ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ಖೋತ್ತರ ಕಾಲಘಟ್ಟದ ಐಐಟಿ ಕನಸುಗಳು

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಕಳೆದ ವರ್ಷದ ಸಿಇಟಿ ಕೌನ್ಸೆಲಿಂಗ್‌ನ ಕೊನೆಯ ಸುತ್ತು ಮುಗಿದ ನಂತರವೂ ಸುಮಾರು 6,000ಕ್ಕೂ ಹೆಚ್ಚು ಎಂಜಿನಿಯ­ರಿಂಗ್ ಸೀಟುಗಳು ವಿದ್ಯಾರ್ಥಿ­ಗಳೇ ಇಲ್ಲದೆ ಖಾಲಿ ಉಳಿದಿದ್ದವು. ಇದೇನು ಒಂದು ವರ್ಷದ ಕಥೆ­ಯಲ್ಲ. ಕಳೆದ ಕೆಲವು ವರ್ಷಗಳಿಂದ ಹೀಗೆ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯು­ತ್ತಲೇ ಇವೆ. ಐಐಟಿಗಳಲ್ಲಿ ಕುಸಿಯುತ್ತಿರುವ ಗುಣಮಟ್ಟದ ಶಿಕ್ಷಣ, ಹೊಸ ಐಐಟಿಗಳನ್ನು ಕಾಡುತ್ತಿರುವ ಬೋಧಕರ ಸಮಸ್ಯೆಗಳ ನಡುವೆ ಕರ್ನಾ­ಟಕಕ್ಕೂ ಒಂದು ಐಐಟಿಯನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

ಹಾಗೆ ನೋಡಿದರೆ ಐದೂವರೆ ದಶಕಗಳ ಹಿಂದೆಯೇ ಕರ್ನಾಟಕ­ದಲ್ಲೊಂದು ಐಐಟಿ ಸ್ಥಾಪನೆಯಾಗ­ಬೇಕಿತ್ತು. ಕರ್ನಾಟಕ ಈ ನಿಟ್ಟಿನಲ್ಲಿ ಏನಾದರೂ ಮಾಡುವ ಮುನ್ನವೇ ಆಗಿನ ತಮಿಳುನಾಡು ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ಮ್ಯಾಜಿಕ್ ಮಾಡಿದರು. ದಕ್ಷಿಣ ಭಾರತದ ಐಐಟಿ ಇಂದಿನ ಚೆನ್ನೈ ಆಗಿರುವ ಅಂದಿನ ಮದ್ರಾಸಿನಲ್ಲಿ ಸ್ಥಾಪನೆಯಾಯಿತು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕರ್ನಾ­ಟಕಕ್ಕೆ ಐಐಟಿ ಬಂತು ಎನ್ನುವ­ಷ್ಟರಲ್ಲಿ ಕೈತಪ್ಪಿತು. ಮತ್ತೊಂದು ಸುತ್ತಿನಲ್ಲಿ ಸಿ.ಎನ್.ಆರ್.ರಾವ್ ಅವರ ಪ್ರಯತ್ನದ ಫಲವಾಗಿ ಕರ್ನಾಟಕಕ್ಕೆ ಒಂದು ಐಐಟಿ ಬರುತ್ತದೆ ಎಂದು ಎಲ್ಲರೂ ಭಾವಿಸಿದ್ದಾಗ ಅದು ಆಂಧ್ರ­ಪ್ರದೇಶದ ಪಾಲಾಯಿತು.

ಈಗ ಕರ್ನಾಟಕಕ್ಕೆ ದೊರೆತಿರುವ ಐಐಟಿ ಎಲ್ಲಿ ಸ್ಥಾಪನೆಯಾಬೇಕೆಂಬುದು ಒಂದು ರಾಜಕೀಯ ಪ್ರಶ್ನೆಯಾಗುತ್ತಿದೆ. ದೇವೇಗೌಡರು ಇದನ್ನು ಹಾಸನಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದರೆ ಇದು ಹೈದರಾಬಾದ್ ಕರ್ನಾಟಕದಲ್ಲೇ ಸ್ಥಾಪನೆ­ಯಾಗಬೇಕೆಂಬ ಕೂಗು ಕೇಳಿ­ಬರುತ್ತಿದೆ. ಈ ನಡುವೆ ಕರ್ನಾಟಕದ ಬಿಜೆಪಿ ನಾಯಕರಲ್ಲಿ ಕೆಲವರು ಇದನ್ನು ಧಾರವಾಡದಲ್ಲಿ ಸ್ಥಾಪಿಸು­ವುದಕ್ಕೆ ಬೇಕಿ­ರುವ ಒತ್ತಡ ತಂತ್ರ ಹಾಕಲು ಮುಂದಾ­ಗಿದ್ದಾರೆ. ಒಂದು ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ ತಮ್ಮಲ್ಲೇ ಸ್ಥಾಪನೆಯಾಗ­ಬೇಕೆಂದು ಯಾವುದೇ ಪ್ರದೇಶದ ಜನಪ್ರತಿನಿಧಿಗಳು ಭಾವಿಸು­ವುದು ಸಹಜ. ಅದಕ್ಕೆ ಇಂಥ ಒತ್ತಡ ತಂತ್ರಗಳೂ ಸಹಜವೇ. ಈ ರಾಜಕಾರಣದಾಚೆಗೆ ದೃಷ್ಟಿ ಹರಿಸಿದರೆ ಮುಖ್ಯವಾಗಿ ಕಾಣಿ­ಸುವ ಪ್ರಶ್ನೆ ಈ ಐಐಟಿಯಿಂದ ಕರ್ನಾಟಕ ರಾಜ್ಯಕ್ಕೆ, ಕನ್ನಡಿಗರಿಗೆ ಏನು ಲಾಭ?

ಇಂಥದ್ದೊಂದು ಪ್ರಶ್ನೆಯನ್ನು ಕೇಳಿ­ದಾಕ್ಷಣ ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳ ಕುರಿತಂತೆ ಈ ಬಗೆಯ ಪ್ರಾದೇಶಿಕತೆಯ ಪ್ರಶ್ನೆಗಳು ಸರಿಯಲ್ಲ ಎಂಬ ವಾದವನ್ನು ಮುಂದೊಡ್ಡಲಾಗು­ತ್ತದೆ. ಈ ಬಗೆಯ ಸಂಸ್ಥೆಗಳು ಒಟ್ಟಾರೆ ಶೈಕ್ಷಣಿಕ ವಾತಾವರ­ಣವನ್ನು ಉತ್ತಮ ಪಡಿಸುತ್ತವೆ. ಆದ್ದರಿಂದ ಈ ಪ್ರಶ್ನೆಗಳು ಪ್ರಸ್ತುತವಲ್ಲ ಎಂಬುದು ಮತ್ತೊಂದು ವಾದ. ಇವರೆಡನ್ನೂ ಒಪ್ಪಿಕೊಂಡೇ ಇಲ್ಲಿಯ ತನಕದ ಬೆಳವಣಿಗೆಗಳನ್ನು ಅವ­ಲೋಕಿಸಿದರೆ ನಮಗೆ ಸಿಗುವ ಚಿತ್ರಣವೇ ಈ ವಾದಗಳನ್ನು ಹುಸಿಗೊ­ಳಿಸುತ್ತದೆ.

ಐಐಟಿಯಂಥ ಸಂಸ್ಥೆಗಳನ್ನು ಭಾರತದ ವಿವಿಧೆಡೆ ಸ್ಥಾಪಿಸುವ ಯೋಜನೆ ಸ್ವಾತಂತ್ರ್ಯ ಪೂರ್ವದ್ದು. 1946ರಲ್ಲಿ ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಯಲ್ಲಿದ್ದ ಸರ್. ಜೋಗಿಂದರ್ ಸಿಂಗ್ ಯುದ್ಧೋತ್ತರ ಭಾರತದ ಕೈಗಾರಿಕಾ ಅಭಿವೃದ್ಧಿಗಾಗಿ ತಂತ್ರಜ್ಞಾನ ಸಂಸ್ಥೆ­ಗಳನ್ನು ಸ್ಥಾಪಿಸುವು­ದಕ್ಕಾಗಿ ನಳಿನಿ ರಂಜನ್ ಸರ್ಕಾರ್ ನೇತೃತ್ವದ 20 ಮಂದಿಯ ಸಮಿತಿ­ಯೊಂದನ್ನು ರಚಿಸಿದ್ದರು. ಅದು ಭಾರತದ ವಿವಿಧ ಸ್ಥಳಗಳಲ್ಲಿ ಐಐಟಿಯಂಥ ಸಂಸ್ಥೆಗಳು ಮತ್ತು ಅವುಗಳ ಮಾನ್ಯತೆಯಡಿಯಲ್ಲಿ ಇರುವ ಎರಡನೇ ಹಂತದ ಸಂಸ್ಥೆಗಳನ್ನು ರೂಪಿ­ಸುವ ಸಲಹೆ ಮಾಡಿತ್ತು. ಸ್ವಾತಂತ್ರ್ಯೋತ್ತರ ಭಾರತ­ದಲ್ಲಿ ಇವು ಐಐಟಿ ಹೆಸರಿನಲ್ಲಿ ಸ್ಥಾಪನೆಯಾ­ದವು. ಮೊದಲ ಐಐಟಿ 1950ರಲ್ಲಿ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಆರಂಭ­ಗೊಂಡಿತು. 1956ರಲ್ಲಿ ಸಂಸತ್ತು ಈ ಸಂಸ್ಥೆಗೆ ಸಂಬಂಧಿಸಿದ ಮಸೂದೆ­ಯೊಂದನ್ನು ಅಂಗೀಕರಿಸಿ ಇದನ್ನು ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆ ಎಂದು ಮಾನ್ಯ ಮಾಡಿತು. ಮುಂದೆ ಇದೇ ಪರಂಪರೆ ಉಳಿದ ಐಐಟಿಗಳ ಸ್ಥಾಪನೆಗೂ ವಿಸ್ತರಿಸಿತು.

ಮೊದಲ ಹಂತದಲ್ಲಿ ಸ್ಥಾಪನೆಯಾದ ಐಐಟಿ­ಗಳಂತೂ ವಿಶ್ವ ಮಟ್ಟದಲ್ಲೇ ಹೆಸರು ಮಾಡಿವೆ. ಖಾಸಗಿ ಕ್ಷೇತ್ರದ ಅತ್ಯುತ್ತಮ ಗುಣಮಟ್ಟದ ಹೆಗ್ಗಳಿಕೆ­­ಯನ್ನು ಪಡೆದಿರುವ ಸಂಸ್ಥೆಗಳೂ ಇವು­ಗಳನ್ನು ಸೋಲಿಸಲಾರದ ಮಟ್ಟಿಗೆ ಇವು ಬಲವಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಸಂಸ್ಥೆಗಳಿಗೆ ಈ ಹೆಗ್ಗಳಿಕೆಯಿಲ್ಲ. ಎಲ್ಲಾ ಸರ್ಕಾರಿ ಸಂಸ್ಥೆಗಳಿಗಿರುವ ಸಮಸ್ಯೆಗಳೇ ಇಲ್ಲಿಯೂ ಇವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಬೋಧನಾ ಗುಣಮಟ್ಟ, ಸಂಪ­ನ್ಮೂಲದ ಕೊರತೆ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆ­ಗಳೂ ನಡೆಯುತ್ತಿವೆ. ಹಾಗೆಯೇ ಹಳೆಯ ಐಐಟಿ­ಗಳು ಕೇವಲ ಉತ್ಕೃಷ್ಟತೆಯ ದ್ವೀಪಗಳಾಗಿ ಉಳಿದಿ­ರುವ ಕುರಿತೂ ಚರ್ಚೆ ಆರಂಭವಾಗಿ ಹಲವು ವರ್ಷಗಳು ಉರುಳಿ ಹೋದವು. ಖರಗ್‌­ಪುರದ ಐಐಟಿಯ ಮೊದಲ ಘಟಿಕೋತ್ಸವದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಐಐಟಿಯನ್ನು ಭಾರತದ ಭವಿಷ್ಯದ ಪ್ರತೀಕವೆಂದಿದ್ದರು. ಈ ಮಾತಿಗೆ ಆರು ದಶಕ ಕಳೆಯುವ ಹೊತ್ತಿಗೆ ಐಐಟಿ ಶಿಕ್ಷಣವನ್ನೇ ಹಾಸ್ಯ ಮಾಡುವ ‘ತ್ರೀ ಈಡಿಯಟ್ಸ್’ನಂಥ ಚಲನಚಿತ್ರ­ವನ್ನು ಬಾಲಿವುಡ್ ನಿರ್ಮಿಸುವ ಸ್ಥಿತಿಗೆ ಐಐಟಿಗಳು ಬಂದಿದ್ದವು.

ಈ ‘ಮೂರ್ಖೋತ್ತರ ಕಾಲ’ದಲ್ಲಿ ಕರ್ನಾ­ಟಕಕ್ಕೆ ಐಐಟಿ ಬರುತ್ತಿದೆ ಎಂಬುದು ನಮಗೆ ನೆನಪಿ­ರಬೇಕು. 1946ರಲ್ಲಿ ಐಐಟಿಯ ಪರಿ­ಕಲ್ಪನೆ ಜನ್ಮತಳೆದಾಗ ಇವು ಮಾದರಿ ಸಂಸ್ಥೆಗ­ಳಾಗಿಯೂ ಅವುಗಳ ಕೆಳಗೆ ಅದೇ ಗುಣಮಟ್ಟಕ್ಕೆ ಏರಬಲ್ಲ ಎರಡನೇ ಹಂತದ ಸಂಸ್ಥೆಗಳನ್ನು ಸ್ಥಾಪಿ­ಸುವ  ಆಲೋಚ­ನೆಯಿತ್ತು. ಆದರೆ ಸಂಭವಿಸಿದ್ದು ಮಾತ್ರ ಅದಕ್ಕೆ ವಿರುದ್ಧವಾಗಿ. ಒಂದು ಸಾಮಾನ್ಯ ಎಂಜಿನಿಯರಿಂಗ್ ಕಾಲೇಜಿಗೆ ವಾರ್ಷಿಕ ದೊರೆ­ಯುವ ಸಂಪನ್ಮೂಲ ಸುಮಾರು 10ರಿಂದ 20 ಕೋಟಿ ರೂಪಾಯಿ­ಗಳಷ್ಟು ಮಾತ್ರ. ಆದರೆ ಒಂದು ಐಐಟಿಗೆ ಆಗುವ ಖರ್ಚು 90ರಿಂದ 130 ಕೋಟಿ ರೂಪಾಯಿಗಳು. ಈ ಪ್ರಮಾಣದ ಸಂಪನ್ಮೂಲ ಸಹಜವಾಗಿಯೇ ಪರಿ­ಣಾಮ ಬೀರುತ್ತದೆ. ಐಐಟಿಗಳನ್ನು ಮಾದರಿಯಾಗಿಟ್ಟು­ಕೊಂಡು ಉಳಿದ ಸಂಸ್ಥೆಗಳನ್ನು ಅವುಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯಲೇ ಇಲ್ಲ.

ಈ ಪ್ರಕ್ರಿಯೆ ಕೇವಲ ತಂತ್ರಜ್ಞಾನ ಶಿಕ್ಷಣಕಷ್ಟೇ ಸೀಮಿತವಾದುದೇನೂ ಅಲ್ಲ. ಉಳಿದ ವಿಷಯ­ಗಳ ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಇದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಹೆಸರಿ­ನಲ್ಲಿ ಉತ್ಕೃಷ್ಟತೆಯ ದ್ವೀಪಗಳನ್ನು ಸೃಷ್ಟಿಸುತ್ತಾ ಸಾಗಿತು. ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಂಸ್ಥೆ­ಗಳು ಎಲ್ಲಾ ಬಗೆಯ ಸಂಪನ್ಮೂಲ ಕೊರತೆ­ಯಿಂದ ಸೊರಗುತ್ತಾ ಸಾಗಿದವು. ಪರಿಣಾಮ­ವಾಗಿ ರಾಜ್ಯ ಸರ್ಕಾರದ ಮೇಲ್ವಿಚಾರಣೆಯ­ಲ್ಲಿರುವ ಸಂಸ್ಥೆಗಳು ಕೀಳು ಮತ್ತು ಕೇಂದ್ರದ ಅಧೀನದ­ಲ್ಲಿರುವ ಶಿಕ್ಷಣ ಸಂಸ್ಥೆಗಳು ಶ್ರೇಷ್ಠ ಎಂಬ ಮನೋಭಾವ ಸೃಷ್ಟಿಯಾಯಿತು. ಈ ವಾತಾ­ವರಣವೇ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಸಂಸ್ಥೆಗಳನ್ನು ರಾಜ್ಯಗಳಿಗೆ ಉಡುಗೊರೆಯಾಗಿ ಕೊಡುವ ಅವಕಾಶ ಕಲ್ಪಿಸಿತು. ಇಷ್ಟರ ಮಧ್ಯೆಯೂ ಒಂದು ಸಮಾನತೆ ಸಾಧ್ಯವಾಗು­ತ್ತಿದೆ. ಅದೇ­ನೆಂದರೆ ತಥಾಕಥಿತ ರಾಷ್ಟ್ರೀಯ ಸಂಸ್ಥೆಗಳೂ ಗುಣಮಟ್ಟದಲ್ಲಿ ಕುಸಿದು ಉಳಿದ ಸಂಸ್ಥೆಗಳ ಮಟ್ಟಕ್ಕೆ ಇಳಿಯು­ತ್ತಿರುವುದು!

ತಂತ್ರಜ್ಞಾನ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಹೊಸ ಐಐಟಿ ಮದ್ದು, ಕಾನೂನು ಶಿಕ್ಷಣ ಗುಣಮಟ್ಟದ ಕುಸಿತಕ್ಕೆ ಹೊಸ ರಾಷ್ಟ್ರೀಯ ಕಾನೂನು ಶಾಲೆ ಮದ್ದು, ರಾಜ್ಯ ಸರ್ಕಾರದ ಅಡಿಯ­ಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಸಂಭವಿ­ಸುವ ಗುಣಮಟ್ಟ ಕುಸಿತಕ್ಕೆ ಕೇಂದ್ರೀಯ ವಿಶ್ವ­ವಿದ್ಯಾಲಯಗಳು ಪರಿ­ಹಾರ ಎಂಬ ಸರಳ ಸೂತ್ರ­ವನ್ನು ಎಲ್ಲರೂ ಒಪ್ಪಿಕೊಂಡಿರುವ ಕಾಲಘಟ್ಟ­ದಲ್ಲಿ ನಾವಿದ್ದೇವೆ. ಎಲ್ಲರ ಜೊತೆಗೂಡಿ ಎಲ್ಲರ ಅಭಿವೃದ್ಧಿಯ ಕನಸನ್ನು ಬಿತ್ತಲು ಹೊರಟಿರುವ ಪ್ರಧಾನಿ ಈ ಸ್ಥಿತಿಯನ್ನು ಬದಲಾಯಿಸುವ ನಿಟ್ಟಿ­ನಲ್ಲಿ ಹೆಜ್ಜೆ ಇಡಬಹುದಿತ್ತು. ದುರದೃಷ್ಟವಶಾತ್ ಅವರೂ ಐಐಟಿ ಘೋಷಣೆಯ ಮೂಲಕ ಹಳೆಯ ಪರಂಪರೆಯನ್ನೇ ಮುಂದುವರಿಸುವಂತೆ ಕಾಣಿಸುತ್ತಿದೆ.

ಐಐಟಿಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ದೂರುಗಳಿವೆ. ಇದರಲ್ಲಿ ಬಹಳ ಮುಖ್ಯ­ವಾದುದು ಪ್ರವೇಶ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಷ್ಟೇ ನಡೆಯುತ್ತದೆ ಎಂಬುದು. ಗುಜರಾತಿ ಸಾಹಿತ್ಯ ಪರಿಷತ್ ಇದರ ವಿರುದ್ಧ ಧ್ವನಿ ಎತ್ತಿ ಗುಜರಾತ್ ಹೈಕೋರ್ಟ್‌­ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿಯೂ ಇಂಥದ್ದೇ ಮೊಕದ್ದಮೆಯೊಂದಿದೆ. ಕರ್ನಾಟಕ­ದಲ್ಲಿ ಐಐಟಿ ಸ್ಥಾಪನೆಯಾದ ಮಾತ್ರಕ್ಕೆ ಕರ್ನಾ­ಟಕದ ವಿದ್ಯಾರ್ಥಿ­ಗಳಿಗೆ ಹೆಚ್ಚಿನ ಅವಕಾಶ ದೊರೆಯು­ತ್ತದೆ ಎಂಬ ಭ್ರಮೆಯಲ್ಲಂತೂ ನಾವು ಇರಬೇಕಾ­ಗಿಲ್ಲ ಎಂಬುದಂತೂ ಸ್ಪಷ್ಟ. ಇಲ್ಲಿ ನಮಗೆ ದೊರೆ­ಯುವುದೇನಿದ್ದರೂ ರಾಷ್ಟ್ರೀಯ ಪಾಲು ಮತ್ತು ರಾಜ್ಯ ಭಾಷೆಯ ಕುರಿತ ಕೀಳರಿಮೆ ಮಾತ್ರ.

ಇಷ್ಟಾಗಿಯೂ ಹೊಸ ಐಐಟಿಯನ್ನು ನಿರಾಶೆಯಿಂದ ನೋಡುವ ಅಗತ್ಯವೇನೂ ಇಲ್ಲ. ಈಗ ಆಗಿರುವುದು ಐಐಟಿ ಸ್ಥಾಪನೆಯ ಘೋಷಣೆ­ಯಷ್ಟೇ. ಇದನ್ನು ಹೊಸ ಮಾದರಿ­ಯಲ್ಲಿ ಕಟ್ಟುವುದಕ್ಕಾಗಿ ಒತ್ತಡ ಹೇರುವ ಸಾಧ್ಯತೆಗಳು ಇನ್ನೂ ಉಳಿದುಕೊಂಡಿವೆ. ಭಾರತದ ಮುಂದಿನ ಭವಿಷ್ಯದ ಪ್ರತೀಕವಾಗು­ವಂತೆ ಕರ್ನಾ­ಟಕದ ಐಐಟಿ ರೂಪುಗೊಳ್ಳುವಂತೆ ಮಾಡಲು ನಮ್ಮ ಜನಪ್ರತಿನಿಧಿಗಳು ಪ್ರಯತ್ನಿಸ­ಬೇಕಾಗಿದೆ. ಸಂವಿಧಾನದ 14ನೇ ಪರಿಚ್ಛೇದ­ವನ್ನೇ ಉಲ್ಲಂಘಿಸುವ ಪರೀಕ್ಷಾ ಮಾದರಿಯನ್ನು ಬದಲಾ­ಯಿಸುವುದು, ಉತ್ಕೃಷ್ಟತೆಯ ದ್ವೀಪ­ವನ್ನು ಉತ್ಕೃಷ್ಟತೆಯ ಪ್ರಸರಣಾ ಕೇಂದ್ರವಾಗಿ ಬದಲಾಯಿಸುವ ಕೆಲಸ ಕರ್ನಾಟ­ಕದಿಂದಲೇ ಆರಂಭವಾಗಬಾರದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT