ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನದಿಂದ ತುಂಬಿಸಲಾಗದ ಕನ್ನಡದ ‘ಕಣಜ’

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ವರ್ಷದ ಬಜೆಟ್ ಒಟ್ಟು 303 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಇದರಲ್ಲಿ ಎರಡು ಕೋಟಿ ರೂಪಾಯಿಗಳು ಕನ್ನಡದ ಆನ್‌ಲೈನ್ ವಿಶ್ವಕೋಶ ‘ಕಣಜ’ದ ಅಭಿವೃದ್ಧಿಗಾಗಿ ದೊರೆತಿದೆ. ಮಾರ್ಚ್ 13ರಂದು ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳು ಈ ಘೋಷಣೆಯನ್ನು ಮಾಡುವ ಹೊತ್ತಿಗೆ ‘ಕಣಜ’ (kanaja.in) ತಾಣದ ಯಾವ ಕೊಂಡಿಗಳನ್ನು ಕ್ಲಿಕ್ಕಿಸಿದರೂ ಅದು ‘ಕಣಜ’ದ ಶೀರ್ಷಿಕೆಯನ್ನು ಹೊತ್ತಿರುವ ಖಾಲಿ ಪುಟಗಳಿಗೆ ಕೊಂಡೊಯ್ಯುತ್ತಿತ್ತು. ಆ ಸ್ಥಿತಿ ಭಾನುವಾರ (ಮಾರ್ಚ್ 15) ರಾತ್ರಿಯ ತನಕವೂ ಬದಲಾಗಿರಲಿಲ್ಲ.

ಖಾಲಿಪುಟಗಳನ್ನು ತೋರಿಸುತ್ತಿರುವ ‘ಕಣಜ’ದ ಜೀರ್ಣೋದ್ಧಾರ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಪಂಪನ ಕುರಿತ ಅಧ್ಯಯನದಿಂದ ಆರಂಭಿಸಿ ಗಡಿ ಪ್ರದೇಶದಲ್ಲಿ ಅಭಿವೃದ್ಧಿಯ ತನಕದ ಅನೇಕಾನೇಕ ಸಂಗತಿಗಳ ಮಧ್ಯೆ ‘ಕಣಜ’ಕ್ಕೆ ದೊರೆತಿರುವ ಎರಡು ಕೋಟಿ ರೂಪಾಯಿಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದಿಲ್ಲಿ ಬಹುಮುಖ್ಯವಾದ ಪ್ರಶ್ನೆ.

ಕನ್ನಡದಲ್ಲಿಯೇ ಪ್ರಪಂಚವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗಬೇಕು ಅದಕ್ಕೆ ಕನ್ನಡದ್ದೇ ಆದ ಚಲನಶೀಲವಾದ ವಿಶ್ವಕೋಶ ಬೇಕು ಎಂಬ ಜ್ಞಾನ ಆಯೋಗದ ಸಲಹೆಯ ಮೇರೆಗೆ ಆರು ವರ್ಷಗಳ ಹಿಂದೆ ‘ಕಣಜ’ ಆನ್‌ಲೈನ್ ವಿಶ್ವಕೋಶವನ್ನು ಆರಂಭಿಸಲಾಯಿತು. ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ–ಬಿ) ಇದನ್ನು ನಿರ್ವಹಿಸುವ ಹೊಣೆ ಹೊತ್ತುಕೊಂಡಿತು. ಮಾಹಿತಿ ತಂತ್ರಜ್ಞಾನದ ಕುರಿತ ಸಂಶೋಧನೆಯ ಅತ್ಯುನ್ನತ ಸಂಸ್ಥೆಯೊಂದು ಈ ಹೊಣೆಯನ್ನು ಹೊತ್ತಿದ್ದರಿಂದ ಇದು ಮತ್ತೊಂದು ಸರ್ಕಾರಿ ಯೋಜನೆಯಾಗುವುದಿಲ್ಲ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಆರಂಭದ ಒಂದು ವರ್ಷ ಆನೇಕ ಶೀರ್ಷಿಕೆಗಳ ಅಡಿಯಲ್ಲಿ ಖಾಲಿ ಪುಟಗಳಿದ್ದವು. ಇದು ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ (http://goo.gl/2uihgF) ‘ಕಣಜ’ವನ್ನು ತುಂಬುವ ಕೆಲಸ ಆರಂಭವಾಯಿತು.

ಜ್ಞಾನಪೀಠ ಪುರಸ್ಕೃತರ ಕೃತಿಗಳು, ವಿವಿಧ ವಿಶ್ವವಿದ್ಯಾಲಯಗಳ ಪ್ರಕಟಣೆಗಳನ್ನು ಬಳಸಿಕೊಂಡು ಇದಕ್ಕೆ ತುಂಬಿಸಲಾದ ಮಾಹಿತಿಯ ಪ್ರಮಾಣ ದೊಡ್ಡದೇ. ಇದರ ನಿರ್ವಹಣೆಯ ಹೊಣೆ ಹೊತ್ತಿದ್ದ ಐಐಐಟಿ–ಬಿಯ ಪ್ರೊಫೆಸರ್‌ಗಳು ಕನ್ನಡದ್ದೇ ಆದ ಒಂದು ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುವ ಬಗ್ಗೆಯೂ ಹೇಳುತ್ತಿದ್ದರು. ಎಷ್ಟರ ಮಟ್ಟಿಗೆಂದರೆ ಸದ್ಯ ಗೂಗಲ್ ಕೇವಲ ಕನ್ನಡ ಪದಗಳನ್ನು ಮಾತ್ರ ಹುಡುಕಿ ಕೊಡುತ್ತಿದೆ. ನಾವು ಅಭಿವೃದ್ಧಿಪಡಿಸುವ ಸರ್ಚ್ ಎಂಜಿನ್ ನಿರ್ದಿಷ್ಟ ಪದದ ಅರ್ಥವನ್ನು ಗ್ರಹಿಸಿ ಫಲಿತಾಂಶಗಳನ್ನು ಒದಗಿಸುವಂಥ ವ್ಯವಸ್ಥೆ ಮಾಡುತ್ತದೆ ಎಂದೆಲ್ಲಾ ಹೇಳಿದ್ದರು. ಈ ಎಲ್ಲಾ ದೊಡ್ಡ ಘೋಷಣೆಗಳಿಗೆ ಆರು ವರ್ಷ ತುಂಬುವ ಹೊತ್ತಿಗೆ ‘ಕಣಜ’ ಮತ್ತೆ ಖಾಲಿ ಪುಟಗಳನ್ನು ತೋರಿಸುತ್ತಿದೆ.

ಸರ್ಕಾರದಿಂದ ಪ್ರಾಯೋಜಿತವಾದ ವಿಶ್ವಕೋಶ, ನಿಘಂಟು ಮುಂತಾದ ಯೋಜನೆಗಳು ಹೀಗೆ ಅಪೂರ್ಣವಾಗಿ ಉಳಿಯುವುದು ಕನ್ನಡದ ಮಟ್ಟಿಗೆ ಹೊಸತೇನೂ ಅಲ್ಲ. ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ ಯೋಜನೆಯಲ್ಲಿ ಮೊದಲ ಸಂಪುಟ ಪ್ರಕಟವಾಗಿದ್ದು 1969ರಲ್ಲಿ. ಈ ಸರಣಿಯಲ್ಲಿ ಬರಬೇಕಾಗಿದ್ದ ಎಲ್ಲಾ 14 ಸಂಪುಟಗಳು ಪ್ರಕಟವಾಗುವುದಕ್ಕೆ 35 ವರ್ಷಗಳೇ ಬೇಕಾದವು. ವಿಷಯ ವಿಶ್ವಕೋಶ ಯೋಜನೆ ತಾರ್ಕಿಕ ಅಂತ್ಯವನ್ನು ಇನ್ನೂ ತಲುಪಿಯೇ ಇಲ್ಲ. ಈ ಮಧ್ಯೆ ಕನ್ನಡ ವಿಶ್ವವಿದ್ಯಾಲಯ ಹೊರತಂದ ತಥಾಕಥಿತ ವಿಷಯ ವಿಶ್ವಕೋಶಗಳು ಪರಿಷ್ಕರಣೆಯ ಭಾಗ್ಯವನ್ನು ಕಾಣಲೇ ಇಲ್ಲ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯ ತಾನು ಪ್ರಕಟಿಸಿದ ವಿಶ್ವಕೋಶದ ಎಲ್ಲಾ ಸಂಪುಟಗಳಲ್ಲಿದ್ದ ಲೇಖನಗಳನ್ನು ‘ಕ್ರಿಯೇಟಿವ್ ಕಾಮನ್ಸ್’ ಮುಕ್ತ ಪರವಾನಿಗೆಯ ಅಡಿಯಲ್ಲಿ ಬಿಡುಗಡೆ ಮಾಡಿದ್ದೇ ದೊಡ್ಡ ಸಾಧನೆ.

ವಿಶ್ವಕೋಶ ಯೋಜನೆಗಳ ವೈಫಲ್ಯದ ಇತಿಹಾಸದ ಅರಿವಿದ್ದ ಎಲ್ಲರೂ ಕಣಜ ಯೋಜನೆ ಘೋಷಣೆಯಾದಾಗ ಸಂತೋಷಪಟ್ಟಿದ್ದರು. ಇದಕ್ಕೆ ಮುಖ್ಯ ಕಾರಣ ಈ ವಿಶ್ವಕೋಶ ಆನ್‌ಲೈನ್ ಸ್ವರೂಪದಲ್ಲಿ ಇದ್ದದ್ದು. ಕನ್ನಡದ ಹೊಸ ಕಾಲದ ಸವಾಲುಗಳಿಗೆ ಒಂದು ಉತ್ತರವಾಗಬಹುದಾದು ಎಂಬುದು ಅವರ ಭಾವನೆಯಾಗಿತ್ತು. ಐಐಐಟಿ–ಬಿ ಇದನ್ನು ವಿಕಿಪೀಡಿಯಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಹೊರಟಿತು. ಅಂದರೆ ವಿಶ್ವಕೋಶಕ್ಕೆ ಬೇಕಿರುವ ಎಲ್ಲಾ ಹೂರಣವನ್ನೂ ಆಸಕ್ತ ಸಾರ್ವಜನಿಕರೇ ತುಂಬಿಸುವ ಮಾದರಿ. ಆದರೆ ಈ ಮಾದರಿಯಲ್ಲಿ ಆ ಹೊತ್ತಿಗಾಗಲೇ ಕನ್ನಡ ವಿಕಿಪೀಡಿಯಾ ಕಾರ್ಯಾರಂಭ ಮಾಡಿತ್ತು. ಸರ್ಕಾರದ ನೆರವಿನಿಂದ ವಿಶ್ವಕೋಶವನ್ನು ರೂಪಿಸುವಾಗ ಈ ಮಾದರಿ ಸರಿಯಲ್ಲ. ಇದರಲ್ಲಿರುವ ಮಾಹಿತಿಯ ಅಧಿಕೃತತೆಯನ್ನು ಖಾತರಿ ಪಡಿಸುವುದಕ್ಕಾಗಿ ಅದು ಸಂಪಾದಿತ ವಿಶ್ವಕೋಶವಾಗುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಯಿತು.

ಐಐಐಟಿ–ಬಿಗೆ ಈ ಯೋಜನೆಯಲ್ಲಿ ಇದ್ದದ್ದು ಒಂದು ಅಕಡೆಮಿಕ್ ಆಸಕ್ತಿ ಮಾತ್ರ. ಭಾರತೀಯ ಭಾಷೆಗಳಿಗೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ ಅನೇಕಾನೇಕ ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳಲ್ಲಿ ಆದಂತೆಯೇ ಇಲ್ಲಿಯೂ ಆಯಿತು ಎನಿಸುತ್ತದೆ. ತಂತ್ರಜ್ಞಾನದ ಕುರಿತು ಸಂಸ್ಥೆಯಲ್ಲಿರುವ ವಿದ್ವಾಂಸರಿಗೆ ಬಹಳಷ್ಟು ತಿಳಿದಿತ್ತು. ಆದರೆ ಅದನ್ನು ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಬಳಸಿಕೊಳ್ಳುವ ನಿರ್ಧಾರ ಕೈಗೊಳ್ಳುವ ಯಾರೂ ಇರಲಿಲ್ಲ. ‘ಕಣಜ’ ಯೋಜನೆಯ ಸಮನ್ವಯಕಾರರಾಗಿ ನೇಮಕಗೊಂಡವರಲ್ಲಿ ಒಬ್ಬರು ಮಾತ್ರ ಇಂಥದ್ದೊಂದು ಪ್ರಯತ್ನವನ್ನು ನಡೆಸಿದರು. ಅದರ ಫಲವಾಗಿ ಜ್ಞಾನಪೀಠ ಪುರಸ್ಕೃತಕ ಕೃತಿಗಳೂ ಸೇರಿದಂತೆ ಹಲವು ಪ್ರಮುಖ ಕೃತಿಗಳು ‘ಕಣಜ’ವನ್ನು ತುಂಬಿಕೊಂಡವು. ಅವರು ಅಲ್ಲಿಂದ ನಿರ್ಗಮಿಸುವುದರೊಂದಿಗೆ ‘ಕಣಜ’ವನ್ನು ತುಂಬಿಸುವವರೂ ಇಲ್ಲವಾದರು.

ಈಗ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಆನ್‌ಲೈನ್ ವಿಶ್ವಕೋಶದ ಜೀರ್ಣೋದ್ಧಾರ ಕ್ರಿಯೆಗೆ ಮುಂದಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಐಐಐಟಿ–ಬಿ ವಿಶ್ವಕೋಶವನ್ನು ಕನ್ನಡ ಸಂಸ್ಕೃತಿ ಇಲಾಖೆಗೆ ವಹಿಸಿಕೊಡುತ್ತದೆ. ಆಮೇಲೆ ಅದರ ನಿರ್ವಹಣೆಗೆ ಸರ್ಕಾರ ಒಂದು ಸಮಿತಿ ರಚಿಸಿ ಮುಂದುವರೆಯುತ್ತದೆ. ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಿಂದ ಆರಂಭಿಸಿ ‘ಕಣಜ’ದ ತನಕದ ಯೋಜನೆಯಲ್ಲಿ ಆಗಿರುವ ತಪ್ಪು ಒಂದೇ. ಇದೊಂದು ನಿರಂತರವಾಗಿ ಸಾಗಬೇಕಾದ ಕೆಲಸ ಎಂದು ಸರ್ಕಾರ ಭಾವಿಸಿಯೇ ಇಲ್ಲ. ಮುದ್ರಿತ ಆವೃತ್ತಿಗಳಲ್ಲಾದರೆ ಪರಿಷ್ಕರಣೆ ಮತ್ತು ಮರುಮುದ್ರಣದ ಕೆಲಸವಿರುತ್ತದೆ. ಆನ್‌ಲೈನ್‌ನಲ್ಲಿ ಮರುಮುದ್ರಣದ ಕೆಲಸವಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ.

ಕನ್ನಡದ ಆನ್‌ಲೈನ್ ವಿಶ್ವಕೋಶ ಎಂಬುದು ಅಗತ್ಯವಿರುವವರಿಗೆ ಕನ್ನಡದಲ್ಲೇ ಮಾಹಿತಿಯನ್ನು ಒದಗಿಸುವ ಒಂದು ಸಾಮಾನ್ಯ ಜಾಲತಾಣ ಮಾತ್ರ ಅಲ್ಲ. ಇದು ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳಿಗೆ ಅಗತ್ಯವಾಗಿ ಬೇಕಿರುವ ಒಂದು ಮೂಲಸೌಕರ್ಯ ಎಂಬುದನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕಾಗಿದೆ. ಇಂಥದ್ದೊಂದು ಮುನ್ನೋಟವಿರದೇ ಹೋದರೆ ಏನಾಗುತ್ತದೆ ಎಂಬುದಕ್ಕೆ ಕಳೆದ ಐದು ವರ್ಷಗಳ ಅನುಭವವೇ ಉತ್ತರ ಹೇಳುತ್ತಿದೆ.

ಇಂಗ್ಲಿಷ್ ಮತ್ತು ಫ್ರೆಂಚ್ ‌ಭಾಷೆಗಳ ಮಧ್ಯೆ ಯಂತ್ರಾನುವಾದ ಯಶಸ್ವಿಯಾಗುವುದಕ್ಕೆ ಸಹಕರಿಸಿದ್ದು ಕೆನಡಾದ ಸಂಸತ್ತಿನಲ್ಲಿ ನಡೆದ ಚರ್ಚೆಗಳು. ಯಂತ್ರಾನುವಾದದ ತಂತ್ರಜ್ಞಾನಕ್ಕೂ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೂ ಏನು ಸಂಬಂಧ ಎಂದು ಆಶ್ಚರ್ಯವಾಗುತ್ತಿದೆಯೇ? ಇಲ್ಲಿ ರಾಜಕಾರಣವೇನೂ ಮುಖ್ಯಪಾತ್ರವಹಿಸಲಿಲ್ಲ. ಕೆನಡಾ ಸಂಸತ್ತಿನಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನೂ ಇಂಗ್ಲಿಷ್ ಮತ್ತು ಫ್ರೆಂಚ್‌ ಭಾಷೆಗಳೆರಡರಲ್ಲೂ ದಾಖಲಿಸಲಾಗುತ್ತದೆ. ಇದು ಯಂತ್ರಾನುವಾದ ಯೋಜನೆಗೆ ಬೇಕಿರುವ ಮಾದರಿ ಪದ ಸಂಚಯವನ್ನು ಒದಗಿಸಿಕೊಟ್ಟಿತು. ಕನ್ನಡಕ್ಕೆ ಒಂದು ಪದಪರೀಕ್ಷಕ, ವ್ಯಾಕರಣ ಪರೀಕ್ಷಕವನ್ನು ರೂಪಿಸುವುದಕ್ಕೆ ಬೇಕಿರುವ ಪದಸಂಚಯ ಮತ್ತು ವಾಕ್ಯ ಸಂಚಯಗಳೇ ಇಲ್ಲ. ‘ಕಣಜ’ದಂಥ ಯೋಜನೆಗಳು ಇದನ್ನು ರೂಪಿಸುವುದಕ್ಕೆ ಸಹಕಾರಿ. ಕನ್ನಡದ ಪ್ರಮುಖ ಕೃತಿಗಳೆಲ್ಲಾ ಹೀಗೆ ಒಂದೆಡೆ ಡಿಜಿಟೈಜ್ ಆಗುವ ಕ್ರಿಯೆಯಲ್ಲಿಯೇ ಒಂದು ಮೂಲಸೌಕರ್ಯ ಸೃಷ್ಟಿಯಾಗುತ್ತದೆ. ಈ ವಿಶ್ವಕೋಶ ನಿರಂತರವಾಗಿ ಪರಿಷ್ಕರಣೆಗೆ ಒಳಗಾಗುತ್ತಾ ಇದ್ದರೆ ಕನ್ನಡದ ಜ್ಞಾನಕೋಶವೂ ವಿಸ್ತಾರವಾಗುತ್ತಾ ಸಾಗುತ್ತದೆ.

ಬಜೆಟ್‌ನಲ್ಲಿ ಒದಗಿಸಿರುವ ಎರಡು ಕೋಟಿ ರೂಪಾಯಿಗಳೆಲ್ಲಿ ಇದೆಲ್ಲಾ ಸಂಭವಿಸುವುದಿಲ್ಲ. ಇದಕ್ಕೆ ಬೇಕಿರುವುದು ಬಜೆಟ್‌ನಲ್ಲಿ ಒದಗಿಸಲಾಗಿರುವ ಹಣವೂ ಅಲ್ಲ. ಬಜೆಟ್‌ನಲ್ಲಿ ಘೋಷಣೆಯಾಗುವ ಮೊತ್ತಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡದ ಸವಾಲುಗಳಿಗೆ ಉತ್ತರ ದೊರೆಯಿತು ಎಂದು ಸಮಾಧಾನ ಪಟ್ಟುಕೊಳ್ಳುವುದರಲ್ಲಿಯೇ ಎಲ್ಲಾ ಸಮಸ್ಯೆಗಳೂ ಅಡಗಿವೆ. ಕಣಜದಂಥ ಯೋಜನೆಗಳಿಗೆ ಅಗತ್ಯವಾಗಿ ಬೇಕಿರುವುದು ಬೌದ್ಧಿಕ ಸಂಪನ್ಮೂಲ. ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಆರಂಭಿಸಿ ಬೌದ್ಧಿಕ ನಾಯಕತ್ವ ಬೇಕಿರುವ ಎಲ್ಲಾ ಸಂಸ್ಥೆಗಳಿಗೂ ನಡೆಯುವ ನೇಮಕಾತಿಗಳಲ್ಲಿ ಬಳಕೆಯಾಗುತ್ತಿರುವ ಮಾನದಂಡಗಳನ್ನು ಪ್ರಶ್ನಿಸದೇ ಹೋದರೆ ಕನ್ನಡದ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳೇ ಗೋಚರಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT