ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದಿಂದ ಭಯೋತ್ಪಾದನೆ ಬೇರ್ಪಡಿಸುವ ಬಗೆ

Last Updated 16 ಜೂನ್ 2018, 9:14 IST
ಅಕ್ಷರ ಗಾತ್ರ

ಕಳೆದ ತಿಂಗಳು ಮಲೇಷ್ಯಾದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ಬಗ್ಗೆ ಎರಡು ವಿಚಾರ ಹೇಳಿದರು. ಮೊದಲನೆಯದು: ಭಯೋತ್ಪಾದನೆಯನ್ನು ಧರ್ಮದ ಜೊತೆ ಜೋಡಿಸಬಾರದು. ಎರಡನೆಯದು: ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಬೆದರಿಕೆ ಭಯೋತ್ಪಾದನೆ. ಹಾಗಾದರೆ, ಅವರ ಮಾತು ನಿಜವೇ?

ಇಸ್ಲಾಮಿಕ್‌ ಭಯೋತ್ಪಾದನೆಗೆ ಈ ವರ್ಷ ಬಲಿಯಾದ (ಕಾಶ್ಮೀರದ ಹೊರಗಡೆ) ಭಾರತೀಯರ ಸಂಖ್ಯೆ 21. ಕಳೆದ ವರ್ಷದ ಈ ಸಂಖ್ಯೆ 4. ಅದಕ್ಕಿಂತ ಹಿಂದಿನ ವರ್ಷ 25 ಜನ ಸತ್ತಿದ್ದರು. ಅದಕ್ಕೂ ಮೊದಲಿನ ವರ್ಷದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಐದು ಲಕ್ಷ ಮಕ್ಕಳು ಭಾರತದಲ್ಲಿ ಪ್ರತಿ ವರ್ಷ ಅಪೌಷ್ಟಿಕತೆಯ ಕಾರಣಕ್ಕೆ ಸಾವನ್ನಪ್ಪುತ್ತಾರೆ. ಪ್ರಾಮಾಣಿಕವಾಗಿ ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರೂ, ಭಾರತದ ಅರ್ಧದಷ್ಟು ಜನ ಬಡವರು, ಅಶಿಕ್ಷಿತರು ಎಂಬುದು ಗೊತ್ತಾಗುತ್ತದೆ.

ಹವಾಮಾನ ಬದಲಾವಣೆಗಿಂತ ಭಯೋತ್ಪಾದನೆಯು ದೊಡ್ಡ ಬೆದರಿಕೆಯೇ? ಚೆನ್ನೈ ನಗರ ಕಂಡ ನೆರೆ ಹಾವಳಿಗೆ ಜಾಗತಿಕ ತಾಪಮಾನ ಏರಿಕೆ ಕಾರಣ ಎಂದು ಪ್ರಧಾನಿಯವರೂ ಒಪ್ಪುತ್ತಾರೆ. ನೆರೆ ಹಾವಳಿಯಿಂದ 280ಕ್ಕೂ ಹೆಚ್ಚು ಜನ ಸತ್ತಿದ್ದಾರೆ.

ಹಾಗಾಗಿ, ಭಯೋತ್ಪಾದನೆ ಎಂಬ ಸಮಸ್ಯೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತಿದೆ ಎಂದು ನನಗನಿಸುತ್ತದೆ. ಬಡತನ, ಅಪೌಷ್ಟಿಕತೆ ಮತ್ತು ನಿರಕ್ಷರತೆಯ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸಿಕೊಂಡಿರುವ ಪಶ್ಚಿಮದ ದೇಶಗಳ ಪಾಲಿಗೆ ಭಯೋತ್ಪಾದನೆ ಎಂಬುದು ದೊಡ್ಡ ಸಮಸ್ಯೆ.

ಸಾಮಾನ್ಯವಾಗಿ ನೆಮ್ಮದಿಯಲ್ಲೇ ಇರುವ ತಮ್ಮ ಬದುಕಿನಲ್ಲಿ ನಡೆಯುವ ಉದ್ರೇಕಕಾರಿ ಮಧ್ಯಪ್ರವೇಶ ಈ ಭಯೋತ್ಪಾದನೆ ಎಂದು ಪಶ್ಚಿಮದ ದೇಶಗಳು ಗ್ರಹಿಸಿವೆ. ಆದರೆ ಭಾರತದ ಬಹುಸಂಖ್ಯಾತರ ಪಾಲಿಗೆ ಇದು ಹೀಗೆ ಕಾಣುವುದಿಲ್ಲ.

ಆದರೆ ಈ ಲೇಖನ ಆ ವಿಚಾರದ ಬಗ್ಗೆ ಅಲ್ಲ. ಇದು ಪ್ರಧಾನಿಯವರು ತಮ್ಮ ಭಾಷಣದಲ್ಲಿ ನೀಡಿದ ಮೊದಲ ಹೇಳಿಕೆ ಬಗ್ಗೆ. ಅಂದರೆ, ಭಯೋತ್ಪಾದನೆ ಮತ್ತು ಧರ್ಮವನ್ನು ಜೋಡಿಸಿ ನೋಡಬಾರದು ಎಂಬ ಬಗ್ಗೆ. ಹಾಗಾದರೆ, ಭಯೋತ್ಪಾದನೆ ಮತ್ತು ಧರ್ಮವನ್ನು ಬೇರ್ಪಡಿಸುವುದು ಹೇಗೆ?

ಇಲ್ಲಿವೆ ಕೆಲವು ಸಂಗತಿಗಳು. ನಮ್ಮ ಪ್ರಧಾನಿಯನ್ನು ಕೊಂದ ಘಟನೆಯಲ್ಲಿ ಅಪರಾಧಿ ಎಂದು ಘೋಷಿತರಾದ ತಮಿಳು ಭಾಷಿಕ ಹಿಂದೂ ನೀವಾಗಿದ್ದರೆ, ನಿಮ್ಮನ್ನು ನೇಣುಗಂಬಕ್ಕೆ ಏರಿಸುವುದಿಲ್ಲ.

1991ರಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ರಾಜೀವ್‌ ಗಾಂಧಿ ಮತ್ತು 14 ಜನ ಇತರರನ್ನು ಕೊಂದ ಕಾರಣಕ್ಕೆ ಮುರುಗನ್, ಶಾಂತನ್ ಮತ್ತು ಪೆರಾರಿವಲನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅವರನ್ನು ನೇಣಿಗೆ ಏರಿಸಬಾರದು ಎಂದು ಕಳೆದ ವರ್ಷ ತೀರ್ಮಾನಿಸಲಾಯಿತು. ಅವರನ್ನು ಬಂಧಮುಕ್ತಗೊಳಿಸಲು ತಮಿಳುನಾಡು ಸರ್ಕಾರ ಪ್ರಯತ್ನ ನಡೆಸಿದೆ.

ಮುಖ್ಯಮಂತ್ರಿಯೊಬ್ಬರನ್ನು ಕೊಲೆ ಮಾಡಿದ ಕಾರಣಕ್ಕೆ ಗಲ್ಲು ಶಿಕ್ಷೆಗೆ ಗುರಿಯಾದ ಸಿಖ್‌ ನೀವಾಗಿದ್ದರೆ, ನಿಮ್ಮನ್ನು ನೇಣಿಗೆ ಹಾಕುವುದಿಲ್ಲ. ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಮತ್ತು 17 ಜನ ಇತರರನ್ನು ಕೊಂದ ಬಲವಂತ್ ಸಿಂಗ್ ರಾಜೋನಾನನ್ನು ನೇಣಿಗೆ ಏರಿಸಿಲ್ಲ. ತನ್ನನ್ನು ಕೊಲ್ಲಿ ಎಂದು ಬಲವಂತ್‌ ಹೇಳಿದ ನಂತರವೂ, ಆತ ತನ್ನ ಅಂಗಾಂಗಗಳನ್ನು ದಾನ ಮಾಡಿದ ನಂತರವೂ ಈ ಕೆಲಸ ಆಗಿಲ್ಲ.

1993ರಲ್ಲಿ ಕಾಂಗ್ರೆಸ್‌ ನಾಯಕರೊಬ್ಬರ ಕೊಲೆಗೆ ಯತ್ನಿಸಿದ ಪಂಜಾಬಿ ಭಾಷಿಕ ಸಿಖ್‌ ದೇವಿಂದರ್ ಪಾಲ್ ಸಿಂಗ್ ಭುಲ್ಲರ್‌ನನ್ನು ನೇಣಿಗೆ ಹಾಕಿಲ್ಲ. 97 ಜನ ಗುಜರಾತಿಗಳನ್ನು ಕೊಂದ, ಸಿಂಧಿ ಮತ್ತು ಗುಜರಾತಿ ಮಾತನಾಡುವ ಹಿಂದೂ ಸಮುದಾಯಕ್ಕೆ ಸೇರಿದ ಅಪರಾಧಿ ಜೈಲಿನಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿಯೂ ಬರಲಿಲ್ಲ. ಮಾಯಾ ಕೊಡ್ನಾನಿ ಅಪರಾಧಿ ಆಗಿದ್ದರೂ, ಮತ್ತೆ ಮತ್ತೆ ಜಾಮೀನು ಪಡೆದು ಜೈಲಿನ ಹೊರಗೇ ಕಾಲ ಕಳೆಯುತ್ತಾರೆ.

ಯಾಕೂಬ್‌ ಮೆಮನ್‌ನ ಕುಟುಂಬ ಕಂಡುಕೊಂಡಂತೆ, ಭಯೋತ್ಪಾದನೆಯ ಆರೋಪ ಹೊತ್ತ ಗುಜರಾತಿ ಮಾತನಾಡುವ ಮುಸ್ಲಿಮರನ್ನು ನೇಣಿಗೆ ಹಾಕಲಾಗುತ್ತದೆ. ಯಾಕೂಬ್‌ನನ್ನು ನೇಣಿಗೆ ಹಾಕಬಾರದು ಎಂದು ಕೆಲವರು ಹೇಳಿದರು. ಆದರೆ ಅವರು, ಮರಣದಂಡನೆ ಶಿಕ್ಷೆಯನ್ನೇ ವಿರೋಧಿಸುವವರು. ಯಾಕೂಬ್‌ ಸೇರಿದಂತೆ ಮೇಲೆ ಹೇಳಿದ ಯಾವುದೇ ವ್ಯಕ್ತಿಯನ್ನೂ ನೇಣಿಗೆ ಹಾಕಬಾರದು ಎನ್ನುವ ಜನ ಅವರು. ಮೆಮನ್‌ಗೆ ಗುಜರಾತಿಗಳಿಂದ ಯಾವುದೇ ಬೆಂಬಲ ಸಿಗಲಿಲ್ಲ.

ಅಫ್ಜಲ್‌ ಗುರುವಿನ ಕುಟುಂಬ ಕಂಡುಕೊಂಡಂತೆ, ಭಯೋತ್ಪಾದನೆಯಲ್ಲಿ ತೊಡಗಿದ ಆರೋಪ ಹೊತ್ತಿರುವ ಕಾಶ್ಮೀರಿ ಮಾತನಾಡುವ ಮುಸ್ಲಿಮರನ್ನು ನೇಣಿಗೆ ಹಾಕಲಾಗುತ್ತದೆ. ಗುರು ಪ್ರಕರಣದಲ್ಲಿ ಸಾಕ್ಷ್ಯಗಳು ತಪ್ಪಾಗಿರಬಹುದು ಎಂಬುದನ್ನು ತೋರಿಸಲಾಯಿತು. ಹೀಗಿದ್ದೂ ಆತನನ್ನು ಗಲ್ಲಿಗೇರಿಸುವುದನ್ನು ತಡೆಯಲು ಆಗಲಿಲ್ಲ.

ತಮ್ಮ ರಾಜ್ಯದ ಭಯೋತ್ಪಾದಕರ ಜೀವ ಉಳಿಸಲು ತಮಿಳುನಾಡು ಮತ್ತು ಪಂಜಾಬ್‌ ವಿಧಾನಸಭೆಗಳಿಂದ ತೀವ್ರ ಒತ್ತಡ ಬಂತು. ಗುಜರಾತಿನ ಕೊಡ್ನಾನಿ ಮಂತ್ರಿಯಾಗಿದ್ದವರು. ಹಾಗಾಗಿ ಅವರನ್ನು ಅನುಕಂಪದಿಂದ ಕಾಣಲಾಯಿತು. ಅಲ್ಲದೆ, ಗುಜರಾತಿಗಳ ವಿರುದ್ಧವೇ ಆಕೆ ಎಸಗಿದ ಕೃತ್ಯಗಳನ್ನು ಆಕೆಯ ‘ಬಾಸ್‌’, ಅಂದಿನ ಮುಖ್ಯಮಂತ್ರಿ, (ಇಂದಿನ ಪ್ರಧಾನಿ) ಖಂಡಿಸಲಿಲ್ಲ.
ನಾನು ಇಲ್ಲಿ ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ. ಎಲ್ಲವೂ ಸಾರ್ವಜನಿಕವಾಗಿ ಆಗಿರುವಂಥದ್ದು.

ಭಯೋತ್ಪಾದನೆಯನ್ನು ಧರ್ಮದಿಂದ ಬೇರ್ಪಡಿಸಬೇಕು ಎಂದು ನಾವು ಹೇಳುವುದು ಪ್ರಾಮಾಣಿಕವಾಗಿದೆಯೇ ಎಂಬುದು ನನ್ನ ಪ್ರಶ್ನೆ. ಅಂಥದ್ದೊಂದು ಕೆಲಸ ಮಾಡಬೇಕು ಎಂದು ಒಬ್ಬ ನಾಯಕನಿಗೆ ಅನಿಸಿದರೆ, ಆತ ಮೊದಲು ಮಾಡಬೇಕಿದ್ದು ಏನು?

ಈ ಕೆಲಸ ಮಾಡುವುದು ಯಾರಿಗೇ ಆದರೂ ಕಷ್ಟ, ಅದೂ ನಮ್ಮಲ್ಲಿ. ನಾವೇ ಕಂಡಿರುವಂತೆ, ಹಿಂದೂ ಮತ್ತು ಸಿಖ್‌ ಭಯೋತ್ಪಾದಕರನ್ನು ‘ಭಯೋತ್ಪಾದಕ’ರಂತೆ ಕಾಣುವುದು ನಮಗೆ ಸುಲಭವಲ್ಲ.

ಅವರು ತಪ್ಪಿತಸ್ಥರು ಎಂದು ಸಾಬೀತಾದ ನಂತರವೂ, ಅವರು ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದರೂ, ಅವರು ತಮ್ಮ ಗುರಿಯ ಜೊತೆ ಮುಗ್ಧರ ಹತ್ಯೆ ನಡೆಸಿದಾಗಲೂ ನಮಗೆ ಅವರನ್ನು ಭಯೋತ್ಪಾದಕರ ರೀತಿ ಕಾಣಲು ಕಷ್ಟ.

ಅಫ್ಜಲ್‌ ಗುರು ವಿರುದ್ಧ, ಭಾರತದ ಸಂಸತ್ ಭವನದ ಮೇಲೆ ನಡೆದ ದಾಳಿಯನ್ನು ಬೆಂಬಲಿಸಿದ ಆರೋಪ ಸಾಬೀತಾಯಿತು. ‘ಅಫ್ಜಲ್‌ ಗುರುವಿಗೆ ಮರಣದಂಡನೆ ವಿಧಿಸಿದರೆ ಮಾತ್ರ ದೇಶದ ಸಾಮೂಹಿಕ ಪ್ರಜ್ಞೆಗೆ ಸಮಾಧಾನ ಆಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಮುಸ್ಲಿಮೇತರರನ್ನು ಕೂಡ ನೇಣಿಗೆ ಹಾಕಲು ಇದೇ ಮಾದರಿಯ ಸಮರ್ಥನೆಗಳನ್ನು ಕಂಡುಕೊಳ್ಳುವವರೆಗೆ ನಾವು ನಮ್ಮ ಮನಸ್ಸಿನಿಂದ ಭಯೋತ್ಪಾದನೆ ಮತ್ತು ಧರ್ಮವನ್ನು ಬೇರ್ಪಡಿಸಲಾರೆವು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT