ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ‘ನಾರಿ ಶಕ್ತಿ’ಯ ನಡೆ

Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ಈ ಬಾರಿಯ ಗಣರಾಜ್ಯೋತ್ಸವ ದಿನಕ್ಕೆ 13 ದಿನಗಳು  ಬಾಕಿ ಉಳಿದಿವೆ. ನರೇಂದ್ರ ಮೋದಿಯವರು  ಪ್ರಧಾನಿಯಾಗಿ ಅಧಿಕಾರ ಸ್ವೀಕ­ರಿಸಿದ ನಂತರ  ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ  ಇದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ  ಈ ಗಣರಾಜ್ಯೋತ್ಸವ ದಿನದಂದು ಮತ್ತೊಂದು ಪ್ರಜಾಪ್ರಭುತ್ವ ರಾಷ್ಟ್ರ­ವಾದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿ­ರುವುದು ವಿಶೇಷ.

ದೇಶದ ಸೇನಾಬಲದ ಪ್ರದರ್ಶನದ ಜತೆಗೆ ವೈವಿಧ್ಯಮಯ ಸಂಸ್ಕೃತಿಯ ಅನಾವರಣಕ್ಕೆ ರಾಜಪಥದಿಂದ ಕೆಂಪುಕೋಟೆಯವರೆಗಿನ 8 ಕಿ.ಮೀ. ಉದ್ದದ ಮಾರ್ಗ  ಎಂದಿನಂತೆ ಈ ಬಾರಿಯೂ ಸಾಕ್ಷಿಯಾಗಲಿದೆ. ರಾಜಪಥದಲ್ಲಿ ಸಾಗುವ ಈ  ಮೆರವಣಿಗೆಯಲ್ಲಿ ನಿಯಮಿತ ಪಥ ಸಂಚಲನಗಳಲ್ಲದೆ ಸಶಸ್ತ್ರ ಪಡೆಗಳ  ಮಹಿಳಾ ತುಕಡಿಗಳ ಪಥ ಸಂಚಲನಗಳು ಈ ಬಾರಿಯ ವಿಶೇಷ. ಬರೀ ಮಹಿಳಾ ಸೇನಾಧಿಕಾರಿಗಳೇ ಇರುವ  ತುಕಡಿಗಳ ಪಥ ಸಂಚಲನ ನಡೆಸ­ಬೇಕೆಂಬ ಬಗ್ಗೆ ಆದೇಶ ಬಂದಿರುವುದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಂದ. ‘ನಾರಿ ಶಕ್ತಿ’ ಎಂಬುದು ಈ ಬಾರಿಯ ಪೆರೇಡ್‌ನ  ಮುಖ್ಯ ಪರಿಕಲ್ಪನೆ ಆಗಿರಬೇಕೆಂಬುದು  ಅವರ ನಿರೀಕ್ಷೆ.

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಅಧಿಕಾರಿ­ಗಳಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಭೂ ಸೇನೆ, ವಾಯು ಪಡೆ ಹಾಗೂ ನೌಕಾಪಡೆಗಳ    ಮೂರು ತುಕಡಿಗಳಲ್ಲೂ ತಲಾ 148 ಮಹಿಳಾ ಅಧಿಕಾರಿಗಳು ಪಥಸಂಚ­ಲನ­­ದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೇನೆಯ ಮಹಿಳಾ ಅಧಿಕಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಆದರೆ 2012ರ ಗಣರಾಜ್ಯೋತ್ಸವದ ಪಥಸಂಚಲನ­ದಲ್ಲಿ ಭಾರತೀಯ ವಾಯುಪಡೆಯ  (ಐಎಎಫ್) ತುಕಡಿಯ  ನೇತೃತ್ವವನ್ನು  ಐಎಎಫ್ ಮಹಿಳಾ ಅಧಿಕಾರಿ ಸ್ನೇಹಾ ಶೆಖಾ­ವತ್ ಅವರು ವಹಿಸಿ ಇತಿಹಾಸ ನಿರ್ಮಿಸಿದ್ದರು.

ಎವರೆಸ್ಟ್  ಪರ್ವತ ಏರಿ ದಾಖಲೆ ಮೆರೆದಿ­ರುವ ಭಾರತೀಯ  ಮಹಿಳಾ ಸೇನಾಧಿಕಾರಿಗಳ  ಪರ್ವತಾರೋಹಿ ತಂಡವನ್ನು ಚಿತ್ರಿಸುವ  ಸ್ತಬ್ಧ ಚಿತ್ರವನ್ನೂ    ಈ ಪೆರೇಡ್‌ನಲ್ಲಿ  ಭಾರತೀಯ ಸೇನೆ ಪ್ರದರ್ಶಿಸಲಿದೆ.  ಜೊತೆಗೆ ಮಹಿಳಾ ಅಧಿಕಾರಿಯೊಬ್ಬರು ನಿರ್ವಹಿಸುತ್ತಿರುವಂತಹ ಸೇನಾ ಉಪಗ್ರಹ ನಿರ್ವಹಣಾ ಕೇಂದ್ರದ ದೃಶ್ಯ­ವಿರುವ ಸ್ತಬ್ಧಚಿತ್ರ ಮತ್ತೊಂದು ಆಕರ್ಷಣೆ­ಯಾಗಲಿದೆ.
ಗಣರಾಜ್ಯೋತ್ಸವ ದಿನದಂದು ಪ್ರದರ್ಶನ­ಗೊಳ್ಳಲಿರುವ ಈ ‘ನಾರಿಶಕ್ತಿ’ ನಡೆದುಬಂದ   ಹಾದಿ ಸುಗಮವಾಗಿರಲಿಲ್ಲ. ಹಲವು ಅಡೆತಡೆ­ಗಳ ಕಲ್ಲುಮುಳ್ಳುಗಳ ಹಾದಿ ಅದು. ಈ ಅಡೆತಡೆ­ಗಳು ಇನ್ನೂ ಪೂರ್ಣವಾಗಿ ಮುಕ್ತವಾಗೇನೂ ಇಲ್ಲ.

ಸೇನಾರಂಗದಲ್ಲಿ ಮಹಿಳಾ ಪಾಲ್ಗೊಳ್ಳು­ವಿಕೆಯ ಭಾರತದ ಇತಿಹಾಸ ಶ್ರೀಮಂತ­ವಾದುದು. ‘ ನಮ್ಮ ಮೊದಲ ನಾಯ­ಕರ ಸಾಲಲ್ಲಿ ಮಹಿಳೆ ಇದ್ದಾಳೆ. ಆಕೆ ಕುದುರೆ ಸವಾರಿ ಮಾಡಿದಳು. ರಣರಂಗದಲ್ಲಿ ವೀರ­ಮರಣ ಅಪ್ಪಿದಳು. ಆಕೆಯನ್ನು ಭಾರತೀಯ­ರೆಂದೂ ಮರೆಯುವುದು ಸಾಧ್ಯವಿಲ್ಲ. ಇಂತಹ ಎಷ್ಟೋ ಉದಾಹರಣೆಗಳನ್ನು ಕೊಡಬಲ್ಲೆ. ಆದರೆ ಇಷ್ಟು ಸಾಕು’  ಎನ್ನುತ್ತಾ 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಮರದಲ್ಲಿ ಸೇನೆಯನ್ನು ಮುನ್ನಡೆಸಿದ ವೀರರಾಣಿ ಝಾನ್ಸಿ ಲಕ್ಷ್ಮಿಬಾಯಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಿಸಿದ್ದರು.  ಸೇನೆಗೆ ಸೇರಲು ಮಹಿಳೆಯರನ್ನು ಹುರಿದುಂಬಿಸುತ್ತಾ ಬ್ಯಾಂಕಾಕ್‌­ನಲ್ಲಿ ನೇತಾಜಿ ಮಾಡಿದ್ದ ಭಾಷಣದ ಉಲ್ಲೇಖವಿದು.

‘ಝಾನ್ಸಿ ರಾಣಿ ರೆಜಿಮೆಂಟ್’, ನೇತಾಜಿ­ಯವರ ಇಂಡಿಯನ್ ನ್ಯಾಷನಲ್ ಆರ್ಮಿಯ ಮಹಿಳಾ ಘಟಕವಾಗಿತ್ತು. ಇದರ ಸದಸ್ಯೆ­ಯಾಗಿದ್ದ ಪ್ರೊತಿಮಾ ಪಾಲ್ 1944ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ಹೆಡ್ ಕ್ವಾರ್ಟರ್ಸ್ ನ ಬ್ರಾಡ್‌ಕಾಸ್ಟಿಂಗ್  ಸ್ಟೇಷನ್‌ನಿಂದ ಮಾಡಿದ ಭಾಷಣ ಹೀಗಿತ್ತು:  ‘ನಾನು ಝಾನ್ಸಿ ರಾಣಿ ರೆಜಿಮೆಂಟಿನ ಸಾಧಾರಣ ಸೈನಿಕಳು.  ಆದರೆ ಬರೀ ನೆಪಮಾತ್ರದ ಬೊಂಬೆ ಸೈನಿಕಳಲ್ಲ. ನಿಜವಾದ ಅರ್ಥದಲ್ಲಿ ಸೈನಿಕಳು. ಭಾರತದ ಶತ್ರುವನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡ ಮಿಲಿಟರಿ ಬೂಟು ಹಾಗೂ ಸಮವಸ್ತ್ರ ಧರಿಸಿದ ಸೈನಿಕಳು.

ಮಾನವ ಮನಸ್ಸಿನಲ್ಲಿ ಯಾವೆಲ್ಲಾ ಮೃದು, ಸುಂದರ ಗುಣಗಳಿವೆಯೋ ಅವನ್ನು ಹೆಣ್ಣು ಎಂದು ಒಂದೇ ಪದದಿಂದ ಕರೆಯಬಹುದು ಎಂದು ಕೆಲವರು ಹೇಳಬಹುದು. ಹೀಗಾಗಿ ಸೈನಿಕನ ಕಠಿಣ ಹೃದಯದ ಗುಣ ಸ್ವಭಾವಗಳನ್ನು ಮಹಿಳೆಗೆ ಬೆಳೆಸಿಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆಯೆ? ಆದರೆ ಆಳವಾದ ಬದ್ಧತೆಯಿಂದ ಘೋಷಿಸು­ತ್ತೇನೆ. ಅದು ಸಾಧ್ಯತೆ ಮಾತ್ರವಲ್ಲ. ಝಾನ್ಸಿ ರಾಣಿ ರೆಜಿಮೆಂಟಿನ ಸ್ಥಾಪನೆಯಲ್ಲಿ ಸಾಧ್ಯವಾದ ಅಂಶ.’  ಇಂತಹ ಮಾತುಗಳಿಗೆ ಪೂರಕವಾಗಿ ಇನ್ನೂ ಒಂದಿಷ್ಟು ಹೆಸರುಗಳು ನೆನಪಿಗೆ ಬರು­ತ್ತವೆ.  ಬ್ರಿಟಿಷರ ವಿರುದ್ಧ ಸಾಹಸದಿಂದ ಹೋರಾ­ಡಿದ ಅವಧ್‌ನ ಬೇಗಂ ಹಜರತ್ ಮಹಲ್ ಹಾಗೂ  ಕರ್ನಾಟಕದ  ಕಿತ್ತೂರು ರಾಣಿ ಚನ್ನಮ್ಮ ನನ್ನು ಮರೆಯಲು ಸಾಧ್ಯವೆ? ಇಂತಹ ಇತಿಹಾಸದ ಹಿನ್ನೆಲೆಯಿರುವ ಭಾರತದಲ್ಲಿನ ಸ್ಥಿತಿ ಈಗ ಹೇಗಿದೆ?

ಅಧಿಕಾರಿ ಕೇಡರ್‌ಗಳಲ್ಲಿ ಕಂಡುಬಂದ ಕೊರತೆ­ಯನ್ನು ತುಂಬಿಕೊಳ್ಳುವುದಕ್ಕಾಗಿ ಮಹಿಳೆ­ಯರನ್ನು ನೇಮಕ ಮಾಡಿಕೊಳ್ಳುವ ಯೋಜನೆ­ಯನ್ನು ಸೇನಾ ಕೇಂದ್ರ ಕಚೇರಿ ಕಳೆದ ಶತ­ಮಾನದ 90ರ ದಶಕದಲ್ಲಿ ಆರಂಭಿಸಿತು. 1993ರಲ್ಲಷ್ಟೇ ಆರಂಭವಾದ ಈ ವಿಶೇಷ ಪ್ರವೇಶ ಯೋಜನೆ ಅನ್ವಯ ಪ್ರತಿ ವರ್ಷ ಈಗ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

1993ರಲ್ಲಿ ಜನರಲ್ ಎಸ್.ಕೆ. ರೋಡ್ರಿಗ್ಸ್ ಅವರು ಸೇನಾ ಮುಖ್ಯಸ್ಥರಾಗಿದ್ದರು. ಭೂ, ವಾಯು, ನೌಕಾಪಡೆಗಳಲ್ಲಿ ಮಹಿಳಾ ಅಧಿಕಾರಿ­ಗಳ ವಿಶೇಷ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸರ್ಕಾರಿ ಆದೇಶ ಹೊರಡಿಸಲಾಯಿತು. ಇದಕ್ಕಾಗಿ 1952ರ ಸೇನಾ ಕಾಯಿದೆಯನ್ನು ತಿದ್ದುಪಡಿ ಮಾಡುವ ಅಗತ್ಯವೇ ಇರಲಿಲ್ಲ. ಏಕೆಂದರೆ ಈ ಕಾಯಿದೆಯಲ್ಲಿ ಎಲ್ಲೂ ‘ಪುರುಷ’ ಎನ್ನುವ ಪದ ಬಳಕೆಯಾಗಿಲ್ಲ. ಸೇನಾಪಡೆಗಳಿಗೆ ನಿಯುಕ್ತಿ­ಯಾದ ಯಾವುದೇ ವ್ಯಕ್ತಿ  ಈ ಕಾಯಿದೆ ವ್ಯಾಪ್ತಿಗೆ ಬರುತ್ತಾರೆ  ಎಂಬುದನ್ನು ಅದು ಸ್ಪಷ್ಟವಾಗಿ ತಿಳಿಸುತ್ತದೆ.

ವಾಸ್ತವವಾಗಿ ಬ್ರಿಟಿಷ್ ಆಡಳಿತ ಇದ್ದಾಗ­ಲಿಂದಲೂ  ಮಹಿಳಾ ನರ್ಸ್ ಗಳು, ವೈದ್ಯೆಯರು ಸೇನೆಯ ಸೇವೆಯಲ್ಲಿದ್ದೇ ಇದ್ದರು. ವಿಶೇಷ ಮಹಿಳಾ ಪ್ರವೇಶ ಯೋಜನೆ ಆರಂಭವಾದಾಗ ಸೇರಿದ್ದು 20 ಹುಡುಗಿಯರು ಮಾತ್ರ.  ಆಗ ಮಹಿಳೆಗೆ ಅದು ಹೊಚ್ಚ ಹೊಸ ಕೆರಿಯರ್ ಆಗಿತ್ತು. ಇದರಿಂದ  ಭಾರತೀಯ ಸೇನೆಯ ‘ಓಲ್ಡ್ ಬಾಯ್ಸ್ ಕ್ಲಬ್’ ನಲ್ಲಿ ಮಹಿಳೆಯರು ಕಾಣಿಸಿಕೊಂಡಂತಾಗಿತ್ತು. ಈ ಮಹಿಳೆಯರು ಷಿಫಾನ್ ಸೀರೆ ಉಟ್ಟ, ಸೆಂಟ್ ಸುವಾಸನೆಯ ‘ಲೇಡಿ ವೈವ್ಸ್’ ಗಳಾಗಿರಲಿಲ್ಲ. ಸಮವಸ್ತ್ರ ಧರಿಸಿ ಆಭರಣಗಳ ಬದಲಿಗೆ ಭುಜದಲ್ಲಿ ಫಳ ಫಳಿಸುವ ಸ್ಟಾರ್‌ಗಳನ್ನು ಹೊಂದಿದ್ದ ಮಹಿಳೆಯರಾಗಿದ್ದರು. ಅಂತೂ ವೈದ್ಯಕೀಯೇತರ  ಕ್ಷೇತ್ರಗಳಲ್ಲೂ ಅಲ್ಪಾವಧಿ ಸೇವಾ ನೇಮಕಾತಿಯಡಿ (ಷಾರ್ಟ್ ಸರ್ವೀಸ್ ಕಮಿಷನ್ – ಎಸ್ಎಸ್‌ಸಿ ಅಧಿ­ಕಾರಿಗಳು) ಮಹಿಳಾ ಅಧಿಕಾರಿಗಳ ನೇಮಕಾತಿ  ಆರಂಭವಾಯಿತು.  ಆದರೆ ತಾರತಮ್ಯ ನೀತಿಗಳು ಇದ್ದೇ ಇದ್ದವು.  ಈಗಲೂ ಇವೆ.

ನೇರ ಯುದ್ಧ ಭೂಮಿ ಹಾಗೂ ಸಶಸ್ತ್ರ ದಂಗೆ ಹತ್ತಿಕ್ಕುವ ಕರ್ತವ್ಯ ಹೊರತುಪಡಿಸಿ ಅಲ್ಪ ಸೇವಾ ನೇಮಕಾತಿಯಡಿ   ಮಹಿಳೆಯರನ್ನು ನಿಯೋಜಿಸಿ­ಕೊಳ್ಳಲಾಗುತ್ತಿದೆ. 5ರಿಂದ 14 ವರ್ಷಗಳವರೆಗೆ ಸಶಸ್ತ್ರ ಪಡೆಗಳಲ್ಲಿ ಕಾರ್ಯ ನಿರ್ವಹಿಸಲು ಇದರಿಂದ ಅವಕಾಶ ಸಿಗುತ್ತದೆ. 14 ವರ್ಷಗಳ ಸೇವೆ ಪೂರೈಕೆ ನಂತರ ಈ ಮಹಿಳೆಯರನ್ನು ಸೇವೆಯಿಂದ ತೆಗೆದು ಹಾಕಲಾಗುತ್ತದೆ.  ಆದರೆ ಅವರ ಜೊತೆಗೇ ಕೆಲಸ ಮಾಡುವ  ಪುರುಷ ಅಧಿಕಾರಿಗಳಿಗೆ ಸೇವಾವಧಿ ವಿಸ್ತರಣೆ ಅಥವಾ ಕಾಯಂ ನೇಮಕಾತಿ ಸೌಲಭ್ಯಗಳಿವೆ. ಇದರಿಂದಾಗಿ 20 ವರ್ಷ ಸೇವೆ ಪೂರೈಸಿದಲ್ಲಿ ಮಾತ್ರ ಸಿಗುವ ಪಿಂಚಣಿ ಹಾಗೂ ವೈದ್ಯಕೀಯ ಸೌಲಭ್ಯಗಳ ನಿರಾಕರಣೆಯಲ್ಲದೆ ನಿರುದ್ಯೋಗದ ಬವಣೆಗೂ ತುತ್ತಾಗುವ ಸ್ಥಿತಿ ಮಹಿಳೆಯರದು.

ಈ ಅನ್ಯಾಯದ ವಿರುದ್ಧ ಮಹಿಳೆಯರು ನಡೆಸಿದ ಹೋರಾಟಗಳ ಫಲವಾಗಿ 2008ರ ಸೆಪ್ಟೆಂಬರ್‌ನಲ್ಲಿ   ಆಗಿನ ರಕ್ಷಣಾ ಸಚಿವ ಎ.ಕೆ. ಆಂಟನಿ  ಅವರು ಸಶಸ್ತ್ರ ಪಡೆಗಳ ನಾಲ್ಕು ಶಾಖೆಗಳಲ್ಲಿ ಮಾತ್ರ ಕಾಯಂ ನೇಮಕಾತಿಗೆ ಮಹಿಳೆಯರನ್ನು ಪರಿಗಣಿಸಲು ಅಂಕಿತ ಹಾಕಿದರು. ಈ ನಾಲ್ಕು ಶಾಖೆಗಳು: ಸೇನೆ ಶಿಕ್ಷಣ; ಸೇನೆ, ನೌಕೆ ಹಾಗೂ ವಾಯುಪಡೆಯ ಮಿಲಿಟರಿ ಕಾನೂನು ಶಾಖೆ; ವಾಯುಪಡೆಯ ಅಕೌಂಟ್ಸ್  ಮತ್ತು ನೌಕಾನಿರ್ಮಾಣ ವಿಭಾಗಗಳು. 

ಸರ್ಕಾರದ ಈ ನಿರ್ಧಾರದ ಹಿಂದೆ ಸಾಕಷ್ಟು ಹೋರಾಟಗಳೇ ನಡೆದಿದ್ದವು. ಸೇನೆಯಲ್ಲಿನ ಹಲವು ಮಹಿಳೆಯರೇ ಸ್ವತಃ  ಕೋರ್ಟ್‌ ಮೆಟ್ಟಿಲೇರಿದ್ದರು.  ಏಕೆಂದರೆ, ಇನ್ನೂ 10 ವರ್ಷಗಳ ಕಾಲ ಕಾಯಂ ನೇಮ­ಕಾತಿಯಿಂದ ಮಹಿಳೆಯರನ್ನು ಹೊರಗಿಡ­ಬೇಕೆಂದೇ ಸಶಸ್ತ್ರಪಡೆಗಳ ಕೇಂದ್ರ ಕಚೇರಿ 2005ರಲ್ಲಿ ಶಿಫಾರಸು ಮಾಡಿತ್ತು. ಸಶಸ್ತ್ರಪಡೆಗಳ  ನಡಾವಳಿ, ಮನೋಭಾವ­ಗಳಂತೂ ಸಂಪೂರ್ಣ ‘ಪುರುಷಮಯ’.  ತಮ್ಮ ಜೊತೆ ತಾತ್ಕಾಲಿಕವಾಗಿ ನಿಯೋಜನೆಗೊಂಡ ಮಹಿಳೆಯರನ್ನು ವ್ಯವಸ್ಥೆಯೊಳಗೆ ಹೊಂದಿಸಿ­ಕೊಳ್ಳುವುದು ಎಷ್ಟೊಂದು ಕಷ್ಟ ಎಂಬ ಬಗ್ಗೆ ಮುಂಚೂಣಿ ಘಟಕಗಳ ಕಮ್ಯಾಂಡಿಂಗ್ ಅಧಿ­ಕಾರಿಗಳು ದೂರುಗಳನ್ನೂ ನೀಡಿದ್ದರು.

ಪ್ರತ್ಯೇಕ ಶೌಚಾಲಯ, ಬಂಕ್ ರೂಮ್‌ಗಳು,  ಕ್ವಾರ್ಟರ್ಸ್ ಸೌಲಭ್ಯಗಳ ಕೊರತೆ  ಹಾಗೂ ಮಹಿಳಾ ಅಧಿಕಾರಿಗಳ ಜೊತೆ ಹೊಂದಿಕೊಳ್ಳಲು ಅಡ್ಡಿಯಾಗುವ ಸಾಂಸ್ಕೃತಿಕ ಬೇರುಗಳವರೆಗೆ ದೂರುಗಳಿದ್ದವು. ‘ಕಾಯಂ ನೇಮಕಾತಿ ನೀಡುವುದು ಎಂದಲ್ಲಿ ಅದು ಯುದ್ಧಭೂಮಿ­ಯಲ್ಲಿನ ನೇರ ನಿಯೋಜನೆಗೆ ಸಂಬಂಧ ಪಡುತ್ತದೆ’ ಎಂಬ ವಾದವನ್ನು ಸೇನಾಪಡೆಗಳ ಕೇಂದ್ರಕಚೇರಿಗಳು 2006ರಲ್ಲಿ ಮುಂದಿಟ್ಟಿದವು.  ‘ಶತ್ರುವಿನೊಡನೆ ನಿಕಟ ದೈಹಿಕ ಸಂಪರ್ಕ’ ಅವಕಾಶ ಆಗುವಂತಹ ಯುದ್ಧಭೂಮಿ ನಿಯೋ­ಜನೆ­ಗಳಿಂದ ಮಹಿಳೆಯರನ್ನು ಹೊರಗಿಡಬೇಕು ಎಂದು ಸೇನೆಯ ಮೂರೂ ಸೇವೆಗಳ ಅಧ್ಯ­ಯನವೂ 2006ರಲ್ಲಿ ಶಿಫಾರಸು ಮಾಡಿತ್ತು. ಆದರೆ  ಈ ಎಲ್ಲಾ  ವಾದಗಳ ನಡುವೆಯೂ ಆಯ್ದ ಕೇಡರ್‌ಗಳಲ್ಲಿ ಮಹಿಳೆಗೆ ಕಾಯಂ ನೇಮಕಾತಿ ನೀಡುವ ವಿಚಾರವನ್ನು ಸರ್ಕಾರ ಶಿಫಾರಸು ಮಾಡಿ ‘ನಾರಿ ಶಕ್ತಿ’ಯ  ವಿಸ್ತರಣೆಗೆ ಅನುವು ಮಾಡಿಕೊಟ್ಟಿದ್ದು ಐತಿಹಾಸಿಕ ಸಂಗತಿ.

ಈ ನಿರ್ಧಾರದ ಅನುಷ್ಠಾನಕ್ಕಾಗಿ ಭಾರತೀಯ ಸೇನೆಯ ಮೂರೂ ಪಡೆಗಳು ಆಯ್ದ ಶಾಖೆಗಳಲ್ಲಿ ಮಹಿಳೆಯರ ನಿಯೋಜನೆ ಹಾಗೂ ತರಬೇತಿಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಗೆ ಮುಂದಾಗಿದ್ದಲ್ಲದೆ 2015ರ ವೇಳೆಗೆ ಇದು ಜಾರಿಯಾಗುತ್ತದೆ ಎಂಬ ನಿರೀಕ್ಷೆ ಹೊಂದ­ಲಾಗಿತ್ತು.   ಆದರೆ ಕಾಯಂ ನೇಮಕಾತಿಯನ್ನು  ಪೂರ್ವಾನ್ವಯವಾಗಿ ನೀಡಲು ಸರ್ಕಾರ ಒಪ್ಪಿರಲಿಲ್ಲ.   ಇದೇ ಸಂದರ್ಭದಲ್ಲಿ 2010ರಲ್ಲಿ ದೆಹಲಿ ಹೈಕೋರ್ಟ್ ‘ಪುರುಷ ಮತ್ತು ಮಹಿಳಾ ಅಧಿಕಾರಿಗಳು ಒಂದೇ ಬಗೆಯ ಕೆಲಸ ಮಾಡು­ತ್ತಾರೆ. ಹೀಗಿದ್ದಾಗ ಮಹಿಳಾ ಅಧಿಕಾರಿಗಳಿಗೇಕೆ ಕಾಯಂ ನೇಮಕಾತಿ ಇಲ್ಲ’ ಎಂದು ಪ್ರಶ್ನಿಸಿ ಮಹಿಳಾ ಸೇನಾಧಿಕಾರಿಗಳ ಪರ ತೀರ್ಪು ನೀಡಿತ್ತು.  ಈ ತೀರ್ಪಿಗೆ ತಲೆಬಾಗಿದ್ದ ಐ ಎ ಎಫ್ ಮಹಿಳಾ ಅಧಿಕಾರಿಗಳಿಗೆ  2010ರಿಂದಲೇ ಕಾಯಂ ನೇಮಕಾತಿ ನೀಡಲು ಆರಂಭಿಸಿದೆ.

ಈಗ ಪ್ರಧಾನಿ ಮೋದಿ ನೇತೃತ್ವದ  ಹೊಸ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.  2015–16ರ ಸಾಲಿನಲ್ಲಿ ಸೇನೆಗೆ ಪ್ರವೇಶ ಪಡೆಯುವ ಮಹಿಳಾ ಅಧಿಕಾರಿಗಳು ಕಮ್ಯಾಂಡ್ ಮಟ್ಟಕ್ಕೇರಿ ಹೆಚ್ಚಿನ ಹೊಣೆಗಾರಿಕೆ ನಿರ್ವಹಿಸುವ ಅವಕಾಶಗಳನ್ನು ಪಡೆಯಲಿದ್ದಾರೆ.ಇದಕ್ಕಾಗಿ  ಸದ್ಯಕ್ಕೆ ವಿಮಾನ ಹಾರಾಟ, ಮಿಲಿಟರಿ ಸಂವಹನ (ಸಿಗ್ನಲ್ಸ್) ಹಾಗೂ ಎಂಜಿನಿಯರಿಂಗ್ ಶಾಖೆ­ಗಳನ್ನು  ಆಯ್ಕೆ ಮಾಡಲಾಗಿದೆ. ಅಲ್ಲದೆ  ಈ ಹಿಂದಿನ ಸರ್ಕಾರ ಕೈಗೊಂಡಿದ್ದ  ನಿರ್ಧಾರದಂತೆ ಮಹಿಳಾ ಅಧಿಕಾರಿಗಳನ್ನು ಕಾಯಂ ನೇಮಕಾತಿಗಾಗಿ ಪರಿಗಣಿಸಲಾಗುವುದು.

ಹೀಗಿದ್ದೂ ರಣರಂಗದ ಕಾದಾಡುವ ಘಟಕ­ಗಳಿಗೆ (ಕಾಂಬ್ಯಾಟ್) ಮಹಿಳೆಯರ ನೇಮಕದ ವಿಚಾರ ಸದ್ಯಕ್ಕಂತೂ ಪರಿಗಣನೆಯಲ್ಲಿಲ್ಲ. ಕಾದಾ­ಡುವ ಘಟಕಗಳಿಗೆ ಮಹಿಳೆಯರ ಸೇರ್ಪಡೆ ಎಂಬುದು ಸಾಂಸ್ಕೃತಿಕ ಹಾಗೂ ರಾಜಕೀಯ ಸಮಸ್ಯೆ. ಹೀಗಾಗಿ ಮಹಿಳೆಯರು ಫೈಟರ್ ಪೈಲಟ್‌­ಗಳಾಗುವ ಹಾಗೆ ಇಲ್ಲ.  ಯುದ್ಧ ನೌಕೆಗಳಲ್ಲಿ ಸೇವೆ ಸಲ್ಲಿಸುವಂತಿಲ್ಲ ಅಥವಾ ಪದಾತಿ ಪಡೆಯಲ್ಲಿ ಸೇರ್ಪಡೆಯಾಗುವಂತಿಲ್ಲ. ಫಿರಂಗಿ ದಳ ಭಾಗವಾಗುವಂತಿಲ್ಲ. ಆದರೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇವಕ್ಕೆ ಅವಕಾಶಗಳಿವೆ. 

ಅಮೆರಿಕ,  ರಷ್ಯಾ, ಟರ್ಕಿ ಹಾಗೂ ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಬಹಳ ದಿನಗಳಿಂದಲೇ ಮಹಿಳಾ ಫೈಟರ್ ಪೈಲಟ್‌­ಗಳಿದ್ದಾರೆ. ಹಾಗೆಯೇ ಮಲೇಷ್ಯಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸಹ ಯುದ್ಧ ನೌಕೆ­ಗಳಲ್ಲಿ ಮಹಿಳೆಯರನ್ನು ನಿಯೋಜಿಸಿಕೊಂಡಿವೆ. ಅಮೆರಿಕವಂತೂ ಸಬ್ ಮೆರಿನ್ ಗಳಲ್ಲೂ ಮಹಿಳೆಗೆ ಅವಕಾಶ ನೀಡಿದೆ. ಮಹಿಳೆ ಯುದ್ಧ ಕೈದಿಯಾಗಬಹುದಾ­ದಂತಹ ಸನ್ನಿವೇಶವನ್ನು ಹೇಗೆ ನಿರ್ವಹಿಸ­ಬೇಕೆಂಬುದೇ ಮಹಿಳೆಯನ್ನು ಕಾದಾಡುವ ಘಟಕಕ್ಕೆ ನಿಯುಕ್ತಿ ಮಾಡುವ ವಿಚಾರದಲ್ಲಿ ಭಾವನಾತ್ಮಕ ತಡೆಯಾಗಿದೆ. ಆದರೆ  ಭಾರತೀಯ ಸೇನೆಯಲ್ಲಿರುವ ಒಟ್ಟು 59,400 ಅಧಿಕಾರಿಗಳ ಪೈಕಿ  ಮಹಿಳಾ ಸೇನಾಧಿಕಾರಿಗಳ ಪ್ರಮಾಣ ಕೇವಲ 3000.  ಎಂದರೆ ‘ನಾರಿ ಶಕ್ತಿ’ ಸಾಗಬೇಕಿರುವ ಹಾದಿ ಇನ್ನೂ ದೂರ ಇದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT