ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗದ ನೀರನ್ನೆತ್ತಿ ಜೋಗಕ್ಕೇ ಚೆಲ್ಲುವ ಗಾಥೆ

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜುಳುಜುಳು ಹರಿಯುವ ನೀರನ್ನು ಸುಮ್ಮನೆ ನೆನಪಿಸಿಕೊಂಡರೂ ಸಾಕು, ಈ ದಿನಗಳಲ್ಲಿ ಮನಸ್ಸು ಪ್ರಫುಲ್ಲಿತವಾಗುತ್ತದೆ. ಎತ್ತರದಿಂದ ಜಲಧಾರೆಯೊಂದು ನಿರಂತರ ಬೀಳುತ್ತಿದ್ದರಂತೂ ಅದು ಪುಳಕದ ಸಂಗತಿ. ಇನ್ನು 250 ಮೀಟರ್ ಎತ್ತರದಿಂದ ಧುಮುಕುವ ಧಾರೆ ಹೇಗಿದ್ದೀತು?

ಹಿಂದೊಂದು ಕಾಲದಲ್ಲಿ ಜೋಗ ಜಲಪಾತದಿಂದ ವರ್ಷವಿಡೀ ನೀರು ಧುಮುಕುತ್ತಿತ್ತು. ಕಡು ಬೇಸಿಗೆಯಲ್ಲಿ ರಾಜಾ-ರಾಣಿ ಬಾಣದ ಧಾರೆಯ ಅಬ್ಬರ ಕಡಿಮೆಯಾದರೂ ಪ್ರವಾಸಿಗಳು ನಿರಾಶರಾಗುತ್ತಿರಲಿಲ್ಲ. ಅವೆಲ್ಲ ೬೦ರ ದಶಕದವರೆಗಿನ ವೈಭವ ಅಷ್ಟೆ. ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ ಮೇಲೆ ಜೋಗಧ ಧಾರೆ ನಿಂತಿತು. ಮಳೆಗಾಲದಲ್ಲಿ ಮಾತ್ರ ಅದು ಮತ್ತೆ ಮೈದುಂಬಿ ರಸಿಕರ ಮನ ಸೂರೆಗೊಳ್ಳುತ್ತಿತ್ತು. ಅಂಥ ವೈಭವ ಜೋಗಕ್ಕೆ ಮತ್ತೆ ಲಭಿಸಬೇಕು, ಅಲ್ಲಿ  ವರ್ಷವಿಡೀ ನೀರು ಧುಮುಕುವಂತೆ ಮಾಡಬೇಕು ಎಂದು ಹದಿನೈದು ವರ್ಷಗಳ ಹಿಂದೆ ಪ್ರಸ್ತಾವನೆ ಬಂದಿತ್ತು. ‘ಜೋಗ ನಿರ್ವಹಣಾ ಪ್ರಾಧಿಕಾರ’ (ಜೆಎಮ್‌ಎ) ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹೊರಟಿತು. ಅದು ಅಂಥ ಕ್ಲಿಷ್ಟವಾದ ಕೆಲಸವೇನೂ ಆಗಿರಲಿಲ್ಲ.

ಲಿಂಗನಮಕ್ಕಿ ಅಣೆಕಟ್ಟಿನಿಂದ ಹಗಲಿನ ವೇಳೆ ತುಸು ನೀರು ಬಿಟ್ಟಿದ್ದರೂ ಸಾಕಿತ್ತು. ಆದರೆ ವಿದ್ಯುತ್ ಶಕ್ತಿಗೆ ಅಷ್ಟೊಂದು ಬೇಡಿಕೆ ಇರುವಾಗ ಅಣೆಕಟ್ಟೆಯ ನೀರನ್ನು ಜಲಪಾತಕ್ಕೆ ಹರಿಬಿಡುವುದೆ? ಕೆಪಿಸಿ ಸಹಕರಿಸಲಿಲ್ಲ. ಅದಕ್ಕೇ ಬದಲೀ ಉಪಾಯಗಳ ಬಗ್ಗೆ ಚಿಂತನೆ ನಡೆಯಿತು. ವಿದ್ಯುತ್ ಉತ್ಪಾದಿಸಿದ ನಂತರದ ನೀರನ್ನೇ ಮತ್ತೆ ಮೇಲಕ್ಕೆ ಪಂಪ್ ಮಾಡಿ ಜೋಗದ ಮೂಲಕ ಧುಮುಕಿಸುವ ಯೋಜನೆಯೊಂದು ರೂಪಿತವಾಯಿತು.  ಬೆಂಗಳೂರಿನ ಬಿಎಮ್‌ಎಸ್ ಕಾಲೇಜಿನ ಖ್ಯಾತ ಎಂಜಿನಿಯರ್ ಎಚ್.ಆರ್. ವಿಶ್ವನಾಥ್ 2002ರಲ್ಲೇ ಅದಕ್ಕೊಂದು ನೀಲನಕ್ಷೆಯನ್ನೂ ಬರೆದರು. ಅಂತರರಾಷ್ಟ್ರೀಯ ಖ್ಯಾತಿಯ ಮೆಕಾನ್, ಎಲ್ ಅಂಡ್ ಟಿ ಮತ್ತು ಕೆಪಿಸಿಯ ಎಂಜಿನಿಯರ್‌ಗಳೆಲ್ಲ ಮರುವರ್ಷವೇ ಸ್ಥಳ ಸಮೀಕ್ಷೆ ನಡೆಸಿದರು. 220 ಕೋಟಿ ರೂಪಾಯಿಗಳ
ಆಗಿನ ಯೋಜನೆ ಹನ್ನೆರಡು ವರ್ಷಗಳ ಕಾಲ ನೆನೆಗುದಿಗೆ ಬಿದ್ದು ಎದ್ದು ಅಂತೂ ಈಗ ಅದು 350 ಕೋಟಿ ರೂಪಾಯಿಗಳ ಬಲಿಷ್ಠ ಯೋಜನೆಯಾಗಿ ಅನುಷ್ಠಾನಕ್ಕೆ ಬರಲು ಅಣಿಯಾಗುತ್ತಿದೆ.

ಕೆಳಕ್ಕೆ ಬಿದ್ದ ನೀರನ್ನು ಮೇಲಕ್ಕೆತ್ತಿ ಮತ್ತೆ ಧುಮುಕಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಅನೇಕ ದೇಶಗಳಲ್ಲಿ ಜಾರಿಯಲ್ಲಿದೆ. ನೀರು ಕೆಳಕ್ಕೆ ಬೀಳುವಾಗ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಟರ್ಬೈನ್‌ಗಳನ್ನೇ ಮತ್ತೆ ಉಲ್ಟಾ ತಿರುಗುವಂತೆ ಮಾಡಿ ಅದೇ ನೀರನ್ನು ಮತ್ತೆ ಮೇಲಕ್ಕೆ ಎತ್ತಬಹುದು. ಅಂಥ ವ್ಯವಸ್ಥೆಗೆ ‘ರಿವರ್ಸ್ ಪಂಪಿಂಗ್’ ಎನ್ನುತ್ತಾರೆ. ಅದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ. ಏಕೆಂದರೆ ನೀರನ್ನು ಮೇಲಕ್ಕೆ ಎತ್ತಲಿಕ್ಕೆ ಅಷ್ಟೂ ಶಕ್ತಿ ವಿನಿಯೋಗವಾಗಿರುತ್ತದೆ.

ಶೇಕಡಾ 20ರಷ್ಟು ಜಾಸ್ತಿಯೇ ವ್ಯಯವಾಗುತ್ತದೆ. ಆದರೂ ಸಂಜೆ ಮತ್ತು ಮುಂಜಾನೆ ವಿದ್ಯುತ್ ಶಕ್ತಿ ಜಾಸ್ತಿ ಬೇಡಿಕೆ ಇದ್ದಾಗ ಈ ವ್ಯವಸ್ಥೆಯನ್ನು ಕೆಲವೆಡೆ ಜಾರಿಗೆ ತರುತ್ತಾರೆ. ನಡುರಾತ್ರಿ ಅಥವಾ ನಡುಹಗಲಲ್ಲಿ ವಿದ್ಯುತ್ ಬೇಡಿಕೆ ಕಮ್ಮಿ ಇದ್ದಾಗ ನೀರನ್ನು ಕೆಳಗಿನಿಂದ ಮೇಲಕ್ಕೆ ಎತ್ತಿ ಜಲಾಶಯಕ್ಕೆ ತುಂಬುತ್ತಾರೆ. ಬೇಡಿಕೆ ಜಾಸ್ತಿ ಇದ್ದಾಗ ಮತ್ತೆ ಧುಮುಕಿಸಿ ವಿದ್ಯುತ್ ಉತ್ಪಾದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರುತ್ತಾರೆ. 

ಜಲವಿದ್ಯುತ್ ಶಕ್ತಿಯ ಒಂದು ಅನುಕೂಲ ಏನೆಂದರೆ ಈ ಕ್ಷಣಕ್ಕೆ ವಿದ್ಯುತ್ ಬೇಕೆಂದರೂ ನೀರನ್ನು ಕೊಳವೆಯ ಮೂಲಕ ಧುಮುಕಿಸಿ ಎರಡೇ ನಿಮಿಷಗಳಲ್ಲಿ ಉತ್ಪಾದನೆ ಆರಂಭಿಸಬಹುದು. ಕಲ್ಲಿದ್ದಲಿನಿಂದ ಹೀಗೆ ದಿಢೀರ್ ಉತ್ಪಾದನೆ ಸಾಧ್ಯವಿಲ್ಲ ಏಕೆಂದರೆ ನೀರನ್ನು ಕುದಿಸಬೇಕು, ಅದರ ಆವಿಯಿಂದ ಟರ್ಬೈನನ್ನು ತಿರುಗಿಸಬೇಕು. ಏಳೆಂಟು ಗಂಟೆಗಳ ಸುದೀರ್ಘ ಕಾರ್ಯಾಚರಣೆ ಅದು. ಪರಮಾಣು ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ ಆರಂಭಿಸಲು ವಾರಗಳೇ ಬೇಕು.

ಜಲವಿದ್ಯುತ್ತಿನಿಂದ ಹೀಗೆ ಕ್ಷಿಪ್ರ ಉತ್ಪಾದನೆ ಸಾಧ್ಯವೆಂದೇ ಯುರೋಪಿನ ಅನೇಕ ದೇಶಗಳಲ್ಲಿ ರಿವರ್ಸ್ ಪಂಪಿಂಗ್ ನಡೆಯುತ್ತಿರುತ್ತದೆ. ಇಟಲಿ ಮತ್ತು ಸ್ವಿತ್ಸರ್ಲೆಂಡ್ ದೇಶಗಳಲ್ಲಿ 1890ರಲ್ಲೇ ಇಂಥ ತಂತ್ರದಿಂದ ಜಲಾಶಯಗಳಿಗೆ ನೀರನ್ನು ತುಂಬಿಸುತ್ತಿದ್ದರು (ಆಗಿನ್ನೂ ನಮ್ಮ ದೇಶದಲ್ಲಿ ಜಲವಿದ್ಯುತ್ ಉತ್ಪಾದನೆ ಆಗಿರಲೇ ಇಲ್ಲ. 1903ರಲ್ಲಿ  ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಿದ್ದು ಏಷ್ಯದಲ್ಲೇ ಮೊದಲ ಸಾಹಸವೆಂಬ ಶ್ಲಾಘನೆಗೆ ಪಾತ್ರವಾಗಿದೆ). ಈಗಂತೂ ಅಮೆರಿಕ,ಚೀನಾ, ಜಪಾನ್‌ಗಳಲ್ಲಿ ಹೀಗೆ ‘ಕೆರೆಯ ನೀರನು ಕೆರೆಗೇ ಚೆಲ್ಲಿ’ ವಿದ್ಯುತ್ ಉತ್ಪಾದಿಸುವ ನೂರಾರು ಘಟಕಗಳು ಕೆಲಸ ಮಾಡುತ್ತಿವೆ. ತೆಲಂಗಾಣ ಮತ್ತು ಆಂಧ್ರದ ಗಡಿಯಲ್ಲಿ ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಹೀಗೇ ನೀರನ್ನು ಮೇಲೆತ್ತಿ ಶ್ರೀಶೈಲಂ ಅಣೆಕಟ್ಟೆಗೆ ಮರುಪೂರಣ ಮಾಡುವ ಯೋಜನೆಯೊಂದು ಸಿದ್ಧವಾಗಿತ್ತು. ಆದರೆ ಎರಡು ರಾಜ್ಯಗಳ ಜಗಳದಲ್ಲಿ ಅದು ಕಾರ್ಯಗತವಾಗಲಿಲ್ಲ.

ಜೋಗದ ವಿಶೇಷ ಬೇರೆಯೇ ಇದೆ. ಅಲ್ಲಿ ಅಂಥ ರಿವರ್ಸ್ ಪಂಪಿಂಗ್ ಯೋಜನೆ ಜಾರಿಗೆ ಬಂದರೆ ಅದೊಂದು ಹೊಸ ಬಗೆಯ ವಿಕ್ರಮವಾಗುತ್ತದೆ. ಏಕೆಂದರೆ ಇದೇ ಮೊದಲ ಬಾರಿಗೆ ಜಲಪಾತದ ಮರುಸೃಷ್ಟಿಗೆ ನೀರಿನ ಬಳಕೆಯಾಗುತ್ತದೆ. ಮೇಲೆ ಬಂದ ನೀರು ಮತ್ತೆ ಪೈಪಿನೊಳಗೆ ನುಸುಳಿ ವಿದ್ಯುತ್ ಉತ್ಪಾದಿಸುವ ಬದಲು ಶರಾವತಿಯ ಕಲ್ಲು ಕೊರಕಲಿನಲ್ಲಿ ಧುಮುಕಿ ಮನಮೋಹಕ ದಬದಬೆಯನ್ನು ನಿರ್ಮಿಸುತ್ತದೆ. ಇದರ ಎಂಜಿನಿಯರಿಂಗ್ ವಿವರಗಳು ಸರಳವಾಗಿವೆ: ಶರಾವತಿಯ ಆಳ ಕಣಿವೆಯಲ್ಲಿ ಮಹಾತ್ಮಾಗಾಂಧಿ ವಿದ್ಯುದಾಗಾರದಿಂದ ನೀರು ಹೊರಕ್ಕೆ ಬಂದು ಕೊಳ್ಳಕ್ಕೆ ಕೂಡುವಲ್ಲಿ ಒಂದು ಅಡ್ಡಗಟ್ಟೆ ನಿರ್ಮಿಸಿ ಅಲ್ಲಿ ರಿವರ್ಸ್ ಪಂಪ್ ಹೂಡುತ್ತಾರೆ.

ಅಲ್ಲಿಂದ 20 ಕ್ಯೂಸೆಕ್ ನೀರನ್ನು ಮೂರುವರೆ ಅಡಿ ಅಗಲದ (1.2 ಮೀಟರ್ ವ್ಯಾಸದ) ಕೊಳವೆಯ ಮೂಲಕ ಏರುದಾರಿಯಲ್ಲಿ ಒತ್ತಿ ಕಣಿವೆಯ ಮೇಲಕ್ಕೆ ತಂದು ಸೀತಾಕಟ್ಟೆ ಸೇತುವೆಯ ಬಳಿ ಸುರಿಯುತ್ತಾರೆ. ಹಾಗೆ ಕೆಳಗಿನಿಂದ ಮೇಲೆ ಹರಿದು ಬರುವ ನೀರನ್ನು ಅಲ್ಲೇ ಒಂದು ಅಡ್ಡಗಟ್ಟೆ ಕಟ್ಟಿ ಸಂಗ್ರಹಿಸಲಾಗುತ್ತದೆ. ಬೆಳಿಗ್ಗೆ ಎಂಟುಗಂಟೆಗೆ ಪ್ರವಾಸಿಗರು ಬರುವ ತುಸು ಮುಂಚೆ  ಜಲಾಶಯದ ಗೇಟ್ ತೆರೆದರೆ ನೀರು ಅಲ್ಲಿಂದ ಅರ್ಧ ಕಿಲೊಮೀಟರ್ ಮುಂದಕ್ಕೆ ಸಾಗಿ ಜೋಗದ ಗುಂಡಿಗೆ ಧುಮುಕುತ್ತ ವೀಕ್ಷಕರಿಗೆ ಮುದ ನೀಡುತ್ತಿರುತ್ತದೆ. ಹಗಲಿಡೀ ಜಲಪಾತವನ್ನು ಸೃಷ್ಟಿಸಿ ಸಂಜೆ ಏಳೆಂಟು ಗಂಟೆಗೆಲ್ಲ ನೀರಿನ ಹರಿವನ್ನು ನಿಲ್ಲಿಸುತ್ತಾರೆ. ರಾತ್ರಿಯೆಲ್ಲ ನೀರು ಕೊಳ್ಳದ ಆಳದಿಂದ ಮೇಲಕ್ಕೆ ಪಂಪ್ ಆಗುತ್ತ ಜಲಾಶಯದಲ್ಲಿ ಶೇಖರವಾಗುತ್ತಿರುತ್ತದೆ. 

ತುಸು ಚುರುಕುಬುದ್ಧಿಯ ಯಾರಿಗಾದರೂ ಇದೆಲ್ಲ ನಿರರ್ಥಕ ಸಾಹಸವೆಂದೇ ಅನ್ನಿಸಬಹುದು. ಲಿಂಗನಮಕ್ಕಿಯಿಂದ ಪೈಪ್ ಮೂಲಕ ನೀರನ್ನು ಕೆಳಕ್ಕೆ ಧುಮುಕಿಸಿ ವಿದ್ಯುತ್ ಉತ್ಪಾದಿಸಿ ಅದೇ ವಿದ್ಯುತ್ತನ್ನು ಬಳಸಿ ಅದೇ ನೀರನ್ನು ಮೇಲಕ್ಕೆ ತಳ್ಳುವ ಬದಲು, ಲಿಂಗನಮಕ್ಕಿಯಿಂದಲೇ ನೇರವಾಗಿ ಅಷ್ಟೇ ಮೊತ್ತದ ನೀರನ್ನು ಜಲಪಾತದ ಕಡೆಗೆ ಹರಿಬಿಟ್ಟರೆ ಸಾಲದೆ? ತುಂಬ ಹಿಂದೆಯೇ ಅಂದರೆ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸುವ ಮೊದಲೇ ಈ ಕುರಿತು ಒಪ್ಪಂದವಾಗಿತ್ತು. ಮಳೆರಹಿತ ದಿನಗಳಲ್ಲಿ ಜಲಾಶಯದ ಕೇವಲ ಶೇಕಡಾ ೩ರಷ್ಟು ನೀರನ್ನು ಜೋಗದ ಕಡೆಗೆ ಹರಿಬಿಟ್ಟು ಜಲಪಾತವನ್ನು ಜೀವಂತವಾಗಿಡಬೇಕೆಂಬ ಕರಾರಿಗೆ ಕೆಪಿಸಿ ಒಪ್ಪಿಗೆ ನೀಡಿತ್ತು.

ಸ್ವಾತಂತ್ರ್ಯಪೂರ್ವದಲ್ಲಿ ಮುಂಬೈ ಸರಕಾರದ ಆಡಳಿತವಿದ್ದಾಗ ಹಿರೇಭಾಸ್ಕರ ಅಣೆಕಟ್ಟನ್ನು ಕಟ್ಟುವಾಗಲೂ ಈ ಒಪ್ಪಂದ ಇತ್ತೆಂದು ದಾಖಲೆಗಳು ಹೇಳುತ್ತವೆ. ಲಿಂಗನಮಕ್ಕಿ ಜಲಾಶಯದಿಂದ ಪ್ರತಿ ನವಂಬರ್‌ನಿಂದ ಜನವರಿವರೆಗೆ ಪ್ರತಿ ತಿಂಗಳು 300 ಕ್ಯೂಸೆಕ್, ಫೆಬ್ರುವರಿಯಿಂದ ಮೇವರೆಗೆ ಪ್ರತಿ ತಿಂಗಳು 200 ಕ್ಯೂಸೆಕ್ ನೀರನ್ನು ಜೋಗಕ್ಕೆ ಹರಿಬಿಡಬೇಕಿತ್ತು. ಆದರೆ ಕೆಪಿಸಿ ಈ ಒಪ್ಪಂದವನ್ನು ಪಾಲಿಸಲಿಲ್ಲ. ಅದರ ಬದಲಿಗೆ ನೀರನ್ನು ಕೆಳಕ್ಕೆ ಕಳಿಸಿ ಮತ್ತೆ ಪಂಪ್ ಮಾಡಿ ಜಲಪಾತಕ್ಕೆ ಧುಮ್ಮಿಕ್ಕಿಸುವ ಖಾಸಗಿ ಯೋಜನೆಗೆ ಸಹಕಾರ ನೀಡಲು ಹೊರಟಿದೆ. ಅದು ವಿದ್ಯುತ್ ಅಪವ್ಯಯ ಅಲ್ಲವೆ?

ಅಲ್ಲವೆಂದು ವಿಶ್ವನಾಥ್ ಹೇಳುತ್ತಾರೆ. ಮಳೆಗಾಲದಲ್ಲಿ ಹೇಗಿದ್ದರೂ ಜಲಪಾತ ತಂತಾನೇ ಮೈದುಂಬಿ ಭೋರ್ಗರೆಯುತ್ತಿರುತ್ತದೆ. ಜೋಗದ ನೆತ್ತಿಯಲ್ಲಿರುವ ಸೀತಾಕಟ್ಟೆಗೆ ನೀರನ್ನು ಪಂಪ್ ಮಾಡಬೇಕಿಲ್ಲ. ಬದಲಿಗೆ ಸೀತಾಕಟ್ಟೆಯಿಂದ ಅದೇ 1.2 ಮೀಟರ್ ವ್ಯಾಸದ ಪೈಪಿನಲ್ಲಿ ನೀರು ಕೆಳಕ್ಕೆ ಪಂಪ್ ಕಡೆ ಹರಿಯುತ್ತಿರುತ್ತದೆ. ಅದೇ ಪಂಪು ಈಗ ಟರ್ಬೈನ್ ಆಗಿ ವಿದ್ಯುತ್ತನ್ನು ಉತ್ಪಾದಿಸುತ್ತಿರುತ್ತದೆ. ಅದನ್ನು ಗ್ರಿಡ್‌ಗೆ ಮಾರಾಟ ಮಾಡಿ ಪ್ರತಿವರ್ಷ ಏಳೂವರೆ ಕೋಟಿ ರೂಪಾಯಿ ಆದಾಯ ಪಡೆಯಬಹುದು.

ಬೇಸಿಗೆಯಲ್ಲಿ ಗ್ರಿಡ್‌ನಿಂದ ವಿದ್ಯುತ್ತನ್ನ ಮರಳಿ ಪಡೆಯಬಹುದು ಎಂದು ಎಚ್ ಆರ್ ವಿಶ್ವನಾಥ್ ನೀಡಿದ ಲೆಕ್ಕಾಚಾರದಲ್ಲಿ ಹೇಳಲಾಗಿದೆ. ಪ್ರವಾಸಿಗರಿಗೆ 200 ರೂಪಾಯಿಗಳ ಪ್ರವೇಶ ಶುಲ್ಕ ವಿಧಿಸಿದರೆ ಪ್ರಾಧಿಕಾರಕ್ಕೆ ಪ್ರತಿವರ್ಷ 23 ಕೋಟಿ ವರಮಾನ ಬರುತ್ತದಂತೆ. ಈ ಕಾಮಗಾರಿಯನ್ನು ತುರ್ತಾಗಿ ಅನುಷ್ಠಾನಕ್ಕೆ ತರಲು ಕಾಗೋಡು ತಿಮ್ಮಪ್ಪನವರು ಒತ್ತಾಯಿಸುತ್ತಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಬಲ್ಲವರಿಗೆ ಹುಡುಕಾಟ ನಡೆದಿದೆ. ಯಾರೂ ಮುಂದಕ್ಕೆ ಬರುತ್ತಿಲ್ಲ; ಕೆಪಿಸಿಗೆ ಅದರಲ್ಲಿ ಆಸಕ್ತಿಯೂ ಇದ್ದಂತಿಲ್ಲ. ಆದರೆ ಸುಮಾರು 350 ಕೋಟಿ ರೂಪಾಯಿಗಳ ಈ ದುಬಾರಿ ಯೋಜನೆಯ ಬದಲು ಕೇವಲ 35 ಕೋಟಿ ರೂಪಾಯಿಗಳಲ್ಲಿ ಜೋಗದಲ್ಲಿ ವರ್ಷವಿಡೀ ನೀರು ಧುಮುಕುವಂತೆ ಮಾಡಲು ಸಾಧ್ಯವೆಂದು ಕೆಪಿಸಿಯ ನಿವೃತ್ತ ಎಂಜಿನಿಯರ್ ಕೆ. ಪ್ರಹ್ಲಾದ ರಾವ್ ಹೇಳುತ್ತಾರೆ. ಅವರ  ಬದಲೀ ಯೋಜನೆಯಲ್ಲಿ ಪಂಪ್ ಮೂಲಕ ನೀರನ್ನು ಮೇಲಕ್ಕೆತ್ತುವ ಪ್ರಸ್ತಾಪವೇ ಇಲ್ಲ.

ಬದಲಿಗೆ ಸೀತಾಕಟ್ಟೆಯಲ್ಲೇ ಮಳೆಗಾಲದ ಹೆಚ್ಚುವರಿ ನೀರನ್ನು ಉಳಿಸಿಕೊಂಡರೆ ಬೇಸಿಗೆಯಲ್ಲೂ (ಹಗಲಿಡೀ) ಜೋಗ ಜಲಪಾತವನ್ನು ಕಾಣಬಹುದು. ಅವರು ಅಲ್ಪವೆಚ್ಚದ ಈ ಬದಲೀ ಯೋಜನೆಯ ನೀಲನಕ್ಷೆಯನ್ನು ಹಿಡಿದು ಕಳೆದ ಹತ್ತು ವರ್ಷಗಳಿಂದ ರಾಜಕೀಯ ಮುತ್ಸದ್ದಿಗಳ, ನೀರಾವರಿ ತಜ್ಞರ ಬಾಗಿಲು ತಟ್ಟುತ್ತಲೇ ಇದ್ದಾರೆ. ‘ಎಲ್ಲರ ಗಮನವೂ 350 ಕೋಟಿ ರೂಪಾಯಿಗಳ ದೊಡ್ಡ ತಾಂತ್ರಿಕ ಸಾಹಸದ ಕಡೆಗೇ ಕೇಂದ್ರಿತವಾಗಿದೆ ನೋಡಿ’ ಎನ್ನುತ್ತ ಮತ್ತೆ ಮತ್ತೆ ನಿರಾಸೆಯ ನಿಟ್ಟುಸಿರನ್ನು ಹೊಮ್ಮಿಸುತ್ತಲೇ ಇದ್ದಾರೆ. ಜೋಗದಲ್ಲಿ ನೀರು ಸದಾ ಬೀಳುತ್ತಿರಬೇಕು. ಪ್ರವಾಸಿಗರನ್ನು ಸದಾ ಆಕರ್ಷಿಸುತ್ತಿರಬೇಕು. ಆದರೆ ತೆರಿಗೆದಾರನ ಧನಧಾರೆ ಅಲ್ಲಿ ವ್ಯರ್ಥ ಸುರಿಯಬಾರದು.

ಅಷ್ಟೆತ್ತರಕ್ಕೆ ನೀರನ್ನು ಪಂಪ್ ಮಾಡುವ ಮಹಾನ್ ಯೋಜನೆಯನ್ನು ಏಕಾಏಕಿ ಕೈಗೊಳ್ಳುವ ಬದಲು ಅಲ್ಪವೆಚ್ಚದ ಬದಲೀ ಯೋಜನೆ ಅನುಷ್ಠಾನಕ್ಕೆ ಯೋಗ್ಯವಿದೆಯೇ ಇಲ್ಲವೆ ಎಂದು ಪರಿಶೀಲಿಸಬಾರದೆ? ಎಲ್ಲ ಏಳೂ ದಿನಗಳ ಬದಲು ವಾರಾಂತ್ಯದ ಒಂದೆರಡು ದಿನಗಳಲ್ಲಂತೂ ಸಲೀಸಾಗಿ ಸಾಕಷ್ಟು ನೀರು ಬೀಳುವಂತೆ ಈಗಿರುವ ವ್ಯವಸ್ಥೆಯನ್ನೇ ತುಸು ಮಾರ್ಪಡಿಸಿ ತೋರಿಸಬಹುದು. ಇಷ್ಟಕ್ಕೂ ನಾಳಿನ ಜಗತ್ತಿಗೆ ಹೊಸದೊಂದು ಎಂಜಿನಿಯರಿಂಗ್ ಸಾಹಸವನ್ನು ತೋರಿಸಲೇಬೇಕೆಂದಿದ್ದರೆ ಕಡಲಂಚಿನ ಸೂಕ್ತ ಸ್ಥಳದಲ್ಲಿ ಸೌರವಿದ್ಯುತ್ತಿನಿಂದಲೇ ಉಪ್ಪುನೀರನ್ನು ಪಂಪ್ ಮಾಡಿ ಎತ್ತರದಿಂದ ಧುಮ್ಮಿಕ್ಕಿಸಿ ತೋರಿಸಲು ಸಾಧ್ಯವಿದೆ. ಉಪ್ಪುನೀರನ್ನು ಮೇಲಕ್ಕೆತ್ತಿ ಸಿಹಿನೀರಿನದೇ ಜಲಪಾತವನ್ನು ಸೃಷ್ಟಿಸಲು ಸಾಧ್ಯವಿದೆ. ಬರಲಿರುವ ಬಿಸಿ ಪ್ರಳಯದ ಹೊತ್ತಿನಲ್ಲಿ ಎಂಥ ಬರಗಾಲದಲ್ಲೂ ಸಮುದ್ರದ ನೀರಿಗಂತೂ ಬರವಿರಲಾರದು.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT