ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕ ನಾಗರಿಕತೆ ಸೃಷ್ಟಿಸುವ ಹಿಂಸೆ’

Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಗುಜರಾತಿನ ಪಟೇಲ್‌ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಹೇಳಿದ ಮಾತೊಂದು ಕೆಲವು ವಾರಗಳಿಂದ ನನ್ನ ಮನಸ್ಸಿನಲ್ಲಿ ಹಾಗೇ ಉಳಿದಿದೆ. ಪಾಟಿದಾರ್ ಮೀಸಲಾತಿಯ ಹೋರಾಟ ಹಿಂಸಾತ್ಮಕ ತಿರುವನ್ನು ಪಡೆದ ನಂತರ ಹಾರ್ದಿಕ್ ಆ ಬೆಳವಣಿಗೆಯನ್ನು ಸಮರ್ಥಿಸಿಕೊಳ್ಳುತ್ತ, ಇಂದಿನ ಪರಿಸ್ಥಿತಿಯಲ್ಲಿ ಗಾಂಧೀಜಿ ಕೂಡ ತಮ್ಮ ರಾಜಕೀಯ ಉದ್ದೇಶಗಳ ಸಾಧನೆಗೆ ಹಿಂಸೆಯನ್ನು ಬಳಸಲು ಹಿಂಜರಿಯುತ್ತಿರಲಿಲ್ಲ ಎಂದು ವಾದಿಸಿದರು. ಹಾಗಾದರೆ 2015ರಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಏನಾಗಿದೆ? ಬ್ರಿಟಿಷ್ ಸಾಮ್ರಾಜ್ಯಶಾಹಿ ನೆಲೆಯೂರಿದ್ದ 1890ರ ದಕ್ಷಿಣ ಆಫ್ರಿಕಾಕ್ಕಿಂತ ಇಲ್ಲವೇ 1921ರ ಭಾರತಕ್ಕೆ ಹೋಲಿಸಿದಾಗ ಇಂದಿನ ವರ್ತಮಾನದ ಪರಿಸ್ಥಿತಿ ಹೇಗೆ ಕೆಟ್ಟಿದೆ? 

ಇಂದು ಹಿಂಸಾತ್ಮಕ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಗುಜರಾತಿನ ಪಟೇಲರುಗಳಿಗೆ ಏನಿದೆ? ಗಾಂಧೀಜಿಯವರ ದೃಷ್ಟಿಯಲ್ಲಿ ಹಿಂಸೆ-ಅಹಿಂಸೆಗಳು ಕೇವಲ ಮೌಲ್ಯರಹಿತ ಸಾಧನಗಳು ಮಾತ್ರವೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ತಾಳ್ಮೆ ಹಾರ್ದಿಕ್‌ನಲ್ಲೂ ಇಲ್ಲ. ಹಾರ್ದಿಕ್‌ನನ್ನು ಪ್ರಶ್ನಿಸುವ ಮನಸ್ಸು ಆತನನ್ನು ನಮ್ಮ ಕಾಲದ ದೊಡ್ಡ ಹೀರೊನನ್ನಾಗಿ ಮಾಡುವ ನಮ್ಮ ಮಾಧ್ಯಮಗಳಿಗೆ, ಕಡೆಗೆ ನಮಗೂ ಸಹ ಇಲ್ಲ. ಹಾರ್ದಿಕನ ಮಾತುಗಳನ್ನು ಒಬ್ಬ ಅಪ್ರಬುದ್ಧ ಯುವಕನ ಬಾಲಿಶ ಮಾತುಗಳು ಎಂದು ತಳ್ಳಿಹಾಕಿಬಿಡಬಹುದು. ಆದರೆ, ಈ ಬಗೆಯ ಚಿಂತನೆಗಳೇ ಇಂದು ಸಾಮಾನ್ಯವಾಗುತ್ತಿವೆ ಮತ್ತು ಸ್ಥಾಪಿತವಾಗುತ್ತಿವೆ.

ಹೀಗಾದಾಗ ನಾವು ಗಾಂಧೀಜಿ ಪ್ರಯೋಗ ಮತ್ತು ಚಿಂತನೆಗಳ ಪ್ರಾಮುಖ್ಯವನ್ನು ಅರಿಯುವ ಚೈತನ್ಯವನ್ನೇ ಕಳೆದುಕೊಳ್ಳುತ್ತೇವೆ. ಹಿಂಸೆಯ ವಿಚಾರದಲ್ಲಿ ಬಹುಶಃ ಗಾಂಧಿ ಅವರಷ್ಟು ಸೂಕ್ಷ್ಮವಾಗಿ ಚಿಂತಿಸಿದವರು ಆಧುನಿಕ ಜಗತ್ತಿನಲ್ಲಿ ಮತ್ತಾರೂ ಇಲ್ಲ.  ಅವರ ಚಿಂತನೆ ಕೇವಲ ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಅವರು ಮುನ್ನಡೆಸಿದ ಅಹಿಂಸಾತ್ಮಕ ರಾಜಕೀಯ ಆಂದೋಲನಗಳ ಸಂದರ್ಭಕ್ಕೆ  ಸೀಮಿತವಾದುದಲ್ಲ. ಬದಲಿಗೆ ತನ್ನ ಕಾಲದ ಬದುಕಿನಲ್ಲಿ ಆಧುನಿಕ ನಾಗರಿಕತೆ ಸೃಷ್ಟಿಸಿದ ಹಿಂಸೆಯ ರೂಪಗಳನ್ನು ಗಾಂಧೀಜಿ ಗುರುತಿಸಿದರು.

ಪಶ್ಚಿಮದಲ್ಲಿ ರೂಪುಗೊಂಡು, ಜಗತ್ತನ್ನೇ ಆವರಿಸಿದ ಆಧುನಿಕ ನಾಗರಿಕತೆಯ ವಿಮರ್ಶಕರ ಪೈಕಿ ಗಾಂಧೀಜಿ ಅತ್ಯಂತ ವಿಶಿಷ್ಟರು. ಇದಕ್ಕೆ ಕಾರಣ ಮಾರ್ಕ್ಸ್ ಮತ್ತಿತರ ವಿಮರ್ಶಕರು ಆಧುನಿಕ ನಾಗರಿಕತೆಯ ಚೌಕಟ್ಟಿನೊಳಗಿದ್ದುಕೊಂಡೇ ಅದರ ವಿಮರ್ಶೆಯನ್ನು ಮಾಡಿದರೆ, ಗಾಂಧೀಜಿ ಅದನ್ನು ಸಂಪೂರ್ಣವಾಗಿ ತ್ಯಜಿಸಿ ಹೊಸ ಮಾರ್ಗದ ಅನ್ವೇಷಣೆಯಲ್ಲಿ ತೊಡಗಬೇಕೆಂಬ ವಾದವನ್ನು ಮುಂದಿಟ್ಟವರು. ಅವರ ವಾದದ ಬೌದ್ಧಿಕ ಮತ್ತು ನೈತಿಕ ಶಕ್ತಿಯ ಕಾರಣದಿಂದಲೇ ಗಾಂಧೀಜಿ ಇಂದಿಗೂ ಪ್ರಸ್ತುತರಾಗುವುದು. ಆಧುನಿಕ ನಾಗರಿಕತೆಯ ಬಗೆಗಿನ ಅವರ ಮೊದಲ ಮತ್ತು ಬಹುಮುಖ್ಯ ಬರಹ ‘ಹಿಂದ್ ಸ್ವರಾಜ್’.

ಅವರು ಈ ಕೃತಿಯನ್ನು ರಚಿಸಿದ್ದು 1909ರಲ್ಲಿ ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಗೆ ವಾಪಸಾಗುವಾಗ.  ದಕ್ಷಿಣ ಆಫ್ರಿಕಾವನ್ನು ನಿಯಂತ್ರಿಸುತ್ತಿದ್ದ ಯುರೋಪ್ ಮೂಲದ ಶ್ವೇತವರ್ಣೀಯ ಅಲ್ಪಸಂಖ್ಯಾತರು ಭಾರತೀಯ ವಲಸಿಗರ ಸಂಖ್ಯೆ ಮತ್ತು ಪ್ರಭಾವ ಹೆಚ್ಚುತ್ತಿದ್ದುದರ ಬಗ್ಗೆ ಕಳವಳಗೊಂಡಿದ್ದರು. ಹಾಗಾಗಿ ಒಂದೆಡೆ ಭಾರತೀಯರ ವಲಸೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಅವರು ನಿರ್ಧರಿಸಿದ್ದರೆ ಮತ್ತೊಂದೆಡೆ ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯ ವಲಸಿಗರ ಮೇಲೆ ಅವಮಾನಕಾರಿ ಕ್ರಮಗಳನ್ನು ಅನುಷ್ಠಾನ ಮಾಡಲು ಮತ್ತು ಅವರ ವಾಣಿಜ್ಯ ಅವಕಾಶಗಳನ್ನು ಕುಂಠಿತಗೊಳಿಸಲು ತೀರ್ಮಾನ ಮಾಡಿದ್ದರು.

ಇಂತಹ ಕ್ರಮಗಳ ವಿರುದ್ಧ ಕಾನೂನಿನ ಚೌಕಟ್ಟಿನೊಳಗೆ 1900ರ ದಶಕದುದ್ದಕ್ಕೂ ದಕ್ಷಿಣ ಆಫ್ರಿಕಾದ ನ್ಯಾಯಾಲಯಗಳಲ್ಲಿ ಗಾಂಧೀಜಿ ನಡೆಸಿದ ಕಾನೂನಿನ ಹೋರಾಟಗಳು ಯಶಸ್ಸನ್ನು ಕಾಣಲಿಲ್ಲ. ನಂತರ ಲಂಡನ್‌ನಲ್ಲಿ  ಲಾಬಿ ಮಾಡಲು ಪ್ರಯತ್ನಿಸಿದ್ದೂ ವಿಫಲವಾಯಿತು. ಹೀಗಾಗಿ ಸತ್ಯಾಗ್ರಹ ಆರಂಭಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದ ಗಾಂಧೀಜಿ ದಕ್ಷಿಣ ಆಫ್ರಿಕಾಗೆ ವಾಪಸಾಗುವಾಗ ಉದ್ವಿಗ್ನರಾಗಿದ್ದರು.

ಇದರ ಜೊತೆಗೆ ಗಾಂಧೀಜಿಯವರ ಮನಸ್ಸನ್ನು ಮತ್ತಷ್ಟು ಕದಡಿದ್ದು ಲಂಡನ್ ನಲ್ಲಿ ಅವರು ಭೇಟಿ ಮಾಡಿದ ಭಾರತೀಯ ವಿದ್ಯಾರ್ಥಿಗಳ ಮನೋಭಾವ. ಸಾವರ್ಕರ್ ಕೂಡ ಸೇರಿದ್ದ ಈ ವಿದ್ಯಾರ್ಥಿಗಳ ಗುಂಪು, ಭಾರತವು ‘ಸ್ವರಾಜ್’ ಗಳಿಸಬೇಕೆಂದರೆ ಹಿಂಸಾತ್ಮಕವಾದ ಕ್ರಿಯೆಗಳಿಂದ ಮಾತ್ರ ಸಾಧ್ಯ ಎಂದು ನಂಬಿತ್ತು. 1909ರ ಜುಲೈನಲ್ಲಿಯೇ ಮದನ್ ಲಾಲ್ ಧಿಂಗ್ರಾ ಬ್ರಿಟಿಷ್  ಅಧಿಕಾರಿಯೊಬ್ಬರ ಹತ್ಯೆ ಮಾಡಿದ್ದರು ಮತ್ತು ನಂತರ ನಡೆದ ವಿಚಾರಣೆಯಲ್ಲಿ ಕ್ರಾಂತಿಕಾರಕ ಭಯೋತ್ಪಾದನೆಯ ಕೃತ್ಯಗಳಲ್ಲಿ ತಮ್ಮ ನಂಬಿಕೆಯನ್ನೂ ಸಾರ್ವಜನಿಕವಾಗಿ ಪ್ರತಿಪಾದಿಸಿದ್ದರು. ಗಾಂಧಿ ಅವರಿಗೆ ತುಂಬ ಕಸಿವಿಸಿಯನ್ನು ಮಾಡಿದ ಘಟನೆಯಿದು. ಹೀಗೆ ಹಡಗಿನಲ್ಲಿ ಬರವಣಿಗೆ ಆರಂಭಿಸಿದಾಗ, ಹಿಂಸೆ ಮತ್ತು ಕಾನೂನನ್ನು ಮುರಿಯುವ ಅನಿವಾರ್ಯತೆ ಅವರ ಮನಸ್ಸಿನಲ್ಲಿತ್ತು.

‘ಹಿಂದ್ ಸ್ವರಾಜ್’ ಬರೆದಾಗ ಗಾಂಧೀಜಿ ನಲವತ್ತು ವರ್ಷದವರು. ಅದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ವಕೀಲನಾಗಿ, ರಾಜಕೀಯ ಸಂಘಟಕನಾಗಿ ಕೆಲಸ ಮಾಡಿದ್ದರು ಮತ್ತು ಯಶಸ್ಸನ್ನು ಕಂಡಿದ್ದರು. ಆದರೆ ಈ ಕೃತಿಯಲ್ಲಿ ಅವರ ಗಮನ ವಸಾಹತೀಕರಣಗೊಂಡಿರುವ ಭಾರತದ ಪರಿಸ್ಥಿತಿಯ ಮೇಲಿದೆ. ಅವರು ಪ್ರತಿನಿಧಿಸುತ್ತಿದ್ದ ದಕ್ಷಿಣ ಆಫ್ರಿಕಾದ ಭಾರತೀಯ ವಲಸಿಗರ ಸ್ಥಿತಿಗತಿಗಳ ಮೇಲಲ್ಲ. ಹೀಗೆ ವಿಶಾಲ ನೆಲೆಯಲ್ಲಿ ‘ಸ್ವರಾಜ್’ನ ಸ್ವರೂಪದ ಬಗ್ಗೆ ಚಿಂತಿಸುತ್ತ, ಅದರರ್ಥವನ್ನು ರಾಜಕೀಯ ಸ್ವಾತಂತ್ರ್ಯದಾಚೆಗೆ ವಿಸ್ತರಿಸಿದರು. ‘ಹಿಂದ್ ಸ್ವರಾಜ್’ನ ಹದಿಮೂರನೆಯ ಅಧ್ಯಾಯದಲ್ಲಿ ಗಾಂಧೀಜಿ ಹೀಗೆ ಬರೆಯುತ್ತಾರೆ: ನಮ್ಮನ್ನು ನಾವು ಆಳಿಕೊಳ್ಳುವುದೆಂದರೆ ನಮ್ಮ ಮನಸ್ಸು ಮತ್ತು ಭಾವೋದ್ರೇಕಗಳ (ಪ್ಯಾಶನ್ಸ್) ಮೇಲೆ ಹತೋಟಿ ಸಾಧಿಸುವುದು. ನಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಮತ್ತು ನೈತಿಕತೆಯನ್ನು ಪಾಲಿಸುವುದರ ಮೂಲಕ ಇದು ಸಾಧ್ಯ. ನಮ್ಮ ಕರ್ತವ್ಯಗಳೇನು ಎಂಬುದನ್ನು ತಿಳಿಸುವುದೇ ನಾಗರಿಕತೆ.  

ಆದರೆ, ಪಾಶ್ಚಿಮಾತ್ಯ ಮೂಲದ ಆಧುನಿಕ ನಾಗರಿಕತೆಯು ಕರ್ತವ್ಯಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿಲ್ಲ ಎಂದು ಗಾಂಧೀಜಿ ವಾದಿಸುತ್ತಾರೆ. ಅದು ಮುಖ್ಯವಾಗಿ ‘ಶಾರೀರಿಕ ಸೌಖ್ಯ’ವನ್ನು (ಬಾಡಿಲಿ ವೆಲ್‍ಫೇರ್) ಪ್ರತಿಪಾದಿಸುತ್ತದೆ. ಆದರೆ, ಈ ಗುರಿಯನ್ನೂ ಸಹ ಎಲ್ಲರಿಗೂ ತಲುಪಿಸುವಲ್ಲಿ ಆಧುನಿಕ ನಾಗರಿಕತೆ ಸೋಲುತ್ತದೆ. ಹಾಗಾಗಿ ಸಮಾಜದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ ಮತ್ತು ಅದರ ಪರಿಣಾಮವಾಗಿ ಹಿಂಸೆಯ ಉತ್ಪಾದನೆಯಾಗುತ್ತದೆ. ಈ ಕುರಿತಾದ ಚರ್ಚೆಗೆ ‘ಹಿಂದ್  ಸ್ವರಾಜ್’ನ ಆರನೆಯ ಅಧ್ಯಾಯವನ್ನು ಗಮನಿಸಿ. ನಮ್ಮ ಪ್ರಾಪಂಚಿಕ ಆಕಾಂಕ್ಷೆಗಳಿಗೆ ಮಿತಿ ಹಾಕುವ  ಹಾಗೂ ನಮ್ಮ ಕರ್ತವ್ಯಗಳನ್ನು ತಿಳಿಸುವ ನೈತಿಕ ತತ್ವಗಳು ಆಧುನಿಕ ನಾಗರಿಕತೆಯಲ್ಲಿ ಇಲ್ಲದಿರುವುದನ್ನು ಗಾಂಧೀಜಿ ಪದೇಪದೇ ಗುರುತಿಸುತ್ತಾರೆ. ಹಾಗಾಗಿಯೇ ಆಧುನಿಕ ನಾಗರಿಕತೆಯೆನ್ನುವುದು ತಮ್ಮ ದೃಷ್ಟಿಯಲ್ಲಿ ನಾಗರಿಕತೆಯೇ ಅಲ್ಲ ಎಂದು ಅವರು ವಾದಿಸುತ್ತಾರೆ.

ಇದಕ್ಕೆ ಪ್ರತಿಯಾಗಿ ಸ್ವಾತಂತ್ರ್ಯ ಅಥವಾ ಸ್ವರಾಜ್ ಎಂದರೆ ನಮ್ಮ ಮೇಲಿನ ಹತೋಟಿಯನ್ನು ಸಾಧಿಸುವುದು ಎನ್ನುವ ಗಾಂಧೀಜಿ, ನಮ್ಮ ಆಸೆಗಳ ಮೇಲೆ ಹೀಗೆ ಮಿತಿ ಹಾಕಿಕೊಳ್ಳುವುದಕ್ಕೆ ಭಾರತೀಯ ನಾಗರಿಕತೆಯು ಹೇಗೆ ಪ್ರೋತ್ಸಾಹಿಸುತ್ತದೆ ಎಂಬುದನ್ನೂ ವಿವರಿಸುತ್ತಾರೆ. ವಸಾಹತುಶಾಹಿ ಸಂದರ್ಭದಲ್ಲಿ ಭಾರತ ದಾಸ್ಯಕ್ಕೀಡಾಗಿದೆಯೆಂದರೆ ಇಂಗ್ಲಿಷರು ಭಾರತವನ್ನು ಆಳುತ್ತಿದ್ದಾರೆ ಎಂಬ ಕಾರಣದಿಂದಲ್ಲ.

ಬದಲಿಗೆ ದೋಷಪೂರಿತವಾದ, ಅನೈತಿಕವಾದ ಆಧುನಿಕ ನಾಗರಿಕತೆ ಭಾರತವನ್ನು ಆವರಿಸುತ್ತಿದೆ ಎಂದು. ಅದಕ್ಕಾಗಿಯೇ ತಮ್ಮ ಹೋರಾಟ ಇಂಗ್ಲೆಂಡಿನ ಜನರ ವಿರುದ್ಧವಲ್ಲ, ಅವರ ನಾಗರಿಕತೆಯ ವಿರುದ್ಧ. ಇಂಗ್ಲಿಷರು ಭಾರತೀಯ ನಾಗರಿಕತೆಯನ್ನು ಒಪ್ಪುವುದಾದರೆ, ಅವರು ಭಾರತದ ಆಡಳಿತದ ನಿರ್ವಹಣೆಯನ್ನು ಮಾಡುವುದಾದರೂ ತನಗೆ ಅಭ್ಯಂತರವಿಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಗಾಂಧೀಜಿ ಪರಿಕಲ್ಪನೆಯ ‘ಸ್ವರಾಜ್’ ಅನ್ನು ಪ್ರತಿಯೊಬ್ಬರೂ ಅವರೇ ಅನುಭವಿಸಬೇಕು. ಈಗಾಗಲೇ ಸ್ವತಂತ್ರರಾಗಿರುವವರು ಇತರರಿಗೆ ಸಹಾಯ ಮಾಡಬಹುದು. 

ಆಸೆಯ ಬಗ್ಗೆ, ‘ಸ್ವರಾಜ್’ ಅನ್ನು ವೈಯಕ್ತಿಕವಾಗಿ ಅನುಭವಿಸುವುದರ ಬಗ್ಗೆ ಹೀಗೆ ಮಾತನಾಡುವ ‘ಹಿಂದ್ ಸ್ವರಾಜ್’ನ ಗಾಂಧೀಜಿ, ಶ್ರಮಣ ಸಂಪ್ರದಾಯಗಳ ಆಧುನಿಕ ಪ್ರತಿನಿಧಿಯಂತೆ ಕಂಡರೆ ಅದು ಆಶ್ಚರ್ಯದ ವಿಚಾರವೂ ಅಲ್ಲ, ಅನಿರೀಕ್ಷಿತವೂ ಅಲ್ಲ. ವಿವಿಧ ಧರ್ಮಗಳ ತೌಲನಿಕ ಅಧ್ಯಯನವನ್ನು ದಕ್ಷಿಣ ಆಫ್ರಿಕಾದಲ್ಲಿ ವ್ಯವಸ್ಥಿತವಾಗಿ ಅವರು ಆರಂಭಿಸಿದರು. ಇದಕ್ಕೆ ಭಾಗಶಃ ಕಾರಣ ಅವರು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ ಆರಂಭದ ದಿನಗಳಿಂದ ತಮ್ಮ ನಿಕಟವರ್ತಿ ಕ್ರೈಸ್ತ ಮತ್ತು ಮುಸ್ಲಿಮ್ ಸ್ನೇಹಿತರಿಂದ ತಮ್ಮ ಧರ್ಮಗಳನ್ನು ಸೇರುವಂತೆ ಪದೇಪದೇ ಒತ್ತಾಯಪೂರ್ವಕ ಆಹ್ವಾನಗಳು ಗಾಂಧಿ ಅವರಿಗೆ ಬರುತ್ತಿದ್ದುದು.

ಈ ತೌಲನಿಕ ಅಧ್ಯಯನದಲ್ಲಿ ಅವರಿಗೆ ಆಧ್ಯಾತ್ಮಿಕ ಗುರುವಾಗಿಯೂ ಇದ್ದವರು ರಾಜಚಂದ್ರ ರಾಜೀವ್  ಭಾಯಿ ಮೆಹ್ತಾ (1867–1901) ಎಂಬ ಗುಜರಾತಿ ಜೈನ ಸಂತ. ಗಾಂಧಿ ಅವರ ಧಾರ್ಮಿಕ, ಆಧ್ಯಾತ್ಮಿಕ ಮತ್ತು ತತ್ವಶಾಸ್ತ್ರೀಯ ಪ್ರಶ್ನೆಗಳಿಗೆ ಉತ್ತರಗಳನ್ನು ರಾಜಚಂದ್ರ ಒದಗಿಸುತ್ತ ಭಾರತೀಯ ನಾಗರಿಕತೆಯೊಳಗೆ ಗಾಂಧೀಜಿ ಉತ್ತರಗಳನ್ನು ಹುಡುಕುವಂತೆ ಮಾಡಿದರು. ಶ್ರಮಣ ಚಿಂತನೆಯ ಬೀಜಗಳನ್ನು ಗಾಂಧಿ ಅವರಲ್ಲಿ ಬಿತ್ತಿದರು. ಆ ನಂತರದಲ್ಲಿ, ವಿಶೇಷವಾಗಿ ಭಾರತಕ್ಕೆ ಹಿಂತಿರುಗಿದ ನಂತರ, 1920ರ ದಶಕದಲ್ಲಿ ಗಾಂಧೀಜಿ ತಮ್ಮ ಧಾರ್ಮಿಕ ಅಧ್ಯಯನವನ್ನು ಸ್ವತಂತ್ರವಾಗಿ ನಡೆಸಿದರು. ಆದರೆ ರಾಜಚಂದ್ರರು ಒದಗಿಸಿದ ತಳಹದಿ ಮುಖ್ಯವಾದುದು.

‘ಹಿಂದ್  ಸ್ವರಾಜ್’ನಲ್ಲಿ ಆಸೆ, ಹಿಂಸೆ, ನಾಗರಿಕತೆಯ ಅಭಾವಗಳಿಗೆ ತಳಕು ಹಾಕುತ್ತ, ಅದರ ಮೂಲಕವೇ ‘ಸ್ವರಾಜ್’ನ ವ್ಯಾಖ್ಯೆ ನೀಡುವ ಗಾಂಧೀಜಿ, ಹಿಂಸೆ-ಅಹಿಂಸೆಗಳ ಬಗ್ಗೆ ಹೆಚ್ಚು ವಿವರವಾಗಿ, ವ್ಯವಸ್ಥಿತವಾಗಿ ಬರೆಯುವುದು 1920ರ ನಂತರವೇ. ಅದಕ್ಕೆ ಮೊದಲು, ಅಂದರೆ, 20ನೇ ಶತಮಾನದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ಎಂಬ ಹೆಸರಿನಲ್ಲಿ ‘ಪ್ಯಾಸ್ಸಿವ್ ರೆಸಿಸ್ಟೆನ್ಸ್’ ಪ್ರಾರಂಭಿಸಿದಾಗ, ಅವರ ಉದ್ದೇಶವಿದ್ದುದು ಕಾನೂನನ್ನು ಮುರಿಯುವ ನೈತಿಕವಾಗಿ ಸಮರ್ಥನೀಯವಾದ ದಾರಿಗಳನ್ನು ಹುಡುಕುವುದು.

ದಕ್ಷಿಣ ಆಫ್ರಿಕಾದ ಹೊಸ ಕಾನೂನುಗಳು ಭಾರತೀಯ ವಲಸಿಗರ ಹಕ್ಕುಗಳನ್ನು ಮೊಟಕು ಗೊಳಿಸುವಂತಹವುಗಳಾಗಿದ್ದವು. ಅವುಗಳ ವಿರುದ್ಧದ ಕಾನೂನಿನ ಸಮರ ಶ್ವೇತವರ್ಣೀಯ ನ್ಯಾಯಾಧೀಶರಿದ್ದ ಪೀಠಗಳಲ್ಲಿ ಗಾಂಧೀಜಿ ನಡೆಸಿದ ನ್ಯಾಯ ಹೋರಾಟ ಫಲಪ್ರದವಾಗಿರಲಿಲ್ಲ. ಈ ಹೋರಾಟ ಅಹಿಂಸಾತ್ಮಕವಾಗಿರಬೇಕು ಎಂಬುದಷ್ಟೇ ಗಾಂಧೀಜಿ ಆಶಯವಾಗಿರಲಿಲ್ಲ. ಬದಲಿಗೆ ಸತ್ಯಾಗ್ರಹಿ ಹಿಂಸೆಯನ್ನು ಅನುಭವಿಸಲು ಸಿದ್ಧನಿರಬೇಕು. ಆ ಮೂಲಕವೇ ತನ್ನ ಎದುರಾಳಿಯ ಮನಪರಿವರ್ತನೆ ಮಾಡಲು ಸತ್ಯಾಗ್ರಹಿ ಪ್ರಯತ್ನಿಸಬೇಕು.  ಇಂದು ಹಾರ್ದಿಕ್‌ಗೆ ಅಥವಾ ಕರ್ನಾಟಕದಲ್ಲಿಯೂ ಬಂದ್‌ಗಳ ಮೂಲಕ ಹೋರಾಟ ಮಾಡುವ ಮಹನೀಯರುಗಳಿಗೆ ಅಗತ್ಯವಿಲ್ಲದ ಒಣ ಆದರ್ಶವಿದು.

ಸತ್ಯಾಗ್ರಹದ ತಾತ್ವಿಕ ಆಶಯಗಳ, ಹಿಂಸೆ-ಅಹಿಂಸೆಗಳ ಸಿದ್ಧಾಂತೀಕರಣವಾಗಬೇಕಾದರೆ ನಾವು ಗಾಂಧೀಜಿ ಭಗವದ್ಗೀತೆಯೊಡನೆ  1920ರ ದಶಕದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ತನಕ ಕಾಯಬೇಕು. 1890ರ ದಶಕದಲ್ಲಿಯೇ ಭಗವದ್ಗೀತೆಯ ಅಧ್ಯಯನವನ್ನು ಗಾಂಧೀಜಿ ಪ್ರಾರಂಭಿಸಿದ್ದರು. ಆದರೆ ಮೂರು ದಶಕಗಳ ಅಧ್ಯಯನದ ನಂತರ, ಅದರ ಅನುವಾದ, ವ್ಯಾಖ್ಯಾನ ಮತ್ತು ಪ್ರವಚನಗಳನ್ನು ನಡೆಸಿದರು. ಬಹುಶಃ ಗಾಂಧೀಜಿಯವರ ‘ರ್‍ಯಾಡಿಕಲ್’ ಚಿಂತನೆಯ ಆಯಾಮಗಳನ್ನು ನಾವು ನೋಡಬೇಕೆಂದರೆ ಅವರ ಭಗವದ್ಗೀತೆಯ ಅಧ್ಯಯನಗಳನ್ನೇ ನಾವು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT