ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೇರ ಕಾರ್ಯಾಚರಣೆ ದಿನ’ ವ ನೆನೆಯುತ್ತಾ...

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಆಗಸ್ಟ್‌ 14, ಪಾಕಿಸ್ತಾನದ ಸ್ವಾತಂತ್ರ್ಯ ದಿನ. ಆಗಸ್ಟ್‌ 15, ಭಾರತದ ಸ್ವಾತಂತ್ರ್ಯದ ದಿನ. 1947ರಲ್ಲಿ ಮೊದಲ ಬಾರಿಗೆ ಈ ಎರಡೂ ದೇಶಗಳ ಸ್ವಾತಂತ್ರ್ಯೋತ್ಸವ ಆಚರಿಸ­ಲಾ­ಯಿತು. ಆದರೆ, ಎರಡೂ ದೇಶಗಳ ಹುಟ್ಟಿಗೆ ಕಾರಣವಾದ ದಿನ ಮತ್ತೊಂದಿದೆ. ಅದೃಷ್ಟ­ವಶಾತ್‌ 1946ರ ಆಗಸ್ಟ್‌ ತಿಂಗಳಿನಲ್ಲಿ ನಡೆದ ಆ ದಿನದ ಘಟನೆಗಳು ಮತ್ತೊಮ್ಮೆ ಮರುಕಳಿಸು­ವಂತಹ ಸನ್ನಿವೇಶ ಇಲ್ಲ. 

1946ರ ಆಗಸ್ಟ್‌ 16ರಂದು ಮುಸ್ಲಿಂ ಲೀಗ್‌, ‘ನೇರ ಕಾರ್ಯಾಚರಣೆ ದಿನ’  ಆಚರಿಸು­ವಂತೆ ಕರೆ ನೀಡಿತ್ತು. ಅದರ ನಾಯಕ ಮೊಹ­ಮ್ಮದ್‌ ಅಲಿ ಜಿನ್ನಾ ‘ನಾವು ವಿಭಜಿತ ಭಾರತ ಹೊಂದಿರಬೇಕು, ಇಲ್ಲವೇ ವಿನಾಶಗೊಂಡ ಭಾರತ ಹೊಂದಿರಬೇಕು’ ಎಂದು ಘೋಷಿಸಿ­ದ್ದರು. ಆ ದಿನ ಭುಗಿಲೆದ್ದ ಕೋಮುಗಲಭೆ, ಹಿಂಸಾ­ಚಾರವು ಸರಣಿ ಹಿಂಸಾಕೃತ್ಯಗಳಿಗೆ ಕಾರಣ­ವಾಗಿ ಭಾರತ ವಿಭಜನೆಯಾಗದೇ ಇರುವುದು ಅಸಾಧ್ಯ ಎಂಬಂತಹ ವಾತಾವರಣ ಸೃಷ್ಟಿಸಿತು. ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಆರಂಭವಾದ ಹಿಂಸಾಚಾರ ಬಂಗಾಳದ ಹಳ್ಳಿಗಾಡಿಗೆ ವ್ಯಾಪಿ­ಸಿತು. ಆ ನಂತರ ಬಿಹಾರ ಹಾಗೂ ಸಂಯುಕ್ತ ಪ್ರಾಂತ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಅಂತಿಮವಾಗಿ ಪಂಜಾಬ್‌ ಪ್ರಾಂತ್ಯ ಭಯಾನಕ­ವಾದ ಕೋಮುಗಲಭೆಗೆ ಸಾಕ್ಷಿಯಾಯಿತು.

ಹಲವು ಇತಿಹಾಸಕಾರರು (ನಾನೂ ಸೇರಿದಂತೆ) ‘ನೇರ ಕಾರ್ಯಾಚರಣೆ ದಿನ’ಕ್ಕೆ ಕಾರಣವಾದ ಅಂಶಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಬರೆದಿದ್ದಾರೆ. ಇತ್ತೀಚೆಗೆ ಕೆಲ ಐತಿಹಾಸಿಕ ದಾಖಲೆಗಳ ಬಗ್ಗೆ ಕೆಲಸ ಮಾಡುತ್ತಿರುವಾಗ, ಹಿಂಸಾಚಾರ ತಾರಕಕ್ಕೆ ಏರಿದ್ದ ಆ ದಿನ ಕಲ್ಕತ್ತಾದಲ್ಲಿ ನಡೆದ ಘಟನಾ­ವಳಿಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದವರು ದಾಖಲಿ­ಸಿದ್ದ ಕೆಲ ಸ್ಪಷ್ಟ ವಿವರಗಳು ಸಿಕ್ಕವು.

ಮಾನವಶಾಸ್ತ್ರಜ್ಞರಾಗಿದ್ದ ನಿರ್ಮಲ್‌ ಕುಮಾರ್‌ ಬೋಸ್‌ ಆಗ ದೆಹಲಿಯಲ್ಲಿ ನೆಲೆಸಿದ್ದ ತಮ್ಮ ಸ್ನೇಹಿತ ಕೃಷ್ಣಾ  ಕೃಪಲಾನಿ ಅವರಿಗೆ ಬರೆದ ಪತ್ರಗಳಲ್ಲಿ ಆ ದಿನದ ಘಟನೆಗಳ ಪೂರ್ಣ ವಿವರಗಳಿವೆ. ಈ ಪತ್ರವನ್ನು ಆ ಘಟನೆಯಾದ ಎರಡು ವಾರಗಳ ನಂತರ ಅಂದರೆ 1946ರ ಸೆಪ್ಟೆಂಬರ್‌ 2ರಂದು ಬರೆಯಲಾಗಿದೆ.

ಪತ್ರ ಆರಂಭವಾಗುವುದು ಹೀಗೆ: ‘16ನೇ ತಾರೀಖಿನಂದು ಎಲ್ಲರಲ್ಲೂ ಆತಂಕ ಮನೆ­ಮಾಡಿತ್ತು. ಏನಾಗಬಹುದು ಎಂಬುದರ ಅರಿವು ಯಾರಿಗೂ ಇರಲಿಲ್ಲ. ಮುಸ್ಲಿಮರಿಗೆ ಅಹಿಂಸಾ­ವಾದದಲ್ಲಿ ಪೂರ್ಣ ನಂಬಿಕೆ ಇಲ್ಲ ಎಂದು ನಜಿಮುದ್ದೀನ್‌ (ಮುಸ್ಲಿಂ ಲೀಗ್‌ ನಾಯಕ) ನೀಡಿದ ಹೇಳಿಕೆಯನ್ನು ಆಧರಿಸಿ, ಅದೇ ಸಮಯ­ದಲ್ಲಿ ಲೂಟಿ, ಹಿಂಸಾಚಾರಕ್ಕೆ ಪೂರ್ವಸಿದ್ಧತೆ   ನಡೆಯುತ್ತಿದೆ ಎಂದು ನಾವ್ಯಾರೂ ಊಹಿಸಲಿಲ್ಲ. ಏನೇ ಆಗಲಿ, ಎಲ್ಲಿಯೂ ಪೊಲೀಸರು ಕಾಣು­ತ್ತಿರಲಿಲ್ಲ. ಸಂಚಾರ ಪೊಲೀಸರ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಶ್ಯಾಮ್‌ಬಜಾರ್‌ನಲ್ಲಿ ತೊಂದರೆ ಶುರು­ವಾಯಿತು. ಅದಕ್ಕೂ ಮುನ್ನ ಬೇರೆ ಕಡೆ ಹಿಂಸಾ­ಚಾರ ಆರಂಭವಾಗಿತ್ತು. ಎರಡು ಗಂಟೆಯ ಹೊತ್ತಿಗೆ ಕೊಸ್ಸಿಪ್ಪೋರ್‌ ಮೈದಾನದಲ್ಲಿ ಮುಸ್ಲಿ­ಮರ ಬೃಹತ್‌ ಸಮಾವೇಶ ಏರ್ಪಡಿಸಲಾಗಿತ್ತು. 12 ಗಂಟೆಯಿಂದಲೇ ಮುಸ್ಲಿಮರು ಆ ಮೈದಾನದತ್ತ ಮೆರವಣಿಗೆಯಲ್ಲಿ ನಡೆಯ­ತೊಗಿದ್ದರು. ಅವರ ಕೈಯಲ್ಲಿ ಲಾಠಿ ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಜನ ಆತಂಕ­ದಿಂದಲೇ ಗಮನಿಸಿದ್ದರು. ಮೆರವಣಿಗೆಯಲ್ಲಿ ನಡೆಯುತ್ತಿದ್ದವರು ಅಂಗಡಿಗಳನ್ನು ಮುಚ್ಚು­ವಂತೆ ವ್ಯಾಪಾರಿಗಳಿಗೆ ತಾಕೀತು ಮಾಡುತ್ತಿದ್ದರು. ಬಾಗ್‌ಬಜಾರ್‌ ರಸ್ತೆಯಲ್ಲಿ ಬಾಗಿಲು ಮುಚ್ಚುವ ಮುನ್ನವೇ ಕವಿರಾಜೆಯ ಅಂಗಡಿಯನ್ನು ಧ್ವಂಸ ಮಾಡಲಾಯಿತು.

ವೈದ್ಯರೊಬ್ಬರ ಮನೆಯ ಮೇಲೆ ದಾಳಿ ನಡೆಸಲಾಯಿತು. ಉದ್ರಿಕ್ತ ಗುಂಪು ಹೊತ್ತಿ ಉರಿಯುತ್ತಿದ್ದ ವಸ್ತ್ರ, ಕಟ್ಟಿಗೆ ಚೂರುಗಳನ್ನು ಅವರ ಮನೆಯ ಒಡೆದ ಬಾಗಿಲ ಮೂಲಕ ಒಳಗೆ ತಳ್ಳುತ್ತಿತ್ತು.  ನೆರೆಹೊರೆಯ 15 ಜನ ಯುವಕರು ತಾವೂ ಲಾಠಿ ಹಿಡಿದು ಆ ಉದ್ರಿಕ್ತ ಗುಂಪಿನ ಮೇಲೆ ದಾಳಿ ನಡೆಸಿದರು. ಈ ಗುಂಪು ಬಾಗ್‌ಬಜಾರ್‌ ರಸ್ತೆಯಿಂದ ಹಿಮ್ಮೆಟ್ಟಿ­ದರೂ, ದಕ್ಷಿಣ ದಿಕ್ಕಿಗೆ ನಡೆಯಿತು’. ಉತ್ತರ ಕಲ್ಕತ್ತಾದ ಹಲವೆಡೆ ಚೂರಿ ಇರಿತ, ಕೊಲೆ­ಯೊಂದಿಗೆ ಈ ಹಿಂಸಾಚಾರ ಕಲ್ಕತ್ತಾವನ್ನು ಹೇಗೆ ವ್ಯಾಪಿಸಿತು ಎಂಬುದನ್ನು ಬೋಸ್‌ ಅವರ ಈ ಪತ್ರ ವಿವರಿಸುತ್ತದೆ.

ಗಲಭೆಕೋರರು ಚಾಕು, ಕಬ್ಬಿಣದ ರಾಡು, ಕೈಬಾಂಬ್‌ ಇತ್ಯಾದಿ ಅಸ್ತ್ರ­ಗಳನ್ನು ಬಳಸಿದ್ದರು. ‘ಜನ, ನಗರದ ವಿವಿಧ ಭಾಗಗಳಿಂದ ಮನೆಗೆ ಮರಳಿದಾಗ ಹಿಂಸಾ­ಚಾರದ ಹಲವು ಕಥೆಗಳನ್ನು ಹೊತ್ತು ತಂದಿ­ದ್ದರು. ಸುಟ್ಟ ಮನೆಗಳು, ಗಾಯಗೊಂಡ ಮಹಿಳೆ­ಯರು, ಲೂಟಿಯಾದ ಅಂಗಡಿಗಳು... ಇತ್ಯಾದಿ. ಕೆಲ ವದಂತಿಗಳು ಸುಳ್ಳೆಂಬುದು ಕೊನೆಗೆ ತಿಳಿಯಿತು. ಆದರೂ ಜನ ಹಿಂಸಾಚಾರದ ಪ್ರತಿ ಕಥೆಯನ್ನೂ ನಂಬಲು ಉತ್ಸುಕರಾಗಿದ್ದರು’.

ಆಗಸ್ಟ್‌ 17 ಮತ್ತು 18ರಂದು ಕೋಮು­ಗಲಭೆ­ಗಳು ತೀವ್ರಗೊಂಡು ಎಲ್ಲೆಡೆ ವ್ಯಾಪಿಸಿದವು. ‘ಭಯದಿಂದಾಗಿ ಜನ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡಿದ್ದರು. ತಮ್ಮನ್ನು ತಾವು ರಕ್ಷಿಸಿ­ಕೊಳ್ಳುವ ಭರದಲ್ಲಿ ಉಗ್ರವಾಗಿ ಪ್ರತಿಕ್ರಿಯಿ-­ಸಿದರು. ಪೊಲೀಸರ ಸುಳಿವೇ ಇರಲಿಲ್ಲ. ಮುಸ್ಲಿ­ಮರ ವಿನಾಶದಿಂದ (ಅದು ಸಾಧ್ಯ ಹಾಗೂ ಸರಿಯಾದದ್ದು ಎಂಬಂತೆ) ಮಾತ್ರ ತಾವು ಬದುಕುಳಿಯಬಹುದು ಎಂದು ಅವರು ನಂಬಿದ್ದರು’.
ಆಗಸ್ಟ್‌ 19ರಂದು ಸೇನೆಯನ್ನು ಕರೆಯಿಸಲಾ­ಯಿತು. ‘ನಗರ ನಿಧಾನಕ್ಕೆ ತಣ್ಣಗಾಗುತ್ತ ಬಂತು’.

ಈ ಮಾನವಶಾಸ್ತ್ರಜ್ಞರು ನಗರದಲ್ಲಿ ಸುತ್ತು­ಹಾಕಿ ಬಂದಾಗ, ‘ಡಜನ್‌ಗಟ್ಟಲೇ ಹೆಣಗಳು ದಿಕ್ಕಾಪಾಲಾಗಿ ಬಿದ್ದಿದ್ದವು. ಒಂದೆರಡು ದಿನಗಳಾಗಿದ್ದರಿಂದ ಅವು ಉಬ್ಬಿದ್ದವು. ಎಲ್ಲೆಡೆ ದುರ್ನಾತ ಹರಡಿತ್ತು. ಆ ವಾರವಿಡೀ ಕಲ್ಕತ್ತಾದ ಮನೆಗಳ ಛಾವಣಿಗಳ ಮೇಲೆ ರಣಹದ್ದುಗಳು ಓಡಾಡುತ್ತ, ಭೂರಿಭೋಜನ ನಡೆಸಿದವು’.

‘ಮತ್ತೊಂದೆಡೆ ಪರಿಹಾರ ಕಾರ್ಯಾಚರಣೆ ಆರಂಭವಾಗಿತ್ತು. ಹಣ, ಬಟ್ಟೆ, ತರಕಾರಿಗಳು, ಇತರ ಸೇವೆಗಳು ಕಲ್ಕತ್ತಾಕ್ಕೆ ಬಂದವು. ಆದರೂ ಗಾಯ ಮಾಗಿರಲಿಲ್ಲ. ನಿರಾಶ್ರಿತರ ಕೇಂದ್ರಗಳಲ್ಲಿ ಹಿಂದೂ, ಮುಸ್ಲಿಮರನ್ನು ಒಟ್ಟಿಗೆ ಕಾಣುವುದು ಅಸಾಧ್ಯವಾಗಿತ್ತು. ಒಡಕು ಸ್ಪಷ್ಟವಾಗಿ ಕಾಣು­ತ್ತಿತ್ತು’. ಬೋಸ್‌ ಅವರು ಜನರ ಬಳಿ ಮಾತ­ನಾಡಿ­ದಾಗ, ‘ಮುಸ್ಲಿಮರಿಗೆ ಆಶ್ರಯ ಕೊಟ್ಟ ಹಿಂದೂಗಳು, ಹಿಂದೂಗಳಿಗೆ ಆಶ್ರಯ ಕೊಟ್ಟ ಮುಸ್ಲಿಮರ ಹಲವು ಉದಾಹರಣೆಗಳು ಸಿಕ್ಕವು. ಆದರೆ, ಎರಡೂ ಕಡೆ ಭಯ ಹಾಗೂ ಅಪ­ನಂಬಿಕೆಯ  ಛಾಯೆ ದಟ್ಟವಾಗಿ ಕಾಣುತ್ತಿತ್ತು. ಜನ ಒಂದು ಕಡೆಯಿಂದ ಮತ್ತೊಂದೆಡೆ ಸ್ಥಳಾಂತ­ರಗೊಳ್ಳುತ್ತಿದ್ದರು. ಆದರೆ, ಅದು ಅವರ ಸಮಸ್ಯೆಗಳಿಗೆ ಪರಿಹಾರವಾಗಿತ್ತೆ ಎಂಬುದು ದೇವರಿಗೇ ಗೊತ್ತು’.

ವೈಯಕ್ತಿಕ ಟಿಪ್ಪಣಿಯೊಂದಿಗೆ ಬೋಸ್‌ ತಮ್ಮ ಪತ್ರವನ್ನು ಮುಗಿಸುತ್ತಾರೆ. ಅವರಿಗೆ ಹಾಗೂ ಆ ನಗರದ ಎಲ್ಲರಿಗೂ 16/17/18 (1946ರ ಆಗಸ್ಟ್‌)  ಅನುಮಾನದ ಹಾಗೂ ಆತಂಕದ ದಿನಗಳಾಗಿದ್ದವು. ‘ರೋಷೋನ್ಮತ್ತ ಜನರ ಮೇಲೆ ನನ್ನ ಮಾತುಗಳು ಪರಿಣಾಮ ಬೀರುತ್ತಿಲ್ಲ ಎಂಬುದು ನನಗೆ ಮನದಟ್ಟಾಗಿತ್ತು. ನನ್ನ ಇತರ ಸ್ನೇಹಿತರಿಗೂ ಅದೇ ಅನುಭವಗಳಾಗಿವೆ. ಭಾರಿ ಹೊಡೆದಾಟದ ಮಧ್ಯೆಯೇ ಅವರು ಅದನ್ನು ತಪ್ಪಿಸಲು ಕೆಚ್ಚೆದೆಯಿಂದ ಯತ್ನಿಸಿದ್ದರು. ಆದರೂ ಅವರ ಯತ್ನ ಮಹತ್ವದ ಪರಿಣಾಮ ಬೀರಲು ಸಫಲವಾಗಲಿಲ್ಲ. ನಮ್ಮ ವೈಯಕ್ತಿಕ ಅಹಿಂಸಾ­ವಾದ, ಭಾವನೆಗಳಿಂದ ಹುಟ್ಟಿದ ಹಿಂಸಾತ್ಮಕ ಪ್ರವಾಹ ತಡೆಯಲು ವಿಫಲವಾಗಿದೆ ಎಂಬುದು ನನಗೆ ಮನದಟ್ಟಾಯಿತು.

ನನ್ನ ಅಹಿಂಸಾವಾದ,  ಹಿಂದೂಗಳಲ್ಲಿ ಹುಟ್ಟಿದ ಹಿಂಸಾಚಾರವನ್ನು ಮಣಿಸಲು ನನ್ನ ಜೀವವನ್ನೇ ಪಣಕ್ಕಿಡುವಷ್ಟು ತೀವ್ರವಾಗಿದ್ದ ಪಕ್ಷದಲ್ಲಿ ಅದು (ಅಹಿಂಸಾವಾದ) ಪರಿಣಾಮಕಾರಿಯಾಗಿರುತ್ತಿತ್ತೋ ಏನೋ? ಆದರೆ, ನಾನು ಆ ಎತ್ತರಕ್ಕೆ ಬೆಳೆಯಲಿಲ್ಲ. ಅಂತಹ ಅವಕಾಶವೂ ನನಗೆ ದೊರಕಲಿಲ್ಲ. ಆ ಕರಾಳ ರಾತ್ರಿ ಪ್ರಾಣ ತೆಗೆಯುವ ಗುಂಪಿನ ಜತೆ ನಾನು ಹೋಗಿದ್ದರೆ ಬಹುಶಃ ಅಂತಹ ಅವಕಾಶ ದೊರಕುತ್ತಿತ್ತೇನೊ? ಆದರೆ, ನನ್ನೊಳಗಿನ ಹಿಂಜರಿಕೆ ನನ್ನನ್ನು ಕಟ್ಟಿಹಾಕಿತು. ನನ್ನ ಸ್ನೇಹಿತ­ರೊಬ್ಬರು ಅದೇ ರೀತಿ ಮುಸ್ಲಿಮರನ್ನು ರಕ್ಷಿಸಲು ಹೊರಟಿದ್ದರು.  ಆ ಗುಂಪಿನಲ್ಲಿದ್ದ ಎಲ್ಲರನ್ನೂ ತಡೆಯುವ ಮುನ್ನವೇ ಅವರಿಗೆ ಭಾರಿ ಪೆಟ್ಟು ಬಿದ್ದಿತ್ತು. ತಾವೇ ಸತ್ತು ಮುಸ್ಲಿಮರನ್ನು ಸಾವಿನ ದವಡೆಯಿಂದ ರಕ್ಷಿಸಲು ಸಾಧ್ಯವಿತ್ತೇ ಎಂದು ಆ ಸ್ನೇಹಿತರು ತಮ್ಮನ್ನು ತಾವೇ ಕೇಳಿ­ಕೊಳ್ಳುತ್ತಿದ್ದಾರೆ’.

ಬೋಸ್‌ ಅವರ ಪತ್ರದ ಕೊನೆಯ ಸಾಲು­ಗಳು ಹೃದಯಸ್ಪರ್ಶಿಯಾಗಿವೆ. ಅವರು ಹೀಗೆ ಬರೆದಿದ್ದಾರೆ: ‘ನಾನೊಬ್ಬನೇ ನಡೆಯಲು ಸಾಧ್ಯವಿಲ್ಲ ಎಂದು ನನಗೆ ಅನ್ನಿಸುತ್ತಿದೆ. ನಾವೆ­ಲ್ಲರೂ ಜತೆಯಾಗಿ ನಡೆಯಬೇಕು. ಅಂತಹ ತಂಡ ಅಸ್ತಿತ್ವಕ್ಕೆ ಬಂದಲ್ಲಿ ಆಧ್ಯಾತ್ಮಿಕವಾಗಿ ನಾವೆಲ್ಲ ಒಬ್ಬರನ್ನೊಬ್ಬರು ಬೆಂಬಲಿಸುತ್ತ ಅಹಿಂಸಾ­ವಾದವನ್ನು ಸಂಘಟನೆಯ ಮೂಲಕ ಬಲಪಡಿಸಬಹುದು’.

ಕಲ್ಕತ್ತಾದಲ್ಲಿ ಹಿಂಸೆಯನ್ನು ಮುಸ್ಲಿಂ ಲೀಗ್‌ ಆರಂಭಿಸಿದ್ದರೂ ನಗರದ ಮುಸ್ಲಿಮರೇ  ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಅವರಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು. ಹಿಂದೂಗಳಿಗಿಂತ ಈ ಸಮುದಾಯದ ಹೆಚ್ಚಿನ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು. ಇದಕ್ಕೆ ಪ್ರತೀಕಾರವಾಗಿ ಮುಸ್ಲಿಮರೇ ಬಹುಸಂಖ್ಯಾತ­ರಾಗಿದ್ದ ಪೂರ್ವ ಬಂಗಾಳದ ನೌಕಾಲಿ ಜಿಲ್ಲೆ­ಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತು. ಅಲ್ಲಿ ನೂರಾರು ಹಿಂದೂಗಳು ಸತ್ತರು. ಸಾವಿರಾರು ಜನ ಮನೆ ಕಳೆದುಕೊಂಡು ನಿರ್ಗತಿಕರಾದರು.

ಕೋಮು ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ 1946ರ ನವೆಂಬರ್‌ನಲ್ಲಿ ಗಾಂಧೀಜಿ ನೌಕಾಲಿಗೆ ಭೇಟಿ ನೀಡಿದರು. ಅವರ ಜತೆ ಆಗ ನಿರ್ಮಲ್‌ ಕುಮಾರ್‌ ಬೋಸ್‌ ಇದ್ದರು. ಈ ಮಾನವ­ಶಾಸ್ತ್ರಜ್ಞ , ಗಾಂಧಿ ಹಾಗೂ ಅವರ ಸಿದ್ಧಾಂತ­ದೆಡೆ ದೀರ್ಘಕಾಲದಿಂದ ಆಸಕ್ತರಾಗಿದ್ದರು. ಗಾಂಧಿ ಕರೆಯಂತೆ 1920ರಲ್ಲಿ ಓದಿಗೆ ತಿಲಾಂಜಲಿ ಕೊಟ್ಟು ಚಳವಳಿಗೆ ಧುಮುಕಿದ್ದರು. ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿದ್ದರು.  ನಂತರದ ದಿನಗಳಲ್ಲಿ ಮಹಾತ್ಮ ಅವರ ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಿದ ಅವರು ‘ಸೆಲೆಕ್ಷನ್ಸ್‌ ಫ್ರಮ್‌ ಗಾಂಧಿ’ ಹಾಗೂ ‘ಸ್ಟಡೀಸ್‌ ಇನ್‌ ಗಾಂಧಿಯಿಸಂ’ ಎಂಬ ಎರಡು ಮಹತ್ವದ ಪುಸ್ತಕಗಳನ್ನು ಬರೆದರು.

ಎರಡು ಕಾರಣಗಳಿಗಾಗಿ ಗಾಂಧಿ ತಮ್ಮ ಜತೆ ಬರುವಂತೆ ನಿರ್ಮಲ್‌ ಬೋಸ್‌ಗೆ ಕೇಳಿ­ಕೊಂಡಿದ್ದರು. ಗಾಂಧಿ ವಿಚಾರಧಾರೆ ಹಾಗೂ ಅವರ ಕಾರ್ಯಶೈಲಿಯನ್ನು ಬೋಸ್‌ ಅರಿತಿ­ದ್ದರು. ಬಂಗಾಳಿ ಮಾತನಾಡುತ್ತಿದ್ದರಿಂದ ಗಾಂಧಿ ಅವರ ಭಾಷಣವನ್ನು ಅನುವಾದ ಮಾಡುವ ಸಾಮರ್ಥ್ಯ ಹೊಂದಿದ್ದರು. 

ನೌಕಾಲಿ ಹಾಗೂ ಹಿಂದೂಗಳ ಕೈಯಲ್ಲಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ನಷ್ಟ ಅನುಭವಿಸಿದ್ದ ಬಿಹಾರಗಳಲ್ಲಿ ಹಲವು ತಿಂಗಳು ಕಾಲ ಬೋಸ್‌, ಗಾಂಧಿಯವ­ರೊಂದಿಗೆ ಪ್ರವಾಸ ಮಾಡಿದರು.  1953ರಲ್ಲಿ ಮುದ್ರಣಗೊಂಡ, ‘ಮೈ ಡೇಸ್‌ ವಿತ್‌ ಗಾಂಧಿ’ ಪುಸ್ತಕದಲ್ಲಿ ಆ ಅನುಭವಗಳನ್ನು ಅವರು ವಿವರಿಸಿದ್ದಾರೆ. ಗಾಂಧಿ ಅವರ ಬಗ್ಗೆ ಅವರಿಗಿದ್ದ ಮೆಚ್ಚುಗೆ ಈ ಪುಸ್ತಕದಲ್ಲಿ ವ್ಯಕ್ತವಾಗುತ್ತದೆ. ಆದರೆ, ಅದು ಅಂಧಾಭಿಮಾನವಲ್ಲ. ಗಾಂಧಿ ಅವರ ಬ್ರಹ್ಮಚರ್ಯದ ಪ್ರಯೋಗಗಳನ್ನು ಬೋಸ್‌ ಬಲವಾಗಿ ವಿರೋಧಿಸಿದ್ದರು. ಆ ಪ್ರಯೋ­ಗದಲ್ಲಿ ಭಾಗಿಯಾಗುವಂತೆ ಕೇಳಿದ ಯುವತಿಯರಿಗೆ ಇದರಿಂದ ಅನ್ಯಾಯ­ವಾಗುತ್ತದೆ ಎಂದು ಅವರು ಭಾವಿಸಿದ್ದರು.

‘ಮೈ ಡೇಸ್‌ ವಿತ್‌ ಗಾಂಧಿ’ ಪುಸ್ತಕ ಇಂದಿಗೂ ಲಭ್ಯವಿದೆ. ಆದರೆ, ನಾನು ಇಲ್ಲಿ ಉದ್ಧರಿಸಿರುವ ಬೋಸ್‌ ಬರೆದ ಪತ್ರಗಳು ಈ ಹಿಂದೆ ಯಾವತ್ತೂ ಸಾರ್ವಜನಿಕ ಚರ್ಚೆಗೆ ಒಳಪಟ್ಟಿಲ್ಲ. ‘ನೇರ ಕಾರ್ಯಾಚರಣೆ ದಿನ’ದ ಪ್ರತ್ಯಕ್ಷದರ್ಶಿ ಅನುಭವ ಹಂಚಿಕೊಂಡ ಕಾರಣಕ್ಕಾಗಿ ಮಾತ್ರ ಈ ಪತ್ರ ಅಮೂಲ್ಯವಲ್ಲ.

1946ರ ಆಗಸ್ಟ್‌ನಲ್ಲಿ ಇದ್ದಂತೆ 2014ರ ಆಗಸ್ಟ್‌ನಲ್ಲೂ ಭಾರತದಲ್ಲಿ ಕೋಮು ಸುರಕ್ಷತಾ ಭಾವ ಕಾಣುತ್ತಿಲ್ಲ. ಇತ್ತೀಚೆಗೆ ಉತ್ತರಪ್ರದೇಶದ ಕೆಲವೆಡೆ ಕೋಮುಹಿಂಸಾಚಾರ ಉಲ್ಬಣ ಗೊಂಡಿತ್ತು.  ಬಂಗಾಳ ಹಾಗೂ ಬಿಹಾರದಲ್ಲಿ 1940­ರಲ್ಲಿ ಆದಂತೆ ಹಿಂದೂ ಮತ್ತು ಮುಸ್ಲಿ­ಮರಲ್ಲಿ ಭಯ ಹಾಗೂ ಅಪನಂಬಿಕೆಯ ಬೀಜ ಅಲ್ಲಿ ಮೊಳಕೆಯೊಡೆದಿದೆ. ಎರಡೂ ಸಮು­ದಾಯದವರು ಸ್ವಯಂರಕ್ಷಣೆಯ ಭರ­ದಲ್ಲಿ ಹಿಂಸಾತ್ಮಕವಾಗಿ ಪ್ರತಿಕ್ರಿಯಿ­ಸುತ್ತಿದ್ದಾರೆ.

ತಮ್ಮ ಸುತ್ತಲೂ ನಡೆಯುತ್ತಿದ್ದ ಹಿಂಸಾಚಾರ­ಗಳಿಗೆ ಪ್ರತಿಕ್ರಿಯಿಸಿದ ನಿರ್ಮಲ್‌ ಬೋಸ್‌ ತಮ್ಮ ಸ್ನೇಹಿತರಿಗೆ, ‘ನನಗೆ ಎಲ್ಲಿ ಒಬ್ಬಂಟಿಯಾಗಿ ನಡೆಯಲು ಭಯವಾಗುತ್ತದೋ ಅಲ್ಲಿ ನಾವೆಲ್ಲ ಜತೆಯಾಗಿ ನಡೆಯಬೇಕು’ ಎಂದು ಹೇಳಿದ್ದರು. ಕೆಲವೇ ದಿನಗಳಲ್ಲಿ ಗಾಂಧಿ ಕಲ್ಕತ್ತಾಗೆ ಬಂದರು. ಅವರು ಒಂಟಿಯಾಗಿ ನಡೆಯಲು ಸಿದ್ಧರಾ­ದವರು. ಬೋಸ್‌, ಗಾಂಧಿ ಜತೆ ಸೇರಿಕೊಂಡರು. ನೌಕಾಲಿ, ಬಿಹಾರ, ಕಲ್ಕತ್ತಾ ಮತ್ತು ದೆಹಲಿಗಳಲ್ಲಿ ಗಾಂಧಿ ತಮ್ಮ ವ್ಯಕ್ತಿತ್ವದ ಪ್ರಭಾವ ಹಾಗೂ ತಮ್ಮ ಅನುಯಾಯಿಗಳ ಮೂಲಕ ಅಹಿಂಸಾವಾದವನ್ನು ಪರಿಣಾಮಕಾರಿ­ಯಾಗಿ­ಸಲು ಹೊರಟರು.

ಭಾರತದ ರಾಜಕಾರಣಿಗಳಿಗೆ ಈಗ ಒಬ್ಬರೇ ನಡೆಯುವ ನೈತಿಕ ಸ್ಥೈರ್ಯವಿಲ್ಲ. ಆದರೆ, ಜತೆಯಾಗಿ ಅವರು ಈ ಧೈರ್ಯ ತೋರುತ್ತಾರೆ ಅಂದುಕೊಂಡಲ್ಲಿ ಅತಿಯಾದ ಆಶಾವಾದ ತೋರಿದಂತಾಗುತ್ತದೆಯೇ? ಕಾಂಗ್ರೆಸ್‌ ಅಧ್ಯಕ್ಷರೂ ಹಾಗೂ ಇತರ ಪಕ್ಷಗಳ ನಾಯ­ಕರನ್ನು ಒಳಗೊಂಡಂತಹ ಪ್ರಧಾನಿ ನೇತೃತ್ವದ ಸರ್ವಪಕ್ಷ ನಿಯೋಗ ಈಗ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದಲ್ಲಿ ಆ ಒಡಕಿನ ರಾಜ್ಯದಲ್ಲಿ ಸಾಮಾಜಿಕ ಶಾಂತಿ ಮರುಕಳಿಸೀತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT