ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಹೂವಿನ ಬೆಲೆ ಇಳಿಕೆ

ಹೆಚ್ಚಿದ ಪೂರೈಕೆ: ಹುಸಿಯಾದ ರೈತರ ನಿರೀಕ್ಷೆ
Published 8 ಸೆಪ್ಟೆಂಬರ್ 2023, 12:42 IST
Last Updated 8 ಸೆಪ್ಟೆಂಬರ್ 2023, 12:42 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮಾರುಕಟ್ಟೆಯಲ್ಲಿ ಹೂವಿನ ಬೆಲೆ ದಿಢೀರ್‌ ಕುಸಿತದಿಂದ ಬಂಪರ್‌ ಬೆಲೆ ನಿರೀಕ್ಷೆ ಮಾಡಿದ್ದ ರೈತರಲ್ಲಿ ನಿರಾಶೆ ಮೂಡಿದೆ.

ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳ ಹಿನ್ನೆಲೆ ಹೂವಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಪುಷ್ಪಕೃಷಿ ಮಾಡಿದ್ದ ರೈತರಲ್ಲಿ ಈಗ ಬೆಲೆ ಕುಸಿತ ಆತಂಕ ಆವರಿಸಿದೆ.

ಹೂವಿಗೆ ಬೇಡಿಕೆ ಇರುತ್ತದೆ ಎನ್ನುವ ಕಾರಣಕ್ಕೆ ಸೇವಂತಿಗೆ, ಗುಲಾಬಿಯನ್ನು ರೈತರು ಹೆಚ್ಚು ನಾಟಿ ಮಾಡಿದ್ದಾರೆ. ಉತ್ತಮವಾಗಿ ಫಸಲು ಬಂದಿದೆ. ಆದರೆ ವರಲಕ್ಷ್ಮಿ ಹಬ್ಬದವರೆಗೂ ಇದ್ದ ಬೆಲೆ ಈಗ ಇಲ್ಲ. ಕೆ.ಜಿ. ಸೇವಂತಿ ಹೂವಿಗೆ ₹80-90 ರೂಪಾಯಿ ಇತ್ತು. ಈಗ ₹25ಗೆ ಇಳಿಕೆಯಾಗಿದೆ. ಇದರಿಂದ ರೈತರು ಹಾಕಿರುವ ಬಂಡವಾಳವು ಕೈ ಸೇರುವುದು ಅನುಮಾನವಾಗಿದೆ ಎಂದು ರೈತ ಯಲುವಹಳ್ಳಿ ಅಶೋಕ್ ಕಳವಳ ವ್ಯಕ್ತಪಡಿಸಿದರು.

ನಾಲ್ಕು ದಿನಗಳಿಂದ ಎಲ್ಲೆಡೆ ಮಳೆಯಾಗುತ್ತಿದೆ. ಆದ್ದರಿಂದ ಹೂವುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಹೆಚ್ಚು ದಿನ ಇಡಲು ಸಾಧ್ಯವಾಗುತ್ತಿಲ್ಲ. ನೆರೆ ರಾಜ್ಯಗಳಿಗೆ ರಫ್ತು ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಸ್ಥಳೀಯ ರೈತರು ಹೆಚ್ಚಾಗಿ ಹೂ ಬೆಳೆದಿರುವುದರಿಂದ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿದ್ದು, ಬೆಲೆ ಕುಸಿತಕ್ಕೆ ಕಾರಣವಾಗಿದೆ.

‘ವರಮಹಾಲಕ್ಷ್ಮಿ ವ್ರತ, ಗಣೇಶ ಚತುರ್ಥಿಗೆ ಸೇವಂತಿ ಮತ್ತು ಚೆಂಡು ಹೂವನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವು. ಈ ವರ್ಷವು ಸಹ ಬೆಳೆದಿದ್ದೇವೆ. ಪ್ರತಿವರ್ಷ ಬೆಲೆ ಉತ್ತಮವಾಗಿರುತ್ತದೆ. ಆದರೆ, ಈ ವರ್ಷ ಇಳಿಕೆಯಾಗಿದೆ. 25 ಕೆ.ಜಿ. ತೂಗುವ ಹೂವಿನ ಬ್ಯಾಗ್‌ ₹200 ಖರೀದಿ ಮಾಡಿಕೊಳ್ಳಿ ಎಂದು ಬೇಡಿಕೊಂಡರೂ ವ್ಯಾಪಾರಿಗಳು ಯೋಚನೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಪುಷ್ಪಕೃಷಿಕರು.

ಮಾರುಕಟ್ಟೆಗೆ ಹೂವು ಬರುವುದಕ್ಕೆ ಪ್ರಾರಂಭವಾದಾಗ ವರಲಕ್ಷ್ಮಿ ಹಬ್ಬಕ್ಕೂ ಮುನ್ನ ಸೇವಂತಿಗೆ ಪ್ರತಿ ಕೆ.ಜಿ ಹೂ ₹200-300ಕ್ಕೆ ಮಾರಾಟ ಆಗುತ್ತಿತ್ತು. ಸೇವಂತಿಗೆ ಬೆಲೆ ಈಗ ಕೆ.ಜಿ.ಗೆ ₹25ಗೆ ಇಳಿದಿದೆ. ಮಾರುಕಟ್ಟೆಯಲ್ಲಿ ಸೇವಂತಿಗೆ, ಸೆಂಟ್ ಯೆಲ್ಲೋ ಕೆ.ಜಿ.ಗೆ ₹150 ಇದ್ದದ್ದು, ₹20ಗೆ ಮಾರಾಟವಾಗುತ್ತಿದೆ. ₹180 ಇದ್ದ ಸೆಂಟ್‌ ವೈಟ್ ಚಾಕಲೇಟ್ ಕೇವಲ ₹20ಗೆ  ಮಾರಾಟವಾಗುತ್ತಿದೆ.

ಚೆಂಡು ಹೂ ₹30ರಿಂದ ₹10, ಗುಲಾಬಿ ಮೇರಾಬುಲ್ ₹80 ರಿಂದ ₹25, ಮ್ಯಾಂಗೋ ಎಲ್ಲೋ ₹120 ರಿಂದ ₹40ಕ್ಕೆ ಮಾರಾಟವಾಗುತ್ತಿದೆ. ಶ್ರಾವಣ ಮಾಸದಲ್ಲಿ ಎಂದೂ ಈ ರೀತಿ ಬೆಲೆ ಕುಸಿಯುತ್ತಿರಲಿಲ್ಲ. ಆದರೆ ಈ ಬಾರಿ ಹವಾಮಾನ ಬದಲಾವಣೆ ಹಾಗೂ ಪೂರೈಕೆ ಹೆಚ್ಚಿರುವುದರಿಂದ ಬೆಲೆ ಕುಸಿದಿದೆ. ಇದರಿಂದ ಹೂವು ಬಿಡಿಸುವ ಕಾರ್ಮಿಕರಿಗೆ ಕೂಲಿ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತ ಮೂರ್ತಿ.

ವಿಜಯಪುರದ ಯಲುವಹಳ್ಳಿ ರಸ್ತೆಯಲ್ಲಿ ರೈತರು ಬೆಳೆದಿರುವ ಸೇವಂತಿ
ವಿಜಯಪುರದ ಯಲುವಹಳ್ಳಿ ರಸ್ತೆಯಲ್ಲಿ ರೈತರು ಬೆಳೆದಿರುವ ಸೇವಂತಿ

‘ತಿಪ್ಪೆಗೆ ಸುರಿಯುತ್ತಿದ್ದೇವೆ’

‘ಪ್ರತಿದಿನ ಚಿಕ್ಕಬಳ್ಳಾಪುರ ಮಾರುಕಟ್ಟೆಯಿಂದ ಹೂ ಖರೀದಿಸಿ ಇಲ್ಲಿ ರಿಟೇಲ್ ಮಾಡುತ್ತೇವೆ. ಕೆ.ಜಿ.ಮೇಲೆ ₹2 ಇಟ್ಟುಕೊಂಡು ಮಾರಾಟ ಮಾಡುತ್ತೇವೆ. ಹೂವಿನಲ್ಲಿ ನೀರು ಇರುವ ಕಾರಣ ಹೆಚ್ಚು ದಿನ ಇಡುವುದಕ್ಕೆ ಸಾಧ್ಯವಾಗುವುದಿಲ್ಲ. ವಿಪರೀತ ಹೂ ಮಾರುಕಟ್ಟೆಗೆ ಬರುತ್ತಿದೆ ಆದ್ದರಿಂದ ಬೆಲೆಯೂ ಕಡಿಮೆಯಾಗಿದೆ. ನಾವು ಸಹಾ ಖರೀದಿ ಮಾಡಿಕೊಂಡು ಬಂದಿರುವ ಹೂವಿನಲ್ಲಿ ಸ್ವಲ್ಪ ಭಾಗ ವ್ಯಾಪಾರ ಆಗಲಿಲ್ಲ ಎಂದು ತಿಪ್ಪೆಗೆ ಹಾಕಿದ್ದೇವೆ’ ಎಂದು ವ್ಯಾಪಾರಿ ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT