ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರಪೀಡಿತ, ಬರಪೀಡಿತರ ಮಧ್ಯೆ ವಿಜ್ಞಾನ ಹಬ್ಬ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ೧೩೦೦ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದಿಂದ ನಿತ್ಯವೂ ಸರಾಸರಿ ೩೨೫ ಜನರು ಇಹಲೋಕ ತ್ಯಜಿಸುತ್ತಿದ್ದಾರೆ. ಏಡ್ಸ್ ಸಾವು ಇನ್ನೂರರ ಆಸುಪಾಸು ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭೇದಿ- ಅತಿಸಾರದಿಂದ- (ಡಯಾರಿಯಾ) ಸುಮಾರು ಒಂದು ಸಾವಿರ ಮಕ್ಕಳು ಪ್ರತಿದಿನವೂ ಸಾಯುತ್ತಿದ್ದಾರೆ. ಒಂದು ಸಾವಿರ! ಆ ಯಾವವೂ ನಮಗೆ ಲೆಕ್ಕಕ್ಕಿಲ್ಲ. ಆದರೆ ಪ್ರತಿದಿನ ಸರಾಸರಿ ೨೦ ರೋಗಿಗಳ ಪ್ರಾಣ ಹೀರುತ್ತಿರುವ ಹಂದಿಜ್ವರದ ಬಗ್ಗೆ ಮಾತ್ರ ಹುಯಿಲು ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ ೬೦೦ ದಾಟಿತು,೭೦೦ ದಾಟಿತು, ೮೦೦ನ್ನೂ ದಾಟಿತು ಎಂದು ದಿಗಿಲು­ಗೊಳಿಸುವ ವರದಿಗಳು ಬರು­ತ್ತಿವೆ.  ‘ರೋಗ­ಪೀಡಿತರ ಸಂಖ್ಯೆ ೧೪ ಸಾವಿರ ತಲು­ಪಿದೆ’ ಎಂದು ಮೊನ್ನೆ ಸಂಸತ್ತಿನಲ್ಲೂ ಸಚಿವರು ಘೋಷಿಸಿ­ದ್ದಾರೆ. ಬೇಕೆಂದಷ್ಟು ಲಸಿಕೆ ಮಾತ್ರೆ, ಮುಖ­ವಾಡ ಎಲ್ಲ ಕಡೆ ಸಿಗುವಂತೆ ವ್ಯವಸ್ಥೆ ಮಾಡ­ಲಾ­ಗಿದೆಯಂತೆ. ಔಷಧ ಕಂಪೆನಿ­ಗಳು ತಮ್ಮ ಮುಖ­ವಾಡದ ಹಿಂದೆ ಮುಸುಮುಸು ನಗುತ್ತಿರ­ಬಹುದು. 

ಕಂಗಾಲಾಗುವ ಸುದ್ದಿಯನ್ನೇ ಎಲ್ಲರೂ ಬಯಸುವ ಕಾಲ ಇದು. ಆದರೆ ಈ ಜ್ವರಕ್ಕೆ ಅಷ್ಟೊಂದು ಕಂಗಾಲು ಬೇಕಾಗಿಲ್ಲ. ಹಿಂದೆಲ್ಲ  ಇದು ಬರೀ ‘ಫ್ಲೂ’ ಅಥವಾ ‘ಇನ್‌ಫ್ಲುಯೆಂಝಾ’ ಹೆಸರಲ್ಲಿ ಬರುತ್ತಿತ್ತು. ಅಂಥ ಪ್ರಾಣಾಂತಿಕ ಏನಲ್ಲ. ಹಂದಿಗಳಿಗೂ ಬೆದರಬೇಕಾಗಿಲ್ಲ. ಜ್ವರ ಬಂದ ಹಂದಿಗಳಿಂದ ನಮಗೆ ಸೋಂಕು ತಗುಲು­ವುದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅಕಸ್ಮಾತ್ ತಗುಲಿದರೂ ಆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ದಾಟುವುದು ಇನ್ನೂ ಅಪ­ರೂಪ. ಯಾವುದೋ ದೇಶದಲ್ಲಿ ಹೇಗೋ ಇಬ್ಬರ ದೇಹದಲ್ಲಿ ಹೊಕ್ಕು -ಹೊರಟ ಹಂದಿ ವೈರಸ್ ತುಸು ಹೊಸರೂಪ ಧರಿಸಿ, ಒಬ್ಬರಿಂದೊ­ಬ್ಬರಿಗೆ ದಾಟಲು ಕಲಿತಿರುತ್ತದೆ. ಅಲ್ಲಿಂದ ಮುಂದೆ ಅದು ಸಾಂಕ್ರಾಮಿಕ ಎನಿಸು­ತ್ತದೆ. ಈಗ ಅಂಥದೊಂದು ಸಾಂಕ್ರಾಮಿಕ ಎಲ್ಲಿಂದಲೋ ಇಲ್ಲಿಗೆ ಬಂದಿದೆ. ತಾನಾಗಿ ಬಂತೋ ಅಥವಾ ಬೇಕಂತಲೇ ತಂದಿದ್ದೊ ಗೊತ್ತಿಲ್ಲ.

ಗುಜರಾತ್, ರಾಜಸ್ತಾನ ಕಡೆಯಿಂದ ಬಸ್, ರೈಲು, ವಿಮಾನ, ನಂತರ ಟ್ಯಾಕ್ಸಿ, ಆಟೊ­ಗಳ ಮೂಲಕ ನಿಮ್ಮೂರಿಗೆ ಬಂದೀತು. ಈ ಕಾಯಿಲೆ ಬಂದ ಸಾವಿರ ಜನರಲ್ಲಿ ೯೯೯ ರೋಗಿ­ಗಳು ಚೇತರಿಸಿಕೊಳ್ಳುತ್ತಾರೆ. ಹೆಚ್ಚೆಂದರೆ ಐದಾರು ದಿನ ನೆಗಡಿ, ಮೈಕೈ ನೋವು, ಜ್ವರ, ತಲೆನೋವು, ಗಂಟಲುರಿ, ಕೆಮ್ಮಿನಿಂದ ಬಳಲಿ ಮತ್ತೆ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವು ಹತಭಾಗ್ಯರು ಫ್ಲೂ ಕಾಯಿಲೆ ಬರುವ ಮೊದಲೇ ಆಸ್ತಮಾ ಅಥವಾ ಹೃದ್ರೋಗ ಪೀಡಿತರಾಗಿದ್ದರೆ ಹುಷಾರಾಗಿರಬೇಕು. ಇತರರೂ ಎಚ್ಚರದಿಂದಿರ­ಬೇಕು. ಪೇಟೆಯಿಂದ ಮನೆಗೆ ಬಂದಾಕ್ಷಣ ಸಾಬೂನಿನಿಂದ ಕೈಕಾಲು ಮುಖ ಚೊಕ್ಕ ತೊಳೆ­ಯ­ಬೇಕು. ನೆಗಡಿ, ಜ್ವರ ಬಂದರೆ ಯಾರಿಂದಲೂ ಮುಟ್ಟಿಸಿಕೊಳ್ಳದೆ, ಟಿವಿ ರಿಮೋಟ್ ಕೂಡ ಮುಟ್ಟದೆ ಪ್ರತ್ಯೇಕ ಮಲಗಿರಬೇಕು. ಮನೆಯ ಅಥವಾ ಹಾಸ್ಟೆಲಿನ ಇತರರಿಗೆ ಜ್ವರ ಹರಡದಂತೆ ನೋಡಿಕೊಳ್ಳಬೇಕು. ತೀರ ಗಾಬರಿಯಾಗುವಂಥ ಪ್ರಸಂಗ ಬಂದರೆ ಡಾಕ್ಟರ್ ಸಲಹೆ ಪಡೆಯಬೇಕು.

ಇಂಥದೊಂದು ಸಾಮಾನ್ಯ ಜ್ವರ ಎಲ್ಲರನ್ನೂ ಗಾಬರಿಗೊಳಿಸಿ, ಎಲ್ಲರನ್ನೂ ಡಾಕ್ಟರ್ ಬಳಿಗೆ ಅಟ್ಟಿ, ಎಲ್ಲರಿಗೂ ಮುಖವಾಡ ತೊಡಿಸುವಂತೆ ಮಾಡಿದ ಒಂದು ಹುನ್ನಾರದಲ್ಲಿ ನಾವೆಲ್ಲ ಪಾಲ್ಗೊಳ್ಳು­ವಂತಾಗಿದೆ. ಔಷಧ ಕಂಪೆನಿಗಳಿಗೆ ಯಾವು­ದರಲ್ಲಿ ಲಾಭಾಂಶ ಹೆಚ್ಚಿಗೆ ಇದೆಯೊ ಅಂತಹ ಕಾಯಿಲೆಯ ಬಗ್ಗೆ ಮಾತ್ರ ಮಾಧ್ಯಮಗ­ಳಲ್ಲಿ ಅಬ್ಬರದ ಚರ್ಚೆ, ಅತಿಶಯ ಭಯವನ್ನು ಬಿಂಬಿಸುವ ಯತ್ನ, ಸಂಸತ್ತಿನಲ್ಲಿ ಪ್ರಶ್ನೋತ್ತರ ಎಲ್ಲ ಕಂಡುಬರುತ್ತವೆ. ದಿನಕ್ಕೆ ಸಾವಿರ ಮಕ್ಕಳನ್ನು ಕೊಲ್ಲುತ್ತಿರುವ ಭೇದಿ (ಡಯಾ­ರಿಯಾ) ನಿಲ್ಲಿ­ಸಲು ಔಷಧದ ಅಗತ್ಯವೇ ಇಲ್ಲ. ಕುದಿಸಿ ತಣಿಸಿದ ನೀರಿಗೆ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಮಗುವಿಗೆ ಪದೇ ಪದೇ ಕುಡಿಸುತ್ತಿದ್ದರೆ ಬಹುಪಾಲು ಮಕ್ಕಳು ಚೇತರಿಸಿಕೊಳ್ಳುತ್ತವೆ.

ಶುದ್ಧ ನೀರು ಮತ್ತು ಶೌಚ ವ್ಯವಸ್ಥೆ ಇದ್ದರಂತೂ ಅತಿಸಾರಕ್ಕೆ ಕಾರಣವಾಗುವ ರೋಟಾವೈರಸ್ ಸಂಚಾರ­ವನ್ನೇ ತಡೆಗಟ್ಟ­ಬ-­ಹುದು. ಅದಕ್ಕೆ ಯಾರೂ ಆದ್ಯತೆ ಕೊಡುತ್ತಿಲ್ಲ. ಶೌಚಾಲಯ ಕಟ್ಟಿಕೊಳ್ಳ­ಲೆಂದು ರಾಜಧಾನಿ­ಯಿಂದ ಬರುವ ಹಣವೆಲ್ಲ ಗ್ರಾಮ ಪಂಚಾಯಿತಿ ಕಚೇರಿಯ­ವರೆಗೆ ಬಂದು ಮಾಯವಾಗುತ್ತದೆ. ಕ್ಷಯ, ಮಲೇರಿಯಾ ನಿರ್ಮೂಲನದ ಕತೆಯೂ ಅಷ್ಟೆ. ಚಿಕಿತ್ಸೆ ಹಾಗಿ­ರಲಿ, ಅವುಗಳನ್ನು ತಡೆಗಟ್ಟ­ಲೆಂದು ರೂಪಿ­ಸುವ ಅದೆಷ್ಟೊ ಕೋಟಿ ರೂಪಾಯಿ­ಗಳ ಪ್ರಚಾರ ಸಾಮಗ್ರಿಗಳೂ ಗ್ರಾಮ­ಗಳನ್ನು ತಲುಪದೆ ನಾಪತ್ತೆ­ಯಾಗುತ್ತವೆ. ಜನ­ಜಾಗೃತಿಗೆ ಮೀಸಲಿಟ್ಟ ಹಣವೂ ತಾನು ಬಂದ ದಾರಿಯಲ್ಲೇ ಮರಳಿ ರಾಜಧಾನಿಯವರೆಗೂ ಸಾಗಿ ಹೋಗು­ವಂಥ ಚಾನೆಲ್‌ಗಳು ಸೃಷ್ಟಿಯಾ­ಗಿವೆ. ಭಾರತ­ದಲ್ಲಿ ಇಂಥ ಕಾಯಿಲೆಗಳನ್ನು ಕಾಪಾಡಿ­ಕೊಂಡರೇನೆ ಅದೆಷ್ಟೊ ಜನರಿಗೆ ನಿತ್ಯ ಹಬ್ಬ. ದುರ್ಬಲರ ಸಾವಿನ ಸಂಖ್ಯೆ ಹೆಚ್ಚಿದ್ದಷ್ಟೂ ಐಷಾರಾಮಿಗಳ ವೈಭವ ಹೆಚ್ಚಿರುತ್ತದೆ.

ನಾಡಿದ್ದು ಶಾಲೆ ಕಾಲೇಜುಗಳಲ್ಲೆಲ್ಲ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಿ­ದ್ದಾರೆ. ಈ ವರ್ಷ ‘ರಾಷ್ಟ್ರ ನಿರ್ಮಾಣದಲ್ಲಿ ವಿಜ್ಞಾನ’ ಎಂಬ ಘೋಷವಾಕ್ಯವನ್ನು ನೀಡ­ಲಾಗಿದೆ. ದೇಶದಾದ್ಯಂತ ಮಕ್ಕಳಿಗೆಲ್ಲ ಅದೇ ವಿಷಯದ ಬಗ್ಗೆ ಚರ್ಚೆ, ಪ್ರಬಂಧ, ಪ್ರದರ್ಶನ ಇತ್ಯಾದಿ ಏರ್ಪಡಿಸಬೇಕೆಂದು ಸೂಚನೆ ನೀಡ­ಲಾಗಿದೆ. ರಾಷ್ಟ್ರ ನಿರ್ಮಾಣ ಎಂದರೆ ಬೃಹತ್ ಕಾರ್ಖಾನೆ, ಶಕ್ತಿಸ್ಥಾವರ, ಸೂಪರ್‌ಹೈವೇ, ಅಥವಾ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತೋರಿಸುವಂಥ ಫೈಟರ್ ಜೆಟ್, ರಡಾರ್, ರಾಕೆಟ್, ಜಲಾಂತರ್ಗಾಮಿಗಳಂಥ ಅದ್ದೂರಿ ಯಂತ್ರೋಪಕರಣಗಳ ಥಳಕುಗಳೇ ನಮ್ಮ ಕಣ್ಣಿಗೆ ಕಟ್ಟುತ್ತವೆ. ಈಗಂತೂ ಅಂಥ ರಾಷ್ಟ್ರ ನಿರ್ಮಾಣದ ಕೆಲಸವನ್ನು ‘ಮೇಕ್ ಇನ್ ಇಂಡಿಯಾ’ ಘೋಷಣೆಯ ಮೂಲಕ ಹೊರಗಿನ­ವರಿಗೆ ವಹಿಸುವ ವ್ಯವಸ್ಥೆಯೂ ಜಾರಿಗೆ ಬರು­ತ್ತಿದೆ. ಈ ಘೋಷಣೆ ಇಲ್ಲದಿದ್ದ ಕಾಲದಲ್ಲೂ ವಿದೇಶೀ ಕಂಪೆನಿಗಳು ತಮ್ಮ ಅಪಾಯಕಾರಿ ತಂತ್ರ­ಜ್ಞಾನವನ್ನು ನಮ್ಮಲ್ಲಿ ಸ್ಥಾಪಿಸಿ ರಾಡಿ ಎಬ್ಬಿಸಿವೆ.

ಕೊಡೈಕೆನಾಲ್‌ನಲ್ಲಿ ಯುನಿಲಿವರ್ ಕಂಪೆನಿ ಥರ್ಮಾಮೀಟರ್ ತಯಾರಿಸುವ ‘ಜಗತ್ತಿನ ಅತಿ ದೊಡ್ಡ ಕಾರ್ಖಾನೆ’ಯನ್ನು ಆರಂಭಿಸಿದ್ದನ್ನು ನಾವು ಮರೆಯುವಂತಿಲ್ಲ. ಅದರ ಹಿಂದಿನ ಮಜ್ಕೂರು ಏನಿತ್ತೆಂದರೆ, ಇತರ ಎಲ್ಲ ಸುಧಾರಿತ ದೇಶಗಳಲ್ಲೂ ಪಾದರಸದ ಬಳಕೆ ತೀರ ಅಪಾಯಕಾರಿ ಎಂದು ನಿರ್ಧರಿಸಿ, ಥರ್ಮಾ­ಮೀಟರ್ ತಯಾರಿಕೆಯನ್ನೇ ಸ್ಥಗಿತಗೊಳಿಸಿದ್ದವು. ಕೊಡೈಕೆನಾಲ್‌ನಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಿ ಸುತ್ತೆಲ್ಲ ಗಬ್ಬೆಬ್ಬಿಸಿದ ನಂತರ ಸ್ಥಳೀಯರು ಹೋರಾಟ ಮಾಡಿ ಮೂರು ವರ್ಷಗಳ ನಂತರ ಕಾರ್ಖಾನೆಯನ್ನು ಮುಚ್ಚಿಸಿದರು. ಅದೊಂದೇ ಅಲ್ಲ, ಯುರೋಪ್‌ನ ಔಷಧ ಕಂಪೆನಿಗಳು ಪರಿಸರ­ವನ್ನು ಅತ್ಯಂತ ಕಲುಷಿತ ಮಾಡಬಲ್ಲ ಕಾರ್ಖಾನೆಗಳನ್ನು ಬೀದರಿಗೆ ವರ್ಗಾಯಿಸಿದ್ದೂ ಅದೇ ಕತೆ.

ಎಲ್ಲಕ್ಕಿಂತ ದೊಡ್ಡ ಕತೆ ಗುಜರಾತಿ­ನಲ್ಲೇ ಇದೆ: ಮುದಿಯಾದ ಹಡಗುಗಳನ್ನು ಒಡೆದು ಅದರಿಂದ ಕೊಳಕು ಗುಜರಿ ವಸ್ತು­ಗಳನ್ನು ಬೇರ್ಪಡಿಸುವ (ಬ್ರೆಕ್ ಇನ್ ಇಂಡಿಯಾ!) ಜಗತ್ತಿನ ಅತಿ ದೊಡ್ಡ ‘ಕಸಾಯಿ­ಖಾನೆ’ ಎಂತಲೇ ಕುಪ್ರಸಿದ್ಧಿ ಪಡೆದ ಘಟಕ ಅಲ್ಲಿನ ಅಲಂಗ್ ಬಂದರಿನಲ್ಲಿದೆ. ಅಲ್ಲಿಗೆ ಪ್ರತಿವರ್ಷ ೪೦೦ ಹಡಗುಗಳು ಅಂತಿಮ ಸಂಸ್ಕಾರಕ್ಕೆ ಬರುತ್ತಿವೆ. ಈಗಂತೂ ಮೇಕ್ ಇನ್ ಇಂಡಿಯಾ ಆಹ್ವಾನದ ಪ್ರಕಾರ ಯಾವುದೇ ವಿದೇಶೀ ಕಂಪೆನಿ ಇಲ್ಲಿಗೆ ಬಂದು ನಮ್ಮ ಕಚ್ಚಾ ಪದಾರ್ಥ, ನಮ್ಮದೇ ಅಗ್ಗದ ಕೂಲಿಕಾರರು ಮತ್ತು ನಮ್ಮದೇ ಶಕ್ತಿ, ನಮ್ಮದೇ ನೀರು ಎಲ್ಲವನ್ನೂ ಬಳಸಿಕೊಂಡು ನಮ್ಮದೇ ಗಾಳಿಗೆ, ನೀರಿಗೆ ಕೊಳೆ ತುಂಬಿಸಿ, ಸಿದ್ಧವಸ್ತುಗಳನ್ನು ಸಾಗಿಸಿ ನಮಗೇ ಮಾರ­ಬಹುದು; ಅಥವಾ ಒಯ್ಯಬಹುದು. ರೋಗಿ ಬಯಸಿದ್ದೂ ಅದೇ, ಡಾಕ್ಟರ್ ಕೊಟ್ಟಿದ್ದೂ ಅದೇ. 

‘ವಿಜ್ಞಾನ ದಿನ’ದಂದು ಅಂಥ ಥಳಕಿನ ರಾಷ್ಟ್ರ ನಿರ್ಮಾಣದ ಬದಲಿಗೆ ಸ್ಥಳೀಯ ನೆಲಜಲ ರಕ್ಷಣೆ, ಆರೋಗ್ಯ ರಕ್ಷಣೆ, ನಿರುದ್ಯೋಗ ನಿವಾರಣೆ, ಮಾಲಿನ್ಯ ನಿವಾರಣೆ ಮತ್ತು ಬಿಸಿ ಪ್ರಳಯದ ಭಯ ನಿವಾರಣೆಗೆ ಉಪಾಯ ಹುಡುಕುವಂತೆ ಎಳೆಯರಿಗೆ ಪ್ರೇರಣೆ ನೀಡಿದರೆ ಹೇಗೆ? ಈ ‘ಚಿಲ್ಲರೆ’ ವಿಷಯಗಳು ರಾಷ್ಟ್ರದ ಕೀರ್ತಿಕಳಶಕ್ಕೆ ಪದೇಪದೇ ಮಸಿ ಮೆತ್ತುತ್ತಿವೆ. ಆದರೂ ಕಳೆದ ೧೫ ವರ್ಷಗಳಲ್ಲಿ ಒಮ್ಮೆ ಕೂಡ ವಿಜ್ಞಾನ- ತಂತ್ರಜ್ಞಾನ ಇಲಾಖೆ ಈ ವಿಷಯ­ಗಳನ್ನು ‘ವಿಜ್ಞಾನ ದಿನ’ದಂದು ಚರ್ಚೆಗೆ ಒಡ್ಡಿಲ್ಲ. ದೇಶಕ್ಕೆ ತಗುಲಿದ ಅಪಕೀರ್ತಿಯನ್ನು ತೊಡೆಯು­ವುದೂ ರಾಷ್ಟ್ರ ನಿರ್ಮಾಣದ ಕೆಲಸವೇ ತಾನೆ? ‘ನೀರು’ ಎಂಬ ಒಂದನ್ನೇ ಎದುರಿಗೆ ಇಟ್ಟು­ಕೊಂಡರೂ ಎಷ್ಟೆಲ್ಲ ಸಂಗತಿಗಳನ್ನು ನಮ್ಮ ವಿದ್ಯಾರ್ಥಿಗಳು ಮಥಿಸಬಹುದಾಗಿದೆ.

ಕೆಲವು ಉದಾಹರಣೆಗಳನ್ನು ನೋಡೋಣ: ಜಗತ್ತಿನಲ್ಲಿ ತಲಾ ಪ್ರಜೆಗೆ ಎಲ್ಲಕ್ಕಿಂತ ಹೆಚ್ಚು ನೀರು ಲಭ್ಯವಿರುವ ರಾಷ್ಟ್ರವೆಂದರೆ ಬ್ರಝಿಲ್ ಎಂದೇ ಪ್ರತೀತಿಯಿತ್ತು. ಅಲ್ಲಿನ ರಾಜಧಾನಿ ಸಾವೊ ಪಾವ್ಲೊ ಈಗ ಭೀಕರ ಬರದಿಂದ ತತ್ತರಿಸುತ್ತಿದೆ. ಸತತ ಎರಡನೆಯ ವರ್ಷವೂ ಮಳೆಯಿಲ್ಲದೆ ಜಲಾಶಯಗಳ ೯೦% ನೀರು ಖಾಲಿಯಾಗಿದೆ. ಡ್ಯಾಮ್‌ನಿಂದಾಗಿ ಮುಳುಗಿದ್ದ ಪಟ್ಟಣವೊಂದು ಮತ್ತೆ ಕಾಣಿಸಿಕೊಂಡಿದೆ, ನಗರದ ಎರಡು ಕೋಟಿ ಜನರಿಗೆ ನೀರಿನ ಪಡಿತರ ಆರಂಭವಾಗಿದೆ. ಆಸ್ಪತ್ರೆಗಳು ಡಯಾಲಿಸಿಸ್ ಕೂಡ ಸ್ಥಗಿತಗೊಳಿಸಿವೆ. ‘ಜನವರಿ ನದಿ’ ಎಂಬರ್ಥದ ರಿಯೊ ಡಿ ಜನೈರೊ ನಗರದಲ್ಲಿ ಜನವರಿಯಿಂದಲೇ ಬರಗಾಲ ಆರಂಭವಾಗಿದೆ. ಪರಿಸರ ಸಂಕಟದಿಂದ ಭೂಮಿಯನ್ನು ಪಾರು ಮಾಡಲೆಂದು ಮೊದಲ ಪೃಥ್ವೀ ಶೃಂಗಸಭೆ ಅಲ್ಲಿಯೇ ನಡೆದಿತ್ತು. ಸಮುದ್ರದಂಚಲ್ಲೇ ಇದ್ದರೂ ಅಲ್ಲಿ ನೀರಿಗೆ ಬರ ಬಂದಿದೆ.

ಬಿಸಿ ಪ್ರಳಯದ ಕಾರಣದಿಂದಾಗಿ ಅನೇಕ ರಾಷ್ಟ್ರಗಳಲ್ಲಿ ‘ಮಹಾಬರ’ದ ಭಯ ತಲೆ­ದೋರು­ತ್ತಿದೆ. ಸಾವಿರ ವರ್ಷಗಳಲ್ಲಿ ಕಂಡಿರ­ದಂಥ ದಶಕಾವಧಿ ಬೇಸಿಗೆ ಬರಲಿದೆಯೆಂದು ಅಮೆರಿಕ, ಆಸ್ಟ್ರೇಲಿಯಾಗಳು ಬಚಾವು ಸಿದ್ಧತೆ ನಡೆಸಿವೆ. ಬರ ನಿವಾರಣೆ, ನೀರಿನ ಮರುಬಳಕೆಯ ಸಂಶೋಧನೆಗಳು ಆದ್ಯತೆಯ ಮೇಲೆ ಆರಂಭ­ವಾಗಿವೆ. ಪ್ರತಿ ಕಣಿವೆಯ ಪ್ರತಿ ಕೆರೆ ಬಾವಿಗೆ ಸೆನ್ಸರ್‌ಗಳನ್ನು ಜೋಡಿಸಿ ನೀರಿನ ಮಟ್ಟದ ದಿನದಿನದ ನಕ್ಷೆ ತಯಾರಾಗುತ್ತಿವೆ. ಸೌರಶಕ್ತಿ­ಯಿಂದಲೇ ಉಪ್ಪುನೀರನ್ನು ಸಿಹಿಗೊಳಿಸಿ ಇಡೀ ಊರಿಗೆ ಪೂರೈಸಬಲ್ಲ ತಂತ್ರಜ್ಞಾನ ಸಿದ್ಧವಾಗು­ತ್ತಿದೆ. ಚರಂಡಿ ರೊಚ್ಚೆಯನ್ನೇ ಕುಡಿಯುವ ನೀರನ್ನಾಗಿ ಪರಿವರ್ತಿಸಬಲ್ಲ ಏಕಾಣುಜೀವಿಗಳು ಮಾರಾಟಕ್ಕೆ ಸಜ್ಜಾಗುತ್ತಿವೆ.

ತೋಳುದ್ದದ ಡ್ರೋನ್ (ವಿಮಾನ)ಗಳು ಕೃಷಿಭೂಮಿಯ ಮೇಲೆ ಚಲಿಸುತ್ತ ರೈತನಿಗೆ ಪ್ರತಿ ಸಸ್ಯದ ನೀರು ಮತ್ತು ತೇವಾಂಶದ ಬಜೆಟ್ ವರದಿ ನೀಡುತ್ತಿವೆ. ಅಗತ್ಯವಿದ್ದಷ್ಟೇ ನೀರನ್ನು ಸಸ್ಯಗಳಿಗೆ ಉಣಿಸಬಲ್ಲ ‘ತಾಲ್ಯಾ ಟ್ರೇ’ಗಳು ಸೃಷ್ಟಿಯಾಗಿವೆ. ಕಕ್ಕಸು ದ್ರವವನ್ನೇ ಶುದ್ಧೀಕರಿಸಿ ಲೋಟದಲ್ಲಿ ಎತ್ತಿ ಬಿಲ್‌ಗೇಟ್ಸ್ ಗಟಗಟ ಕುಡಿದ ದೃಶ್ಯ ಇದೀಗ ಯೂಟ್ಯೂಬ್‌ನಲ್ಲಿ ಓಡಾಡುತ್ತಿದೆ (ನಮ್ಮಲ್ಲಿ ಸಚಿನ್ ತೆಂಡೂಲ್ಕರ್ ಯಾವುದೋ ಕಂಪೆನಿಯ ನೀರಿನ ಬಾಟಲಿ ಎತ್ತಿ ಪ್ರಚಾರ ಕೊಡುತ್ತಿದ್ದಾರೆ). ಊರಿನ ಎಲ್ಲರ ನೀರಿನ ಬಿಲ್ಲನ್ನೂ ಇಂಟರ್‌­ನೆಟ್‌ಗೆ ತೂರಿಸಿ, ನಿಮ್ಮ ಬಡಾವಣೆಯ ಯಾರು ಅತಿಹೆಚ್ಚು ನೀರನ್ನು ಕಬಳಿಸುತ್ತಾರೆಂಬುದನ್ನು ತೋರಿಸುವ ಮಾನನಷ್ಟ ವ್ಯವಸ್ಥೆಯೂ ಬರ­ತೊಡ­ಗಿದೆ.

ಸಿಂಗಪುರದಲ್ಲಿ ಚರಂಡಿ ನೀರು ಶುದ್ಧ­ವಾಗಿ ‘ನ್ಯೂವಾಟರ್’ ಹೆಸರಿನಲ್ಲಿ ಬಾಟಲಿ­ಯಲ್ಲಿ ಮಾರಾಟಕ್ಕೆ ಸಿಗತೊಡಗಿದೆ. ನಮ್ಮಲ್ಲೂ ನೀರಿನ ಶುದ್ಧೀಕರಣಕ್ಕೆ ಯುವಶಕ್ತಿಯನ್ನೆ ಬಳಸಿ­ದರೆ, ರೋಗ ನಿಯಂತ್ರಣ, ನಿರುದ್ಯೋಗ ನಿವಾರಣೆ, ಬರ ಪರಿಹಾರ, ಪರಿಸರ ಸಂರಕ್ಷಣೆ ಎಲ್ಲವನ್ನೂ ಒಂದೇ ಗುರಿಯಲ್ಲಿ ಸಾಧಿಸ­ಬಹುದು; ಪ್ರವಾಸಿಗಳೂ ಜಾಸ್ತಿ ಸಂಖ್ಯೆಯಲ್ಲಿ ನಮ್ಮತ್ತ ಬರುವಂತೆ ಮಾಡಬಹುದು. ನಾಳಿನ ವಿಜ್ಞಾನಿಗಳನ್ನು ನೀರಿನತ್ತ ಸೆಳೆಯುವ ಕೆಲಸ ತುರ್ತಾಗಿ ಆಗಬೇಕಿದೆ. 

ಅಂದಹಾಗೆ, ಗುಜರಾತಿನ ಆರೋಗ್ಯ ಸಚಿವರಿಗೇ ಹಂದಿಜ್ವರ ತಗುಲಿದ್ದು ಅದು ದೇಶಕ್ಕೆಲ್ಲ ಸುದ್ದಿಯಾಗಿ, ಡಾಕ್ಟರ್‌ಗಳ ದಂಡೇ ಅತ್ತ ಧಾವಿಸಿದೆ. ನಮ್ಮಲ್ಲಿ ನೀರಿಗಾಗಿ ಅಷ್ಟೊಂದು ಉಪಯುಕ್ತ ಕೆಲಸಗಳನ್ನು ಮಾಡಿದ ಪಂಚಾ­ಯತ್ ಸಚಿವರ ಊರಲ್ಲೇ ಬರ ಕಾಣಿಸಿ-­ಕೊಂಡಿದೆ. ವಿಜ್ಞಾನಿಗಳು ಅತ್ತ ಧಾವಿಸಬಹುದೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT