ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಕೀಯ ಅಸಮಾನತೆ’ಯ ದಿಕ್ಕಿನಲ್ಲಿ ಪ್ರಥಮ ಹೆಜ್ಜೆ

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

‘ಅಂಕೀಯ ಸಮಾನತೆ’ಯ ದಿಕ್ಕಿನಲ್ಲಿ ಪ್ರಥಮ ಹೆಜ್ಜೆ

‘Free Basics by Facebook ಒಂದು 100 ಕೋಟಿ ಭಾರತೀಯರನ್ನು ಮಿನ್ಕಾನ್ಕೆಯ ಉದ್ಯೋಗ, ಶಿಕ್ಷಣ ಮತ್ತು ಅವಕಾಶಗಳೊಂದಿಗೆ ಒಟ್ಟುಗೂಡಿಸುವೆಡೆ ಮತ್ತು ಅಂತಿಮವಾಗಿ ಉನ್ನತಭವಿಷ್ಯದೆಡೆ ಮೊದಲ ಹೆಜ್ಜೆ ಇಟ್ಟಿದೆ. ಆದರೆ Free Basics ನಿಷೇಧಕ್ಕೆ ಒಳಗಾಗುವ ಅಪಾಯಸಾಧ್ಯತೆಯಲ್ಲಿದೆ, ಮತ್ತೆ ಅದರಿಂದಾಗಿ ಅಂಕೀಯಸಮಾನತೆ ಪ್ರಗತ ಮಂದವಾಗಿದೆ

‘Free Basics ಅನ್ನು ಸಮರ್ಥಿಸಿ ಭಾರತವನ್ನು ಪ್ರಗತಿಯ ದಿಕ್ಕಿನಲ್ಲಿ ಮುಂದುವರಿಯುವುದಕ್ಕೆ ಸಹಾಯ ಮಾಡಿ’ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಎರಡು ಪೂರ್ಣ ಪುಟಗಳಲ್ಲಿ ಕಾಣಿಸಿಕೊಂಡ ಈ ಬರಹದ ಏನನ್ನು ಹೇಳುತ್ತಿದೆ? ಇಲ್ಲಿರುವ ‘ಮಿನ್ಕಾನ್ಕೆ’, ‘ಅಂಕೀಯಸಮಾನತೆ’, ‘ಪ್ರಗತ’ ಮುಂತಾದ ಪದಗಳಿಗೆ ಬಳಕೆಗೆ ಲಭ್ಯವಿರುವ ಸಾಮಾನ್ಯ ಪದಕೋಶಗಳಲ್ಲಿ ಅರ್ಥ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಈ ಜಾಹೀರಾತು ಏನನ್ನು ಹೇಳುತ್ತಿದೆ ಎಂಬುದು ಸಾಮಾನ್ಯ ಕನ್ನಡಿಗನಿಗೆ ಅರ್ಥವಾಗುವುದು ಕಷ್ಟ. ಹೆಚ್ಚು ಕಡಿಮೆ ಇದೇ ಬಗೆಯ ಪದಗಳನ್ನು ಹೊಂದಿರುವ ಜಾಹೀರಾತುಗಳು ಬಹುತೇಕ ಎಲ್ಲಾ ಪ್ರಮುಖ ಭಾರತೀಯ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಎಲ್ಲಾ ಜಾಹೀರಾತುಗಳನ್ನು ನೀಡಿರುವ ಸಂಸ್ಥೆ ಫೇಸ್‌ಬುಕ್.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರಕಟಿಸಲಾಗಿರುವ ಈ ಜಾಹೀರಾತುಗಳ ಅರ್ಥವನ್ನು ಶೋಧಿಸುವುದಕ್ಕೆ ಸ್ವಲ್ಪ ಇತಿಹಾಸದ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆ. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಅಂತರ್ಜಾಲವನ್ನು ಬಳಸಿಕೊಂಡು ನೀಡುವ ವಾಟ್ಸ್ ಆ್ಯಪ್‌ನಂಥ ಸೇವೆಗಳು (ಓಟಿಟಿ ಸೇವೆಗಳು=ಓವರ್ ದ ಟಾಪ್ ) ಮತ್ತು ಅಲಿಪ್ತ ಜಾಲ(ನೆಟ್ ನ್ಯೂಟ್ರಾಲಿಟಿ)ಗಳಿಗೊಂದು ನಿಯಂತ್ರಣ ಚೌಕಟ್ಟನ್ನು ರೂಪಿಸುವುದಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಪ್ರಶ್ನಾವಳಿಯೊಂದನ್ನು ರೂಪಿಸಿತ್ತು.  ಇದು ಮೊಬೈಲ್ ಸೇವಾದಾತರ ಪರವಾದ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿಯೇ ರೂಪುಗೊಂಡಂತೆ ಕಾಣಿಸುತ್ತಿತ್ತು.

ಸಹಜವಾಗಿಯೇ ಇದರ ವಿರುದ್ಧ ಟೀಕೆಗಳು ಕೇಳಿ ಬಂದವು.  ‘ಸೇವ್ ದ ಇಂಟರ್ನೆಟ್’ ಎಂಬ ಹೆಸರಿನಲ್ಲಿ  ಇದರು ವಿರುದ್ಧ ಒಂದು ಆಂದೋಲನವೂ ನಡೆಯಿತು. ಅದು ಇನ್ನೂ ಮುಂದುವರೆದಿದೆ. ಇದರಿಂದಾಗಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಓಟಿಟಿ ಸೇವೆಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುವುದೂ ಸೇರಿದಂತೆ ಅಲಿಪ್ತ ಜಾಲ ಪರಿಕಲ್ಪನೆಯ ವಿರುದ್ಧವಾಗಿರುವ ಎಲ್ಲಾ ಪ್ರಯತ್ನಗಳನ್ನು ವಿರೋಧಿಸುತ್ತೇವೆ ಎಂಬ ಇ–ಮೇಲ್‌ಗಳನ್ನು ಟ್ರಾಯ್‌ಗೆ ಕಳುಹಿಸಿದ್ದರು. ಈ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಅಲಿಪ್ತ ಜಾಲ ಪರಿಕಲ್ಪನೆಯ ವಿರುದ್ಧವಾದ ಏನನ್ನೂ ಮಾಡಲಾರದು ಎಂಬ ಭಾವ ಎಲ್ಲರದ್ದಾಗಿತ್ತು.

ಇದಕ್ಕೆ ಪೂರಕವಾಗಿ ಸಂಪರ್ಕ ಖಾತೆಯ ಸಚಿವರೂ ಇಂಟರ್ನೆಟ್ ಸೇವೆಯಲ್ಲಿ ತಾರತಮ್ಯ ಮಾಡುವ ಏನನ್ನೂ ಸರ್ಕಾರ ಬೆಂಬಲಿಸುವುದಿಲ್ಲ ಎಂದೂ ಸ್ಪಷ್ಟ ಪಡಿಸಿದ್ದರು. ಆದರೆ ಡಿಸೆಂಬರ್ 9ಕ್ಕೆ ಟ್ರಾಯ್ ಮತ್ತೊಂದು ಕನ್ಸಲ್ಟೇಷನ್ ಪೇಪರ್ ಅಥವಾ ಚರ್ಚಾ ಟಿಪ್ಪಣಿ ಪ್ರಕಟಿಸಿದೆ. ಇದರಲ್ಲಿ ಮತ್ತೆ ಅಲಿಪ್ತ ಜಾಲ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿರುವ ಪ್ರಸ್ತಾಪಗಳಿವೆ.  ಕೆಲವು ವೆಬ್‌ಸೈಟ್ ಅಥವಾ ಅಂತರ್ಜಾಲ ಸೇವೆಗಳನ್ನು ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ಒದಗಿಸುವ ಪ್ರಸ್ತಾಪವನ್ನು ಈ ಟಿಪ್ಪಣಿ ಮುಂದಿಟ್ಟಿದೆ. ಕೇವಲ ಏಳು ತಿಂಗಳ ಹಿಂದೆ ಲಕ್ಷಾಂತರ ಮಂದಿ ಯಾವುದನ್ನು ವಿರೋಧಿಸಿದ್ದರೋ ಅದನ್ನೇ ಮತ್ತೊಂದು ಸ್ವರೂಪದಲ್ಲಿ ಜನರ ಮುಂದಿಡುತ್ತಿರುವ ಟ್ರಾಯ್‌ನ ಉದ್ದೇಶವೇನು?

ಫೇಸ್‌ಬುಕ್ ಕಳೆದ ಒಂದೆರಡು ವಾರಗಳಿಂದ ನಡೆಸುತ್ತಿರುವ ಸರ್ಕಸ್ ಮತ್ತು ಇಂದು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತು ಮೇಲಿನ ಪ್ರಶ್ನೆಗೆ ಉತ್ತರ ನೀಡುತ್ತಿದೆ. ‘ಸೇವ್ ದ ಇಂಟರ್ನೆಟ್’ ಆಂದೋಲನ ರೂಪಿಸಿದ್ದ ಜನಾಭಿಪ್ರಾಯವನ್ನು ಹೇಗಾದರೂ ಮಾಡಿ ಬದಲಾಯಿಸಬೇಕು ಎಂದು ಫೇಸ್‌ಬುಕ್ ಪಣತೊಟ್ಟಂತಿದೆ. ಇದಕ್ಕೆ ಕೆಲವು ಮೊಬೈಲ್ ಸೇವಾದಾತರೂ ಕೈಜೋಡಿಸಿದ್ದಾರೆ. ಸ್ವತಂತ್ರ ನಿಯಂತ್ರಣ ಸಂಸ್ಥೆಯಾಗಿ ಕೆಲಸ ಮಾಡಬೇಕಾಗಿದ್ದ ಟ್ರಾಯ್ ಕೂಡಾ ಈ ಏಕಸ್ವಾಮ್ಯವಾದಿ ವ್ಯಾಪಾರ ತಂತ್ರವನ್ನು ರೂಪಿಸುತ್ತಿರುವವರ ಒತ್ತಡಕ್ಕೆ ಮಣಿದಿರುವುದು ಮತ್ತೂ ದೊಡ್ಡ ದುರಂತ.

ಫೇಸ್‌ಬುಕ್ ಪ್ರಾಯೋಜಿಸಿರುವ ‘ಫ್ರೀ ಬೇಸಿಕ್ಸ್’ ಸೇವೆಯನ್ನು ಬಳಸಿಕೊಂಡು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ವೆಬ್‌ಸೈಟ್‌ಗಳನ್ನು ಇಂಟರ್ನೆಟ್ ಶುಲ್ಕಪಾವತಿಸದೆ ಬಳಸಬಹುದಲ್ಲವೇ? ಇದರಿಂದ ಏನು ತೊಂದರೆ? ಎಂಬ ಮುಗ್ಧ ಪ್ರಶ್ನೆಗಳನ್ನು ಅನೇಕರು ಕೇಳುತ್ತಿದ್ದಾರೆ. ಈ ಪ್ರಶ್ನೆಗಳು ಮುಂದಿಡುತ್ತಿರುವ ಸರಳ ಸ್ಥಿತಿ ನಮ್ಮ ಮುಂದಿಲ್ಲ. ಟೋಲ್ ರಸ್ತೆಯ ಉದಾಹರಣೆಯ ಮೂಲಕ ಸಮಸ್ಯೆಯನ್ನು ವಿವರಿಸಬಹುದು. ದೇಶದಲ್ಲಿರುವ ಎಲ್ಲಾ ರಸ್ತೆಗಳಿಗೂ ಟೋಲ್ ಇದೆ ಎಂದು ಊಹಿಸೋಣ. ಕೆಲವು ಕಂಪೆನಿಗಳು ಉತ್ಪಾದಿಸಿದ ವಾಹನಗಳನ್ನು ಬಳಸಿದರೆ ಟೋಲ್ ಪಾವತಿಸಬೇಕಾಗಿಲ್ಲ ಎಂಬ ವ್ಯವಸ್ಥೆಯನ್ನು ತಂದರೆ ಏನಾಗಬಹುದು?

ಸಹಜವಾಗಿಯೇ ಆ ಕಂಪೆನಿಗಳನ್ನು ಹೊರತು ಪಡಿಸಿದ ಉಳಿದೆಲ್ಲಾ ವಾಹನ ಉತ್ಪಾದಕರೂ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಸೋಲೊಪ್ಪಬೇಕಾಗುತ್ತದೆ. ಫ್ರೀಬೇಸಿಕ್ಸ್ ಹೆಚ್ಚು ಕಡಿಮೆ ಇದನ್ನೇ ಮಾಡುತ್ತದೆ. ಸದ್ಯಕ್ಕೆ ಭಾರತದಲ್ಲಿ ಫ್ರೀ ಬೇಸಿಕ್ಸ್ ಸವಲತ್ತು ಕೇವಲ ರಿಲಯನ್ಸ್ ಮೊಬೈಲ್ ಇಂಟರ್ನೆಟ್ ಸೇವೆ ಪಡೆದವರಿಗೆ ಲಭ್ಯವಿದೆ. ಅಂದರೆ ನಿರ್ದಿಷ್ಟ ಕಂಪೆನಿಯೊಂದರ ಇಂಟರ್ನೆಟ್ ಸೇವೆಯನ್ನು ಪಡೆಯುವಂತೆ ಇದು ಗ್ರಾಹಕರನ್ನು ನಿರ್ಬಂಧಿಸುತ್ತಿದೆ. ಹಾಗೆಯೇ ಈ ‘ಬೇಸಿಕ್’ ಸೇವೆಗಳಲ್ಲಿರುವ ಜಾಲತಾಣಗಳನ್ನೇ ಬಳಸುವ ನಿರ್ಬಂಧವೂ ಇದೆ.

ಈ ಟೀಕೆಗೆ ಫೇಸ್‌ಬುಕ್‌ ನೀಡುವ ಸಮಜಾಯಿಷಿ ಹೀಗಿದೆ: “ನಮ್ಮ ಫ್ರೀಬೇಸಿಕ್ಸ್ ವೇದಿಕೆಯನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಎಲ್ಲಾ ಸೇವಾದಾತರಿಗೂ ಇದನ್ನು ವಿಸ್ತರಿಸುತ್ತೇವೆ. ಎಲ್ಲಾ ಜಾಲತಾಣಗಳೂ ಈ ವೇದಿಕೆಗೆ ಬೇಕಿರುವ ಆ್ಯಪ್‌ಗಳನ್ನು ರೂಪಿಸಿಕೊಳ್ಳಬಹುದು” ಈ ‘ಎಲ್ಲರಿಗೂ ಅವಕಾಶ’ ಎಂಬ ವಾದವನ್ನು ಅದೆಷ್ಟೇ ಅಪ್ರಾಯೋಗಿಕವಾಗಿದ್ದರೂ ತರ್ಕಕ್ಕಾಗಿ ನಂಬೋಣ. ಆಗ ಭಾರತದಲ್ಲಿ ಇಂಟರ್ನೆಟ್ ಆಧಾರಿತ ಸೇವೆ ಎಂದರೆ ಫೇಸ್‌ಬುಕ್‌ನ ಮರ್ಜಿಯನ್ನು ಅವಲಂಬಿಸಿದ ಸೇವೆಯಂತಾಗುವುದಿಲ್ಲವೇ?

ದೂರಗಾಮಿಯಾಗಿ ವ್ಯಾಪಾರಿ ಏಕಸ್ವಾಮ್ಯದ ಉದ್ದೇಶ ಫೇಸ್‌ಬುಕ್‌ಗೆ ಇದೆ ಎಂದು ಅನುಮಾನಿಸುವುದಕ್ಕೆ ಇನ್ನೂ ಹಲವು ಕಾರಣಗಳಿವೆ. ಕಳೆದ ಎರಡು ವಾರಗಳಿಂದ  ಫೇಸ್‌ಬುಕ್‌ನ ಅನೇಕ ಬಳಕೆದಾರರಿಗೆ ‘ನಿಮ್ಮ ಗೆಳೆಯರು ಫ್ರೀಬೇಸಿಕ್ಸ್ ಬೆಂಬಲಿಸುತ್ತಿದ್ದಾರೆ. ನೀವು ಬೆಂಬಲಿಸಿ’ ಎಂಬರ್ಥದ ಸಂದೇಶ ಬರುತ್ತಿದೆ. ಈ ಸಂದೇಶವನ್ನು ಕ್ಲಿಕ್ಕಿಸಿದರೆ ನಿಮ್ಮ ಹೆಸರಿನಲ್ಲಿ ‘ಫ್ರೀಬೇಸಿಕ್ಸ್’ ಬೆಂಬಲಿಸುವ ಇ–ಮೇಲ್ ಸಂದೇಶವನ್ನು ಟ್ರಾಯ್‌ಗೆ ಕಳುಹಿಸಲು ಅನುವು ಮಾಡಿಕೊಡುವ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಕ್ಲಿಕ್ಕಿಸಿದರೆ ನಿಮ್ಮ ಹೆಸರಿನಲ್ಲಿ ಟ್ರಾಯ್‌ಗೆ ಇ–ಮೇಲ್ ಹೋಗುತ್ತದೆ. ಈ ಬಗೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಇ–ಮೇಲ್ ಕಳುಹಿಸಿದ್ದಾರಂತೆ.

ಕಂಡದ್ದನ್ನೆಲ್ಲಾ ಮೊದಲು ಲೈಕ್ ಮಾಡಿ ಓದುವ ಅನೇಕರೂ ಇದರಲ್ಲಿರಬಹುದು. ಭಾರತದಲ್ಲಿ ಒಟ್ಟು 13.6 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಫೇಸ್‌ಬುಕ್ ಮನಸ್ಸು ಮಾಡಿದರೆ ಇಷ್ಟೂ ಮಂದಿಯನ್ನು ತನ್ನ ಯೋಜನೆಯ ಬೆಂಬಲಿಗರೂ ಎಂದು ಹೇಳಿಕೊಳ್ಳಬಹುದು! ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ‘ಅಂಕೀಯ ಸಮಾನತೆ’ಯ ಜಾಹೀರಾತಿಗೂ ಹೀಗೆ ಬೆಂಬಲಿಗರನ್ನು ಗಳಿಸುವ ಉದ್ದೇಶವಿದೆ. ಈ ಜಾಹೀರಾತಿನಲ್ಲಿ ಒಂದು ಟೋಲ್ ಫ್ರೀ ನಂಬರ್ ಕೊಟ್ಟು ಅದಕ್ಕೆ ಮಿಸ್ಡ್ ಕಾಲ್ ಕೊಡಲು ಸೂಚಿಸಲಾಗಿದೆ. ಹೀಗೆ ಮಾಡಿದವರೆಲ್ಲರೂ ‘ಫ್ರೀ ಬೇಸಿಕ್ಸ್’ನ ಬೆಂಬಲಿಗರಾಗಿಬಿಡುತ್ತಾರೆ.

245 ಶತಕೋಟಿ ಡಾಲರುಗಳ ಮೌಲ್ಯದ ಕಂಪೆನಿಯೊಂದು ತನ್ನಲ್ಲಿರುವ ಹಣಬಲ ಹಾಗೂ ತಂತ್ರಜ್ಞಾನದ ಬಲವನ್ನು ಬಳಸಿಕೊಂಡು ಜನಾಭಿಪ್ರಾಯವನ್ನು ರೂಪಿಸಲು ಹೊರಟಿದೆ. ಇದಕ್ಕೆ ಸರಿಸಮವಾಗಿ ನಿಲ್ಲುವುದಕ್ಕೆ ‘ಸೇವ್ ದ ಇಂಟರ್ನೆಟ್’ ತರಹದ ಕೇವಲ ಜಾಗೃತ ನಾಗರಿಕರನ್ನು ನಂಬಿರುವ ಆಂದೋಲನಕ್ಕೆ ಸಾಧ್ಯವೇ? ಈ ಬಗೆಯ ಓಲೈಕೆಯ ಮೂಲಕ ‘ಜನಾಭಿಪ್ರಾಯ ರೂಪಿಸುವುದು’ ಅಥವಾ ‘ಜನಮನ್ನಣೆ ಗಳಿಸುವುದು’ ಭಾರತದಲ್ಲಿ ಹೊಸತೇನೂ ಅಲ್ಲ. ನಮ್ಮ ಅನೇಕ ಜನಪ್ರತಿನಿಧಿಗಳು ಗೆಲ್ಲುವುದೇ ಈ ತಂತ್ರಗಳಲ್ಲಿ. ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಇವರು ನೇರವಾಗಿ ಪರಿಹಾರಗಳನ್ನು ಒದಗಿಸುತ್ತಾರೆ.

ಈ ಪರಿಹಾರದಲ್ಲಿ ಮತದಾರರ ಮನೆಯ ಮದುವೆಗೆ ನೆರವಾಗುವುದರಿಂದ ಆರಂಭಿಸಿ ಅವರ ಅಮಲಿನ ಆಸೆಯನ್ನು ಪೂರೈಸುವ ತನಕದ ಎಲ್ಲವೂ ಒಳಗೊಂಡಿರುತ್ತದೆ. ಹೀಗೆ ನೆರವಾಗುವುದನ್ನು ‘ದಾನ’ವೆಂಬ ದೃಷ್ಟಿಯಲ್ಲಿ ನೋಡಿದರೆ ತಪ್ಪೇನೂ ಕಾಣಿಸದು. ಇವರಿಂದ ‘ದಾನ’ ಪಡೆದವರು ಅದಕ್ಕೆ ಪ್ರತಿಯಾಗಿ ‘ಮತದಾನ’ಮಾಡುವುದೂ ತರ್ಕಬದ್ಧವೇ ಆಗಿದೆ. ಆದರೆ ಒಟ್ಟಾರೆ ಪ್ರಜಾಪ್ರಭುತ್ವದ ಹಿತವನ್ನು ಗಮನದಲ್ಲಿಟ್ಟುಕೊಂಡರೆ, ಈ ‘ದಾನ’ ಮತ್ತು ‘ಮತದಾನ’ವನ್ನು ಒಪ್ಪಲು ಸಾಧ್ಯವೇ? ಇಂದು ಹಣಬಲವಿಲ್ಲದ ಯಾರೂ ಜನಪ್ರತಿನಿಧಿಯಾಗುವುದನ್ನು ಕಲ್ಪಿಸಿಕೊಳ್ಳಲೂ ಆಗದೇ ಇರುವ ವಾತಾವರಣ ಸೃಷ್ಟಿಯಾಗಿರುವುದರ ಹಿಂದೆ ಈ ‘ದಾನ’ವೇ ಇದೆಯಲ್ಲವೇ?

ಫೇಸ್‌ಬುಕ್ ಪ್ರತಿಪಾದಿಸುತ್ತಿರುವ ‘ಅಂಕೀಯ ಸಮಾನತೆ’ ಅರ್ಥಾತ್ ಡಿಜಿಟಲ್ ಸಮಾನತೆಯ ಸಮಸ್ಯೆ ಇರುವುದು ಇಲ್ಲಿಯೇ. ಫ್ರೀಬೇಸಿಕ್ಸ್ ಡಿಜಿಟಲ್ ಸಮಾನತೆಯನ್ನು ಸಾಧಿಸುವುದಿಲ್ಲ. ಉಳ್ಳವರಿಗಷ್ಟೇ ರಾಜಕಾರಣ ಎಂಬಂಥ ಸ್ಥಿತಿಯೇ ಇಂಟರ್ನೆಟ್‌ನಲ್ಲೂ ಉದ್ಭವಿಸುತ್ತದೆ. ಇಂಟರ್ನೆಟ್ ಆಧಾರಿತ ಆವಿಷ್ಕಾರಗಳೆಲ್ಲವೂ ಫೇಸ್‌ಬುಕ್‌ನಂಥ ದೊಡ್ಡಣ್ಣಂದಿರ ನೆರಳಲ್ಲಷ್ಟೇ ಸಾಧ್ಯವಿರುವಂಥ ವಾತಾವರಣ ಸೃಷ್ಟಿಯಾಗುತ್ತದೆ. ಅಂದರೆ ಈಗಾಗಲೇ ಇರುವ ಡಿಜಿಟಲ್ ಕಂದಕ ಇನ್ನಷ್ಟು ಆಳ ಮತ್ತು ಅಗಲವಾಗುತ್ತದೆ. ಮುಂದೊಂದು ದಿನ ಇದನ್ನು ದಾಟುವುದಕ್ಕೆ ಬೇಕಿರುವ ಸೇತುವೆಗಳನ್ನು ನಿರ್ಮಿಸುವುದಕ್ಕೂ ಆಗದಂಥ ಸ್ಥಿತಿ ಉದ್ಭವಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT