ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜವಾಬ್ದಾರಿಯ ಮಾದರಿ

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ನಮಗೆ ಬದುಕಿನ ಪಾಠಗಳು ಎಲ್ಲಿ ದೊರೆಯುತ್ತವೆ ಎಂಬುದನ್ನು ಹೇಳು­ವುದು ಕಷ್ಟ. ಕೆಲವೊಂದು ಬಾರಿ ನಾವು ಕಲ್ಪಿಸಲೂ ಅಸಾಧ್ಯವಿದ್ದ ಸ್ಥಳಗಳಲ್ಲಿ, ಅಸಾಮಾನ್ಯ ಸಂದರ್ಭಗಳಲ್ಲಿ, ಥಟ್ಟನೇ ಎದ್ದು ನಮ್ಮ ಮುಂದೆ ನಿಲ್ಲುತ್ತವೆ ಅಪೂರ್ವ ದರ್ಶನಗಳು. ಅವುಗಳನ್ನು ನೋಡುವ ಪ್ರೀತಿಯ ಕಣ್ಣುಗಳನ್ನು, ತೆರೆದ ಮನಸ್ಸುಗಳನ್ನು ಹೊಂದಿದ್ದರೆ ದಿನದಿನವೂ ಅಂಥ ಘಟನೆಗಳು ಜೀವ­ನಕ್ಕೆ ಬುತ್ತಿಯನ್ನು ನೀಡಿಯಾವು. ಇತ್ತೀಚಿಗೆ ಇಡೀ ವಿಶ್ವವೇ ಕಣ್ಣೊಂದೆ­ಯಾಗಿ ನೋಡಿದ್ದು ಫುಟ್‌ಬಾಲ್ ವಿಶ್ವಕಪ್ ಆಟಗಳನ್ನು. ಭಾರತದ­ಲ್ಲಿಯೂ ರಾತ್ರಿಯೆಲ್ಲ ಬೆಳಗಾಗಿ, ತರುಣ ತರುಣಿಯರೆಲ್ಲ ನಿಶಾಚರರಾಗಿ ಸಂಭ್ರಮಿ­ಸಿದ್ದು ಇನ್ನೂ ಹಸಿರಾಗಿದೆ. ಆ ಆಟ­ಗಾರರ ಛಲ, ಪರಿಶ್ರಮ, ಗೋಲು ಹೊಡೆದಾಗ ಅವರ ಮುಖದಲ್ಲಿ ಉಕ್ಕಿ ಬಂದ ಸಂತೋಷದ ಬುಗ್ಗೆ, ಸೋತಾಗ ಕಂಡ ಹತಾಶೆಯ ಭಾವನೆ, ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ಆಟಗಾರರು ತೋರಲಿರುವ ಅದ್ಭುತ ಕಾಲ್ಚೆಳಕವನ್ನು ನೋಡಲು ಬಂದಿದ್ದ ಪ್ರೇಕ್ಷಕರ ಹೋ, ಹೋ, ಅಯ್ಯೋಗಳು ನಮ್ಮೆಲ್ಲರ ಮನ­ಸ್ಸನ್ನು ಮುದಗೊಳಿಸಿದವು, ತಟ್ಟಿದವು.

ಇವೆಲ್ಲ ಕೋಲಾಹಲಗಳ ನಡುವೆ ಒಂದು ಘಟನೆ ಜರುಗಿತು. ಅದನ್ನು ಎಷ್ಟು ಜನ ಗಮನಿಸಿದರೋ ಇಲ್ಲವೋ ತಿಳಿಯದು. ನನಗಂತೂ ಅದೊಂದು ದೊಡ್ಡ ಪಾಠವವೆನ್ನಿಸಿತು. ಅದು ಒಂದು ದೇಶ ಇಡೀ ಪ್ರಪಂಚಕ್ಕೆ ನೀಡಿದ ನೀತಿಪಾಠ. ಈ ವಿಶ್ವಕಪ್‌ನಲ್ಲಿ ಗ್ರೀಸ್ ದೇಶ ಮತ್ತು ಜಪಾನ್ ದೇಶದ ನಡುವೆ ಆಟ ನಡೆಯಿತು. ಅದನ್ನು ನೋಡಲೆಂದೇ ಸುಮಾರು ಹದಿನೈದು ಸಾವಿರ ಜನ ಜಪಾನೀಯರು ಬ್ರೆಜಿಲ್‌ಗೆ ಬಂದಿದ್ದರು. ಆಟ ನಡೆದದ್ದು ಪೆರ್ನಾಬುಕಾ ಮೈದಾನದಲ್ಲಿ. ಆಟ ಮುಗಿದಾಗ ಗ್ರೀಸ್ ಗೆದ್ದಿತ್ತು. ಜಪಾನೀ ಪ್ರೇಕ್ಷಕರಿಗೆ ನಿರಾಸೆಯಾದದ್ದು ತಪ್ಪಲ್ಲ. ಆದರೆ ನಿಜವಾಗಿಯೂ ಅದ್ಭುತ ನಡೆದದ್ದು ಆಟ ಮುಗಿದ ಮೇಲೆ. ಮೈದಾನದಲ್ಲಿ ಆಟಗಾರರೆಲ್ಲ ಸಾಲಾಗಿ ನಿಂತು ತಮ್ಮನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆಲ್ಲ ತಲೆಬಾಗಿ ವಂದಿಸಿದರು. ಆಗ ಹನಿ ಹನಿ ಮಳೆಯಾ­ಗುತ್ತಿತ್ತು. ಜಪಾನಿನ ಆಟಗಾರರು ಮೈಮೇಲೆ ರೇನ್‌ಕೋಟ್ ಹಾಕಿಕೊಂಡು ಮೈದಾನದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬ ತೊಡಗಿದರು.

ಅವರಷ್ಟೇ ಅಲ್ಲ, ಹದಿನೈದು ಸಾವಿರ ಜಪಾನೀ ಪ್ರೇಕ್ಷಕರೂ ರೇನ್‌ಕೋಟ್‌ಗಳನ್ನು ಹಾಕಿಕೊಂಡು ಕೈಗಳಲ್ಲಿ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಗ್ಯಾಲರಿಗಳಲ್ಲಿ ಬಿದ್ದಿದ್ದ ಕಸವನ್ನು ತುಂಬತೊಡಗಿದರು. ಅದನ್ನು ನೋಡು­ತ್ತಿ­ದ್ದವರಿಗೆ ಇದೊಂದು ಪವಾಡ. ಸಾಮಾನ್ಯವಾಗಿ ಆಟ ಮುಗಿದಾಗ ಮೈದಾನ ರಣಾಂಗಣವಾಗಿರುತ್ತದೆ. ಬೆಂಚುಗಳನ್ನು ಮುರಿಯುತ್ತಾರೆ, ಹೊಡೆದಾಡುತ್ತಾರೆ. ಯಾರಿಗೂ ತಮಗೆ ಸಂತೋಷ ನೀಡಿದ ಆ ಮೈದಾನ ಮತ್ತು ಸ್ಟೇಡಿಯಂ ಬಗ್ಗೆ ಕಾಳಜಿ ತೋರ­ಬೇಕೆಂಬುದು ಹೊಳೆಯುವುದಿಲ್ಲ. ಆದರೆ ಜಪಾನಿನ ಪ್ರೇಕ್ಷಕರು ಹಾಗೂ ಆಟ­ಗಾರರು ಜೊತೆಯಾಗಿ ಇಡೀ ಮೈದಾನ  ಸ್ವಚ್ಛಮಾಡಿದರು.

ಹೀಗೇಕೆ ಮಾಡುತ್ತೀರಿ ಎಂದು ಒಬ್ಬ ವರದಿಗಾರ ಕೇಳಿದಾಗ ಜಪಾನಿನ ಫುಟ್‌­ಬಾಲ್ ಅಭಿಮಾನಿಯೊಬ್ಬ ಹೇಳಿದ, ‘ನಮ್ಮ ದೇಶದಲ್ಲಿ ನಾವು ಕೊಳಕು ಮಾಡುವುದನ್ನು ಇಷ್ಟಪಡುವುದಿಲ್ಲ. ಸಂಗೀತ ಕಛೇರಿಗಳಲ್ಲಿ, ಹೋಟೆಲ್ಲು­ಗಳಲ್ಲಿ ನಾವು ಸೃಷ್ಟಿಸಿದ ಕೊಳೆಯನ್ನು ನಾವೇ ತೆಗೆಯುತ್ತೇವೆ. ದಾರಿಯಲ್ಲಿ ಕಸಕಂಡರೂ ನಾವೇ ತೆಗೆದು ಹಾಕು­ತ್ತೇವೆ. ಏಕೆಂದರೆ ಅದು ನಮ್ಮ ದೇಶ. ಅಲ್ಲಿ ಕೊಳಕು ಕಂಡರೆ ನಮಗೆ ಅಪಮಾನ. ಬ್ರೆಜಿಲ್ ದೇಶ ನಮಗೆ ಈ ಸುಂದರ ಆಟವನ್ನು ನೋಡಲು ಅವಕಾಶ ಮಾಡಿಕೊಟ್ಟಿದೆ, ಅದ್ಭುತ ಮೈದಾನವನ್ನು ಕಟ್ಟಿದೆ. ಆದ್ದರಿಂದ ನಾವು ಮಾಡುವ ಸ್ವಚ್ಛತೆ ಈ ದೇಶಕ್ಕೆ ನಾವು ನೀಡುವ ಅಲ್ಪ ಋಣಸಂದಾಯ’. ಬ್ರೆಜಿಲ್ ದೇಶದ ನಾಯಕರು ಹೇಳಿದರು, ‘ನಮಗೆ ಫುಟ್‌ಬಾಲ್ ಆಟದಿಂದ ಅದೆಷ್ಟು ಪಾಠ ದೊರೆ­ಯಿತೋ ತಿಳಿಯದು. ಆದರೆ, ಈ ಜಪಾನಿ ಆಟಗಾರರು, ಪ್ರೇಕ್ಷಕರಿಂದ ನಮ್ಮ ದೇಶಕ್ಕೆ ಸಾಮಾಜಿಕ ಜೀವನದ ಬಗ್ಗೆ ಬಹುದೊಡ್ಡ ಪಾಠ ದೊರಕಿದೆ’. ತಾವು ಸಂದರ್ಶಿಸಿದ ದೇಶದ ಸ್ವಚ್ಛತೆ, ಸುಂದರತೆಯ ಬಗ್ಗೆ ಶ್ರಮಿಸುವ ಜೀವನ ವಿಧಾನಕ್ಕೂ ನಮ್ಮೂರಿನ, ನಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಉಪೇಕ್ಷೆ ತೋರುವ ನಮ್ಮ ವಿಧಾನಕ್ಕೂ ತಾಳೆ ಹಾಕಿದಾಗ ನಾವು ಸಾಗಬೇಕಾದ ದಾರಿ ಬಹುದೂರ ಇದೆ ಎನ್ನಿಸದಿರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT