ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಬಂದಿಳಿದ ಗಣಪನ ಮೂರ್ತಿಗಳ ದಂಡು

Last Updated 22 ಆಗಸ್ಟ್ 2017, 9:08 IST
ಅಕ್ಷರ ಗಾತ್ರ

ಚಿಂತಾಮಣಿ: ಗಣೇಶೋತ್ಸವದ ಆಚರಣೆಗೆ 3–4 ದಿನಗಳು ಬಾಕಿ ಇರುವಂತೆ ಗಣಪತಿ ಮೂರ್ತಿಗಳ ದಂಡು ರಸ್ತೆಗೆ ಇಳಿದಿವೆ. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಮಾರಾಟಕ್ಕಾಗಿ ಕಾದಿರುವ ವಿವಿಧ ಶೈಲಿ ಮತ್ತು ಆಕಾರದ ರಾಶಿ ರಾಶಿ ಗಣಪತಿಗಳನ್ನು ನಗರದೆಲ್ಲೆಡೆ ಕಾಣಬಹುದು.

ಗಣೇಶ ಚತುರ್ಥಿಯ 4 ತಿಂಗಳ ಮೊದಲಿನಿಂದಲೇ ಮೂರ್ತಿಗಳ ತಯಾರಿಕೆ ಕಾರ್ಯ ನಡೆದಿದೆ. ಸುತ್ತಮುತ್ತಲ ಕೆರೆಗಳಿಂದ ಉತ್ತಮ ಗುಣಮಟ್ಟದ ಮಣ್ಣನ್ನು ತಂದು ಹದ ಮಾಡಿ ಗಣೇಶನ ರೂಪ ಕೊಟ್ಟಿ ಬಣ್ಣ ಬಳಿಯುತ್ತಾರೆ. ತಯಾರಕರ ಮನೆ ಮಂದಿಯೆಲ್ಲ ಕೈಜೋಡಿಸುತ್ತಾರೆ. ಒಂದು ಕುಟುಂಬದವರು 500ಕ್ಕೂ ಹೆಚ್ಚಿನ ಮೂರ್ತಿಗಳನ್ನು ತಯಾರಿಸುತ್ತಾರೆ.

ಮನೆ–ಮನೆಗಳಲ್ಲಿ, ಗಲ್ಲಿ–ಗಲ್ಲಿಗಳಲ್ಲೂ ಗಣಪನ ಅದ್ಧೂರಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಎಲ್ಲೆಡೆ ಗಣಪನ ಖರೀದಿಯ ಭರಾಟೆ ಗೋಚರಿಸುತ್ತಿದೆ. ಕೆಲವರು ಮುಂಗಡ ಹಣ ಕೊಟ್ಟು ತಮಗೆ ಇಷ್ಟವಾದ ಗಣಪತಿಗಳಿಗೆ ಗುರುತು ಮಾಡಿರುವರು. ಈ ವರ್ಷ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಗಣೇಶ ಮೂರ್ತಿಗಳ ಬಗ್ಗೆ ತಾಲ್ಲೂಕಿನ ಆಡಳಿತ ಕಠಿಣ ನಿಲುವು ತಳೆದಿರುವುದರಿಂದ ಮಣ್ಣಿನ ಪರಿಸರಸ್ನೇಹಿ ಗಣಪತಿಗಳಿಗೆ ಬೇಡಿಕೆ ಹೆಚ್ಚಿದೆ.

ನಗರಸಭೆಯ ಅಧಿಕಾರಿಗಳು ಗಣೇಶ ಮೂರ್ತಿ ತಯಾರಕರ ಮತ್ತು ಮಾರಾಟಗಾರರ ಸಭೆ ನಡೆಸಿ ಪಿಒಪಿ ಮೂರ್ತಿ ತಯಾರಿಕೆ ಮತ್ತು ಮಾರಾಟವನ್ನು ನಿಲ್ಲಿಸಬೇಕು ಎಂದು ಕಟ್ಟು ನಿಟ್ಟಾಗಿ ಸೂಚಿಸಿದೆ. ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಆಗುವ ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಹಾಗೂ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದ್ದಾರೆ. ಆದರೂ ಪಿಒಪಿ ಮೂರ್ತಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಕೆಲವರು ಪಿಒಪಿ ಗಣಪತಿಗಳನ್ನೇ ಕೇಳಿ ಒಯ್ಯುತ್ತಾರೆ ಎಂಬುದು ಮೂರ್ತಿ ತಯಾರಕರ ಸ್ಪಷ್ಟನೆ.

ಮಣ್ಣಿನ ಗಣಪನ ಮೂರ್ತಿಗಳ ವಿಸರ್ಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಾವಿ, ಕೆರೆಗಳಲ್ಲಿ ವಿಸರ್ಜಿಸಿದರೆ ಹೂಳು ತುಂಬುವುದನ್ನು ಹೊರತುಪಡಿಸಿ ಬೇರಾವ ಅಡ್ಡ ಪರಿಣಾಮ ಇರುವುದಿಲ್ಲ. ಆದರೆ ಪಿಒಪಿ ಮೂರ್ತಿಗಳಲ್ಲಿರುವ ರಾಸಾಯನಿಕ ವಸ್ತುಗಳು ಜಲ ಮಾಲಿನ್ಯದ ಜೊತೆಗೆ ಜಲಚರಗಳ ಜೀವಕ್ಕೂ ಕುತ್ತು ತರುತ್ತವೆ. ಆದ್ದರಿಂದ ಮಣ್ಣಿನ ಮೂರ್ತಿಗಳನ್ನೆ ಬಳಸಬೇಕು ಎಂದು ಪರಿಸರವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 2–3 ವರ್ಷಗಳಿಂದ ಬರಗಾಲವಿದ್ದರೂ ಹಬ್ಬ–ಹರಿದಿನಗಳಿಗೆ ಕೊರತೆ ಇಲ್ಲ. ನಗರದಲ್ಲಿ ಪ್ರತಿವರ್ಷದಂತೆ ಗಣಪತಿಗಳ ಸಂಭ್ರಮ ಜೋರಾಗಿದೆ. ಭಕ್ತರು ಶ್ರದ್ಧಾ ಭಕ್ತಿಯಿಂದ ಗಣಪತಿ ಮೂರ್ತಿ ಖರೀದಿಸಲು ಮುಂದಾಗಿದ್ದಾರೆ. ಸಮಾಜ ಸೇವಕ ದಾನಿಗಳ ನಿರೀಕ್ಷೆಯಲ್ಲಿ ಇರುವುದರಿಂದ ಮಾರಾಟದ ತೀವ್ರತೆ ಕಂಡು ಬಂದಿಲ್ಲ. ತಾಲ್ಲೂಕಿನ ಎಲ್ಲ ಗ್ರಾಮಗಳ ಸಂಘ ಸಂಸ್ಥೆಗಳಿಗೆ ಸಮಾಜ ಸೇವಕರು ಗಣಪತಿಗಳನ್ನು ದೇಣಿಗೆ ನೀಡುವರು. ಜತೆಗೆ ಪೂಜಾ ವಿಧಿ ವಿಧಾನ, ದಾಸೋಹ, ಪ್ರಸಾದಕ್ಕೂ ಅಗತ್ಯವಿರುವ ಹಣ ನೀಡುವರು ಎಂದು ಸಂಘಟಕರೊಬ್ಬರು ಹೇಳುವರು.

ಇದು ಚುನಾವಣೆ ವರ್ಷದ ಹಬ್ಬವಾಗಿದೆ. ಜನಪ್ರತಿನಿಧಿಗಳು, ಸಮಾಜ ಸೇವಕರು ಯತೇಚ್ಛವಾಗಿ ಆರ್ಥಿಕ ಸಹಾಯ ಮಾಡುತ್ತಾರೆ. ಸಂಘಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಈ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಉಚಿತ ಮೂರ್ತಿಗಳನ್ನು ನೀಡುತ್ತಾರೆ. ಆಚರಣೆಗೆ ಹಣವನ್ನು ನೀಡುವುದರಿಂದ ಭರ್ಜರಿಯಾಗಿ ಆಚರಿಸುವ ಸಿದ್ಧತೆಯಲ್ಲಿದ್ದಾರೆ.

ಬೇಡಿಕೆ ಕುಸಿತ: 2–3 ವರ್ಷಗಳಿಂದ ಸತತ ಬರಗಾಲ ಮತ್ತು ಗಣೇಶನನ್ನು ಪ್ರತಿಷ್ಠಾಪಿಸಲು ತಾಲ್ಲೂಕು ಆಡಳಿತ ನಿರ್ಬಂಧ ಹೇರುತ್ತಿರುವುದರಿಂದ ಮೂರ್ತಿಗಳ ಬೇಡಿಕೆ ಗಣನೀಯವಾಗಿ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಮಾರಾಟ ಕಡಿಮೆಯಾಗುತ್ತಿದೆ ಎಂದು ಗಣೇಶ ಮೂರ್ತಿ ತಯಾರಕ ರಾಜಾ ಆತಂಕ ವ್ಯಕ್ತಪಡಿಸುವರು.

‘ಹಿಂದಿನ ವರ್ಷಗಳಲ್ಲಿ ದೊಡ್ಡ ದೊಡ್ಡ ವಿಗ್ರಹಗಳು ಮುಂಚಿತವಾಗಿಯೇ ಕಾಯ್ದಿರಿಸಲಾಗುತ್ತಿತ್ತು. ಆದರೆ ಈ ವರ್ಷ ಹಬ್ಬಕ್ಕೆ ನಾಲ್ಕು ದಿನ ಬಾಕಿ ಇದ್ದರೂ ಹಾಗೆಯೇ ಉಳಿದಿವೆ ಎಂದು ಸಾಲಾಗಿ ಇಟ್ಟಿರುವ ದೊಡ್ಡ ಗಣಪನ ಮೂರ್ತಿಯನ್ನು ತೋರಿಸಿ ಹೇಳಿದರು. ನಮ್ಮಲ್ಲಿ ₹ 150 ರಿಂದ ₹ 30 ಸಾವಿರ ಬೆಲೆ ವರೆಗೂ ಗಣಪತಿ ಮೂರ್ತಿಗಳಿವೆ.

ರ್ತಿಗಳ ಆಕಾರ, ಗಾತ್ರ, ವಿನ್ಯಾಸ ಮತ್ತು ವೈವಿಧ್ಯಮಯ ಬಣ್ಣದ ಜೊತೆಗೆ ನೈಪುಣ್ಯವೂ ಮುಖ್ಯವಾಗಿದೆ. ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಪರಿಗಣಿಸಲಾಗುತ್ತದೆ’  ಎಂದು ವಿವರಿಸುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT