೆ ಬಳಕೆಯಾಗುವ ಇನ್ನೊಂದು ತಂತ್ರಜ್ಞಾನ Near Field Communication (NFC). ಈ ಎನ್‌ಎಫ್‌ಸಿಯನ್ನು ನಾವು ಕನ್ನಡದಲ್ಲಿ ‘ಅತಿ ಸಮೀಪ ಸಂವಹನ’ ಎನ್ನಬಹುದು.

ಏನಿದು? ಇದನ್ನು ಬಳಸಿ ಏನೇನು ಮಾಡಬಹುದು? ಇದನ್ನು ಬಳಸುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸೋಣ. ಮೊದಲು ಕೆಲವು ಉದಾಹರಣೆಗಳನ್ನು ನೋಡೋಣ.

ನಿಮ್ಮ ಸ್ನೇಹಿತ ಭೇಟಿಯಾದಾಗ ಆತ ನಿಮಗೆ ಆತನ ವಿಸಿಟಿಂಗ್ ಕಾರ್ಡ್ ನೀಡುವುದಿಲ್ಲ. ಬದಲಿಗೆ ಅದನ್ನು ನಿಮ್ಮ ಫೋನಿಗೆ ತಟ್ಟುತ್ತಾನೆ. ಕೂಡಲೇ ನಿಮ್ಮ ಫೋನಿನಲ್ಲಿ ಆತನ ವಿಳಾಸ, ಇಮೇಲ್, ಜಾಲತಾಣದ ವಿಳಾಸ, ಫೇಸ್‌ಬುಕ್ ಪ್ರೊಫೈಲ್ ಎಲ್ಲ ಮೂಡಿಬರುತ್ತವೆ.

ನೀವು ನಿಮ್ಮ ಮನೆಯಿಂದ ಕಚೇರಿಗೆ ಹೊರಡುತ್ತಿದ್ದೀರಿ. ಮನೆಯಲ್ಲಿ ನಿಮ್ಮ ಫೋನ್ ನಿಮ್ಮ ಮನೆಯ ವೈಫೈ ಜಾಲಕ್ಕೆ ಸಂಪರ್ಕದಲ್ಲಿತ್ತು. ಮನೆಯಿಂದ ಹೊರಗೆ ಅದು ಅಗತ್ಯವಿಲ್ಲ. ಬದಲಿಗೆ ಮೊಬೈಲಿನಲ್ಲೇ ಇರುವ 3ಜಿ ಸಂಪರ್ಕವನ್ನು ಚಾಲನೆಗೊಳಿಸಬೇಕು. ಕಾರಿನಲ್ಲಿ ಡ್ರೈವಿಂಗ್ ಮಾಡುವಾಗ ಕಾರಿನ ಆಡಿಯೊ ಸಿಸ್ಟಂಗೆ ಬ್ಲೂಟೂತ್ ಮೂಲಕ ಸಂಪರ್ಕಪಡಿಸಬೇಕು. ಇದನ್ನೆಲ್ಲ ಒಂದಾದ ನಂತರ ಒಂದರಂತೆ ಮಾಡಬಹುದು. ಬದಲಿಗೆ ಕಾರಿನ ಸ್ಟಿಯರಿಂಗ್ ಕೆಳಗೆ ನೀವು ಮೊದಲೇ ಪ್ರೋಗ್ರಾಂ ಮಾಡಿಟ್ಟಿರುವ ಚಿಕ್ಕ ಎನ್‌ಎಫ್‌ಸಿ ಸ್ಟಿಕ್ಕರಿಗೆ ನಿಮ್ಮ ಫೋನನ್ನು ಮುಟ್ಟಿಸಿದರೆ ಸಾಕು. ನಿಮಗೆ ಬೇಕಾದ ಎಲ್ಲ ಆಯ್ಕೆಗಳು ಫೋನಿನಲ್ಲಿ ಚಾಲನೆಗೊಳ್ಳುತ್ತವೆ.

ಅಂಗಡಿಗೆ ಹೋಗಿ ಬೇಕಾದ ಎಲ್ಲ ಸಾಮಾನುಗಳನ್ನು ಕೊಂಡುಕೊಂಡ ನಂತರ ಬಿಲ್ಲು ಪಡೆದು ಹಣ ನೀಡಬೇಕಾದಲ್ಲಿಗೆ ಬಂದಾಗ ನೀವು ಕ್ರೆಡಿಟ್ ಕಾರ್ಡ್ ಅಥವಾ ನಗದು ನೀಡುವುದಿಲ್ಲ. ಬದಲಿಗೆ ಕ್ಯಾಶಿಯರಿನ ಪಕ್ಕ ಇರುವ ಒಂದು ಚಿಕ್ಕ ಸಾಧನಕ್ಕೆ ನಿಮ್ಮ ಫೋನನ್ನು ಮುಟ್ಟಿಸುತ್ತೀರಿ. ನಿಮ್ಮ ಖಾತೆಯಿಂದ ಆತನ ಖಾತೆಗೆ ಹಣ ವರ್ಗಾವಣೆಯಾಗಿರುತ್ತದೆ. ಇವೆಲ್ಲ ಎನ್‌ಎಫ್‌ಸಿಯ ಬಳಕೆಯ ಉದಾಹರಣೆಗಳು. 

ಎನ್‌ಎಫ್‌ಸಿ ಎಂದರೆ ಏನು? ಮೊದಲೇ ಹೇಳಿದಂತೆ ಅದು ಅತಿ ಸಮೀಪ ಸಂವಹನ. ಇದರ ವ್ಯಾಪ್ತಿ ಕೇವಲ 10 ಸೆ.ಮೀ. ಬ್ಲೂಟೂತ್‌ನಂತೆ ಇದು ಕೂಡ ವಿದ್ಯುತ್ಕಾಂತೀಯ ಅಲೆಗಳ ಮೂಲಕವೇ ಸಂವಹನ ನಡೆಸುತ್ತದೆ. ಆದರೆ ಇದರ ಕಂಪನಾಂಕ ಬೇರೆ. ಎನ್‌ಎಫ್‌ಸಿ ಬಳಸುವುದು 13.56 MHz ಕಂಪನಾಂಕದ ಅಲೆಗಳನ್ನು. ಸೆಕೆಂಡಿಗೆ ಸುಮಾರು 106 ರಿಂದ 424 ಕಿಲೋಬಿಟ್‌ಗಳಷ್ಟು ಮಾಹಿತಿಯ ವರ್ಗಾವಣೆ ಸಾಧ್ಯ. ಹೋಲಿಕೆಗೆ ಬ್ಲೂಟೂತ್‌ನ ವ್ಯಾಪ್ತಿ ಸುಮಾರು 100 ಮೀ., ಕಂಪನಾಂಕ 2.4–2.5 GHz, ಮಾಹಿತಿ ವರ್ಗಾವಣೆಯ ವೇಗ ಸುಮಾರು ಸೆಕೆಂಡಿಗೆ 2.1 ಮೆಗಾಬಿಟ್. ಎನ್‌ಎಫ್‌ಸಿ ಬ್ಲೂಟೂತ್‌ಗಿಂತ ತುಂಬ ಕಡಿಮೆ ವಿದ್ಯುತ್ ಬಳಸುತ್ತದೆ.

ಬ್ಲೂಟೂತ್ ಸಂಪರ್ಕ ಸಾಧಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ತುಂಬ ಒದ್ದಾಡಬೇಕಾಗುತ್ತದೆ. ಆದರೆ ಎನ್‌ಎಫ್‌ಸಿಯಲ್ಲಿ ಈ ತಾಪತ್ರಯಇಲ್ಲ. ಕ್ಷಣಮಾತ್ರದಲ್ಲಿ ಸಂಪರ್ಕ ಸಾಧ್ಯ. ಎನ್‌ಎಫ್‌ಸಿ ಸ್ಟಿಕ್ಕರನ್ನು ಫೋನಿಗೆ ಮುಟ್ಟಿಸಿದರೆ ಆ ಸ್ಟಿಕ್ಕರಿನಲ್ಲಿ ಪ್ರೋಗ್ರಾಂ ಆಗಿರುವ ಮಾಹಿತಿ, ಕೆಲಸ ಆಗುತ್ತದೆ.

ಎನ್‌ಎಫ್‌ಸಿಯ ಸಾಧನಗಳಲ್ಲಿ ಎರಡು ಪ್ರಮುಖ ವಿಧ. ಸಕ್ರಿಯ ಮತ್ತು ಜಡ. ಸಕ್ರಿಯ (active) ಸಾಧನಗಳಿಗೆ ಪ್ರಮುಖ ಉದಾಹರಣೆ ಎನ್‌ಎಫ್‌ಸಿ ಆಯ್ಕೆ ಇರುವ ಸ್ಮಾರ್ಟ್‌ಫೋನ್ ಎನ್ನಬಹುದು. ಇಲ್ಲಿ ಫೋನಿನಲ್ಲಿರುವ ಎನ್‌ಎಫ್‌ಸಿ ಬಳಸಿ ಇನ್ನೊಂದು ಫೋನಿಗೆ ಮಾಹಿತಿ ವರ್ಗಾವಣೆ ಮಾಡಬಹುದು. ಇದನ್ನು ಮಾಡಬೇಕಾದರೆ ಮೊದಲಿಗೆ ನಿಮ್ಮ ಫೋನಿನಲ್ಲಿ ಎನ್‌ಎಫ್‌ಸಿ ಮಾಹಿತಿ ವರ್ಗಾವಣೆ ಸಾಧ್ಯ ಎಂದು ಆಯ್ಕೆ ಮಾಡಿಕೊಳ್ಳಬೇಕು. ಫೋಟೊ, ಸಂಗೀತ, ವಿಡಿಯೊ ಇತ್ಯಾದಿ ಯಾವುದನ್ನು ವರ್ಗಾವಣೆ ಮಾಡಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಇನ್ನೊಂದು ಎನ್‌ಎಫ್‌ಸಿ ಇರುವ ಫೋನಿಗೆ ತಟ್ಟಿದರೆ ಸಾಕು. ನಿಮ್ಮ ಫೋನಿನಿಂದ ಇನ್ನೊಂದು ಫೋನಿಗೆ ಅದು ವರ್ಗಾವಣೆ ಆಗುತ್ತದೆ. ಫೋನಿನ ಎನ್‌ಎಫ್‌ಸಿ ಬಳಸಿ ಫೋನನ್ನು ಕ್ರೆಡಿಟ್‌ಕಾರ್ಡಿನಂತೆಯೂ ಬಳಸಬಹುದು. ಈ ಬಗ್ಗೆ ಮೇಲೆ ವಿವರಿಸಲಾಗಿದೆ.

ಜಡ ಎನ್‌ಎಫ್‌ಸಿ ಸಾಧನಗಳಿಗೆ ಉತ್ತಮ ಉದಾಹರಣೆ ಎನ್‌ಎಫ್‌ಸಿ ಸ್ಟಿಕ್ಕರ್ ಅಥವಾ ಎನ್‌ಎಫ್‌ಸಿ ಟ್ಯಾಗ್‌ಗಳು. ಇವುಗಳಲ್ಲಿ ನಾವೇ ತುಂಬಿಸಬಲ್ಲವು ಮತ್ತು ಮೊದಲೇ ಮಾಹಿತಿ ತುಂಬಿಸಿದಂಥವು ಎಂದು ಎರಡು ನಮೂನೆಗಳಿವೆ. ಎನ್‌ಎಫ್‌ಸಿ ವಿಸಿಟಿಂಗ್ ಕಾರ್ಡ್ ಎರಡನೆಯ ನಮೂನೆಗೆ ಉದಾಹರಣೆ. ನಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ಎಲ್ಲ ನಮೂದಿಸಿ ಇವುಗಳೆಲ್ಲವನ್ನು ಬರೆದು ಅದನ್ನು ಎನ್‌ಎಫ್‌ಸಿ ವಿಸಿಟಿಂಗ್ ಕಾರ್ಡ್ ಆಗಿ ಮುದ್ರಿಸಿ ಕಳುಹಿಸುವ ಕಂಪೆನಿಗಳು ಬೇಕಾದಷ್ಟಿವೆ. ಈ ಕಾರ್ಡುಗಳಲ್ಲಿರುವ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ.

ಮತ್ತೆ ಮತ್ತೆ ಬರೆಯಬಲ್ಲ ಅಥವಾ ಬದಲಾಯಿಸಬಲ್ಲ ಎನ್‌ಎಫ್‌ಸಿ ಟ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳಲ್ಲಿ ಮಾಹಿತಿ ಬರೆಯಲು ಹಲವು ಕಿರುತಂತ್ರಾಂಶಗಳು ಗೂಗಲ್‌ ಪ್ಲೇ ಸ್ಟೋರಿನಲ್ಲಿವೆ (NFC Tools). ನಿಮ್ಮ ಹೆಸರು, ವಿಳಾಸ, ಫೇಸ್‌ಬುಕ್ ಹೆಸರು, ಎಲ್ಲವನ್ನು ಆ ಕಿರುತಂತ್ರಾಂಶವನ್ನು ಬಳಸಿ ಒಂದು ಎನ್‌ಎಫ್‌ಸಿ ಟ್ಯಾಗಿನಲ್ಲಿ ಬರೆದು ಅದನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬಹುದು. ಯಾರಾದರೂ ನಿಮ್ಮ ವಿಳಾಸ ವಿವರ ಕೇಳಿದರೆ ನಿಮ್ಮ ಪರ್ಸನ್ನು ಆತನ ಫೋನಿಗೆ ಮುಟ್ಟಿಸಿದರೆ ಸಾಕು. ಆತನ ಫೋನಿನಲ್ಲಿ ಎಲ್ಲ ಮಾಹಿತಿ ಮೂಡಿಬರುತ್ತದೆ. 

ಎನ್‌ಎಫ್‌ಸಿ ಟ್ಯಾಗ್‌ಗಳಲ್ಲಿ ಈ ರೀತಿ ಮಾಹಿತಿ ತುಂಬಿಸುವುದು ಮಾತ್ರವಲ್ಲ. ಅದನ್ನು ಯಾವುದಾದರು ಕೆಲಸ ಮಾಡಿಸಲೂ ಬಳಸಬಹುದು. ಉದಾಹರಣೆಗೆ ವೈಫೈ ಆನ್ ಮಾಡುವುದು ಅಥವಾ ಆಫ್ ಮಾಡುವುದು, ಬ್ಲೂಟೂತ್ ಆನ್ ಮಾಡುವುದು, ಇತ್ಯಾದಿ. ಈ ರೀತಿ ಕೆಲಸ ಮಾಡಬೇಕು ಎಂಬುದನ್ನು ಎನ್‌ಎಫ್‌ಸಿ ಟ್ಯಾಗ್‌ಗಳಲ್ಲಿ ಬರೆಯಲೂ ಸೂಕ್ತ ಕಿರುತಂತ್ರಾಂಶ ಇದೆ. ಗೂಗಲ್‌ ಪ್ಲೇ ಸ್ಟೋರಿನಲ್ಲಿ Trigger ಎಂದು ಹುಡುಕಿದರೆ ಅದು ನಿಮಗೆ ದೊರೆಯುತ್ತದೆ. 
  
ಎನ್‌ಎಫ್‌ಸಿ ಟ್ಯಾಗ್‌ಗಳಲ್ಲೂ ಹಲವು ವಿಧ ಇದೆ. ಮೆಮೊರಿ ಇರುವವು ಮತ್ತು ಇಲ್ಲದವು. ಅತಿ ಕಡಿಮೆ ಎಂದರೆ ಸುಮಾರು ₹250 ರಿಂದ 350ಕ್ಕೆ ನಿಮಗೆ ಸುಮಾರು 4 ರಿಂದ 6 ಟ್ಯಾಗ್ ದೊರೆಯುತ್ತವೆ. ಅವುಗಳನ್ನು ಸೂಕ್ತ ಕಿರುತಂತ್ರಾಂಶ ಬಳಸಿ ಪ್ರೋಗ್ರಾಂ ಮಾಡಬಹುದು. 
*
ವಾರದ ಆಪ್
ಎನ್‌ಎಫ್‌ಸಿ ಟೂಲ್ಸ್‌ 

ಎನ್‌ಎಫ್‌ಸಿ ಟ್ಯಾಗ್‌ಗಳನ್ನು ಕೊಂಡುಕೊಂಡ ನಂತರ ಅವುಗಳಿಗೆ ಮಾಹಿತಿಯನ್ನು ಬರೆಯಲು ಸೂಕ್ತ ಕಿರುತಂತ್ರಾಂಶ (ಆಪ್) ಬೇಕು ತಾನೆ? ಅಂತಹವು ಬೇಕಾದಷ್ಟಿವೆ. ಅಂತಹ ಒಂದು ಉತ್ತಮ ಕಿರುತಂತ್ರಾಂಶ ಎನ್‌ಎಫ್‌ಸಿ ಟೂಲ್ಸ್. NFC Tools ಎಂದು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ಇದು ಸಿಗುತ್ತದೆ. ಇದು ಎನ್‌ಎಫ್‌ಸಿ ಟ್ಯಾಗ್‌ಗಳಿಗೆ ಮಾಹಿತಿಯನ್ನು ಬರೆಯಲು ಹಾಗೂ ಟ್ಯಾಗ್‌ಗಳಿಂದ ಮಾಹಿತಿಯನ್ನು ಓದಲು ಸಹಾಯ ಮಾಡುತ್ತದೆ. ನಿಮ್ಮ ವಿಳಾಸ, ಸರಳ ಪಠ್ಯ ಅಥವಾ ಇನ್ನೇನನ್ನಾದರೂ ಎನ್‌ಎಫ್‌ಸಿ ಟ್ಯಾಗ್‌ಗೆ ಈ ಕಿರುತಂತ್ರಾಂಶ ಬಳಸಿ ಬರೆಯಬಹುದು. ಅಷ್ಟು ಮಾತ್ರವಲ್ಲ ಎನ್‌ಎಫ್‌ಸಿ ಟ್ಯಾಗನ್ನು ಫೋನಿಗೆ ಮುಟ್ಟಿಸಿದಾಗ ನಿಮ್ಮ ಫೋನಿನ ವೈಫೈ ಆನ್ ಅಥವಾ ಆಫ್ ಮಾಡುವಂತೆ ಬರೆಯಬಹುದು. ಇನ್ನೂ ಹಲವಾರು ಕೆಲಸಗಳನ್ನು ಮಾಡಲು ಅಥವಾ ಮಾಡಿಸಲು ಇದು ಸಹಾಯ ಮಾಡುತ್ತದೆ.

ಗ್ಯಾಜೆಟ್ ಸುದ್ದಿ
ಕಾಗದದಷ್ಟು ತೆಳುವಾದ ಚಾರ್ಜರ್

ಸ್ಮಾರ್ಟ್‌ಫೋನ್‌ಗಳ ಒಂದು ಪ್ರಮುಖ ಸಮಸ್ಯೆ ಎಂದರೆ ಬೇಗನೆ ಬ್ಯಾಟರಿ ಖಾಲಿಯಾಗುವುದು. ಅದಕ್ಕೆ ಪರಿಹಾರ ರೂಪವಾಗಿ ಚಾರ್ಜರ್ ಮಾತ್ರವಲ್ಲ ಪವರ್‌ಬ್ಯಾಂಕ್‌ಗಳೂ ಲಭ್ಯವಿವೆ. ಸೌರಶಕ್ತಿಯಿಂದ ಕೆಲಸ ಮಾಡುವ ಚಾರ್ಜರ್‌ಗಳೂ ಇವೆ. ಇತ್ತೀಚೆಗೆ  ಸೌರಶಕ್ತಿಯಿಂದ ಕೆಲಸ ಮಾಡುವ ಹೊಸ ಚಾರ್ಜರ್ ಆವಿಷ್ಕಾರ ಮಾಡಲಾಗಿದೆ. ಇದರ ವೈಶಿಷ್ಟ್ಯವೆಂದರೆ ಇದು ತುಂಬ ತೆಳ್ಳಗಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಕಾಗದದಷ್ಟು ತೆಳ್ಳಗಿದೆ. ಒಂದು ಸ್ಮಾರ್ಟ್‌ಫೋನನ್ನು ಸುಮಾರು ಎರಡೂವರೆ ಗಂಟೆಗಳಲ್ಲಿ ಇದು ಚಾರ್ಜ್ ಮಾಡುತ್ತದೆ ಎನ್ನಲಾಗಿದೆ. ನಿಮ್ಮ ಬೆನ್ನಿಗೆ ಇದನ್ನು ಜೋಡಿಸಿಕೊಂಡು ಆರಾಮವಾಗಿ ಯಾವುದಾದರೂ ಚಾರಣಕ್ಕೆ ಹೋಗಬಹುದು.

ಗ್ಯಾಜೆಟ್ ಸಲಹೆ
ಅಖಿಲೇಶ್ ಕುಮಾರ್ ಅವರ ಪ್ರಶ್ನೆ: ಪತ್ರಿಕೆ ಓದುವ ಹೆಚ್ಚಿನವರಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ, ನೀವು ಯಾಕೆ ಸ್ಮಾರ್ಟ್ ಫೋನ್ ವಿಮರ್ಶಿಸುವ ಬದಲು ಕೀಪ್ಯಾಡ್ ಫೋನ್ ಗಳಲ್ಲಿ ಉತ್ತಮವಾದುದನ್ನು  ವಿಮರ್ಶಿಸಬಾರದು?

ಉ: ಕೀಪ್ಯಾಡ್ ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದ ಪ್ರಾರಂಭದಲ್ಲಿ, ಅಂದರೆ ಮೂರು ವರ್ಷಗಳ ಹಿಂದೆ ನೀಡಲಾಗಿತ್ತು. ಪತ್ರಿಕೆ ಓದುವವರಲ್ಲಿ ಉತ್ತಮ ತಾಂತ್ರಿಕ ಜ್ಞಾನವಿರುವವರು ತುಂಬ ಜನ ಇದ್ದಾರೆ. ನನಗೆ ಬರುವ ತುಂಬ ಇಮೇಲ್‌ಗಳಲ್ಲಿ ಇದು ವೇದ್ಯವಾಗುತ್ತದೆ. ಆ ಎಲ್ಲ ಇಮೇಲ್‌ಗಳನ್ನು ನಾನು ಇಲ್ಲಿ ನೀಡುತ್ತಿಲ್ಲ ಅಷ್ಟೆ.

ಗ್ಯಾಜೆಟ್ ತರ್ಲೆ
ಒಬ್ಬಾತ ಪ್ರೋಗ್ರಾಂ ಮಾಡಿಟ್ಟ ಎನ್‌ಎಫ್‌ಸಿ ಟ್ಯಾಗ್ ಅನ್ನು ತನ್ನ ಪರ್ಸಿನಲ್ಲಿ ಇಟ್ಟಿದ್ದ. ಮುಂಬಯಿಯ ಜನನಿಬಿಡ ಲೋಕಲ್ ರೈಲಿನಲ್ಲಿ ಕಿಸೆಗಳ್ಳನೊಬ್ಬ ಆತನ ಪರ್ಸನ್ನು ಕದ್ದು ತನ್ನ ಕಿಸೆಗೆ ಸೇರಿಸಿದ. ಆತನ ಕಿಸೆಯಲ್ಲಿದ್ದ ಫೋನ್ ಕೂಡಲೆ ಅತಿ ದೊಡ್ಡ ಧ್ವನಿಯಲ್ಲಿ ಕಿರುಚತೊಡಗಿತು. ಯಾವುದೇ ಫೋನಿನ ಅತಿ ಸಮೀಪ ಬಂದೊಡನೆ ಅದು ದೊಡ್ಡ ಧ್ವನಿಯಲ್ಲಿ ಕಿರುಚುವಂತೆ ಆ ಪರ್ಸಿನಲ್ಲಿದ್ದ ಎನ್‌ಎಫ್‌ಸಿ ಟ್ಯಾಗನ್ನು ಪ್ರೋಗ್ರಾಂ ಮಾಡಲಾಗಿತ್ತು. ಕಳ್ಳ ಸಿಕ್ಕಿಬಿದ್ದ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT