ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಹಾಗೆ ಗೆಲುವಿಗೂ ಕಾರಣಗಳು ಇರುತ್ತವೆ...

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಒಮ್ಮೊಮ್ಮೆ ಹೀಗೂ ಆಗುತ್ತದೆ. ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಪ್ರವಾಹದ ನಡುವೆ ಒಂದೆರಡು ಮರಗಳು ಗಟ್ಟಿಯಾಗಿ, ಅಲುಗಾಡದೆ ನಿಂತು ಬಿಡುತ್ತವೆ. ಎಂಥ ಪ್ರವಾಹದ ಅಲೆಯೂ ಇಂಥ ಮರಗಳನ್ನು ಏನೂ ಮಾಡದು. ಉಕ್ಕಿ ಹರಿಯುವ ನದಿಯ ನಡುವೆ ಇಂಥ ಮರಗಳು ಒಂಟಿಯಾಗಿಯಾದರೂ ತಲೆ ಎತ್ತಿ ನಿಂತಿರುತ್ತವೆ, ನಿಶ್ಚಲವಾಗಿ. ನಿಶ್ಚಲವಾಗಿ ಏಕೆ ಎಂದರೆ ಅವುಗಳ ಬೇರುಗಳು ಗಟ್ಟಿಯಾಗಿರುತ್ತವೆ. ನೆಲದ ಜತೆಗೆ ಅವುಗಳ ನಂಟು ಗಟ್ಟಿಯಾಗಿರುತ್ತದೆ.

ನರೇಂದ್ರ ಮೋದಿ ಅವರ ಅಲೆಯಲ್ಲಿ ಕಾಂಗ್ರೆಸ್‌ ಪಕ್ಷ ಕೊಚ್ಚಿಕೊಂಡು ಹೋದರೂ ಇಲ್ಲಿ ಒಬ್ಬ ಜಯಾ, ಅಲ್ಲಿ ಒಬ್ಬ ಮಮತಾ, ನಡುವೆ ಒಬ್ಬ ನವೀನ ಗಟ್ಟಿಯಾಗಿ ಪ್ರವಾಹಕ್ಕೆ ಎದೆ ಕೊಟ್ಟು ನಿಂತರು. ದೇಶವನ್ನೇ ಗೆದ್ದೆ ಎಂದುಕೊಂಡವನಿಗೆ, ‘ಇಲ್ಲ, ನೀನು ಗೆಲ್ಲಬೇಕಾದ ನೆಲ ಇನ್ನೂ ಇದೆ’ ಎಂದು ಹೇಳುವ ಹಾಗೆ. ಪ್ರಜಾಪ್ರಭುತ್ವದ ವಿಸ್ಮಯ ಇದು. ಜಯಾ ಮತ್ತು ಮಮತಾ ಅವರ ಗೆಲುವು ಬಹಳ ದೊಡ್ಡದಲ್ಲ. ಅವರು ಈಚೆಗಷ್ಟೇ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದಾರೆ. ಅವರ ಆಡಳಿತದ ಬಗ್ಗೆ ಜನರಿಗೆ ಇನ್ನೂ ನಿರಾಸೆ, ಭ್ರಮನಿರಸನ ಆದಂತೆ ಇಲ್ಲ. ಈ ಸಾರಿಯ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿ ಹುಟ್ಟಿಸುವ ಫಲಿತಾಂಶ ಬಂದುದು ಒಡಿಶಾ ರಾಜ್ಯದಲ್ಲಿ. 21 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಅಲ್ಲಿನ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಬಿಜೆಡಿ ಪಕ್ಷ ಗೆದ್ದಿದೆ. ವಿಧಾನಸಭೆಯ 147 ಸೀಟುಗಳ ಪೈಕಿ 117ರಲ್ಲಿ ಅವರ ಪಕ್ಷ ಗೆದ್ದಿದೆ. ನವೀನ್‌ ಪಟ್ನಾಯಕ್‌ ನಾಲ್ಕನೇ ಬಾರಿಗೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಧ್ಯಭಾರತದ ಬೇರೆ ಎಲ್ಲ ರಾಜ್ಯಗಳಲ್ಲಿ ಮೋದಿ ಅಲೆ ಕೆಲಸ ಮಾಡಲು ಸಾಧ್ಯವಾದರೆ ಒಡಿಶಾದಲ್ಲಿ ಏಕೆ ಅದೇ ಕೆಲಸ ಮಾಡಲಿಲ್ಲ? ಸತತವಾಗಿ ನಾಲ್ಕು ಅವಧಿಗೆ ಒಡಿಶಾದ ಮುಖ್ಯಮಂತ್ರಿಯಾಗಿರುವ ನವೀನ್‌ ಪಟ್ನಾಯಕ್‌ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಏನೋ ಸಂದೇಶ ಕೊಡುತ್ತಿರುವಂತಿದೆ.

ಕರ್ನಾಟಕದಲ್ಲಿ ದೇವರಾಜ ಅರಸು  ನಂತರ ಯಾವ ಮುಖ್ಯಮಂತ್ರಿಯೂ ಸತತವಾಗಿ ಎರಡನೇ ಅವಧಿಗೆ ಮತ್ತೆ ಜನಾದೇಶವನ್ನು ಪಡೆದಿಲ್ಲ. ಅವರು 1980ರಲ್ಲಿ ಅಧಿಕಾರ ಬಿಟ್ಟುಕೊಟ್ಟರು.  ಅದಾಗಿ ಮೂರು ದಶಕಗಳು ಕಳೆದಿವೆ. ಇದು ಸಣ್ಣ ಅವಧಿಯಲ್ಲ. ಈ ಅವಧಿಯಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳು ಆಗಿ ಹೋದರು. ಅವರೆಲ್ಲ ವೈಯಕ್ತಿಕವಾಗಿ ಒಳ್ಳೊಳ್ಳೆಯ ನಾಯಕರೇ ಆಗಿದ್ದರು. ಆದರೂ ಅವರಿಗೆ ಮರಳಿ ಜನಾದೇಶ ಪಡೆಯಲು ಆಗಲಿಲ್ಲ. ಒಂದು ಅವಧಿ ಪೂರೈಸುತ್ತಿದ್ದಂತೆಯೇ ಜನರು ಅವರನ್ನು ಮತ್ತು ಅವರ ಪಕ್ಷವನ್ನು ಮನೆಗೆ ಕಳುಹಿಸಿದರು. ಏಕೆ ಹೀಗೆ? ಕರ್ನಾಟಕ ಒಳ್ಳೆಯ ಆಡಳಿತಕ್ಕೆ ಹೆಸರಾದ ರಾಜ್ಯ. ಜನರೂ ಒಳ್ಳೆಯವರು. ಸಹನಶೀಲರು. ಆದರೆ, ಅವರು ಕಳೆದ 34 ವರ್ಷಗಳಲ್ಲಿ ಸತತವಾಗಿ ಇನ್ನೊಂದು ಅವಧಿಗೆ ಯಾರನ್ನೂ ಆರಿಸಲಿಲ್ಲ. ಅಧಿಕಾರಕ್ಕೆ ಬಂದವರು ಒಂದೋ ಜಗಳ ಮಾಡಿದರು, ಇಲ್ಲವೇ ಹಗರಣಗಳಲ್ಲಿ ಸಿಲುಕಿದರು. ‘ಇವರು ಹೋದರೆ ಸಾಕು’ ಎಂದು ಜನ ಕಾಯುತ್ತಿದ್ದರು. ಒಡಿಶಾ ರಾಜ್ಯ ಕರ್ನಾಟಕಕ್ಕೆ ಬಹಳ ದೂರವೇನೂ ಇಲ್ಲ. ಅದೂ ಕರ್ನಾಟಕದ ಹಾಗೆ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿದ ರಾಜ್ಯವೇ. ಆದರೆ, ನವೀನ್‌ ಪಟ್ನಾಯಕ್‌ ಅಲ್ಲಿ ಈಗ ಕಾಂಗ್ರೆಸ್‌ ಪಕ್ಷವನ್ನು ನಾಮಾವಶೇಷ ಮಾಡಿದ್ದಾರೆ.

ನವೀನ್‌ ಪಟ್ನಾಯಕ್‌, ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಒಂದು ವರ್ಷ ಮುಂಚೆ ಹುಟ್ಟಿದವರು (1946, ಅಕ್ಟೋಬರ್‌ 16). ಓದಿದ್ದೆಲ್ಲ ಇಂಗ್ಲಿಷ್‌ ಮಾಧ್ಯಮದಲ್ಲಿ. ಅವರು ರಾಜೀವ್‌ ಗಾಂಧಿ ಹಾಗೆ, ಡೂನ್‌ ಶಾಲೆಯ ವಿದ್ಯಾರ್ಥಿ. ಅದ್ಭುತವಾಗಿ ಇಂಗ್ಲಿಷ್‌ ಮಾತನಾಡುತ್ತಾರೆ. ಎರಡು ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಅವರಿಗೆ ತೀರಾ ಈಚಿನವರೆಗೂ ಒಡಿಯಾ ಭಾಷೆ ಬರುತ್ತಿರಲಿಲ್ಲ. ಈಚೀಚೆಗೆ ಸ್ವಲ್ಪ ಸ್ವಲ್ಪ ಮಾತನಾಡುತ್ತಾರೆ. ಆದರೆ, ಜನರ ಜತೆಗೆ ಸಂವಹನ ಮಾಡಲು ಅವರಿಗೆ ಅದು ಒಂದು ಅಡ್ಡಿ ಎಂದು ಅನಿಸಿಲ್ಲ. ಅವರು ಬಹಿರಂಗ ಸಭೆಗಳಲ್ಲಿ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ವಿರೋಧಿಗಳು ತನ್ನ ನಾಡಿನ ಭಾಷೆಯೇ ಗೊತ್ತಿಲ್ಲದವನು ಮುಖ್ಯಮಂತ್ರಿಯಾಗಿದ್ದಾನೆ ಎಂದು ಎಷ್ಟೇ ಟೀಕಿಸಿದರೂ, ಕೆಣಕಿದರೂ ಪಟ್ನಾಯಕರು ತಲೆ ಕೆಡಿಸಿಕೊಂಡಿಲ್ಲ; ಜನರೂ ತಲೆ ಕೆಡಿಸಿಕೊಂಡಿಲ್ಲ.

ಪಟ್ನಾಯಕ್‌ ಯಾವಾಗಲೂ ಶ್ವೇತವಸನಧಾರಿ. ಅವರ ವ್ಯಕ್ತಿತ್ವವೂ ಅಷ್ಟೇ ಸ್ವಚ್ಛ. ಅವರ ಬಿಳಿ ಬಟ್ಟೆಗಳ ಮೇಲೆ ಕಪ್ಪು ಕಲೆ ಕೂಡ್ರಿಸಬೇಕು ಎಂದು ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅದರಲ್ಲಿ ಅವರು ಸಫಲರಾಗಿಲ್ಲ. ಅವರ ವಿರುದ್ಧ ಬಂದ ಯಾವ ಆರೋಪವೂ ಸಾಬೀತು ಆಗಿಲ್ಲ. ನವೀನ್‌ ಪಟ್ನಾಯಕ್‌, ಕಟ್ಟು ನಿಟ್ಟಿನ ಆಡಳಿತಗಾರ. ಅಪ್ಪಟ ಪ್ರಾಮಾಣಿಕ. ಆಡಳಿತಯಂತ್ರದ ಮೇಲೆ ಬಿಗಿ ಹಿಡಿತ ಹೊಂದಿರುವ ಅವರು ಅದನ್ನು ಬದಲಾವಣೆಗೆ, ಜನರ ಏಳಿಗೆಗೆ ಹೇಗೆ ಬಳಸಬೇಕು ಎಂದು ತಿಳಿದವರು. ಸಂಪುಟದ ಮಂತ್ರಿಗಳ ಮೇಲೂ ಅವರದು ಬಿಗಿ ಹಿಡಿತ. ಯಾರ ವಿರುದ್ಧವಾದರೂ ಏನಾದರೂ ಆರೋಪ ಬಂದು ಅದರಲ್ಲಿ ನಿಜಾಂಶ ಇದೆ ಎಂದು ಅನಿಸಿದರೆ ನಿರ್ದಯವಾಗಿ ಕ್ರಮ ತೆಗೆದುಕೊಂಡವರು. ಕಳೆದ 14 ವರ್ಷಗಳಲ್ಲಿ ಅವರು ತಮ್ಮ ಸಂಪುಟದ 24 ಮಂದಿ ಸಚಿವರನ್ನು ವಜಾ ಮಾಡಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೆ ಅವರು ಕೂಡ ತಮ್ಮ ರಾಜ್ಯದ ಜನರಿಗೆ ಅನೇಕ ಜನಪ್ರಿಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಉಚಿತ ಕೊಡುಗೆಗಳನ್ನು ಕೊಟ್ಟಿದ್ದಾರೆ.

ನವೀನ್‌ ಪಟ್ನಾಯಕ್‌, ಅವಿವಾಹಿತರು. ಒಬ್ಬ ಸೋದರಿ ಇದ್ದಾಳೆ. ನವೀನ್‌ ಅವರು ಸ್ವಜನಪಕ್ಷಪಾತ ಮಾಡಬೇಕು ಎಂದರೆ ಮಕ್ಕಳೂ ಇಲ್ಲ; ಅಳಿಯಂದಿರೂ ಇಲ್ಲ. ಆ ಅರ್ಥದಲ್ಲಿ ಅವರು ಸುದೈವಿ. ಅಕ್ರಮ ಸಂಪತ್ತನ್ನು ಕ್ರೋಡೀಕರಿಸಲು ಅವರಿಗೆ ಕಾರಣಗಳೇ ಇದ್ದಂತೆ ಇಲ್ಲ! ನವೀನ್‌ ಪಟ್ನಾಯಕ್‌ ಅವರು ಪ್ರವಾಹದಲ್ಲಿ ಕೊಚ್ಚಿ ಹೋಗದೆ ಏಕೆ ಗಟ್ಟಿಯಾಗಿ ನಿಂತರು ಎಂಬುದಕ್ಕೆ ಇವೆಲ್ಲ ಕಾರಣಗಳು ಇದ್ದಂತೆ ಕಾಣುತ್ತವೆ. ಹಾಗೆಂದು ಒಡಿಶಾದಲ್ಲಿ ಎಲ್ಲವೂ ಸರಿ ಇದೆ ಎಂದು ಅಲ್ಲ. ಅಲ್ಲಿಂದಲೂ ಜನರು, ಗುಜರಾತ್‌, ಕರ್ನಾಟಕ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.

ಅಲ್ಲಿಯೂ ಬಡತನ ಇದೆ, ನಿರುದ್ಯೋಗ ಇದೆ. ಆಗಾಗ ಚಂಡಮಾರುತ ಬೀಸಿ ತೀರಕ್ಕೆ ಅಪ್ಪಳಿಸುತ್ತದೆ. ಕೆಲವು ವರ್ಷಗಳ ಹಿಂದೆ ಫೈಲಿನ್‌ ಚಂಡಮಾರುತ ಬಂದು ಆ ರಾಜ್ಯಕ್ಕೆ ಅಪ್ಪಳಿಸಿತ್ತು. ಆದರೆ, ಅಧಿಕಾರಿಗಳು ಮತ್ತು ಆಡಳಿತ ಯಂತ್ರ ಎಷ್ಟು ಚೆನ್ನಾಗಿ ಕೆಲಸ ಮಾಡಿತು ಎಂದರೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಸಾವು ನೋವುಗಳು ಆದುವು. ಚಂಡಮಾರುತ ಅಪ್ಪಳಿಸುವುದಕ್ಕಿಂತ ಮುಂಚೆಯೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿಕೊಡಿಸಲಾಗಿತ್ತು. ಈ ಕೆಲಸ ಮೆಚ್ಚಿದ ವಿಶ್ವಸಂಸ್ಥೆ, ಒಡಿಶಾ ರಾಜ್ಯಕ್ಕೆ ಪ್ರಶಸ್ತಿ ಕೊಟ್ಟಿತು.

ಜನರು ನಾಯಕರಲ್ಲಿ ಪ್ರಾಮಾಣಿಕತೆ ಬಯಸುತ್ತಾರೆ. ಆತ ದುಡ್ಡು ಮಾಡಿಕೊಳ್ಳಬಾರದು ಎಂದು ಅಪೇಕ್ಷಿಸುತ್ತಾರೆ, ಹಗಲಿರುಳು ತಮಗಾಗಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸುತ್ತಾರೆ. ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ಈಗಷ್ಟೇ ಒಂದು ವರ್ಷವಾಗಿದೆ. ಮುಖ್ಯಮಂತ್ರಿ ಮತ್ತು ಅವರ ಪಕ್ಷ ಕೂಡ ಒಡಿಶಾ ರಾಜ್ಯದ ಹಾಗೆಯೇ ಕನಿಷ್ಠ 20 ಸೀಟುಗಳಲ್ಲಿ ಗೆಲ್ಲಬೇಕಿತ್ತು. ಕೇವಲ ಒಂಬತ್ತು ಸೀಟುಗಳಲ್ಲಿ ಗೆದ್ದಿತು. 2009ರ ಚುನಾವಣೆಗಿಂತ ಈಗಿನ ಸಾಧನೆ ಕಳಪೆಯಲ್ಲ ಎಂದು ಸಮಾಧಾನ ಮಾಡಿಕೊಂಡಿತು. ಇದು ಅಲ್ಪತೃಪ್ತಿಯ ಸಮಸ್ಯೆ. ಅಲ್ಪತೃಪ್ತಿ ಇರುವಲ್ಲಿ ಆತ್ಮಾವಲೋಕನ ಇರುವುದಿಲ್ಲ.

ಜನರಿಗೆ ನಾಯಕನ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಾಗಬೇಕು. ಆತ ಅವರ ಜತೆಗೆ ಸರಿಯಾಗಿ ಸಂವಹನ ಮಾಡಬೇಕು. ಜನರಲ್ಲಿ ಕನಸುಗಳನ್ನು ಬಿತ್ತಬೇಕು; ಆಸೆಯನ್ನು ಬಿತ್ತಬೇಕು. ಆ ಕನಸುಗಳನ್ನು ನನಸು ಮಾಡಲು ದುಡಿಯಬೇಕು. ಸಿದ್ದರಾಮಯ್ಯನವರಿಗೆ ಅಪಾರ ಎನರ್ಜಿ ಇದೆ ಎಂದು ಅವರ ಸುತ್ತಮುತ್ತ ಇದ್ದವರು ಹೇಳುತ್ತಾರೆ. ಆದರೆ, ಬಹಿರಂಗ ಜಗತ್ತಿಗೆ ಅವರು ತುಂಬ ‘ದಣಿದವರಂತೆ’ ಕಾಣುತ್ತಾರೆ. ಯಾರು ಏನೇ ಹೇಳಲಿ, ಆಧುನಿಕ ಜಗತ್ತಿನ ಅಭಿವೃದ್ಧಿಯ ಕಲ್ಪನೆ ಬಗೆಗೆ ಯಾರಿಗೆ ಎಷ್ಟೇ ಆತಂಕಗಳು ಇರಲಿ. ದೂರದ ಹಳ್ಳಿಯಲ್ಲಿ ಇರುವ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ.

ಅವರಿಗೂ ನಗರಗಳ ಅಭಿವೃದ್ಧಿಯ ಕನಸುಗಳು ಹಳವಂಡದಂತೆ ಕಾಡುತ್ತವೆ. ತಮ್ಮ ಊರೂ ಹಾಗೆ ಆಗಬೇಕು ಎಂದು ಬಯಸುತ್ತಾರೆ. ನಮ್ಮ ಹಾಗೆ ಅವರಿಗೆ ಕಾರು, ಬಂಗಲೆಗಳ ಭಾರಿ ಕನಸುಗಳು ಇಲ್ಲದೇ ಇರಬಹುದು. ಮನೆಯ ಮುಂದೆ ನಲ್ಲಿ ತಿರುಗಿಸಿದರೆ ನಿತ್ಯ ನೀರು ಬರಲಿ ಎಂದು ಅವರು ಬಯಸಿದರೆ ಅದು ದೊಡ್ಡ ಅಭಿವೃದ್ಧಿಯ ಕನಸು ಅಲ್ಲ. ತನ್ನ ಹೊಲಕ್ಕೆ, ಗದ್ದೆಗೆ ನೀರು ಹರಿಯಲಿ, ನೀರು ಹರಿಸಲು ಕರೆಂಟ್‌ ಇರಲಿ ಎಂದು ಬಯಸಿದರೆ ಅದೂ ದೊಡ್ಡ ಅಭಿವೃದ್ಧಿಯ ಕನಸು ಅಲ್ಲ. ಮಗುವಿಗೆ ಹುಷಾರು ತಪ್ಪಿದರೆ ಡಾಕ್ಟರು ಚಿಕಿತ್ಸೆ ಮಾಡಬೇಕು, ಮನೆ ಮಗಳಿಗೆ ಸುರಕ್ಷಿತ ಹೆರಿಗೆ ಆಗಬೇಕು, ಊರಿಗೆ ಹೋಗಿ ಬರಲು ಉತ್ತಮ ರಸ್ತೆ ಬೇಕು, ಬಸ್ಸು ಬೇಕು ಎಂದು ಬಯಸುವುದು ದೊಡ್ಡ ಬೇಡಿಕೆಗಳು ಅಲ್ಲ. ರಾಜ್ಯ ಆಳುವವರು ಅಂತಿಮವಾಗಿ ಮಾಡಬೇಕಾದುದು ಇದನ್ನು. ಬರೀ ಉಚಿತ ಕೊಡುಗೆ ಕೊಟ್ಟು ಐದು ವರ್ಷ ಸುಮ್ಮನೆ ಕುಳಿತು ಬಿಟ್ಟರೆ ಆಗದು; ಅಷ್ಟಕ್ಕೇ ಜನರು ಕೈ ಹಿಡಿಯುವುದಿಲ್ಲ.

ನಾಯಕತ್ವ ವಹಿಸಿಕೊಂಡವರು ನಿರಂತರವಾಗಿ ಯೋಚಿಸಬೇಕು, ಚಿಂತಿಸಬೇಕು. ಎಲ್ಲರ ಯೋಚನೆಗಳಿಗೆ, ಚಿಂತನೆಗಳಿಗೆ ಮಿತಿಗಳು ಇರುತ್ತವೆ. ಅದಕ್ಕೇ ಅವರು ತಮ್ಮನ್ನು ಹೊಗಳುವ, ಹಾರ ತುರಾಯಿ ಹಾಕುವ ವಂದಿಮಾಗಧರನ್ನು ಬಿಟ್ಟು ವಿಜ್ಞಾನಿಗಳನ್ನು, ಸಮಾಜ ವಿಜ್ಞಾನಿಗಳನ್ನು, ಅರ್ಥಶಾಸ್ತ್ರಜ್ಞರನ್ನು, ಲೇಖಕರನ್ನು ಆಗಾಗ ಕರೆದು ಮಾತನಾಡಬೇಕು. ಸ್ಥಾನಮಾನಗಳ ಸಲುವಾಗಿ ಲಾಬಿ ಮಾಡುವವರನ್ನು ಹೊರತುಪಡಿಸಿದ ಒಂದು ಚಿಂತಕರ ಚಾವಡಿಯನ್ನು ಕಟ್ಟಿಕೊಳ್ಳಬೇಕು. ಹೆಗಡೆಯವರು ಇಂಥ ಚಾವಡಿಯೊಂದರ ಸಂಪರ್ಕ ಇಟ್ಟುಕೊಂಡಿದ್ದರು. ಅವರನ್ನು ಬಿಟ್ಟರೆ ಕೃಷ್ಣ ಅವರಿಗೆ ಇಂಥ ಚಾವಡಿಯ ಜತೆಗೆ ಸಂಪರ್ಕ ಇತ್ತು. ಸಿದ್ದರಾಮಯ್ಯ ಅವರಿಗೆ ಇಂಥ ಸಂಪರ್ಕ ಇದೆಯೇ? ಇರಬಹುದು. ಇದೆ ಎಂದು ಅವರು ತೋರಿಸಿಕೊಡಬೇಕು.

ಕಾಂಗ್ರೆಸ್ ಆಡಳಿತವಿರುವ ಒಂದು ರಾಜ್ಯದಿಂದ ಅತಿ ಹೆಚ್ಚು ಸೀಟುಗಳನ್ನು ಲೋಕಸಭೆಗೆ ಕಳುಹಿಸಿಕೊಟ್ಟ ಸರ್ಕಾರ ಎಂದು ಹೆಮ್ಮೆ ಪಡುವುದು ಒಂದು ರೀತಿ. ನಮ್ಮ ಸಾಮರ್ಥ್ಯಕ್ಕೆ, ನಾವು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದು ಚಿಂತಿಸುವುದು ಇನ್ನೊಂದು ರೀತಿ. ಸಿದ್ದರಾಮಯ್ಯ ಸರ್ಕಾರ ಎರಡನೇ ರೀತಿಯನ್ನೇ ಆರಿಸಿಕೊಳ್ಳಬೇಕು. ಅವರು ಆರಿಸಿಕೊಳ್ಳದೇ ಇದ್ದರೆ ಅದನ್ನು ಬೇರೆಯವರು ಆರಿಸಿಕೊಳ್ಳುವಂತೆ ಮತ್ತು ಅದನ್ನು ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸು ಮಾಡಲು  ಬಳಸಿಕೊಳ್ಳುವಂತೆ ಕಾಣುತ್ತದೆ. ಈ ಲೋಕಸಭೆ ಚುನಾವಣೆಯಲ್ಲಿ ಎಲ್ಲಿ ಲೋಪವಾಯಿತು ಎಂದು ತಿಳಿಯಲು, ಅದಕ್ಕೆ ಒಂದು ಸಭೆ ಕರೆಯಲು ಪಕ್ಷದ ಅಧ್ಯಕ್ಷರಿಗೆ, ಶಾಸಕಾಂಗದ ನಾಯಕರಿಗೆ ಇನ್ನೂ ಎಷ್ಟು ದಿನ ಬೇಕು? ಅಭಿಪ್ರಾಯ ವ್ಯಕ್ತಪಡಿಸಲು ಒಂದು ವೇದಿಕೆ ಇಲ್ಲದೇ ಇದ್ದರೆ ಬಹಿರಂಗ ವೇದಿಕೆಗಳಲ್ಲಿ ಅದೇ ಅಭಿಪ್ರಾಯ ಹೊರಗೆ ಬರುತ್ತದೆ.

ಉತ್ತರದ ಹಾವೇರಿಯಲ್ಲಿ ಸೋತ ಸಲೀಂ ಅಹ್ಮದ್‌ ಮತ್ತು ದಕ್ಷಿಣದ ಮೈಸೂರಿನಲ್ಲಿ ಸೋತ ಎಚ್‌.ವಿಶ್ವನಾಥ್‌ ಅವರು ತಮ್ಮ ಪಕ್ಷದ ಮೀರ್‌ ಸಾದಿಕ್‌ರ ಬಗ್ಗೆ ಈಗ ಮಾತನಾಡಿದ್ದಾರೆ. ಅಂದರೆ ಎಲ್ಲೆಲ್ಲೂ ಮೀರ್‌ಸಾದಿಕ್‌ಗಳು ಇದ್ದಂತೆ ಆಯಿತು! ಮೀರ್‌ಸಾದಿಕ್‌ಗಳು ಎಲ್ಲ ಪಕ್ಷಗಳಲ್ಲಿಯೂ ಇರುತ್ತಾರೆ. ಅವರನ್ನು ಮೀರಿ ನಾಯಕರಾದವರು ಗೆಲುವನ್ನು ತರಬೇಕು. ಜಯಾ ಮತ್ತು ಮಮತಾ ಭಾವನೆಗಳ ಮೇಲೆ ಆಟವಾಡುವ ನಾಯಕರು. ನವೀನ್‌ ಹಾಗೆ ಅಲ್ಲ. ಸಿದ್ದರಾಮಯ್ಯ ಅವರಿಗೆ ನವೀನ್‌ ಅವರ ಗೆಲುವಿನ ಪುಸ್ತಕದಲ್ಲಿ ಬೇಕಾದಷ್ಟು ಪಾಠಗಳು ಇದ್ದಂತೆ ಇವೆ. ಓದಬೇಕು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT