ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ: ಮಾಯೆ ಮತ್ತು ಮೀನಿನ ಹೆಜ್ಜೆ?

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ತ್ರೀ ಯ ದೇಹವೆಂಬುದು ಲೈಂಗಿಕ ಭೋಗ­ವಸ್ತು  ಎಂಬಂಥ ಮನಸ್ಥಿತಿ ಇಂದು ನೆನ್ನೆಯದಲ್ಲ.  ಇಂತಹ ಮನಸ್ಥಿತಿಗಳ ವಿರುದ್ಧದ ಹೋರಾಟ, ಅನುಭವಿಸಬೇಕಾದ ದುಗುಡಗಳು ಅಂದಿನಿಂದ ಇಂದಿನವರೆಗೂ ಮುಂದು ವರಿದುಕೊಂಡು ಬಂದಿವೆ.  ಇದಕ್ಕೊಂದು ಉದಾಹರಣೆ  12ನೇ ಶತಮಾನದ ವಚನಕಾರ್ತಿ ಅಕ್ಕ ಮಹಾದೇವಿಯ ಈ ವಚನ
ಬಟ್ಟಿಹ ಮೊಲೆಯ, ಭರದ ಜವ್ವನದ
ಚೆಲುವ ಕಂಡು ಬಂದಿರಣ್ಣಾ !     
ಅಣ್ಣಾ, ನಾನು ಹೆಂಗೂಸಲ್ಲ !
ಅಣ್ಣಾ, ನಾನು ಸೂಳೆಯಲ್ಲ !
ಅಣ್ಣಾ, ಮತ್ತೆ ನನ್ನ ಕಂಡು
ಆರೆಂದು ಬಂದಿರಣ್ಣ ?
ಚನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ  ಪುರುಷನು
ನಮಗಾಗದ ಮೋರೆ ನೋಡಣ್ಣ


ಸ್ತ್ರೀಯರ  ಅಸ್ಮಿತೆಯನ್ನು ಸ್ತ್ರೀ ದೇಹ ಎಂಬ­ಷ್ಟಕ್ಕೇ ಇಳಿಸಿ ಕಾಣುವ ಈ ಪರಂಪರೆ ನೂರಾರು ವರ್ಷಗಳ ಹಿಂದಿನಿಂದಲೂ ಹೆಣ್ಣನ್ನು ಕಾಡಿದೆ. ಹೊಸ  ಕಾಲದಲ್ಲಿ ಮಹಿಳೆಯನ್ನು ಅಳೆಯುವ ಇಂತಹ  ‘ಎಕ್ಸ್ ರೇ ದೃಷ್ಟಿ’ ದೊಡ್ದದಾಗೇ ಬೆಳೆ­ದಿದೆ.  ಹೆಣ್ಣನ್ನು ಬರೀ ದೇಹವಾಗಿ ಪರಿಭಾವಿ­ಸುವ ಕ್ರಮಕ್ಕೆ ಕಳೆದ ಶತಮಾನದ 80, 90ರ ದಶಕ­ಗಳಲ್ಲಿ ಪ್ರತಿರೋಧದ ದನಿಗಳು  ಕೇಳಿ ಬಂದಿ­ದ್ದವು. ಆದರೆ ಇಂದು ಲೈಂಗಿಕ ಸರಕೀಕರಣ (ಆಬ್ಜೆಕ್ಟಿ­ಫಿ­ಕೇಷನ್)  ಸಂಸ್ಕೃತಿ ದೊಡ್ಡದಾಗೇ ಕಾಣಿ­ಸು­ತ್ತಿದೆ.

ಮಾಧ್ಯಮಗಳ ಸಂಗಮದ ಈ ಯುಗದಲ್ಲಿ  ಹಿಂದೆಂದಿಗಿಂತ  ಹೆಚ್ಚಿನ ಚಿತ್ರಗಳು, ದೃಶ್ಯಗಳು ನಮ್ಮ ಸುತ್ತ ಆವರಿಸುತ್ತಿವೆ.  ಇವುಗ­ಳಲ್ಲಿ ಬಹು­ಪಾಲು ಚಿತ್ರಗಳು ಹೆಣ್ಣಿನ ದೇಹವನ್ನು ಲೈಂಗಿಕ ಸರಕಾಗಿ ಕಾಣುವಂತಹದ್ದೇ ಆಗಿರುತ್ತವೆ. ಇವನ್ನು ಕುರಿತು ಮಾತನಾಡಲು ಭಾಷೆಯೇ ಇಲ್ಲದಂತಾ­ಗಿದೆ. ನಿಜ ಹೇಳ­ಬೇಕೆಂದರೆ ಇಂದಿನ ಯುವ­ಜನತೆಗೆ ಇದನ್ನು ಗುರುತಿಸುವಂತಹ ಸ್ಪಷ್ಟ ಗ್ರಹಿಕೆ­­­ಗಳಿಲ್ಲ  ಎಂದೂ ಅನಿಸುತ್ತದೆ. ಇಂತಹ­ದೊಂದು ಸನ್ನಿವೇಶದಲ್ಲಿ  ಮಹಿಳೆಯ ದೇಹದ  ಸರಕೀಕ­ರಣದ  (ಆಬ್ಜೆಕ್ಟಿ­ಫಿಕೇಷನ್) ವಿರುದ್ಧ ಬಾಲಿವುಡ್ ಚಿತ್ರನಟಿ, 27 ವರ್ಷದ ದೀಪಿಕಾ ಪಡುಕೋಣೆ ದನಿ ಎತ್ತಿದ್ದು   ಮುಖ್ಯವಾದದ್ದು.

ಪ್ರಮುಖ ದಿನಪತ್ರಿಕೆಯೊಂದು ತನ್ನ ಸಾಮಾ­ಜಿಕ ಮಾಧ್ಯಮದಲ್ಲಿ  ‘OMG – ದೀಪಿಕಾ ಕ್ಲೀವೇಜ್ ಷೋ’  (ಓ ಮೈ ಗಾಡ್– ದೀಪಿಕಾ ಎದೆ­ಸೀಳಿನ ಪ್ರದರ್ಶನ) ಎಂಬ ಶಿರೋನಾಮೆ­ಯಡಿ ಛಾಯಾಚಿತ್ರ ಪ್ರಕಟಿಸಿತ್ತು. ಇದು ಮಾಧ್ಯ­ಮ­ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾಮೂ­ಲಾ­ಗಿ­ರುವ ಪುಕ್ಕಟೆ  ಇಣುಕು ಕಾಮು­ಕ­ತನ­ವಲ್ಲದೆ (ವಾಯ­ರಿಸಂ) ಬೇರೇನಲ್ಲ.  ಆದರೆ ಇದರ ವಿರುದ್ಧ  ದೀಪಿಕಾ ಪ್ರತಿಭಟಿಸಿದ್ದು ವಿಶೇಷ. ಎತ್ತರದ ಕ್ಯಾಮೆರಾ  ಕೋನದಿಂದ ತೆಗೆದಂತಹ ಚಿತ್ರ ಅದು. ಒಂದು ವರ್ಷ ಹಳೆಯದು ಬೇರೆ.  ಆಗ ಇದನ್ನು  ದೀಪಿಕಾ ಅಭಿನಯವಿದ್ದ ‘ಚೆನ್ನೈ ಎಕ್ಸ್‌­ಪ್ರೆಸ್’ ಚಿತ್ರದ  ಪ್ರಚಾರಕ್ಕಾಗಿ ಬಳಸ ಲಾ­ಗಿತ್ತು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ದೀಪಿಕಾ ‘ಹೌದು. ನಾನು ಮಹಿಳೆ. ನನಗೆ ಸ್ತನಗಳಿವೆ ಹಾಗೂ ಎದೆ ಸೀಳಿದೆ! ನಿಮಗೇನಾದರೂ ಸಮಸ್ಯೆಯೆ!??’ ಎಂದು  ಟ್ವಿಟರ್‌ನಲ್ಲಿ ಖಾರ­ವಾಗಿ ಕೇಳಿದ್ದರು. ಆ ನಂತರ ತಮ್ಮ  ದೃಷ್ಟಿ­ಕೋನ­ವನ್ನು  ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ತರ್ಕ­ಬದ್ಧ­ವಾಗಿ  ಪ್ರಸ್ತುತಿಪಡಿಸಿ ಈ ವಾಗ್ವಾದವನ್ನು ಬೆಳೆಸಿದ್ದು ವಿಶೇಷ . ‘ನನ್ನ ವೃತ್ತಿಯ ಬಗ್ಗೆ ನಾನೇನೂ ಮುಗ್ಧ­ಳಾ­ಗಿಲ್ಲ’ ಎಂದೂ ದೀಪಿಕಾ ಬರೆದರು. ಏಕೆಂದರೆ, ಮಹಿಳೆ­ಯರನ್ನು ಸಾಮಾನ್ಯವಾಗಿ  ಅಧೀನ ನೆಲೆ­ಯಲ್ಲಿ ಉಪಭೋಗ ವಸ್ತುವಾಗಿ ನೋಡು­ವಂತಹ ಚಿತ್ರಗಳನ್ನು ತಯಾರಿಸುವ ವ್ಯವಸ್ಥೆಯ ಅಂತರ್ಗತ ಭಾಗವಾಗಿರಬೇಕಾದ ವಿಪರ್ಯಾಸ ದೀಪಿಕಾ ವೃತ್ತಿಯದಾಗಿದೆ.  ಇದು ತಮಗೂ ಗೊತ್ತಿದೆ ಎಂಬುದನ್ನು ಅವರು ಈ ವಾಕ್ಯಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

‘ತಲೆಯಿಂದ ಕಾಲ್ಬೆರಳವರೆಗೂ ಬಟ್ಟೆ ಧರಿಸಿರ­ಬೇಕೆಂಬುದು ಒಂದು ಪಾತ್ರಕ್ಕೆ ಅಗತ್ಯವಾದರೆ ಮತ್ತೊಂದು ಪಾತ್ರಕ್ಕೆ ಪೂರ್ಣ ನಗ್ನವಾಗಿರ­ಬೇಕಾ­ದುದು ಅಗತ್ಯವಾಗಬಹುದು.  ಇವನ್ನು ಒಪ್ಪಿ­ಕೊಳ್ಳು­ವುದು ಬಿಡುವುದು ನಟಿಯಾಗಿ ನನ್ನ ಆಯ್ಕೆ. ಇದನ್ನು ಅರ್ಥ ಮಾಡಿಕೊಳ್ಳಿ. ಇದು  ರೋಲ್ (ಪಾತ್ರ ); ರಿಯಲ್ (ವಾಸ್ತವ) ಅಲ್ಲ. ಆಯ್ದುಕೊಂಡ ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ನನ್ನ ಕರ್ತವ್ಯ. ನನ್ನ ದೇಹ ಸೆಲಬ್ರೇಟ್ ಮಾಡಲು ನನಗೆ ಸಮಸ್ಯೆ ಇಲ್ಲ.  ಪಾತ್ರ ಚಿತ್ರಣಕ್ಕೆ ತೆರೆಯ ಮೇಲೆ  ದಿಟ್ಟವಾಗಿ ಅಭಿನಯಿಸಲು ನಾನು ಹಿಂಜ­ರಿದಿಲ್ಲ’ ಎಂದು  ಚಿತ್ರರಂಗ ಹಾಗೂ ನಿಜ­ಜೀವ­ನದ ಮಧ್ಯೆ ಗೆರೆ ಎಳೆಯಬೇಕಾದ ಅವಶ್ಯಕತೆ­ಯನ್ನು ಮನದಟ್ಟು ಮಾಡಿಸಲು ದೀಪಿಕಾ ಯತ್ನಿಸಿದ್ದಾರೆ.

‘ನನ್ನ ಕಾಳಜಿ ಏನೆಂದರೆ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ.  ಶಾರುಖ್ ಖಾನ್ ಅವರ 8 ಪ್ಯಾಕ್ ಅಥವಾ ಇತರ ಮಹಿಳೆ ಅಥವಾ  ಪುರುಷನ  ಅಂಗರಚನೆ (ಅನಾಟಮಿ) ಜೊತೆಗೆ ಇದನ್ನು  ಗೊಂದಲ ಮಾಡಿಕೊಳ್ಳ­ಬಾರದು. ಮಹಿಳಾ ಸಮಾನತೆ ಹಾಗೂ ಸಬಲೀ­ಕರಣಕ್ಕಾಗಿ ಶ್ರಮಿಸುತ್ತಿರುವ  ಈ ಕಾಲದಲ್ಲಿ ಓದುಗರು ಅಥವಾ ವೀಕ್ಷಕರ ಗಮನ ಸೆಳೆದು­ಕೊಳ್ಳಲು  ಇಂತಹ  ಹಿನ್ನಡೆಯ  ತಂತ್ರಗಳನ್ನು ಈಗಲೂ ಬಳಸಿಕೊಳ್ಳುತ್ತಿರುವ   ಸಿದ್ಧಾಂತದ ವಿರುದ್ಧ­ವಷ್ಟೇ ನಾನು ಮಾತನಾಡಿದ್ದೇನೆ’  ಎಂದು ದೀಪಿಕಾ ಸ್ಪಷ್ಟಪಡಿಸಿದ್ದಾರೆ.

‘ಸಿನಿಮಾದಲ್ಲಿ ಪುರುಷ ನಟನ 8 ಪ್ಯಾಕ್ ಆಬ್ಸ್  ನೋಡಿ ದಂಗಾಗುತ್ತೇವೆ. ಆದರೆ  ಆತ ಸಾರ್ವ­­ಜನಿಕವಾಗಿ ಕಾಣಿಸಿಕೊಂಡಾಗ ಪುರುಷನ ತೊಡೆ  ಸಂದಿಗೆ  (ಕ್ರಾಚೆಟ್)  ಝೂಮ್ ಮಾಡಿ  ಅಭಿರುಚಿಹೀನ ಶಿರೋನಾಮೆ ನೀಡ­ಲಾಗುತ್ತ­ದೆಯೆ?’ ಎಂಬಂಥ ಪ್ರಶ್ನೆಯನ್ನು ಕೇಳುವ ದಿಟ್ಟತನ ಪ್ರದರ್ಶಿಸಿದ್ದಾರೆ  ದೀಪಿಕಾ. ‘ಪರಸ್ಪರರಿಗೆ ಪ್ರೀತಿ, ಘನತೆ ಹಾಗೂ ಗೌರವ ತೋರಿಸಿ  ಎಂಬುದು ಎಲ್ಲರಲ್ಲಿ ನನ್ನ ಕೋರಿಕೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ  ಮಹಿಳಾ ಪರ ಹೋರಾ­ಟದಲ್ಲಿ ತೊಡಗಿಕೊಂಡಿರುವ ಸಾಮಾ­ಜಿಕ ಕಾರ್ಯಕರ್ತೆಯೇನೂ ಅಲ್ಲ.  ಅಥವಾ ಗಂಭೀ­ರ­ವಾದ ಕಾಳಜಿಗಳಿಗೆ ಧ್ವನಿಯಾಗುವ ‘ಪರ್ಯಾಯ ಸಿನಿಮಾ’ದಿಂದ ಬಂದ ಅಭಿ­ನೇತ್ರಿಯೂ  ಅಲ್ಲ.  ಮುಖ್ಯವಾಹಿನಿಯ ಚಿತ್ರರಂಗ­ವನ್ನು ಪ್ರವೇಶಿಸಿದ ಎಂಟು ವರ್ಷಗಳಲ್ಲೇ ಬಾಲಿ­ವುಡ್‌ನ ಯಶಸ್ವೀ ತಾರೆಯಾಗಿದ್ದಾರೆ ಅವರು. ಹೀಗಾಗಿ ದೀಪಿಕಾ ಎತ್ತಿದ ಪ್ರಶ್ನೆ ಸಹಜವಾಗಿಯೇ ಮುಖ್ಯವಾಹಿನಿಯ ವಾಗ್ವಾದವಾಗಿ ಪರಿಣಮಿಸು­ತ್ತದೆ. ದೀಪಿಕಾ ಆಕ್ರೋಶಕ್ಕೆ ಪ್ರಚಾರಾಂದೋ­ಲನದ ಸ್ವರೂಪವೂ  ದಕ್ಕಿತು.

ಟ್ವಿಟರ್‌ನಲ್ಲಿ 70.25 ಲಕ್ಷ ಫಾಲೋವರ್ಸ್‌ಗಳನ್ನು  ದೀಪಿಕಾ ಹೊಂದಿದ್ದಾರೆಂಬುದನ್ನು ಗಮನಿಸಿದರೆ ಇದರ ಪ್ರಭಾವ ಅರಿವಾಗುತ್ತದೆ. ಶಾರುಖ್ ಖಾನ್, ಪ್ರಿಯಾಂಕಾ ಛೋಪ್ರಾ, ಆಮೀರ್ ಖಾನ್,  ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ಪ್ರಮು­ಖರು ಬೆಂಬಲಕ್ಕೆ ನಿಂತಿದ್ದು ಈ ಪ್ರಚಾ­ರಾಂ­ದೋಲನಕ್ಕೆ ಮತ್ತಷ್ಟು ಬಲ ತುಂಬಿ­ದಂತಾ­ಯಿತು. ಮಹಿಳೆಯನ್ನು  ಉಪಭೋಗ ವಸ್ತುವಾಗಿಸಿದೆ (ಕಮಾಡಿಫಿಕೇಷನ್) ಮನರಂಜನಾ ಉದ್ಯಮ. ಪ್ರಚೋದಕ  ರಂಜನೆ (ಟಿಟಿಲೇಟಿಂಗ್) ಒದಗಿ­ಸಲು ಚಿತ್ರಗಳಲ್ಲಿ  ‘ಐಟಂ ಗರ್ಲ್’ ಬೇಕು ಎಂಬ ಸೂತ್ರ ಸ್ಥಾಯಿಯಾಗಿ ಇದೆ. 

ಇಂತಹ ಮನಸ್ಥಿತಿ­ಗಳಿಗೆ  ಮಾಧ್ಯಮಗಳೂ ಜೊತೆಯಾಗುತ್ತವೆ. ಹೀಗಾ­­ಗಿಯೇ ವೇಶ್ಯಾವಾಟಿಕೆ ಆರೋಪದಲ್ಲಿ ಸಿಲುಕಿದ ಬಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಬದುಕು ಅತಿರಂಜಿತ ಸುದ್ದಿಯಾಗು­ತ್ತದೆ. ಒಂದಷ್ಟು ಸಮಯವಾದರೂ  ಜನರ ಗಮನ­ವನ್ನು ಮಾಧ್ಯಮಗಳತ್ತ ಸೆಳೆದುಕೊಳ್ಳುವು­ದಷ್ಟೇ ಇದರ ಉದ್ದೇಶ. ಆದರೆ ಆಕೆಯನ್ನು ಬಳಸಿಕೊಂಡ  ಪುರುಷರು ಪ್ರಚಾರದ ಬೆಳಕಿನಿಂದ ತಪ್ಪಿಸಿಕೊಂಡು ಖಾಸಗಿತನ ಕಾಪಾಡಿಕೊಳ್ಳು­ವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಸಮಾ­ಜದ ದ್ವಿಮುಖ ಧೋರಣೆಗಳಿಗೆ ಹಿಡಿದ ಕನ್ನಡಿ. 

ಸ್ತ್ರೀತ್ವ ಎನ್ನುವುದನ್ನು ಕೇವಲ  ಜೈವಿಕವಾಗಿ ನಿರ್ಣಯಿಸಬಹುದೆ ಎಂಬುದು ಪ್ರಶ್ನೆ. ನಮ್ಮ ಭಾಷೆ ಕೂಡ ಎಷ್ಟು ಪೂರ್ವಗ್ರಹಪೀಡಿತ ಎಂದರೆ ಅಂಗನೆ ಎನ್ನುವ ಪದ,  ‘ದೇಹ’ ಹೊಂದಿದವಳು  ಎಂಬ ಅರ್ಥವನ್ನು ಸ್ಫುರಿಸುತ್ತದೆ. ಗರ್ಭಕೋಶ ಹಾಗೂ ಮಗುವಿಗೆ ಹಾಲು ಉತ್ಪತ್ತಿ ಮಾಡುವ ಸ್ತನಗಳು  ಜೈವಿಕವಾಗಿ ಸ್ತ್ರೀತ್ವವನ್ನು ಗ್ರಹಿಸು­ವಂತಹದ್ದು.  ‘ಸ್ತನದಾಯಿನಿ’ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮನ ತಟ್ಟುವ ಕಥೆ­ಯಲ್ಲಿ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಮಹಿಳೆಯ ಅಸ್ಮಿತೆಯನ್ನು ದೇಹ,  ಕೆಲಸಗಿತ್ತಿ ಹಾಗೂ ವಸ್ತುವಾಗಿ ಗುರುತಿಸುತ್ತಾರೆ.

25 ವರ್ಷ­ಗಳವರೆಗೆ ಶ್ರೀಮಂತ ಹಸುಳೆಗಳಿಗೆ ಹಾಲೂಡುತ್ತಾ ನಂತರ ತನ್ನ ಉಪಯುಕ್ತತೆ ಕಳೆದುಕೊಂಡು ಸ್ತನ ಕ್ಯಾನ್ಸರ್‌ನಿಂದ ಸಾಯುವ ಮಹಿಳೆಯೊಬ್ಬಳ ಆರ್ದ್ರ ಕಥೆ ಇದು. ಹೆಣ್ಣಿನ ದೇಹವನ್ನು  ಏನೆಲ್ಲಾ ವಿಧಗಳಲ್ಲಿ ಉಪಭೋಗದ ವಸ್ತುವಾಗಿಸುವ  ವ್ಯವಸ್ಥೆಯ ಕ್ರೌರ್ಯವನ್ನು ಈ ಕಥೆ ಕಣ್ಣಮುಂದೆ ತರುತ್ತದೆ. ಹಾಗೆಯೇ ಈಚಿನ ದಿನಗಳಲ್ಲಿ ಬಾಡಿಗೆ ತಾಯಿಯರ ಸಂಖ್ಯೆ ಹೆಚ್ಚುತ್ತಿದ್ದು ಹೆಣ್ಣಿನ ಗರ್ಭವೂ ಖರೀದಿಸುವವರ ಬಳಕೆಯ ಸಾಧನವಾಗಿದೆ.

ವಾಸ್ತವವಾಗಿ ವಿಶ್ವವನ್ನು ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಪರಿಭಾವಿಸುವ ಕ್ರಮ,  ಈ ಸಮಸ್ಯೆಯ ಮೂಲ.  ಮಹಿಳೆಯೂ ಪುರುಷ ಹೊಂದ­ಬೇಕಾದ ಒಂದು ವಸ್ತು ಎಂಬಂಥ   ದೃಷ್ಟಿ­ಕೋನ­ವನ್ನು ವಿಸ್ತೃತ ನೆಲೆಗಳಲ್ಲಿ ಅರ್ಥೈಸಿಕೊಳ್ಳ­ಬೇಕು. ಮಹಿಳೆಯರೆಂದೂ ಕೇಂದ್ರಬಿಂದುಗಳಲ್ಲ. ಪರಿಧಿಯಲ್ಲಿರುವವರು ಎಂಬ ಮೌಲ್ಯಗಳನ್ನು ಪರಂಪರಾಗತವಾಗಿ ತುಂಬುತ್ತಾ ಬರಲಾಗಿದೆ.  ಹೀಗಾಗಿ ಮಹಿಳೆ ಮಾಯೆ­ಯಾಗಿದ್ದಾಳೆ. ಮೀನಿನ ಹೆಜ್ಜೆಯವಳಾಗಿ­ದ್ದಾಳೆ. ಅರ್ಥವಾಗದ ನಿಗೂಢ ವ್ಯಕ್ತಿಯಾಗಿ­ದ್ದಾಳೆ. ಯಾಕೆಂದರೆ ಮಹಿಳಾ ಕೇಂದ್ರಿತ ದೃಷ್ಟಿ­ಯಿಂದ ಬದುಕನ್ನು ಪರಿಭಾವಿಸು­ವುದು ಪುರುಷ­ರಿಗೆ ಸಾಧ್ಯವಿಲ್ಲ. ಈ ಬಗ್ಗೆ  ಪುರುಷರಿಗೆ ತರಬೇತಿ­ಯಾಗಿರುತ್ತದೆ. ಆದರೆ ಈ ಸತ್ಯವನ್ನು ಒಪ್ಪಲು ಸಮಾಜ ಇಷ್ಟಪಡುವುದಿಲ್ಲ.

ಮಹಿಳೆಯರಿಗೆ  ಸಂಬಂಧಿಸಿದಂತೆ ಭಾರತೀಯ ಸಮಾಜ ಪ್ರಗತಿವಿರೋಧಿಯಾಗಿದೆ ಎಂಬಂಥ ಮಾತನ್ನು ಮತ್ತೊಬ್ಬ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅಮೆರಿಕದ ಮ್ಯಾಗಜೀನ್ ‘ವ್ಯಾನಿಟಿ ಫೇರ್’ಗೆ ಕಳೆದ ವರ್ಷ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಹಿಂತೆಗೆದು­ಕೊಳ್ಳಲು ನಿರಾಕರಿಸಿ ವರದಿಗಾರ­ರೊಬ್ಬ­ರೊಂದಿಗೆ ಮಾತಿನ ಚಕಮಕಿಗೂ ಅವರು ಇಳಿದಿದ್ದರು. ಆಗ ಸಹ ಭಾರತೀಯ ಮಹಿಳೆಯ  ಸ್ಥಿತಿಗತಿ ಬಗ್ಗೆ ಕಹಿ ಸತ್ಯವನ್ನು ಹೇಳಿದ ಮಲ್ಲಿಕಾ ಶೆರಾವತ್‌ಗೆ ಸಾಮಾ­ಜಿಕ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು.

ಬಾಲಿವುಡ್‌ನ  ಹೊಸ ಪೀಳಿಗೆ  ಹೀಗೆ ಪ್ರಶ್ನೆ­ಗಳನ್ನು ಕೇಳುತ್ತಿದೆ ಎಂಬುದೇ ಹೊಸ ಹೆಜ್ಜೆ.    ಪರಿಣೀತಿ ಚೋಪ್ರಾ ಅವರನ್ನು ಬಾಲಿವುಡ್‌ನ ‘ಆ್ಯಂಗ್ರಿ ಯೆಂಗ್ ಗರ್ಲ್’ ಎಂದು ಕರೆಯಲಾ­ಗು­ತ್ತದೆ. ‘ಹುಡುಗಿಯರು ಹರೆಯದಲ್ಲಿದ್ದಾಗ ‘ಅದನ್ನು’ ಇಷ್ಟಪಡುತ್ತಾರೆ. ವಯಸ್ಸಾಗುತ್ತಾ ಹೋದ ಹಾಗೆ ತಮ್ಮನ್ನು ಹುಡುಗ ಶೋಷಿಸಿದ ಎಂದು ಅರಚಲು, ಕಿರುಚಲು ಶುರು ಮಾಡು­ತ್ತಾರೆ ಏಕೆ’ ಎಂಬಂಥ ಪ್ರಶ್ನೆ ಕೇಳಿದ ವರದಿ­ಗಾರನಿಗೆ  ಛೋಪ್ರಾ ಸರಿಯಾಗಿಯೇ ಉತ್ತರಿಸಿ­ದ್ದರು.  ‘‘ಅದನ್ನು’ ಎಂದರೆ ಏನು?  ತಮ್ಮ ಜೊತೆಗಿ­ರ­ಬೇಕೆಂದು ನಿಮಗೆ ಹೆಣ್ಣುಮಕ್ಕಳು ಒತ್ತಾಯಿ­ಸು­ತ್ತಾರೆಯೆ? ..ನೀವು ಅಷ್ಟೊಂದು ಹಿಂಸೆಗೊಳಗಾಗಿ­ದ್ದೀರಾ? ‘ಸ್ಸಾರಿ..’

ಇದು ಹಾಸ್ಯಾಸ್ಪದ ಹಾಗೂ ಯಾವುದೇ ಹುಡುಗಿಗೆ ಇಂತಹ ಮಾತನ್ನಾಡು­ವುದು ಅಗೌರವ­ವಾದದ್ದು’ ಎಂದು ಛೋಪ್ರಾ ಆ ವರದಿಗಾರ­ನನ್ನು ತರಾಟೆಗೆ ತೆಗೆದುಕೊಂಡು ಪತ್ರಿಕಾ­ಗೋಷ್ಠಿಯಲ್ಲಿ ಚಪ್ಪಾಳೆ ಗಿಟ್ಟಿಸಿದ್ದರು. ಆದರೆ, ಈ ಚಪ್ಪಾಳೆ ಅಥವಾ ದೀಪಿಕಾ ಪಡು­ಕೋಣೆ ವ್ಯಕ್ತಪಡಿಸಿದ ಪ್ರತಿರೋಧ ಶತಶತ­ಮಾನ­ಗಳ ಪೂರ್ವಗ್ರಹಗಳ ಪ್ರಾಬಲ್ಯದ ಕೋಟೆಯೊಳಗೆ ನಗಣ್ಯವಾಗಿ ಬಿಡಬಹುದಾದ ಕಟು ವಾಸ್ತವ­ವೂ ನಮ್ಮ ನಡುವೆ ಇದೆ.

ಬಾಲಿವುಡ್‌ನ  ಕಿರಿಯ ತಾರೆಯರು ತಮ್ಮನ್ನು ತಾವು ಹೀಗೆ ಪ್ರತಿಪಾದಿಸಿಕೊಳ್ಳುತ್ತಿರುವ ಸಂದ­ರ್ಭದಲ್ಲಿಯೇ ಬಾಲಿವುಡ್‌ನ ಹಿಂದಿನ ‘ಕನಸಿನ ಕನ್ಯೆ’ ಹಾಗೂ ಮಥುರಾದ ಬಿಜೆಪಿ ಸಂಸದೆ ಹೇಮಾ­ಮಾಲಿನಿ ವಿಧವೆಯರ ಕುರಿತು ವಿವಾದಾ­ತ್ಮಕವಾದ ಅಸೂಕ್ಷ್ಮ ಮಾತುಗಳನ್ನಾಡಿದ್ದಾರೆ.  ಬಿಹಾರ ಹಾಗೂ ಪಶ್ಚಿಮ ಬಂಗಾಳಗಳ  ವಿಧವೆ­ಯರು ವೃಂದಾವನದಲ್ಲಿ ಹೆಚ್ಚು ಹೆಚ್ಚು ಬಂದು ಸೇರಿಕೊಳ್ಳುತ್ತಿರುವ ಕಾರಣ ವೃಂದಾವನದಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ  ಎಂಬರ್ಥದ ಹೇಳಿಕೆ­ಯನ್ನು ಅವರು ನೀಡಿದ್ದಾರೆ. 

ವೃಂದಾವನ ಹೇಮಾ­ಮಾಲಿನಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಸೇರಿದೆ. ಹೇಮಾಮಾಲಿನಿಯ ಪ್ರಕಾರ, 40,000 ವಿಧವೆ­ಯರು ವೃಂದಾವನದಲ್ಲಿ ತುಂಬಿ ಹೋಗಿದ್ದಾರೆ.  ಭಾರತದ ಕಪ್ಪುಚುಕ್ಕೆಯಾಗಿರುವ ವಿಧವಾ ಸಮಸ್ಯೆ­ಯಂತಹ ಗಂಭೀರವಾದ ವಿಚಾರದ ಬಗ್ಗೆ ಹೇಮಾಮಾಲಿನಿ ಮಾತನಾಡಿದ ರೀತಿಗೆ ಏನೆನ್ನ­ಬೇಕು? ವಿಧವೆಯರು ಯಾವ ಪ್ರದೇಶದವರಾ­ದ­ರೇನು?  ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅವರ ಚಲನೆ ನಿರ್ಬಂಧಿಸಲು ಯಾರಿಗೂ ಹಕ್ಕಿಲ್ಲ. 

ವಿಧವೆಯರಿಗೆ ಅಗತ್ಯವಾಗಿರುವುದು ಘನ­ತೆಯ ಬದುಕು. ಹೇಮಾಮಾಲಿನಿ ಹಿಂದೆ ಕರ್ನಾ­ಟ­ಕದಿಂದಲೂ ರಾಜ್ಯಸಭೆಗೆ ಆಯ್ಕೆಯಾಗಿದ್ದ­ವರು.  ಕಾನೂನು ಹಾಗೂ ನೀತಿಗಳನ್ನು ರೂಪಿಸ­ಬೇಕಾದ ನೇತಾರರಾಗಿರುವವರಲ್ಲಿ ಮಹಿಳಾ ಪರ ಸೂಕ್ಷ್ಮತೆ ನಾಸ್ತಿಯಾದರೆ ಸಮಾಜದಲ್ಲಿ ಪ್ರವ­ಹಿ­ಸು­ತ್ತಿರುವ ಮಹಿಳಾ ವಿರೋಧಿ ಪೂರ್ವಗ್ರಹಗಳ ವಿರುದ್ಧದ ಹೋರಾಟ ಎಷ್ಟರಮಟ್ಟಿಗೆ ತಾನೇ ಸಫಲವಾಗಬಹುದು?

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT