ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತೆ : ಆದಿಮ ಸ್ತ್ರೀವಾದಿ

Last Updated 23 ಮಾರ್ಚ್ 2016, 8:38 IST
ಅಕ್ಷರ ಗಾತ್ರ

‘ಯಾರು ಹಿತವರು ಈ ಇಬ್ಬರೊಳಗೆ’ ಎನ್ನುವ ದ್ವಂದ್ವದಲ್ಲಿ ಕಳೆದ ಬಾರಿ ದ್ರೌಪದಿಯನ್ನು, ಅವಳಿಗೆ ಅಭಿವ್ಯಕ್ತಿಯ ಅವಕಾಶ ಸಿಕ್ಕಿದೆ ಎಂದು ಭಾಸವಾಗುತ್ತಿರುವಾಗಲೂ ಅವಳನ್ನು ಅಸಹಾಯಕವಾಗಿಸಿದ, ಸಂಪೂರ್ಣವಾಗಿ ಅಧೀನ ವ್ಯಕ್ತಿತ್ವದ ಚೌಕಟ್ಟಿಗೆ ಅವಳೇ ನಡೆದು ಬರುವಂತೆ ಮಾಡಿದ ‘ಮಾರ್ಗ’ ಸಾಹಿತ್ಯವನ್ನೂ, ಅದನ್ನು ಬಳಸಿಕೊಂಡೇ ತನ್ನ ದಾರಿಯನ್ನು ಕಟ್ಟಿಕೊಳ್ಳುವ ಜನಪದದ ದ್ರೌಪದಿಯನ್ನೂ ನೋಡಿದ ಮೇಲೆ ಸಹಜವಾಗಿಯೇ ನಮ್ಮ ಗಮನ ಸೀತೆಯ ಕಡೆಗೆ ಹೊರಳುತ್ತದೆ.

ಸೀತೆ ಎಂದ ಕೂಡಲೆ ನಮಗೆ ಕುಸುಮಕೋಮಲೆಯಾದ, ಸರ್ವಗುಣಸಂಪನ್ನೆಯಾದ, ಮೃದುಮಾತಿನ, ‘ಅನುಕೂಲ ಸತಿ’ಯ ಚಿತ್ರವೊಂದು ಕಣ್ಣೆದುರಿಗೆ ಬರುತ್ತದೆ. ರಾಮನ ಛಾಯಾ ವ್ಯಕ್ತಿತ್ವವೆಂದೇ ಪ್ರಸಿದ್ಧಳಾದ ಸೀತೆ ‘ಹೆಣ್ಣು ಎಂದರೆ ಹೀಗಿರಬೇಕು’ ಎಂದು ಎಲ್ಲ ಗಂಡಸರೂ ಬಯಸುವ ಪರಿಪೂರ್ಣ ಹೆಣ್ಣು ಎನ್ನುವ ದೃಷ್ಟಿಕೋನ ಎಂದಿನದೋ ಎಂದೇನಲ್ಲ. ಇಂದಿಗೂ ಸೀತೆ, ಮದುವೆಯಾಗಲು ಬಯಸುವ ಅನೇಕರ ಆತ್ಯಂತಿಕ ಮಾದರಿಯೇ.

ಕಳೆದ ಬಾರಿ ಗುರುತಿಸಿದ ಎರಡು ಮಾದರಿಗಳಲ್ಲಿ ಸೀತೆ ಎರಡನೆಯ ಮಾದರಿಯನ್ನು ಪ್ರತಿನಿಧಿಸುತ್ತಾಳೆ. ‘ಮೌನ ಗೌರಿ’ಯ ಮಾದರಿ. ಆದರೆ ದಿಟದಲ್ಲಿ ಗೌರಿ ಎಂತಹ ಹೆಣ್ಣು?

ಕವಿಗಳು ಅವಳನ್ನು ಚಿತ್ರಿಸಿರುವುದನ್ನು ಚರ್ಚಿಸುವ ಮೊದಲೆ ಅವಳ ಬದುಕಿನ ಮುಖ್ಯ ಸಂಗತಿಗಳು ಮತ್ತು ಅವುಗಳಿಗೆ ಅವಳು ಪ್ರತಿಕ್ರಿಯಿಸಿದ ಬಗೆಯನ್ನು ನೋಡಿ. ಪತಿಯನ್ನು ಹಿಂಬಾಲಿಸಿ ಅವಳು ಕಾಡಿಗೆ ಹೋದಳು ಎನ್ನುವುದನ್ನು ಆಜ್ಞಾಧಾರಕ ಸತಿ ಎಂದು ನೋಡುವಷ್ಟೇ ಶಕ್ತವಾಗಿ ಅದು ಶ್ರೇಣೀಕರಣ ಅಥವಾ ಅಧೀನತೆಯನ್ನು ಮೀರಿದ ನೆಲೆಯಲ್ಲಿ ದಾಂಪತ್ಯ ಧರ್ಮದ ಪಾಲನೆ ಎಂದೂ ನೋಡಲು ಸಾಧ್ಯವಿದೆಯಷ್ಟೇ.

ಎಂದರೆ ಅದನ್ನು ಅವಳ ಆಯ್ಕೆಯಾಗಿ ನೋಡುವುದೂ ಸಾಧ್ಯವಿದೆ. ಅವಳು ಮುಂದೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಗಮನಿಸಿದರೆ ಇದನ್ನು ಅವಳ ಆಯ್ಕೆಯೆಂದು ನೋಡುವುದೇ ಸರಿ. ಅದು ಅವಳಿಗೆ ಅನಿವಾರ್ಯವಾಗಿತ್ತು, ಅವಳು ವಿಚಾರದ ಅಗತ್ಯವೇ ಇಲ್ಲದೆ ಅವನನ್ನು ಹಿಂಬಾಲಿಸಿದಳು ಎಂದೇನಲ್ಲ. ಬದುಕಿನಲ್ಲಿ ಮುಂದೆ ಎದುರಾಗುವ ಏನೆಲ್ಲ ಬಿಕ್ಕಟ್ಟುಗಳನ್ನು ಅದೆಂಥ ಪ್ರಬುದ್ಧತೆಯಲ್ಲಿ, ಸಂಯಮದಲ್ಲಿ ಸೀತೆ ಮುಖಾಮುಖಿಯಾಗುತ್ತಾಳೆ ಎನ್ನುವುದನ್ನು ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಬರುವ ಈ ಪದ್ಯ ತುಂಬ ಜನಪ್ರಿಯವಾದುದೂ ಹೌದು– ‘ಕರುಣಾಳು ರಾಘವನಲ್ಲಿ ತಪ್ಪಿಲ್ಲ ಹೆಣ್ಣಾಗಿ...’
ಮರ್ಯಾದಾ ಪುರುಷೋತ್ತಮನಾದ ರಾಮ ಜನಾಪವಾದಕ್ಕೆ ಹೆದರಿ ಅಥವಾ ಅವನ ಆಯ್ಕೆ ಮತ್ತು ಆದ್ಯತೆಯಲ್ಲಿ ರಾಜ್ಯದ ಹಿತ ಮೊದಲನೆಯದಾಗಿ ಬರುವುದರಿಂದ ಸೀತೆಯನ್ನು ತ್ಯಜಿಸುವ ತೀರ್ಮಾನ ಮಾಡಿ, (ಗ್ರಾಮಸ್ಯಾರ್ಥೆ ಕುಲಂ ತ್ಯಜೇತ್... ಎನ್ನುವ ರಾಜಧರ್ಮದ ತಾತ್ವಿಕತೆಯನ್ನು ಪ್ರತಿಪಾದಿಸುವ ಮಾತುಗಳನ್ನು ರಾಮನ ಸಮರ್ಥನೆಗಾಗಿ ಮತ್ತೆ ಮತ್ತೆ ಬಳಸಲಾಗುತ್ತದೆ) ಡಿ.ವಿ.ಜಿ  ಅವರ ‘ಶ್ರೀರಾಮ ಪರೀಕ್ಷಣಂ’ ಕೃತಿಯಲ್ಲಿ, ಶ್ರೀರಾಮನ ಮೇಲಿನ ಎರಡು ಆಕ್ಷೇಪಗಳಿಗೆ ಉತ್ತರಿಸಲು ಸಂಸ್ಕೃತ ಮಾತ್ರವಲ್ಲದೆ ಷೇಕ್ಸ್‌ಪಿಯರ್‌ನ ಕೃತಿಗಳಿಂದಲೂ ಸಮರ್ಥನೆಗಳನ್ನು ತರುತ್ತಾರೆ.

Ceaser's wife should be above suspicion ಎನ್ನುವ ಮಾತುಗಳಿಂದ ಹಿಡಿದು ಎಂಟನೆಯ ಎಡ್ವರ್ಡ್ ದೊರೆ ತಾನೊಲಿದ ಹೆಣ್ಣನ್ನು ಮದುವೆಯಾಗಲು ಸಿಂಹಾಸನವನ್ನೇ ತ್ಯಾಗ ಮಾಡಿದ್ದನ್ನು, ಪ್ರಜಾಭಿಪ್ರಾಯಕ್ಕೂ ಪ್ರಜಾಕ್ಷೇಮಕ್ಕೂ ತೋರಿದ ಮನ್ನಣೆ ಎಂದು ಡಿ.ವಿ.ಜಿ ಗುರುತಿಸುತ್ತಾರೆ.

‘ಶ್ರೀರಾಮ ಪರೀಕ್ಷಣಂ’ ಕೃತಿಯನ್ನೇ ಪ್ರಾತಿನಿಧಿಕ ಕೃತಿ ಎಂದು ಗುರುತಿಸಬಹುದು. ಎರಡು ಕುತೂಹಲಕರವಾದ ಪ್ರಯೋಗಗಳನ್ನು ಇಲ್ಲಿ ಡಿ.ವಿ.ಜಿ ಮಾಡುತ್ತಾರೆ. ಸೀತೆ ರಾಮನನ್ನು ಪ್ರಶ್ನಿಸುವುದು ಮೊದಲನೆಯ ಪ್ರಸಂಗ. ತಮ್ಮ ದಾಂಪತ್ಯದ ಏಳುಬೀಳುಗಳನ್ನೆಲ್ಲ ಗುರುತಿಸುತ್ತಾ ಸೀತೆ,
ಇನಿತೆಲ್ಲ ಕಷ್ಟಗಳ ಪಟ್ಟೆ ನೀನೆನಗಾಗಿ
ಇನಕುಲೋತ್ತಮ, ನಂಬಿದಬಲೆಯೊಬ್ಬಳಿಗಾಗಿ
ಎನ್ನುತ್ತಾ ಮುಂದುವರೆದು, ಜನಾಪವಾದದ ವಿಷಯಕ್ಕೆ ಬರುತ್ತಾಳೆ.
ಇನ್ನಾನುಮಾ ನಿನ್ನ ಜನ ಬಾಯಿ ಮುಚ್ಚುವುದೆ?
ಇನ್ನಾನುಮದು ನಿನ್ನ ನೇಮಗಲ ಮೆಚ್ಚುವುದೆ?
ಇನ್ನಿಳಿವುದೇನವರ ಮೆಚ್ಚಿಸುವ ಚಟ?
ಇನ್ನಾನುಮಾದೀತೆ ನಿಜ ವಿವೇಕ ಪ್ರಕಟ?


ಇಲ್ಲೆಲ್ಲ ನಾವು ಗಮನಿಸಬೇಕಾಗಿರುವುದು ಹೇಗೆ ಸೀತೆಯನ್ನು ಸ್ವಮರುಕದ ಚೌಕಟ್ಟಿಗೆ ತಂದು ಅವಳನ್ನು ‘ಅಬಲೆ’ಯಾಗಿಸುವುದರಲ್ಲಿಯೇ ಕವಿಯೂ ಕಾವ್ಯವೂ ‘ಸಬಲ’ರಾಗುವುದನ್ನು. ಸೀತೆ ‘ಹಾ ನಾಥಾ’ ಎಂದು ಉದ್ಗಾರವೆಳೆಯುವುದರಲ್ಲಿಯೇ ಅವಳಲ್ಲಿನ ಬೌದ್ಧಿಕತೆ ಸಂಪೂರ್ಣ ನಾಶವಾಗಿಬಿಡುವಷ್ಟು ಅವಳನ್ನು ಗೋಳಿನ ಹೆಣ್ಣಾಗಿಸಿಬಿಡುತ್ತದೆ. ಸೀತೆ ರಾಮನನ್ನು, ಅವನ ರಾಜಧರ್ಮದ ಪರಿಪಾಲನೆಯನ್ನು ಕುರಿತಂತೆ ಎತ್ತುವ ‘ಚಟ’ದ ಅಥವಾ ‘ನಿಜವಿವೇಕ’ದ ಪ್ರಶ್ನೆಗಳು ಗೋಳಿನಕರೆಯ ಒಂದುಭಾಗವೇ ಆಗಿಬಿಡುತ್ತವೆಯೇ ಹೊರತು ಉತ್ತರಿಸಬೇಕಾದ ಪ್ರಶ್ನೆಗಳಾಗಿಯಲ್ಲ. ‘ಸೊಗದಿ ರಾಘವ ಬಾಳು’ ಎನ್ನುವ ಮಾತಂತೂ ಹೆಣ್ಣು ಒಂದಲ್ಲ ಒಂದು ಸಂದರ್ಭದಲ್ಲಿ ಆಡಲೇ ಬೇಕಾದ ವಿಧಿವಿಲಾಸದ ಶಾಸನವಾಕ್ಯದಂತೆ ಕೇಳಿಸುತ್ತದೆ.

ಇದಕ್ಕೆ ಉತ್ತರಿಸುತ್ತ ರಾಮ, ಹೇಗೆ ಅದೊಂದು ಅನಿವಾರ್ಯವಾದ ತ್ಯಾಗವೆಂದು ಮುಗ್ಧೆಯಾದ ಸೀತೆಗೆ ಮನದಟ್ಟು ಮಾಡಿಸುವುದರೊಂದಿಗೆ, ‘ಜಯ ಸೀತಾಜೀವೇಶ್ವರ’ ಎನ್ನುವುದರೊಂದಿಗೆ ಸೀತೆಯ ಪ್ರಶ್ನೆಯ ಪ್ರಸಂಗವನ್ನು ಡಿ.ವಿ.ಜಿ ಮುಗಿಸುತ್ತಾರೆ. ಈ ಪ್ರಸಂಗದ ಬಗ್ಗೆ ಚರ್ಚಿಸುತ್ತಾ, ತಮಗೆ ಅಸಾಧ್ಯವಾದುದು ಇತರರಿಗೂ ಅಸಾಧ್ಯವೆಂದು ಭಾವಿಸುವುದರಿಂದ ಇದರ ಬಗ್ಗೆ ಆಕ್ಷೇಪಣೆಗೆ ಅವಕಾಶವಾಗುತ್ತದೆ ಎಂದು ವಾದಿಸುತ್ತಾರೆ. ಒಟ್ಟಾರೆಯಾಗಿ ಇಲ್ಲಿ ಇವರ ನಿಲುವೆಂದರೆ, ರಾಮ ಸೀತೆಯರ ಮಹೋನ್ನತ ದಾಂಪತ್ಯವನ್ನೂ, ಅದರ ಆರೋಹಣ ಪರ್ವವನ್ನೂ ಅರ್ಥಮಾಡಿಕೊಳ್ಳಲು ವಿಫಲರಾದವರು ಇಂಥ ಪ್ರಶ್ನೆಗಳನ್ನು ಎತ್ತಬಹುದೆಂದು ಸೂಚಿಸುತ್ತಾರೆ.

ಇದೇ ಕೃತಿಯ ಮುಂದುವರಿದ ಭಾಗದಲ್ಲಿ ಅವರ ಗೆಳೆಯರೊಬ್ಬರು, ಈ ಪ್ರಸಂಗವನ್ನು ಮಾರ್ಪಡಿಸಿ, ರೂಪಾಂತರದಲ್ಲಿ ಪುನರ್ ರಚಿಸಬಹುದಾದ ನಿರೂಪಣೆಯೊಂದನ್ನು ಮಾಡಿದ್ದನ್ನು ಉತ್ಸಾಹದಿಂದ ದಾಖಲಿಸುತ್ತಾರೆ. ಹೀಗೆ ಮಾಡುವುದರಿಂದ ಶ್ರೀರಾಮನಿಗೆ ಅಪವಾದ ತಪ್ಪುವುದು ಮಾತ್ರವಲ್ಲ, ಸೀತೆಗೆ ಕೀರ್ತಿಯೂ ಹೆಚ್ಚುತ್ತದಂತೆ! ಅದರ ಪ್ರಕಾರ, ಸೀತಾ ರಾಮರು ಒಡ್ಡೋಲಗದಲ್ಲಿದ್ದಾಗ ದೂತ ಬರುತ್ತಾನೆ. ಅವನಿಗೆ ಏನೋ ಹೇಳಬೇಕಾಗಿದೆಯೆನ್ನುವುದನ್ನು ಗ್ರಹಿಸಿ ರಾಮ ಒಡ್ಡೋಲಗವನ್ನು ವಿಸರ್ಜಿಸಿ ಏನೆಂದು ಕೇಳಿದರೆ, ದೂತ ಹೇಳಲು ಅನುಮಾನಿಸುತ್ತಾನೆ. ರಾಮ ಸೀತೆಯನ್ನೂ ಹೊರಗೆ ಕಳಿಸಿ ವಿಚಾರಿಸಿದಾಗ ಅವನು ಸೀತಾದೂಷಣೆಯ ಸುದ್ದಿಯನ್ನು ಹೇಳುತ್ತಾನೆ. ರಾಮ ಮೂರ್ಛೆ ಹೋಗುತ್ತಾನೆ. ಮರಳಿ ಬಂದ ಸೀತೆ ಒತ್ತಾಯಿಸಿ ದೂತನಿಂದ ಸುದ್ದಿ ತಿಳಿಯುತ್ತಾಳೆ.

ಇಂಥ ಸನ್ನಿವೇಶದಲ್ಲಿ ತನ್ನ ಕರ್ತವ್ಯವೇನು ಎನ್ನುವುದನ್ನು ‘ತಿಳಿದುಕೊಂಡ’ ಸೀತೆ ಲಕ್ಷ್ಮಣನನ್ನು ರಥ ಸಿದ್ಧ ಮಾಡು ಎಂದು ಹೇಳುತ್ತಾಳೆ. ಮೂರ್ಛೆ ತಿಳಿದೆದ್ದ ರಾಮ ಸೀತೆಯ ಸಂಕಲ್ಪ ಅನವಶ್ಯಕ ಎಂದರೂ ಸೀತೆ ಬಿಡದೆ, ‘ಅಂದು ನೀನು ತಂದೆಯ ಸತ್ಯವನ್ನುಳಿಸುವ ಧರ್ಮಕ್ಕಾಗಿ ವನವಾಸ ಮಾಡಿದ್ದೆಯಲ್ಲವೆ? ಇಂದು ನಿನ್ನ ರಾಜಕರ್ತವ್ಯವನ್ನು ಸುಲಭಗೊಳಿಸುವ ಧರ್ಮಕ್ಕಾಗಿ ನಾನು ವನವಾಸ ಮಾಡುವುದು ಯುಕ್ತವಾಗಿದೆ’ ಎನ್ನುತ್ತಾಳೆ (‘ಕೆರೆಗೆ ಹಾರ’ದ ಭಾಗೀರಥಿ ನೆನಪಾಗುತ್ತಾಳೆ ಅಲ್ಲವೆ?).

ಈ ರೂಪಾಂತರದ ಬಗ್ಗೆ ಡಿ.ವಿ.ಜಿ.ಯವರಿಗೆ ಸಮಾಧಾನವಿಲ್ಲ. ಇದು ರಾಮನ ಧರ್ಮಾತ್ಮ ಸಂಕಟವನ್ನು ಧ್ವನಿಸುವುದಿಲ್ಲ ಎನ್ನುವ ಕಾರಣಕ್ಕೆ. ಇರಲಿ, ಇಂಥ ಕಥೆಗಳ ಹಿಂದಿನ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ನಾವು ಕಷ್ಟಪಡಬೇಕಿಲ್ಲ. ತ್ಯಾಗ, ಪ್ರೀತಿ, ಕರ್ತವ್ಯ, ಧರ್ಮ ಈ ಎಲ್ಲವೂ ಗಂಡಿನಂತೆ ಹೆಣ್ಣಿನ ಬದುಕನ್ನೂ ಸಮೃದ್ಧಗೊಳಿಸುತ್ತವೆ. ಇವುಗಳ ನಡುವಿನ ಹೊಯ್ದಾಟ, ಸಂಘರ್ಷ ಇಬ್ಬರಿಗೂ ಅನಿವಾರ್ಯವಾಗಿಯೂ ಹೆಣ್ಣು ಅನುಭವಿಸುವ ಮತ್ತು ಒಳಗಾಗುವ ಅಗ್ನಿದಿವ್ಯಗಳಿಗೆ ಗಂಡು ಹೊರತಾಗಿಬಿಡುವ ವಿಪರ್ಯಾಸವನ್ನು ಹೇಗೆ ಅರ್ಥೈಸಬೇಕು? ಗಂಡಿನ ಆರೋಹಣಕ್ಕೆ ಹೆಣ್ಣು ಮೆಟ್ಟಿಲಾಗುವ ಸಂದರ್ಭಗಳಿಗೆ ತ್ಯಾಗದ, ಪ್ರೀತಿಯ, ಧರ್ಮದ, ಕರ್ತವ್ಯದ ಹಣೆಪಟ್ಟಿಗಳನ್ನು ಹಚ್ಚುತ್ತಲೇ ಹೋಗಲಾಗುತ್ತದೆ.

ಇಷ್ಟೆಲ್ಲ ಮಾಡಿಯೂ ಸೀತೆಗೆ ಕೊನೆಗೂ ಸಿಗುವ ಪಟ್ಟ ‘ಛಾಯಾ ವ್ಯಕ್ತಿತ್ವ’ವೆಂದು. ರಾಮನಾದರೋ ಕಾಲಾತೀತವಾದ, ನಾಗರಿಕತೆ ಕಟ್ಟಬಹುದಾದ, ಕನಸಬಹುದಾದ ಆದರ್ಶ ‘ರಾಮರಾಜ್ಯದ’ ಹರಿಕಾರನೆನ್ನುವ, ಮರ್ಯಾದ ಪುರುಷೋತ್ತಮನ ಬಿರುದುಗಳನ್ನು ಪಡೆಯುತ್ತಾನೆ. ಇದರ ಎದುರಿಗೆ ಈ ಸರಳವಾದ ಜನಪದ ಗೀತೆಯನ್ನು ಇಟ್ಟು ನೋಡೋಣ. ಜನಪದ ಕಾವ್ಯದಲ್ಲಿ ಸೀತೆ ಹೇಳುವ ಕವಿತೆ ಇದು.
ಬಾಳೆ ಕಡಿದಾರೆ ತೋಟ ಹಾಳಾಗಬಲ್ಲುದೆ
ಬಾಳಿಸಲಾರದೆ ಮಡದೀಯ ಬಿಟ್ಟರೆ
ಬಾಳೆ ಹಣ್ಣೇನೆ ಕೊಳಿಯಾಕೆ


ಡಿ.ವಿ.ಜಿ ಯವರ ಅಬಲೆ ಸೀತೆ ಹಲುಬುವ ಪರಿಗೂ ಇಲ್ಲಿನ ಸೀತೆ ಕುಂದದ ಆತ್ಮವಿಶ್ವಾಸದಲ್ಲಿ, ಮುಕ್ಕಾಗದ ಆತ್ಮ ಘನತೆಯಲ್ಲಿ ಬದುಕಿನ ಬಿಕ್ಕಟ್ಟನ್ನು ಎದುರಿಸುವ ಪರಿಗೂ ಇರುವ ವ್ಯತ್ಯಾಸ ತನ್ನಿಂತಾನೆ ನಮ್ಮ ಅನುಭವಕ್ಕೆ ಬರುತ್ತದೆ. ರಾಮನ ರಾಜಧರ್ಮದ ಪ್ರಶ್ನೆ ಇಲ್ಲಿನ ಜನಪದ ಸೀತೆಗೆ ಮುಖ್ಯವಾಗಿಲ್ಲ ಎನ್ನುವುದು ನಿಜ. ಆದರೆ ದಾಂಪತ್ಯ ಧರ್ಮವೇ ಅಂತಿಮವಾದ ಹೆಣ್ಣಿನ ಮನಸ್ಥಿತಿ ಮತ್ತು ದೃಷ್ಟಿಕೋನವು ಅಮುಖ್ಯವೂ ಆಗಬೇಕಿಲ್ಲ.

ರಾಮನಿಗೆ ಆಯ್ಕೆ ಮತ್ತು ಆದ್ಯತೆಗಳಿವೆ ಎನ್ನುವುದಾದರೆ ಸೀತೆಗೂ ಅವಳ ಆಯ್ಕೆ ಮತ್ತು ಆದ್ಯತೆಗಳು ಇರುತ್ತವೆ. ಇಲ್ಲಿನ ಸೀತೆಗೆ ರಾಮ ದಾಂಪತ್ಯಧರ್ಮವನ್ನು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನವಿದೆ. ಎಂತಲೇ, ಅವನಿಗೆ ಹೆಂಡತಿಯನ್ನು ಬಾಳಿಸಲಾಗಲಿಲ್ಲ ಎನ್ನುವ ಕಟಕಿಯನ್ನಾಡುತ್ತಲೇ ಈ ಕಾರಣಕ್ಕೆ ತನ್ನ ಬದುಕು ಮುಗಿದುಹೋಗಬೇಕಿಲ್ಲ ಎನ್ನುವುದನ್ನೂ ಸ್ಪಷ್ಟವಾಗಿ ಸಾರುತ್ತಾಳೆ. ತಾನು ಕೊಳೆತು ಹೋಗುವ ಬಾಳೆ ಹಣ್ಣಲ್ಲ ಎನ್ನುವ ಮೂಲಕ ಅವಳು ತನ್ನ ಉಳಿದ ಬದುಕನ್ನು ಧೈರ್ಯದಿಂದ, ಆತ್ಮಗೌರವದಿಂದ ಕಳೆಯುವ ಸೂಚನೆ ಕೊಡುತ್ತಾಳೆ.

ಸಾಮಾನ್ಯವಾಗಿ ಈ ಚರ್ಚೆಯನ್ನು ವಿದ್ವಾಂಸರು ಗೆಲ್ಲುವುದು ರಾಮನ ಘನವಾದ ಧ್ಯೇಯೋದ್ದೇಶದ ಎದುರಿಗೆ ದಾಂಪತ್ಯದ ಆಯಾಮ ಸಣ್ಣದು ಎಂದು ಸ್ಥಾಪಿಸುವುದರ ಮೂಲಕ. ಆದರೆ ಈ ವಿಧಾನದಲ್ಲಿ ಸೀತೆಯ ಆಯ್ಕೆಯ ಬದುಕಿನ ಸ್ವಾತಂತ್ರ್ಯವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿದೆಯಲ್ಲವೆ? ಕೊನೆಯಲ್ಲಿ ಸೀತೆ ರಾಮನ ಜೊತೆ ಹೋಗದೇ ಇರುವ ತೀರ್ಮಾನವನ್ನು ತೆಗೆದುಕೊಳ್ಳುವುದನ್ನು ಅವಳು ತನ್ನ ಬದುಕು ಮತ್ತು ವ್ಯಕ್ತಿತ್ವದ ಗೌರವವನ್ನು ಕಾಪಾಡಿಕೊಳ್ಳಲು ನಡೆಸುವ ಪ್ರಯತ್ನವೆಂದು ಕಾಣುವುದು ಈ ಕಾರಣಕ್ಕಾಗಿಯೇ.

ಸೀತೆ ಈ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಬದುಕು ಮತ್ತು ಸಂಬಂಧಗಳನ್ನು ನಿಭಾಯಿಸುವ ಬಗೆಯಲ್ಲಿಯೇ ಸೀತೆಯ ವ್ಯಕ್ತಿತ್ವದ ವೈಶಿಷ್ಟ್ಯ ಮತ್ತು ಗಟ್ಟಿತನಗಳು ನಮ್ಮ ಅರಿವಿಗೆ ಬರುತ್ತವೆ. ದ್ರೌಪದಿಯ ಜೊತೆಗಿಟ್ಟು ನೋಡಿದರಂತೂ ಈ ಅಂಶಗಳು ಇನ್ನಷ್ಟು ಸ್ಪಷ್ಟವಾಗುತ್ತವೆ. ಅವಳನ್ನು ಕಾಡಿಗೆ ಬಿಟ್ಟು ಹೋದ ಮೇಲೆ ತನ್ನಿಬ್ಬರು ಮಕ್ಕಳನ್ನು ಆಶ್ರಮದಲ್ಲಿ ಏಕ ಪೋಷಕಿಯಾಗಿ ಅವಳು ಬೆಳೆಸುವ ಕ್ರಮ, ತನ್ನ ದುಃಖ, ಕಹಿ ಅವರ ಮನಸ್ಸನ್ನು ಕದಡದಂತೆ, ಹಾಗೆಯೇ ಅಯೋಧ್ಯೆಯ ಅವರ ಉತ್ತರಾಧಿಕಾರಕ್ಕೆ ಧಕ್ಕೆ ಬಾರದಂತೆ, ಅವರನ್ನು ಅರಸರಾಗಲು ಬೇಕಾಗುವ ಎಲ್ಲ ತಯಾರಿಗಳೊಂದಿಗೆ ಬೆಳೆಸುವ ಕ್ರಮ, ತನ್ನ ಚಿತ್ತಸ್ಥೈರ್ಯವನ್ನು ಕಾಪಾಡಿಕೊಳ್ಳುವ ಪರಿ– ಇವುಗಳನ್ನು ಸದಾ ಒಬ್ಬರಲ್ಲ ಒಬ್ಬರು ಪುರುಷರ ನೆರವಿಗಾಗಿ ಹಂಬಲಿಸುವ, ಯಾಚಿಸುವ ದ್ರೌಪದಿಯ ಜೊತೆಗಿಟ್ಟು ನೋಡಿ. ಶಿಷ್ಟ ಕಾವ್ಯಗಳಲ್ಲಿಯೇ  ಅಪವಾದವೆನ್ನುವಂತೆ ಲಕ್ಷ್ಮೀಶನ ಜೈಮಿನಿ ಭಾರತದ ಸೀತೆ–
ಕಡೆಗೆ ಕರುಣಾಳು ರಾಘವನಲ್ಲಿ  ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿದೊಡಲಂ
ಪೊರೆವುದೆನ್ನೊಳಪರಾಧಮುಂಟು

 ಎನ್ನುತ್ತಾಳೆ.

ರಾಘವನನ್ನು ಕರುಣಾಳು ಎನ್ನುವ ಮಾತಿನ ವ್ಯಂಗ್ಯ ಗಮನಿಸಿ. ಹೆಣ್ಣಾಗಿ ‘ಸಂಭವಿಸಿ’ದ ತನ್ನ ಬಗೆಗೂ, ತನ್ನನ್ನು ತಾನೇ ಸಂಭಾಳಿಸಬೇಕಾದ ತನ್ನ ಅವಸ್ಥೆಯ ಬಗೆಗೂ ಅವಳಲ್ಲಿ ಸ್ವ ಮರುಕವಿಲ್ಲ. ‘ಸಂಭವಿಸಿದ’ ಎಂದು ಹೇಳುವಲ್ಲಿಯೇ, ಸೃಷ್ಟಿ ಕ್ರಿಯೆಯ ಅದ್ಭುತವನ್ನು, ಅದನ್ನು ಗಂಡು–ಹೆಣ್ಣು ಎನ್ನುವ ತರತಮಕ್ಕೆ ಒಳಗು ಮಾಡಿರುವ ವ್ಯವಸ್ಥೆಯ ಅಸಂಬದ್ಧತೆಯನ್ನೂ ಇಲ್ಲ್ಲಿನ ಸೀತೆ ಅಪೂರ್ವವಾಗಿ ಧ್ವನಿಸುತ್ತಿದ್ದಾಳೆ. ಲಕ್ಷ್ಮಣ ಈ ದಟ್ಟ ಕಾಡಿನಲ್ಲಿ ನಿನ್ನನ್ನು ಏಕಾಂಗಿಯಾಗಿ ಹೇಗೆ ಬಿಟ್ಟು ಹೋಗಲಿ ಎಂದು ಅಲವತ್ತುಕೊಂಡಾಗ, ಸೀತೆ– ‘ನಾನೆಲ್ಲಿ ಒಬ್ಬಂಟಿ, ಹರಿಯುವ ನದಿ, ಬೀಸುವ ಗಾಳಿ, ಹುಲಿ, ಕರಡಿಗಳೆಲ್ಲ ನನ್ನ ಜೊತೆಗಿವೆ. ಏಕಾಂಗಿಯಾಗಿರುವವನು ನಿನ್ನ ಅಣ್ಣ ರಾಮ. ಅವನಿಗೆ ಜೊತೆ ಬೇಕು, ನೀನು ಹೋಗು’ ಎನ್ನುತ್ತಾಳೆ.

ಪ್ರಸಿದ್ಧ ಮಲೆಯಾಳಂ ಕವಿ ಕುಮಾರನ್ ಆಶಾನ್ ಅವರ ಕವಿತೆ ‘ಚಿಂತಾವಿಷ್ಟಯಾಯ ಸೀತಾ’ ನೆನಪಾಗುತ್ತಿದೆ. ಲವ ಕುಶರು ರಾಮಾಯಣದ ಕಥೆಯನ್ನು ಹಾಡುತ್ತಾ ನಾಡಿಗೆ ಹೋಗಿದ್ದಾರೆ. ಅವರು ರಾಮನನ್ನು ಭೇಟಿಯಾಗುತ್ತಾರೆ, ರಾಮ ತನ್ನನ್ನು ಕರೆಯಲು ಬರುತ್ತಾನೆ... ಈ ಎಲ್ಲ ಬೆಳವಣಿಗೆಗಳನ್ನೂ ಸೀತೆ ಊಹಿಸಿದ್ದಾಳೆ. ಆಶ್ರಮದ ಮಲ್ಲಿಕಾಮಂಟಪದಲ್ಲಿ ಕೂತು ತನ್ನ ಭೂತ ಭವಿಷ್ಯತ್ತುಗಳ ಬಗ್ಗೆ ಯೋಚಿಸುತ್ತಾಳೆ. ತನ್ನ, ರಾಮನ ದಾಂಪತ್ಯದ ಬಗ್ಗೆ ಯೋಚಿಸಿದಷ್ಟೂ ಅವಳಿಗೆ ಕಸಿವಿಸಿಯಾಗುತ್ತದೆ.

ತಾನು ಅಪಾರವಾಗಿ ಪ್ರೀತಿಸಿದ ರಾಮನಿಗೆ ತಾನು ಎಂದೂ ಮೊದಲ ಆದ್ಯತೆ ಆಗಲೇ ಇಲ್ಲ. ರಾಜಧರ್ಮ – ಪುತ್ರಧರ್ಮಗಳೇ ಅವನ ಆದ್ಯತೆಯಾದದ್ದಷ್ಟೇ ಅಲ್ಲ, ಅವುಗಳೇ ಅವನ ಬದುಕಿನ ವಿನ್ಯಾಸವನ್ನು ನಿರ್ಧರಿಸಿ ನಿರ್ದೇಶಿಸುತ್ತಿವೆ ಎನ್ನುವ ಸತ್ಯವನ್ನು ನೋವಿನಿಂದಲೇ ಅವಳು ಕಂಡುಕೊಳ್ಳುತ್ತಾಳೆ. ನಾಳೆಯೋ ನಾಡಿದ್ದೋ ರಾಮ ಮಕ್ಕಳೊಂದಿಗೆ ಬಂದು, ತಮ್ಮಿಬ್ಬರ ನಡುವೆ ಆಗಬಾರದ್ದು ಏನೂ ಆಗೇ ಇಲ್ಲವೇನೋ ಎಂಬಂತೆ, ‘ನಡೆ ಸೀತಾ, ಹೋಗೋಣ’ ಎನ್ನುತ್ತಾನೆ. ಏನು ಮಾಡಲಿ ಎಂದು ಮತ್ತೆ ಮತ್ತೆ ಯೋಚಿಸಿ ಸೀತಾ, ತಾನು ರಾಮನೊಂದಿಗೆ ಹೋಗಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾಳೆ. ತನ್ನ ವ್ಯಕ್ತಿತ್ವ, ಅದರ ಘನತೆ ಇವುಗಳೊಂದಿಗೆ ರಾಜಿ ಮಾಡಿಕೊಂಡು ರಾಮನೊಂದಿಗೆ ಬದುಕನ್ನು ಮತ್ತೆ ಆರಂಭಿಸಬೇಕಿಲ್ಲ ಎನ್ನುವ ಖಚಿತ ತೀರ್ಮಾನಕ್ಕೆ ಸೀತೆ ಬರುತ್ತಾಳೆ.

ಬದುಕಿನ ಯಾವ ಜವಾಬ್ದಾರಿಗಳಿಗೂ ಬೆನ್ನು ತಿರುಗಿಸದೆ ಅವುಗಳನ್ನು ಪರಿಪೂರ್ಣ ಎನಿಸುವ ಬದ್ಧತೆಯಲ್ಲಿ ನಿಭಾಯಿಸಿ, ಇನ್ನೇನು ಕೆರೆಗೆ ಹಾರವಾಗಬೇಕು ಎನ್ನುವ ಘಳಿಗೆಯಲ್ಲಿ ಅದಕ್ಕೆ ಬೆನ್ನು ತಿರುಗಿಸಿ ತನ್ನ ಮೇಲಿನ ತನ್ನ ಹಕ್ಕನ್ನು ಇನ್ನೊಬ್ಬರು ಪ್ರಶ್ನಿಸಲಾಗದಂತೆ ಸ್ಥಾಪಿಸಿಕೊಳ್ಳುತ್ತಾಳೆ. ಆತ್ಮಗೌರವ ಮತ್ತು ಜವಾಬ್ದಾರಿ ಎರಡನ್ನೂ ಸೀತೆಯ ಹಾಗೆ ನಿಭಾಯಿಸಿದವರು ಯಾವ ಕಾಲದಲ್ಲಿಯೂ ಅಪರೂಪವೇ. ರಾಮನಿಗೂ, ಮಕ್ಕಳಿಗೂ, ಲೌಕಿಕದ ಆಮಿಷಗಳಿಗೂ, ಈ ತನಕ ತನ್ನನ್ನು ಹಿಡಿದಿಟ್ಟ ಎಲ್ಲ ಜವಾಬ್ದಾರಿಗಳಿಗೂ ಬೆನ್ನು ತಿರುಗಿಸಿ ಏಕಾಂಗಿಯಾಗಿ ಬದುಕುವ ತೀರ್ಮಾನದ ಸೀತೆ ಅಪ್ಪಟ ಆಧುನಿಕ ಹೆಣ್ಣು. ಎಂತಲೇ ನನಗೆ ಸೀತೆ ಆದಿಮ ಸ್ತ್ರೀವಾದಿ ಎನಿಸುತ್ತಾಳೆ. ಏಕಾಂಗಿಯಾಗಿ ಬದುಕುವುದು ಆಧುನಿಕತೆ ಎಂದಲ್ಲ, ಆತ್ಮಗೌರವವನ್ನು ಕಳೆದುಕೊಂಡು ಬದುಕುವುದಕ್ಕಿಂತ ಏಕಾಂಗಿಯಾಗಿ ಬದುಕುವುದು ಕಷ್ಟವಾದರೂ ಅದು ತನಗೆ ತಾನೇ ಕೊಟ್ಟುಕೊಳ್ಳಬೇಕಾದ ಮೂಲಭೂತ ಗೌರವ ಎನ್ನುವ ಕಾರಣಕ್ಕಾಗಿ ಅದು ಕಡುಕಷ್ಟದ ಆದರೆ ಅನಿವಾರ್ಯವಾದ ದಾರಿ.

ಸೀತೆಯ ಈ ಪ್ರತಿರೋಧವನ್ನು ಅರ್ಥಮಾಡಿಕೊಳ್ಳಲಾಗದೆಯೋ ಒಪ್ಪಲಾಗದೆಯೋ ಅವಳನ್ನು ಭೂಮಿಯೊಳಗೆ ಕಳಿಸಿ ಲೋಕ ನಿರಾಳವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT