ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಹುಡುಕಾಟಕ್ಕೆ ಪತ್ರಿಕೆಗಳ ಕಾಣಿಕೆ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಧುನಿಕ ಭಾರತದ ಇತಿಹಾಸಕಾರರು ಸರ್ಕಾರದ ಪ್ರಕಟಿತ, ಅಪ್ರಕಟಿತ ದಾಖಲೆಗಳನ್ನೇ ಬಹು ಕಾಲ ಅವಲಂಬಿಸಿದ್ದರು. ರಾಜ್ಯ ಹಾಗೂ ರಾಷ್ಟ್ರೀಯ ಪತ್ರಾಗಾರಗಳಲ್ಲಿನ  ವಿವಿಧ ಇಲಾಖೆಗಳ ದಾಖಲೆ­ಗಳನ್ನು ಪರಿಶೀಲಿಸುತ್ತಿದ್ದ ಇತಿಹಾಸಕಾರರೇ ಹೆಚ್ಚು. ಪ್ರೌಢ ಪ್ರಬಂಧ, ಸಂಶೋಧನಾ ಪ್ರಬಂಧ, ಏಕವಿಷಯ ಕೇಂದ್ರಿತ ಪ್ರಬಂಧಗಳನ್ನು ಬರೆಯುವವರಿಗೆ ಈ ದಾಖಲೆಗಳೇ ಮುಖ್ಯ ಆಕರಗಳಾಗಿದ್ದವು.

ಕೆಲವು ಇತಿಹಾಸಕಾರರು ಭಿನ್ನವಾಗಿ ಯೋಚಿಸಿ, ರಾಜ­ಕಾರಣಿ­ಗಳು ಹಾಗೂ ಸಮಾಜ ಸುಧಾರಕರು ಹೊರತಂದ ಪತ್ರಿಕೆಗಳನ್ನು ಆಕರವಾಗಿ ಬಳಸಿ­ಕೊಳ್ಳ­ತೊಡ­ಗಿದರು. ಇನ್ನು ಕೆಲವು ಇತಿಹಾಸ­ಕಾರರು ನಿರ್ದಿಷ್ಟ ಚಳವಳಿ ಮೊದಲಾದ ಘಟನಾ­ವಳಿ­ಗಳನ್ನು ಕುರಿತು ಬರೆಯುವಾಗ, ಅವುಗಳಲ್ಲಿ ಭಾಗಿಯಾದವರನ್ನೇ ಮಾತನಾಡಿಸಿ, ಸಂದರ್ಶನ ರೂಪದಲ್ಲಿ ಐತಿಹಾಸಿಕ ವಿಷಯಗಳನ್ನು ದಾಖಲಿ­ಸಿರುವುದೂ ಇದೆ.

ಏನೇ ಆದರೂ ಪತ್ರಿಕೆಗಳನ್ನು ಇತಿಹಾಸಕಾರರು ಸಮರ್ಥ ಆಕರವಾಗಿ ದುಡಿಸಿಕೊಂಡಿದ್ದು ಕಡಿಮೆಯೇ. ನನ್ನ ವೃತ್ತಿಬದುಕನ್ನು ರೂಢಿಸಿಕೊಳ್ಳಲು ಸ್ನೇಹಮಯಿ ವ್ಯಕ್ತಿತ್ವದ ಇಬ್ಬರು ಇತಿಹಾಸ­ಕಾರರು ನೆರವಾಗಿದ್ದರು. ಅವರು ಪತ್ರಿಕೆಗಳ ಆಕರದ ಮಹತ್ವವನ್ನು ನನ್ನ ಕಿವಿಮೇಲೆ ಹಾಕಿದ್ದರು. ಅವ­ರಲ್ಲಿ ಒಬ್ಬರು–- ಬಂಗಾಳದ ಮಹಾ­ವಿದ್ವಾಂಸ ಹಿತೇಶ್‌ರಂಜನ್ ಸನ್ಯಾಲ್. ಕೋಲ್ಕತ್ತದ ಸಮಾಜ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ನಾನು ಕೆಲಸ ಮಾಡುತ್ತಿದ್ದ ಕೊಠಡಿಯ ಪಕ್ಕದಲ್ಲೇ ಅವರ ಕೊಠಡಿ ಇತ್ತು.

ಇನ್ನೊಬ್ಬರು– ನೈನಿ­ತಾಲ್‌ನ ಕುಮಾವೂ ವಿಶ್ವ­ವಿದ್ಯಾಲಯದಲ್ಲಿ ಪಾಠ ಹೇಳುತ್ತಿದ್ದ, ಸಂಶೋ­ಧಕರೂ ಚಳವಳಿ­ಕಾರರೂ ಆಗಿದ್ದ ಶೇಖರ್ ಪಾಠಕ್. ೧೯೩೦ ಹಾಗೂ ೧೯೪೦ರ ದಶಕದಲ್ಲಿ ಮೇದಿನಿಪುರದ ‘ಕೃಷಿಕರ ರಾಷ್ಟ್ರೀಯತೆ’ ಕುರಿತು ಬರೆಯಲು ಸನ್ಯಾಲ್ ಬಂಗಾಳದ ಹಲವು ಪತ್ರಿಕೆ­ಗಳನ್ನು ಬಳಸಿಕೊಂಡಿದ್ದರು. ಕುಮಾವೂದಲ್ಲಿ ಒತ್ತಾಯ­ಪೂರ್ವಕ­ವಾಗಿ ಕೆಲಸಗಾರರನ್ನು ದುಡಿಸಿಕೊಳ್ಳು­ತ್ತಿದ್ದ ಪ್ರವೃತ್ತಿಯನ್ನು ವಿರೋಧಿಸಿ ನಡೆದ ಚಳವಳಿಗಳ ಬಗೆಗೆ ಪಾಠಕ್ ಮಹಾ­ಪ್ರಬಂಧ ಮಂಡಿಸಿದರು. ಅವರು ಅಲ್ಮೋಡಾ ಜಿಲ್ಲೆಯಲ್ಲಿ ಪ್ರಕಟವಾದ ಹಿಂದಿ ಪತ್ರಿಕೆಗಳನ್ನು ಸಮರ್ಥ ಆಕರಗಳಾಗಿ ದುಡಿಸಿಕೊಂಡಿದ್ದರು.

ಕುಮಾವೂದ ಪಶ್ಚಿಮಕ್ಕೆ ಇರುವ, ಉತ್ತರಾ­ಖಂಡದ ಗಡವಾಲ್‌ನಲ್ಲಿ ನಡೆದ ಕೃಷಿಕರ ಪ್ರತಿಭಟನೆಗಳ ಬಗೆಗೆ ನಾನು ಅಧ್ಯಯನ ಮಾಡಿದೆ. ಪಾಠಕ್, ಸನ್ಯಾಲ್ ಇಬ್ಬರಿಂದ ಪ್ರಭಾ ವಿತನಾಗಿ ಚಳವಳಿಯ ಕಾಲ­ಘಟ್ಟದಲ್ಲಿ ಪ್ರಕಟ ವಾದ ಸ್ಥಳೀಯ ಪತ್ರಿಕೆಗಳಿಗಾಗಿ ಹುಡುಕಾಡಿದೆ. ಸರ್ಕಾರಿ ದಾಖಲೆಗಳು ನೀಡದ ಕೆಲವು ಒಳನೋಟಗಳನ್ನು ಅಂಥ ಪತ್ರಿಕೆಗಳು ನೀಡುತ್ತವೆ. ಅಂಥದೊಂದು ಪತ್ರಿಕೆ ನನ್ನ ತವ­ರೂರು ಡೆಹ್ರಾಡೂನ್‌ನಲ್ಲಿ ಸಿಕ್ಕಿತು.

ಅದರ ಹೆಸರು ‘ಯುವವಾಣಿ’. ೧೯೪೦ರ ದಶಕದಲ್ಲಿ ಆಚಾರ್ಯ ಗೋಪೇಶ್ವರ ನಾರಾಯಣ್ ಕೋಠಿ­ಯಾಲ್ ಎಂಬ ಗಾಂಧಿವಾದಿ ಆ ಪತ್ರಿಕೆ ನಡೆಸಿ­ದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ) ಅವರೂ ಪಾಲ್ಗೊಂಡಿದ್ದರು. ಆಗ ಜೈಲುವಾಸ­ವನ್ನೂ ಅನುಭವಿಸಿದ್ದ ಅವರು ನಂತರ ಡೆಹ್ರಾಡೂನ್‌ನಲ್ಲಿ ನೆಲೆಸಿದ್ದರು. ಸ್ವಾತಂತ್ರ್ಯ ಹೋರಾಟದ ಧ್ಯೇಯೋದ್ದೇಶ ಇಟ್ಟುಕೊಂಡೇ ಅವರು ಪತ್ರಿಕೆ ಆರಂಭಿಸಿದ್ದರು.

ಡೆಹ್ರಾಡೂನ್‌ನ ಗಡಿಯಾರದ ಗೋಪುರದ ಬಳಿ ಇರುವ ‘ಯುವವಾಣಿ’ ಪತ್ರಿಕೆಯ ಕಚೇರಿ­ಯಲ್ಲಿ ಹಳೆಯ ಸಂಚಿಕೆಗಳನ್ನು ಜೋಪಾನವಾಗಿ ಇಟ್ಟಿದ್ದರು. ೧೯೪೦ರಲ್ಲಿ ನಡೆದ ಕೃಷಿಕರ ಚಳವಳಿ­ಗಳಲ್ಲದೆ ೧೯೭೦ರ ಚಿಪ್ಕೋ ಚಳವಳಿಯ ಕುರಿತು ಹೊಸ ಸಂಗತಿಗಳು ‘ಯುವವಾಣಿ’ಯ ಹಳೆಯ ಸಂಚಿಕೆಗಳಲ್ಲಿ ಸಿಕ್ಕವು. ಅದರ ಸಂಪಾದಕ–ಮಾಲೀಕರ ಕೊಠಡಿಯ ಪಕ್ಕದ ಕೊಠಡಿಯಲ್ಲೇ ನಾನೂ ಕೆಲಸ ಮಾಡಿದ್ದು ಸಂತೋಷದ ವಿಷಯ. ಅವರು ಆಗಾಗ ನನ್ನನ್ನು ಚಹಾ ಕುಡಿಯಲು ಕರೆಯುತ್ತಿದ್ದರು. ಆಗ ಪತ್ರಿಕೆಯ ಹಳೆಯ ಸಂಚಿಕೆಗಳು ಒದಗಿಸಿದ ಮಾಹಿತಿಯನ್ನು ಅವರ ಜೊತೆ ಹಂಚಿಕೊಳ್ಳುತ್ತಿದ್ದೆ. ಅವರು ಆ ಮಾಹಿತಿಯನ್ನು ಯಾವ ರೀತಿ ಮಂಡಿಸಬೇಕು ಎಂಬುದನ್ನು ಮನದಟ್ಟು ಮಾಡಿಸುತ್ತಿದ್ದರು.

ನಾನು ‘ಯುವವಾಣಿ’ ಕಚೇರಿಯಲ್ಲಿ ೧೯೮೨–­೮೩ರಲ್ಲಿ ಕೆಲಸ ಮಾಡಿದೆ. ಅಲ್ಲಿಂ­ದಾಚೆಗೆ ಪದೇಪದೇ ಸಂಶೋಧನೆಯ ಆಕರ­ವಾಗಿ ಹಲವು ಹಳೆಯ ಪತ್ರಿಕೆಗಳ ಸಂಚಿಕೆಗಳನ್ನು ತಿರುವಿ ಹಾಕಿದ್ದೇನೆ. ಲಂಡನ್‌ನಲ್ಲಿ ಆಫ್ರಿಕನ್ ಪತ್ರಿಕೆ­ಗಳನ್ನು ಓದಿದೆ. ನ್ಯೂ ಪ್ರಾವಿಡೆನ್ಸ್‌ನಲ್ಲಿ ಬ್ರಿಟಿಷ್ ಪತ್ರಿಕೆಗಳನ್ನು ಗಮನಿಸಿದೆ. ಕೇಂಬ್ರಿಜ್ ಹಾಗೂ ನ್ಯೂಹೆವೆನ್‌ನ ಭಾರತೀಯ ಪತ್ರಿಕೆಗಳ ಹಳೆಯ ಸಂಚಿಕೆಗಳಲ್ಲಿ ಏನೇನಿವೆ ಎಂಬುದನ್ನು ಓದಿಕೊಂಡೆ. ಎಷ್ಟೋ ಸಂದರ್ಭಗಳಲ್ಲಿ, ಹಲವು ಊರುಗಳಲ್ಲಿ ಪ್ರಕಟಗೊಂಡ ಅಥವಾ ನಾನು ಆ ಊರುಗಳಿಗೆ ಭೇಟಿ ನೀಡಿದಾಗ ಪ್ರಕಟ­ಗೊಳ್ಳುತ್ತಿದ್ದ ಸ್ಥಳೀಯ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಓದಿದ್ದೂ ಇದೆ.

ಇಷ್ಟಕ್ಕೂ ನಾನು ಪತ್ರಿಕಾ ಬರಹಗಳ ಅಧ್ಯ­ಯನವನ್ನು ಹೆಚ್ಚಾಗಿ ಮಾಡಿದ್ದು ನವದೆಹಲಿಯ ನೆಹರು ಮ್ಯೂಸಿಯಂ ಹಾಗೂ ಗ್ರ್ರಂಥಾ­ಲಯದಲ್ಲಿ (ಎನ್‌ಎಂಎಂಎಲ್). ಆಚಾರ್ಯ ಕೋಠಿ­ಯಾಲ್ ಹಾಗೂ ‘ಯುವ­ವಾಣಿ’ ಸಂಚಿಕೆ­ಗಳ ಬಗೆಗೆ ಯಾವಾಗ ತಿಳಿದು­ಕೊಂಡೆನೋ, ಆಗಿನಿಂದಲೇ ಎನ್‌ಎಂಎಂಎಲ್ ಕೂಡ ಒಂದು ಅರ್ಥಪೂರ್ಣ ಮಾಹಿತಿಯ ಆಗರ ಎಂಬುದನ್ನು ತಿಳಿದುಕೊಂಡೆ. ಕಳೆದ ಮೂರು ದಶಕಗಳಲ್ಲಿ ನನ್ನ ವೃತ್ತಿ ಬದುಕಿನ ಕಟ್ಟಡವನ್ನು ಈ ಸಂಸ್ಥೆಯ ಅಡಿಪಾಯದ ಮೇಲೆಯೇ ಕಟ್ಟಿದ್ದೇನೆ ಎನ್ನು­ವುದು ಉತ್ಪ್ರೇಕ್ಷೆ­ಯಲ್ಲ.

ಖಾಸಗಿ ವ್ಯಕ್ತಿಗಳು ಮಂಡಿ­ಸಿದ ಪ್ರಬಂಧ­ಗಳು, ಪುಸ್ತಕಗಳು, ಪತ್ರಿಕೆಗಳು, ಅಷ್ಟೇ ಅಲ್ಲದೆ ಸಂಸತ್‌ನ ಕಲಾಪಗಳಲ್ಲಿ ಹೊಮ್ಮಿದ ವಿಷಯ­ಗಳು ಎಲ್ಲವನ್ನೂ ಆ ಸಂಸ್ಥೆ­ಯಲ್ಲಿ ನಾನು ಓದಿಕೊಂಡಿದ್ದೇನೆ. ವಿವಿಧ ಮೂಲ­ಗಳಿಂದ ಸಂಸ್ಥೆ ಸಂಗ್ರಹಿಸಿರುವ ಪತ್ರಿಕೆಗಳು ಹಾಗೂ ನಿಯತ­ಕಾಲಿಕೆ­ಗಳಂತೂ ಬಹುಮುಖ್ಯವಾದ ಆಕರಗಳು. ನೆಹರೂ ಗ್ರಂಥಾಲಯದ ಹಳೆಯ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಬಹುಪಾಲು ಮೈಕ್ರೊಫಿಲ್ಮ್ ರೂಪದಲ್ಲಿ ಸಂರಕ್ಷಿತವಾಗಿವೆ. ಅವನ್ನು ನಿರ್ವಹಿಸಲು ಹವಾನಿಯಂತ್ರಿತ ವ್ಯವಸ್ಥೆ ಇರಲೇಬೇಕು. ಹಾಗಾಗಿ ಅಲ್ಲಿಗೆ ಹೋದರೆ ಉತ್ತರ ಭಾರತದ ದೂಳು, ಸೆಕೆ ಎರಡನ್ನೂ ಮೀರಿದ ವಾತಾವರಣ ಹಿತವೆನಿಸುತ್ತದೆ.

ಅಲ್ಲಿನ ಸಿಬ್ಬಂದಿ ಕೂಡ ಸಭ್ಯರು. ಮಾಹಿತಿ ಹುಡುಕಲು ನೆರವು ನೀಡುವಂಥವರು. ಆದರೆ ಎಷ್ಟೋ ಮೈಕ್ರೊಫಿಲ್ಮ್‌ಗಳು ಹಳತಾಗಿದ್ದು, ಮಸುಕು ಮಸುಕಾಗಿ ಕಾಣುತ್ತವೆ. ಅವುಗಳನ್ನು ಓದುವ ಸಿಬ್ಬಂದಿ ಓಬೀರಾಯನ ಕಾಲದವರಂತೆ ಇದ್ದಾರೆ. ಮೈಕ್ರೊಫಿಲ್ಮ್‌ನ ಪುಟಗಳನ್ನು ಓದುತ್ತಾ ಹೋದಂತೆ ಕನ್ನಡಕ ಹಾಕಿದ ನನ್ನಂಥವನಿಗೇ ಸುಸ್ತಾಗುತ್ತದೆ. ಮಸುಕಾದ ಅಕ್ಷರಗಳನ್ನು ಅರ್ಥ ಮಾಡಿಕೊಳ್ಳುವ ಕಷ್ಟ ಅದು. ಕೊನೆಗೆ ಮಹತ್ವದ ಸಂಗತಿ ಸಿಕ್ಕಾಗ ಮನಸ್ಸು ಮುದಗೊಳ್ಳುತ್ತದೆ. ಪಟ್ಟ ಆ ಕಷ್ಟವೆಲ್ಲಾ ಮರೆಯಾಗುತ್ತದೆ.

ಎನ್‌ಎಂಎಂಎಲ್ ನನ್ನ ಮೆಚ್ಚಿನ ಐತಿಹಾಸಿಕ ಪತ್ರಾಗಾರ. ನನ್ನ ಇಷ್ಟದ ‘ಬಾಂಬೆ ಕ್ರಾನಿಕಲ್’ ಪತ್ರಿಕೆಯ ಹಲವು ಸಂಚಿಕೆಗಳು ಅಲ್ಲಿವೆ. ‘ಬಾಂಬೆ ಕ್ರಾನಿಕಲ್’ ೧೯೧೦ರಲ್ಲಿ ಶುರುವಾಗಿ, ೧೯೫೯­ರವರೆಗೆ ಪ್ರಕಟಗೊಂಡಿತು. ಪಶ್ಚಿಮ ಭಾರತ ಹಾಗೂ ಅದರ ಸುತ್ತಮುತ್ತಲಿನ ಜನಾಭಿ­ಪ್ರಾಯದ ಮೇಲೆ ಆ ಪತ್ರಿಕೆ ಬೀರಿದ ಪ್ರಭಾವ ಗಮನಾರ್ಹವಾದುದು. ಬ್ರಿಟಿಷ್ ಮಾಲೀಕತ್ವದ ‘ಟೈಮ್ಸ್ ಆಫ್ ಇಂಡಿಯಾ’ಗೆ ಪರ್ಯಾಯ­ವಾಗಿ ರಾಷ್ಟ್ರೀಯ ಪ್ರಜ್ಞೆ ಇಟ್ಟುಕೊಂಡು ಪ್ರಾರಂಭ­ವಾದ ಪತ್ರಿಕೆ ಇದು. ಬಿ.ಜಿ. ಹಾರ್ನಿ­ಮನ್, ಮರ್ಮ­ಡ್ಯೂಕ್ ಪಿಕ್‌ಥಾಲ್, ಸಯ್ಯದ್ ಅಬ್ದುಲ್ಲಾ ಬ್ರೆಲ್ವಿ ತರಹದ ಘಟಾನುಘಟಿ ಸಂಪಾದಕರು ಆ ಪತ್ರಿಕೆಯಲ್ಲಿ ಕೆಲಸ ಮಾಡಿ­ದ್ದರು.

ವಸಾಹತು­ಶಾಹಿ ಆಡಳಿತಗಾರರ ವಿಶ್ವಾಸ­ಘಾತುಕ ವರ್ತನೆ­ಗಳ ಕುರಿತು ಬೆಳಕು ಚೆಲ್ಲುವ ಹಲವು ಪ್ರಬಂಧ­ಗಳು ಆ ಪತ್ರಿಕೆಯಲ್ಲಿ ಪ್ರಕಟ­ವಾಗಿದ್ದವು. ಮಹಾತ್ಮ ಗಾಂಧಿಯವರ ಒಂದೊಂದೂ ಕದಲಿಕೆ­ಯನ್ನು ಸೂಕ್ಷ್ಮವಾಗಿಯೂ ಸಹಾನುಭೂತಿ­ಯಿಂದಲೂ ಅದು ದಾಖಲಿಸು­ತ್ತಿತ್ತು. ರಾಜಕೀ­ಯೇ­ತರ ವಿಷಯಗಳಿಗೂ ಪತ್ರಿಕೆ ಸ್ಥಳಾವಕಾಶ ಕಲ್ಪಿಸಿತ್ತು. ಅದರ ನಗರದ ಪುಟಗಳು ವಿಶೇಷವೂ ವೈವಿಧ್ಯವೂ ಆದ ಸಂಗತಿ­ಗಳನ್ನು ಒಳಗೊಂಡಿರು­ತ್ತಿದ್ದವು. ಮಲಬಾರ್ ಬೆಟ್ಟಸಾಲಿನಲ್ಲಿನ ಹುಡು­ಗಾಟಿಕೆ­ಯ ಬಗೆಗೆ ಒಂದು ನುಡಿಚಿತ್ರವಿದ್ದರೆ, ಇನ್ನೊಂದು ಕಡೆ ಜವಳಿ ಕಾರ್ಮಿಕರ ಹೋರಾಟದ ಕುರಿತ ಬರಹ ಇರುತ್ತಿತ್ತು. ಬಾಂಬೆ ಚಿತ್ರರಂಗದ ಚಲನಚಿತ್ರಗಳ ಕುರಿತು ಅದ್ಭುತವಾದ ವಿಮರ್ಶೆಗಳು ಹಾಗೂ ಚಿತ್ರ ಬಿಡುಗಡೆ ಪೂರ್ವ ವಿಶ್ಲೇಷಣೆಗಳನ್ನೂ ‘ಕ್ರಾನಿಕಲ್’ ಪ್ರಕಟಿಸಿದೆ.

‘ಬಾಂಬೆ ಕ್ರಾನಿಕಲ್’ ಕುರಿತು ಮೊದಲು ಕೇಳಿ ತಿಳಿದಿದ್ದೆ. ಅದರ ಗುಣಮಟ್ಟ ಹಾಗೂ ವಿಷಯ­ಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸಿದ್ದು ನಾನು ಕ್ರಿಕೆಟ್‌ನ ಸಾಮಾಜಿಕ ಇತಿಹಾಸದ ಅಧ್ಯಯನ­ದಲ್ಲಿ ತೊಡಗಿದಾಗ. ಬಾಂಬೆಯ ಚತುಷ್ಕೋನ ಟೂರ್ನಿ ನನ್ನ ಅಧ್ಯಯನದ ಕೇಂದ್ರವಾಗಿತ್ತು. ೧೯೧೨ರಿಂದ ೧೯೪೫ರವರೆಗೆ ನಡೆದ ಈ ಟೂರ್ನಿ ಭಾರತದ ಆ ಕಾಲಘಟ್ಟದ ಪ್ರಮುಖ ಕ್ರಿಕೆಟ್ ಟೂರ್ನಿಯಾಗಿತ್ತು. ಒಂದು ಆಟವಾಗಿ ಕ್ರಿಕೆಟ್ ಬಗೆಗೆ ನನಗೆ ಹೆಚ್ಚೇನೂ ಆಸಕ್ತಿ ಇರಲಿಲ್ಲ, ಸ್ಕೋರ್‌­ಬೋರ್ಡ್ ಹಿಂದಿನ ಸಂಗತಿಗಳು ಮುಖ್ಯ­ವಾಗಿ­ದ್ದವು.

ಆಯ್ಕೆದಾರರ ರಾಜಕೀಯ, ಪ್ರೇಕ್ಷಕರ ವರ್ತನೆ ಹಾಗೂ ಅದರಲ್ಲಿನ ಸಾಮಾಜಿಕತೆ, ಕ್ರಿಕೆಟ್ ಜಾತೀಯತೆ, ರಾಷ್ಟ್ರೀಯತೆ, ಸಮು­ದಾಯ ಪ್ರಜ್ಞೆಯನ್ನು ಅದು ಹೇಗೆ ಮರೆಸುತ್ತದೆ, ಹೇಗೆ ಮೆರೆಸುತ್ತದೆ ಇತ್ಯಾದಿಯನ್ನು ಅರಿಯಬೇಕಿತ್ತು. ಡಾಕ್ಟೊರೇಟ್ ಪದವಿಗಾಗಿ ಮಹಾಪ್ರಬಂಧ ಸಿದ್ಧಪಡಿಸಿದಾಗಲೂ ಪತ್ರಿಕಾ ಸಂಚಿಕೆಗಳನ್ನು ಅಧ್ಯಯನದ ಆಕರಗಳಾಗಿ ಬಳಸಿಕೊಂಡಿದ್ದೆ. ಆದರೆ ಕ್ರಿಕೆಟ್ ಕುರಿತ ಅಧ್ಯಯನ ಪ್ರಾರಂಭಿಸಿದ ಮೇಲಷ್ಟೇ ಪತ್ರಿಕೆಗಳು ಎಷ್ಟು ಮಹತ್ವದ, ಬೆಳಕು ಚೆಲ್ಲುವಂಥ ಆಕರಗಳು ಎಂಬುದು ಅರಿವಿಗೆ ಬಂದದ್ದು.

ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ಪತ್ರಿಕೆಗಳು ಕ್ರೀಡಾ ಅಧ್ಯಯನಕ್ಕೆ ಮುಖ್ಯ ಆಕರಗಳಾಗಬಲ್ಲವು. ಕ್ರಿಕೆಟ್ ಅಧ್ಯಯನ­ದಲ್ಲಿ ಅಲ್ಲೊಂದು ಇಲ್ಲೊಂದು ಸಾಂಸ್ಥಿಕ ದಾಖಲೆಗಳು ನೆರವಿಗೆ ಬಂದವಾದರೂ, ಹೆಚ್ಚು ಹೊಳಹುಗಳು ಸಿಕ್ಕಿದ್ದು ಪತ್ರಿಕೆಗಳಿಂದಲೇ. ಅದ­ರಲ್ಲೂ ‘ಬಾಂಬೆ ಕ್ರಾನಿಕಲ್’ ಬೇರೆ ಮೂಲ­ಗಳಿಗಿಂತ (ಪುಸ್ತಕಗಳು, ಅಂಕಿಅಂಶ, ಭಿತ್ತಿಪತ್ರ­ಗಳು, ಮಾಹಿತಿಪತ್ರ, ಸಂದರ್ಶನಗಳು ಇತ್ಯಾದಿ) ಹೆಚ್ಚು ಒಳನೋಟಗಳನ್ನು ಕೊಟ್ಟಿತು.

‘ಬಾಂಬೆ ಕ್ರಾನಿಕಲ್’ ನನ್ನ ಕ್ರಿಕೆಟ್ ಅಧ್ಯ­ಯನಕ್ಕೆ ಅನಿವಾರ್ಯವಾಯಿತು. ಅದರ ಹಳೆಯ ಸಂಚಿಕೆಗಳು ಮುಂಬೈನಲ್ಲಿ ಸಿಗಲಿಲ್ಲ. ಅದೃಷ್ಟ­ವಶಾತ್ ನವದೆಹಲಿಯ ತೀನ್‌ಮೂರ್ತಿ ಗ್ರಂಥಾ­ಲಯದಲ್ಲಿ ಮೈಕ್ರೊಫಿಲ್ಮ್ ರೂಪದಲ್ಲಿ ಸಿಕ್ಕವು. ಬಾಂಬೆ ಚತುಷ್ಕೋನ ಕ್ರಿಕೆಟ್ ಟೂರ್ನಿ ಸಾಮಾನ್ಯ­ವಾಗಿ ನವೆಂಬರ್–-ಡಿಸೆಂಬರ್‌ನಲ್ಲಿ ನಡೆಯು­ತ್ತಿತ್ತು. ಒಮ್ಮೊಮ್ಮೆ ಜನವರಿವರೆಗೂ ಮುಂದು­ವರಿಯುತ್ತಿತ್ತು. ಟೂರ್ನಿಯ ಸಾಮಾ­ಜಿಕ ಅರ್ಥ ಹಾಗೂ ಧ್ಯೇಯೋದ್ದೇಶವನ್ನು ತಿಳಿದುಕೊಳ್ಳಲು ಹಳೆಯ ಸಂಚಿಕೆಗಳ ಮೈಕ್ರೊ ಫಿಲ್ಮ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದೆ.

ಕೇವಲ ಕ್ರಿಕೆಟಿಂಗ್ ಇತಿಹಾಸ ಬರೆಯುವುದು ನನ್ನ ಉದ್ದೇಶ-­ವಾಗಿರಲಿಲ್ಲ. ಅದಕ್ಕಿರುವ ಸಾಮಾಜಿಕ ಆಯಾ­ಮವೇ ಮುಖ್ಯವಾಗಿತ್ತು. ಹಾಗಾಗಿ ಕ್ರೀಡಾಪುಟ­ಗಳನ್ನಷ್ಟೇ ಅಲ್ಲದೆ ಇತರ ಪುಟ­ಗಳನ್ನೂ ಗಮನಿಸ­ಬೇಕಿತ್ತು. ಸುದ್ದಿ, ಅಭಿಪ್ರಾಯ­ಗಳು, ವಿಶ್ಲೇಷಣೆ­ಗಳು, ಜಾಹೀರಾತುಗಳು ಎಲ್ಲವನ್ನೂ ಓದುತ್ತಿದ್ದೆ. ಓದುಗರ ಪತ್ರಗಳನ್ನು ಓದಿದ್ದಂತೂ ತುಂಬಾ ಖುಷಿ ಕೊಟ್ಟಿತು. ‘ಟೈಮ್ಸ್ ಆಫ್ ಇಂಡಿಯಾ’ ಹಾಗೂ ‘ಬಾಂಬೆ ಸೆಂಟಿನೆಲ್’ ತರಹದ ಪತ್ರಿಕೆ­ಗಳು ಚತುಷ್ಕೋನ ಕ್ರಿಕೆಟ್ ಟೂರ್ನಿಯ ವಿವಾದ­ಗಳನ್ನು ಯಾವ ದೃಷ್ಟಿಕೋನದಲ್ಲಿ ಬರೆದಿವೆ ಎಂಬು­ದನ್ನು ಗಮನಿಸಿದೆ.

ಅದನ್ನು ‘ಬಾಂಬೆ ಕ್ರಾನಿಕಲ್’ನ ದೃಷ್ಟಿಕೋನದ ಜೊತೆ ಹೋಲಿಸಿ ನೋಡಿದೆ. ಕ್ರಿಕೆಟ್ ಅಧ್ಯಯನಕ್ಕೆಂದು ಪತ್ರಿಕೆಯ ಪುಟಗಳನ್ನು ಓದಿದೆನಾದರೂ ಬೇರೆ ಹಲವು ಸಂಗತಿಗಳು ನನ್ನ ಗಮನ ಸೆಳೆದವು. ಗಾಂಧಿ, ಲೆನಿನ್, ಹಿಟ್ಲರ್, ಚರ್ಚಿಲ್ ಮೊದಲಾದ ಆ ಕಾಲದ ರಾಜಕೀಯ ವ್ಯಕ್ತಿಗಳ ಬಗೆಗಿನ ಓದಿಸಿಕೊಳ್ಳುವ, ವೈವಿಧ್ಯಮಯ ಬರಹಗಳು ಸಿಕ್ಕವು. ಅಷ್ಟೇ ಅಲ್ಲ, ನಾನು ಹೆಚ್ಚು ಇಷ್ಟಪಡುವ ಇಬ್ಬರು ಲೇಖಕರ ಕುರಿತ ಬರಹಗಳೂ ಅಲ್ಲಿದ್ದವು. ಒಬ್ಬರು– ಮಾನವಶಾಸ್ತ್ರಜ್ಞ ವೆರಿಯರ್ ಎಡ್ವಿನ್, ಮತ್ತೊಬ್ಬರು– ಕನ್ನಡದ ಕಾದಂಬರಿ­ಕಾರ ಶಿವರಾಮ ಕಾರಂತ. ಈ ಇಬ್ಬರೂ ಬಾಂಬೆ ಚತುಷ್ಕೋನ ಕ್ರಿಕೆಟ್ ಟೂರ್ನಿ ನಡೆಯುವ ಸಂದರ್ಭದಲ್ಲಿ ಬೇರೆ ಬೇರೆ ಉದ್ದೇಶಕ್ಕಾಗಿ ಆ ನಗರಕ್ಕೆ ಭೇಟಿ ನೀಡಿದ್ದರು.

ನನ್ನ ಒಂದು ಪುಸ್ತಕವನ್ನು ಗ್ರಂಥಾಲಯ ಹಾಗೂ ಮಾಹಿತಿ ಸಂಗ್ರಹಾಗಾರಗಳಲ್ಲಿ ಕೆಲಸ ಮಾಡುವ ನಿಸ್ವಾರ್ಥ ಜನರಿಗೆ ಅರ್ಪಿಸಿದ್ದೆ. ಗೊತ್ತಿ­ಲ್ಲದ ಸಂಪಾದಕರು, ವರದಿಗಾರರು, ಮೊಳೆ ಜೋಡಿ­­ಸುವವರು, ಮುದ್ರಕರು- ಇವರನ್ನೂ ಆ ಅರ್ಪ­ಣೆಯ ಸಾಲಿಗೆ ಸೇರಿಸಬೇಕಿತ್ತು. ಇವ­ರೆ­ಲ್ಲರೂ ಎಂದೋ ಪಟ್ಟ ಶ್ರಮ ಕಣ್ಣು ತೆರೆ­ಯು­ತ್ತಿರುವ ಇತಿಹಾಸಕಾರರಿಗೂ ಉತ್ತಮ ಅಧ್ಯ­ಯನ ಆಕರಗಳನ್ನು ನಿರಂತರವಾಗಿ ಒದಗಿಸುತ್ತಾ ಇದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT