ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದ್ಮಿ’ಗಳಿಗೆ ಸನ್ನಡತೆ, ಸಂಯಮದ ಕೊರತೆ

Last Updated 26 ಜನವರಿ 2014, 19:30 IST
ಅಕ್ಷರ ಗಾತ್ರ

ಸಮಾಜ ಆಧುನಿಕವಾದಂತೆ ಮನುಷ್ಯನ ಆಲೋಚನೆಗಳು ವಿಶಾಲಗೊಳ್ಳಬೇಕು. ಆಧುನಿಕತೆ ನಂಬಲಾಗದ ವೇಗದಲ್ಲಿ ಆವರಿಸಿ­ಕೊಳ್ಳುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ನಮ್ಮ ವರ್ತನೆಗಳು ಬದಲಾಗಿಲ್ಲ. ದಿನದಿಂದ ದಿನಕ್ಕೆ ಸಣ್ಣವರಾಗುತ್ತಿದ್ದೇವೆ. ನಡವಳಿಕೆಗಳು ಸಂಕುಚಿತ­ವಾಗುತ್ತಿವೆ. ಪರರನ್ನು ಸಹಿಸಿಕೊಳ್ಳುವ ಗುಣ, ಸನ್ನಡತೆ, ಸಂಯಮ ಕಣ್ಮರೆಯಾಗುತ್ತಿವೆ.

ಈ ಮಾತು ಹೇಳಲು ಕಾರಣವಿದೆ. ದೆಹಲಿಯ ಆಮ್‌ ಆದ್ಮಿ ಪಕ್ಷ (ಎಎಪಿ) ಸರ್ಕಾ­ರದ ಕಾನೂನು ಸಚಿವ ಸೋಮನಾಥ ಭಾರ್ತಿ ಬೆಂಬಲಿಗರ ದಂಡು ಕಟ್ಟಿಕೊಂಡು, ಉಗಾಂಡ ಮೂಲದ ಮಹಿಳೆಯರ ಮನೆ ಮೇಲೆ ನಡೆಸಿ­ರುವ ದಾಳಿ ಅತ್ಯಂತ ಅಪಾಯಕಾರಿ ಬೆಳವಣಿಗೆ. ಅವರ ವರ್ತನೆ ಸಭ್ಯತೆಯನ್ನು ಮೀರಿದ್ದು. ಜನಾಂಗೀಯ ನಿಂದನೆಯ ಸ್ವರೂಪದ್ದು.

ಈ ಮಹಿಳೆಯರು ಅನೈತಿಕ ಚಟುವಟಿಕೆ ನಡೆಸುತ್ತಿದ್ದರೆಂದು ಸಬೂಬು ಹೇಳಿ ಸಚಿವರು ತಮ್ಮ ದಾಳಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ­ದ್ದಾರೆ. ಸ್ಥಳೀಯರ ಬೆಂಬಲ ಪಡೆಯಲು ಕಸರತ್ತು ಮಾಡಿದ್ದಾರೆ. ಈ ಮಹಿಳೆಯರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರೂ ಅವರ ಮನೆಗಳಿಗೆ ನುಗ್ಗುವ ಅಧಿಕಾರ ಸಚಿವ­ರಿಗಿಲ್ಲ. ಕಾನೂನಿನಲ್ಲಿ ಇಲ್ಲದ ಅಧಿಕಾರವನ್ನು ಬಳಸಿಕೊಳ್ಳಲು ಸಚಿವರು ಮುಂದಾಗಿದ್ದಾರೆ. ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಪ್ಪು ಮಾಡಿರುವ ಸಹೋದ್ಯೋಗಿಯ ಕಿವಿ ಹಿಂಡುವ ಬದಲು, ಬೆನ್ನು ತಟ್ಟಿ ಶ್ಲಾಘಿಸಿದ್ದಾರೆ. ರಾಜಕಾ­ರಣಕ್ಕೆ ಹೊಸ ದಿಕ್ಕು, ಹೊಸ ಆಶಯದೊಂದಿಗೆ ಅಧಿಕಾರಕ್ಕೆ ಬಂದ ಹೊಸ ಪಕ್ಷ ಆರಂಭದಲ್ಲೇ ಎಡವುತ್ತಿದೆ.

ಈ ದೌರ್ಜನ್ಯ ಪ್ರಕರಣ ಕುರಿತು  ಕೇಜ್ರಿ­ವಾಲ್‌ ಕ್ಷಮೆ ಕೇಳಬೇಕಿತ್ತು; ಭಾರ್ತಿ ಅವರಿಂದ ವಿವರಣೆ ಪಡೆಯಬೇಕಿತ್ತು. ಸಚಿವರ ವಿರುದ್ಧ ಮಹಿಳೆ­ಯರು ಪೊಲೀಸರಿಗೆ ದೂರು ಕೊಟ್ಟ ತಕ್ಷಣ ನೈತಿಕ ಹೊಣೆ ಮೇಲೆ ಅವರ ರಾಜೀ­ನಾಮೆ ಪಡೆಯಬೇಕಿತ್ತು. ದೆಹಲಿ ಮುಖ್ಯಮಂತ್ರಿ ಏನೂ ಮಾಡದೆ ತಮ್ಮದೇ ಸರಿ, ಭಾರ್ತಿ ಏನೂ ತಪ್ಪು ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ. ಕೇಜ್ರಿ­ವಾಲ್‌ ಬೇರೆ ಪಕ್ಷಗಳ ರಾಜಕಾರಣಿಗಳಿ­ಗಿಂತ ತಾವು ಯಾವುದೇ ರೀತಿಯಲ್ಲೂ ಭಿನ್ನರಲ್ಲ ಎಂದು ನಿರೂಪಿಸಿದ್ದಾರೆ.

ಅಷ್ಟೇ ಅಲ್ಲ, ದೆಹಲಿ ಮುಖ್ಯಮಂತ್ರಿ,  ದಾಳಿಗೆ ಸಹಕರಿಸದ ಪೊಲೀಸರ ಮೇಲೆ ಮುಗಿಬಿದ್ದಿ­ದ್ದಾರೆ. ತಮ್ಮ ಸ್ಥಾನದ ಘನತೆ, ಗೌರವ ಮರೆತು ಹೋರಾಟಗಾರರಂತೆ ಬೀದಿಗೆ ಬಂದು ಪ್ರತಿಭಟಿಸಿದ್ದಾರೆ. ಮೊದಲಿನಂತೆ ಸಾಮಾಜಿಕ ಕಾರ್ಯಕರ್ತರಾಗಿದ್ದರೆ ಯಾರೂ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಅವರಿಗೆ ಸಂವಿಧಾನಾತ್ಮಕ ಸ್ಥಾನಮಾನವಿದೆ. ಅದನ್ನು ಅವರು ಮರೆಯಬಾರದು.

ಆರು ವರ್ಷಗಳ ಹಿಂದೆ ಕೇರಳದ ಆಗಿನ ಮುಖ್ಯಮಂತ್ರಿ ಅಚ್ಯುತಾನಂದನ್‌, ಜಂತರ್‌ ಮಂತರ್‌ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗಳಿಗಾಗಿ ನಿಗದಿಯಾದ ಸ್ಥಳ ಈ ಜಂತರ್‌ ಮಂತರ್‌. ಅಚ್ಯುತಾನಂದನ್‌ ಕಾನೂನಿನ ಇತಿಮಿತಿಯೊಳಗೆ ನಡೆದಿದ್ದರು.   ಕೇಂದ್ರ ಸರ್ಕಾರ ಕೇರಳವನ್ನು ಕಡೆಗಣಿಸಿದೆ ಎಂಬುದು ಅವರ ಆರೋಪವಾಗಿತ್ತು.

ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಎಂ. ಕರುಣಾನಿಧಿ, ಶ್ರೀಲಂಕಾ ತಮಿಳರನ್ನು ಬೆಂಬಲಿಸಿ ಐದು ವರ್ಷಗಳ ಹಿಂದೆ ಧರಣಿ ಮಾಡಿದ್ದರು. ಆಗಿನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ಎನ್‌.ಅಗರವಾಲ್‌, ಕರುಣಾನಿಧಿ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ್ದರು. ಸಂವಿಧಾನದ 356ನೇ ಕಲಂ ಅನ್ವಯ ಸರ್ಕಾರವನ್ನು ಏಕೆ ವಜಾ ಮಾಡಬಾರದು ಎಂದು ಕೇಳಿದ ಸುದ್ದಿ ಟಿ.ವಿ. ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಬೆವರಿದ ಕರುಣಾನಿಧಿ ಎದ್ದು ಕಚೇರಿಗೆ ಓಡಿ ಬಂದಿದ್ದರು.

ಈಗಲೂ ಸುಪ್ರೀಂ ಕೋರ್ಟ್‌, ಕೇಜ್ರಿವಾಲ್‌ ಧರಣಿ ಕುರಿತು ಅಸಮಾಧಾನ ಹೊರ ಹಾಕಿದೆ. ಮುಖ್ಯಮಂತ್ರಿ ಹೇಗೆ ತಮ್ಮ ಸ್ಥಾನಮಾನ, ಹೊಣೆಗಾರಿಕೆ ಮರೆತು ಎರಡು ದಿನ ಧರಣಿ ಕುಳಿತರು? ಪೊಲೀಸರು ಅವರನ್ನು ಹೇಗೆ ಸಂಸತ್ತಿನ ಸಮೀಪಕ್ಕೆ  ಬರಲು ಬಿಟ್ಟರು ಎಂದು ಚಾಟಿ ಬೀಸಿದೆ. ದೆಹಲಿ ಮುಖ್ಯಮಂತ್ರಿ, ಜಂತರ್‌ ಮಂತರ್‌ ಬಳಿ ಧರಣಿ ಕುಳಿತಿದ್ದರೆ ಇಷ್ಟೊಂದು ರಾದ್ಧಾಂತ ಆಗುತ್ತಿರಲಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಪೊಲೀಸರು ಮಾಡಿದ ಮನವಿಗೆ ಅವರು ಕಿವಿಗೊಡಲಿಲ್ಲ.

ಸಂಸತ್ ಭವನದ ಸುತ್ತಮುತ್ತ ನಿಷೇಧಾಜ್ಞೆ ಯಾವಾಗಲೂ ಜಾರಿಯಲ್ಲಿರುತ್ತದೆ. ಕೇಜ್ರಿ­ವಾಲ್‌ ನಿಷೇಧಾಜ್ಞೆ ಉಲ್ಲಂಘಿಸಿ ಅರಾಜಕತೆ ಸೃಷ್ಟಿಸಿದ್ದಾರೆ. ಅವರೂ ಅದನ್ನು ಒಪ್ಪಿಕೊಂಡಿ­ದ್ದಾರೆ. ಸಂವಿಧಾನದ ಮೌಲ್ಯ, ಆಶಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡಿದ ಮುಖ್ಯಮಂತ್ರಿಯೊಬ್ಬರು ಕಾನೂನು – ಕಟ್ಟಳೆ­ಗಳನ್ನು ಗಾಳಿಗೆ ತೂರಿದ್ದು ಪ್ರಜಾ­ಪ್ರಭುತ್ವದ ದೊಡ್ಡ ಅಣಕ.

ಭಾರ್ತಿ ಮತ್ತು ಅವರ ಬೆಂಬ­ಲಿಗರು ‘ಫ್ಯಾಸಿಸ್ಟ್‌ ಮನೋಭಾವ’ ಪ್ರದ­ರ್ಶಿ­ಸಿ­ದ್ದಾರೆ. ನೈತಿಕ ಪೊಲೀಸರಂತೆ ನಡೆದು­ಕೊಂ­ಡಿ­ದ್ದಾರೆ. ಮಂಗಳೂರಿನಲ್ಲಿ ಸಂಘ–ಪರಿ­ವಾರದ ಕಾರ್ಯ­ಕರ್ತರು ಪಬ್‌, ಹೋಂ ಸ್ಟೇ ಮೇಲೆ ನಡೆ­ಸಿದ ದಾಳಿಯ ಮತ್ತೊಂದು ರೂಪವೇ ಇದು.
ಎಎಪಿ ಮುಖಂಡರ ಫ್ಯಾಸಿಸ್ಟ್ ಮನೋ­ಭಾವಕ್ಕೆ ಇದೊಂದೇ ಅಲ್ಲ, ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಕುಮಾರ್‌ ವಿಶ್ವಾಸ್‌, ಕವಿ ಸಮ್ಮೇಳನ­ವೊಂದ­ರಲ್ಲಿ ಮಲಯಾಳಿ  ನರ್ಸ್‌ಗಳನ್ನು ಟೀಕಿಸಿ­ದ್ದರು. ಕೇರಳದ ನರ್ಸ್‌ಗಳಿಗೆ ಹೋಲಿಸಿದರೆ ಉತ್ತರ ಭಾರತದ ಯುವತಿಯರು ಸುಂದರಿ­ಯರು ಎಂದು ಬಣ್ಣಿಸಿದ್ದರು. ಅವರ ಈ ಹೇಳಿಕೆ ಆರು ವರ್ಷಗಳ ಬಳಿಕ ಮೊನ್ನೆ ಫೇಸ್‌ ಬುಕ್‌ನಲ್ಲಿ ಕಾಣಿಸಿಕೊಂಡಿತು. ಪ್ರತಿಭಟನೆ ನಡೆಯಿತು. ಕೊನೆಗೆ ಅವರು ಕ್ಷಮೆ ಯಾಚಿಸಬೇ­ಕಾಯಿತು. ಇವೆ­ಲ್ಲವೂ ಆಗುವುದು ಪರರನ್ನು ಕಂಡು ಸಹಿ­ಸಲು ಸಾಧ್ಯವಾಗದ ಮನಸ್ಥಿತಿ ಇದ್ದಾಗ ಮಾತ್ರ.

ಎಎಪಿ ದಾಳಿ ಬಳಿಕ ಆಫ್ರಿಕಾ ಮೂಲದ ಜನ, ಮಾಳವೀಯ ನಗರ ತೊರೆಯುತ್ತಿದ್ದಾರೆ. ಕೆಲ­ವರು ದೇಶ ಬಿಡುವ ಮಾತುಗಳನ್ನು ಆಡಿದ್ದಾರೆ. ಎಲ್ಲ ದೇಶ, ಭಾಷೆ, ಜಾತಿ ಧರ್ಮಗಳನ್ನು ಒಡಲಲ್ಲಿಟ್ಟುಕೊಂಡಿರುವ ಭಾರತದ ಹೆಗ್ಗಳಿಕೆ ಅಡಗಿರುವುದೇ ವೈವಿಧ್ಯತೆಯಲ್ಲಿ. ಎಲ್ಲರಿಗೂ ಬದುಕಲು ಅವಕಾಶ ಇರಲಿ ಎನ್ನುವುದು ಹಿರಿ­ಯರ ಆಶಯ. ಅವರ ಸದಾಶಯ ರಾಜಕಾರಣಿ­ಗಳಿಗೆ ಅರ್ಥವಾಗದೆ ಇರುವುದು ದುರದೃಷ್ಟಕರ.

ಎಎಪಿ ಮುಖಂಡರ ನಡವಳಿಕೆಗೂ ಅಮೆರಿಕದ ‘ಬಿಗ್‌ ಬಾಸ್‌’ ಕಾರ್ಯಕ್ರಮದಲ್ಲಿ ಭಾಗವ­ಹಿಸಿದ್ದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯವಾಗಿ ನಿಂದನೆ ಮಾಡಿದ ಗೂಡಿ ಮತ್ತವರ ಜತೆಗಾರರಿಗೂ ಏನೇನೂ ವ್ಯತ್ಯಾಸವಿಲ್ಲ. ಶಿಲ್ಪಾ ಪರವಾಗಿ ಆಗ, ಅಮೆರಿಕ­ದಲ್ಲಿ ನೆಲೆಸಿರುವ ಭಾರತೀಯರು ನಿಂತಂತೆ ಮಾಳವೀಯ ನಗರದ ಘಟನೆ ವಿರುದ್ಧ ಆಫ್ರಿಕಾ ಮೂಲದವರು ದನಿ ಎತ್ತಿದರೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತದೆ. ಆಡಳಿತ ನಡೆಸುವವರಿಗೆ ಅಂತರರಾಷ್ಟ್ರೀಯ ಸಂಬಂಧ ಮತ್ತು ಅದರ ಪರಿಣಾಮಗಳ ಅರಿವೂ ಬೇಕು.

ಎಎಪಿ ನಾಯಕರು ಉಗಾಂಡ ಮೂಲದ ಮಹಿಳೆಯರ ಮನೆ ಮೇಲೆ ದಾಳಿ ಮಾಡುವ ಮೊದಲು ಮಹಾತ್ಮ ಗಾಂಧಿ ಅವರ ಬದುಕು– ಹೋರಾಟ ಕುರಿತು ಓದಿಕೊಳ್ಳಬೇಕಿತ್ತು. ಗಾಂಧೀಜಿ ಚಿಂತನೆಗಳನ್ನು ಅರ್ಥ ಮಾಡಿ ಕೊ­ಳ್ಳಲು ಅವರಿಗೆ ಇನ್ನೂ ಕಾಲ ಮಿಂಚಿಲ್ಲ.
ಸಾಮಾಜಿಕ ನ್ಯಾಯದ ಪರವಾಗಿ ಮಹಾತ್ಮ ಗಾಂಧೀಜಿ  ಮೊದಲಿಗೆ ಹೋರಾಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಅದೂ ಏಷ್ಯಾ ಮೂಲದ ಜನರ ಮತ್ತು ಕರಿಯರ ವಿರುದ್ಧ ಬಿಳಿಯರು ಪಾಲಿಸಿ­ಕೊಂಡು ಬಂದಿದ್ದ ವರ್ಣಭೇದ ನೀತಿ ವಿರುದ್ಧ ಎಂಬ ಸತ್ಯ ರಾಜಕಾರಣಿಗಳಿಗೆ ಮನವರಿಕೆ ಆಗಬೇಕು. ಮಹಾತ್ಮನ ಹೋರಾಟದ ಬಗ್ಗೆ ದ.ಆಫ್ರಿಕಾದಲ್ಲಿ ಈಗಲೂ ಎಂಥ ಗೌರವ ಇದೆ ಎನ್ನುವುದು ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ಗೊತ್ತಿಲ್ಲ.

ನಾವು ಉಗಾಂಡ ಮೂಲದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದಂತೆ ಆಫ್ರಿಕಾ­ದಲ್ಲಿರುವ ಭಾರತೀಯರ ಮೇಲೆ ಅಲ್ಲಿನ ಜನ ದಾಳಿ ನಡೆಸಿದರೆ ಗತಿ ಏನು? 70ರ ದಶಕದಲ್ಲಿ ಉಗಾಂಡದ ಅಧ್ಯಕ್ಷ ಈದಿ ಅಮೀನ್‌ ತನ್ನ ದೇಶದಿಂದ ಏಷ್ಯಾದ ಜನರನ್ನು ಹೊರದಬ್ಬಿ­ದರು. ಆಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಭಾರತ ಮತ್ತು ಪಾಕಿಸ್ತಾನದವರು. ಆಗ ಆದ ಹಾನಿ­ಯನ್ನು ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ.
ಆಫ್ರಿಕಾದ ದೇಶಗಳಲ್ಲಿ ಬಂಡವಾಳ ಹೂಡಲು ಭಾರತ ಮತ್ತು ಚೀನಾ ಪೈಪೋಟಿ ನಡೆಸುತ್ತಿರುವುದು ರಹಸ್ಯವೇನೂ ಅಲ್ಲ. ಹೂಡಿಕೆ ವಿಷಯದಲ್ಲಿ ಭಾರತಕ್ಕಿಂತ ಚೀನಾ ಮುಂದಿದೆ. ಅಲ್ಲಿನ ಜನರ ಜತೆ ಭಾರತದ ಸಂಬಂಧ ನೂರಾರು ವರ್ಷ ಹಳೆಯದು. ಚೀನಾ ಹದಿನೈದು ವರ್ಷಗಳಿಂದ ಆಸಕ್ತಿ ವಹಿಸಿದೆ.

ಕಾಲ ಬದಲಾಗಬಹುದು. ಸಂಬಂಧ ಬದಲಾ­ಗದು ಎನ್ನುವಂತೆ ಆಫ್ರಿಕಾದ ಜನ ತಮ್ಮ ಹೃದಯ­ದಲ್ಲಿ ಭಾರತೀಯರಿಗೆ ಸ್ಥಾನ ನೀಡಿ­ದ್ದಾರೆ. ಅದಕ್ಕೆ ವಸಾಹತುಶಾಹಿ ಮತ್ತು ವರ್ಣ­ಭೇದ ನೀತಿ ವಿರುದ್ಧದ ನಮ್ಮ ಹೋರಾಟವೇ ಪ್ರೇರಣೆ. ಅವರಿಗೆ ಚೀನಾ ಜತೆ ಬರೀ ವ್ಯಾಪಾರ ಸಂಬಂಧ. ಖನಿಜ ಸಂಪತ್ತು, ಪೆಟ್ರೋಲಿಯಂ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಎರಡೂ ರಾಷ್ಟ್ರಗಳು ಕಣ್ಣಿಟ್ಟಿವೆ. ಭಾರತ ಹೆಚ್ಚು ಹೆಚ್ಚು ಬಂಡವಾಳ ಹೂಡಲಿ ಎನ್ನುವುದು ಅಲ್ಲಿನ ಸರ್ಕಾರಗಳ ಅಭಿಲಾಷೆ.

ಆಫ್ರಿಕಾ ಮೂಲದ ಜನ ಭಾರತದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವುದೇ ಇಲ್ಲ ಎಂದು ಯಾರೂ ಹೇಳಲಾಗದು. ಯಾರೋ ಕೆಲವರು ಮಾಡುವ ಕೆಲಸಕ್ಕೆ ಎಲ್ಲರನ್ನೂ ಹೊಣೆ ಮಾಡುವುದು ಸರಿಯಲ್ಲ. ವೇಶ್ಯಾವಾಟಿಕೆಗೆ ಅಲ್ಲಿಂದ ಮಾತ್ರವಲ್ಲ. ರಷ್ಯಾದಿಂದಲೂ ಮಹಿಳೆ­ಯರು ಬರುತ್ತಿದ್ದಾರೆ. ನಮ್ಮ ಕಾನೂನಿನಲ್ಲಿ ಇರುವ ಲೋಪಗಳು ಇದಕ್ಕೆ ಕಾರಣ. ಅದನ್ನು ಸರಿಪಡಿಸಲು ಗಮನ ಹರಿಸಬೇಕು. ಅದನ್ನು ಬಿಟ್ಟು ಸಭ್ಯವಲ್ಲದ ರೀತಿಯಲ್ಲಿ ನಡೆದುಕೊಂಡರೆ ಪ್ರಜ್ಞಾವಂತರು ಒಪ್ಪುವುದಿಲ್ಲ.

ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷವನ್ನು ದೆಹಲಿ ಜನ ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ. ಭ್ರಷ್ಟಾಚಾರ ರಹಿತ­ವಾದ ಸ್ವಚ್ಛ ಆಡಳಿತ ಕೊಡಬಹುದು ಎಂದು ಭಾವಿಸಿದ್ದಾರೆ. ಎಎಪಿ ನಾಯಕರು ಹೆಜ್ಜೆ ಹಾಕು­ತ್ತಿರುವ ದಿಕ್ಕು ಭ್ರಮನಿರಸನ ಉಂಟು ಮಾಡುತ್ತಿದೆ. ದೆಹಲಿ ಹೊರಗಿನ ಜನರೂ ಹೊಸ ಪಕ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕೇಜ್ರಿವಾಲ್‌ ಮತ್ತು ಅವರ ಸಚಿವ ಸಹೋದ್ಯೋಗಿಗಳು ಆಡುತ್ತಿರುವ ಮಾತು­ಗಳನ್ನು ಗಮನಿಸಿದರೆ ಯಾರ ಮೇಲೆ ಯಾರಿಗೂ ಹಿಡಿತವಿದ್ದಂತೆ ಕಾಣುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ರಾಜಕಾರಣ­ವನ್ನು ಗಂಭೀರವಾಗಿ ತೆಗೆದು­ಕೊಂಡರೆ ಉತ್ತಮ ಭವಿಷ್ಯವಿದೆ. ಅದು ಬಿಟ್ಟು ಹೀಗೆ ವರ್ತಿಸಿದರೆ ಅಸ್ಸಾಂನ ಎಜಿಪಿ ಸ್ಥಿತಿ ಬರಬಹುದು.

ರಾಜ್ಯ ವಿಧಾನಸಭೆ ಚುನಾವಣೆ ಸಮಯ­ದಲ್ಲಿ ಕೊಟ್ಟಿರುವ ಜನಪ್ರಿಯ ಭರವಸೆಗಳನ್ನು ಈಡೇರಿಸುವುದು ಕಷ್ಟ ಎಂದು ಭಾವಿಸಿರುವ ಎಎಪಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಹೀಗೆ ಮಾಡುತ್ತಿದೆ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ರಾಷ್ಟ್ರಪತಿ ಪ್ರಣವ್‌
ಮುಖ­ರ್ಜಿ ತಮ್ಮ ಗಣರಾಜ್ಯೋತ್ಸವ ಭಾಷಣ­ದಲ್ಲಿ ಸರ್ಕಾರ ಎನ್ನುವುದು ಧರ್ಮ ಛತ್ರವಲ್ಲ ಎಂದು ಖಾರವಾಗಿಯೇ ಕುಟುಕಿದ್ದಾರೆ. ಇವೆಲ್ಲವೂ ಕೇಜ್ರಿವಾಲ್‌ ಬಳಗಕ್ಕೆ ಎಚ್ಚರಿಕೆ ಗಂಟೆ!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT