ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಮೌನವಾಗಿದ್ದರೂ, ನಾಳೆ ಪ್ರತಿಕ್ರಿಯಿಸಲೇಬೇಕು

Last Updated 16 ಜೂನ್ 2018, 9:14 IST
ಅಕ್ಷರ ಗಾತ್ರ

1927ರಿಂದ 1986ರ ನಡುವಿನ 60 ವರ್ಷ ಗಳಲ್ಲಿ ಪಾಕಿಸ್ತಾನವನ್ನೂ ಒಳಗೊಂಡ ಅಖಂಡ ಭಾರತದಲ್ಲಿ ಧರ್ಮನಿಂದನೆಗೆ ಸಂಬಂಧಿಸಿದ ಕೇವಲ ಏಳು ಪ್ರಕರಣಗಳು ದಾಖಲಾಗಿದ್ದವು. ಅದಾದ ನಂತರದ ಮೂವತ್ತು ವರ್ಷಗಳ ಅವಧಿಯಲ್ಲಿ ಧರ್ಮನಿಂದನೆಗೆ ಸಂಬಂಧಿಸಿದ ಒಂದು ಸಾವಿರ ಪ್ರಕರಣಗಳು ಪಾಕಿಸ್ತಾನ ವೊಂದರಲ್ಲೇ ದಾಖಲಾಗಿವೆ. ಏಕೆ? ಈ ಬಗ್ಗೆ ನಂತರ ಗಮನಹರಿಸೋಣ. ಆದರೆ ಈಗ ತುಸು ಭಿನ್ನವಾದ ವಿಚಾರವನ್ನು ಗಮನಿಸೋಣ.

ತಮಗೆ ಲಭಿಸಿದ ಪ್ರಶಸ್ತಿಗಳನ್ನು ಕಲಾವಿದರು ಹಿಂದಿರುಗಿಸುತ್ತಿರುವ ವಿದ್ಯಮಾನದ ಬಗ್ಗೆ ಪ್ರಧಾನಿ ಸ್ಥಾನದಲ್ಲಿರುವವರು ಹೇಗೆ ಪ್ರತಿಕ್ರಿಯೆ ನೀಡಬೇಕು? ಕಲಾವಿದರು ಈ ರೀತಿ ಪ್ರತಿಭಟಿಸಲು ಕಾರಣವಾದ ಘಟನೆಯ ಬಗ್ಗೆ (ಗೋಮಾಂಸ ಸಂಗ್ರಹಿಸಿದ ಅನುಮಾನದ ಅಡಿ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದು) ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ನಿಜ. ಈ ಘಟನೆ ದುರದೃಷ್ಟಕರ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಕಲಾವಿದರ ಪ್ರತಿಭಟನೆಯನ್ನು ಪ್ರಧಾನಿಯವರು ಇದುವರೆಗೆ ನಿರ್ಲಕ್ಷಿಸಿದ್ದಾರೆ. ಅವರ ಮೌನಕ್ಕೆ ಕಾರಣಗಳಿವೆ. ದೇಶದಲ್ಲಿ ನಡೆಯುವ ಎಲ್ಲ ಘಟನೆಗಳಿಗೂ ಪ್ರಧಾನಿ ಪ್ರತಿಕ್ರಿಯಿಸಬೇಕಿಲ್ಲ ಎಂಬುದನ್ನು ನಾನುತ್ತೇನೆ.

ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಕಲಾ ವಿದರು ಸೋಗಲಾಡಿಗಳು ಎನ್ನುವ ಮಾತೂ ಇದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಾಗ ಅವರು ಪ್ರಶಸ್ತಿ ಹಿಂದಿರುಗಿಸಲಿಲ್ಲ ಎನ್ನುವವರು ಇದ್ದಾರೆ. ಕಲಾವಿದರಿಗೆ ಪ್ರಶಸ್ತಿ ಕೊಟ್ಟಿದ್ದು ಸರ್ಕಾರವಲ್ಲ, ಅಕಾಡೆಮಿ. ಇದು ಸರ್ಕಾರದ ಸಿದ್ಧಾಂತಗಳಿಂದ ಹೊರತಾಗಿರುವ ಅಥವಾ ಹೊರತಾಗಿರಬೇಕಾದ ಸಂಸ್ಥೆ. ಹಾಗಿರುವಾಗ, ಪ್ರಶಸ್ತಿಗಳನ್ನು ಹಿಂದಿರುಗಿಸುವುದು ಸರ್ಕಾರದ ವಿರುದ್ಧದ ಪ್ರತಿಭಟನೆ ಆಗದು, ಅದು ಅಕಾಡೆಮಿ ವಿರುದ್ಧದ ಪ್ರತಿಭಟನೆ ಆಗುತ್ತದೆ. ಕಲಾವಿದರ ಉದ್ದೇಶ ಇದಲ್ಲವಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.

ಪ್ರಶಸ್ತಿಗಳನ್ನು ಹಿಂದಿರುಗಿಸುವುದು ನಾಟ ಕೀಯ ಎಂಬುದು ನನ್ನ ಅನಿಸಿಕೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಪ್ರತಿಭಟಿಸಲು ಭಾರತೀಯ ಲೇಖಕರಿಗೆ ಹೆಚ್ಚು ಮಾರ್ಗಗಳು ಇಲ್ಲ. ಸಾಹಿತ್ಯ ಮತ್ತು ಕಲೆ ಪ್ರಬಲ ಸಂವಹನ ಮಾಧ್ಯಮಗಳಾದರೂ, ಅವು ತಕ್ಷಣದ ಪರಿಣಾಮ ಬೀರಲಾರವು. ಮಾಹಿತಿ ಪಡೆಯಲು ಓದುವಿಕೆಯನ್ನೇ ಬಹುವಾಗಿ ನೆಚ್ಚಿಕೊಂಡ ಸಮಾಜದಲ್ಲಿ ಬರಹದ ಮೂಲಕ ಪ್ರತಿಭಟಿಸಬಹುದು. 19ನೇ ಶತಮಾನದಲ್ಲಿ ರಷ್ಯಾದ ಲೇಖಕರು ಈ ಮಾರ್ಗ ಅನುಸರಿ ಸಿದರು. ಆದರೆ ಭಾರತೀಯ ಸಮಾಜದಲ್ಲಿ ಅಂತಹ ಸ್ಥಿತಿ ಇಲ್ಲ. ಟಿ.ವಿ. ಮತ್ತು ಇತರ ದೃಶ್ಯಮಾಧ್ಯಮಗಳ ಪ್ರಭಾವದ ಕಾರಣ ಜನ ಓದಿನ ಮೂಲಕವೇ ಎಲ್ಲ ಬಗೆಯ ಮಾಹಿತಿ ಪಡೆದು ಕೊಳ್ಳುವ ಕಾಲ ನಮ್ಮಲ್ಲಿ ಬರುವುದೂ ಇಲ್ಲ.

ನಮ್ಮ ಸಮಾಜ ಹಾಗೆ ಇದ್ದಿದ್ದರೆ, ಇಲ್ಲಿನ ಲೇಖಕರು ಅಧ್ಯಯನ ನಡೆಸಿ, ಪ್ರತಿಭಟನೆಯ, ಆಳವಾದ ಅರ್ಥಗಳನ್ನು ಹೊರಹೊಮ್ಮಿಸುವ ಬರಹ ಬರೆಯಬಹುದಿತ್ತು. ‘ಸರ್ಕಾರದ ಕ್ರಿಯೆ ಅಥವಾ ನಿಷ್ಕ್ರಿಯತೆ ನಮಗೆ ಎಷ್ಟು ಅಸಮಾ ಧಾನ ತಂದಿದೆಯೆಂದರೆ, ಸಮಾಜ ನೀಡಿದ ಗೌರವವೂ ಬೇಡ’ ಎಂದು ಹೇಳಲು ಲೇಖಕರು ಸಾಲುಗಟ್ಟಿ ನಿಂತಿದ್ದಾರೆ. (ಇದುವರೆಗೆ 40 ಅಥವಾ ಅದಕ್ಕಿಂತ ಹೆಚ್ಚು ಜನ ಪ್ರಶಸ್ತಿ ಹಿಂದಿರುಗಿಸಿದ್ದಾರೆ.) ನಾವೀಗ ಸೂಕ್ಷ್ಮವಾಗಿ ಗಮನಿಸಬೇಕಿರುವುದು ಈ ಆಯಾಮವನ್ನು.

ಸಮಾಜದಲ್ಲಿ ಸರ್ಕಾರ ನಡೆಸುತ್ತಿರುವ ಕೆಲವು ಚಟುವಟಿಕೆಗಳನ್ನು ಲೇಖಕರು ಪ್ರತಿಭಟಿ ಸುತ್ತಿದ್ದಾರೆ. ತಾವು ಬರೆಯುತ್ತಿದ್ದ, ಚಿತ್ರಿಸುತ್ತಿದ್ದ ಸಮಾಜದಲ್ಲಿ ಕಾಣುತ್ತಿರುವ ಬದಲಾವಣೆಗಳು ತಮ್ಮನ್ನು ವಿಚಲಿತಗೊಳಿಸಿವೆ ಎಂದು ಅವರು ಹೇಳುತ್ತಿದ್ದಾರೆ. ಪ್ರಶಸ್ತಿ ಹಿಂದಿರುಗಿಸುತ್ತಿರುವವರಲ್ಲಿ ಕೆಲವರು ಭಾರತೀಯ ಜನತಾ ಪಕ್ಷದ ಬಗ್ಗೆ ತಮಗಿರುವ ದ್ವೇಷದ ಕಾರಣ ಹೀಗೆ ಮಾಡುತ್ತಿದ್ದಾರೆ ಎಂದು ನಾವು ಹೇಳಿದರೂ, ಭಾರತದಲ್ಲಿ ಈಗಿರುವ ವಾತಾವರಣ ಬಹುಪಾಲು ಲೇಖಕರ ಹಾಗೂ ನಮ್ಮಲ್ಲಿ ಹಲವರ ಮನಸ್ಸಿನ ಆಳದಲ್ಲಿ ಚಿಂತೆ ಮೂಡಿಸಿದೆ ಎಂಬುದನ್ನು ನಿರಾಕರಿಸಲು ಆಗದು.

ಹೀಗಾಗಿ, ವಿದ್ಯಮಾನಗಳನ್ನು ಈ ದೃಷ್ಟಿ ಯಿಂದ ಕಂಡಾಗ, ‘ಕಲಾವಿದರು ಪ್ರಶಸ್ತಿ ಹಿಂದಿರುಗಿಸುತ್ತಿರುವುದು ರಾಜಕೀಯ ಉದ್ದೇಶ ದಿಂದ. ಅದೊಂದು ತೋರಿಕೆಯ ವ್ಯವಹಾರ’ ಎಂಬ ಮಾತುಗಳನ್ನಾಡಲು ಸಾಧ್ಯವಿಲ್ಲ. ಇಷ್ಟು ಅರ್ಥವಾದರೆ, ಲೇಖಕರ ಮೌನ ಬೇಡಿಕೆಗಳು   ಅಂದರೆ, ಪ್ರಧಾನಿ ಮೋದಿ  ಹಿಂದುತ್ವದ ಬೆಂಬಲಿಗರಿಗೆ ಬುದ್ಧಿ ಹೇಳಲಿ ಎಂಬ ಬೇಡಿಕೆ – ಎಷ್ಟು ಗಂಭೀರವಾಗಿವೆ ಎಂಬುದು ಗೊತ್ತಾಗುತ್ತದೆ.

ಭಾರತದ ಅತ್ಯಂತ ಪ್ರಭಾವಿ ಟಿ.ವಿ. ನಿರೂಪಕ ಅರ್ನಾಬ್ ಗೋಸ್ವಾಮಿ ಸೇರಿದಂತೆ ಮಾಧ್ಯಮ ಗಳಲ್ಲಿರುವ ಹಲವರು, ಪ್ರಶಸ್ತಿ ಹಿಂದಿರುಗಿ ಸುವಿಕೆಯನ್ನು ಪ್ರಚಾರದ ಗಿಮಿಕ್ ಎಂಬ ಅರ್ಥದಲ್ಲಿ ನೋಡುತ್ತಿದ್ದಾರೆ. ಇದು ಮೋದಿ ಪಾಲಿಗೆ ಒಂದು ಒಳ್ಳೆಯ ಸಂಗತಿ.

ಮೋದಿ ಅವರ ಮೌನದಿಂದಾಗಿ ದೇಶದ ಪ್ರತಿಷ್ಠೆಗೆ ತುಸು ಧಕ್ಕೆ ಬಂದಿದೆ. ಒಂದೆರಡು ದಿನಗಳ ಹಿಂದೆ ಲಂಡನ್‌ನಲ್ಲಿ ನನ್ನನ್ನು ಬಿಬಿಸಿ ವಾಹಿನಿಯವರು ಸಂದರ್ಶಿಸಿದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಏನೋ ಒಂದು ಬದಲಾವಣೆ ಆಗಿದೆ ಎಂದು ಅವರು ಭಾವಿಸಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ, ಸಾರ್ವಜನಿಕವಾಗಿ ಏಟು ತಿಂದು ಜನ ಸಾಯು ವುದು ನಮ್ಮ ದೇಶದಲ್ಲಿ ಹೊಸದೇನೂ ಅಲ್ಲ. ಆದರೆ, ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬ ಭಾವನೆ ಇದೆ. ಈ ಭಾವನೆ ಬೆಳೆಯು ತ್ತಿರುವ ಬಗ್ಗೆ ಮೋದಿ ಗಮನಹರಿಸಬೇಕಿದೆ. ಇಂಥ ವಿದ್ಯಮಾನಗಳಲ್ಲಿ ತಮ್ಮ ಮಧ್ಯಪ್ರವೇಶ ಬೇಕೇ ಬೇಡವೇ ಎಂಬುದನ್ನೂ ಅವರೇ ನಿರ್ಧರಿಸಬೇಕಿದೆ.

ಹಿಂದುತ್ವದ ಕಾರಣಕ್ಕೆ ನಡೆದ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಮೋದಿ ಯಾವತ್ತೂ ಮುಂದಾಗುವುದಿಲ್ಲ. ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೂ ಇಂಥ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಿದ್ದರು. ಭಾರತದಲ್ಲಿ ಯಾವತ್ತೂ ಆಗುವಂತೆ ಈ ವಿದ್ಯಮಾನ ಕೂಡ ತೆರೆಮರೆಗೆ ಸರಿಯುತ್ತದೆ. ಈ ವಿಚಾರದ ಬಗ್ಗೆ ಮಾತನಾಡುವುದೇ ಬೇಡ ಎಂದು ಮೋದಿ ಭಾವಿಸಿರಬಹುದು.

ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಈಗ ಮತ್ತೆ ಮರಳೋಣ. 1986ರಲ್ಲಿ ಕಾನೂನಿನಲ್ಲಿ ಬದಲಾವಣೆ ತಂದ ಪಾಕಿಸ್ತಾನ ಸರ್ಕಾರ, ಧರ್ಮನಿಂದನೆಗೆ ಮರಣದಂಡನೆ ಶಿಕ್ಷೆ ವಿಧಿಸಬಹುದು ಎಂದು ಹೇಳಿತು. ಇದು ಸಾಮಾಜಿಕ ಬದಲಾವಣೆಗೆ ಕಾರಣವಾಯಿತು. ಜನ ಅಸಹಿಷ್ಣುಗಳಾದರು. ಧರ್ಮನಿಂದನೆಯ ಆರೋಪದ ಅಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿಯಾಯಿತು.

ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಳ್ವಿಕೆಯಲ್ಲಿ ಭಾರತ ಬೆಂಕಿಯ ಜೊತೆ ಸರಸವಾಡುತ್ತಿದೆ. ಧರ್ಮನಿಂದನೆಗೆ ಮರಣ ದಂಡನೆ ನೀಡಬಹುದು ಎಂಬ ಕಾನೂನು ಬಂದ ನಂತರ ಪಾಕಿಸ್ತಾನೀಯರಿಗೆ ದೊರೆತ ಪ್ರಚೋದನೆಯ ಸ್ವರೂಪದಲ್ಲೇ, ಗೋಹತ್ಯೆ ವಿಚಾರದಲ್ಲಿ ಭಾರತೀಯರಿಗೆ ಪ್ರಚೋದನೆ ದೊರೆತಿದೆ. ಸೃಜನಶೀಲರ ಕಳವಳಕ್ಕೆ ಮೋದಿ ಸ್ಪಂದಿಸು ತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಹಿಂದುತ್ವ ಸಿದ್ಧಾಂತದ ವಿಸ್ತೃತ ಸಾಂಸ್ಕೃತಿಕ ಪ್ರಭಾವದ ಬಗ್ಗೆ ಗಮನಹರಿಸಬೇಕಾದ ಸ್ಥಿತಿ ಮೋದಿ ಅವರಿಗೆ ಇಂದಲ್ಲ ನಾಳೆ ಬರುತ್ತದೆ. ಅಭಿವೃದ್ಧಿ ಮತ್ತು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ಹಿಂದುತ್ವ ಸಹಾಯ ಮಾಡುತ್ತಿದೆಯೇ ಎಂಬುದನ್ನೂ ಅವರು ಆಗ ಪರಿಶೀಲಿಸಲೇಬೇಕಾಗುತ್ತದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT