ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಪುರಸಭೆ ಬಜೆಟ್ ಮಂಡನೆ

₹34 ಕೋಟಿ ಬಜೆಟ್
Published 8 ಮಾರ್ಚ್ 2024, 6:55 IST
Last Updated 8 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದ ಪುರಸಭೆಯಲ್ಲಿ ಗುರುವಾರ 2024-25 ನೇ ಸಾಲಿನ ಬಜೆಟ್ ಅನ್ನು ಅಧ್ಯಕ್ಷೆ ವಿಮಲಾ ಬಸವರಾಜ್‌ ಅವರು ಮಂಡಿಸಿದರು.

2024-25ನೇ ಆರ್ಥಿಕ ವರ್ಷದಲ್ಲಿ ₹30,94,75,000 ನಿರೀಕ್ಷಿಸಲಾಗಿತ್ತು. ₹3,11,14,361 ಹಿಂದಿನ ಬಜೆಟ್‌ನಲ್ಲಿನ ಹಣ ಉಳಿದಿದ್ದು, ಒಟ್ಟು ಈ ಸಲ ಬಜೆಟ್‌ ಗಾತ್ರ ₹34,05,89,361 ಇದಾಗಿದೆ. ಆದರೆ ₹33,82,17,000 ಖರ್ಚು ಮಾಡಲು ಯೋಜನೆ ರೂಪಿಸಲಾಗಿದ್ದು, ₹23,72,361 ಉಳಿತಾಯ ಬಜೆಟ್‌ ಇದಾಗಿದೆ.

ಪುರಸಭೆಯ ಕಟ್ಟಡ ನಿರ್ಮಾಣಕ್ಕೆ ₹4 ಕೋಟಿ, ಕಚೇರಿಯ ಉಪಕರಣ, ಪೀಠೋಪಕರಣ ಹಾಗೂ ಸಲಕರಣೆಗಳಿಗೆ ₹22 ಲಕ್ಷ, ಸ್ವಾಗತ ಕಮಾನು, ಕಾಂಪೌಂಡ್, ತಡೆಗೋಡೆ ನಿರ್ಮಾಣ, ರಸ್ತೆಬದಿ ಮಾರ್ಗಸೂಚಿ ಫಲಕಗಳ ಅಳವಡಿಕೆ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ₹10 ಲಕ್ಷ, ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿಗಾಗಿ ₹1.30 ಕೋಟಿ, ಬೀದಿ ದೀಪ ಕಾಮಗಾರಿಗಳಿಗಾಗಿ ₹8 ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿಗೆ ₹30 ಲಕ್ಷ, ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ₹5 ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹5 ಲಕ್ಷ, ನೈರ್ಮಲ್ಯ ವಾಹನ ಸಲಕರಣೆ ಖರೀದಿಗಾಗಿ ₹70 ಲಕ್ಷ, ಘನ ತ್ಯಾಜ್ಯ ವಸ್ತು ನಿರ್ವಹಣೆ ಅಭಿವೃದ್ಧಿಗಾಗಿ ₹40 ಲಕ್ಷ, ನೀರು ಸರಬರಾಜು ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳ ಯಂತ್ರೋಪಕರಣ ಖರೀದಿಗೆ ₹1.25 ಕೋಟಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ₹25 ಲಕ್ಷ, ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ₹20 ಲಕ್ಷ, ಬೀದಿ ನಾಯಿಗಳು ಹಾಗೂ ಇತರೆ ಪ್ರಾಣಿಗಳ ನಿಯಂತ್ರಣಕ್ಕಾಗಿ ₹15 ಲಕ್ಷ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಆದಾಯದ ಮೂಲಗಳು: ಆಸ್ತಿ ತೆರಿಗೆ, ದಂಡ ವಸೂಲಿಯಿಂದ ₹1,83,63,000, ಮಳಿಗೆಗಳ ಬಾಡಿಗೆ ₹36.45 ಲಕ್ಷ, ಕಟ್ಟಡ ಪರವಾನಗಿ ಶುಲ್ಕ, ಸುಧಾರಣೆ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕಗಳಿಂದ ₹31.50 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕದಿಂದ ₹6 ಲಕ್ಷ, ನೀರಿನ ಶುಲ್ಕ, ಸಕ್ರಮೀಕರಣ ಹಾಗೂ ಸಂಪರ್ಕ ಶುಲ್ಕಗಳಿಂದ ₹57.20 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ ₹5 ಲಕ್ಷ, ಸ್ಟಾಂಪ್ ಶುಲ್ಕದಿಂದ ₹8 ಲಕ್ಷ, ರಸ್ತೆ ಅಗೆತ ಶುಲ್ಕದಿಂದ ₹1 ಲಕ್ಷ, ನೆಲ ಬಾಡಿಗೆ, ವಾಹನ ನಿಲುಗಡೆ, ಮಾರುಕಟ್ಟೆ, ಜಲ್ಲಿ, ಕಲ್ಲು, ಮತ್ತು ಮರಳು, ವಾರದ ಸಂತೆ ಇತರೆ ಶುಲ್ಕಗಳಿಂದ ₹39 ಲಕ್ಷ, ಅನುಪಯುಕ್ತ ವಸ್ತುಗಳ ಮಾರಾಟದ ಶುಲ್ಕದಿಂದ ₹2 ಲಕ್ಷ, ಖಾತೆ ಬದಲಾವಣೆ ಶುಲ್ಕ, ಖಾತಾ ನಕಲು ಪ್ರತಿಗಳ ಶುಲ್ಕದಿಂದ ₹9.20 ಲಕ್ಷ, ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ ₹15 ಲಕ್ಷ, ಗುತ್ತಿಗೆದಾರರ ಠೇವಣಿ, ಐ.ಟಿ, ಜಿಎಸ್‌ಟಿ, ರಾಯಲ್ಟಿ, ಸಿಬಿಎಫ್, ಎಲ್‌ಡಬ್ಲೂಎಫ್ ಹಾಗೂ ನೌಕರರ ಇಪಿಎಫ್, ಪಿಟಿ, ಎಫ್‌ಬಿಎಫ್, ಎಲ್‌ಐಸಿ, ಹಬ್ಬದ ಮುಂಗಡ, ಎನ್‌ಪಿಎಸ್, ಸಿಇಎಸ್‌ಎಸ್ ಕಡಿತದಿಂದ ₹1,75,87,000 ಹಾಗೂ ಇತರೆ ಶುಲ್ಕಗಳಿಂದ ₹54.90 ಲಕ್ಷ ಆದಾಯ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಎಂ.ಸತೀಶ್ ಕುಮಾರ್, ರಾಜೇಶ್ವರಿ ಭಾಸ್ಕರ್, ಸಿ.ನಾರಾಯಣಸ್ವಾಮಿ, ಎ.ಆರ್.ಹನೀಪುಲ್ಲಾ, ವಿ.ನಂದಕುಮಾರ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಬಜೆಟ್‌ನಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ 

ಬಜೆಟ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಹಿಂದಿನ ಸಭೆಗಳಲ್ಲಿ ಮಾಡಿರುವ ನಿರ್ಣಯಗಳನ್ನು ತಿರುಚಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನೇಮಿಸದೆ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರಲಾಗಿದೆ ಎಂದು ಪುರಸಭೆ ಸದಸ್ಯರು ದೂರಿದರು. ಶಾಸಕರು ಸಂಸದರಿಗೆ ನಿಗಧಿಪಡಿಸಿರುವಂತೆ ಪುರಸಭೆ ಸದಸ್ಯರಿಗೂ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಪ್ರಯಾಣ ಭತ್ಯೆ ನಿಗದಿಪಡಿಸಬೇಕು. ಗೌರವಧನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯ ಬಳಿ ಪುರಸಭೆ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿರುವ ಅಂಗಡಿಗಳನ್ನು ವಶಕ್ಕೆ ಪಡೆದುಕೊಂಡು ಬಾಡಿಗೆ ನಿಗದಿಪಡಿಸಿ. ಇಲ್ಲವೇ ತೆರವುಗೊಳಿಸಿ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT