ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ಎಂಬ ಬೆಳದಿಂಗಳು

Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ
ADVERTISEMENT

ಹಗಲುಗಳನ್ನು ಹೇಗಾದರೂ ಮರೆಯಬಹುದು. ಆದರೆ ಆಪ್ತರ ಹುಟ್ಟಿನ ಮತ್ತು ಸಾವಿನ ನಟ್ಟಿರುಳುಗಳನ್ನು ಮರೆಯುವುದು ಕಷ್ಟ. ಒಂದರಲ್ಲಿ ಸ್ವಾಗತ ಭಾಷಣದ ಉತ್ಸಾಹ, ಇನ್ನೊಂದರಲ್ಲಿ ವಂದನಾರ್ಪಣೆಯ ನಿಟ್ಟುಸಿರುಗಳು ಇರುತ್ತವೆ. ಗೆಳೆಯ ಸಿಜಿಕೆ ತೀರಿಕೊಂಡು ಒಂಬತ್ತು ವರ್ಷಗಳಾಯಿತು ಎಂದರೆ ನಂಬುವುದು ಕಷ್ಟ. ರಂಗನಿರಂತರದ ಗೆಳೆಯರು ತಮ್ಮ ಒಡನಾಡಿ ಬಂಧು ಸಿಜಿಕೆಯ ನೆನಪಿಗೆ ನಾಟಕೋತ್ಸವ ಆಚರಿಸುತ್ತಿರುವ ಆಹ್ವಾನ ಪತ್ರಿಕೆ ನೋಡಿದಾಗಲೇ ಆ ನಟ್ಟಿರುಳು ನೆನಪಾದದ್ದು. ಗೆಳೆಯನ ನೆನಪಿಗೆ ಕಲಾಗ್ರಾಮದಲ್ಲಿ ಮೂರು ನಾಟಕಗಳಾಗುತ್ತಿವೆ.

ಸಿಜಿಕೆಯ ಪ್ರಿಯಶಿಷ್ಯೆ ದು.ಸರಸ್ವತಿ ಅವರು ರಚಿಸಿದ ದೀಪಕ್ ಶ್ರೀನಿವಾಸನ್ ನಿರ್ದೇಶಿಸಿರುವ ‘ಹಸಿವು ಕನಸು’, ಅಥುಲ್ ಪುಗಾರ್ಡ್ ರಚಿಸಿ, ಪ್ರಸನ್ನ ನಿರ್ದೇಶಿಸಿರುವ ‘ಮೆಕ್ಕಾದಾರಿ’, ಬೆಸಗರಹಳ್ಳಿ ಡಾ. ಈಶ್ವರಾಚಾರ್ ರಚಿಸಿ, ಜೇಮ್ಸ್ ಸನ್ನಿ ನಿರ್ದೇಶಿಸಿರುವ ‘ಕುರಿದೊಡ್ಡಿ ಕುರುಕ್ಷೇತ್ರ’ ಈ ಮೂರು ನಾಟಕಗಳನ್ನು ಬೇರೆ ಬೇರೆ ತಂಡಗಳು ಪ್ರದರ್ಶಿಸುತ್ತಿವೆ. ನಾಟಕೋತ್ಸವ ಅಲ್ಲದೆ ಅವನ ನೆನಪಿಗೆ ಬೇರೇನೂ ಅರ್ಥಪೂರ್ಣ ಎನಿಸಲಾರದು.

ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿದ್ದರೂ ಅಪ್ಪಟ ರಂಗವ್ಯಸನಿಯಾಗಿದ್ದ ಸಿಜಿಕೆ, ನಿರ್ಗಮಿಸುವ ಮುನ್ನ ನಿರ್ದೇಶಿಸಿದ ಕೊನೆಯ ನಾಟಕ ನನ್ನ ‘ವಲಸೆ ಹಕ್ಕಿಯ ಹಾಡು’ ಕಾದಂಬರಿ ಆಧರಿಸಿದ ‘ಇಗೋ ಪಂಜರ ಅಗೋ ಮುಗಿಲು’. ನಾಟಕಕ್ಕೆ ಹೆಸರಿಟ್ಟವರು ಕಿ.ರಂ. ನಾಗರಾಜ. ಆ ವೇಳೆಗೆ ತುಂಬಾ ದಣಿದಿದ್ದ ಸಿಜಿಕೆ, ಮೂಲವಸ್ತುವಿನಿಂದ ದೂರ ಹೋಗಿದ್ದ. ಅದು ಅವನ ಕೊನೆಯ ನಾಟಕವಾಯಿತೇ ಹೊರತು ಯಶಸ್ವೀ ನಾಟಕ ಆಗಲಿಲ್ಲ. ಪ್ರತಿಭಾವಂತರನೇಕರ ಕೊನೆಯ ಅಂಕಗಳು ಯಶಸ್ವಿಯಾಗಿರುವುದು ವಿರಳ. ಜೀವದ ಹಣತೆಯಲ್ಲಿ ಛಲವಿದ್ದರೂ ಚೈತನ್ಯದ ತೈಲ ಕಡಿಮೆಯಾಗಿರುತ್ತದೇನೋ.

ಸಿಜಿಕೆಯ ಕೊನೆಯ ಕ್ಷಣಗಳು ಮತ್ತು ಜೀವ ಬಿಟ್ಟ ರಾತ್ರಿ ಈಗಲೂ ನನ್ನಲ್ಲಿ ಅಳಿಸಲಾಗದ ಮುದ್ರೆ ಒತ್ತಿವೆ. ನಾವು ಜಗಳವಾಡುತ್ತಲೇ ಸ್ನೇಹಿತರಾದದ್ದು. ನಾಟಕ ಗ್ರೇಟ್, ಸಿನಿಮಾ ಯೂಸ್‌ಲೆಸ್ ; ನಾಟಕ ವೇಸ್ಟು, ಸಿನಿಮಾ ಪವರ್‌ಫುಲ್ ಎಂಬಿತ್ಯಾದಿ ಜಗಳ ಯಾವಾಗಲೂ ಇದ್ದೇ ಇರುತ್ತಿತ್ತು. ತಂತಾನೇ ಯಾವುದೂ ಶ್ರೇಷ್ಠ ಅಲ್ಲ ; ಕನಿಷ್ಠವೂ ಅಲ್ಲ. ಅವುಗಳನ್ನು ಪಳಗಿಸಿಕೊಳ್ಳುವುದೇ ಅಂತಿಮ ಸತ್ಯ ಎಂದು ತಿಳಿದೂ ಗುದ್ದಾಡುತ್ತಿದ್ದೆವು. ಅವನ ಪಾಲಿಗೆ ತಪೋನಂದನವಾಗಿದ್ದ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಕುಳಿತು ಬನ್ನು ಟೀ ಕುಡಿಯುತ್ತಾ ಕೊಂಕು, ಕೀಟಲೆ, ಜಗಳ, ಕಾಳಜಿ ಮತ್ತು ಕೆಲವೊಮ್ಮೆ ಮೌನದಿಂದ ಇರುತ್ತಿದ್ದ ಸಿಜಿಕೆ ನಿತ್ಯನಿರಂತರ ಚಡಪಡಿಕೆಯ ಮನುಷ್ಯನಾಗಿದ್ದ. ಅಂದು ಚೌಟರ ತೋಟದಲ್ಲಿ ಎಂ.ಪಿ. ಪ್ರಕಾಶ್, ಮಾನವ ಹಕ್ಕುಗಳ ಪ್ರತಿಪಾದಕ ದೇವೇಂದ್ರ ಶರ್ಮ, ನೀರಿನ ಗಾಂಧಿ ಎಂದೇ ಹೆಸರಾದ ರಾಜೇಂದ್ರಸಿಂಗ್, ಕವಿ ಆರ್.ಜಿ.ಹಳ್ಳಿ ನಾಗರಾಜ್ ಎಲ್ಲ ಸೇರಿದ್ದೆವು. ಇನ್ನು ಮೂರೇ ದಿನದಲ್ಲಿ ಅಪಹರಿಸಲು ಕಳ್ಳಬೆಕ್ಕಿನಂತೆ ಹೊಂಚುಹಾಕುತ್ತಿದ್ದ ಸಾವಿನ ಬಗ್ಗೆ ಗೊತ್ತೇ ಇರದ ಸಿಜಿಕೆ, ತನ್ನ ಬುತ್ತಿಯಲ್ಲಿ ಹತ್ತಾರು ವರ್ಷ ಆಯುಷ್ಯ ಇರಿಸಿಕೊಂಡವನಂತೆ ದಲಿತರ, ರೈತರ ಕಷ್ಟಗಳ ಬಗ್ಗೆ, ಅವುಗಳನ್ನು ನಿವಾರಿಸುವುದರ ಬಗ್ಗೆ ಮಾತನಾಡುತ್ತಿದ್ದ. ನನಗೆ ಚಿತ್ರೀಕರಣವಿದೆ ಹೊರಡ್ತಿದ್ದೀನಿ. ನೀನು ಯಾವ ಕಾರಣಕ್ಕೂ ಬರೋದು ಬೇಡ. ವಿಶ್ರಾಂತಿ ತಗೋ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ‘ಈ ಪ್ರೊಡಕ್ಷನ್ ಮ್ಯಾನೇಜರ್ ಬಂದು ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಿ ಟೀ ಕೊಡದೆ ಅದು ಹೇಗೆ ಶೂಟಿಂಗ್ ಮಾಡ್ತೀಯ?’ ಎಂದು ಹಟಕ್ಕೆ ಬಿದ್ದ.

ಅದು ಅವನ ಶ್ರಮಿಕ ಪ್ರಜ್ಞೆ. ತಿರುಗಾಲ ತಿಪ್ಪನಾದ ಸಿಜಿಕೆಗೆ ಸುತ್ತಾಡಲು ಚೌಟರು ಒಂದು ಕಾರು ಕೊಟ್ಟಿದ್ದರು. ಬೆಳಗಿನ ಜಾವ ಸಿರಿಗೆರೆಯ ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಮೊದಲ ಶಾಟ್ ತೆಗೆಯುವ ಮುನ್ನವೇ ಹಿಂಬದಿಯಿಂದ ಅವನ ‘ಗುಡ್‌ಮಾರ್ನಿಂಗ್. ಸಿಜಿಕೆ ಹಿಯರ್!’ ಅನ್ನುವ ಉದ್ಗಾರ ಕೇಳಿಸಿತು. ದಣಿದಿದ್ದ, ಅನಾರೋಗ್ಯದ ದೇಹ ಹೊತ್ತು ರಾತ್ರಿ ಇಡೀ ಪ್ರಯಾಣ ಮಾಡಿ ಕಾಸರಗೋಡಿನಿಂದ ಸಿರಿಗೆರೆಗೆ ಬಂದೇಬಿಟ್ಟಿದ್ದ. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಡೆಸುತ್ತಿದ್ದ ಸದ್ಧರ್ಮ ಪೀಠ ಎಂಬ ನ್ಯಾಯಾಲಯ ಕುರಿತು ‘ಪ್ರಜಾವಾಣಿ’ಯಲ್ಲಿ ಸಿಜಿಕೆ ಒಂದು ಲೇಖನ ಬರೆದಿದ್ದ. ಪೊಲೀಸರು ವಕೀಲರು ಇಲ್ಲದ, ಜಾತ್ಯತೀತವಾದ ಮತ್ತು ನಿಷ್ಪಕ್ಷಪಾತವಾದ, ವಿಳಂಬವಿಲ್ಲದ, ವಿವಾಹ ವಿಚ್ಛೇದನಗಳನ್ನು ಪ್ರೋತ್ಸಾಹಿಸದ, ಗುರುಗಳೇ ಅಂತಿಮ ತೀರ್ಪು ನೀಡುವ ಆ ಧಾರ್ಮಿಕ ನ್ಯಾಯಾಲಯದ ಚಟುವಟಿಕೆಗಳನ್ನು ಚಿತ್ರೀಕರಿಸಿದೆವು. ಡಾ. ಸಿದ್ದಯ್ಯನವರ ಮಾರ್ಗದರ್ಶನದಲ್ಲಿ ಶಾಂತಿವನ, ಅನುಭವ ಮಂಟಪ, ರಾಣೆಬೆನ್ನೂರು, ಆನೆಗೊಂದಿ ಮುಂತಾದ ಜಾಗಗಳಲ್ಲಿ ಚಿತ್ರೀಕರಣ ನಡೆಸುವಾಗ ಸಿಜಿಕೆ ಕುಂಟಿಕೊಂಡೇ ಎಲ್ಲರಿಗಿಂತ ಮುಂಚೆ ಹೋಗಿರುತ್ತಿದ್ದ. ವರಮಾನವಿಲ್ಲದ ಯಜಮಾನಿಕೆ, ತಾನೇ ಎದ್ದು ನಿಲ್ಲಲಾಗದಿದ್ದರೂ ಬೀಳುವವರನ್ನು ಆತುಕೊಳ್ಳುವುದು, ಜನಮುಖಿಯಾದುದರಲ್ಲಿ ದೇಹಾತ್ಮಗಳನ್ನು ತೊಡಗಿಸಿಕೊಳ್ಳುವುದು ಅವನಿಗಿಷ್ಟವಾದ ಕಾಯಕವಾಗಿತ್ತು. ಪುಟ್ಟ ಸಾಕ್ಷ್ಯಚಿತ್ರ ಒಂದಕ್ಕೆ ಅವನು ಜೀವಾರ್ಪಣೆ ಮಾಡುವಂಥದ್ದೇನಿರಲಿಲ್ಲ. ಆದರೆ ಒಂದು ಸೃಷ್ಟಿಶೀಲ ಕಾಯಕದಲ್ಲಿ ತೊಡಗಿಕೊಂಡಿರುವಾಗಲೇ ತನಗಿಷ್ಟವಾದ ತರಳಬಾಳು ಮಠದಲ್ಲಿ, ಅಮೂಲ್ಯವಾದ ತನ್ನದನ್ನು ಅರ್ಪಿಸಿಕೊಂಡುಬಿಡಬೇಕೆಂಬ ತೀರ್ಮಾನಕ್ಕೆ ತಲುಪಿದ್ದನೆನಿಸುತ್ತದೆ. ನಾಳೆ ನಿಂಗೆ ಸಿಗಲ್ಲಣ್ಣ ಎಂದು ಅವನು ಹೇಳಿದ ಕೊನೆಯ ಮಾತು ಮಾರ್ಮಿಕ ಎಂದು ಈಗ ಅನ್ನಿಸುತ್ತಿದೆ. ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ನಾಟಕವನ್ನೂ, ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಜೀವವನ್ನೂ ಅರ್ಪಿಸಿ ಹೋಗಿದ್ದು ಅವನ ಒಂದು ವ್ಯವಸ್ಥಿತ ಹುನ್ನಾರದಂತೆ ತೋರುತ್ತಿದೆ. ಅಚ್ಚರಿ ಏನೆಂದರೆ ಮಾರ್ಕ್ಸ್‌ವಾದ, ಬಂಡಾಯ, ಸಮುದಾಯ, ಕ್ರಾಂತಿ, ಚಳವಳಿಗಳು, ನಾಟಕ ಅನ್ನುತ್ತಿದ್ದ ಸಿಜಿಕೆಯ ಕೊನೆಯ ಬಿಂದು ಒಂದು ಮಠವಾಗಿತ್ತು. ಆ ಮಠದಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ವೈಚಾರಿಕ ಕಿಡಿಗಳನ್ನು ಸಿಜಿಕೆಯ ಪ್ರಜ್ಞೆ ಗುರುತಿಸಿ ಅಲ್ಲಿಯೇ ಬಯಲಾಯಿತು.

ಸಿಜಿಕೆಯನ್ನು ಅರಿಯಲು ರಂಗನಿರಂತರ ಪ್ರಕಟಿಸಿರುವ ಅವರ ಆತ್ಮಕಥಾನಕ ‘ಕತ್ತಾಲೆ ಬೆಳದಿಂಗಳೊಳಗ’ ಓದಬೇಕು. ಜಿ. ರಾಜಶೇಖರ್ ಹೇಳಿರುವಂತೆ ಇದರಲ್ಲಿ ಆತ್ಮವಿಮರ್ಶೆಗಿಂತ ಆತ್ಮಮರುಕವೇ ಹೆಚ್ಚಾಗಿರಬಹುದು. ಆದರೆ ಇಲ್ಲಿರುವ ಅಸಂಖ್ಯ ವಿವರಗಳು, ದೃಶ್ಯಗಳು, ಘಟನೆಗಳು, ವ್ಯಕ್ತಿಗಳು ಬ್ರಹ್ಮಾಂಡವನ್ನೇ ಕಟ್ಟಿಕೊಡುತ್ತವೆ. ಚಳ್ಳಕೆರೆಯ ಜನ, ಸಕ್ಕರೆಯನ್ನು ನೋಡಲು ಮಂಡ್ಯಕ್ಕೆ ಬಂದಿದ್ದು ಮಾರ್ಕ್ವೆಜ್‌ನ ಒಂದು ಕಾದಂಬರಿಯಲ್ಲಿ ಹಳ್ಳಿಯ ಜನ, ಐಸ್ ನೋಡಲು ಪೇಟೆಗೆ ಬಂದದ್ದನ್ನು ನೆನಪಿಸುತ್ತದೆ ಎನ್ನುತ್ತಾರೆ ರಾಜಶೇಖರ್. ಸಿಜಿಕೆ ಆತ್ಮಕಥನವನ್ನು ಶುರು ಮಾಡುವ ಮುನ್ನ ಒಂದು ಸವಾಲು ಹಾಕುತ್ತಾರೆ. ‘‘ಗೆಳೆಯ ಎನ್.ಕೆ. ಮೋಹನರಾಮ್ ‘ಸತ್ತವರ-ನೆರಳು’ ನಾಟಕದೊಟ್ಟಿಗೆ ಇದ್ದಾಗ ‘ನನ್ನನ್ನೂ ಕೂಡಾ ನಾಟಕಕ್ಕೆ ಸೇರಿಸಿಕೊಳ್ಳಿ’ ಎಂದು ಕೇಳಿದ್ದೆ. ಅವನು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ ಕಾಲನ್ನು ವಿಶೇಷವಾಗಿ ಗಮನಿಸಿ ‘ರಂಗಭೂಮಿಗೆ ನಿನ್ನಂಥವನ ಸೇರ್ಪಡೆ ಸಾಧ್ಯವೇ ಇಲ್ಲ’ ಅಂದುಬಿಟ್ಟ. ಈಗ ನಾನು ಏನು ಹೇಳಬಹುದು?’’ ನನಗೆ ಈ ಸವಾಲಿನ ಅಗತ್ಯವೇ ಇರಲಿಲ್ಲ ಅನಿಸುತ್ತದೆ.

ನೀನು ಸಾಹಿತಿಯೇ ಅಲ್ಲ, ಪತ್ರಕರ್ತನೇ ಅಲ್ಲ, ನಿರ್ದೇಶಕನೇ ಅಲ್ಲ, ನಾಟಕಕಾರನೇ ಅಲ್ಲ ಎನ್ನುವ ಹೇಳಿಕೆಗಳಿಗೆ ಅವರವರ ಕೃತಿಗಳು ಮತ್ತು ಬದುಕುಗಳೇ ಉತ್ತರಿಸಬೇಕು ಮತ್ತು ಉತ್ತರಿಸುತ್ತವೆ; ಮಾತುಗಳಲ್ಲಿ ಅಲ್ಲ. ಇತರ ನಾಟಕಕಾರರ ಬಗ್ಗೆ ಸಿಜಿಕೆಯೂ ಇಂಥ ಸವಾಲು ಎಸೆದಿದ್ದುಂಟು. ಖಾಸಗಿ ತಮಾಷೆಗಳು, ಟೀಕೆಗಳು ಬೇರೆ. ಸಾರ್ವಜನಿಕ ಹೇಳಿಕೆ, ನಿಂದನೆಗಳು ಬೇರೆ. ಕಾಲು ಊನಗೊಂಡಿದ್ದ ಸಿಜಿಕೆಯನ್ನು ಕಾಸರಗೋಡು ಚಿನ್ನನಂಥ ಕೆಲವು ಗೆಳೆಯರು ತಮಾಷೆಗಾಗಿ ‘ಅಸಮಕಾಲೀನ ರಂಗಭೂಮಿ’ ಎನ್ನುತ್ತಿದ್ದರು. ಅದಕ್ಕೆ ನಕ್ಕು ಸುಮ್ಮನಾಗುವಷ್ಟು ಪ್ರಬುದ್ಧತೆ ಸಿಜಿಕೆಗೂ ಇತ್ತು. ಸಿಜಿಕೆಯ ವ್ಯಕ್ತಿತ್ವ ಮತ್ತು ನಾಟಕಗಳನ್ನು ಕುರಿತು ಕಿ.ರಂ. ನಾಗರಾಜ ‘‘ಸಿಜಿಕೆ ಪ್ರತಿಭೆ ಮೂಲತಃ ಪ್ರಾಗ್ಮಾಟಿಕ್ ಸ್ವರೂಪದ್ದು. ಯಾವುದೇ ಚಿಂತನೆ, ವಿಚಾರ, ತಾತ್ವಿಕ ನೆಲೆ ಇರಲಿ, ಅದನ್ನು ನಮ್ಮ ಸದ್ಯದ ವ್ಯಾವಹಾರಿಕ ಸಂದರ್ಭದೊಂದಿಗೆ ಸೂಕ್ಷ್ಮವಾಗಿ ಪರಿಶೀಲಿಸುವ ತುರ್ತು ಅವರದು. ಹೀಗಾಗಿ ಅರ್ಥಹೀನ ‘ಬದ್ಧತೆ’ಯನ್ನು ಅವರ ವ್ಯಕ್ತಿತ್ವ ತುಂಬ ನಿರಾಳವಾಗಿ ನಿರಾಕರಿಸುತ್ತದೆ. ನಾನು ಸಿಜಿಕೆಯನ್ನು ಗ್ರಹಿಸುತ್ತ ಬಂದಿರುವುದು ಹೀಗೆ. ಸಿಜಿಕೆ ಸ್ಮರಣೆಗಳ ಜಗತ್ತನ್ನು ವರ್ತಮಾನಕ್ಕೆ ತಂದು ಅದಕ್ಕೆ ಕ್ರಿಯಾಶೀಲ ಸೂಕ್ಷ್ಮತೆಯನ್ನು ತಂದುಕೊಡುವ ಶಕ್ತಿ ಇರುವ ಗಂಭೀರ, ಗಟ್ಟಿ ನಿರ್ದೇಶಕರಲ್ಲಿ ಒಬ್ಬರು. ಇದನ್ನು ‘ಮಹಾಚೈತ್ರ’, ‘ಒಡಲಾಳ’ದಂತಹ ರಂಗನಿರ್ಮಿತಿಯಲ್ಲಿ ಸಾಬೀತು ಮಾಡಿದ್ದಾರೆ. ಸಿಜಿಕೆ ವ್ಯಕ್ತಿತ್ವಕ್ಕೆ ಎರಡು ನೆಲೆಗಳಿವೆ.

ಮೊದಲನೆಯದು ತುಂಬಾ ಖಾಸಗಿಯಾದದ್ದು. ಎರಡನೆಯದು ಬಹುಮುಖಿಯಾದದ್ದು. ಇವೆರಡನ್ನೂ ಕ್ರಿಯಾತ್ಮಕವಾಗಿ ಸಂಯೋಜಿಸುವುದೇ ಅವರ ಪ್ರತಿಭೆ. ಎಲ್ಲ ಚಿಂತನೆಗಳನ್ನು ಗಂಭೀರವಾಗಿ ಕರಗಿಸಿ ಅದಕ್ಕೆ ತಕ್ಕ ರೂಪವನ್ನು ನಿರಂತರವಾಗಿ ನಿರ್ಮಿಸುವುದರಲ್ಲಿ ಅವರು ಪರಿಣತರು. ನಿರ್ಧಾರಿತ ಕಲ್ಪನೆಗಳನ್ನು ಒಡೆದು ಹೊಸ ಸಾಧ್ಯತೆಗಳನ್ನು ಶೋಧಿಸುವುದರಲ್ಲಿ ಅವರು ನಿರಂತರ ಆಸಕ್ತರು’’ ಎನ್ನುತ್ತಾರೆ. ಸಿಜಿಕೆ ಅನೇಕರಂತೆ ಹಳ್ಳಿಗಾಡಿನಿಂದ ವಲಸೆ ಬಂದು ತನ್ನ ಅನನ್ಯತೆಯನ್ನು ನಗರದಲ್ಲಿ ಕಂಡುಕೊಂಡವರು. ಅದಕ್ಕಾಗಿ ಹೋರಾಟ ನಡೆಸಿದವರು. ಆಲಸಿಗಳ ಬೆನ್ನ ಮೇಲೆ ಗುದ್ದಿ ಕ್ರಿಯಾಶೀಲರಾಗಿಸುತ್ತಿದ್ದವರು. ಆತ್ಮಕಥನದ ಮುನ್ನುಡಿಯಲ್ಲಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ‘‘ಸಿಜಿಕೆಯಲ್ಲಿ ಬಂಡಾಯವೆನ್ನುವುದು ಹೊರಗಿನಿಂದ ಹೇರಿಕೊಂಡ ಭಾರವಲ್ಲ ; ಹುಟ್ಟು ಗುಣವಾಗಿ, ಉಸಿರಾದ ಬದುಕು. ಇವರ ಬಂಡಾಯದಲ್ಲಿ ತಾತ್ವಿಕ ತರ್ಕಕ್ಕಿಂತ ಆನುಭಾವಿಕ ಒತ್ತಾಸೆ ಒಳದ್ರವ್ಯವಾಗಿದೆ. ಎಪ್ಪತ್ತರ ದಶಕದ ಈ ಎಲ್ಲ ಚಳವಳಿಗಳಲ್ಲಿ ಒಂದಲ್ಲ ಒಂದು ರೀತಿಯ ಒಳಸಂಬಂಧ ಬೆಳೆಸಿಕೊಂಡಿದ್ದ ಸಿಜಿಕೆ ಅವುಗಳನ್ನು ನಿತ್ಯದ ಬದುಕಾಗಿಸಿಕೊಂಡು ಹೋರಾಟ ಮಾಡಿದವರು. ನಮ್ಮ ಶ್ರೇಣೀಕರಣ ವ್ಯವಸ್ಥೆಯಲ್ಲಿ ಹಲವು ಜೇನುಗೂಡುಗಳಿವೆ. ಆ ಜೇನುಹುಟ್ಟಿಗೆ ಕೈಹಾಕುವ ಕೆಲಸ ಅಷ್ಟು ಸುಲಭದ್ದಲ್ಲ. ಅದು ಯೋಜನಾಗುರು ದ್ರೋಣನ ಚಕ್ರವ್ಯೂಹವಿದ್ದಂತೆ. ದ್ರೋಣವ್ಯೂಹ ಆವೇಶದಿಂದ ಬಂದವನನ್ನು ಮೊದಲು ಒಳಕ್ಕೆ ಬಿಟ್ಟುಕೊಳ್ಳುತ್ತದೆ. ಆನಂತರ ಬಂದ ಬಾಗಿಲು ಮುಚ್ಚಿ ಅವನನ್ನು ಏಕಾಂಗಿಯಾಗಿಸುತ್ತದೆ. ಒಳಹೊಕ್ಕ ಮೇಲೆ ಅಲ್ಲಿಯ ಸೂಕ್ಷ್ಮಗಳು ಅಮೂರ್ತ ಹಾಗೂ ಮರ್ಮಾಘಾತಕ ಸ್ವರೂಪದವು. ಇಂಥ ಚಕ್ರವ್ಯೂಹವನ್ನು ಹೊಕ್ಕ ಸಾಂಸ್ಕೃತಿಕ ಅಭಿಮನ್ಯುಗಳು ಹಲವು ಜನ. ಆದರೆ ಇಂಥ ವ್ಯೂಹವನ್ನು ಒಳಹೊಕ್ಕ ಸಿಜಿಕೆಯಲ್ಲಿ ‘ಕೇವಲ ಆವೇಶ’ ಇರಲಿಲ್ಲ. ಮಂಡ್ಯತನ ಹಾಗೂ ಪಾರದರ್ಶಕ ನಡೆಗಳೆನ್ನುವ ಹತಾರಗಳಿದ್ದವು. ಹೀಗಾಗಿ ಈ ಏಕಲವ್ಯ ಪ್ರತಿಭೆ ನಿರಂತರ ಪ್ರಯೋಗಶೀಲತೆಗೆ ತೊಡಗಿ ವ್ಯೂಹವನ್ನು ಭೇದಿಸಿ ಗೆದ್ದ ಶಕ್ತಿಯಾಗಿದೆ’’ ಎನ್ನುತ್ತಾರೆ.

ಕುಡಿತ, ಸಿಗರೇಟುಗಳು ಬಲಿ ತೆಗೆದುಕೊಂಡವು ಎಂಬುದನ್ನು ನಮ್ಮ ಸಂದರ್ಭದ ಅನೇಕ ಪ್ರತಿಭಾವಂತರುಗಳ ಬಗ್ಗೆ ಹೇಳಬಹುದು. ಜಯದೇವ ಆಸ್ಪತ್ರೆಯ ಜನಾನುರಾಗಿ ಡಾ.ಸಿ.ಎನ್. ಮಂಜುನಾಥ್ ಸಿಜಿಕೆಗೆ ಮರುಜೀವ ಕೊಟ್ಟಿದ್ದರು. ಸಿಜಿಕೆಯ ಶವಸಂಸ್ಕಾರಕ್ಕೆ ಬಂದಿದ್ದ ಜನಸಾಗರ ಆತ ತಲುಪಿದ್ದ ಅಸಂಖ್ಯ ಹೃದಯಗಳ ಪ್ರತೀಕವಾಗಿತ್ತು. ನನ್ನ ಹಳ್ಳಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಮುಂದಾದಾಗ ಯಾವ ಕಂಬ ಎಲ್ಲಿ ನಿಲ್ಲಬೇಕು ಎಂದು ಹಂಚಿಕಡ್ಡಿಯಲ್ಲಿ ಅಳೆಯುತ್ತಿದ್ದವನು ಅವನೇ. ‘ಅಮೃತಧಾರೆ’ಯ ನೂರಾರು ಧ್ವನಿಸಾಂದ್ರಿಕೆಗಳನ್ನು ಅನೇಕರಿಗೆ ಕಳುಹಿಸಿ ‘ಹೇಗಿದೆ? ಕೇಳಿ ಹೇಳಿ’ ಎಂದು ಕಾಗದ ಬರೆದಿದ್ದವನು ಅವನೇ. ಹೊಟ್ಟೆ ಕಿಚ್ಚುಗಳ ದಾವಾನಲವೇ ಅಬ್ಬರಿಸುತ್ತಿರುವ ಈ ಕಾಲದಲ್ಲಿ ಹೀಗೆ ತಾಯಂತೆ ಆತುಕೊಳ್ಳುವ ಒದ್ದುಕೊಳ್ಳುವ ಗೆಳೆಯರು ಅಪರೂಪವಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT