ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಡು’ ಹಿಡಿದ ರಾಷ್ಟ್ರೀಯ ಪಕ್ಷಗಳು

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಅರವಿಂದ್‌ ಕೇಜ್ರಿವಾಲ್‌ ಹದಿನಾಲ್ಕು ತಿಂಗಳ ಹಿಂದೆ ವಿದ್ಯುತ್‌ ದರ ಇಳಿಸುವುದಾಗಿ ದೆಹಲಿ ಜನರಿಗೆ ಭರವಸೆ ಕೊಟ್ಟಾಗ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ಗೇಲಿ ಮಾಡಿ­ದ್ದರು. ಅರ್ಧ ದರದಲ್ಲಿ ವಿದ್ಯುತ್‌ ಕೊಡಲು ಹೇಗೆ ಸಾಧ್ಯ ಎಂದು ಅನೇಕರು ಹುಬ್ಬೇರಿಸಿದ್ದರು. ಆಮ್ ಆದ್ಮಿ ಪಕ್ಷದ ಮುಖಂಡರು ತಮಾಷೆ ಮಾಡುತ್ತಿದ್ದಾ­ರೆಂದು ಹಲವರು ಭಾವಿಸಿದ್ದರು. ಆರ್ಥಿಕ ತಜ್ಞರು ‘ಎಎಪಿ ಅಧಿಕಾರಕ್ಕೆ
ಬಂದರೆ ಬೊಕ್ಕಸ ಬರಿದಾಗಲಿದೆ’ ಎಂದು ಆತಂಕ­ಪಟ್ಟರು. ಬಹಳಷ್ಟು ದಿನ ರಾಜಕೀಯ ವಲಯ­ದೊಳಗೆ ಮತ್ತು ಹೊರಗೆ ಅದೇ ಚರ್ಚೆ ನಡೆದಿತ್ತು. ಕೇಜ್ರಿವಾಲ್‌ ಅಧಿಕಾರಕ್ಕೂ ಬಂದರು. 49ದಿನ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದರು. ಕಡಿಮೆ ಅವಧಿಯಲ್ಲಿ ಮತದಾರ­ರಿಗೆ ಕೊಟ್ಟಿದ್ದ ಭರವಸೆ­ಗಳನ್ನು ಜಾರಿಗೆ ಕೊಡುವ ಪ್ರಯತ್ನ ಮಾಡಿದರು.

ಎಎಪಿ ಸರ್ಕಾರ ರಚನೆಯಾಗುತ್ತಿದ್ದಂತೆ, ಕೊಟ್ಟಿದ್ದ ಎರಡು ಪ್ರಮುಖ ಆಶ್ವಾಸನೆಗಳ ಈಡೇರಿಕೆಗೆ ಕೇಜ್ರಿವಾಲ್‌ ತಲೆಕೆಡಿಸಿಕೊಂಡರು. ವಿದ್ಯುತ್‌ ದರ ಅರ್ಧದಷ್ಟು ಕಡಿಮೆ ಮಾಡಲು ತೀರ್ಮಾನಿಸಿದರು. ಈ ನಿರ್ಧಾರ ಸಂಪೂರ್ಣ ಅನುಷ್ಠಾನಗೊಳ್ಳುವ ಮೊದಲೇ ಅವರು ಕುರ್ಚಿ ಬಿಟ್ಟರು. ಎಎಪಿ ಸರ್ಕಾರ ಮಾಡಿದ ತೀರ್ಮಾನದ ಲಾಭ  ಅರ್ಧದಷ್ಟು ಮಂದಿಗೆ ಸಿಕ್ಕಿತು. ಇನ್ನರ್ಧ ಜನರಿಗೆ ಸಿಗಲಿಲ್ಲ. ನೀರಿನ ವಿಷಯದಲ್ಲಿ ಆಗಿದ್ದೂ ಅದೇ. ಕನಸಿನಲ್ಲಿ ಬಂದಂತೆ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಹೋಯಿತು. ಕೇಜ್ರಿವಾಲ್‌ ದುಡುಕದೆ ಸ್ವಲ್ಪ ತಾಳ್ಮೆ, ಸಂಯಮ ತೋರಿದ್ದರೆ ಈಗ ವಿಧಾನಸಭೆ ಮಧ್ಯಂತರ ಚುನಾವಣೆ ನಡೆಯುತ್ತಿರಲಿಲ್ಲ. ಅನುಭವ ಕೊರತೆ ತಪ್ಪು ತೀರ್ಮಾನಗಳಿಗೆ ಕಾರಣವಾಯಿತು.

ಅಧಿಕಾರಕ್ಕೆ ಬಂದ ತಕ್ಷಣವೇ ‘ಜನ ಲೋಕಪಾಲ ಮಸೂದೆ’ ಜಾರಿಯಂಥ ಸಂಕೀರ್ಣ­ವಾದ ವಿಷಯಗಳಿಗೆ ಕೈಹಾಕಬಾರದಿತ್ತು. ಅವರು ಮೊದಲ ಮೂರು ನಾಲ್ಕು ವರ್ಷ ನೀರು, ವಿದ್ಯುತ್‌, ರಸ್ತೆ, ಸಾರಿಗೆ, ಆರೋಗ್ಯ, ವಸತಿ ಹಾಗೂ ಶಿಕ್ಷಣದಂಥ ಅತೀ ಪ್ರಮುಖ­ವಾದ ವಿಷಯಗಳ ಕಡೆಗೆ ಗಮನ ಹರಿಸಬೇಕಿತ್ತು. ಅಧಿಕಾರದ ಅವಧಿ ಕೊನೆ ಹಂತಕ್ಕೆ ಬಂದಾಗ ‘ಜನ ಲೋಕಪಾಲ ಮಸೂದೆ’ ಬೇಡಿಕೆಗೆ ಅಂಟಿ­ಕೊಳ್ಳಬಹುದಿತ್ತು. ಆಗ ಮತದಾರರಿಗೂ ಅವರ ಕಾಳಜಿ ಅರ್ಥವಾಗುತಿತ್ತು. ಅಗತ್ಯ ಬೆಂಬಲವೂ ದೊರೆಯುತ್ತಿತ್ತು. ರಾಜಕೀಯಕ್ಕೆ ಹೊಸಬರಾದ ಕೇಜ್ರಿವಾಲ್‌ ಮತ್ತೊಂದು ತಪ್ಪು ಮಾಡಿದರು. ಅತಂತ್ರವಾದ ದೆಹಲಿ ವಿಧಾನಸಭೆಯಲ್ಲಿ ಅತ್ಯಂತ ಹೆಚ್ಚು ಅಂದರೆ, 32 ಸ್ಥಾನಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದ ಬಿಜೆಪಿಯೇ ಸರ್ಕಾರ ರಚನೆಗೆ ಹಿಂದೇಟು ಹಾಕಿದ ಮೇಲಾದರೂ ಸುಮ್ಮನಿರಬಹುದಿತ್ತು. ಅವರು ಅಧಿಕಾರದ ಬಿಸಿಲು ಕುದುರೆ ಹತ್ತುವ ಹುಚ್ಚು ಸಾಹಸ ಮಾಡಿದರು. ಆ ಸಮಯದಲ್ಲಿ ಅವರು ತಟಸ್ಥವಾಗಿದ್ದರೆ ರಾಜಕೀಯ ಚಿತ್ರಣವೇ ಬದಲಾ­ಗುತ್ತಿತ್ತು. ಜನರ ಅನುಕಂಪ ಗಿಟ್ಟಿಸಲು ಅವರು ರಾಜೀನಾಮೆ ಕೊಟ್ಟು ಹೊರ ಬಂದರು. ಅವರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದವು.

ಆಗ ಎರಡು ವರ್ಷಗಳ ಹಿಂದೆ ಹುಟ್ಟಿ ಕೊಂಡ ಎಎಪಿ ಸಾಮರ್ಥ್ಯ ಅಳೆಯಲು ಹಳೆಯ ಪಕ್ಷ­ಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸಾಧ್ಯವಾಗಿ­ರಲಿಲ್ಲ. ಹೊಸ ಪಕ್ಷದ ತಾಕತ್ತು ಏನೆಂದು ಅರ್ಥ ಮಾಡಿ ಕೊಳ್ಳಲು ಆಗಲಿಲ್ಲ ಅನ್ನುವುದಕ್ಕಿಂತಲೂ ಕೇಜ್ರಿವಾಲ್‌ ಮತ್ತು ಅವರ ಸಂಗಡಿಗರು ಏನು ಮಾಡಬಹುದೆಂಬ ಉಡಾಫೆ ಎರಡೂ ಪಕ್ಷಗಳಿ­ಗಿತ್ತು. ಚುನಾವಣೆ ಫಲಿತಾಂಶ ದೇಶವನ್ನೇ ಬೆರಗು­ಗೊಳಿಸಿತ್ತು.
ಈ ಸಲ ರಾಷ್ಟ್ರೀಯ ಪಕ್ಷ­ಗಳೆರಡೂ ಎಚ್ಚೆತ್ತು­ಕೊಂಡಿವೆ. ಸೂಕ್ಷ್ಮವಾಗಿ ಎಎಪಿ ‘ಜಾಡು’ ಹಿಡಿಯಲು ಹೊರಟಿವೆ. ಅದೂ ಎಷ್ಟರ ಮಟ್ಟಿಗೆಂದರೆ ಕಳೆದ ಚುನಾವಣೆಯಲ್ಲಿ ಎಎಪಿ ಪ್ರಣಾಳಿಕೆಯನ್ನು ಗೇಲಿ ಮಾಡಿದ್ದವರೀಗ ಅದನ್ನೇ ನಕಲು ಮಾಡಿದ್ದಾರೆ. ಅರ್ಧ ದರದಲ್ಲಿ ಗ್ರಾಹಕರಿಗೆ ವಿದ್ಯುತ್‌ ಪೂರೈಸುವುದಾಗಿ ಬಿಜೆಪಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ಹಾಕಿದೆ. ಕಾಂಗ್ರೆಸ್‌ ಅದೇ ಹಾದಿಯಲ್ಲಿ ಸಾಗಿದೆ. 

ಈ ಬಗ್ಗೆ ಕೇಜ್ರಿವಾಲ್‌ ಮೊದಲ ಸಲ ಹೇಳಿದಾಗ ಬೊಬ್ಬೆ  ಹಾಕಿದವರು ಈಗ ಬಾಯಿ ಬಂದ್‌ ಮಾಡಿ­ಕೊಂಡಿ­ದ್ದಾರೆ. ಅದ್ಹೇಗೆ ಅರ್ಧ ದರದಲ್ಲಿ ವಿದ್ಯುತ್ ಕೊಡಲು ಸಾಧ್ಯ ಎಂದು ಒಬ್ಬ­ರಾದರೂ ಕೇಳಿಲ್ಲ. ದೆಹಲಿಗೆ ಅಗ್ಗದ ದರದಲ್ಲಿ ವಿದ್ಯುತ್‌ ಕೊಡಲು ಮುಂದಾಗಿರುವ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಸರ್ಕಾರವಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ? ಈ  ದ್ವಂದ್ವ ನಿಲುವೇಕೆ ಎಂದು ಅರಿವಾಗುವುದಿಲ್ಲ.
ನಿಜವಾಗಿ ಒಂದು ರೀತಿ ಮತದಾನಕ್ಕೆ ಮೊದಲೇ ಕೇಜ್ರಿವಾಲ್‌ ಗೆದ್ದಿದ್ದಾರೆ. ದೆಹಲಿ­ಯಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಜನರಿಗೆ ಅಗ್ಗದ ದರದಲ್ಲಿ ವಿದ್ಯುತ್‌ ಸಿಗಲಿದೆ ಎನ್ನುವು­ದೊಂದೇ ಸಮಾಧಾನದ ವಿಷಯ. ಅಷ್ಟರ ಮಟ್ಟಿಗೆ ರಾಷ್ಟ್ರೀಯ ಪಕ್ಷಗಳನ್ನು ಬಗ್ಗಿಸಿದ್ದಾರೆ.

ಗ್ರಾಹಕರಿಗೆ ಅಗ್ಗದ ದರದಲ್ಲಿ ವಿದ್ಯುತ್‌ ಪೂರೈಸಿದರೆ ಸರ್ಕಾರಕ್ಕೆ ಹೊರೆಯಾಗಲಿದೆ ಎಂಬ ವಾದ ಸಾಮಾನ್ಯವಾಗಿದೆ. ರಾಜ್ಯ ಸರ್ಕಾರಕ್ಕೆ ವಿದ್ಯುತ್‌ ದರ ನಿಗದಿಪಡಿಸುವ ಅಧಿಕಾರ ಇಲ್ಲ. ವಿದ್ಯುತ್‌ ಉತ್ಪಾದಿಸುವ ಕಂಪೆನಿ­ಗಳು ಖರ್ಚು ವೆಚ್ಚ ಹಾಗೂ ಲಾಭ– ನಷ್ಟದ ಲೆಕ್ಕಾಚಾರದ ಮೇಲೆ ರಾಜ್ಯ ವಿದ್ಯುತ್‌ ನಿಯಂತ್ರಣಾ  ಪ್ರಾಧಿಕಾರಕ್ಕೆ ದರ ಶಿಫಾರಸು ಮಾಡುತ್ತವೆ. ಪ್ರಾಧಿಕಾರಗಳು ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಗಳನ್ನು ಕೇಳಿದ ಬಳಿಕ ಅಂತಿಮ ನಿರ್ಧಾರ ಮಾಡುತ್ತವೆ. ಅಗ್ಗದ ದರದಲ್ಲಿ ವಿದ್ಯುತ್‌ ಪೂರೈಸುವುದರಿಂದ ಆಗುವ ಹೊರೆಯನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ಕಂಪೆನಿಗಳಿಗೆ ತುಂಬಿಕೊಡಬೇಕು. ಅದು ಬೇರೆ ವಿಚಾರ.

ಬಿಜೆಪಿ ಮತ್ತು ಕಾಂಗ್ರೆಸ್‌  ಪಕ್ಷಗಳ ಬತ್ತಳಿಕೆ­ಯಲ್ಲಿದ್ದ ಅಸ್ತ್ರಗಳು ಮುಗಿದ ಬಳಿಕ ಮತದಾರರನ್ನು ಸೆಳೆಯಲು ಎಲ್ಲ ತಂತ್ರಗಳನ್ನು ಬಳಸುತ್ತಿವೆ. ‘ಸಬ್‌ ಕಾ ಸಾಥ್‌ ಸಬ್ ಕಾ ವಿಕಾಸ್‌’, ‘ಮೋದಿ ಕೇ ಸಾಥ್‌ ಚಲೇ ದಿಲ್ಲಿ’ ಎಂಬ ಸವಕಲು ಘೋಷಣೆಗಳು ಬಿಜೆಪಿಗೆ ಕೈಕೊಟ್ಟ ಬಳಿಕ ‘ಮೋದಿಜಿ ಕಾ ಏಲಾನ್‌, ಬಿಜಲಿ ಬಿಲ್‌ ಕೇ ಹೋಂಗೆ ಆಧೇ ದಾಮ್‌’ ಎಂಬ ಪ್ರಕಟಣೆ ಹೊರಟಿದೆ.

ಲೋಕಸಭೆ, ಅನೇಕ ರಾಜ್ಯ­ಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟುಕೊಂಡು ಹೋಗಿದ್ದ ‘ಅಭಿವೃದ್ಧಿ ಮಂತ್ರ’ ದೆಹಲಿಯಲ್ಲಿ ಪ್ರಯೋಜನಕ್ಕೆ ಬರುವಂತೆ ಕಾಣುತ್ತಿಲ್ಲ. ಮತದಾರರು ಅಭಿವೃದ್ಧಿ­ಯನ್ನೇ ಮಾನದಂಡ­ವಾಗಿ ಪರಿಗಣಿಸಿದ್ದರೆ, 15 ವರ್ಷ ಆಡಳಿತ ಕೊಟ್ಟ ಶೀಲಾ ದೀಕ್ಷಿತ್‌ ಅಧಿಕಾರ ಕಳೆದು­ಕೊಳ್ಳುತ್ತಿರಲಿಲ್ಲ. ಅವರು ದೆಹಲಿಗೆ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೂ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್‌ ಶೀಲಾ ಅವರ ಆಡಳಿತವನ್ನೇ ಬಂಡವಾಳ ಮಾಡಿಕೊಳ್ಳಲು ಮತ್ತೆ ಮತ್ತೆ ಕಸರತ್ತು ನಡೆಸಿದೆ. ‘ದಿಲ್ಲಿ ಮೆಟ್ರೋ ಕೌನ್‌ ಲಾಯಾ?’ ಎಂಬ ದೊಡ್ಡ, ದೊಡ್ಡ ಜಾಹೀರಾ­ತು­­­ಗಳನ್ನು ಅದು ಹಾಕಿದೆ. ಚುನಾವಣೆ ಗೆಲ್ಲಲು ಅದಷ್ಟೇ ಸಾಲದೆಂಬ ಸತ್ಯ ಅರಿವಾದ ಮೇಲೆ ಅಗ್ಗದ ದರದಲ್ಲಿ ವಿದ್ಯುತ್‌ ಕೊಡುವ ಭರವಸೆ ನೀಡಿದೆ.

ಈ ಚುನಾವಣೆ ಮೂರೂ ಪಕ್ಷಗಳಿಗೂ ಪ್ರತಿಷ್ಠೆ ಪ್ರಶ್ನೆ. ಅದರಿಂದಾಗಿ ರೋಚಕ ಹಂತಕ್ಕೆ ಬಂದು ನಿಂತಿದೆ. ಹಿಂದಿನ ವಿಧಾನಸಭೆ ಚುನಾವಣೆ­ಗಳೂ ಇಷ್ಟೊಂದು ಕುತೂಹಲ ಕೆರಳಿಸಿರಲಿಲ್ಲ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸೋತು ಸೊರಗಿರುವ ಕಾಂಗ್ರೆಸ್‌ಗೆ ಇದು ಮಹತ್ವದ ಚುನಾವಣೆ. ಚುನಾವಣೆ ಗೆಲ್ಲಲು ಸಾಧ್ಯವಾಗದಿದ್ದರೂ ಎರಡಂಕಿ ದಾಟಿ ಗೌರವ ಉಳಿಸಿಕೊಳ್ಳಲೇಕು.
ಹತ್ತಕ್ಕಿಂತಲೂ ಅಧಿಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೆ, ಪಕ್ಷ ಇನ್ನಷ್ಟು ದುರ್ಬಲ­ವಾಗ­ಲಿದೆ. ಮೋದಿ ಅವರಿಗೂ ದೆಹಲಿ ಚುನಾವಣೆ ಗೆಲ್ಲಲೇಬೇಕು. ಬಿಜೆಪಿಗೆ ಅಗತ್ಯ ಬಹುಮತ ಸಿಗದಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಅಂಥ ಪರಿಸ್ಥಿತಿ ಬಂದರೆ, ಇದುವರೆಗೆ ಬಾಯಿ ಮುಚ್ಚಿಕೊಂಡು ಕುಳಿತಿರುವ ಕೆಲವು ಹಿರಿಯ ನಾಯಕರು ನಿಧಾನವಾಗಿ ಬಂಡಾಯಕ್ಕೆ ಭೂಮಿಕೆ ಸಿದ್ಧಪಡಿಸಬಹುದು.

ಮೋದಿ, ಅಮಿತ್‌ ಷಾ ತೆಗೆದುಕೊಂಡಿರುವ ತೀರ್ಮಾನ  ಗಳನ್ನು ಕುರಿತು ವಿಮರ್ಶೆ ನಡೆಯಬಹುದು. ಅವರಿಗಿರುವ ಸಂಪೂರ್ಣ ಅಧಿಕಾರಕ್ಕೆ ಕೊಕ್ಕೆ ಬೀಳಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ಬಿಹಾರ ವಿಧಾನಸಭೆ ಅನಂತರ ಪಶ್ಚಿಮ ಬಂಗಾಳ ಚುನಾವಣೆ ಎದುರಿಸುವುದು ಬಿಜೆಪಿಗೆ ಸ್ವಲ್ಪ ಕಷ್ಟವಾಗಬಹುದು ಎಂದು ಪಕ್ಷದ ವಲಯ­ದೊಳಗೆ ವ್ಯಾಖ್ಯಾನಿಸಲಾಗುತ್ತಿದೆ.

ಆಮ್‌ ಆದ್ಮಿ ಬಿಜೆಪಿಗಷ್ಟೇ ಅಲ್ಲ, ಕಾಂಗ್ರೆಸ್‌ಗೂ ನುಂಗಲಾರದ ತುತ್ತು. ಅದಕ್ಕಾಗಿ ಅವೆರಡೂ ಪಕ್ಷಗಳು ಕೇಜ್ರಿವಾಲ್‌ ಅವರನ್ನು ‘ಟಾರ್ಗೆಟ್‌’ ಮಾಡಿರುವುದು. ಎಎಪಿ ಬೇರೂರಿದರೆ ಎಲ್ಲರಿಗೂ ಕಷ್ಟ. ಅಂಬೆಗಾಲಿ­ಡು­ತ್ತಿರುವ ಹೊಸ ಪಕ್ಷ ದೆಹಲಿಯಲ್ಲಿ ಕಾಂಗ್ರೆಸ್‌ ಕೋಟೆಗೆ ಮುತ್ತಿಗೆ ಹಾಕುವಲ್ಲಿ ಸಫಲವಾಗಿದೆ. ಅಕಸ್ಮಾತ್‌ ಈ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ ಸೋತರೆ, ಅವರ ಪಕ್ಷದೊಳಗೆ ನಡೆದಿರುವ ಮುಸುಕಿನ ಗುದ್ದಾಟ ಸ್ಫೋಟಗೊಳ್ಳ­ಬಹುದು. ಮಾಜಿ ಮುಖ್ಯಮಂತ್ರಿ ನಾಯಕತ್ವದ ವಿರುದ್ಧ ಅನೇಕರು ತಿರುಗಿ ಬೀಳಬಹುದು. ಎಎಪಿ ಬಿಕ್ಕಟ್ಟಿಗೂ ಸಿಕ್ಕಿಕೊಳ್ಳುವ ಅಪಾಯವೂ ಇದೆ. ಅದಕ್ಕಾಗಿ ಅರವಿಂದ್‌ ಕೇಜ್ರಿವಾಲ್‌ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಶಕ್ತಿ ಮೀರಿ ಪ್ರಚಾರ ಮಾಡುತ್ತಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಈ ತಿಂಗಳ ಆರಂಭದಲ್ಲಿ ಏರ್ಪಡಿಸಿದ್ದ ನರೇಂದ್ರ ಮೋದಿ ಅವರ ಸಮಾವೇಶ ವಿಫಲವಾದ ಬಳಿಕ ಕಿರಣ್‌ ಬೇಡಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳ­ಲಾಗಿದೆ. ಅವರಿಗೆ ಮುಖ್ಯಮಂತ್ರಿ ಹುದ್ದೆ ಆಮಿಷ­ವೊಡ್ಡಲಾಗಿದೆ. ಬೇಡಿ ಅವರಿಗೆ ರತ್ನಗಂಬಳಿ ಹಾಸಿರುವ ಕುರಿತು ಬಿಜೆಪಿಯೊಳಗೆ ಮಿಶ್ರ ಪ್ರತಿಕ್ರಿಯೆಗಳಿವೆ. ಬಿಜೆಪಿ ದೆಹಲಿ ಚುನಾವಣೆ ಸೋತರೆ ಅದರ ಹೊಣೆಯನ್ನು ಬೇಡಿ ಅವರ ತಲೆಗೆ ಕಟ್ಟಲಾಗು­ತ್ತದೆ. ಅಕಸ್ಮಾತ್‌ ಗೆದ್ದರೆ ಅದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಕೊರಳಿಗೆ ಬೀಳಬಹುದು.

ಬೇಡಿ ಬಿಜೆಪಿಗೆ ಹೋಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಹಿಂದಿನ ಚುನಾವಣೆಯಲ್ಲೇ ಅವರು ಹೋಗುತ್ತಾರೆಂಬ ಸುದ್ದಿ ಬಲವಾಗಿತ್ತು. ಅವರಿಗೆ ಆಗ ಈಗಿನಂತೆ ಬಂಪರ್‌ ಆಫರ್‌ ಬಂದಿರಲಿಲ್ಲ. ಆಗ ಒಂದಿಬ್ಬರು ಹಿರಿಯ ನಾಯಕರು ಅವರಿಗೆ ಅಡ್ಡಿಯಾಗಿದ್ದರು. ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರೂ ಬೇಡಿ ಅವರ ಬಿಜೆಪಿ ಪರ ಒಲವು ಹೊಸದೇನೂ ಅಲ್ಲ ಎಂಬ ಸಂಗತಿಯನ್ನು ಹೊರಹಾಕಿದ್ದಾರೆ.

ಆದರೆ, ಪ್ರಶ್ನೆ ಇರುವುದು ಯಾವ ಬೇಡಿಕೆಗಳಿಗಾಗಿ ಅಣ್ಣಾ ಹಜಾರೆ ಅವರ ಜತೆಗೂಡಿ ಬೇಡಿ ಹೋರಾಟ ಮಾಡಿದ್ದರೋ ಅವುಗಳ ಬಗ್ಗೆ ಉಲ್ಲೇಖವೇ ಇಲ್ಲ. ಕನಿಷ್ಠ ಈ ವಿಷಯದಲ್ಲಿ ಬಿಜೆಪಿ ನಿಲುವೇನೆಂದಾದರೂ ಮಾಜಿ ಪೊಲೀಸ್‌ ಅಧಿಕಾರಿ ಕೇಳಬಹುದಿತ್ತು.

ಕೇಜ್ರಿವಾಲ್‌ ರಾಜೀನಾಮೆ ಕೊಟ್ಟ ಬಳಿಕ ಸುಮ್ಮನೆ ಕುಳಿತಿಲ್ಲ. ಮನೆ, ಮನೆ, ಓಣಿ, ಓಣಿಗೆ ಅಲೆಯುತ್ತಿದ್ದಾರೆ. ಕಳೆದ ಚುನಾವಣೆಯಂತೆ ಎಎಪಿ ಪ್ರಚಾರ ಪಡೆ ಅತ್ಯಂತ ಪ್ರಬಲವಾಗಿದೆ. ಉಳಿದೆರಡು ಪಕ್ಷಗಳು ಅವರನ್ನೇ ಅನುಸರಿಸಿವೆ. ಆಪ್‌ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ನಡೆಯಬಹುದೆಂಬ ವಾತಾವರಣ ದೆಹಲಿಯಲ್ಲಿ ಇದೆ. ಅರವಿಂದ್‌ ಕೇಜ್ರಿವಾಲ್‌ ಹಾಗೂ ಕಿರಣ್‌ ಬೇಡಿ ಅವರಲ್ಲಿ ಮತದಾರ ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾನೆ ಎಂದು ಹೇಳುವುದು ಕಷ್ಟ. ಇಬ್ಬರೂ ಅಣ್ಣಾ ಹಜಾರೆ ತಂಡದ ಮಾಜಿ ಸದಸ್ಯರು. ಅವರ ನಡವಳಿಕೆ­ಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ. ಇಬ್ಬರೂ ಸರ್ವಾಧಿಕಾರಿಗಳು. ಹೀಗಾಗಿ ಅವರನ್ನು ಇಷ್ಟ­ಪಡು­ವವರಂತೆ, ದ್ವೇಷ ಮಾಡುವವರೂ ಇದ್ದಾರೆ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT