ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸುಸ್ ಝೆನ್‌ ಫೋನ್‌ 5: ಹೀಗೊಂದು ಸ್ಮಾರ್ಟ್‌ಫೋನ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಸುಮಾರು ₹ 8 ರಿಂದ 15 ಸಾವಿರ ಬೆಲೆಯ ವ್ಯಾಪ್ತಿಯಲ್ಲಿ ಹಲವು ಸ್ಮಾರ್ಟ್‌ ಫೋನ್‌ಗಳು ಈಗ ದೊರೆಯುತ್ತಿವೆ. ಮೋಟೊ ಜಿ2, ಕ್ಸೋಲೋ, ಲೆನೋವೋ, ಶಿಯಾಮಿ, ಆಸುಸ್ ಇತ್ಯಾದಿಗಳು ಈ ಪಟ್ಟಿಯಲ್ಲಿ ಬರುತ್ತವೆ. ಪ್ರತಿಯೊಂದು ಫೋನನ್ನೂ ಬಳಸಿಯೇ ನೋಡಿ ಅದರ ಹಣೆಬರಹ ತೀರ್ಮಾನ ಮಾಡಬೇಕಾಗುತ್ತದೆ. ಲ್ಯಾಪ್‌ಟಾಪ್ ಕ್ಷೇತ್ರದಲ್ಲಿ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ನೀಡಿ ಮಾರುಕಟ್ಟೆ ಪ್ರವೇಶಿಸಿ ನಿಧಾನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿರುವ ಕಂಪೆನಿ ಆಸುಸ್. ಅದು ಸ್ಮಾರ್ಟ್‌ಫೋನ್‌ಗಳನ್ನೂ ತಯಾರಿಸಲು ಪ್ರಾರಂಭಿಸಿದೆ. ಅದರ ಝೆನ್‌ ಫೋನ್‌ ಶ್ರೇಣಿಯಲ್ಲಿ ಹಲವು ಫೋನ್‌ಗಳಿವೆ. ಆಸುಸ್ ಝೆನ್‌ ಫೋನ್‌ 5 (Asus Zenfone 5) ಈ ಸಲದ ನಮ್ಮ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
ಇಂಟೆಲ್ ಆಟಮ್ ಪ್ರೊಸೆಸರ್ (2X2 : Intel® Atom™ Multi-Core Z2580 Processor 2.0 GHz), 2 ಗಿಗಾಬೈಟ್ ಪ್ರಾಥಮಿಕ ಮತ್ತು 8, 16 ಅಥವಾ 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಂತರಜಾಲದಲ್ಲಿ 5 ಗಿಗಾಬೈಟ್ ಸಂಗ್ರಹ, 64 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯ, 1280x720 ಪಿಕ್ಸೆಲ್ ರೆಸೊಲೂಶನ್ನ 5 ಇಂಚು ಗಾತ್ರದ ಐಪಿಎಸ್ ಪರದೆ, ಗೊರಿಲ್ಲ ಗಾಜು, 8 ಮೆಗಾಪಿಕ್ಸೆಲ್‌ನ ಆಟೊಫೋಕಸ್ ಇರುವ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಎಲ್ಇಡಿ ಫ್ಲಾಶ್, 2ಜಿ ಮತ್ತು 3ಜಿ ಸೌಲಭ್ಯದ ಎರಡು ಮೈಕ್ರೋಸಿಮ್, ಓಟಿಜಿ, 148.2 x 72.8 x 10.34 ಮಿ.ಮೀ. ಗಾತ್ರ, 145 ಗ್ರಾಂ ತೂಕ, 2110 mAh ಶಕ್ತಿಯ ಬ್ಯಾಟರಿ, ಆಂಡ್ರಾಯಿಡ್ 4.3, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹10,000.

ಈ ಫೋನ್ ಇತರೆ ಸ್ಮಾರ್ಟ್‌ ಫೋನ್‌ಗಳಿಗಿಂತ ಒಂದು ವಿಷಯದಲ್ಲಿ ತುಂಬ ಭಿನ್ನ. ಇದು ಬಳಸುವುದು ಇತರೆ ಫೋನ್‌ಗಳು ಸಾಮಾನ್ಯವಾಗಿ ಬಳಸುವ ಪ್ರೊಸೆಸರ್ ಅಲ್ಲ. ಇದರಲ್ಲಿರುವುದು ಇಂಟೆಲ್ ಆಟಮ್ ಪ್ರೊಸೆಸರ್. ಇಂಟೆಲ್ ಆಟಮ್ ಪ್ರೊಸೆಸರ್‌ಗಳು ಪ್ರಥಮವಾಗಿ ಬಳಕೆಯಾದುದು ನೆಟ್‌ಬುಕ್‌ಗಳಲ್ಲಿ. ನೆಟ್‌ಬುಕ್‌ಗಳ ಜಾಗವನ್ನು ಟ್ಯಾಬ್ಲೆಟ್‌ಗಳು ಆಕ್ರಮಿಸಿವೆ. ಈಗ 2-ಇನ್-1ಗಳು ಆ ಜಾಗವನ್ನು ತುಂಬುತ್ತಿವೆ. ಅಂತಹ ಒಂದು ನೋಶನ್ ಇಂಕ್ 2-ಇನ್-1 ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಅದರಲ್ಲಿರುವುದು ಕೂಡ ಇಂಟೆಲ್ ಆಟಮ್ ಪ್ರೊಸೆಸರ್.

ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳವಂಥದ್ದೇನೂ ಇಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮುಂಭಾಗದಲ್ಲಿ ಕೆಳಗಡೆ ಮೂರು ಸಾಫ್ಟ್‌ಬಟನ್‌ಗಳಿವೆ, ಹಿಂಭಾಗ ಉಬ್ಬಿದ್ದು, ತಲೆದಿಂಬಿನಂತಿದೆ. ಹಿಂದಿನ ಕವಚ ತೆಗೆಯಬಹುದು. ತೆಗೆದಾಗ ಎರಡು ಸಿಮ್ ಮತ್ತು ಅಧಿಕ ಮೆಮೊರಿಗೆ ಮೈಕ್ರೋಎಸ್‌ಡಿ ಕಾರ್ಡ್ ಹಾಕುವ ಜಾಗ ಕಂಡುಬರುತ್ತವೆ. ಆದರೆ ಬ್ಯಾಟರಿ ತೆಗೆಯಲು ಮತ್ತು ಬದಲಿಸಲು ಸಾಧ್ಯವಿಲ್ಲ. ಹಿಂದಿನ ಕವಚ ಮಾಮೂಲು ಪ್ಲಾಸ್ಟಿಕ್ ಆಗಿದ್ದು ಸಾಮಾನ್ಯ ಗುಣಮಟ್ಟದ್ದಾಗಿದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದು.

ಇದರ ಬಳಕೆಯ ವೇಗ ತೃಪ್ತಿದಾಯಕವಾಗಿದೆ. ಎಲ್ಲೂ ಅಡೆತಡೆ ಅನ್ನಿಸಲಿಲ್ಲ. ಪರದೆ ಅರ್ಧ ಹೈಡೆಫಿನಿಶನ್ ಆಗಿದೆ. ಆಟ ಆಡುವ ಅನುಭವ ಚೆನ್ನಾಗಿದೆ. ಹೈಡೆಫಿನಿಶನ್ ಮತ್ತು ಇತರೆ ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿಯೇ ಇದೆ. 5 ಇಂಚಿನ ಪರದೆ ಇರುವ ಕಾರಣ ಅರ್ಧ ಹೈಡೆಫಿನಿಶನ್ ರೆಸೊಲೂಶನ್‌ನಲ್ಲಿ ಪೂರ್ತಿ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಅಂತಹ ತೃಪ್ತಿದಾಯಕ ಅನುಭವವಾಗಿರಲಿಕ್ಕಲ್ಲ ಅಂದುಕೊಂಡಿದ್ದೆ. ಆದರೆ ಹಾಗೆಂದು ಅನ್ನಿಸಲಿಲ್ಲ. ಮೂರು ಆಯಾಮಗಳ ಆಟ ಆಡುವ ಅನುಭವವೂ ತೃಪ್ತಿದಾಯಕವಾಗಿಯೇ ಇದೆ. ಪರದೆಯಲ್ಲಿ ಐಕಾನ್‌ಗಳ ಸರಿಸುವಿಕೆ ಸರಾಗವಾಗಿದೆ. ಒಟ್ಟಿನಲ್ಲಿ ಬಳಕೆಯ ವೇಗಕ್ಕೆ ಪಾಸ್‌ ಮಾರ್ಕು ನೀಡಬಹುದು. ದಿನವಿಡೀ ಬಳಸಿದಾಗ ಫೋನ್ ಬಿಸಿಯಾಗುತ್ತದೆ ಎಂದು ನನ್ನ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಆದರೆ ನನಗೆ ಆ ಅನುಭವವಾಗಲಿಲ್ಲ.

8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಕ್ಯಾಮೆರಾದ ಫಲಿತಾಂಶ ಕೆಲವು ಸಂದರ್ಭಗಳಲ್ಲಿ ತೃಪ್ತಿದಾಯಕವಾಗಿದೆ. ಚಲನೆಯಲ್ಲಿರುವ ವಸ್ತುಗಳ ಫೋಟೊ ತೆಗೆಯುವುದು ಸ್ವಲ್ಪ ಕಷ್ಟ. ಇದು ಸಾಮಾನ್ಯ ಎಲ್ಲ ಫೋನ್ ಕ್ಯಾಮೆರಾಗಳಿಗೂ ಅನ್ವಯಿಸುತ್ತದೆ. ಬೆಳಕು ಚೆನ್ನಾಗಿದ್ದಲ್ಲಿ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ವಿಡಿಯೊ ಕೂಡ ಚೆನ್ನಾಗಿಯೇ ಚಿತ್ರೀಕರಣವಾಗುತ್ತದೆ. ಇದರ ಲೆನ್ಸ್ F/2. ಆದುದರಿಂದ ಇನ್ನೂ ಉತ್ತಮ ಫಲಿತಾಂಶವನ್ನು ನೀಡಬೇಕಿತ್ತು ಎಂದು ನನ್ನ ಅಭಿಪ್ರಾಯ. ಇದರ ಆಡಿಯೊ ಇಂಜಿನ್ ಒಂದು ಮಟ್ಟಿಗೆ ಚೆನ್ನಾಗಿಯೇ ಇದೆ ಎನ್ನಬಹುದು. ಇದೇ ಗುಣಮಟ್ಟದ ಆಡಿಯೊ ಬೇಕಿದ್ದಲ್ಲಿ ಸಾಮಾನ್ಯವಾಗಿ ₹ 20 ಸಾವಿರಕ್ಕಿಂತ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಇದರ ಜೊತೆ ನೀಡಿರುವ ಇಯರ್‌ಬಡ್ ಇಯರ್‌ ಫೋನ್‌ ಕೂಡ ಒಂದು ಮಟ್ಟಿಗೆ ಚೆನ್ನಾಗಿಯೇ ಇದೆ. ಉತ್ತಮ ಸಂಗೀತ ಆಲಿಸಬೇಕಾಗಿರುವವರು ಈ ಫೋನ್ ಕೊಳ್ಳಬಹುದು.

  ಇದರ ದೊಡ್ಡ ಕೊರತೆ ಎಂದರೆ ಇದರ ಬ್ಯಾಟರಿ. 5 ಇಂಚಿನಷ್ಟು ದೊಡ್ಡ ಪರದೆ, ಅದೂ ಐಪಿಎಸ್, ಒಎಲ್ಇಡಿ ಅಲ್ಲ, ಅಂದರೆ ಜಾಸ್ತಿ ಬ್ಯಾಟರಿ ನುಂಗುವಂಥದ್ದು. ಹಾಗಿರುವಾಗ 3000 mAh ಅಥವಾ ಹೆಚ್ಚು ಶಕ್ತಿಯ ಬ್ಯಾಟರಿ ನೀಡಬೇಕಿತ್ತು. ತುಂಬ ಬಳಸಿದವರು ಹೇಳುವ ಪ್ರಕಾರ ಅರ್ಧ ದಿನದಲ್ಲೇ ಬ್ಯಾಟರಿ ಖಾಲಿಯಾಗುತ್ತದೆ. ಈ ಫೋನಿನ ಇನ್ನೊಂದು ಕೊರತೆಯೆಂದರೆ ಇದು ಆಂಡ್ರಾಯಿಡ್ ಕಿಟ್‌ಕ್ಯಾಟ್ (4.4) ಅಲ್ಲ ಎಂಬುದು. ಗೂಗಲ್ ಈಗಷ್ಟೆ ಆಂಡ್ರಾಯಿಡ್‌ನ ಹೊಸ ಆವೃತ್ತಿ ಲಾಲಿಪಾಪ್ (5.0) ಘೋಷಿಸಿದೆ. ಕೆಲವು ನೆಕ್ಸಸ್ ಫೋನ್‌ಗಳಿಗೆ ಅದನ್ನು ನೀಡುತ್ತಿದೆ. ಹಾಗಿರುವಾಗ ಇದು ಸ್ವಲ್ಪ ಹಳೆಯ ಆವೃತ್ತಿ ಅನ್ನಿಸುತ್ತಿದೆ. ಕಿಟ್‌ಕ್ಯಾಟ್‌ಗೆ ನವೀಕರಿಸಿಕೊಳ್ಳಬಹುದು ಎಂದು ಕಂಪೆನಿ ಹೇಳುತ್ತಿದೆ. ಆದರೆ ಫೋನಿನಲ್ಲಿ ನವೀಕರಿಸು ಎಂದು ಹೇಳಿದರೆ ಅದನ್ನು ಮಾಡಲಿಲ್ಲ. ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ.

ವಾರದ ಆಪ್ (app)

ಸೌಂಡ್ ಮೀಟರ್
ನಿಮ್ಮ ಪರಿಸರದ ಶಬ್ದಮಾಲಿನ್ಯ ಎಷ್ಟಿದೆ ಎಂದು ಅಳೆಯಬೇಕೇ? ಹೌದಾದಲ್ಲಿ ನಿಮಗೆ ಈ ಸೌಂಡ್‌ ಮೀಟರ್  (Sound Meter/Noise detector db) ಎಂಬ ಆಂಡ್ರಾಯಿಡ್ ಕಿರುತಂತ್ರಾಂಶ (ಆಪ್) ಬೇಕು. ಇದನ್ನು ಹಾಕಿಕೊಂಡು ನೀವು ನಿಮ್ಮ ಪರಿಸರದಲ್ಲಿರುವ ಶಬ್ದಗಳ ತೀವ್ರತೆಯನ್ನು ಅಳೆಯಬಹುದು. ಅದು ನಿಮ್ಮದೇ ಧ್ವನಿ, ವಾಹನಗಳ ಗದ್ದಲ, ಸಂತೆಯ ಗದ್ದಲ, ನಿಮ್ಮ ಕೋಣೆಯಲ್ಲಿ ಎಲ್ಲರೂ ಸೇರಿ ಮಾತನಾಡುವ ಗದ್ದಲ, ಪಟಾಕಿಯ ಧ್ವನಿ ಅಥವಾ ಗೊರಕೆಯ ಧ್ವನಿ –ಹೀಗೆ ಯಾವ ಧ್ವನಿಯೂ ಆಗಿರಬಹುದು. ನೀವು ಅಥವಾ ಮನೆಯಲ್ಲಿರುವ ಹಿರಿಯರಿಗೆ ತೀವ್ರ ಶಕ್ತಿಯ ಧ್ವನಿಯನ್ನು ಆಲಿಸುವ ಶಕ್ತಿಯಿಲ್ಲ, ಅತಿ ಕಡಿಮೆ ಶಬ್ದಮಾಲಿನ್ಯವಿರುವ ಜಾಗದಲ್ಲಿ ಅವರಿರಬೇಕು ಎಂದಾದಲ್ಲಿ ಈ ಸವಲತ್ತನ್ನು ಬಳಸಿ ಶಬ್ದಮಾಲಿನ್ಯವನ್ನು ಅಳೆದು ಯಾವ ಜಾಗದಲ್ಲಿರಬಹುದು ಎಂದು ನೀವು ತೀರ್ಮಾನಿಸಬಹುದು.

ಗ್ಯಾಜೆಟ್ ಸುದ್ದಿ
ಧರಿಸಬಲ್ಲ ಆರೋಗ್ಯ ಸಾಧನ ನ್ಯಾಯಾಲಯದಲ್ಲಿ

ಧರಿಸಬಲ್ಲ ಆರೋಗ್ಯ ಸಾಧನಗಳು ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿವೆ. ಅವುಗಳಲ್ಲಿ ನಿಮ್ಮ ಹೃದಯಬಡಿತ, ನೀವು ನಡೆದ ಹೆಜ್ಜೆಗಳು, ಎಷ್ಟು ಗಂಟೆ ನಿದ್ರಿಸಿದ್ದೀರಿ ಇತ್ಯಾದಿ ಎಲ್ಲ ವಿವರಗಳು ದಾಖಲಾಗುತ್ತವೆ. ಸಾಮಾನ್ಯವಾಗಿ ಅವುಗಳನ್ನು ಕೈಗೆ ಕೈಗಡಿಯಾರದ ಮಾದರಿಯಲ್ಲಿ ಧರಿಸಲಾಗುತ್ತದೆ. ಈ ದಾಖಲೆಗಳನ್ನು ಸ್ಮಾರ್ಟ್‌ಫೋನ್‌ಗೆ ಅಥವಾ ಫೋನ್‌ ಮೂಲಕ ಅಂತರಜಾಲಕ್ಕೆ ಸೇರಿಸಬಹುದು. ಇಂತಹ ದಾಖಲೆಯನ್ನು ಇಂಗ್ಲೆಂಡಿನಲ್ಲಿ ಇತ್ತೀಚೆಗೆ ನ್ಯಾಯಾಲಯದಲ್ಲಿ ದಾಖಲೆ ಎಂದು ನೀಡಲಾಗಿದೆ. ಅದನ್ನು ನ್ಯಾಯಾಲಯವು ಸ್ವೀಕರಿಸಿದೆ ಕೂಡ. ಒಬ್ಬ ವ್ಯಕ್ತಿಗೆ ವಾಹನ ಅಪಘಾತದಲ್ಲಿ ಎಷ್ಟು ತೊಂದರೆಯಾಗಿದೆ ಎಂಬುದನ್ನು ತೀರ್ಮಾನಿಸಲು ಈ ದಾಖಲೆಗಳನ್ನು ಬಳಸಲಾಗುತ್ತಿದೆ.

ಗ್ಯಾಜೆಟ್ ತರ್ಲೆ
ಎಲ್ಲ ಫೋನ್‌ಗಳಲ್ಲಿ ಏರೋಪ್ಲೇನ್ ಮೋಡ್ ಎಂದು ಇದೆ ತಾನೆ? ನೀವು ವಿಮಾನದಲ್ಲಿ ಪ್ರಯಾಣಿಸುವಾಗ ನಿಮ್ಮ ಫೋನನ್ನು ಆ ವಿಧಾನದಲ್ಲಿಡತಕ್ಕದ್ದು. ಅಲಿಯಾ ಭಟ್ ದೂರು ಏನೆಂದರೆ ಆಕೆ ಅವಳ ಫೋನನ್ನು ಏರೋಪ್ಲೇನ್ ಮೋಡ್‌ನಲ್ಲಿಟ್ಟರೂ ಆಕೆಯ ಫೋನ್ ಹಾರುತ್ತಿಲ್ಲ ಎಂದು!

ಗ್ಯಾಜೆಟ್ ಸಲಹೆ
ಗ್ಯಾಜೆಟ್ ಸಲಹೆ ಧಾರವಾಡದ ವೀರೇಶ ಶಾನುಭೋಗರ ಪ್ರಶ್ನೆ: ನನ್ನ ಬಜೆಟ್ ಸುಮಾರು ₹25 ಸಾವಿರ. ನಾನು ಪತ್ರಕರ್ತ. ನನಗೆ ಕಾರ್ಯಕ್ರಮಗಳ ಫೋಟೊ ತೆಗೆದು ವರದಿ ಜೊತೆ ಕಳುಹಿಸಬೇಕಾಗುತ್ತದೆ. ನನ್ನ ಕೆಲಸಕ್ಕೆ ಸೂಕ್ತವಾದ ಉತ್ತಮ ಕ್ಯಾಮೆರಾ ಇರುವ ಒಳ್ಳೆಯ ಫೋನ್ ಯಾವುದು?

ಉ: ನನ್ನ ಸಲಹೆ ಸ್ವಲ್ಪ ಬೇರೆಯೇ ಇದೆ. ನೀವು ₹6,000 ಕ್ಕೆ ಉತ್ತಮವಾದ ಆಂಡ್ರಾಯಿಡ್ ಫೋನ್ (ಶಿಯಾಮಿ ರೆಡ್‌ಮಿ 1ಎಸ್ ಅಥವಾ ಆಂಡ್ರಾಯಿಡ್ ಒನ್) ಕೊಳ್ಳಿ. ಅದರಲ್ಲಿರುವ ಕ್ಯಾಮೆರಾ ಅಷ್ಟೇನೂ ಒಳ್ಳೆಯದಿರುವುದಿಲ್ಲ. ಉಳಿದಂತೆ ಎಲ್ಲವೂ ಚೆನ್ನಾಗಿರುತ್ತದೆ. ಜೊತೆಗೆ ಸುಮಾರು ₹18,000 ಕ್ಕೆ ನಿಕಾನ್ ಪಿ340 ಕ್ಯಾಮೆರಾ ಕೊಳ್ಳಿ. ಇದು ಎಸ್ಎಲ್ಆರ್ ಗುಣಮಟ್ಟದ ಏಮ್-ಆಂಡ್-ಶೂಟ್ ಕ್ಯಾಮೆರಾ ಆಗಿದೆ. ಚಿಕ್ಕದಾಗಿದೆ. ಫೋಟೊ ತುಂಬ ಚೆನ್ನಾಗಿ ಬರುತ್ತದೆ. ಇದರಲ್ಲಿ ವೈಫೈ ಸೌಲಭ್ಯ ಇದೆ. ಫೋನಿಗೆ ಸೂಕ್ತ ಆಪ್ ಹಾಕಿಕೊಂಡು ವೈಫೈ ಮೂಲಕ ಫೋಟೊ ವರ್ಗಾಯಿಸಿ ಅದನ್ನು ಇಮೇಲ್ ಅಥವಾ ವಾಟ್ಸ್ಆಪ್ ಮೂಲಕ ಪತ್ರಿಕೆಗೆ ಕಳುಹಿಸಿ. ಫೋನ್ ಕೊಳ್ಳುವಾಗ ಓಟಿಜಿ ಸೌಲಭ್ಯ ಇರುವ (ಮೇಲೆ ತಿಳಿಸಿದ) ಫೋನ್ ಕೊಂಡರೆ ಓಟಿಜಿ ಕೇಬಲ್ ಮತ್ತು ಚಿಕ್ಕ ಕಾರ್ಡ್ ರೀಡರ್ (ಒಟ್ಟು ಬೆಲೆ ಸುಮಾರು ₹100) ಮೂಲಕ ಕ್ಯಾಮೆರಾದ ಮೆಮೊರಿ ಕಾರ್ಡನ್ನು ಹೊರತೆಗೆದು ಫೋನಿಗೆ ನೇರವಾಗಿ ಜೋಡಿಸಿ ಫೋಟೊ ವರ್ಗಾವಣೆ ಕೂಡ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT