ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿ ಲೋಕದ ಪ್ರಮುಖನಿಗೆ ನಮನ

Last Updated 30 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಶರೀಫ್‌’ ಎಂಬ ಉರ್ದು ಪದಕ್ಕೆ ಸಾಕಷ್ಟು ಅರ್ಥಗಳಿವೆ. ಆನ್‌ಲೈನ್‌ ಪದಕೋಶವು ‘ಉದಾತ್ತ’, ‘ಸಂಭಾವಿತ’, ‘ನಾಗರಿಕ’ ಎಂಬೆಲ್ಲ ಅರ್ಥಗಳನ್ನು ತಿಳಿಸುತ್ತದೆ. ಜೊತೆಗೆ, ‘ಸಂಸ್ಕಾರವಂತ’, ‘ವಿನಯಶೀಲ’, ‘ಗೌರವಾನ್ವಿತ’, ‘ಸಂಘಜೀವಿ’ ಎಂಬ ಇತರ ಅರ್ಥಗಳೂ ಈ ಪದಕ್ಕಿವೆ.
ನನಗೆ ತಿಳಿದಿರುವ ಅತ್ಯಂತ ‘ಶರೀಫ್‌’ ವ್ಯಕ್ತಿಗಳಲ್ಲಿ, ಪರಿಸರ ಸಂರಕ್ಷಕ ಜಫರ್‌ ಫತೇಅಲಿ ಅವರೂ ಒಬ್ಬರು. ಮುಂಬೈನಲ್ಲಿ ಬೆಳೆದು ಶಿಕ್ಷಣ ಪಡೆದ ಫತೇಅಲಿ ಅವರಿಗೆ ಪಕ್ಷಿಗಳ ಬಗ್ಗೆ ಮೊದಲೇ ಇದ್ದ ಆಸಕ್ತಿ, ಅವರು ಖ್ಯಾತ ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ ಅವರ ಸೋದರ ಸೊಸೆ ಲಯೀಕ್‌ ಅವರನ್ನು ಮದುವೆಯಾದ ಬಳಿಕ ಇನ್ನಷ್ಟು ಹೆಚ್ಚಾಯಿತು. ದೇಶದ ಮೂಲೆಮೂಲೆಗಳಲ್ಲಿ ಸಲೀಂ ಅಲಿ ಅವರು ಆಯೋಜಿಸುತ್ತಿದ್ದ ಪಕ್ಷಿವೀಕ್ಷಣಾ ಯಾತ್ರೆಗಳಲ್ಲಿ ಜೊತೆ ಗೂಡುತ್ತಿದ್ದುದರ ಜೊತೆಗೆ ‘ನ್ಯೂಸ್‌ಲೆಟರ್‌ ಫಾರ್‌ ಬರ್ಡ್ ವಾಚರ್ಸ್‌’ ಎಂಬ ನಿಯತಕಾಲಿಕವನ್ನೂ ಫತೇಅಲಿ ಆರಂಭಿಸಿದರು.

ನನ್ನ ತಂದೆಯೂ ಇದರ ಚಂದಾದಾರರಾಗಿದ್ದುದ ರಿಂದ ಡೆಹ್ರಾಡೂನ್‌ನಲ್ಲಿದ್ದ ನಮ್ಮ ಮನೆಗೆ ಈ ನಿಯತ ಕಾಲಿಕ ಬರುತ್ತಿತ್ತು. ಸುಮಾರು 400 ಬಗೆಯ ಪಕ್ಷಿ ಪ್ರಭೇದಗಳು ಮತ್ತು  ಮರಗಿಡಗಳಿಂದ ಆವೃತವಾಗಿದ್ದ ಅರಣ್ಯ ಸಂಶೋಧನಾ ಕೇಂದ್ರದ ಆವರಣದಲ್ಲಿ ನಮ್ಮ ಮನೆ ಇತ್ತು. ಇಂತಹ ವಾತಾವರಣದಲ್ಲಿ ನೆಲೆಸಿದ್ದಾಗ ಪಕ್ಷಿಗಳ ಬಗ್ಗೆ ಕೊಂಚವಾದರೂ ಆಸಕ್ತಿ ಮೂಡದೇ ಇರುವುದು ಅಸಾಧ್ಯ. ದೇಶದಾದ್ಯಂತದ ಪಕ್ಷಿಗಳ ಸಚಿತ್ರ ವರದಿಗಳು ಮತ್ತು ಅಧ್ಯಯನವನ್ನು ಒಳಗೊಂಡಿರುತ್ತಿದ್ದ ನ್ಯೂಸ್‌ಲೆಟರ್‌, ಇಂತಹ ನಮ್ಮ ಆಸಕ್ತಿಗೆ ನೀರೆರೆಯುತ್ತಿತ್ತು. ದೆಹಲಿಯಿಂದ ಪೀಟರ್‌ ಜ್ಯಾಕ್‌ಸನ್‌, ಅಸ್ಸಾಂನಿಂದ ಪಿ.ಡಿ.ಸ್ಟ್ರಾಚ್‌, ಕೇರಳ ದಿಂದ ಕೆ.ಕೆ.ನೀಲಕಂಠನ್‌ ಮತ್ತು ತಾವು ಇರುವೆಡೆ ಯಿಂದಲೇ ಸಲೀಂ ಅಲಿ ಅವರು ಬರೆಯುತ್ತಿದ್ದ ವರದಿ ಗಳನ್ನು ಮೋಡಿಗೊಳಗಾದಂತೆ ನಾನು ಓದುತ್ತಿದ್ದೆ.

ಈ ನಿಯತಕಾಲಿಕದ ಮೂಲಕ ಜಫರ್‌ ಫತೇಅಲಿ ವಸ್ತುಶಃ ಪಕ್ಷಿವೀಕ್ಷಕರ ಸಮುದಾಯವೊಂದನ್ನೇ ಸೃಷ್ಟಿಸಿ ದ್ದರು. ನ್ಯೂಸ್‌ಲೆಟರ್‌ನ ಓದುಗರಿಗೆ ಪಕ್ಷಿಗಳ ಬಗೆಗಿದ್ದ ಆಸಕ್ತಿಯು, ಪರಿಸರ ಮತ್ತು ನೈಸರ್ಗಿಕ ಪ್ರಕ್ರಿಯೆಗಳ ಬಗ್ಗೆಯೂ ವಿಶಾಲವಾದ ದೃಷ್ಟಿಕೋನ ಬೆಳೆಸಿಕೊಳ್ಳುವುದಕ್ಕೆ ಪ್ರೇರಣೆಯಾಯಿತು. ದೇಶದ ಖ್ಯಾತ ಪರಿಸರ ವಿಜ್ಞಾನಿಗಳು ಮತ್ತು ಪರಿಸರ ಸಂರಕ್ಷಕರ ಕಾರ್ಯಾರಂಭಕ್ಕೆ ಫತೇಅಲಿ ಅವರ ನಿಯತಕಾಲಿಕ ವೇದಿಕೆಯಾಯಿತು.

ನಾನು ಚಿಕ್ಕಂದಿನಿಂದಲೇ ಫತೇಅಲಿ ಅವರನ್ನು ಬಲ್ಲವ ನಾಗಿದ್ದೆ. 1978ರಲ್ಲಿ ನವದೆಹಲಿಯ ತುಘಲಕ್‌ ಕ್ರೆಸೆಂಟ್‌ನಲ್ಲಿ ಮೊದಲ ಬಾರಿ ಅವರನ್ನು ಕಂಡಾಗ, ಬೈನಾಕ್ಯುಲರ್‌ನಲ್ಲಿ ಬೂದು ಬಣ್ಣದ ಹಾರ್ನ್‌ಬಿಲ್‌ ಜೋಡಿಯನ್ನು ಅವರು ಇಣುಕಿ ನೋಡುತ್ತಿದ್ದರು. ಆದರೆ ನಿಜವಾಗಲೂ ನಾನು ಅವರನ್ನು ಅರಿತದ್ದು ಅವರ ಬದುಕಿನ ಕೊನೆಯ ದಶಕದಲ್ಲಿ. ತಮ್ಮ ಕೌಟುಂಬಿಕ ಉದ್ಯಮದಿಂದ ನಿವೃತ್ತರಾದ ಬಳಿಕ ಜಫರ್‌ ಮತ್ತು ಲಯೀಕ್‌ ಆಗ ನಾನು ನೆಲೆಸಿದ್ದ ಬೆಂಗ ಳೂರಿಗೇ ಸ್ಥಳಾಂತರಗೊಂಡಿದ್ದರು. ಇಲ್ಲಂತೂ ಕೆಲವೊಮ್ಮೆ ಅವರ ಮನೆಯಲ್ಲಿ, ಇನ್ನು ಕೆಲವು ಸಲ ನಗರದ ಪಕ್ಷಿ ವೀಕ್ಷಕರ ಸಭೆಗಳಲ್ಲಿ ವರ್ಷಕ್ಕೆ ಸಾಕಷ್ಟು ಬಾರಿ ಅವರನ್ನು ಕಾಣುತ್ತಿದ್ದೆ. ಲಯೀಕ್‌ ಅವರು ಸೌಜನ್ಯ ಮತ್ತು ಸಂಸ್ಕಾರದ ಜೊತೆಗೆ ಬುದ್ಧಿಮತ್ತೆಯಲ್ಲೂ ಜಫರ್‌ ಅವರಿಗೆ ತಕ್ಕ ಜೋಡಿಯಾಗಿದ್ದರು.

2013ರ ಆರಂಭದಲ್ಲಿ ಅವರಿಬ್ಬರೂ ಬೆಂಗಳೂರನ್ನು ತೊರೆದು, ಕೊಂಕಣ ಕರಾವಳಿಯ ಕಿಹಿಮ್‌ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ತೀರ್ಮಾನಿಸಿದರು. ಈ ಹಳ್ಳಿಯ  ಸಮುದ್ರದ ತಡಿಯಲ್ಲಿರುವ ಮನೆ ಅವರ ಪೂರ್ವಜರು ನೆಲೆಸಿದ್ದ ಜಾಗವಾಗಿತ್ತು. ಆಗ ಜಫರ್‌ ಅವರಿಗೆ 90 ಕಳೆದಿತ್ತು ಮತ್ತು ಲಯೀಕ್‌ 80ರ ಉತ್ತರಾರ್ಧದಲ್ಲಿದ್ದರು. ಇಬ್ಬರೂ ಕಾಯಿಲೆಯಿಂದ ನರಳುತ್ತಿದ್ದರು. ನೇರವಾಗಿ ಅವರು ಹೇಳಿಕೊಳ್ಳದಿದ್ದರೂ, ಪೂರ್ವಜರ ನೆಲೆಯಲ್ಲೇ ತಮ್ಮ ಸಾವನ್ನು ಬರಮಾಡಿಕೊಳ್ಳಲು ಅವರು ಬಯಸಿದ್ದುದು ನನಗೆ ಅರ್ಥವಾಗಿತ್ತು. ಈ ಕಿಹಿಮ್‌ನಲ್ಲೇ ಸಲೀಂ ಅಲಿ ಅವರು ಗೀಜಗಗಳ ಗೂಡು ಕಟ್ಟುವ ಅಭ್ಯಾಸಕ್ಕೆ ಸಂಬಂಧಿಸಿದ ತಮ್ಮ ಖ್ಯಾತ ಅಧ್ಯಯನಗಳನ್ನು ನಡೆಸಿದ್ದು. ಸ್ವತಃ ಜಫರ್‌ ತಮ್ಮ ಮಕ್ಕಳು ಮತ್ತು ಸ್ನೇಹಿತರನ್ನು ಹಲವಾರು ಬಾರಿ ಈ ಕರಾವಳಿಗೆ ಪಕ್ಷಿವೀಕ್ಷಣಾ ಪ್ರವಾಸ ಕರೆದೊಯ್ದಿದ್ದರು.

2013ರ ಆಗಸ್ಟ್‌ನಲ್ಲಿ ಫತೇಅಲಿ ಕಿಹಿಮ್‌ನಲ್ಲಿ ನಿಧನ ರಾದರು. ಮರುವರ್ಷದ ಜುಲೈನಲ್ಲಿ ಲಯೀಕ್‌ ಸಹ ಮೃತ ರಾದರು. ಅದೃಷ್ಟವಶಾತ್‌, ಬೆಂಗಳೂರನ್ನು ಬಿಡುವ ಮೊದಲು ಫತೇಅಲಿ ಅವರು ಶಾಂತಿ ಮತ್ತು ಆಶಿಷ್‌ ಚಂದೋಲ ಎಂಬ ಅತ್ಯಂತ ಸಮರ್ಥ ಯುವ ಪರಿಸರ ಸಂರಕ್ಷಕರ ನೆರವಿನೊಂದಿಗೆ ತಮ್ಮ ಆತ್ಮಚರಿತ್ರೆಯನ್ನು ಬರೆದು ಮುಗಿಸಿದ್ದರು. ಅದೀಗ ‘ಸಾಂಗ್‌ ಆಫ್‌ ದಿ ಮ್ಯಾಗ್‌ಪೈ ರಾಬಿನ್‌’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಆಕರ್ಷಕ ವಾಗಿರುವ ಈ ಪುಸ್ತಕ, ದೇಶದ ಪರಿಸರ ಸಂರಕ್ಷಣೆಯ ಇತಿಹಾಸದ ಬಗೆಗಿನ ಒಳನೋಟಗಳ ಜೊತೆಗೆ ಜಫರ್‌ ಅವರ ಹಾಸ್ಯಪ್ರಜ್ಞೆಯನ್ನೂ ಒಳಗೊಂಡಿದೆ.

ಫತೇಅಲಿ ಅವರ ಹಿನ್ನೆಲೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯಿಂದ ಪುಸ್ತಕ ಆರಂಭವಾಗುತ್ತದೆ. ಅವರ ತಾತ ಬದ್ರುದ್ದೀನ್‌ ತ್ಯಾಬ್ಜಿ ಬಾಂಬೆ ಹೈಕೋರ್ಟ್‌ನ ಮೊದಲ ಭಾರತೀಯ ನ್ಯಾಯಾಧೀಶರಲ್ಲಿ ಒಬ್ಬರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಥಮ ಮುಸ್ಲಿಂ ಅಧ್ಯಕ್ಷರಾಗಿದ್ದರು. ಕುಟುಂಬದ ಇತರ ಸದಸ್ಯರು ಸಹ ಪ್ರಖ್ಯಾತ ವಿದ್ವಾಂಸರು, ಆಡಳಿತಗಾರರು ಹಾಗೂ ಸಮಾಜ ಸೇವಕರಾಗಿದ್ದವರು. ಆಗ ಮುಂಬೈ, ದೇಶದ ಅತ್ಯಂತ ಕಾಸ್ಮಪಾಲಿಟನ್‌ ನಗರವಾಗಿತ್ತು ಮತ್ತು ಈ ಬಗೆಯ ಸಂಸ್ಕೃತಿ ಯನ್ನು ಮೈಗೂಡಿಸಿಕೊಂಡಿದ್ದ ಅಲ್ಲಿನ ಕುಟುಂಬಗಳಲ್ಲಿ ತ್ಯಾಬ್ಜಿಗಳೂ ಸೇರಿದ್ದರು. ವರ್ಗಭೇದ, ಸ್ಥಾನಮಾನ, ಕುಲ, ಧರ್ಮ, ವಯಸ್ಸು ಅಥವಾ ಲಿಂಗ ತಾರತಮ್ಯವನ್ನು ಜಫರ್‌ ಮೊದಲಿನಿಂದಲೂ ವಿರೋಧಿಸುತ್ತಿದ್ದರು.

ಅವರ ಆತ್ಮಚರಿತ್ರೆಯು, ದೇಶದ ಪರಿಸರ ಸಂರಕ್ಷಣೆಯ ಮಾತೃ ಸಂಘಟನೆಯಾದ ‘ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ’ಯ (ಬಿಎನ್‌ಎಚ್‌ಎಸ್‌) ಪಾತ್ರ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ಸೂಕ್ಷ್ಮದೃಷ್ಟಿಕೋನವನ್ನು ಒಳ ಗೊಂಡಿದೆ. ಈ ಸೊಸೈಟಿಯ ಜೊತೆಗೆ ‘ವಿಶ್ವ ವನ್ಯಜೀವಿ ನಿಧಿ’ಯ ಭಾರತೀಯ ಘಟಕದಲ್ಲೂ ಜಫರ್‌ ಅವರದು ಪ್ರಮುಖ ಹೆಸರು. ಅವರು 1973ರಲ್ಲಿ ಇಂದಿರಾ ಗಾಂಧಿ ಅವರು ಸ್ಥಾಪಿಸಿದ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿಯ ಸದಸ್ಯರೂ ಆಗಿದ್ದರು. ದಾರ್ಶನಿಕ ವಿಜ್ಞಾನಿ ಪೀತಾಂಬರ ಪಂಥ್‌ ಈ ಸಮಿತಿಯ ಅಧ್ಯಕ್ಷರಾಗಿದ್ದರು.

ಪರಿಸರ ಸಂರಕ್ಷಣೆಯಲ್ಲಿ ಪ್ರಮುಖರಾದ ಪಕ್ಷಿಶಾಸ್ತ್ರಜ್ಞ ಹ್ಯೂ ವಿಸ್ಲರ್‌, ಹುಲಿ ತಜ್ಞ ಕೈಲಾಶ್‌ ಸಂಕಲ ಅಂತಹವರ ವ್ಯಕ್ತಿತ್ವ ಮತ್ತು ಕೊಡುಗೆಗಳ ಮೇಲೂ ಜಫರ್‌ ಅವರ ಪುಸ್ತಕ ಬೆಳಕು ಚೆಲ್ಲುತ್ತದೆ. ತಮ್ಮ ಪಾತ್ರವನ್ನು ಅವರು ಕಡೆಗಣಿಸಿ ದ್ದಾರಾದರೂ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಭವಿಷ್ಯದ ಪ್ರಯತ್ನಗಳಿಗೆ ಅಡಿಗಲ್ಲು ಹಾಕಿದ ಮೂವರು ಪ್ರಮುಖರಲ್ಲಿ ಪ್ರಕೃತಿಶಾಸ್ತ್ರಜ್ಞ ಎಂ.ಕೃಷ್ಣನ್‌, ಸಲೀಂ ಅಲಿ ಮತ್ತು ಸ್ವತಃ ಜಫರ್‌ ಸೇರಿದ್ದಾರೆ. ತಮ್ಮ ಮಾತು, ಬರಹ, ಪ್ರಚಾರ, ಸಹನಶೀಲ ಗುಣ, ಕಠಿಣ ಪರಿ ಶ್ರಮ ಮತ್ತು ಪ್ರಭಾವದಿಂದಾಗಿ ವಿಸ್ತೃತವಾದ ಸಾಮಾಜಿಕ ಹಾಗೂ ರಾಜಕೀಯ ಜಾಗೃತಿಯನ್ನು ಅವರು ಮೂಡಿಸಿ ದರು. ಇದು ನೂರಾರು ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳ ಸ್ಥಾಪನೆಗೆ ಕಾರಣವಾಯಿತು.

ಪರಿಣಾಮಕಾರಿ ತಂಡಗಳನ್ನು ಕಟ್ಟುವಲ್ಲಿ ನಮಗಿರುವ ಸಮಷ್ಟಿ ಪ್ರಜ್ಞೆಯ ಕೊರತೆಯು ಉತ್ತಮ ಸಂರಕ್ಷಣಾ ವಿಧಾನಗಳಿಗೆ ಹೇಗೆ ತೊಡಕಾಗುತ್ತಿದೆ ಎಂಬುದನ್ನು ಜಫರ್‌  ವಿಷಾದದಿಂದ ಬರೆದಿದ್ದಾರೆ. ‘ವೈಯಕ್ತಿಕ ಗುರಿಗಳು ಮತ್ತು ವೈಯಕ್ತಿಕ ಕಾರ್ಯ ಸೂಚಿಗೆ ಬದಲಾಗಿ, ಕೈಗೆತ್ತಿಕೊಂಡಿರುವ ಕಾರ್ಯದಲ್ಲಿ ಪ್ರಗತಿ ಸಾಧನೆ, ಆಲಿಸುವಿಕೆ, ಸಂಧಾನ ಹಾಗೂ ಸಮನ್ವಯ ಸಾಧಿಸುವಲ್ಲಿ ಉನ್ನತ ಸಾಮರ್ಥ್ಯ ವೃದ್ಧಿಯ ಅಗತ್ಯ ಎಷ್ಟಿದೆ ಎಂಬುದನ್ನು ಅಂತರ ರಾಷ್ಟ್ರೀಯ ಘಟಕಗಳೊಂದಿಗಿನ ಅನುಭವದಿಂದ ನಾನು ಕಂಡುಕೊಂಡೆ’ ಎಂದು ಅವರು ಹೇಳಿದ್ದಾರೆ.

ಈ ಮಾತು ಅಕ್ಷರಶಃ ಸತ್ಯ. ದೇಶದ ಪರಿಸರ ಕಾರ್ಯಕರ್ತರ ಜೊತೆಗಿನ ನನ್ನ ಅನುಭವದಲ್ಲೇ, ಬಹುತೇಕರು ತೀವ್ರವಾದ ಸ್ವಪ್ರತಿಷ್ಠೆಯುಳ್ಳವರು ಮತ್ತು ಅತಿ ಯಾದ ವಾದಪ್ರಿಯರು ಎಂದು ನಾನು ಸ್ಪಷ್ಟವಾಗಿ ಹೇಳ ಬಲ್ಲೆ. ಜಫರ್‌ ಮಾತ್ರ ಇಂತಹುದರಿಂದೆಲ್ಲ ಹೊರತಾಗಿದ್ದರು. ಕೌಟುಂಬಿಕ ಜೀವನ ಅವರ ಕಾರ್ಯಕ್ಕೆ ಸ್ಪರ್ಧೆ ಒಡ್ಡುವ ಬದಲು, ಸಹಕರಿಸಿ ಉತ್ತೇಜನ ನೀಡಿತು. ಅವರ ವೈಯಕ್ತಿಕ ಗುಣಗಳು, ಸೌಜನ್ಯ, ಮಾನವೀಯತೆಯ ಜೊತೆಗೆ ವಿನೋದ ಪ್ರಜ್ಞೆಯೂ ಅದರೊಟ್ಟಿಗೆ ಮೇಳೈಸಿದವು.

ಭಾರತೀಯ ಪಕ್ಷಿವಿಜ್ಞಾನ ಮತ್ತು ಪರಿಸರ ಸಂರಕ್ಷಣಾ ಪ್ರಪಂಚದಲ್ಲಿ ಫತೇಅಲಿ ಅಹಂರಹಿತ ಸಮನ್ವಯಕಾರ ನಂತಿದ್ದರು. ಬಿಎನ್‌ಎಚ್‌ಎಸ್‌ ಮತ್ತು ಡಬ್ಲ್ಯುಡಬ್ಲ್ಯುಎಫ್‌ ಎರಡರಲ್ಲೂ ಅವರು ಪೀಳಿಗೆಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಿದರು. ಇತರ ಹೆಸರಾಂತ ಭಾರತೀಯ ರಂತಲ್ಲದೆ, ಪ್ರತಿ ವ್ಯಕ್ತಿಯನ್ನೂ ಅವರವರ ದೃಷ್ಟಿಕೋನ ದಿಂದಲೇ ನೋಡುತ್ತಿದ್ದರು. ಒಣಪ್ರತಿಷ್ಠೆ, ಅಹಂ ಇಲ್ಲದ ಅಂತಹವರನ್ನು ನಾನಂತೂ ಕಂಡಿಲ್ಲ. ನಿಮ್ಮೊಂದಿಗೆ ಮಾತನಾಡುವಾಗ ಅವರು ನಿಮ್ಮನ್ನು ಒಬ್ಬ ಅನನ್ಯ ವ್ಯಕ್ತಿ ಎಂದೇ ಪರಿಭಾವಿಸುತ್ತಿದ್ದರು. ನಿಮ್ಮ ವಯಸ್ಸು, ಲಿಂಗ, ನೀವು ಖ್ಯಾತರೋ ಅಲ್ಲವೋ ಯಾವುದೂ ಅವರಿಗೆ ಮುಖ್ಯವಾಗುತ್ತಿರಲಿಲ್ಲ.

ಜಫರ್‌ ಅವರ ಉದಾತ್ತ ಗುಣ ಮತ್ತು ಹೃದಯ ವಂತಿಕೆಯ ಜೊತೆಗೆ ಅವರ ವಿನೋದ ಪ್ರಜ್ಞೆಯೂ ಪುಸ್ತಕ ದಲ್ಲಿ ಅನಾವರಣಗೊಂಡಿದೆ. ವಲಸೆ ಹಕ್ಕಿಗಳಿಗೆ ಸಂಬಂ ಧಿಸಿದ ಬಿಎನ್‌ಎಚ್‌ಎಸ್‌ನ ಯೋಜನೆಯೊಂದಕ್ಕೆ ನೆರ ವಾಗಲು ಬಂದಿದ್ದ ಸ್ವಿಸ್‌ನ ತಜ್ಞರಾದ ಶಿಫರ್‌ ಅಲಿ ಅವರ ಬಗ್ಗೆ ಈ ಪುಸ್ತಕದಲ್ಲಿ ಪ್ರಸ್ತಾಪವಿದೆ. ಕಾರ್ಯನಿರತ ಸಿಬ್ಬಂದಿಯೊಬ್ಬರು ‘ಈ ಕೆಲಸ ಮಾಡುತ್ತಿರುವವರೆಲ್ಲರೂ ಅಲಿಗಳೇ. ಸಲೀಂ ಅಲಿ, ಫತೇಅಲಿ ಮತ್ತು ಶಿಫರ್‌ ಅಲಿ’ ಎಂದು ಹೇಳುತ್ತಿದ್ದ ಮಾತು ಅಚಾನಕ್ಕಾಗಿ ಜಫರ್‌ ಅವರ ಕಿವಿಗೆ ಬಿದ್ದಿತ್ತು.
ಆ ಯೋಜನೆಗೆ ಸಂಬಂಧಿಸಿದಂತೆ ಈ ಮಾತು ನಿಜ. ಆದರೆ ಭಾರತೀಯ ಪರಿಸರ ಸಂರಕ್ಷಣೆಯ ಇತಿಹಾಸದ ವಿಶಾಲ ಭೂಮಿಕೆಯಲ್ಲಿ, ಕೆಲವು ಸಂದರ್ಭಗಳಲ್ಲಷ್ಟೇ ಅಲಿ ಅಲ್ಲದವರು ಮುಖ್ಯರಾಗಿದ್ದಾರೆ.

1940ರಲ್ಲಿ ಸಲೀಂ ಅಲಿ ಅವರ ನೇತೃತ್ವದಲ್ಲಿ ಕಛ್‌ಗೆ ತೆರಳಿದ್ದ ಅಧ್ಯಯನ ಪ್ರವಾಸದ ಬಗ್ಗೆ ಕುತೂಹಲಕಾರಿ ಕಥೆಯೊಂದಿದೆ. ವಿಷಕಾರಿಯಾದ ಮಂಡಲ ಹಾವುಗಳ ತಾಣವಾಗಿದ್ದ ಕಾರ್‌ಬೆಟ್‌ ಎಂಬಲ್ಲಿ ಅವರು ಶಿಬಿರ ಹೂಡಿ ದ್ದರು. ‘ಸಲೀಂ ದೂರದೃಷ್ಟಿಯಿಂದ ಜೊತೆಯಲ್ಲಿ ತಂದಿದ್ದ ಹಾವಿನ ನಂಜು ನಿವಾರಕ ಔಷಧಿಯ ಕಿಟ್‌ ಅನ್ನು ಬಳಸುವ ಬಗೆ ಹೇಗೆಂದು ತಿಳಿಯುವುದರಲ್ಲೇ ನಮ್ಮ ಮೊದಲ ದಿನದ ಸಂಜೆ  ಕಳೆದುಹೋಯಿತು. ಕಿಟ್‌ನಲ್ಲಿದ್ದ ಸೂಚನೆಗಳನ್ನು ಅರಿಯಲು ಹರಸಾಹಸ ಪಟ್ಟ ಬಳಿಕ, ಒಂದು ವೇಳೆ ಹಾವೇನಾದರೂ ಕಚ್ಚಿದರೆ ಅಂತಹವರನ್ನು ಶಾಂತವಾಗಿ ಸಾಯಲು ಬಿಡಬೇಕು ಎನ್ನುವ ಒಪ್ಪಂದಕ್ಕೆ ನಾವು ಬಂದೆವು’ ಎಂದು ಅವರು ಬರೆದಿದ್ದಾರೆ.

‘ಸಾಂಗ್‌ ಆಫ್‌ ದಿ ಮ್ಯಾಗ್‌ಪೈ ರಾಬಿನ್‌’ನ ಓದುವಿಕೆಯು ಸಾಹಿತ್ಯಪ್ರಿಯರು, ಪರಿಸರಪ್ರಿಯರು ಇಬ್ಬರಿಗೂ ಲಾಭದಾಯಕವಾಗಿದೆ. ಜಫರ್‌ ಅವರು ಬಿಟ್ಟುಹೋಗಿರುವ ಪಕ್ಷಿವಿಜ್ಞಾನದ ಪರಂಪರೆಯನ್ನು ‘ಇಂಡಿಯನ್‌ ಬರ್ಡ್ಸ್‌’ ನಿಯತಕಾಲಿಕ ಅತ್ಯುತ್ತಮವಾಗಿ ಮುಂದುವರಿಸಿಕೊಂಡು ಬರುತ್ತಿದೆ. ಹಳೆಯ ‘ನ್ಯೂಸ್‌ಲೆಟರ್‌ ಫಾರ್‌ ಬರ್ಡ್ ವಾಚರ್ಸ್‌’ನ ವಾರಸುದಾರ ಪತ್ರಿಕೆಯಾದ ‘ಇಂಡಿಯನ್‌ ಬರ್ಡ್ಸ್‌’, ಜಫರ್‌ ಅವರ ಶಿಷ್ಯ ಆಶಿಶ್‌ ಪಿಟ್‌ ಅವರ ಸಂಪಾದಕತ್ವದಲ್ಲಿ  ಹೈದರಾಬಾದಿನಿಂದ‍ಪ್ರಕಟವಾಗುತ್ತಿದೆ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT