ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಾಧಾರಿತ ವಿನ್ಯಾಸದ ತಂತ್ರಜ್ಞಾನ

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ತೊಂಬತ್ತರ ದಶಕದ ಅಂತ್ಯದಲ್ಲಿ ಕಂಪ್ಯೂಟರ್ ಖರೀದಿಸಿದ್ದವರಿಗೆ  ಈ  ಹೊತ್ತಿಗಾಗಲೇ ಕಂಪ್ಯೂಟರುಗಳಿಗೆ ಸಂಬಂಧಿಸಿದ ಸತ್ಯವೊಂದು ಹೊಳದಿರುತ್ತದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಂಪ್ಯೂಟರುಗಳ ಬೆಲೆಯಲ್ಲಿ (ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್‌ಗಳೆರಡೂ ಸೇರಿದಂತೆ) ಹೆಚ್ಚಿನ ವ್ಯತ್ಯಾಸಗಳೇನೂ ಆಗಿಲ್ಲ. ನಾವು ಖರೀದಿಸುವ ಕಾಲಕ್ಕೆ ಅತ್ಯಂತ ಪ್ರಸ್ತುತವಾಗಿರುವ ತಂತ್ರಜ್ಞಾನ ಬೇಕೆಂದರೆ ಕನಿಷ್ಠ 50,000 ರೂಪಾಯಿಗಳನ್ನು ಹೂಡಲೇಬೇಕು.

ಎಲ್ಲಾ ಕಾಲದಲ್ಲಿಯೂ ಇದಕ್ಕಿಂತ ಕಡಿಮೆ ಬೆಲೆಯದ್ದು ಲಭ್ಯವಿತ್ತಾದರೂ ಇದಕ್ಕಾಗಿ ಮಾಡಿಕೊಳ್ಳಬೇಕಾದ ರಾಜಿಗಳು ಅನೇಕ. ಒಂದೂವರೆ ಗಿಗಾಬೈಟ್ ಸಂಗ್ರಹ ಸಾಮರ್ಥ್ಯ 386 ಮೆಗಾಹರ್ಟ್ಸ್‌ ಸಂಸ್ಕರಣಾ ಸಾಮರ್ಥ್ಯದ ಅಂದಿನ ಕಂಪ್ಯೂಟರುಗಳಿಗೂ ಈಗಿನ ಟೆರಾಬೈಟ್ ಸಂಗ್ರಹ ಸಾಮರ್ಥ್ಯ ಮತ್ತು ಹಲವು ಗಿಗಾಹರ್ಟ್ಸ್ ಸಂಸ್ಕರಣಾ ಸಾಮರ್ಥ್ಯದ ಕಂಪ್ಯೂಟರಗಳ ಬೆಲೆಯಲ್ಲಿ ಅಂಥ ವ್ಯತ್ಯಾಸವಿಲ್ಲ. ಇದು ಕೇವಲ ಕಂಪ್ಯೂಟರುಗಳಿಗೆ ಸೀಮಿತವಾದ ವಿಚಾರವೇನೂ ಅಲ್ಲ. ಮೊಬೈಲ್ ಫೋನುಗಳೂ ಅಷ್ಟೇ. ಸುಮಾರು ಹತ್ತುಸಾವಿರ ರೂಪಾಯಿಗಳ ಆಸುಪಾಸಿನ ಮೊತ್ತ ಬಿಚ್ಚಲು ಸಿದ್ಧರಾಗದೇ ಇದ್ದರೆ ಈಗಲೂ ಒಳ್ಳೆಯ ಫೋನ್ ಸಿಗುವುದಿಲ್ಲ. ಈ ಸ್ಥಿತಿ ಇಪ್ಪತ್ತು ವರ್ಷಗಳ ಹಿಂದೆಯೂ ಇತ್ತು. ಇದೇ ತರ್ಕವನ್ನು ಟಿ,ವಿ. ಮತ್ತಿತರ ಗ್ಯಾಜೆಟ್‌ಗಳಿಗೂ ಅನ್ವಯಿಸಬಹುದು.

ಈ ಎಲ್ಲಾ ಗ್ಯಾಜೆಟ್‌ಗಳ ಸಂದರ್ಭದಲ್ಲಿ ಮತ್ತೊಂದು ವಿದ್ಯಮಾನವೂ ಅವುಗಳ ಇತಿಹಾಸದ ಉದ್ದ-ಕ್ಕೂ ಕಾಣಿಸಿಕೊಂಡಿದೆ. ಮೊದಲ ತಲೆಮಾರಿನ ಮೊಬೈಲ್ ಫೋನ್ ಬಳಕೆದಾರರು ಈ ಹೊತ್ತಿಗೆ ಕನಿಷ್ಠ ಹತ್ತು ಮೊಬೈಲ್ ಫೋನ್‌ಗಳನ್ನಾದರೂ ಖರೀದಿಸಿರುತ್ತಾರೆ. ಹಾಗೆಯೇ ಮೊದಲ ತಲೆಮಾರಿನ ಕಂಪ್ಯೂಟರ್ ಬಳಕೆದಾರರು ಈ ಹೊತ್ತಿಗೆ ಕನಿಷ್ಠ ಎಂದರು ಆರು ಕಂಪ್ಯೂಟರ್‌ಗಳನ್ನು ಖರೀದಿಸಿರುತ್ತಾರೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಈ ಖರೀದಿ ಅಗತ್ಯ ಎಂಬುದನ್ನು ನಾವೆಲ್ಲಾ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತೇವೆ. ಕಳೆದ ಹತ್ತು ವರ್ಷಗಳ ಹಿಂದಿನ ತನಕವೂ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಕೆಲವು ಬಿಡಿಭಾಗಗಳನ್ನು ಬದಲಾಯಿಸಿ ಇನ್ನೊಂದಷ್ಟು ಕಾಲ ಬಳಸಲು ಸಾಧ್ಯವಿತ್ತು. ಆದರೆ ಇತ್ತೀಚೆಗೆ ಆ ಸಾಧ್ಯತೆಯೂ ವಿರಳವಾಗುತ್ತಿದೆ. ಮೊಬೈಲ್‌ ಫೋನ್‌ಗಳ ಆಯಸ್ಸಂತೂ ಒಂದರಿಂದ ಎರಡು ವರ್ಷಗಳಿಗೆ ಇಳಿದುಬಿಟ್ಟಿದೆ. ಲ್ಯಾಪ್‌ಟಾಪ್‌ಗಳು ಮೂರು ವರ್ಷ ಪ್ರಸ್ತುತವಾಗಿದ್ದರೆ ಅದು ಬಳಕೆದಾರನ ಅದೃಷ್ಟ. ಇಲ್ಲವೇ ಆತನ ಬಳಕೆಯ ವ್ಯಾಪ್ತಿಯೇ ಬಹಳ ಕಡಿಮೆ ಎಂಬ ತೀರ್ಮಾನಕ್ಕೆ ಬರಬಹದಾದ ಸ್ಥಿತಿ ಇದೆ.

ಈ ಎಲ್ಲಾ ಬೆಳವಣಿಗೆಗಳನ್ನು ಕೇವಲ ತಂತ್ರಜ್ಞಾನದ ಬೆಳವಣಿಗೆಯ ವೇಗಕ್ಕೆ ತಳುಕುಹಾಕಿ ನಾವು ಸುಮ್ಮನಾಗುತ್ತಿದ್ದೇವೆ. ವಾಸ್ತವದಲ್ಲಿ ಇದಕ್ಕೆ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವವರ ಮಾರುಕಟ್ಟೆ ತಂತ್ರವಿದೆ. 1970ರಲ್ಲಿ ರೂಪುಗೊಂಡ ಮೂರ್‌ನ ನಿಯಮ (http://goo.gl/y0sAIn) ಕಂಪ್ಯೂಟರಿನಲ್ಲಿ ಬಳಸಲಾಗುವ ಪ್ರೋಸೆಸರ್ ತಂತ್ರಜ್ಞಾನ ಹೇಗೆ ಪ್ರತೀ ಆರು ತಿಂಗಳಿಗೆ ಬದಲಾಗುತ್ತದೆ ಎಂಬುದನ್ನು ನಿರ್ವಚಿಸಿದೆ. ಸಂಸ್ಕರಣಾ ವೇಗ ಪ್ರತೀ ಹೊಸ ತಲೆಮಾರಿನ ಪ್ರೋಸೆಸರ್ ಜೊತೆಗೆ ದ್ವಿಗುಣಗೊಳ್ಳುತ್ತಲೇ ಇರುತ್ತದೆ. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಸಾಫ್ಟ್‌ವೇರ್ ತಯಾರಕರು ಮುಂದಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಳೆಯ ಕಂಪ್ಯೂಟರ್‌ಗಳು ಅಪ್ರಸ್ತುತವಾಗಿಬಿಡುತ್ತವೆ.

ಇಡೀ ಪ್ರಕ್ರಿಯೆಯನ್ನು ಮತ್ತೊಂದು ಬಗೆಯಲ್ಲಿ ಅರ್ಥ ಮಾಡಿಕೊಂಡರೆ ನಾವು ಬಳಸುವ ಗ್ಯಾಜೆಟ್‌ಗಳು ಮತ್ತು ಕಂಪ್ಯೂಟರುಗಳು ಈಗ ಇರುವುದಕ್ಕಿಂತ ಹೆಚ್ಚು ಆಯಸ್ಸನ್ನು ಹೊಂದಿರಬಹುದಿತ್ತು ಎಂಬುದು ತಿಳಿಯುತ್ತದೆ. ಸಂಸ್ಕರಣಾ ವೇಗವನ್ನು ಬಳಸಿಕೊಳ್ಳುವುದರ ಜೊತೆಗೆ ಹಿಂದಿನ ತಲೆಮಾರಿನ ಯಂತ್ರಗಳಲ್ಲಿಯೂ ಬಳಸಬಹುದಾದ ಸಾಫ್ಟ್‌ವೇರ್‌ಗಳನ್ನು ರೂಪಿಸಲು ಸಾಧ್ಯವಿದೆಯಲ್ಲವೇ? ಆದರೆ ಹಾರ್ಡ್‌ವೇರ್ ತಯಾರಕರು ಮತ್ತು ಸಾಫ್ಟ್‌ವೇರ್ ತಯಾರಕರ ನಡುವಣ ‘ಮಾರುಕಟ್ಟೆ ಮೈತ್ರಿ’ ಇದನ್ನು ಸಾಧ್ಯವಾಗಲು ಬಿಡುವುದಿಲ್ಲ. ಪರಿಣಾಮವಾಗಿ ಗ್ಯಾಜೆಟ್‌ಗಳ ಆಯಸ್ಸು ಕ್ಷೀಣವಾಗಿದೆ. ಇದಕ್ಕೆ ಕಾರಣ ಸರಳ. ಪ್ರತೀ ಒಂದೂವರೆ ವರ್ಷಕ್ಕೊಮ್ಮೆ ಹೊಸ ಫೋನ್ ಖರೀದಿಸುವ ಗ್ರಾಹಕರಿಂದ ಹೆಚ್ಚು ಲಾಭವೇ ಹೊರತು ಹತ್ತು ವರ್ಷಕ್ಕೊಮ್ಮೆ ಫೋನ್ ಖರೀದಿಸುವವರಿಂದಲ್ಲ.

ತಂತ್ರಜ್ಞಾನದ ವೇಗವನ್ನು ಬದಿಗಿಟ್ಟು ನಮ್ಮ ಸ್ಮಾರ್ಟ್‌ಫೋನುಗಳನ್ನೊಮ್ಮೆ ಅವಲೋಕಿಸೋಣ. ಇವು ಸದಾ ನಮ್ಮ ಬಳಿ ಇರುವ ಉಪಕರಣಗಳಲ್ಲೊಂದು. ಕೆಳಗೆ ಬೀಳುವುದು, ಇದರ ಮೇಲೆ ನೀರು ಚೆಲ್ಲುವುದು ಇತ್ಯಾದಿಗಳೆಲ್ಲವೂ ತೀರಾ ಸಾಮಾನ್ಯ. ಹೆಚ್ಚಿನ ಫೋನುಗಳನ್ನು ಈ ಬಗೆಯ ಆಘಾತಗಳಿಂದ ರಕ್ಷಿಸಿಕೊಳ್ಳುವಂತೆ ತಯಾರಿಸಲಾಗಿಲ್ಲ. ಕಿಸೆಯಿಂದ ಕೆಳಗೆ ಬಿದ್ದರೂ ಇವು ಒಡೆದು ಹೋಗುತ್ತವೆ. ಇದು ಉದ್ದೇಶಪೂರ್ವಕ ವಿನ್ಯಾಸ. ಇದನ್ನು ಮುಚ್ಚಿಡುವುದಕ್ಕಾಗಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂಬ ಕಾರಣವನ್ನೂ ಹೇಳಲಾಗುತ್ತದೆ. ಇದು ಲ್ಯಾಪ್‌ಟಾಪ್‌ಗಳಿಗೂ ಅನ್ವಯಿಸುತ್ತದೆ.

ಇನ್ನು ಬಿಡಿಭಾಗಗಳ ಸಮಸ್ಯೆ. ನಿಮ್ಮಲ್ಲಿರುವ ಲ್ಯಾಪ್‌ಟಾಪ್ ಐದು ವರ್ಷದ ಹಿಂದಿನದ್ದಾಗಿದ್ದರೆ ಅದರಲ್ಲಿ ಡಿಡಿಆರ್–3 ಮಾದರಿಯ ರ್‍ಯಾಮ್ ಇರುತ್ತದೆ. ಅದನ್ನು ಖರೀದಿಸಲು ಪ್ರಯತ್ನಿಸಿ ನೋಡಿ. ಇದು ದೊರೆಯುವುದು ಬಹಳ ಕಷ್ಟ. ದೊರೆತರೂ ಅದಕ್ಕೆ ಕೊಡಬೇಕಾದ ಹಣ ಭಾರೀ ಹೆಚ್ಚು. ಇನ್ನು ಮೊಬೈಲ್‌ ಫೋನ್‌ಗಳಂತೂ ವಾರಂಟಿ ಅವಧಿ ಮುಗಿದದ್ದರ ಹಿಂದೆಯೇ ರಿಪೇರಿಗೆ ಬರುವುದಕ್ಕಾಗಿ ಕುಪ್ರಸಿದ್ಧ. ಇವುಗಳನ್ನು ರಿಪೇರಿಗೆಂದು ತೆಗೆದುಕೊಂಡು ಹೋದರೆ ಅವರು ನೀಡುವ ವೆಚ್ಚದ ಅಂದಾಜೇ ನಿಮ್ಮನ್ನು ಹೊಸ ಫೋನ್ ಖರೀದಿಸಲು ಪ್ರೇರೇಪಿಸುತ್ತದೆ. ಸುಮಾರು ಹತ್ತು ಸಾವಿರ ರೂಪಾಯಿಗಳ ಆಂಡ್ರಾಯಿಡ್ ಪೋನ್‌ನ ಮದರ್ ಬೋರ್ಡ್ ಬದಲಾಯಿಸುವುದಕ್ಕೆ ಕಡಿಮೆಯೆಂದರೆ ಐದು ಸಾವಿರ ರೂಪಾಯಿ ಬಿಚ್ಚಲು ಸಿದ್ಧವಾಗಬೇಕು.

ಇತ್ತೀಚಿನ ದಿನಗಳಲ್ಲಿ ಇನ್ನೂ ಹೊಸ ತಂತ್ರವನ್ನು ಬಳಸಲಾಗುತ್ತದೆ. ಐಫೋನ್, ಗೂಗಲ್ ಹೊರತರುವ ನೆಕ್ಸಸ್ ಫೋನ್‌ಗಳು, ಚೀನಾದ ಒನ್‌ ಪ್ಲಸ್ ಒನ್ ಮಾದರಿಯ ಫೋನುಗಳನ್ನು ಬಿಚ್ಚಿ ರಿಪೇರಿ ಮಾಡುವುದಕ್ಕೇ ಸಾಧ್ಯವಿಲ್ಲ. ಎರಡು ಮೂರು ವರ್ಷಗಳಲ್ಲಿ ಹಾಳಾಗುವ ಬ್ಯಾಟರಿಯನ್ನೂ ಬದಲಾಯಿಸಲು ಸಾಧ್ಯವಿಲ್ಲದಂತ ವಿನ್ಯಾಸವಿದು. ಇವುಗಳನ್ನು ಬಿಸಾಡುವುದಷ್ಟೇ ದಾರಿ. ತೀರಾ ತೆಳ್ಳಗಿನ ನೆಟ್‌ಬುಕ್ ಮತ್ತು ಅಲ್ಟ್ರಾಬುಕ್  ಮಾದರಿಯ ಲ್ಯಾಪ್‌ಟಾಪ್‌ಗಳಲ್ಲಿಯೂ ಈ ತಂತ್ರವನ್ನು ಇನ್ನು ಹೆಚ್ಚು ಚಾಕಚಕ್ಯತೆಯಿಂದ ಬಳಸಲಾಗುತ್ತದೆ. ಇವುಗಳನ್ನು ಬಿಚ್ಚಲು ಸಾಧ್ಯ. ಆದರೆ ಅದು ಬಹಳ ಕಷ್ಟವಾಗುವಂತೆ ವಿಶೇಷ ಮಾದರಿಯ ಸ್ಕ್ರೂಗಳನ್ನು ಬಳಸುವುದು ಇತ್ಯಾದಿ ತಂತ್ರಗಳನ್ನು ಬಳಸಿರುತ್ತಾರೆ.

ಅನೇಕ ಉತ್ಪಾದಕರು ಬಳಸುವ ಮತ್ತೊಂದು ತಂತ್ರವಿದೆ. ತೀರಾ ಅಗತ್ಯವಾಗಿರುವ ಸವಲತ್ತೊಂದು ಇಲ್ಲದೇ ಇರುವಂತೆ ವಿನ್ಯಾಸಗೊಳಿಸುವುದು. ಇವು ಸ್ವಲ್ಪ ಕಡಿಮೆ ಬೆಲೆಗೆ ದೊರೆಯುತ್ತವೆ. ಆದರೆ ಇವುಗಳ ಹಿಂದೆಯೇ ಸುಧಾರಿತ ಆವೃತ್ತಿಯೊಂದು ಬರುತ್ತದೆ. ಅದನ್ನು ಖರೀದಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಮೊದಲ ಐಫೋನ್ 3–ಜಿ ಸವಲತ್ತಿಲ್ಲದೆಯೇ ಬಂದಿತ್ತು. ಪರಿಣಾಮವಾಗಿ ಎರಡನೇ ತಲೆಮಾರಿನ ಐಫೋನ್ ಖರೀದಿಸಲೇ ಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಎದುರಾಯಿತು.

ಇನ್ನು ಸಾಫ್ಟ್‌ವೇರ್ ಸುಧಾರಿಸುವ ತಂತ್ರವಂತೂ ಎಲ್ಲರಿಗೂ ತಿಳಿದೇ ಇರುವಂಥದ್ದು. ವಿಂಡೋಸ್‌ ತನ್ನ ವಿಸ್ತಾ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ ಅದನ್ನು ಅನುಸ್ಥಾಪಿಸಲು ಹೊಸ ಕಂಪ್ಯೂಟರು ಖರೀದಿಸಲೇ ಬೇಕೆಂಬ ಸ್ಥಿತಿ ಸೃಷ್ಟಿಯಾಯಿತು. ಅಷ್ಟೇಕೆ ಹಿಂದಿನ ಆವೃತ್ತಿಗಳಿಗೆ ಬೆಂಬಲ ನಿಲ್ಲಿಸುವ ಕ್ರಿಯೆಯೂ ಬಹುಬೇಗ ಚಾಲನೆಗೆ ಬಂತು. ಮೊಬೈಲ್‌ ಫೋನುಗಳಲ್ಲಿಯಂತೂ ಇದರ ವೇಗ ಇನ್ನೂ ಹೆಚ್ಚು. ವರ್ಷ ಕಳೆಯುವಷ್ಟರಲ್ಲಿ ಹಳೆಯ ಆವೃತ್ತಿಗಳಿಗೆ ಬೆಂಬಲ ನಿಂತಿರುತ್ತದೆ. ಆ್ಯಪ್‌ಗಳು ಕೆಲಸ ಮಾಡದಂಥ ಸ್ಥಿತಿ ಉದ್ಭವಿಸಿರುತ್ತದೆ.

ಇನ್ನು ವಾರಂಟಿ ಎಂಬ ಮಾಯೆಯ ಕುರಿತಂತೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಈ ನಿಯಮಗಳನ್ನು ಹೇಗೆ ರೂಪಿಸಲಾಗಿರುತ್ತದೆ ಎಂದರೆ ವಾರಂಟಿ ಅವಧಿಯಲ್ಲೇ ನಿಮ್ಮಲ್ಲಿರುವ ಉಪಕರಣ ಹಾಳಾದರೂ ನೀವು ವಾರಂಟಿ ಸವಲತ್ತನ್ನು ಬಳಸಲಾಗದಂತೆ ಮಾಡಿರುತ್ತಾರೆ (http://goo.gl/UmRB3U). ಇತ್ತೀಚೆಗೆ ವಿಮಾ ಸೌಲಭ್ಯದಂಥ ವ್ಯವಸ್ಥೆ ಇದೆಯಾದರೂ ಇದನ್ನು ಒಂದೆರಡು ವರ್ಷಕ್ಕಿಂತ ಹೆಚ್ಚು ಬಳಸಲು ಸಾಧ್ಯವಿಲ್ಲ. ಕಂಪ್ಯೂಟರ್‌ಗಳ ಫುಲ್ ಕವರ್ ವಿಮೆಯನ್ನು ನವೀಕರಿಸುವುದಕ್ಕೆ ಎರಡು ವರ್ಷಗಳ ನಂತರ ಪಾವತಿಸಬೇಕಾದ ಮೊತ್ತ ಕಂಪ್ಯೂಟರಿನ ಬೆಲೆಯಷ್ಟೇ ಆಗಿಬಿಡುತ್ತದೆ.

ತಂತ್ರಜ್ಞಾನದ ವೇಗ ಮತ್ತು ಹೊಸತನ್ನು ಖರೀದಿಸುವ ನಮ್ಮ ಮನೋಭಾವಗಳನ್ನು ಬಳಸಿಕೊಂಡು ಮಾರುಕಟ್ಟೆ ಶಕ್ತಿಗಳು ಹೆಣೆದಿರು ಈ ಚಕ್ರವ್ಯೂಹ ನಮ್ಮ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಈ ಮಾರುಕಟ್ಟೆ ತಂತ್ರದಿಂದಾಗಿ ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಸ್ಮಾರ್ಟ್ ಫೋನ್ ಒಂದು ವರ್ಷ ಹೆಚ್ಚು ಬಾಳಿಕೆ ಬಂದರೆ ಅದರಿಂದ ಸೃಷ್ಟಿಯಾಗುವ ಇಂಗಾಲದ ಮಾಲಿನ್ಯ ಮೂರನೇ ಒಂದರಷ್ಟು ಕಡಿಮೆಯಾಗುತ್ತದೆ.

ಲ್ಯಾಪ್‌ಟಾಪ್‌ನಂಥ ಉಪಕರಣಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. 2005ರ ಲೆಕ್ಕಾಚಾರಗಳಂತೆ ಕರ್ನಾಟಕದಲ್ಲಿ ಸೃಷ್ಟಿಯಾದ ಎಲೆಕ್ಟ್ರಾನಿಕ್ ಕಸದ ಪ್ರಮಾಣ ಸುಮಾರು ಹತ್ತು ಸಾವಿರ ಟನ್‌ಗಳು. ಕಳೆದ ಹತ್ತು ವರ್ಷಗಳಲ್ಲಿ ಹಲವು ಪಾಲು ಹೆಚ್ಚಿದೆ. 2020ರ ಹೊತ್ತಿಗೆ ಭಾರತದಲ್ಲಿ ಈಗ ಉತ್ಪತ್ತಿಯಾಗುತ್ತಿರುವ ಎಲೆಕ್ಟ್ರಾನಿಕ್ ಕಸದ ಪ್ರಮಾಣ ನೂರಾರು ಪಟ್ಟುಗಳಷ್ಟು ಹೆಚ್ಚುತ್ತದೆಂದು ಊಹಿಸಲಾಗುತ್ತಿದೆ. ಈಗಾಗಲೇ ಇರುವ ನಮ್ಮ ಮಾಲಿನ್ಯದ ಸಮಸ್ಯೆಗೆ ಇದೂ ಸೇರಿಕೊಂಡರೆ ಏನಾಗಬಹುದು. ಆರ್ಸೆನಿಕ್, ವಿಕಿರಣದಂಥ ಮಾಲಿನ್ಯವೆಂಬುದು ಪ್ರತೀ ನಗರದ ಸಮಸ್ಯೆಯಾಗಿಬಿಡಬಹುದು.

ಈ ಸಮಸ್ಯೆಯ ಕುರಿತಂತೆ ಅಭಿವೃದ್ಧಿಹೊಂದಿದ ದೇಶಗಳಲ್ಲಿ ಈಗ ಒಂದು ಮಟ್ಟಿಗಿನ ಜಾಗೃತಿ ಮೂಡಿದೆ. ಅವೆಲ್ಲಾ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಫೋನುಗಳ ಮಾರುಕಟ್ಟೆಯನ್ನು ನೋಡುತ್ತಿವೆ. ಹಾಗೆಯೇ ಇಲ್ಲಿನ ಅಸಂಘಟಿತ ರಿಸೈಕ್ಲಿಂಗ್ ಉದ್ಯಮದತ್ತಲೂ ಕಣ್ಣು ಹಾಯಿಸುತ್ತಿವೆ. ಈ ಎಲ್ಲಾ ಉಪಾಯಗಳೂ ಮಾಲಿನ್ಯವನ್ನು ಕಡಿಮೆ ಮಾಡುವುದಕ್ಕಿಂತ ಹೆಚ್ಚಾಗಿ ಮಾಲಿನ್ಯವನ್ನು ನಿರ್ವಹಿಸುವ ಸಾಧ್ಯತೆಯನ್ನು ಮಾತ್ರ ಹುಡುಕುತ್ತಿವೆ. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಅದರ ಮೂಲದಲ್ಲೇ ಕಡಿಮೆ ಮಾಡುವುದಕ್ಕೆ ಸಾಧ್ಯವಿರುವುದು ಹೆಚ್ಚು ಕಾಲ ಬಾಳಿಕೆ ಬರುವ ಎಲೆಕ್ಟ್ರಾನಿಕ್ ಉಪಕರಣಗಳಿಂದ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT