ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಕೆ ಗ್ರೂವ್‌ಝ್ ಬಿಟಿಎಚ್‌ಎಸ್800 ಹೆಡ್‌ಫೋನ್: ಸಂಗೀತಕ್ಕೆ ಎರಡು ದಾರಿ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೆಡ್‌ಫೋನ್ ಮತ್ತು ಇಯರ್‌ಫೋನ್‌ಗಳ ಲೋಕದಲ್ಲಿ ಅಷ್ಟೇನೂ ಪ್ರಖ್ಯಾತವಲ್ಲದ ಹೆಸರು ಎಸ್‌ಟಿಕೆ. ಈ ಬ್ರಿಟಿಷ್ ಮೂಲದ ಕಂಪೆನಿ ಜಗತ್ತಿನ ಬಹುಪಾಲು ಎಲೆಕ್ಟ್ರಾನಿಕ್ ಕಂಪೆನಿಗಳಂತೆ ತನ್ನ ಉತ್ಪನ್ನಗಳ ವಿನ್ಯಾಸವನ್ನು ತಾನೇ ಮಾಡಿ ಅವುಗಳ ತಯಾರಿಯನ್ನು ಮಾತ್ರ ಚೈನಾ ದೇಶಕ್ಕೆ ಹೊರಗುತ್ತಿಗೆ ನೀಡಿದೆ. ಇದೇ ಕಂಪೆನಿಯ ಒಂದು ಝಿಪ್ ಮಾಡಬಹುದಾದ ಇಯರ್‌ಬಡ್‌ನ ವಿಮರ್ಶೆಯನ್ನು ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ನೀಡಲಾಗಿತ್ತು. ಈ ಸಲ ಒಂದು ಹೆಡ್‌ಫೋನ್ ನಮ್ಮ ಅತಿಥಿ. ಅದುವೇ ಎಸ್‌ಟಿಕೆ ಗ್ರೂವ್‌ಝ್ ಬಿಟಿಎಚ್‌ಎಸ್800 ಬ್ಲೂಟೂತ್ ಹೆಡ್‌ಫೋನ್ (BTHS800 Groovez Bluetooth Headphones).

ಗುಣವೈಶಿಷ್ಟ್ಯಗಳು
ಕಿವಿಯ ಹೊರಗಡೆ ಕುಳಿತುಕೊಳ್ಳುವ ದೊಡ್ಡ ಹೆಡ್‌ಫೋನ್, ಬ್ಲೂಟೂತ್ ಆವೃತ್ತಿ 4.0 ಹೆಡ್‌ಫೋನ್, 2.480GHz, 88 ಡೆಸಿಬೆಲ್, A2DP ಮತ್ತು AVRCP ಪ್ರೋಟೋಕಾಲ್‌ಗಳು, 3.5 ಮಿ.ಮೀ. ಇಯರ್‌ಫೋನ್ ಕೇಬಲ್ ಸಂಪರ್ಕ ಕಿಂಡಿ, ಚಾರ್ಜಿಂಗ್‌ಗೆ ಮೈಕ್ರೋಯುಎಸ್‌ಬಿ ಕೇಬಲ್ ಕಿಂಡಿ, ಒಮ್ಮೆ ಪೂರ್ತಿ ಚಾರ್ಜ್ ಆದರೆ ಸುಮಾರು 8 ಗಂಟೆ ಬಳಸಬಹುದು, 250 ಗ್ರಾಂ ತೂಕ, ಆನ್/ಆಫ್, ಪ್ಲೇ/ಪಾಸ್, (Play/Pause), ಮುಂದಿನ ಹಾಡು/ಹಿಂದಿನ ಹಾಡು, ವಾಲ್ಯೂಮ್ ಹೆಚ್ಚು/ಕಡಿಮೆ ಇತ್ಯಾದಿಗಳಿಗೆ ಬಟನ್, ಬ್ಲೂಟೂತ್ ಮತ್ತು ನೇರವಾಗಿ ಕೇಬಲ್ ಮೂಲಕ ಅಂದರೆ ಎರಡು ರೀತಿಯಲ್ಲಿ ಜೋಡಿಸಬಹುದಾದ ವಿನ್ಯಾಸ, ಇತ್ಯಾದಿ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. ಬೆಲೆ ಸುಮಾರು ₹3,000.

ಬ್ಲೂಟೂತ್ ಮೂಲಕ ಮಾತ್ರವಲ್ಲದೆ ಕೇಬಲ್ ಮೂಲಕವೂ ಜೋಡಿಸಬಹುದು ಎಂಬುದು ಇದರ ಪ್ರಮುಖ ಆಕರ್ಷಣೆ. ನೇರವಾಗಿ ಕೇಬಲ್ ಮೂಲಕ ಜೋಡಿಸಿದರೆ ಇದರಲ್ಲಿರುವ ಆನ್/ಆಫ್ ಬಟನ್ ಅನ್ನು ಆಫ್ ಮಾಡಬಹುದು. ಆಗ ಇದರಲ್ಲೇ ಅಡಕವಾಗಿರುವ ಬ್ಯಾಟರಿ ಬಳಕೆ ಆಗುವುದಿಲ್ಲ. ಅಂದರೆ ನೀವು ಬ್ಲೂಟೂತ್ ಮೂಲಕ ಆಲಿಸಿ ಕೊನೆಗೊಮ್ಮೆ ಬ್ಯಾಟರಿ ಮುಗಿದಾಗ ನೇರವಾಗಿ ಕೇಬಲ್ ಮೂಲಕ ಜೋಡಿಸಿ ಬಳಸಬಹುದು. ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಸಂಪರ್ಕಿಸಿದಾಗ ಹಾಡನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು, ಪುನಃ ಮುಂದುವರಿಸುವುದು, ಮುಂದಿನ ಅಥವಾ ಹಿಂದಿನ ಹಾಡನ್ನು ಪ್ಲೇ ಮಾಡುವುದು ಇತ್ಯಾದಿ ಎಲ್ಲ ಮಾಡಬಹುದು.

ವಾಲ್ಯೂಮ್ ಹೆಚ್ಚು ಕಡಿಮೆ ಕೂಡ ಮಾಡಬಹುದು. ಕೇಬಲ್ ಮೂಲಕ ಜೋಡಿಸಿದಾಗ ಇದೆಲ್ಲ ಸಾಧ್ಯವಿಲ್ಲ. ಇದರ ಜೊತೆ ನೀಡಿರುವ 3.5 ಮಿ.ಮೀ. ಇಯರ್‌ಫೋನ್ ಕೇಬಲ್ ಪಟ್ಟಿಯಾಕಾರದಲ್ಲಿದೆ. ಆದುದರಿಂದ ಸುಕ್ಕುಹಾಕಿಕೊಳ್ಳುವ ಪ್ರಶ್ನೆ ಇಲ್ಲ.

ತಲೆಯ ಮೇಲೆ ಬರುವ ಪಟ್ಟಿ ದಪ್ಪಗೆ ಇದ್ದು, ಅದರಲ್ಲಿ ತಲೆಗೆ ಒತ್ತಿ ನೋವಾಗದಂತೆ ಮೆತ್ತನೆಯ ಕುಶನ್ ಇದೆ. ನಿಮ್ಮ ತಲೆಯ ಗಾತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬಹುದು. ಈ ಹೆಡ್‌ಫೋನನ್ನು ಮಡಚಬಹುದು. ಹಾಗೆ ಮಡಚಿದ ನಂತರ ಇಟ್ಟುಕೊಳ್ಳಲು ಒಂದು ದೀರ್ಘವೃತ್ತಾಕಾರದ, ಝಿಪ್ ಹಾಕಬಹುದಾದ, ಒಳ್ಳೆ ಗುಣಮಟ್ಟದ ಚಿಕ್ಕ ಪೆಟ್ಟಿಗೆ ನೀಡಿದ್ದಾರೆ. ಅಷ್ಟಲ್ಲದೆ ಈ ಪೆಟ್ಟಿಗೆಯನ್ನು ನೇತುಹಾಕಲು ಒಂದು ಕೊಂಡಿಯನ್ನೂ ನೀಡಿದ್ದಾರೆ.

ಹೆಡ್‌ಫೋನ್ ಕಿವಿ ಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆ. ಆದರೆ ಅತಿ ದೊಡ್ಡ ಗಾತ್ರದ್ದಲ್ಲ. ಸ್ಪೀಕರ್‌ನ ಮೇಲೆ ಅಗತ್ಯದ ಎಲ್ಲ ಬಟನ್‌ಗಳಿವೆ. ಬಲ ಕಿವಿಯ ಮೇಲೆ ಇರುವ ಪ್ಲೇ/ಪಾಸ್ ಬಟನ್ ಕರೆ ಬಂದಾಗ ಕರೆ ಸ್ವೀಕರಿಸುವ ಕೆಲಸವನ್ನೂ ಮಾಡುತ್ತದೆ.

ಈಗ ಮುಖ್ಯವಾದ ವಿಷಯದ ಕಡೆಗೆ ಗಮನ ಹರಿಸೋಣ. ಈ ಹೆಡ್‌ಫೋನಿನ ಬಗ್ಗೆ ಇರುವ ಜಾಲತಾಣದಲ್ಲಿ ಅದರ ಕಂಪನಾಂಕ ವ್ಯಾಪ್ತಿ (frequency response range) ಬಗ್ಗೆ ಏನೂ ಮಾಹಿತಿ ಇಲ್ಲ. ವಾದ್ಯ ಸಂಗೀತವನ್ನು ಹಾಗೂ ಗಾಯನವನ್ನು ಆಲಿಸುವಾಗ ಎಲ್ಲ ಧ್ವನಿಗಳ ಪುನರುತ್ಪತ್ತಿಯಲ್ಲಿ ಏನೂ ಕೊರತೆ ಕಾಣಿಸಲಿಲ್ಲ. ಧ್ವನಿಯ ಮೂರು ಆಯಾಮಗಳ ಪರಿಣಾಮವೂ ಚೆನ್ನಾಗಿಯೇ ಇದೆ. ಮೈಕ್ರೋಫೋನಿನ ಮೂಲಕ ಮಾತನಾಡುವಾಗ ಕೇಳುವವರಿಗೆ ಧ್ವನಿಯಲ್ಲಿ ಯಾವುದೇ ಕೊರತೆ ಅನುಭವಕ್ಕೆ ಬರುವುದಿಲ್ಲ. ನೀಡುವ ಹಣಕ್ಕೆ ಈ ವಿಷಯದಲ್ಲಿ ಏನೂ ಕೊರತೆಯಿಲ್ಲ.

ಈ ಹೆಡ್‌ಫೋನಿನ ಬ್ಲೂಟೂತ್ ಸಂಪರ್ಕ ಸಾಧನೆಯಲ್ಲಿ ಸ್ವಲ್ಪ ತೊಡಕಿದೆ. ಮೊಬೈಲ್ ಫೋನ್ ಜೊತೆ ಸ್ವಲ್ಪ ಕುಸ್ತಿ ಮಾಡಿದ ನಂತರ ಸಂಪರ್ಕ ಆಗುತ್ತದೆ. ಒಮ್ಮೆ ಸಂಪರ್ಕ ಸಾಧಿಸಿದ ನಂತರ ಎಲ್ಲ ನಿಯಂತ್ರಣಗಳು (ಮುಂದಿನ ಹಾಡು, ಹಿಂದಿನ ಹಾಡು, ವಾಲ್ಯೂಮ್, ಕರೆ ಸ್ವೀಕಾರ, ಇತ್ಯಾದಿ) ಸರಿಯಾಗಿ ಕೆಲಸ ಮಾಡುತ್ತವೆ. ಆದರೆ ವಿಂಡೋಸ್ 8.1 ಗಣಕದ ಜೊತೆ ಬ್ಲೂಟೂತ್ ಸಂಪರ್ಕ ಸಾಧಿಸಲು ನನಗೆ ಸಾಧ್ಯವಾಗಲಿಲ್ಲ. ಕೇಬಲ್ ಮೂಲಕ ಹೇಗಿದ್ದರೂ ಬಳಸಬಹುದು. ಇದೊಂದು ವಿಷಯದ ಕಡೆಗೆ ಅವರು ಸ್ವಲ್ಪ ಗಮನ ನೀಡಿದರೆ ಒಳ್ಳೆಯದು.

ವಾರದ ಆಪ್ (app)
ಫೇಕ್ ಜಿಪಿಎಸ್ ಲೊಕೇಶನ್  
ನೀವು ಮಂಗಳೂರಿನಲ್ಲಿದ್ದೀರಿ. ಆದರೆ ಸುಮ್ಮನೆ ನಿಮ್ಮ ಸ್ನೇಹಿತರನ್ನು ಸ್ವಲ್ಪ ಮೂರ್ಖರನ್ನಾಗಿಸ ಬೇಕೆಂದುಕೊಂಡಿದ್ದೀರಿ. ಏಪ್ರಿಲ್ 1ರಂದೇ ಇದನ್ನು ಮಾಡಬೇಕೆಂದೇನೂ ಇಲ್ಲ. ಉದಾಹರಣೆಗೆ ನೀವು ದಕ್ಷಿಣ ಅಮೆರಿಕದ ವೆನೆಝುವಲಾ ದೇಶದಲ್ಲಿರುವ ಪ್ರಪಂಚದ ಅತ್ಯಂತ ಎತ್ತರದ ಜಲಪಾತವಾದ ಏಂಜೆಲ್ ಫಾಲ್ಸ್ ಮುಂದೆ ನಿಂತುಕೊಂಡಿದ್ದೀರೆಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಬೇಕೆಂದುಕೊಂಡಿದ್ದೀರಿ. ಈ (Fake GPS location) ಆಪ್ ಅದಕ್ಕೆ ನಿಮಗೆ ಸಹಾಯ ಮಾಡುತ್ತದೆ. ಯಾವ ಸ್ಥಳದಲ್ಲಿದ್ದೀರೆಂದುಕೊಂಡಿದ್ದೀರೋ ಆ ಸ್ಥಳವನ್ನು ಆಯ್ಕೆಮಾಡಿಕೊಂಡು ಅದನ್ನು ನಿಮ್ಮ ಸದ್ಯದ ಸ್ಥಳವನ್ನಾಗಿಸಿ. ನಂತರ ಸ್ಥಳಾಧಾರಿತ ಯಾವುದೇ ಸವಲತ್ತಿನ ಆಪ್‌ನಲ್ಲಿ ನೀವು ಈ ಸುಳ್ಳು ಸ್ಥಳವನ್ನು ಬಳಸಬಹುದು. ಉದಾಹರಣೆಗೆ ಏಂಜೆಲ್ ಫಾಲ್ಸ್ ಮುಂದೆ ನಿಂತು ಆನಂದಿಸುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಬಹುದು.

ಗ್ಯಾಜೆಟ್ ಸುದ್ದಿ
ವಿಂಡೋಸ್ ಫೋನ್‌ಗೆ ಕೊರ್ಟಾನಾ

ಹಾಲೋ ಆಟ ಆಡಿದವರಿಗೆ ಕೊರ್ಟಾನಾ ಗೊತ್ತಿರಬಹುದು. ಅದೊಂದು ಕೃತಕ ಬುದ್ಧಿಮತ್ತೆಯ ವ್ಯಕ್ತಿ. ಈಗ ಅದೇ ಹೆಸರಿನ ಸೌಲಭ್ಯವೊಂದು ಮೈಕ್ರೋಸಾಫ್ಟ್ ವಿಂಡೋಸ್ ಫೋನಿಗೆ ಬಂದಿದೆ. ಇದು ಧ್ವನಿಯ ಮೂಲಕ ಆದೇಶಗಳನ್ನು ಸ್ವೀಕರಿಸಿ ಅದನ್ನು ಪಾಲಿಸುವುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದು, ಅಗತ್ಯ ಸಹಾಯ ನೀಡುವುದು ಎಲ್ಲ ಮಾಡುತ್ತದೆ. ಅಥವಾ ಹಾಗೆಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ. ಇದು ಈಗ ತಂತ್ರಾಂಶ ತಜ್ಞರಿಗೆ ಮಾತ್ರ ಲಭ್ಯವಿದೆ. ಜನಸಾಮಾನ್ಯ ಬಳೆಕದಾರರಿಗೆ ಸದ್ಯ ಲಭ್ಯವಿಲ್ಲ. ಇಂತಹ ಸವಲತ್ತು ಆಪಲ್ ಐಫೋನ್‌ ಮತ್ತು ಆಂಡ್ರಾಯ್ಡ್‌‌ ಫೋನ್‌ಗಳಿಗೆ ಈಗಾಗಲೆ ಲಭ್ಯವಿದೆ.


ಗ್ಯಾಜೆಟ್ ತರ್ಲೆ
ಮೈಕ್ರೋಸಾಫ್ಟ್‌ನ ಕೊರ್ಟಾನ, ಐಫೋನ್‌ನ ಸಿರಿ ಮತ್ತು ಗೂಗ್ಲ್ ಆಂಡ್ರಾಯ್ಡ್‌‌ನ ಗೂಗ್ಲ್ ನೌ ಎಲ್ಲ ಒಂದೇ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳಿಗೆ ಧ್ವನಿಯ ಮೂಲಕ ಆದೇಶ ನೀಡಿದರೆ ಅವು ಉತ್ತರಿಸುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಫೋನಿಗೆ ಧ್ವನಿಯ ಮೂಲಕ ಆದೇಶ ನೀಡಿದರೆ ಅದು ಉತ್ತರಿಸುತ್ತದೆ ತಾನೆ? ಹಾಗೆ ಮಾಡಿ ಅದನ್ನು ಉಳಿದ ಎರಡು ಫೋನ್‌ಗಳ ಪಕ್ಕ ಇಟ್ಟರೆ? ಆಗ ನೀವು ಮಜಾ ನೋಡಬಹುದು. ಪ್ರತಿಯೊಂದು ಫೋನೂ ತಾನು ಕೇಳಿಸಿಕೊಂಡ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತದೆ. ಅದಕ್ಕೆ ಇನ್ನೊಂದು ಫೋನ್ ಉತ್ತರಿಸಲು ಪ್ರಯತ್ನಿಸುತ್ತದೆ. ಹೀಗೆ ತಯಾರಿಸಿದ ಒಂದು ವಿಡಿಯೊ ಅಂತರಜಾಲತಾಣ ಒಂದರಲ್ಲಿ (bitly.com/matanadu) ವೀಕ್ಷಿಸಲು ಲಭ್ಯವಿದೆ.

ಗ್ಯಾಜೆಟ್ ಸಲಹೆ
ಶ್ರೀನಿವಾಸ ಅವರ ಪ್ರಶ್ನೆ: ನಿಮ್ಮ ಹಿಂದಿನ ಲೇಖನವೊಂದರಲ್ಲಿ ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ಗಳಲ್ಲಿ ಆಂಡ್ರಾಯ್ಡ್‌‌ಕಾರ್ಯಾಚರಣೆ ಅಷ್ಟು ಚೆನ್ನಾಗಿರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಿರಿ. ಇದರ ಬದಲು ಆಂಡ್ರಾಯ್ಡ್‌‌ ಇರುವ ನೋಕಿಯಾ ಸೆಟ್ ಉತ್ತಮವೇ?

ಉ: ಆಂಡ್ರಾಯ್ಡ್‌‌ ಇರುವ ನೋಕಿಯಾ ಎಕ್ಸ್ ಫೋನ್ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು (17-04-2014). ಅದನ್ನು ಓದಿ. ಅತಿ ಕಡಿಮೆ ಬೆಲೆಯ ಆಂಡ್ರಾಯ್ಡ್‌‌ಫೋನ್‌ಗಳ ಸಮಸ್ಯೆಗಳು –ಅವು ಅಷ್ಟು ವೇಗವಾಗಿ ಕೆಲಸ ಮಾಡುವುದಿಲ್ಲ, ಅವುಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುವುದಿಲ್ಲ, ಅವುಗಳನ್ನು ತಯಾರಿಸುವ ಕಂಪೆನಿಗಳ ಗ್ರಾಹಕ ಸೇವೆ ಬಗ್ಗೆ ಉತ್ತಮ ಅಭಿಪ್ರಾಯಗಳಿಲ್ಲ, ಇತ್ಯಾದಿ. ಆದುದರಿಂದ ₹6,000 ಒಳಗೆ ನೀವು ಆಂಡ್ರಾಯ್ಡ್‌‌ ಫೋನ್ ಕೊಳ್ಳುವ ಬದಲು ನೋಕಿಯಾ ಆಶಾ (501/502) ಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT